08-May-2017

ಮಗಳು

 "ಈ ಮುಂದಿನ ಬೇಸ್ಗೆಗಾದ್ರೂ ಮಗಳ ಮದುವೆ ಮಾಡಕ್ಕು ... ಅದಕ್ಕೂ ಈಗ ಇಪ್ಪತ್ತೆಂಟಾತು ...ಅವಳ ವಾರಗೆಯವ್ಕೆಲ್ಲ ಮದುವೆಯಾಗಿ ಕೈಗೊಂದು ಕೂಸು ಬೈಂದು ಗೊತ್ತಿದ್ದಾ! " ಬೇಯಿಸಿದ ಅಡಕೆಯನ್ನು ಹಂಡೆಯಿಂದ ತೆಗೆದು ಬುಟ್ಟಿಗೆ ಹಾಕುತ್ತಾ ಹೇಳಿದಳು ಜಯಲಕ್ಷ್ಮಿ.
"ಹೂಂ... ನೋಡನ ತಗಾ.." ಕಟುಬಾಯಿಯಿಂದ ಇಳಿದ ಕವಳದ ಕೆಂಪುರಸವನ್ನು ಉಟ್ಟಲುಂಗಿಯ ತುದಿಯನ್ನೆತ್ತಿ ಒರೆಸಿ ,ಲುಂಗಿ ಎತ್ತಿ ಕಟ್ಟಿ ಅಡಿಕೆ ಬುಟ್ಟಿನ್ನು ತಲೆಯ ಮೇಲಿಟ್ಟುಕೊಂಡು ಅಟ್ಟದ ಮೆಟ್ಟಿಲೆಡೆಗೆ ನಡೆದ  ಗೋಪಾಲಕೃಷ್ಣ.
ಮಗಳ ಮದುವೆ ವಿಷಯ ಬಂದಾಗಲೆಲ್ಲ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೆ ಮಾತನಾಡುವ ಗಂಡನ ಮನದಲ್ಲೇನಿರಬಹುದೆಂದು ಅರ್ಥವಾಗದೆ ನಿಂತು ನೋಡಿದಳು ಜಯಲಕ್ಷ್ಮಿ.  ಕ್ಷಣದಲ್ಲಿ ಸಾವರಿಸಿಕೊಂಡು  ಚಾಪೆಯಲ್ಲಿ ಉಳಿದ ಸುಲಿಬೇಳೆಯನ್ನೆಲ್ಲ ಹಂಡೆಯ ಕುದಿಯುವ ನೀರಿಗೆ ಹಾಕಿ  , ಒಲೆಯ ಬೆಂಕಿಯನ್ನು ದೊಡ್ಡದು ಮಾಡಿ , ತೊಗರಿನ ಹಾಳೆಯನ್ನು ಸರಿಪಡಿಸಿ ಒಳನಡೆದಳು.

 ಅತ್ತೆಗೊಂದು ಲೋಟ ಹಾಲು ಬಿಸಿ ಮಾಡಿ ಕೊಟ್ಟು ಉಳಿದ ಹಾಲಿಗೆ ಹೆಪ್ಪಿಡುವಾಗ ಈ ದಿನವೂ ಕೆಂಪಿ ಎರಡು ಲೋಟ ಹಾಲು ಕಡಿಮೆ ಕೊಟ್ಟದ್ದು ಗಮನಿಸಿ ಜಯಲಕ್ಷ್ಮಿಗೆ ಬೇಸರವಾಯಿತು.  ಅತ್ತೆಯ ಬಳಿ "ಇನ್ನು ಇದು ಬತ್ತಿಸಿಕೊಂಡರೆ ಹಾಲನ್ನು ಡೈರಿಯಿಂದ ತರದೇ ಸೈ ಈ ವರ್ಷ ,ಊರಲ್ಲಿ ಯಾರ ಮನೇಲೂ ಕರಾವು ಇಲ್ಲೆ. ವಿಮಲಕ್ಕನ ಮನೆಲೂ ದನ ಕೊಟ್ಟುಬಿಟ್ಟಿದ್ದ  ಮಾಡಲಾಗ್ತಲ್ಲೆ ಹೇಳೀ " ಎಂದು ಅವಲತ್ತುಕೊಂಡಳು.
ಎಂತ ಮಾಡಲಾಗ್ತೆ ಕೂಸೆ ...ಪಾಪ ಕೆಂಪಿಯ ಕರುವಿಗೆ ವರ್ಷ ಆತು ಅಲ್ದಾ ..ಇನ್ನು ಎಷ್ಟು ದಿನ ಹಾಲು ಕೊಡ್ತು ಅದು ..ಹೋಗ್ಲಿ ಬಿಡು ಎಂದರು ಅತ್ತೆ ಶಾರದಮ್ಮ. ಅಡಿಗೆ ಮನೆಯ ಕೆಲಸಗಳನ್ನು ಮುಗಿಸಿದ ಜಯಲಕ್ಷ್ಮಿ ಅತ್ತೆಯ ಮಂಚದ ಬಳಿ ಬಂದು ಅವರ ಮಂಡಿನೋವಿಗೆ ಸಾಗರದ ಪಂಡಿತರು ಕೊಟ್ಟ ತೈಲವನ್ನು ಹಚ್ಚಿ ತಿಕ್ಕಲು ಪ್ರಾರಂಭಿಸಿದಳು.
"ಅಪ್ಪಿ ಎಲ್ಲಿದ್ದ ? ಅಡಕೆ ಬೇಯಿಸಿ ಆಗಲ್ಯ ಇನ್ನೂ "  ಶಾರದಮ್ಮ ಮಗನ ಬಗ್ಗೆ ಕೇಳಿದರು.
"ಕೋನೇ ಹಂಡೆ ಬೇಯಿಸ್ತಾ ಇದ್ದ ಅತ್ತೆ ..ಆಗ್ತು ಇನ್ನು ಹತ್ತು ನಿಮಿಷಕ್ಕೆ "...ಅನ್ಯಮನಸ್ಕಳಾಗಿ ಉತ್ತರಿಸಿದಳು ಜಯಲಕ್ಷ್ಮಿ.
"ಏಂತಾತೇ ಕೂಸೆ ಹುಶಾರಿಲ್ಯ ನಿಂಗೆ ...ಸುಸ್ತಾಯ್ದು ಕಾಣ್ತು ಬೆಳಗ್ಗಿಂದ ಕೆಲಸ ಮಾಡಿ, ಕೊನೆ ಕೊಯ್ಲು ಬೇರೆ ...ಹೋಗಿ ಮಲಗು ...ಸಾಕು ನನ್ನ ಸೇವೆ ಮಾಡಿದ್ದು " ಸೊಸೆಯ ಬಾಡಿದ ಮುಖ ನೋಡಿ , ಪ್ರೀತಿಯಿಂದ ಗದರಿದರು .
 "ನಿಂಗಕ್ಕೆಂತು  ಮೊಮ್ಮಗಳ ಮದುವೆ ನೋಡ ಆಶೆ ಇಲ್ಯ ಅತ್ತೆ , ನಿಮ್ಮ ಮಗನ ಹತ್ರ ಮಾತಾಡಿ ಸ್ವಲ್ಪ ...ನಾನು ಕೇಳಿದಾಗಲೆಲ್ಲ ನೋಡನ ಅಂತಲೇ ಹೇಳಿ ತಳ್ಳಿಬಿಡ್ತ "  ಸೊಸೆಯ ಮಾತು ಕೇಳಿ ನಿಟ್ಟುಸಿರಿಟ್ಟ ಶಾರದಮ್ಮ  ದಿಂಬಿಗೆ ತಲೆ ಕೊಟ್ಟು ಮಲಗಿದರು. "ಕೂಸೆ, ನಿಂಗೆ ಮೊದಲೇ ಹೇಳಿದ್ದಿ ಹೌದ ...ನಮ್ಮಂತವ್ರು ಹೆಣ್ಣುಮಕ್ಕಳನ್ನ ಜಾಸ್ತಿ ಓದಿಸಿದ್ರೂ ಕಷ್ಟ ಆಗ್ತು ಅಂತ....ನೀನು ಕೇಳ್ಲೆ.. ಮಗಳನ್ನ ದೂರ ಓದಲೆ ಕಳ್ಸಿದೆ ...ಇಂಜನಿಯರಿಂಗ್ ಮಾಡಿಸಿದೆ ...ಓದಿದ ಕೂಸು ಮನೇಲಿ ಹೇಗಿರ್ತು? ದೊಡ್ಡ ಕೆಲಸ ಸಿಕ್ಕು ಪೇಟೆ ಸೇರ್ತು. ಈಗಂತೂ ಎರಡು ತಿಂಗಳು ಬೆಂಗಳೂರಲ್ಲಿದ್ದರೆ ಇನ್ನೆರಡು ತಿಂಗಳು ಅಮೇರಿಕಾದಲ್ಲಿ ಇರ್ತು ಅದು... ಇಂತಹ ಹುಡುಗಿ ಸುಮಾರಿನ ವರಗಳನ್ನು ಒಪ್ಪುದು ಹೌದನೆ? ಹಾಂಗೆ ಹೇಳಿ ದೊಡ್ಡ ಜನಗಳು ನಮ್ಮಂತವರ ಮನೆಯ ಸಂಬಂಧ ಮಾಡ್ತ್ವಾ? ಒಂದ್ ವೇಳೆ ಅವು ಬಂದ್ರೂ, ಈ ಅಡಿಕೆ ರೇಟಲ್ಲಿ ತುಂಬ ದೊಡ್ಡ ಜನರ ಸಂಬಂಧ ಬೆಳೆಸಿ ಅವರಿಗೆ ಸಮನಾಗಿ ಮದುವೆ ಮಾಡಿಕೊಡೋ ತಾಕತ್ತು ಅಪ್ಪಿಗೆ ಇದ್ದಾ?"  ... ಮುಸುಕೆಳೆದು ಮಲಗಿದರು ಶಾರದಮ್ಮ.

