30 Mar 2017

ನಿಮ್ಮ ಫೋನ್ ಬರಬೇಕಿತ್ತು ಅಜ್ಜಾ......


ಒಂಬತ್ತು ದಿನಗಳಾದವು, ಇಷ್ಟರಲ್ಲಿ ಕನಿಷ್ಟ ಎರಡು ಬಾರಿಯಾದರೂ ನೀವು ಫೋನ್ ಮಾಡಬೇಕಿತ್ತು ಅಜ್ಜಾ. ಮೊಬೈಲ್ ನಲ್ಲಿ ನಿಮ್ಮ ಹೆಸರು, ಫೋಟೋ ಹೊತ್ತ ಕರೆ ಬಂದೊಡನೆ, ಛೆ! ಇವತ್ತಾದರೂ  ನಾನು ಅಜ್ಜನಿಗೊಂದು ಫೋನ್ ಮಾಡಬೇಕಿತ್ತು, ಇನ್ನು ಬೈಸಿಕೊಳ್ಳಬೇಕು ಎಂದುಕೊಳ್ಳುತ್ತಾ “ಹಲೋ ಅಜ್ಜಾ ಅರಾಮ” ಎನ್ನಬೇಕಿತ್ತು. ನೀವದಕ್ಕೆ “ಏನಷ್ಟು ಬ್ಯುಸಿನಾ ನೀನು, ಒಂದು ಫೋನ್ ಮಾಡಕ್ಕಾಗಲ್ಲನೆ” ಅಂತ ಗದರಬೇಕಿತ್ತು. ನಂತರ ಕುಶಲಸಮಾಚಾರ ಆದೊಡನೆ ಆಗೊಂಬೆ ದೇವಸ್ಥಾನದಲ್ಲಿ ಇನ್ನೆರಡು ದಿನದಲ್ಲಿ ನಡೆಯಲಿರುವ ವಿಶೇಷ ಪೂಜೆಯ ಬಗ್ಗೆಯೋ, ನಿಮ್ಮ ದೊಡ್ಡಪ್ಪನ ಮಗನ ಸೊಸೆಯ ಮನೆಯಲ್ಲಿ ನಡೆಯಲಿರುವ ಅವರಣ್ಣನ ಮಗನ ಉಪನಯನದ ಸುದ್ದಿಯನ್ನೋ ಹೇಳಬೇಕಿತ್ತು ನೀವು. ಯಾರು, ಏನು ಎಂದು ಸ್ವಲ್ಪವೂ ಅರ್ಥವಾಗದಿದ್ದರೂ ನಾನು ಎಲ್ಲವೂ ಅರ್ಥವಾದವಳಂತೆ ತುಂಬಾ ಆಸಕ್ತಿಯಿಂದ ಕೇಳುತ್ತಿರುವಂತೆ ಹೂಂ ಗುಟ್ಟಬೇಕಿತ್ತು. ಆದರಿನ್ನು ಇದು ಬರೀ ಕನಸಲ್ಲಷ್ಟೇ ಸಾಧ್ಯ ಎಂಬುದು ಕಣ್ಣಲ್ಲಿ ನೀರು ತರಿಸುತ್ತಿದೆ.

