10 Apr 2018

ಮಳೆಮರ (rain tree)


ನಮ್ಮ ಬೆಂಗಳೂರು ಈಗೀಗ ಕಾಂಕ್ರೀಟ್ ಕಾಡು ಎಂದು ಹೆಸರುಪಡೆದುಕೊಂಡಿದ್ದರೂ, ಒಂದಾನೊಂದು ಕಾಲದಲ್ಲಿ ಗಾರ್ಡನ್ ಸಿಟಿ ಆಗಿತ್ತಲ್ಲವೇ.. ಹಾಗಾಗಿಯೇ ಕೆಲವು ಹಳೆಯ ಏರಿಯಾಗಳಲ್ಲಿ  ಇನ್ನೂ ಒಂದಿಷ್ಟು ಮರಗಳು ಉಳಿದುಕೊಂಡಿವೆ. ಕೆಲವು ರಸ್ತೆಯ ಇಕ್ಕೆಲಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಮರಗಳು ಆಗಿನ ಕಾಲದ ವೈಭವದ ಪಳೆಯುಳಿಕೆಗಳಂತೆ ತೋರುತ್ತವೆ.




ಮಳೆಮರವೆಂಬ (Samanea saman) ಹೆಸರಿನ ದೈತ್ಯಾಕಾರದ ಈ ಮರವೂ ಬೆಂಗಳೂರಿನ ಅನೇಕ  ರಸ್ತೆಯ ಬದಿಗಳಲ್ಲಿ, ಪಾರ್ಕ್ ಗಳಲ್ಲಿ ಕಂಡುಬರುತ್ತದೆ. ೧೫-೨೦ ಅಡಿ ಎತ್ತರಕ್ಕೆ ಬೆಳೆವ ಮರದಲ್ಲಿ ಅಗಲವಾಗಿ ಕೊಡೆಯಾಕಾರದಲ್ಲಿ ಚಾಚಿಕೊಂಡಿರುವ ರೆಂಬೆಕೊಂಬೆಗಳು, ಪ್ರೇಮಿಗಳ ಕಣ್ಣಾಮುಚ್ಚಾಲೆಗೆ ಹೇಳಿಮಾಡಿಸಿದಷ್ಟು ದಪ್ಪನಾದ ಮರದ ಕಾಂಡ!!, ಗುಲಾಬಿ ಬಣ್ಣದ ಸುಂದರ ಹೂವುಗಳು, ಹುಣಸೆ ಕಾಯಿಗಳಂತೆಯೆ ಕಾಣಿಸುವ ಕಾಯಿಗಳು ಇವೆ. 
ಮೂಲತಃ  ಮಧ್ಯ ಅಮೇರಿಕಾದ ವಾಸಿಯಾದ ಈ ಮರವನ್ನು ಈಗ  ಏಷಿಯಾ ಆಫ್ರಿಕಾ ಖಂಡಗಳ ಅನೇಕ ದೇಶಗಳಲ್ಲಿ ಬೆಳೆಸಲಾಗುತ್ತಿದೆ.  

ತುಂಬಾ ಚಳಿಯಿರುವ ಪ್ರದೇಶಗಳನ್ನು ಬಿಟ್ಟು ಉಳಿದ ಹವಾಮಾನಕ್ಕೆ, ಮಣ್ಣಿಗೆ ಹೊಂದಿಕೊಂಡು ಬೆಳೆವ ಸಾಮರ್ಥ್ಯ ಈ ಮರಕ್ಕಿದೆ.
ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ  ತನ್ನ ಬೇರುಗಳನ್ನ ಭೂಮಿಯಲ್ಲಿ ತುಂಬ ಆಳದವರೆಗೂ ಚಾಚಿ ನೀರನ್ನು ಪಡೆದು, ಚೆನ್ನಾಗಿ ಬೆಳೆಯುವಂತೆಯೇ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೇರುಗಳನ್ನು ಭೂಮಿಯ ಮೇಲ್ಮೈಯಲ್ಲೇ ಹರಡಿಕೊಂಡು ಬೆಳೆಯುತ್ತದೆ.