ಲೈಟ್ ಆರಿಸಿ ಹೊರಬಂದ ಜಯಲಕ್ಷ್ಮಿಯ ಮನ ಹಿಂದಕ್ಕೋಡಿತು.
ಮಲೆನಾಡಿನ ಸಾಗರ ತಾಲ್ಲೂಕಿನ ಪುಟ್ಟ ಹಳ್ಳಿ ಹಿರೇಕೊಡಿಗೆಯಲ್ಲಿ ಹುಟ್ಟಿ ಬೆಳೆದ ಜಯಲಕ್ಷ್ಮಿ ಓದಿನಲ್ಲಿ ತುಂಬ ಜಾಣೆಯಾಗಿದ್ದಳು. ಓದಿ ದೊಡ್ಡ ಕೆಲಸ ಹಿಡಿಯಬೇಕೆಂಬುದು ಅವಳ ಕನಸಾಗಿತ್ತು. ಆದರೆ ಚಿಕ್ಕ ಅಡಿಕೆ ತೋಟದಲ್ಲಿ ಬರುವ ಉತ್ಪತ್ತಿಯಲ್ಲಿ ನಾಲ್ಕು ಮಕ್ಕಳನ್ನು ಸಾಕುವ ಹೊಣೆಯಿದ್ದ ಅವಳ ಅಪ್ಪ ಸೀತಾರಾಮ ಭಟ್ಟರಿಗೆ ಹಿರಿಯ ಮಗಳಾದ ಜಯಲಕ್ಷ್ಮಿಯನ್ನು ಓದಿಸಲು ಸಾಧ್ಯವೂ ಇರಲಿಲ್ಲ ಆಸಕ್ತಿಯೂ ಇರಲಿಲ್ಲ.
ಅಂತೂ ಆಗಷ್ಟೇ ಪಿಯುಸಿ ಮುಗಿಸಿದ್ದ ಜಯಲಕ್ಷ್ಮಿಯನ್ನು ಪಕ್ಕದ ಊರಾದ ಜೇನುಕೊಪ್ಪಲಿನ  ಕೃಷಿಕ ಗೋಪಾಲಕೃಷ್ಣನಿಗೆ ಕೊಟ್ಟು ಮದುವೆ ಮಾಡಿಬಿಟ್ಟರು.
 ಗಂಡನ ಮನೆಗೆ ಬಂದಾಗ ಹೆಚ್ಚಿನ ವ್ಯತ್ಯಾಸವೇನೂ ಕಾಣಲಿಲ್ಲ ಅವಳಿಗೆ . ಶಾಂತ ಸ್ವಭಾವದ , ಒಳ್ಳೆಯ ಪತಿ , ಮಗಳಂತೆಯೇ ಕಾಣುವ ಅತ್ತೆ , ಮಾವ , ಆರಕ್ಕೇರದ ಮೂರಕ್ಕಿಳಿಯದ ಮಧ್ಯಮವರ್ಗದ ಸಂಸಾರದಲ್ಲಿ ಚೆನ್ನಾಗಿ ಹೊಂದಿಕೊಂಡಳು ಜಯಲಕ್ಷ್ಮಿ.  ಗಂಡನ ಪ್ರೀತಿಯಲ್ಲಿ ಅವಳ ಕನಸು ಮರೆಯಾಯ್ತು.
ಕಾಲ ಕಳೆಯಿತು....ಮೊದಲ ಮಗು  ರಮ್ಯಳ ಜನನವಾಯ್ತು...ಅವಳ ಅಟ ಪಾಠದಲ್ಲಿ ಕಳೆದುಹೋದಳು...ಅವಳಿಗೆ ಐದು ವರ್ಷವಾದಾಗ  ನಿಖಿಲ್ ಹುಟ್ಟಿದ್ದ.