ನೀವು ನನಗೆ ಬರೀ ಅಜ್ಜ ಮಾತ್ರವಲ್ಲ, ಮೂರು ವರ್ಷ ಶಾಲೆಯಲ್ಲಿ ಕನ್ನಡ ಶಿಕ್ಷಕ ಕೂಡ. ಇಂದಿಗೂ ಏನಾದರೂ ಬರೆಯುವಾಗ ಕಾಗುಣಿತ ದೋಷವಾದರೆ ತಕ್ಷಣ ನಿಮ್ಮದೇ ನೆನಪಾಗಿ ತಿದ್ದಿಕೊಳ್ಳುತ್ತೇನೆ.  ಹೋಂ ವರ್ಕ್ ಮಾಡದಿದ್ದುದಕ್ಕೆ ಒಮ್ಮೆ ಒಂದು ಹೊಡೆತ ತಿಂದದ್ದು, ಇನ್ನೊಮ್ಮೆ ಯಾವುದೋ ಅಫಿಷಿಯಲ್ ಲೆಟರ್ ಕಳೆದು ಹಾಕಿದ್ದಕ್ಕೆ ತುಂಬಾ ಸಿಟ್ಟು ಬಂದರೂ ತಡೆದುಕೊಂಡು ಈಗಲೇ ಹುಡುಕಿ ತಾ ಎಂದು ಗದರಿದ್ದು ಕಹಿನೆನಪುಗಳಾದರೆ, ಆ ದಿನಗಳ ಸಿಹಿನೆನಪುಗಳು ಮೊಗದಷ್ಟೂ.
ನನ್ನ ಓದುವ ಹುಚ್ಚಿಗೆ ನೀರೆರದ, ಅನೇಕ ಮಕ್ಕಳ ಪುಸ್ತಕಗಳನ್ನ ಕೊಡಿಸಿ, ಪಠ್ಯಪುಸ್ತಕಗಳಷ್ಟೇ ಅಲ್ಲದೆ ಬೇರೆ ಓದಲು ಬಹಳಷ್ಟು ವಿಷಯಗಳಿವೆ ಎಂದು ತೋರಿಸಿಕೊಟ್ಟ ಮೊದಲ ಶಿಕ್ಷಕ ನೀವು. ಆ ಮೂರು ವರ್ಷಗಳಲ್ಲಿ ನಾನು ಗಮನಿಸಿದಂತೆ ಮಕ್ಕಳಿಗೆ ತರಗತಿಯಲ್ಲಿ ಶಿಸ್ತಿನ ಶಿಕ್ಷಕರಾಗಿದ್ದರೂ ಹೊರಗೆ ಪ್ರೀತಿಯ ಅಜ್ಜನಂತೆಯೆ ಇದ್ದಿರಿ. ನನ್ನ ಗೆಳತಿಯರ ಕಾಲೆಳೆಯುತ್ತಾ, ಅಣಕಿಸುತ್ತಾ ಇರುತ್ತಿದ್ದ ನಿಮ್ಮ ಬಗ್ಗೆ ಅವರೆಲ್ಲಾ ಈಗಲೂ ಅದೇ ಪ್ರೀತಿಯಿಂದ ವಿಚಾರಿಸಿಕೊಳ್ಳುವಾಗ ನನಗೆ ಸಂತಸ.

ಬೆಳಗ್ಗೆ ನಿಮ್ಮ ದೀರ್ಘವಾದ ಪೂಜೆ ಮುಗಿಯುತ್ತಾ ಬರುತ್ತಿದ್ದಂತೆಯೆ ನಾನು, ತಂಗಿ ಸುಷ್ಮಾ ಅಲ್ಲೆಲ್ಲಾದರೂ ಕುಳಿತಿದ್ದರೇ ಎದ್ದು ದೂರ ಹೋಗುತ್ತಿದ್ದೆವು. ಇಲ್ಲವಾದರೆ ನಮ್ಮ ಬೆನ್ನಿಗೆ ನಿಮ್ಮ ಪೂಜಾತಟ್ಟೆಯಲ್ಲಿದ್ದ ನೀರನ್ನು ಸ್ವಲ್ಪ ಸುರಿದು ನಿಮಗೇ ವಿಶಿಷ್ಟವಾದ ತುಂಟ ನಗು ನಗುತ್ತಾ ನಿಲ್ಲುತ್ತಿದ್ದುದು ಖಚಿತವಾಗಿತ್ತು. ಆ ಕಾಲದ ಪ್ರಸಿದ್ಧ ಜಗಳಗಂಟಿಯಾದ, ತಂಗಿಗೂ ನಿಮಗೂ ಘನಘೋರ ಜಗಳಗಳಾದ ದಿನಗಳಿಗೇನೂ ಕೊರತೆಯಿರಲಿಲ್ಲ. ಈಗಲೂ ನಿಮ್ಮ ಎಂಬತ್ತೈರ ವಯಸ್ಸಿನಲ್ಲಿಯೂ ಕೊನೆಯ ಮೊಮ್ಮಗಳೊಡನೆ ನೀವು ಹಾಗೆಯೆ ಜಗಳವಾಡುತ್ತಿದ್ದುದು ಶುದ್ಧ ಜೀವನಪ್ರೀತಿಯಲ್ಲದೆ ಬೇರೇನಲ್ಲ.

