15 Mar 2014

"ಕಥಾ ಸೃಷ್ಠಿ"ಯ ಹಿನ್ನೆಲೆ

 ಇಂಚರಳಿಗೆ ಪುಟ್ಟ ಮಗುವಾಗಿದ್ದಾಗಿನಿಂದ ಕತೆ ಕೇಳುವ ಹುಚ್ಚು , ಅದರಲ್ಲೇನೂ ವಿಶೇಷವಿಲ್ಲ ಸಾಮಾನ್ಯ ಎಲ್ಲ ಮಕ್ಕಳಿಗೂ ಈ ಆಸಕ್ತಿ ಇರುತ್ತದೆ.  ಇವಳಿಗೆ ಈ ಆಸಕ್ತಿ ಸ್ವಲ್ಪ ಹೆಚ್ಚಾಗೇ ಇತ್ತು. ಸ್ನಾನ ಮಾಡಿಸುವಾಗ , ಊಟ ಮಾಡಿಸುವಾಗ , ನಿದ್ರೆ ಮಾಡಿಸುವಾಗ ,  ಆಡಲು ಫ್ರೆಂಡ್ಸ್ ಸಿಗದೆ ಬೇಸರವಾದಾಗ  ಹೀಗೆ ಎಲ್ಲ ಸಮಯದಲ್ಲೂ ಅಮ್ಮ ಕತೆ ಹೇಳು ಎಂದು ಹಠ . ಅಮ್ಮನಾದರೂ ಎಷ್ಟು ಕತೆ ಹೇಳುತ್ತಾಳೆ ? ತನ್ನಲ್ಲಿರುವ ಸ್ಟಾಕ್ ಖಾಲಿಯಾದಾಗ ಅಮ್ಮನ ಕೈಗೆ ಸಿಕ್ಕಿದ್ದು " ಮ್ಯಾಜಿಕ್ ಪಾಟ್ " ಪುಟಾಣಿ ಮಕ್ಕಳಿಗಾಗೇ ಪ್ರತೀ ವಾರ ಬರುತ್ತಿದ್ದ ಈ ಪತ್ರಿಕೆಯಿಂದ ಕತೆಗಳನ್ನು ಓದಿ ಮಗಳಿಗೆ ಹೇಳತೊಡಗಿದಳು ಅಮ್ಮ.  ಅದರಲ್ಲಿನ ಕತೆಗಳನ್ನು ಕೇಳುತ್ತ ಮಗಳು ಎಷ್ಟು ಪ್ರಾಭಾವಿತಳಾದಳೆಂದರೆ ಅಮ್ಮ ಒಂದು ಕತೆಯನ್ನು ಅರ್ಧಕ್ಕೆ ನಿಲ್ಲಿಸಿದರೆ ಅದರ ಮುಂದಿನದನ್ನು ತಾನೇ ಊಹಿಸಿ ಹೇಳಲು ಪ್ರಾಂಭಿಸಿಬಿಡುತ್ತಿದ್ದಳು. ಇದನ್ನು ಗಮನಿಸಿದ  ಇಂಚರಳ ಅಪ್ಪ, ಅವಳಿಗೆ ಯಾವುದಾದರೊಂದು ವಸ್ತುವನ್ನು ತೋರಿಸಿ ಅದರ ಬಗ್ಗೆ ಮಾತಾನಾಡಲು ಪ್ರೋತ್ಸಾಹಿಸಿದರು. ತನಗೆ ತಿಳಿದದ್ದನ್ನು ಮುದ್ದುಮುದ್ದಾಗಿ ಪಟಪಟನೆ ಹೇಳಿ ಮುಗಿಸುತ್ತಿದ್ದಳವಳು.