ಮಗಳು  ರಮ್ಯ ತನ್ನಂತೆಯೇ ಓದಿನಲ್ಲಿ ಮುಂದಿದ್ದದ್ದು ಜಯಲಕ್ಷ್ಮಿಗೆ ತುಂಬ ಸಂತೋಷ ನೀಡಿತ್ತು ...ತನ್ನ ಕನಸು ಮಗಳ ಮೂಲಕವಾದರೂ ನನಸಾಗುವುದು ಎಂಬ ನಂಬಿಕೆಯಿತ್ತು ಅವಳಿಗೆ. ಅದಕ್ಕೆ ತಕ್ಕಂತೆ ಪಿಯುಸಿಯಲ್ಲಿ ಮಗಳು ಕಾಲೇಜಿಗೇ ಪ್ರಥಮ ಸ್ಥಾನಗಳಿಸಿದಳು. ಇಂಜಿನಿಯರಿಂಗ್ ಓದುವ ಆಸೆ ವ್ಯಕ್ತ ಪಡಿಸಿದಳು. ಅದಕ್ಕಾಗಿ ದೂರದೂರಿಗೆ ಹೋಗಲೇ ಬೇಕಿತ್ತು, ಮೆರಿಟ್ ಸೀಟ್ ದೊರಕಿದರೂ..ಹಾಸ್ಟೆಲ್ ಖರ್ಚು ಇತ್ಯಾದಿಯನ್ನು ಭರಿಸುವುದು ಹೇಗೆಂಬ ಯೋಚನೆ ಗೋಪಾಲಕೃಷ್ಣನಿಗಿತ್ತು. ಎರಡು ವರ್ಷದ ಹಿಂದಷ್ಟೇ ಮಾವನವರ ಅನಾರೋಗ್ಯದ ಕಾರಣದಿಂದ ಸಾಕಷ್ಟು ಸಾಲಗಳಿದ್ದವು, ಮಾವನವರೂ ಉಳಿದಿರಲಿಲ್ಲ.    ಅತ್ತೆ ಶಾರದಮ್ಮನೂ ಇಲ್ಲೆ ಡಿಗ್ರಿ ಮಾಡಬಹುದಿತ್ತೆಂದು ಗೊಣಗಿದರು. ಆದರೆ ಮಗಳ ಪರವಾಗಿ ನಿಂತಳು ಜಯಲಕ್ಷ್ಮಿ. ಕೊನೆಗೆ ಬ್ಯಾಂಕ್‍ನಲ್ಲಿ ಸಾಲ ತೆಗೆದು ಮಗಳನ್ನು ದೂರದ ಮೈಸೂರಿನಲ್ಲಿ ಕಾಲೇಜಿಗೆ ಸೇರಿಸಿ ಬಂದ  ಗೋಪಾಲಕೃಷ್ಣ.
ಓದುತ್ತಿದ್ದಾಗಲೇ ಮಗಳು ಒಳ್ಳೆಯ ಕಂಪನಿಯ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಸೆಲೆಕ್ಟ್  ಆದಾಗ ಜಯಲಕ್ಷ್ಮಿ  ಹನಿಗಣ್ಣಾಗಿದ್ದಳು.  ದಂಪತಿಗಳಿಬ್ಬರಿಗೂ ಸಾಲ ತೀರಿಸಲು ತಾವು ಪಟ್ಟ ಕಷ್ಟವೂ ಮರೆತು ಹೋಗಿತ್ತು.
ಮಗಳೊಂದು ನೆಲೆಗೆ ನಿಂತಳೆಂದುಕೊಂಡಾಗ ಮಗನ ಬಾರಿ ಬಂದಿತ್ತು. ಅವನೂ ಕಡಿಮೆಯಿರಲಿಲ್ಲ. ಅಕ್ಕನ ದಾರಿಯಲ್ಲೆ ಅವನೂ ಇಂಜಿನಿಯರಿಂಗ್ ಮಾಡುವ ಆಸೆ ಹೊತ್ತಿದ್ದ. ಈಗ ಅವನನ್ನೂ ಸಾಲ ಮಾಡಿ ಕಾಲೇಜಿಗೆ ಸೇರಿಸಿದ್ದಾಗಿತ್ತು.
ಇದರ ಮಧ್ಯೆ ಮಗಳ ವಯಸ್ಸು ಇನ್ನೊಂದು ಜವಾಬ್ದಾರಿಯನ್ನು ನೆನಪಿಸುತ್ತಿತ್ತು. ತನ್ನ ಗೆಳತಿಯರು , ನೆಂಟರೆಲ್ಲ ಮಗಳ ಮದುವೆ ಯಾವಾಗ ಎಂದು ಕೇಳಿದಾಗಲೆಲ್ಲ ಜಯಲಕ್ಷ್ಮಿ ಗೋಪಾಲನನ್ನು ಕೇಳುತ್ತಿದ್ದಳು. ಹೆಚ್ಚು ಮಾತನಾಡದ ಅವ ಏನೂ ಸರಿಯಾಗಿ ತಿಳಿಸದೇ ಸುಮ್ಮನಾಗಿಬಿಡುತ್ತಿದ್ದ.
ಆದರೆ ಇನ್ನು ಸುಮ್ಮನಿರಲು ಜಯಲಕ್ಷ್ಮಿ ತಯಾರಿರಲಿಲ್ಲ. ಪಕ್ಕದ ಮನೆಯ  ಸುನಂದಕ್ಕ ತನ್ನ  ತಂಗಿಯ ಮಗನಿಗೆ ರಮ್ಯಳನ್ನು ಕೊಡುವಂತೆ  ಪ್ರಸ್ತಾಪ ತಂದಿದ್ದಳು . ಸುಂದರ ಸುಶಿಕ್ಷಿತನಾದ ಆ ಹುಡುಗ ಇವರೆಲ್ಲರ ಮೆಚ್ಚುಗೆಗೂ ಪಾತ್ರನಾದವನೇ ಆಗಿದ್ದ. ಅದಕ್ಕೆಂದೇ ಹೇಗಾದರೂ ಇವತ್ತು  ಗಂಡನಲ್ಲಿ ಈ ವಿಷಯ ಇತ್ಯರ್ಥ ಮಾಡಲೇ ಬೇಕೆಂದು ತೀರ್ಮಾನಿಸಿದ್ದಳು ಜಯಲಕ್ಷ್ಮಿ.
ಹಿತ್ತಿಲ ಅಂಗಳದಲ್ಲಿದ್ದ ಅಡಕೆ ಒಲೆಯ ಬಳಿ  ಕುಳಿತಿದ್ದ ಗಂಡನ ಬಳಿ ಬಂದವಳು ಅಲ್ಲೇ ಪಕ್ಕದಲ್ಲಿ ಕುಳಿತು .  " ಆಚೆಮನೆ  ಸುನಂದಕ್ಕನ ತಂಗಿಯ ಮಗನಿಗೆ ಹೆಣ್ಣು ಹುಡುಕುತ್ತ ಇದ್ದ ... ಸುನಂದಕ್ಕ ನಮ್ಮನೆ ಕೂಸಿನ್ನ ಕೇಳಿದ್ದ ....ಜಾತಕ ಕೊಡಲಕ್ಕಿತ್ತೇನೆ ಅಲ್ದಾ? ಒಳ್ಳೇ ಜನ ಅವು. " ಎಂದಳು.
ಬಾಯಿಯಲ್ಲಿದ್ದ ಎಲೆಅಡಿಕೆ ತುಪ್ಪಿ ಬಂದ ಗೋಪಾಲ " ಅವು ತುಂಬ ಶ್ರೀಮಂತರಲ್ದನೆ... ಅವಕ್ಕೆ ಸರಿಸಮನಾಗಿ ಮಾಡೋ ಹಾಂಗೆ ಇದ್ವ ನಾವು ....ಈ ವರ್ಷದ ಬೆಳೆ ನೀನೆ ನೋಡ್ತ ಇದ್ದೆ .... ನಿಖಿಲಂಗೆ ಅಂತ ತೆಗೆದ ಸಾಲ ಇನ್ನೂ ತೀರಲ್ಲೆ , ಎಂತ ಮಾಡ್ಲಿ ಹೇಳು" ಅಸಹಾಯಕತೆಯಿಂದ ಹೇಳಿದ.
"ಈಗಿನ ಕಾಲದಲ್ಲಿ ವರಗಳೇನು ಹುಡುಗಿಯ ಮನೆಯವರ ಶ್ರೀಮಂತಿಕೆ ನೋಡದಿಲ್ಲೆ. ಅಲ್ಲದೆ ನಮ್ಮನೆ ಕೂಸು ಓಳ್ಳೆ ಕೆಲಸದಲ್ಲಿದ್ದಲ್ದಾ? ಮದುವೆ ಖರ್ಚಿಗೆ ಅಗೋ ಅಷ್ಟು ದುಡ್ಡು ಹೆಂಗೂ ಕೂಸಿನ ಹತ್ತಿರ ಇದ್ದು . ಅದು ಕೆಲಸಕ್ಕೆ ಸೇರಿಯೆ  ಐದು ವರ್ಷ ಆತು ...ಅವಳಲ್ಲೆ ಕೇಳಿದ್ರೆ ..." ಅಳುಕುತ್ತಲೇ ಹೇಳಿದ ಹೆಂಡತಿಯ ಮಾತನ್ನು ತುಂಡರಿಸುತ್ತಾ " ಛೆ ಅದು ಹ್ಯಾಗೆ ಅವಳ ಹತ್ರ ತಗಳದು ...ನೋಡನ ಸುಮ್ಮನಿರು ಹೇಗಾದ್ರೂ ಮಾಡ್ತಿ..  ಕೂಸಿನ್ನ ಮದುವೆಯಾಪಲೆ ರೆಡಿ ಇದ್ದ ಅದು ಅಂತ ಒಂದು ಮಾತು ಕೇಳಿ ಜಾತಕ ಹೊರಡಿಸಿದ್ರೆ ಆತು...." ಹೇಳುತ್ತಾ ಮತ್ತೆ ಕವಳ ಹಾಕಲು ಅಡಿಕೆ ಕತ್ತರಿಸ ತೊಡಗಿದ. ಅದು ಮಾತು ಮುಗಿಸಿದ ಲಕ್ಷಣವೇ ಎಂದು ಗೊತ್ತಿದ್ದ ಜಯಲಕ್ಷ್ಮಿ ಮಲಗಲೆಂದು ಎದ್ದಳು.
ಮೊದಲ ಸಂಬಳದಲ್ಲಿ ಅಪ್ಪ , ಅಮ್ಮ ಅಜ್ಜಿ ತಮ್ಮ ಎಲ್ಲರಿಗೂ ಉಡುಗೊರೆಗಳನ್ನು ತಂದ ಮಗಳು ....ಒಂದಿಷ್ಟು ಹಣವನ್ನು ಕೊಡಲು ಬಂದಾಗ ಗೋಪಾಲ ನಯವಾಗಿ ನಿರಾಕರಿಸಿದ್ದ. "ಅದು ನಿನ್ನ ದುಡ್ಡು ಪುಟ್ಟೀ.....ಅದು ನಿನ್ನ ಹತ್ತಿರವೇ ಇರಕ್ಕು.."
ತುಂಬ ಸ್ವಾಭಿಮಾನಿಯಾದ  ಅಪ್ಪನ  ಸ್ವಭಾವದ ಅರಿವಿದ್ದ ಅವಳು ಸುಮ್ಮನಾಗಿದ್ದಳು. ಈಗ ಏನು ಮಾಡುವುದೋ ಇಂತಹ ಒಳ್ಳೆಯ ಸಂಭಂದ...ತಮ್ಮ ಹಣದ ಅಡಚಣೇ ಎಂದಿಗೂ ಇದ್ದದ್ದೇ ..   ಮಲಗಿ ಯೋಚಿಸುತ್ತಿದ್ದ ಜಯಲಕ್ಷ್ಮಿಗೆ ಎಷ್ಟೋ ಹೊತ್ತಿನ ನಂತರ ನಿದ್ರೆ ಅವರಿಸಿತು.

