23 Mar 2016

ಬರ್ಕ (Mouse Deer)


"ಅಕ್ಕ ಇವತ್ತು  ಒಂದು ಹೊಸಾ ವಿಚಿತ್ರ ಪ್ರಾಣಿ ನೋಡಿದ್ವಿ, ಯಾರೊ ಅದನ್ನ ಹಿಡಿದು  ಬುಟ್ಟಿಯಲ್ಲಿ ಹಾಕಿಕೊಂಡು ಹೋದರು" ಅಂದ ತಮ್ಮ. ಮೊದಲಾದ್ರೆ ಹೀಗೆ ಹೇಳಿದವರ ಬಳಿ ಅದರ ಬಗ್ಗೆ ವಿವರಣೆ ಕೇಳಬೇಕಿತ್ತು,  ಆದರೀಗ ಮೊಬೈಲ್ ಕ್ಯಾಮರಾ ಕಾಲ ಇಂತಹ ಕ್ಷಣಗಳನ್ನು ತಕ್ಷಣ ಸೆರೆಹಿಡಿದುಬಿಡಬಹುದು.  ತಮ್ಮನೂ ತನ್ನ ಮೊಬೈಲಿಂದ ಈ ಫೋಟೊಗಳನ್ನ ತೋರಿಸಿದ. "ನಿನಗೆ ಗೊತ್ತಾ ಇದರ ಬಗ್ಗೆ" ಅಂದ. ನನಗೆ ಗೊತ್ತಿರಲಿಲ್ಲ. ಎಲ್ಲಿಯೂ ನೋಡಿದ ನೆನೆಪೂ ಇರಲಿಲ್ಲ. ಅಷ್ಟರಲ್ಲಿ ಬಂದ ಅಪ್ಪ ಇದು ಯಾವ ಹೊಸಾ ಪ್ರಾಣಿಯೂ ಅಲ್ಲ , "ಬರ್ಕ" ಅಂತ ಹೆಸರು ಮೊದಲೆಲ್ಲಾ ಮನೆಯ ಹಿಂದಿನ ಸೊಪ್ಪಿನಬೆಟ್ಟದಲ್ಲೂ ಬೇಕಾದಷ್ಟು ಇದ್ದವು. ಈಗೀಗ ಕಾಣುತ್ತಿಲ್ಲ. ಇದನ್ನು ಬೇಟೆಯಾಡಿ ತಿಂದೇ ಸಂಖ್ಯೆ ಕಡಿಮೆಯಾಗಿಬಿಟ್ಟಿದೆ ಎಂದರು.



ಗೂಗಲ್ ಚಾಚ ಇದನ್ನ Indian Spotted Chevrotain (Mouse Deer) ಅಂತ ಮನವರಿಕೆ ಮಾಡಿಕೊಟ್ಟ.  ಜಿಂಕೆಗಳ ಜಾತಿಗೆ ಸೇರಿದ ಈ ಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವೆಂತಲೂ ತಿಳಿಸಿದ. 

ಸುಮಾರು ದೊಡ್ಡ ಜಾತಿಯ ನಾಯಿಯಷ್ಟು ಎತ್ತರ, ಖಾಕಿ ಮೈಬಣ್ಣದ ಮೇಲೆ ಬಿಳಿ ಪಟ್ಟೆಗಳು, ತೆಳುವಾದ ಕಾಲುಗಳು, ಇಲಿಯ ಮೂತಿಯನ್ನು ಹೋಲುವ ಮುಖದ ಇವುಗಳು ಸಸ್ಯಾಹಾರಿಗಳು. ಆದರೂ ಮಾಂಸಾಹರಿಗಳಿಗಿರುವಂತಹ ಕೋರೆಹಲ್ಲುಗಳಿರುವುದು ಫೈಟಿಂಗ್ ಮಾಡೊದಿಕ್ಕಂತೆ. 

