18 Dec 2017

“ಹಸಿರು ಬುಳ್ಳ”


"ಹೊರಗಡೆ ಕಟ್ಟೆ ಮೇಲೆ ಒಂದು ಜಾತಿಯ ಹುಳ ಇಟ್ಟಿದೀನಿ ನೋಡು, ಡುಮ್ಮಣ್ಣ ಹುಳ... ಪೂಜೆಗೆ ಅಂತ ಹೂವು ಕೊಯ್ತಿರೋವಾಗ ನಂದಿಬಟ್ಟಲು ಗಿಡದಲ್ಲಿ ಇತ್ತು"  ಕಾಫಿ ಕೊಡುತ್ತಾ ಅಮ್ಮ ಹೇಳಿದರು. ಬೆಳಗಿನ ಜಾವ(!) ಎಂಟಕ್ಕೆ ಅಂತೂ ಎದ್ದು ಆಕಳಿಸುತ್ತಾ ಕುಳಿತಿದ್ದವಳಿಗೆ ನಿದ್ದೆ ಹರಿಯಿತು. ಕಾಫಿ ಕುಡಿದು ಹೋಗೇ ಎನ್ನುತ್ತಿದ್ದ ಅಮ್ಮನ ಮಾತು ಕಿವಿಯ ಮೇಲೆ ಬಿದ್ದರೂ ತಲೆಯೊಳಗಿಳಿಯದೆ ಹೊರಗೆ ಧಾವಿಸಿದೆ. ಅಲ್ಲಿ ಆ ಡುಮ್ಮಣ್ಣ ಹುಳ ತನಗೊದಗಬಹುದಾದ ಅಪಾಯದ ಅರಿವೂ ಇಲ್ಲದೆ ನಂದಿಬಟ್ಟಲ ಎಲೆಯನ್ನು ತಿನ್ನುತ್ತಿತ್ತು.   ಅದಕ್ಕೆ ಸ್ವಲ್ಪವೂ ನೋವಾಗದಂತೆ ಅದು ತಿನ್ನುತ್ತಿದ್ದ ಎಲೆಯಿರುವ ಚಿಕ್ಕ ರೆಂಬೆಯನ್ನೇ ತುಂಡು ಮಾಡಿ ತಂದಿಟ್ಟಿದ್ದರಿಂದ ಅದು ತನ್ನ ಏಕೈಕ ಕೆಲಸವಾದ ತಿನ್ನುವುದರಲ್ಲೇ ಮಗ್ನವಾಗಿತ್ತು.
 "oleander hawk-moth caterpillar" ಎಂಬ ಇಷ್ಟುದ್ದದ ಹೆಸರಿರುವ ಈ ಹುಳ ಸಿಂಪಲ್ಲಾಗಿ ಹೇಳಬೇಕೆಂದರೆ ಒಂದು ಜಾತಿಯ ಕಂಬಳಿಹುಳ. ಅಂದರೆ “oleander hawk-moth(“Daphnis nerii”)ಪತಂಗದ ಬಾಲ್ಯಾವಸ್ಥೆ. ಸಮಾನ್ಯವಾಗಿ ಕಂಡುಬರುವ ಕಂಬಳಿಹುಳುಗಳಿಗಿಂತ ತೀರಾ ದೊಡ್ಡ ಗಾತ್ರದ ಇದಕ್ಕೆ ಹಸಿರು ಮೈಬಣ್ಣ, ಎರಡೂ ಬದಿಗಳಲ್ಲಿ ಬಿಳಿ, ನೀಲಿ ಚುಕ್ಕೆಗಳು, ತಲೆಯ ಭಾಗದಲ್ಲಿ ಬಿಳಿ,ನೀಲಿ, ಕಪ್ಪು ಬಣ್ಣದ ದೊಡ್ಡದಾದ ಎರಡು ಕಣ್ಣುಗಳೇನೋ ಎಂಬ ಭ್ರಮೆ ಹುಟ್ಟಿಸುವ ಸ್ಥಳ, ಹಿಂಭಾಗದಲ್ಲಿ ಹಳದಿ ಬಣ್ಣದ ಚಿಕ್ಕ ಕೊಂಬು ಇವೆ. Tabernaemontana divaricate (ನಂದಿಬಟ್ಟಲು, ದೇವಕಣಗಿಲೆ)  ಜಾತಿಯ ಸಸ್ಯಗಳ ಎಲೆಗಳು ಈ ಲಾರ್ವಾದ ಆಹಾರ. ನಂದಿಬಟ್ಟಲ ಗಿಡದ ಎಲೆಗಳು ಬೇರೆಲ್ಲ ಜೀವಿಗಳಿಗೆ ವಿಷ. ಆದರೆ ಈ ಲಾರ್ವಾದ ಮೇಲೆ ಆ ವಿಷ ಪರಿಣಾಮ ಬೀರುವುದಿಲ್ಲ.