ಶನಿವಾರದ ಬೆಳಗಿನ ಜಾವದ ಚುಮು ಚುಮು ಚಳಿಯಲ್ಲಿ ಅಂಗಳ ಸಾರಿಸಿ ರಂಗೋಲೆ ಇಡುತ್ತಿದ್ದಾಗ , ಉಣಗೋಲು ಸರಿಸಿ ಬೇಲಿಯೊಳಗೆ ದಾಟುತ್ತಿದ್ದ ಮಗಳು ರಮ್ಯಳನ್ನು ಕಂಡು ಜಯಲಕ್ಷ್ಮಿಯ ಮುಖ ಅರಳಿತು.
"ಅರೆ ! ಬಾ.. ಬಾ ಪುಟ್ಟಿ , ಇದೇನು ಬರೋ ಸುದ್ದೀನೆ ತಿಳಿಸಲ್ಲೆ ! ಹೇಳಿದ್ದರೆ ಅಪ್ಪ ಬಸ್‍ಸ್ಟ್ಯಾಂಡಿಗೆ ಬರ್ತಿದ್ದ ...ಒಬ್ಬಳೇ ಬಂದ್ಯಲೇ .." ಒಂದೇ ಉಸಿರಿನಲ್ಲಿ ಮಾತನಾಡಿದ ಅಮ್ಮನ ಭುಜ ಬಳಸಿ " ಹಾಂ....ಸಾವಕಾಶ ಮಾರಾಯ್ತಿ ...ಸರ‍್ಪ್ರೈಸ್ ಕೊಡನಾ  ಅಂತ ಹೇಳದೇ ಬಂದಿ. ನಿನ್ನ ಮಗಳೇನು ಸಣ್ಣ ಕೂಸಾ ಈಗ ....ದೇಶವಿದೇಶನೆಲ್ಲ ಒಬ್ಬಳೇ ಸುತ್ತೋ ನಂಗೆ ನಮ್ಮೂರಲ್ಲಿ ಹೆದರಿಕೆಯಾಗ್ತ ಅಮ್ಮ" ಎನ್ನುತ್ತಾ ಒಳ ಬಂದಳು ರಮ್ಯ.
"ಸರಿ ಬಿಡು ಒಳ್ಳೆದಾತು ಬಂದಿದ್ದು.... ಕೈಕಾಲು ತೊಳೆದು ಬಾ .. ಚಳೀ ಚಳೀ .. ಬಿಸಿ ಕಾಫಿ ಕೊಡ್ತಿ" ಎನ್ನುತ್ತ ಅಡುಗೆ ಕೋಣೆ ಸೇರಿದಳು ಜಯಲಕ್ಷ್ಮಿ.
ಬೆನ್ನಿಗಂಟಿದ ಬ್ಯಾಗ್ ಕೆಳಗಿಳಿಸಿ...ಬಚ್ಚಲುಮನೆಯಲ್ಲಿ ಹದವಾದ ಬಿಸಿ ನೀರಿನಲ್ಲಿ ಕೈಕಾಲು ತೊಳೆದ ರಮ್ಯ ಅಲ್ಲೇ ಬಚ್ಚಲೊಲೆಯ ಬಳಿ ಅಡಿಕೆಮಣೆಯನ್ನೆಳೆದುಕೊಂಡು ಕುಳಿತಳು.

