19 Feb 2014

ವಿಚಿತ್ರ - ಪರೀಕ್ಷೆ

 

 ಇದೇ ಮೊದಲಬಾರಿಗೆ SSC ಯವರು ನಡೆಸುವ ಕಾಂಪಿಟೇಟಿವ್ ಎಕ್ಸಾಮ್ ಗೆ ಅಂಧ ಪರೀಕ್ಷಾರ್ಥಿಗಳ ಬದಲಿ ಬರಹಗಾರರಾಗಿ(scribe) ನಾವೊಂದಿಷ್ಟು ಗೆಳತಿಯರು ಹೋಗಿದ್ದೆವು. ಬೆಳಗ್ಗೆ ಒಬ್ಬರಿಗೆ ಮತ್ತು ಮಧ್ಯಾಹ್ನ ಒಬ್ಬರಿಗೆ ಹೀಗೆ ಎರಡು ಬಾರಿ ಬರೆದೆವು.
  ಅಂಧರ ಬಾಳು ಎಷ್ಟು ಕಷ್ಟವಿರುತ್ತದೆಂಬುದನ್ನು ಹತ್ತಿರದಿಂದ ನೋಡಿದಾಗ ಹೆಚ್ಚು ಅರಿವಾಯಿತು. ಅಂತಹ ಸ್ಥಿತಿಯಲ್ಲಿದ್ದರೂ ಅವರ ಉತ್ಸಾಹ , ಆತ್ಮವಿಶ್ವಾಸ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಏನೋ ನನ್ನ ಕೈಲಾದ ಸಹಾಯ ಮಾಡಿದೆನೆಂಬ ಸಮಾಧಾನ ದೊರಕಿತ್ತು.
ಆದರೆ ಪರೀಕ್ಷಾ ಕ್ರಮ ನೋಡಿದಾಗ ವ್ಯವಸ್ಥೆಯ ಬಗ್ಗೆ ದೊಡ್ಡ ನಿರಾಶೆಯಾಗಿದ್ದು ಸತ್ಯ. ಇದು ಮನದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಮೊದಲನೆಯದಾಗಿ ಸ್ರ್ಕೈಬ್ ಕೆಲಸ ಹೇಗೆಂದರೆ ಕೊಟ್ಟಿರುವ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ನಾವು ಪರೀಕ್ಷಾರ್ಥಿಗೆ ಓದಿ ಹೇಳಬೇಕು ಮತ್ತು ಅದಕ್ಕೆ ಅವರು ಸೂಚಿಸಿದ ಸರಿಯಾದ ಉತ್ತರವನ್ನು ಗುರುತಿಸಬೇಕು. ಇದನ್ನೆಲ್ಲ ಗಮನಿಸಲು ಪಕ್ಕದಲ್ಲಿ ಒಬ್ಬ ಇನ್ವಿಜಿಲೇಟರ್ ಇರುತ್ತಾರೆ.

ನನಗೆ ಬೆಳಗಿನ ಪರೀಕ್ಷೆಯಲ್ಲಿ ಸಿಕ್ಕಿದ ಪರೀಕ್ಷಾರ್ಥಿ ಮೂರನೆಯ ಬಾರಿ ಈ ಪರೀಕ್ಷೆಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡ. ಮೊದಲೆರಡರಲ್ಲೂ ಆಯ್ಕೆಯಾಗಲಿಲ್ಲವೆಂದೂ ,  ಕಷ್ಟಕರವಾದ  ಗಣಿತದ ಪ್ರಶ್ನೆಗಳಿಂದಲೇ ಹಾಗಾಯಿತೆಂದೂ ಹೇಳಿದ. ನನ್ನ ಓದಿನ ಬಗ್ಗೆ ವಿಚಾರಿಸಿಕೊಂಡವ ನಾನೂ ಗಣಿತದ ವಿಧ್ಯಾರ್ಥಿ ಅಲ್ಲವೆಂದು ತಿಳಿದು ಛೆ ! ಎಂದು ಅಲವತ್ತುಕೊಂಡ.  ನಂತರ ಪರೀಕ್ಷೆ ಪ್ರಾರಂಭವಾಯಿತು. ಪ್ರಶ್ನೆಗಳನ್ನು ಓದಿ ಹೇಳುತ್ತಿದ್ದಂತೆ ಉತ್ತರಿಸುತ್ತಿದ್ದ . ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನೆಲ್ಲ ಚೆನ್ನಾಗಿಯೆ ಉತ್ತರಿಸಿದ್ದ. ಗಣಿತದ ವಿಭಾಗ ಬಂದಾಗ ಮಾತ್ರ ನಿಧಾನವಾಗಿ "ನಿಮಗೆ ಗೊತ್ತಿರುವುದನ್ನು ಮಾಡಿಬಿಡಿ " ಎಂದುಬಿಟ್ಟ.  ಒಮ್ಮೆ ನನಗೆ ಗೊತ್ತಿರುವುದನ್ನೆ ಬರೆದುಬಿಡಲೇ ಎನ್ನಿಸಿದರೂ , ನಿಯಮ ಹಾಗಿಲ್ಲವೆಂದು ಜ್ಞಾಪಿಸಿದೆ . ಎಲ್ಲರೂ ಹಾಗೆ ಮಾಡುತ್ತಿದ್ದಾರೆ ಗಮನಿಸಿ ಎಂದ ಆತ. ಸುತ್ತಮುತ್ತ ನೋಡಿದರೆ ಅವನೆಂದದ್ದು ನಿಜವಾಗಿತ್ತು .ಪಕ್ಕದಲ್ಲಿದ್ದ ಇನ್ವಿಜಿಲೇಟರ್ ತನಗೂ ಇಲ್ಲಿ ನಡೆಯುತ್ತಿರುವುದಕ್ಕೂ ಸಂಭಂದವೇ ಇಲ್ಲದಂತೆ ಸುಮ್ಮನೇ ಕುಳಿತಿದ್ದ.   ಕೊನೆಗೆ ಸಾಧ್ಯವಾದಷ್ಟು ಪ್ರಶ್ನೆಯನ್ನು ವಿವರಿಸಿ ಹೇಳಿ ಆತನಿಂದಲೇ ಉತ್ತರ ಪಡೆದು , ಬರೆದೆ.