ಆಗಿನ್ನೂ ಅವಳಿಗೆ ಐದು ವರ್ಷ . ಅದೊಂದು ದಿನ ರಾತ್ರಿ ಇನ್ನೇನು ಮಲಗುವ ಸಮಯ , ಅಪ್ಪ ಮಗಳು ಹಾಸಿಗೆಯಲ್ಲೇ ಕುಳಿತು ಏನೋ ಆಡುತ್ತಿದ್ದರು , ಸ್ವಲ್ಪ ಹೊತ್ತಿಗೆ ಕತೆ ಹೇಳು ಅಂತ ಶುರುವಾಯ್ತು ಮಗಳ ಹಠ. ಅಪ್ಪ , ಇವತ್ತು ನೀನೇ ಕತೆ ಹೇಳಬೇಕು ಪುಟ್ಟ ಎಂದದ್ದಕ್ಕೆ ಮಗಳು ಆಲೋಚನೆಗೆ ಬಿದ್ದಳು. ಆಯ್ತು ಯಾವುದರ ಕತೆ ಹೇಳಲಿ ? ಮಗಳ ಪ್ರಶ್ನೆ . ಅಪ್ಪ ಅಲ್ಲೇ ಕಣ್ಣಿಗೆ ಕಂಡ "ಬೆಡ್ ಶೀಟ್ "   ಬಗ್ಗೆಯೇ ಹೇಳು ಎಂದರು .

ಬಡ ಅಜ್ಜಿಯೊಬ್ಬಳಿಂದ ಕತೆ ಪ್ರಾರಂಭಿಸಿದವಳು  ಅದನ್ನು ಬೆಳೆಸುತ್ತಾ ಆ ಅಜ್ಜಿಯ ಹತ್ತಿರ ಬೆಡ್ ಶೀಟ್ ಇಲ್ಲದೆ ಚಳಿಯಲ್ಲಿ ಪಡುವ ಸಂಕಟ ವರ್ಣಿಸಿ  ನಂತರ ಯಾವುದೋ ಕರುಣಾಳು ಹುಡುಗಿಯೊಬ್ಬಳು ತನ್ನ ಅಮ್ಮನನ್ನು ಒಪ್ಪಿಸಿ ಬೆಡ್ ಶೀಟ್ ತಂದು ಕೊಟ್ಟಳು, ಎಂಬಲ್ಲಿಗೆ ಕತೆ ಮುಗಿಸಿದಳು . ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಅವಳು ಹೇಳಿದ ಕತೆ ಕೇಳುತ್ತಾ ಕುಳಿತ ಅಪ್ಪ , ಅಮ್ಮನ ಕಣ್ಣಲ್ಲಿ ನೀರು .

ನಂತರ ಅವರು ಮೂವರಿಗೂ ಅದೊಂದು ಆಟವಾಯ್ತು. ಯಾವುದೋ ಒಂದು ವಿಷಯ ಕೊಡುವುದು , ತಕ್ಷಣ ಮಗಳು ಅದಕ್ಕೆ ಕತೆ ಹೇಳುವುದು. ಜೊತೆ ಜೊತೆಗೇ ಪ್ರತೀ ದಿನ ಕತೆ ಕೇಳುವುದು ಮುಂದುವರೆದಿತ್ತು.  ಮನೆಗೆ ಬಂದ ನೆಂಟರಿಷ್ಟರು ಅವಳ ಈ ಪ್ರತಿಭೆ ನೋಡಿ ಸಂತೋಷ ಪಟ್ಟರು. ಆದರೆ  ಹೀಗೆ ಕೊಟ್ಟ ವಿಷಯಕ್ಕೆ ತಕ್ಷಣದಲ್ಲಿ ಕತೆ ಹೇಳುವ ಕಲೆಯ ಬಗ್ಗೆ ಹೆಚ್ಚಿನ ಅರಿವು ಯಾರಲ್ಲೂ ಇಲ್ಲವಾದದ್ದರಿಂದ ಇದಕ್ಕೆ ಯಾವುದೇ ವೇದಿಕೆ ಸಿಗಲಿಲ್ಲ .ಹುಡುಕಿಕೊಂಡು ಹೋಗಲೂ ಇಲ್ಲ .