"ಈ ಚಳಿಗಾಲದಲ್ಲಿ ಹೂವೂ ಸರಿಯಾಗಿ ಅರಳ್ತಲ್ಲೆ , ಮೊಗ್ಗನ್ನು ಕೊಯ್ದರೆ ಇವಳು ಬೇರೆ ಬಯ್ತ " ಎಂದು ಗೊಣಗುತ್ತಾ ಪೂಜೆಗೆ ಹೂವು ಕೊಯ್ದು ಮನೆ ಬಾಗಿಲಿಗೆ ಬಂದ ಗೋಪಾಲಕೃಷ್ಣನಿಗೆ ಮಗಳ ಚಪ್ಪಲಿ ಕಂಡು ಸಂತೋಷವಾಯ್ತು. " ಕೂಸೇ ಎಲ್ಲಿದ್ದೆ ...ಹೇಳದೇ ಬಂದೆಯಲ್ಲೆ " ಎನ್ನುತ್ತಲೇ ಒಳಬಂದವನ ಕೈಗೆ  ಕಾಫಿ ಲೋಟ ಕೊಡುತ್ತಾ "ಅಲ್ಲೆ ಒಲೆ ಹತ್ತಿರ ಇದ್ದ ನೋಡಿ "ಎಂದಳು ಜಯಲಕ್ಷ್ಮಿ.

ಸರ‍್ಪ್ರೈಸ್ ಅಪ್ಪ ..ಅದಕ್ಕೆ ಮೊದಲು ಹೇಳ್ಲೆ ...ಹೆಂಗಿದ್ದೆ ನೀನು ಅರಾಮಿದ್ಯ ....ಕೇಳಿದ ಮಗಳ ಕೈಗೆ ಕಾಫಿ ಲೋಟ ಕೊಟ್ಟು "ನಾನು ಅರಾಮಿದ್ದಿ ಕೂಸೆ ನೀನು ಹೇಂಗಿದ್ದೆ ? ಹೇಗೆ ನಡಿತಾ ಇದ್ದು ಕೆಲಸ ?" ಕೇಳಿದ ಮಗಳ ತಲೆ ನೇವರಿಸುತ್ತಾ.
"ಚೆನ್ನಾಗಿದ್ದಿ ಅಪ್ಪ... ಕಂಪನಿಯವರು ಮುಂದಿನ ತಿಂಗಳು ಅಮೆರಿಕಾಕ್ಕೆ ಕಳಿಸ್ತಾ ಇದ್ದ . ಈ ಬಾರಿ ವಾಪಾಸ್ ಬರೋದು ಆರು ತಿಂಗಳಾಗ್ತು. ಅದಕ್ಕೆ ಒಮ್ಮೆ ಎಲ್ಲರನ್ನೂ ನೋಡಿ ಹೋಪನಾ ಅಂತ ಬಂದಿ " ಮಗಳ ಮಾತು ಕೇಳಿದ ಗೋಪಾಲನ ಹಣೆಯ ಮೇಲೆ ಚಿಂತೆಯ ಗೆರೆಗಳು ಮೂಡಿದವು.
ಮೌನವಾದ  ಅಪ್ಪನನ್ನು ಮಾತಿಗೆಳೆಯುತ್ತ " ಅಪ್ಪ ಕೊನೆಕೊಯ್ಲು ಎಲ್ಲೀವರೆಗೆ ಬಂತು ? ಬೆಳೆ ಹ್ಯಾಂಗಿದ್ದು? " ಕೇಳಿದಳು.
" ಹೂಂ ಅಗ್ತಾ ಬಂತು.. ಬೆಳೆ ಹೇಳುವಷ್ಟಿಲ್ಲೆ , ಅಕಾಲದಲ್ಲಿ ಮಳೆ ಬಂದು ಸುಮಾರು ಅಡಕೆ ಉದುರಿಹೋಗಿತ್ತು ನೋಡೂ ,." ಅಷ್ಟರಲ್ಲಿ ದನ ಕರೆಯಲು ಎರಡು ತಂಬಿಗೆಯೊಂದಿಗೆ ಬಂದ ಜಯಲಕ್ಷ್ಮಿ ಒಂದನ್ನು ಗಂಡನಿಗೆ ಕೊಡುತ್ತಾ " ಪುಟ್ಟಿ ಅಮ್ಮಮ್ಮ ಕರೀತಾ ಇದ್ದ ನೋಡು... ಕೋಣೇಲಿದ್ದ. "ಎಂದಳು.