ಅಷ್ಟರಲ್ಲಿ ಎದ್ದು ಬಂದ ಮಗಳೂ, ನಾನೂ ಸೇರಿ ಒಂದಿಷ್ಟು ಫೋಟೋ ಸೆಷನ್ ಮುಗಿಸಿ ಅದನ್ನು ಅಂಗಳದ ತುದಿಯಲ್ಲಿದ್ದ ನಂದಿಬಟ್ಟಲ ಗಿಡದ ರೆಂಬೆಗೆ ವರ್ಗಾಯಿಸಿದ್ದಾಯ್ತು. 
ಈ ಡುಮ್ಮಣ್ಣ ಒಂದು ಜಾತಿಯ ಕಂಬಳಿಹುಳವೆಂದರೆ ಅಮ್ಮ, “ಛೆ ಸುಮ್ನಿರು ಸಾಕು, ಆ ಕಪ್ಪನೆಯ ಕಂಬಳಿಹುಳಕ್ಕೂ ಮುದ್ಮುದ್ದಾಗಿರೋ ಇದಕ್ಕೂ ಎಲ್ಲಿಯ ಹೋಲಿಕೆ” ಎಂದುಬಿಡೋದೆ?  ಹಾಗಾಗಿ ಅದಕ್ಕೆ “ಹಸಿರು ಬುಳ್ಳ” ಎಂಬ ನಾಮಕರಣ ಶಾಸ್ತ್ರವನ್ನೂ ಮಾಡಿದ್ದಾಯ್ತು. ಈ ಹಸಿರು ಬುಳ್ಳ  ಇನ್ನೊಂದೆರಡು ದಿನಗಳಲ್ಲಿ ಕಪ್ಪಗೆ ರಬ್ಬರ್ ನಂತಾಗಲಿದೆಯೆಂದೂ ನಂತರ ಕೋಶಾವಸ್ಥೆಗೆ ಹೋಗುತ್ತದೆಂದೂ, ಆಮೇಲೆ ಸುಂದರವಾದ ಪತಂಗವಾಗಿ ಹೊರಬರುತ್ತದೆಂದೂ ಅದರ ಪ್ರವರವನ್ನು ನೆರೆದ ಪ್ರೇಕ್ಷಕವರ್ಗಕ್ಕೆ ತಿಳಿಸಿದ್ದಾಯ್ತು. ಅದರ ಈ ಜೀವನಚಕ್ರವನ್ನು ನಾವು ಕಣ್ಣಾರೆ ಕಾಣುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯ್ತು. 
ರೆಂಬೆಗೆ ಬಿಟ್ಟೊಡನೆಯೆ ಮತ್ತೆ ಎಲೆಯೊಂದನ್ನು ಹತ್ತಿ ತಿನ್ನಲು ಪ್ರಾರಂಭಿಸಿದ “ಹಸಿರು ಬುಳ್ಳ”  ಮಾರನೆಯ ದಿನ ಬೆಳಗಿನ ವೇಳೆಗೆ ಆ ರೆಂಬೆಯಲ್ಲಿದ್ದ ಏಳೆಂಟು ಎಲೆಗಳನ್ನು ತಿಂದು ಮುಗಿಸಿತ್ತು. ಮುಂದಿನ ಎರಡು ದಿನಗಳಲ್ಲಿ ನಮಗೆ ಆಗಾಗ ಹೋಗಿ ಅದನ್ನ ನೋಡುವುದೇ ಕೆಲಸವಾಗಿತ್ತು.
ಮೊದಮೊದಲು ಖುಷಿಯಿಂದ ಈ ಬಕಾಸುರನನ್ನ ಗಮನಿಸಿದ ಅಮ್ಮ , ಹೊಟ್ಟೆಬಾಕನಾದ ಅದು ತನ್ನ ಗಿಡದ, ಐದಾರು ರೆಂಬೆಗಳಲ್ಲಿದ್ದ  ಎಲೆಗಳನ್ನೆಲ್ಲ  ಗುಳುಂ ಮಾಡಿದ್ದನ್ನು ಕಂಡು “ಅದೆಷ್ಟು ತಿಂತೀಯೋ, ನನ್ನ ಗಿಡವನ್ನ ಬೋಳಿಸಿಬಿಡುತ್ತೀಯೇನೋ” ಅಂತ ಪ್ರೀತಿಯಿಂದ ಗದರಿಕೊಂಡಳು.  ದನ, ನಾಯಿ, ಬೆಕ್ಕು, ಅಳಿಲು, ಗುಬ್ಬಿಗಳ ಸ್ನೇಹ ಸಂಪಾದಿಸಿರುವ ಅಮ್ಮ ಅವುಗಳಿಗೆ ಮಾಡಿದ್ದನ್ನೆಲ್ಲ ತಿನ್ನಿಸುವುದು, ಅವುಗಳ ಜೊತೆ ಮನುಷ್ಯರಂತೆಯೇ ಮಾತನಾಡುವುದು ಹೊಸದಲ್ಲ. “ಊಟ ಮಾಡು ಬಾರೋ” ಎಂದು ಅವರು ನಾಯಿ ಬೆಕ್ಕುಗಳನ್ನುಪ್ರೀತಿಯಿಂದ ಕರೆಯುವುದನ್ನ ಕೇಳಿ ನಮ್ಮೆಜಮಾನ್ರು, “ನಿನ್ನ ಅಮ್ಮ ನನ್ನನ್ನ ಕರೀತಿದ್ದಾರೋ, ನಾಯಿಯನ್ನ ಕರೀತಿದ್ದಾರೋ ಗೊತ್ತಾಗೊಲ್ವಲ್ಲೆ!” ಅಂತ ಬೇಜಾರು ಮಾಡಿಕೊಂಡದ್ದಿದೆ. ಹೀಗಾಗಿ ಅಮ್ಮನ ಸ್ನೇಹವಲಯದಲ್ಲಿ ಈ ಡುಮ್ಮಣ್ಣನೂ ಸೇರಿಕೊಂಡ ಬಗ್ಗೆ ನಮಗೆ ಆಶ್ಚರ್ಯವೇನೂ ಆಗಲಿಲ್ಲ.
ಸದಾ ಕಾಲ ತಿನ್ನುವುದು ಮತ್ತು ವಿಸರ್ಜಿಸುವುದು ಎರಡೇ ಇದರ ಕೆಲಸ. ನಂದಿಬಟ್ಟಲ ಗಿಡದ ಕೆಳಗೆಲ್ಲ ಹಸಿರು ಬಣ್ಣದ ಸುಂದರವಾದ ಮಣಿಯಂತಿರುವ ಇದರ ವಿಸರ್ಜನೆ ತುಂಬಿಹೋಗಿತ್ತು.