ನಮ್ಮ  ದೇಶದ ಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳು, ಪೂರ್ವ ಬೆಟ್ಟಗಳ ಕುರುಚಲು ಕಾಡುಗಳು ಇವುಗಳ ವಾಸಸ್ಥಾನ. ಹೆಚ್ಚಾಗಿ ಒಂಟಿಯಾಗಿ ವಾಸಿಸುತ್ತವೆ.  ಹೆಣ್ಣು ಒಂದು ಬಾರಿಗೆ ಎರಡು ಮರಿಗಳನ್ನು  ಹೆತ್ತು ಪೋಷಿಸುತ್ತದೆ. 


ರಾತ್ರಿ ಹೊತ್ತು ಮಾತ್ರ ತಮ್ಮೆಲ್ಲ ಚಟುವಟಿಕೆ ನಡೆಸುವ ಈ ಪ್ರಾಣಿಗಳು ಹಗಲು ಹೊತ್ತು ದಟ್ಟ ಪೊದೆಗಳ ನಡುವೆ, ಕಲ್ಲುಬಂಡೆಗಳ ಮರೆಯಲ್ಲಿ ಅಡಗಿಬಿಡುತ್ತವೆ.  ಮರಗಳ ಪೊಟರೆಗಳಲ್ಲಿ, ಕಾಡಿನ ನೆಲದ ದಟ್ಟ ಎಲೆಹಾಸುಗಳ ಮಧ್ಯೆ ಕೂಡಾ ಅಡಗಬಲ್ಲ ಇವುಗಳ ಮೈಬಣ್ಣ ಸುತ್ತಲಿನ ಪ್ರಕೃತಿಯ ಜೊತೆ ಮಿಳಿತವಾಗುವುದು ವೈರಿಗಳಿಂದ ರಕ್ಷಣೆ ಒದಗಿಸುತ್ತದೆ.  

"ಐಯುಸಿಎನ್ ರೆಡ್ ಲಿಸ್ಟ್" ಪ್ರಕಾರ ಇವುಗಳು "ಲೀಸ್ಟ್ ಕನ್ಸೆರ್ನ್ಡ್" ಪಟ್ಟಿಯಲ್ಲಿದ್ದರೂ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆಯೆಂದು ಬಲ್ಲವರ ಅಭಿಪ್ರಾಯ. ೧೯೭೨ ರ ವನ್ಯಜೀವಿ ಕಾಯ್ದೆಯ ಪ್ರಕಾರ ಈ ಜೀವಿಗಳನ್ನ ಕೊಲ್ಲುವುದು ಅಪರಾಧ.  ಆದರೂ ಎಗ್ಗಿಲ್ಲದೆ ಇದರ ಬೇಟೆ ನಡೆಯುತ್ತಲೇ ಇದೆ. 

ನಮ್ಮ ಪಶ್ಚಿಮಘಟ್ಟದ ಕಾಡುಗಳಲ್ಲಿ ಅದೆಷ್ಟು ಇಂತಹ ಅಪರೂಪದ ಪ್ರಾಣಿಗಳು ಅಡಗಿವೆಯೋ, ಅವುಗಳಲ್ಲಿ ಅದೆಷ್ಟು ಜೀವಿಗಳು, ನಾವು, ನಮ್ಮ ಮುಂದಿನ ಜನಾಂಗ ನೋಡಲು ಸಾದ್ಯವೇ ಇಲ್ಲದಂತೆ ಮಾಯವಾಗಿಬಿಡುತ್ತವೆಯೋ ಆ ವನದೇವಿಗೆ ಮಾತ್ರ ಗೊತ್ತು.



ಚಿತ್ರ ಕೃಪೆ- ಸುಮಂತ ಮತ್ತು ವಿಕಿಪಿಡಿಯಾ.

9 comments:

  1. ಈ ಪ್ರಾಣಿಯ ಚಿತ್ರವನ್ನು ಹಾಗು ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು. ಇಲ್ಲವಾದರೆ, ಬರ್ಕ ಎನ್ನುವ ಪ್ರಾಣಿಯ ಬಗೆಗೆ ನನಗೆ ಗೊತ್ತಾಗುತ್ತಿರಲಿಲ್ಲ.