ದನ ಕರೆಯಲು ಕೊಟ್ಟಿಗೆಗೆ ಅಪ್ಪ ಅಮ್ಮ  ಇಬ್ಬರೂ ಹೋಗುವುದನ್ನು ನೋಡುತ್ತಾ , ಪ್ರತಿಯೊಂದು ಕೆಲಸವನ್ನೂ ಹಂಚಿಕೊಂಡು ಮಾಡುವ ತನ್ನ ಹೆತ್ತವರ ಸುಮಧುರ ದಾಂಪತ್ಯವನ್ನು ಎಂದಿನಂತೆ ಮೆಚ್ಚಿಕೊಂಡ ರಮ್ಯ ಅಜ್ಜಿಯ ಕೋಣೆಗೆ ಹೋರಟಳು.
"ಅಮ್ಮಮ್ಮಾ .. ಎಚ್ಚರಿದ್ದಾ ..ಲೈಟ್ ಹಾಕ್ತಿ ಇರು ...ಎಂದು ಸ್ವಿಚ್ ಒತ್ತಿದಳು. "ಬಾ ಕೂಸೆ ಕರೆಂಟ್ ಈಗ ಇರ್ತಲ್ಲೆ ಕಿಟಕಿ ಬಾಗಿಲು ತೆಗಿ " ಎನ್ನುತ್ತಾ ಅಜ್ಜಿ ಎದ್ದು ಕುಳಿತರು. " ಅಲ್ಲ ಅಮ್ಮಮ್ಮ ಇಲ್ಲೇ ನಮ್ಮೂರಿನಲ್ಲೆ ಹುಟ್ಟೋ ಕರೆಂಟು ನಮ್ಮೂರಿಗೇ ಇಲ್ಲೆ ನೋಡು ...ಅಲ್ಲಿ ಬೆಂಗಳೂರಲ್ಲಿ ಹಗಲು ರಾತ್ರಿ ಉರಿಯೋ ಬೇಡದ ದೀಪಾಲಂಕಾರ ನೋಡಿದಾಗಲೆಲ್ಲ ನಂಗೆ ಸಿಟ್ಟೇ ಬತ್ತು. " ಬಳಿ ಬಂದು ಕುಳಿತ ಮೊಮ್ಮಗಳ ಕೈಯನ್ನು ಆತ್ಮೀಯವಾಗಿ ಹಿಡಿದ ಅಜ್ಜಿಯ ಮುಖವೂ ಅವಳ ಅಮೇರಿಕಾ ಪ್ರವಾಸದ ಸುದ್ದಿ ಕೇಳಿ ಮಂಕಾಯಿತು.
ವಿದೇಶ ಪ್ರವಾಸ  ರಮ್ಯಳಿಗೆ ಹೊಸದೇನಾಗಿರಲಿಲ್ಲ. ಆದರೆ ಎಂದೂ ಇಲ್ಲದೆ ಈ ಬಾರಿ ಇವರೆಲ್ಲ ಚಿಂತಿತರಾಗುವುದನ್ನು ಕಂಡು ರಮ್ಯಳಿಗೆ ಕುತೂಹಲವಾಯಿತು. "ಏಕೆ ಅಮ್ಮಮ್ಮ ಏಲ್ಲರೂ ಏನೋ ಚಿಂತೆ ಮಾಡ್ತಾ ಇರೋ ಹಂಗಿದ್ದು ಏನು ಸಮಾಚಾರ "ಕೇಳಿದಳು.
ಈಗಷ್ಟೇ ಬೈಂದೆ ಕೂಸೆ .. ಸ್ವಲ್ಪ ಸುಧಾರಿಸ್ಕ ಆಮೇಲೆ ಮಾತಾಡನ "  ಹೇಳಿದ ಅಜ್ಜಿಯ ಮಾತು ಕೇಳಿ ರಮ್ಯಳಿಗೆ ಇದು ತನ್ನ ಮದುವೆ ವಿಚಾರವೇ ಇರಬೇಕೆಂಬ ಅನುಮಾನವಾಯ್ತು.
ಬೆಳಗಿನ ಒಂದು  ಹಂತದ ಕೆಲಸಗಳನ್ನು ಮುಗಿಸಿದ ಮೇಲೆ ಜಯಲಕ್ಷ್ಮಿ   ಮಹಡಿಯ ಮೇಲೆ  ಮಲಗಿದ್ದ ಮಗಳ ಬಳಿ ಬಂದಳು. "ನಿದ್ದೆ ಮಾಡ್ತಿದ್ಯ ಪುಟ್ಟಿ" ಕೇಳಿದ ಅಮ್ಮನನ್ನು ಎಳೆದು ಕೂರಿಸಿಕೊಂಡು ತೊಡೆಯ ಮೇಲೆ ತಲೆಯಿಟ್ಟು ಮಲಗಿದಳು ಮಗಳು.
" ಕೂಸೆ  ಇನ್ನು ನೀನು ಮದುವೆಗೆ ಮಾಡಿಕೊಳ್ಳಲೆ ಮನಸ್ಸು ಮಾಡಕ್ಕು ...ಯಾವ ವಯಸ್ಸಿಗೆ ಏನಾಗಕ್ಕೋ ಆದ್ರೆ ಚೆಂದ. ಹೋದ ವರ್ಷ ಈಗ ಬೇಡವೇ ಬೇಡ ಅಂದು ಬಿಟ್ಟೆ ನೀನು. ನಾನೂ ಸುಮ್ಮನಾದಿ. ಆದರೆ ಈ ವರ್ಷ ಸುಮ್ಮನಿರಕ್ಕಾಗ್ತಲ್ಲೆ . ಹೇಳು ಜಾತಕ ಹೊರಡಿಸೋದ ಹೆಂಗೆ?"  ಮಗಳ ತಲೆಗೂದಲಲ್ಲಿ ಬೆರಳಾಡಿಸುತ್ತ ಕೇಳಿದಳು ಜಯಲಕ್ಷ್ಮಿ.