"ಡಿ" ಗ್ರೂಪಿನ ಕೆಲಸಗಳ ಆಯ್ಕೆಗೆ ಅದರಲ್ಲೂ ಅಂಧರಿಗೆ ಅಷ್ಟೊಂದು ಕಠಿಣ ಗಣಿತದ , ಇಂಗ್ಲೀಷ್ ವ್ಯಾಕರಣದ ಪ್ರಶ್ನೆಗಳ ಅವಶ್ಯಕತೆ ಇದೆಯೆ ಎನ್ನಿಸಿತ್ತು ಆ ಪ್ರಶ್ನೆಗಳನ್ನು ನೋಡಿದಾಗ.

ಲಂಚ್ ಸಮಯದಲ್ಲಿ ಕೇಳಿದಾಗ ಹೆಚ್ಚಿನ ಗೆಳತಿಯರಿಗೆ ಇದೇ ಅನುಭವವಾಗಿತ್ತೆಂದರು.
ನಂತರ ಮಧ್ಯಾಹ್ನದ ಪರೀಕ್ಷೆಯಲ್ಲಿ ಇನ್ನೂ ವಿಚಿತ್ರ ಅನುಭವವಾಯಿತು. ಆ ಪರೀಕ್ಷಾರ್ಥಿಯು ಮೊದಲೇ ಸಂಗೀತವೊಂದನ್ನು ಬಿಟ್ಟು ತನಗೇನೂ ಬರುವುದಿಲ್ಲವೆಂದೂ , ಗೆಳಯರ ಒತ್ತಾಯಕ್ಕಾಗಿ ಈ ಪರೀಕ್ಷೆಗೆ ಬಂದಿರುವುದಾಗಿಯೂ ಹೇಳಿದ. ಹಾಗಾದರೆ ನಿಮಗೆ ಗೊತ್ತಿರುವ ಕ್ಷೇತ್ರದಲ್ಲೇ ಮುಂದುವರೆಯಬೇಕಿತ್ತಪ್ಪ ಎಂದಿದ್ದಕ್ಕೆ ಅದರಲ್ಲಿ ಎಲ್ಲಾ ಸಮಯದಲ್ಲೂ ಸಾಕಾಗುವಷ್ಟು ಕೆಲಸ ಸಿಕ್ಕುವುದಿಲ್ಲವೆಂದೂ , ಇಲ್ಲಿ ಜಾಬ್ ಸೆಕ್ಯುರಿಟಿ ಇರುತ್ತದೆಂದು ಎಲ್ಲಾ ಹೇಳಿದ್ದರಿಂದ ಬಂದೆನೆಂದ. 
 
ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ ಅವನು ಹೇಳಿದ್ದು ಅಕ್ಷರಶಃ ಸತ್ಯವೆಂದು ತಿಳಿಯುತು. ಯಾವ ಪ್ರಶ್ನೆಗೂ ಅವ ಉತ್ತರಿಸಲಿಲ್ಲ ನಾಲ್ಕಾರು ಓದಿ ಹೇಳುತ್ತಿದ್ದಂತೆ ದುಖಃದಿಂದ ತಾನು ಈ ಪರೀಕ್ಷೆ ಯಾಕಾದರೂ ಕಟ್ಟಿದೆನೋ ಎಂದು ಬೇಸರಿಸಿದ. ಏನೋ ನೋಡಿ ಬರೀರಿ ಎಂದೂ ಸೇರಿಸಿದ . ನನಗೋ ಅವನ ಸ್ಥಿತಿಗೆ ಕನಿಕರವಾದರೂ ನಾನು ಬರೆಯುವುದರಿಂದ ನಿಜವಾಗಲೂ ಅರ್ಹತೆಯಿರುವ ಇನ್ಯಾರಿಗೋ  ಅನ್ಯಾಯವಾದಂತಾಗುತ್ತದಲ್ಲ ಎಂಬ ಸಂಕಟ   . ಏನೂ ತೋಚದೆ ಸುಮ್ಮನೆ ಕುಳಿತೆ. 
 
ಪಕ್ಕದಲ್ಲಿ ಕುಳಿತಿದ್ದ ಇನ್ವಿಜಿಲೇಟರ್ , ಪರೀಕ್ಷೆ ನಡೆಯುತ್ತಿದ್ದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ. ಆಕೆಗೆ ತನ್ನ ಮತ್ತು ನನ್ನ ಕರ್ತವ್ಯಗಳ ಅರಿವೇ ಇಲ್ಲ. ಪ್ರಶ್ನೆ ಪತ್ರಿಕೆಯತ್ತ ಕುತೂಹಲದಿಂದ ನೋಡುತ್ತಾ ಉತ್ತರಗಳನ್ನು ಹೇಳಿ , ಬರೆಯುವಂತೆ ನನಗೆ ಒತ್ತಾಯಿಸತೊಡಗಿದಳು.   ಹಾಗೆಲ್ಲಾ ನಾವು ಬರೆಯುವಂತಿಲ್ಲವೆಂದು ಹೇಳಿದರೆ ಆಶ್ಚರ್ಯದಿಂದ " ಹೌದಾ? ಮತ್ತೆ ಬೆಳಿಗ್ಗೆ ಬಂದವರು ಅವರೇ ಬರೆಯುತ್ತಿದ್ದರು " ಎಂದಳು!

" ನಾನೊಂದು ವೇಳೆ ಬರೆದು ನೀವು ಆಯ್ಕೆಯಾದರೆ ಏನೂ ಗೊತ್ತಿಲ್ಲದೆ ಕೆಲಸ ಹೇಗಪ್ಪ ಮಾಡುತ್ತೀರಿ"  ಆತನನ್ನು ಕೇಳಿದೆ. ಅದೇನೂ ಕಷ್ಟವಾಗಲ್ಲ್ವಂತೆ ಮೇಡಂ ಬರೀ ಫೋನ್ ಅಟೆಂಡ್ ಮಾಡೋದು , ಇಂತಹ ಸುಲಭವಾದ ಕೆಲಸವಷ್ಟೆ ಅಂತೆ ಮೇಡಂ ಎಂದನಾತ !
ಇನ್ನೇನೂ ಮಾಡಲು ತೋಚದೆ ಗೊತ್ತಿರುವ ಸುಲಭದ  ಪ್ರಶ್ನೆಗಳಿಗೆ ಉತ್ತರಿಸಿ ...ಮುಗಿಸಿದೆ.

ಅತನನ್ನು ವಾಪಾಸ್ ಗೇಟ್ ಬಳಿ ಕರೆತಂದು ಬಿಡುವಾಗ ತನ್ನ ಜೇಬಿನಲ್ಲಿದ್ದ ಪೆನ್ನೊಂದನ್ನು ತೆಗೆದು ಕೊಡಲು ಬಂದ . " ಬೇಡಪ್ಪ ನೀನೆ ಇಟ್ಟುಕೋ " ಎಂದದ್ದಕ್ಕೆ ಆತ "ತಗೊಳ್ಳಿ ಮೇಡಂ ..ಇದನ್ನ ಇಟ್ಟುಕೊಂಡು ನಾನೇನು ಮಾಡಲಿ? ನನಗೇನೂ ಉಪಯೋಗವಿಲ್ಲ ಇದರಿಂದ  " ಎಂದ ನಿರ್ವಿಕಾರನಂತೆ . ಹೊಟ್ಟೆಯೊಳಗೆ ಸಂಕಟದ ಅನುಭವವಾಯ್ತು . ಕಣ್ಣಲ್ಲಿ ಎರಡು ಹನಿ ...ಸುಮ್ಮನೆ ಪೆನ್ನು ತೆಗೆದುಕೊಂಡೆ. 
ಈ ಪ್ರಕ್ರಿಯೆ ಏಕಿಷ್ಟು ಅಸಂಬದ್ಧವಾಗಿದೆ? ನಿಜವಾಗಿಯೂ ಆ ರೀತಿಯ ತೊಂದರೆಯಿರುವವರಿಗೆ ಅವಶ್ಯಕವಾದ ಸರಳ ಪರೀಕ್ಷೆಯನ್ನು , ಅವರೇ ಉತ್ತರಿಸಲು ಅನುಕೂಲವಾಗುವಂತೆ ನಡೆಸಬಾರದೆ? ಇಷ್ಟೊಂದು ಅಕ್ರಮವಾಗಿ ನಡೆಯುವ ಪರೀಕ್ಷೆಗಳಿಂದ ಸಾಧಿಸುವುದೇನು? ಕೊನೆಗೂ ಅಭ್ಯರ್ಥಿಗಳ ಅಯ್ಕೆಗೆ ಮಾನದಂಡವೇನು? 