ನಾನು ಅಲ್ಲಿದ್ದ ಮೂರು ವರ್ಷಗಳು ನಂತರ ಯಾವಾಗಲಾದರೂ ಉಳಿಯಲು ಬಂದಾಗ ತುಂಬ ತೊಂದರೆಯಾಗುತ್ತಿದ್ದ ಇನ್ನೊಂದು ಸಂಗತಿ ನಿಮ್ಮ ರೇಡಿಯೋ ಹುಚ್ಚು. ಮಲಗುವಾಗಲೂ ರೇಡಿಯೋ ಸಣ್ಣದಾಗಿ ಹಚ್ಚಿಯೇ ಮಲಗುವ ನಿಮ್ಮ ಅಭ್ಯಾಸದಿಂದ ರಾತ್ರಿ ನಿದ್ದೆ ಬರುವುದೇ ಕಷ್ಟವಾದಾಗ, ನಿಮಗೆ ನಿದ್ರೆ ಬಂದಿದ್ದನ್ನು ಗಮನಿಸಿ ಆಫ್ ಮಾಡಿಬಿಡುತ್ತಿದ್ದೆ. ಅದರೆ ಅದನ್ನ ಆಫ್ ಮಾಡಿದೊಡನೆಯೆ ನಿಮಗೆ ಎಚ್ಚರವಾಗಿಬಿಡುತ್ತಿತ್ತು. ಆಮೇಲೆ ಅಜ್ಜಿ ನಿಮಗೆ ಗದರಿಸಿ, ರೇಡಿಯೋವನ್ನು ಅತ್ಯಂತ ಕಡಿಮೆ ವಾಲ್ಯೂಮಿಗೆ ಇರಿಸಿ ನಿಮ್ಮ ಕಿವಿಯ ಬಳಿಯೇ ಇಟ್ಟಾಗ ಇಬ್ಬರಿಗೂ ಸಮಾಧಾನವಾಗುತ್ತಿತ್ತು. ಆದರೆ ಹೀಗೆ ನೀವು ರೇಡಿಯೋ ಹಚ್ಚಿರುತ್ತಿದ್ದಾಗ ನನಗೇ ಗೊತ್ತಿಲ್ಲದಂತೆ ಅದರಿಂದ ಅನೇಕ ಸಂಗತಿಗಳನ್ನ ಕಲಿತದ್ದೂ ಸತ್ಯ. ಭಾವಗೀತೆಗಳು, ಚಿತ್ರಗೀತೆಗಳು, ನಾಟಕ, ಶಾಸ್ತ್ರೀಯ ಸಂಗೀತ ಎಲ್ಲವನ್ನೂ ಕೇಳುವ ಆಸಕ್ತಿ ಹುಟ್ಟಿಸಿದ್ದೇ ನಿಮ್ಮ ರೇಡಿಯೋ.

ಈಗಿನ ಶಿಕ್ಷಣಕ್ರಮದ ಬಗ್ಗೆ, ಪದೇಪದೇ ನಡೆಸುವ ಪರೀಕ್ಷೆಗಳ ಬಗ್ಗೆ ನೀವು ಬಯ್ಯುವಾಗ ನನ್ನ ಮಗಳಿಗೆ ಖುಷಿಯೋ ಖುಷಿ,  ಹೌದಜ್ಜಾ ತುಂಬಾ ಕೆಟ್ಟ ಸಿಸ್ಟಮ್ ಇದು ಪರೀಕ್ಷೆಗಳೇ ಇರಬಾರದಿತ್ತು ಅಂತ ಅವಳ ಒಗ್ಗರಣೆ.   ಮುಸರೆ, ಮಡಿ ಮೈಲಿಗೆ ಒಂದೂ ಅರ್ಥವಾಗದ ಅವಳಿಗೆ “ನಿನ್ನ ಅಪ್ಪ ಅಮ್ಮಂಗೇ ಎಂತೂ ಇಲ್ಲ ನಿಂಗೆ ಹೆಂಗೆ ಗೊತ್ತಾಗ್ಬೇಕು” ಅಂತ ನೀವೊಮ್ಮೆ ಬಯ್ದದ್ದನ್ನ ಅವಳು ಯಾವಾಗಲೂ ನಮಗೆ ಅಣಕಿಸಲು ಬಳಸುತ್ತಾಳೆ!


 ಎಂಬತ್ತೈದು ವರ್ಷದ ತುಂಬು ಜೀವನ ನಡೆಸಿ, ಈಗಿದ್ದೆ ಈಗಿಲ್ಲವೆಂಬಂತೆ ಎದ್ದು ಹೋದ ನಿಮ್ಮ ನೆನಪುಗಳಿಗೆ ಬರವಿಲ್ಲ ಅಜ್ಜ. ಹೀಗೆ ಮನದಾಳದಲ್ಲಿ, ಕನಸಿನಲ್ಲಿ ನಿಮ್ಮ ನೆನಪಿನ ಫೊನ್ ಕರೆ ರಿಂಗಣಿಸಲಿ, ನಿವು ಕಲಿಸಿದ ಪಾಠಗಳು ದಾರಿದೀಪವಾಗಿರಲಿ.

1 comment:

  1. ಅಜ್ಜ, ಅಜ್ಜಿಯರ ಪ್ರೀತಿ ಸಾಟಿ ಇಲ್ಲದ ಪ್ರೀತಿ. ನಿಮಗೆ ಸಮಾಧಾನ ಹೇಳಲು ಹೇಗೆ ಸಾಧ್ಯವಾದೀತು?

    ReplyDelete