ಈಗ  ಆ ಪುಟ್ಟ ಇಂಚರ ಬೆಳೆದಿದ್ದಾಳೆ , ಅವಳೀಗ ಒಂಬತ್ತನೇ ತರಗತಿ . ಅವಳ ಪ್ರತಿಭೆಯೂ ಬೆಳೆದಿದೆ. ಇವಳ  ಬಗ್ಗೆ  ಇನ್ನೊಬ್ಬ ಬಾಲಪ್ರತಿಭೆ ಕೊಳಲ ಮಾಂತ್ರಿಕ ಗೌತಮ್ ಹೆಬ್ಬಾರ್ ತಂದೆಯಾದ ಗಣಪತಿ ಹೆಬ್ಬಾರರಿಂದ  ತಿಳಿದ ವಾಣಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮಿಕೇಶವರು ಅವಳನ್ನು ಕರೆಸಿ ಕತೆ ಹೇಳಿಸಿದರು.

ಸುಮಾರು ಎರಡು ದಶಕಗಳಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ವೇದಿಕೆಯನ್ನೊದಗಿಸುವ ಸಹೃದಯಿ ಲಕ್ಷ್ಮಿಕೇಶವರು ಇಂತಹದೊಂದು ಹೊಸ ಪ್ರತಿಭೆಗೆ ಅವಕಾಶ ಕಲ್ಪಿಸಬೇಕೆಂದು ತೀರ್ಮಾನಿಸಿದರು . ಪ್ರತೀ ವರ್ಷ ಒಂದು ತಿಂಗಳ ಕಾಲ ರಾಮನವಮಿ ಉತ್ಸವ ನಡೆಸಿ ದೇಶದ ಮಹಾನ್ ಕಲಾವಿದರುಗಳು ಮತ್ತು ಬಾಲ ಪ್ರತಿಭೆಗಳಿಗೆ ಒಂದೇ ವೇದಿಕೆಯಲ್ಲಿ ಅವಕಾಶ ಕಲ್ಪಿಸುವ ಅವರು ಈ ವರ್ಷದ ರಾಮನವಮಿ ಉತ್ಸವದಲ್ಲಿ ಈ ಹುಡುಗಿಗೊಂದು ಅವಕಾಶ ನೀಡಿದ್ದಾರೆ.

ಎಪ್ರಿಲ್ ತಿಂಗಳ ಹನ್ನೆರಡನೇ ತಾರಿಖು ಸಂಜೆ ಏಳು ಘಂಟೆಗೆ ಬಸವೇಶ್ವರ ನಗರದಲ್ಲಿರುವ ವಾಣಿ ವಿದ್ಯಾಸಂಸ್ಥೆಯ ವೇದಿಕೆಯಲ್ಲಿ   ಇಂಚರಳ " ಕಥಾ ಸೃಷ್ಠಿ (story creation )"  ಕಾರ್ಯಕ್ರಮವಿದೆ . ಬನ್ನಿ , ನೋಡಿ , ಪ್ರೋತ್ಸಾಹಿಸಿ . ಇಂತಹ ಕಲಾಪ್ರಾಕಾರವೊಂದನ್ನು ಬೆಳೆಸಿ , ಬರುವಾಗ ಮಕ್ಕಳನ್ನು ಕರೆತರುವುದು ಮರೆಯಬೇಡಿ . ಯಾರಿಗೆ ಗೊತ್ತು ಅವರಲ್ಲೂ ಇಂತಹ ಪ್ರತಿಭೆ ಇರಬಹುದಲ್ಲವೆ ? ಇದನ್ನು ನೋಡಿ ಅವರೂ ಹೀಗೆ ಕಥಾ ಸೃಷ್ಠಿಯಲ್ಲಿ ತೊಡಗಬಹುದು ಅಲ್ಲವೆ ? ದಯವಿಟ್ಟು ಬನ್ನಿ . ಇದು ಇಂಚರಳ ಅಮ್ಮ ಮತ್ತು ಅಪ್ಪನ ಆತ್ಮೀಯ ಕರೆ .