    ReplyDelete
  2. ಅರ್ರೆ! ಈ ಪ್ರಾಣಿ ನಮ್ಮಲ್ಲೂ ಇದೆಯಾ! ಗೊತ್ತೇ ಇರಲಿಲ್ಲ.

    ReplyDelete
  3. ಹೌದು ವಿಕಾಸ್ ಇದೆ. ನಂಗೂ ಗೊತ್ತಿರಲಿಲ್ಲ.

    ReplyDelete
  4. ಇದರ ಮಾಂಸ ಅತ್ಯಂತ ರುಚಿಯನ್ನು ಹೊಂದಿರುವುದರಿಂದ ಇದನ್ನು ತಿಂದೇ ಮುಗಿಸಿದ್ದಾರೆ..... ಹಾಗಾಗಿ ಇಂದಿನ ಪೀಳಿಗೆಗೆ ಇದರ ಬಗ್ಗೆ ಗೊತ್ತಿಲ್ಲ

    ReplyDelete
  5. ನನ್ನ ಸಹೋದ್ಯೋಗಿಯೊಬ್ಬರು ಬರ್ಕ ಎಂದರೇನೆಂದು ಕೇಳಿದರು. ಗೂಗಲಿಸಿದಾಗ ಈ ಮಾಹಿತಿ ಸಿಕ್ಕಿತು. ಧನ್ಯವಾದಗಳು

    ReplyDelete
  6. ಇಂದು ನಮ್ಮ ಶಾಲೆಯ ಕನ್ನಡ ಶಿಕ್ಷಕಿ ಇಂಗ್ಲಿಷಿನಲ್ಲಿ ಬರ್ಕ್ ಎಂದರೆ ಯಾವ ಪಕ್ಷಿ ಎಂದು ಕೇಳಿದರು. ಆ ಹೆಸರು ಎಲ್ಲಿ ಬಂತು ಎಂದು ಕೇಳಲಾಗಿ ಯಾವುದೋ ಪುಸ್ತಕದಲ್ಲಿ ಶಿವರಾಮ ಕಾರಂತರು ಬರ್ಕವನ್ನು ಸಾಕಿದ್ದರೆಂಬ ಮಾಹಿತಿ ಇತ್ತು. ಅದು ಕನ್ನಡ ಪದವೇ ಹೊರತು ಇಂಗ್ಲಿಷ್ ಪದವಲ್ಲ ಎಂದು ಊಹಿಸಿ ಗೂಗಲಿಸಲಾಗಿ ಈ ಮಾಹಿತಿ ಸಿಕ್ಕಿತು. ಧನ್ಯವಾದಗಳು.

    ReplyDelete
  7. Naanu barka anno padavannu,Kuvempuravara "Malegalali madumagalu" nalli odidde, adu praani endu thilidithu, indu adara nijavada roopa thiliyithu. Djanyavadagalu.

    ReplyDelete
  8. ನಿಮಗೆ ನನ್ನಿ ಹೇಳಲೇಬೇಕು.. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರ್ಕ ಎಂದು ಓದಿದಾಗಲೆಲ್ಲ, ಅದನ್ನು ಊಹಿಸಲಾಗದೆ ಸೋತಿದ್ದೆ.. ನಿಮ್ಮ ಈ ಬರಿಗೆಯಿಂದ ನೆಮ್ಮದಿಯಾಯಿತು.. ಹೀಗೆ ನಮ್ಮಲ್ಲಿನ ಎಲ್ಲ ಪ್ರಾಣಿ ಪಕ್ಷಿಗಳ ಮಾಹಿತಿ ಕಲೆ ಹಾಕಿ ಕೊಡುತ್ತಿರಿ.. ಮತ್ತೊಮ್ಮೆ ನನ್ನಿ..

    ReplyDelete