ಎಲೆಗಳ ರಚನೆ ಸಂಕೀರ್ಣವಾಗಿದ್ದು, ಒಂದು ಅಗಲವಾದ ಎಲೆಯು ಅನೇಕ ಚಿಕ್ಕ ಎಲೆಗಳಿಂದಾಗಿದೆ.  ಬಿಸಿಲು ಬೀಳುವಾಗ ಅಗಲವಾಗಿ ತೆರೆದುಕೊಂಡು ನಳನಳಿಸುತ್ತಾ ದ್ಯುತಿಸಂಶ್ಲೇಷಣೆ ನಡೆಸುವ ಎಲೆಗಳು, ಸಾಯಂಕಾಲವಾಗುತ್ತಿದ್ದಂತೆಯೇ ಮುದುಡಿಕೊಳ್ಳುತ್ತವೆ. ಮಳೆಬರುವಾಗ, ಬೇರಾವುದೇ ನೆರಳು ಆವರಿಸಿದಾಗಲೂ ಎಲೆಗಳು ಹೀಗೆ ಮುದುಡಿಕೊಳ್ಳುತ್ತವೆ. ಮಳೆಬಂದಾಗ ಅಥವಾ ರಾತ್ರಿಗಳಲ್ಲಿ ಎಲೆಗಳು ಹೀಗೆ ಮುದುಡುವುದರಿಂದಾಗಿ ನೀರು ಅಥವಾ ಇಬ್ಬನಿ  ಮರದ ಬುಡದಲ್ಲಿಯೂ ಬೀಳುತ್ತದೆ. ಆದ್ದರಿಂದಲೇ ಈ ಮರದ ಬುಡದಲ್ಲಿ ಸದಾ ಹಸಿರಿನಿಂದ ಕೂಡಿದ ಹುಲ್ಲುಗಳೂ ಬೆಳೆಯುತ್ತವೆ. ಆದ್ದರಿಂದಲೇ ಇದಕ್ಕೆ ಮಳೆಮರ(rain tree) ಎಂಬ ಹೆಸರಿದೆ.



ಎಪ್ರಿಲ್-ಸೆಪ್ಟೆಂಬರ್ ವರೆಗೂ ಕಾಣಿಸುವ ಗುಲಾಬಿ ಬಣ್ಣದ  ಹೂಗುಚ್ಛಗಳು ಹಸಿರುಮರದ ಮಧ್ಯೆ ಮಧ್ಯೆ ಪೌಡರ್ ಫಫ್ ಇರಿಸಿದಂತೆ ಕಾಣಿಸುತ್ತವೆ. ಒಂದು ಹೂಗುಚ್ಛದಲ್ಲಿ ಅನೇಕ ಪುಟ್ಟಪುಟ್ಟ ಹೂವುಗಳಿವೆ. ಹೂವುಗಳ ದಳಗಳು ಚಿಕ್ಕದಾಗಿದ್ದು ಸರಿಯಾಗಿ ಗೋಚರವಾಗುವುದಿಲ್ಲ. ತೆಳ್ಳನೆಯ ಉದ್ದನೆಯ ಗುಲಾಬಿ ಬಣ್ಣದ ರೇಷ್ಮೆ ಎಳೆಗಳಂತಹ ಕೇಸರಗಳು ಹೂವಿಗೆ ಆಕರ್ಷಕ ರೂಪ ಒದಗಿಸಿವೆ. ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.


ಎಳೆಯ ಕಾಯಿಯು ಹಸಿರುಬಣ್ಣವಿರುತ್ತದೆ, ಬಲಿತಂತೆಲ್ಲ ಕಂದು ಬಣ್ಣಕ್ಕೆ ತಿರುಗುತ್ತದೆ. ಒಂದು ಉದ್ದನೆಯ ಕಾಯಿಯಲ್ಲಿ ಐದಾರು ತೆಳ್ಳನೆಯ ಬೀಜಗಳಿರುತ್ತವೆ. ಇದರ ಕಾಯಿಯೊಳಗಿರುವ ತಿರುಳಿನಲ್ಲಿ ಸಿಹಿ ಅಂಶವಿದ್ದು ಪೌಷ್ಟಿಕವಾಗಿರುವುದರಿಂದ ಮಂಗ, ಜಾನುವಾರುಗಳು, ಆಳಿಲು ಕುದುರೆ ಮೊದಲಾದ ಜೀವಿಗಳಿಗೆ ಉತ್ತಮ ಆಹಾರವಾಗಿದೆ. ಬೀಜಪ್ರಸಾರವೂ ಹೀಗೆ ಪ್ರಾಣಿಗಳಿಂದ ನಡೆಯುತ್ತದೆ.