ಮೂರು ದಿನ ಕಳೆದಿತ್ತು ಮೂರನೆಯ ದಿನ ಸಾಯಂಕಾಲದ ವೇಳೆಗೆ ಅದರ ಬಣ್ಣ ತಸು ಬದಲಾಯಿಸಿತ್ತು, ಗಾತ್ರದಲ್ಲೂ ಸಹ ಸ್ವಲ್ಪ ದೊಡ್ಡದಾಗಿತ್ತು. ಮಾರನೆಯ ದಿನ ಬೆಳಗ್ಗೆಯ ವೇಳೆಗೆ ಇದು ಖಂಡಿತಾ ದಟ್ಟ ಕಂದುಗಪ್ಪು ಬಣ್ಣಕ್ಕೆ ತಿರುಗಿ ರಬ್ಬರಿನ ಹುಳದಂತೆ ಕಾಣುತ್ತದೆಂದು ನಿರೀಕ್ಷಿಸಿದ್ದೆ. ನಾಲ್ಕನೆಯ ದಿನ ಬೆಳಗ್ಗೆ ಎದ್ದವಳೇ ಗಿಡದ ಬಳಿ ಬಂದು ನೋಡಿದರೆ ಡುಮ್ಮಣ್ಣ ಎಲ್ಲೂ ಕಾಣಲೇ ಇಲ್ಲ. ಇವು ಕೋಶಾವಸ್ಥೆಯನ್ನು ನೆಲದ ಮೇಲೆ ಕಳೆಯುತ್ತವೆ. ದಟ್ಟ ಕಂದುಗಪ್ಪು ಬಣ್ಣ ಇರುವುದರಿಂದ ತರಗಲೆಗಳ ನಡುವೆ ಮಿಳಿತಗೊಂಡು ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಆದ್ದರಿಂದಲೇ ಅಲ್ಲೇ ನೆಲದ ಮೇಲೇನಾದರೂ ಬಿದ್ದಿರಬಹುದೆಂದು ಹುಡುಕಿದರೂ ಸಿಗಲಿಲ್ಲ.   ಅಲ್ಲಿಂದ ಬೇರೆಲ್ಲಿಯಾದರೂ ಚಲಿಸಿರಬಹುದು ಅಥವಾ ಯಾವುದೋ ಭಕ್ಷಕಗಳ ಪಾಲಾಗಿರಬಹುದೆಂದುಕೊಂಡು ವಾಪಾಸಾದೆ. ಆದರೆ ಇದನ್ನು ತಿನ್ನುವ ಭಕ್ಷಕಪ್ರಾಣಿ ಯಾವುದಿರಬಹುದೆಂದು ಹೊಳೆಯಲಿಲ್ಲ.  ಒಟ್ಟಿನಲ್ಲಿ ಆ ಪತಂಗದ ಜೀವನಚಕ್ರ ಗಮನಿಸುವ ಒಳ್ಳೆಯ ಅವಕಾಶವೊಂದು ತಪ್ಪಿಹೋಯಿತು. 