"ಹೂಂ...ಅಡ್ಡಿಲ್ಲೆ ಅಮ್ಮ ಇದೊಂದು ಅಮೆರಿಕಾ ಪ್ರಾಜೆಕ್ಟ್ ಮುಗಿದ ಮೇಲೆ ಮದುವೆಯಾಗಕ್ಕೆ ನಾನು ರೆಡಿ " ಅಮ್ಮನ ಮಡಿಲಿನ ಸುಖದಲ್ಲಿ ಕಣ್ಣುಮುಚ್ಚಿ ಉತ್ತರಿಸಿದಳು ರಮ್ಯ.
"ಹೌದನೆ ಕೂಸೆ ...ಒಳ್ಳೆದಾತು...ನೀನು ಪಕ್ಕದಮನೆ ಸುನಂದಕ್ಕನ ತಂಗಿ ಮಗನನ್ನ ನೋಡಿದ್ಯ ..ಅವನೂ ಬೆಂಗಳೂರಲ್ಲಿ ದೊಡ್ಡ ಕಂಪನಿಯಲ್ಲೆ ಇದ್ದ . ಸುನಂದಕ್ಕ ಮೊನ್ನೆ ಅವನಿಗೆ ನಿನ್ನ ಜಾತಕ ಕೇಳಿದ್ದ . ನಿನ್ನನ್ನು ಒಂದು ಮಾತು ಕೇಳಿ ಕೊಡನ ಅಂತ ಯೋಚನೆ ...ಹೇಗೆ ಅಡ್ದಿಲ್ಯ?"
ನಗುಮೊಗದ, ಸುಂದರ ಯುವಕನ ಮುಖ ರಮ್ಯಳ ಕಣ್ಮುಂದೆ ಬಂತು." ನಿಮಗೆಲ್ಲ ಸರಿ ಅನ್ನಿಸಿದ್ರೆ ಕೊಡಿ ಅಮ್ಮ. ಅಪ್ಪ ಏನು ಹೇಳ್ತ?" ಮಗಳು ಕೇಳುತ್ತಿದ್ದಂತೆ ಜಯಲಕ್ಷ್ಮಿಗೆ ಗಂಡನ ಅಸಹಾಯಕತೆಯ ಮಾತುಗಳು ನೆನಪಿಗೆ ಬಂದಿತು.ಮಗಳ ಬಳಿ ಹೇಳದಿರಲಾಗಲಿಲ್ಲ ಅವಳಿಗೆ. " ಅಪ್ಪನಿಗೂ ಈ ಸಂಭಂಧವೆನೋ ಇಷ್ಟ ಇದ್ದು. ಆದರೆ ಮದುವೆಯ ಖರ್ಚು ವೆಚ್ಚಕ್ಕೆ ಹಣ ಹೇಗೆ ಒದಗಿಸೋದೆಂಬ ಚಿಂತೆಯೂ ಜೊತೆಗಿದ್ದು ಪುಟ್ಟ. ಇದನ್ನು ನಿನ್ನ ಹತ್ತಿರ ಹೇಳೋದು ಬೇಡ , ತಾನು ಹೇಗಾದ್ರೂ ವ್ಯವಸ್ಥೆ ಮಾಡ್ತಿ ಅಂತ ನನಗೆ ಹೇಳಿದ್ದ. ಆದರೆ ನಂಗೆ ತಡೆದುಕೊಳ್ಳಲಾಗಲ್ಲೆ ನೋಡು.ಹೇಳಿಬಿಟ್ಟಿ "
ಎದ್ದು ಕುಳಿತು ಅಮ್ಮನ ಮುಖ ದಿಟ್ಟಿಸಿದ ಮಗಳು "ಅಮ್ಮ ನೀನೂ ಹೀಗ್ಯಾಕೆ ಯೋಚನೆ ಮಾಡ್ತೆ? ನನ್ನ ಹತ್ತಿರ ಇದನ್ನು ಹೇಳದೆ ಮುಚ್ಚಿಟ್ಟಿದ್ದು ಯಾಕೆ? ನನ್ನದೆಲ್ಲ ನಿಮ್ಮದೂ ಅಲ್ದಾ ಅಮ್ಮ?ನಿಮ್ಮ ಕಷ್ಟಸುಖದಲ್ಲಿ ನಂಗೆ ಪಾಲು ಇಲ್ಯನಾನು ಅಪ್ಪನ ಹತ್ತಿರ ಮಾತನಾಡ್ತಿ" 

ಹಗಲಿಡೀ ಗೋಪಾಲಕೃಷ್ಣನಿಗೆ ಪುರುಸೊತ್ತಿರಲಿಲ್ಲ. ತೋಟದಲ್ಲಿ ಕೊನೆ ಕೊಯ್ಯಿಸುವುದು, ಅದನ್ನು ಹೊರಿಸಿಕೊಂಡು ಬಂದುಮನೆಗೆ ಹಾಕುವುದು... ಸುಲಿಯಲು ಬರುವ ಆಳುಗಳಿಗೆ ವ್ಯವಸ್ತೆ ಮಾಡಿಕೊಡುವುದರಲ್ಲಿ ಮುಳುಗಿಹೋಗಿದ್ದ. ರಾತ್ರಿ ಅಡಿಕೆ ಸುಲಿಯುವವರೆಲ್ಲ  ಮನೆಗೆ ಹೋದ ನಂತರ ಅಡಿಕೆ ಬೇಯಿಸುತ್ತಿದ್ದ ಅಪ್ಪನ ಬಳಿ ಬಂದ ರಮ್ಯ ಅಲ್ಲೆ ಒಲೆಯ ಮುಂದೆ ಕುಳಿತಳು .  ಚಿಕ್ಕವಳಿದ್ದಾಗ ಇಂತದೇ ಚಳಿಗಾಲದಲ್ಲಿ ಅಪ್ಪ ತನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ಬೆಂಕಿ ಕಾಯಿಸುತ್ತಾ ಕಥೆ ಹೇಳುತ್ತಿದ್ದ ದೃಶ್ಯ ಅವಳ ಕಣ್ಮುಂದೆ ಬಂತು  . ತನ್ನ ಓದಬೇಕೆಂಬ ಆಸೆಯನ್ನು ನೆರೆವೇರಿಸಲು ಆತ ಪಟ್ಟ ಕಷ್ಟಗಳ ನೆನಪಾಯ್ತು .  