ಈ ಮರವು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.
ಹಂದರವು ಅಗಲವಾಗಿ ಹರಡಿಕೊಳ್ಳುವುದರಿಂದ ನೆರಳಿಗಾಗಿ ಬೀದಿಬದಿಯಲ್ಲಿ ಬೆಳೆಸುತ್ತಾರೆ.
ಹಸಿರು ಎಲೆಗಳು, ಗುಲಾಬಿ ಹೂವುಗಳು, ಕೊಡೆಯಾಕಾರ ಈ ಮರಕ್ಕೊಂದು ಆಕರ್ಷಕ ರೂಪ ಒದಗಿಸಿರುವುದರಿಂದ ಉದ್ಯಾನವನಗಳಲ್ಲಿ ಅಲಂಕಾರಿಕ ಮರವಾಗಿ ಬೆಳೆಸುತ್ತಾರೆ.
ಮರದ ಕಾಂಡವು ಗಟ್ಟಿಮುಟ್ಟಾಗಿರುವುದರಿಂದ ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಮಧ್ಯ ಅಮೇರಿಕಾದಲ್ಲಿ ಈ ಮರದ ಕಾಂಡದಿಂದ ಕೈಗಾಡಿಗಳನ್ನು ಮಾಡುತ್ತಾರೆ. ಅಲ್ಲದೆ ಉರುವಲಾಗಿಯೂ ಬಳಸುತ್ತಾರೆ.
ಸಿಹಿಯಾದ ತಿರುಳಿರುವ, ಪ್ರೋಟೀನ್ ಅಂಶ ಹೆಚ್ಚಿರುವ ಕಾಯಿ ಅನೇಕ ಪ್ರಾಣಿಗಳಿಗೆ ಆಹಾರ. ಇದರ ಸ್ವಾಭಾವಿಕ ವಾಸಸ್ಥಾನವಾದ ಮಧ್ಯಾಮೇರಿಕಾದ ದೇಶಗಳಲ್ಲಿ ಇದರ ಬೀಜಗಳನ್ನು ಮಂಗಗಳು ಇಷ್ಟಪಟ್ಟು ತಿನ್ನುತ್ತವೆಯಾದ್ದರಿಂದ ಇದರ ಬೀಜಕ್ಕೆ “Monkey pod” ಎಂದೇ ಹೆಸರಿದೆ. ಹೂವಿನ ಮಕರಂದವೂ ಅನೇಕ ಕೀಟಗಳಿಗೆ ಆಹಾರವಾಗಿದೆ.
ಬೀಜಗಳು, ಮರದ ಎಲೆ, ಬೇರು ಔಷಧೀಯ ಗುಣ ಹೊಂದಿದೆ. ಗಂಟಲು ಕೆರೆತಕ್ಕೆ, ಟಿಬಿ ಬ್ಯಾಕ್ಟೀರಿಯಾ ನಿವಾರಕವಾಗಿ ಬೀಜಗಳನ್ನು ಉಪಯೋಗಿಸುತ್ತಾರೆ.

2 comments:

  1. ಮಳೆಗಾಗಿ ಮರ..
    ಮರದಿಂದ ಮಳೆ

    ಇವೆರಡು ಪದಗಳ ಸೂಕ್ಷಮತೆಯನ್ನು ಮೆರೆಯುವ ಈ ಲೇಖನ ಇಷ್ಟವಾಗುತ್ತದೆ
    ನೆರಳಿಗಾಗಿ ಮರಬೆಳೆಸುವ ಈ ಪ್ರಕ್ರಿಯೆ ಪ್ರಾಣಿಗಳಿಗೆ ಆಹಾರ ರೂಪವಾಗಿ ಇಷ್ಟವಾಗುತ್ತದೆ ಎನ್ನುವ ಮಾಹಿತಿ ಕುತೂಹಲ..

    ಲೇಖನದ ವಿಚಾರ ಮತ್ತು ಪ್ರಸ್ತುತ ಪಡಿಸಿದ ರೀತಿಗೆ ಸಲಾಂ ಮೇಡಂ

    ReplyDelete
  2. ಒಂದು ಮರದಲ್ಲಿ ಎಷ್ಟೆಲ್ಲ ಕುತೂಹಲಕಾರಿಯಾದ ವಿಷಯಗಳಿವೆಯಲ್ಲ! ಅಚ್ಚರಿಯಾಗುತ್ತದೆ ಇವನ್ನೆಲ್ಲ ಓದಿದಾಗ. ನಿಮಗೆ ಧನ್ಯವಾದಗಳು.

    ReplyDelete