2 comments:

  1. ನಿಮ್ಮ ಲೇಖನಗಳನ್ನು ಓದಿದಾಗಲೆಲ್ಲ, ಜೀವಚಕ್ರ ಎಷ್ಟು ವಿಚಿತ್ರವಾಗಿದೆಯಲ್ಲ (-ಅಂದರೆ ಮಾನವರಿಗೆ--) ಎಂದು ಅಚ್ಚರಿಪಡುತ್ತೇನೆ. ನಮ್ಮ ಮನೆಯ ಹಿತ್ತಲಲ್ಲಿರುವ ಕೆಲವು ಸಸ್ಯಗಳ ಹಾಗು ಮರಗಳ ಎಲೆಗಳೂ ಸಹ ಕತ್ತರಿಗೊಳಗಾಗಿವೆ. ಈ ಕೆಲಸವನ್ನು ಇಂತಹ ಕೀಟಗಳು ಮಾಡಿವೆ ಎಂದು ಇದೀಗ ಅರಿವಾಯಿತು. ಆದರೆ ನಾನು ಈ ಕೀಟಗಳನ್ನಾಗಲಿ, ನಂತರದ ಪತಂಗಗಳನ್ನಾಗಲಿ ಗಮನಿಸಿಲ್ಲ. ಅಂದ ಹಾಗೆ, ಪತಂಗಗಳಾದ ಬಳಿಕ ಇವು ಏನು ಆಹಾರವನ್ನು ಭಕ್ಷಿಸುತ್ತವೆ?

    ReplyDelete
    Replies
    1. ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಕಾಕ, ಇವು ಪತಂಗಗಳಾದ ಬಳಿಕೆ ಕೆಲವು ಹೂವುಗಳ ಮಕರಂದವನ್ನು ಹೀರುತ್ತವೆ. ಪತಂಗಗಳಾದ್ದರಿಂದ ಸಾಯಂಕಾಲದ ವೇಳೆಯಲ್ಲಿ ಚಟುವಟಿಕೆಯಿಂದಿರುತ್ತವೆ.

      Delete