"ಅಪ್ಪ ...ನನ್ನದೊಂದು ಪ್ರಶ್ನೆ....ನನ್ನನ್ನು ಇಂಜಿನಿಯರಿಂಗ್ ಸೇರಿಸೋ ಹೊತ್ತಿಗೆ ಇವಳು ಹೆಣ್ಣುಮಗಳು ಇವಳನ್ನು ಯಾಕೆ ಸಾಲ ಮಾಡಿ ಕಷ್ಟಪಟ್ಟು ಇಷ್ಟೆಲ್ಲ ಓದಿಸಬೆಕು ಅಂತ ನೀನೇನಾದ್ರೂ ಯೋಚನೆ ಮಾಡಿದ್ಯಾ ? ತಟ್ಟನೆ ಕೇಳಿದ ಮಗಳ ಪ್ರಶ್ನೆಯ ತಲೆ ಬುಡ ಅರ್ಥವಾಗಲಿಲ್ಲ ಗೋಪಾಲನಿಗೆ.
"ಛೆ! ಹಂಗೆಂತಕ್ಕೆ ನಾನು ಯೋಚನೆ ಮಾಡ್ಲಿ ? ನಂಗೆ , ನಿನ್ನ ಅಮ್ಮನಿಗೆ ನೀನು ಮತ್ತು ನಿಖಿಲ ಇಬ್ಬರೂ ಒಂದೇ... ನಾವು ಯಾವತ್ತಾದ್ರೂ ಹೆಣ್ಣು ಗಂಡು ಅನ್ನೋ ಭೇದ  ಮಾಡಿದ್ದು ನೀನು ಕಂಡಿದ್ಯ? ಅದೇನು ಹಾಗೆ ಕೇಳ್ತಾ ಇದ್ದೆ? "
" ಇಲ್ಲೆ ಅಪ್ಪ ನನ್ನ ಬೆಳೆಸುವಾಗಾಗಲೀ, ಓದಿಸುವಾಗಾಗಲೀ ನೀನು ಆ ಥರ ಯೋಚನೆ ಮಾಡಲ್ಲೆ ನಂಗೆ ಗೊತ್ತು. ಆದರೆ ಈಗ ಹಾಗೆ ಯೋಚಿಸ್ತಾ ಇದ್ದೆಯಲ್ಲ? ಯಾಕೆ "
"ಎಂತದೇ ಪುಟ್ಟಿ ಅದು!! ನಾನೇನು ಮಾಡಿದಿ ಈಗ ?" ಕೇಳಿದ ಗೋಪಾಲ ಆಶ್ಚರ್ಯದಿಂದ.
"ಮತ್ತಿನ್ನೇನಪ್ಪ ! ಈಗ ನಿಂಗೆ ದುಡ್ಡಿನ ಅಡಚಣೆ ಇದ್ದರೂ ನನ್ನ ಹತ್ತಿರ ಹೇಳದೇ ಇದ್ದಿದಕ್ಕೆ ಇನ್ನೇನು ಅರ್ಥ? ಮೊದಲು ನನ್ನ ಓದಿಗೇಂತ  ಸಾಲ, ನಂತರ ನಿಖಿಲನಿಗೆ.....ಇದೆಲ್ಲ ಮುಗೀತು ಅಂದ್ರೆ ಈಗ ನನ್ನ ಮದುವೆಗೆ ಮತ್ತೆ ನೀನು ಸಾಲ ಮಾಡಕ್ಕ ಅಪ್ಪ? ....ಮತ್ತೆ ಅದನ್ನು ತೀರಿಸಕ್ಕೆ ನೀವಿಬ್ಬರು ಕಷ್ಟಪಡೋದನ್ನ ನೋಡಕ್ಕೆ ನಂಗೆ ಆಗ್ತಲ್ಲೆ ಅಪ್ಪ ....ನನ್ನನ್ನ ಓದಿಸಿ , ನನ್ನ ಕಾಲ ಮೇಲೆ ನಿಲ್ಲೋ ಹಾಗೆ ಮಾಡಿದ್ದಿ ... ಈಗ ನನ್ನ ಮದುವೆ ಖರ್ಚು ನಾನು ನೋಡಿಕೊಂಡರೆ ಅದು ನಿಂಗೆ ಅಪಮಾನ ಮಾಡಿದ ಹಾಗಾಗ್ತ? ಅಪ್ಪ ನಾನು ಗಂಡಾಗಿದ್ದಿದ್ದರೆ ನನ್ನ ದುಡ್ಡು ತಗೋತಿದ್ದೆ ಅಲ್ದಾ? " ಕಣ್ಣಂಚಲ್ಲಿ ನೀರು ತುಂಬಿ ಹೇಳುತ್ತಿದ್ದ ತನ್ನ ಪುಟ್ಟ ಮಗಳು ಈಗ ತುಂಬ ದೊಡ್ಡದಾಗಿ ಬೆಳೆದಂತೆನ್ನಿಸಿತು ಗೋಪಾಲನಿಗೆ.

ಸುಮ್ಮನೇ ಕುಳಿತು ಯೋಚನೆಗೆ ಬಿದ್ದ ಗೋಪಾಲ ತನ್ನ ಒಳಗನ್ನು ಕೆದಕಿ ನೋಡಲಾರಂಭಿಸಿದ. ಹೌದು ಮಗಳೆಂದಂತೆ ಮನದ ಮೂಲೆಯಲ್ಲೆಲ್ಲೋ ಮಗಳ ದುಡ್ಡು ಮುಟ್ಟಬಾರದೆಂಬ ಹಟ ತನ್ನಲ್ಲಿದ್ದುದು ನಿಜ ಎಂದು ಮನಸ್ಸು ಒಪ್ಪಿಕೊಂಡಿತು. ಅದು ಮಗಳ ದುಡಿಮೆಯನ್ನು ಅವಲಂಬಿಸಿದ್ದಾನೆಂದು ಆಡಿಕೊಳ್ಳುವ ಸಮಾಜದ ಅಂಜಿಕೆಯೋ , ಹೆಣ್ಣುಮಗಳ ಬಳಿ ದುಡ್ಡು ತೆಗೆದುಕೊಳ್ಳುವುದೇ   ಎಂಬ ತನ್ನದೇ ಅಹಂಕಾರವೋ  ಅವಳ ದುಡ್ಡು ಅವಳದಾಗಿರಲಿ ಅವಳ ಕಷ್ಟಸುಖಕ್ಕೆ ಬೇಕಾಗಬಹುದು ಎಂಬ ಕಾಳಜಿಯೋ  ಏನು ತನ್ನ ಮನದಲ್ಲಿದ್ದುದು ?   ಬಹುಶಃ ಈ ಎಲ್ಲ ಭಾವಗಳೂ ತನ್ನ ಮನಸಲ್ಲಿದ್ದುದು ನಿಜ ಎನ್ನಿಸಿತು ಆತನಿಗೆ......ಮಗಳ ಮಾತುಗಳು ಅವನೊಳಗನ್ನು ತಟ್ಟಿತು . ಮುಖದಲ್ಲಿ ಮಂದಹಾಸವರಳಿತು. ಮಗಳ ಕೈಯನ್ನು ಹಿಡಿದು " ನೀನು ಹೇಳೋದು ಸರಿಯಾಗೇ ಇದ್ದು ಪುಟ್ಟಿ....ಆಗಲಿ ಇನ್ನು ನಾನು ಯೋಚಿಸೋದಿಲ್ಲೆ. ನಿನ್ನ ಮದುವೆಗೆಂದು ಕಡಿಮೆ ಬೀಳುವ ಹಣ ನಿನ್ನಿಂದಲೇ ವಸೂಲ್ ಮಾಡ್ತಿ ಅಡ್ಡಿಲ್ಯ? "ಹೇಳುತ್ತ ಮಗಳ ಕಣ್ಣೀರನ್ನು ಒರೆಸಿದ.

ಅಪ್ಪ ಮಗಳ ಈ ಬಾಂಧವ್ಯವನ್ನು ಕಂಡ ಒಲೆಯ ಬೆಂಕಿ  ಕುಣಿಕುಣಿದು ತನ್ನ ಸಂತೋಷವನ್ನು ವ್ಯಕ್ತಪಡಿಸಿತು.

ಹವ್ಯಕ ಮಹಾಸಭಾದವರು ಮಹಿಳಾ ದಿನಾಚರಣೆಯ ಪ್ರಯುಕ್ತ  ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

1 comment:

  1. ಮನಸ್ಸನ್ನು ಅರಳಿಸುವ ಕಥೆ.

    ReplyDelete