 ಅವರಿಗೆ ಕರುಣೆ ತೋರುವುದರಿಂದಲೋ ಅಥವಾ ಮೀಸಲಾತಿ ನೀಡುವುದರಿಂದಲೋ ಸಮಸ್ಯೆ  ಬಗೆಹರಿಯುವುದೆ? ಅವರನ್ನು ಅವರಿಷ್ಟದ ವಿಷಯದಲ್ಲಿ ತರಬೇತಿ ನೀಡಿ , ಸ್ವಾವಲಂಬಿಗಳಾಗಿ ಬದುಕಲು ಬೇಕಾದ ವ್ಯವಸ್ಥೆ ಮಾಡಬೇಕಾದದ್ದು ಸಮಾಜದ, ಸರ್ಕಾರದ ಹೊಣೆಯಲ್ಲವೆ ?
  ಒಟ್ಟಿನಲ್ಲಿ ಒಂದು ಹೊಸ ಪ್ರಪಂಚವನ್ನು ಹೊಕ್ಕು ಹೊರಬಂದಂತಾಗಿ ...ಒಂದಿಷ್ಟು ಸಮಾಧಾನ , ಬಹಳಷ್ಟು ಪ್ರಶ್ನೆಗಳು .....ಮನ ಗೊಂದಲದ ಗೂಡು ....

3 comments:

  1. ನೀವು ಬರೆದದ್ದನ್ನು ಓದಿದಾಗ, ನಮ್ಮ ಸರಕಾರದ ನೀತಿ ನಿಯಮಗಳು ಎಷ್ಟು ಅಸಂಬದ್ಧವಾಗಿವೆಯಲ್ಲ ಎಂದು ಅಚ್ಚರಿಯಾಯಿತು.

    ReplyDelete
    Replies
    1. ನಿಜ ಕಾಕ , ನನಗೂ ಹಾಗೇ ಅನ್ನಿಸಿದ್ದು .... ಇಂತದ್ದಲ್ಲ ಸುಧಾರಿಸುವುದೆಂದೋ

      Delete
  2. ಮೊದಲನೆಯದಾಗಿ ಹೀಗೆ ಅಂಧರಿಗೆ ಸಹಾಯ ಮಾಡಲು ಸ್ವಯಂಸೇವಕರಾಗಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

    ಯೋಚನೆಗೆ ಹಚ್ಚಿದ ಬರಹ ಇದು. ನೀವು ಹೇಳುವ ಪ್ರತೀ ಪ್ರಶ್ನೆಯೂ (ಸಹಾಯ ಕೇಳಿದ ಮಾಡಲೇ ಬೇಡವೇ, ಇಷ್ಟು ಕಷ್ಟದ ಪರೀಕ್ಷೆ ಅಗತ್ಯವೇ) ದ್ವಂದ್ವವಾಗಿ ಕಾಡುತ್ತದೆ. ಪರೀಕ್ಷೆಯ ನಿಯಮಗಳನ್ನು ಮೀರಿ ನಿಲ್ಲಲು ಸಹಾಯ ಕೇಳಿದವನಿಗೆ ಧಿಕ್ಕಾರವಿಕ್ಕುವುದೋ, ಅವನ ಸ್ಥಿತಿಯ ಅರಿವಿದ್ದು ಕರುಣೆ ತೋರುವುದೋ, ಅರಿವಿದ್ದೂ ಕನಿಕರಿಸದ ಸರ್ಕಾರದ ಬಗ್ಗೆ ಮುನಿಯುವುದೋ ತಿಳಿಯುವುದಿಲ್ಲ.

    ಇಷ್ಟವಾಯಿತು ಬರಹ, ಕಷ್ಟವೆನಿಸಿತು ಜೀರ್ಣಿಸಿಕೊಳ್ಳಲಾಗದ ವಾಸ್ತವ. ಬರೆಯುತ್ತಿರಿ.

    ReplyDelete