ಇತ್ತೀಚೆಗೆ  ಕಾರ್ಯಕ್ರಮವೊಂದರಲ್ಲಿ ಜಡ್ಜ್ ಕೊಟ್ಟ " ಇಂಚರ " ಎಂಬ ವಿಷಯಕ್ಕೆ ಈಕೆ ಸ್ಥಳದಲ್ಲೇ ಹೇಳಿದ ಕತೆಯ ವಿಡಿಯೋ ತುಣುಕು ಈ ಲಿಂಕ್ ಕ್ಲಿಕ್ಕಿಸಿದರೆ ಲಭ್ಯ.   https://www.youtube.com/watch?v=MGXcrmYGYoY

10 comments:

  1. ನನ್ನ ಸ್ನೇಹಿತರೊಬ್ಬರು ಯಾವಾಗಲೂ ಹೇಳುತಿರುತ್ತಾರೆ.. ಪ್ರತಿಯೊಂದು ವಸ್ತುವಿಗೂ ಒಂದು ಹಿನ್ನೆಲೆ ಇರುತ್ತದೆ ಎಂದು.. ಬಾಲ್ಯದಲ್ಲಿ ಆಸಕ್ತಿ ಕೆರಳಿಸಿ ಅದಕ್ಕೆ ಸರಿಯಾದ ಪೋಷಣೆ ನೀಡಿದ ಮಾತಾ ಪಿತೃಗಳಿಗೆ ವಂದಿಸುತ್ತಾ. ಒಂದು ಅಗೋಚರ ಶಕ್ತಿಯನ್ನು ಪ್ರತಿಯೊಬ್ಬ ಓದುಗ ಕೇಳುಗರ ಮನಸ್ಸನ್ನು ತಾಕಿಸುವ ಅವರ ಪ್ರಯತ್ನ ಮತ್ತು ಸುಂದರ ಪ್ರತಿಭೆಗಳನ್ನು ಅನಾವರಣ ಮಾಡುತ್ತಿರುವ ಲಕ್ಷ್ಮಿಕೇಶವ್ ಅವರಿಗೂ ಅಭಿನಂದನೆಗಳು..

    ಸುಂದರ ಮತ್ತು ಪ್ರೋತ್ಸಾಹಕ ಪೂರ್ವ ಲೇಖನ .. ಇಷ್ಟವಾಯಿತು ಮೇಡಂ

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್

      Delete
  2. ಇಂಚರಳ ಪ್ರತಿಭೆಗೆ ಎಲ್ಲ ಕಡೆಯಿಂದಲೂ ಯಾವಾಗಲೂ ಗೌರವ ಸಿಗುತಿರಲಿ.

    ReplyDelete
    Replies
    1. ಧನ್ಯವಾದಗಳು ಬದರಿನಾಥ್ , ನಿಮ್ಮ ಪ್ರೋತ್ಸಾಹದ ನುಡಿಗಳ , ಹಾರೈಕೆಯ , ಆಶೀರ್ವಾದದ ಅವಶ್ಯಕತೆ ಇಂಚರಳಿಗಿದೆ , ದಯವಿಟ್ಟು ಬನ್ನಿ

      Delete
  3. ಇಂಚರಳಿಗೆ ಶುಭ ಹಾರೈಕೆಗಳು.

    ReplyDelete
    Replies
    1. ಧನ್ಯವಾದಗಳು ಕಾಕ

      Delete
  4. ಶುಭಹಾರೈಕೆಗಳು. ಈಗಿನ ಮಕ್ಕಳಲ್ಲಿ ಇಂತಹ ಪ್ರತಿಭೆ ಇರುವವರು ಅಪರೂಪ. ಇದನ್ನು ಕಣ್ಣಾರೆ ನೋಡಬೇಕೆನಿಸಿದೆ. ಬರಲು ಪ್ರಯತ್ನಿಸುವೆ.

    ReplyDelete
  5. ಹಮ್ಮ್ಮ್ ... ಇಂಚರಳ ಈ ಪ್ರತಿಭೆಯ ಬಗ್ಗೆ ನಾನೂ ಕೇಳಿದ್ದೆ ...., ಒಳ್ಳೆಯ ಪ್ರತಿಭೆ ...ಗುಡ್ ಲಕ್ ಟು ಇಂಚರ ...

    ReplyDelete