ಅಪರೂಪಕ್ಕೆ ಕೆಲದಿನಗಳ ರಜೆ ತೆಗೆದುಕೊಂಡಿದ್ದ ಮಗಳು, ಮನೆಗೆ ಬಂದಿದ್ದಳು. ಊರಿನಿಂದ ಅಜ್ಜ, ಅಜ್ಜಿಯನ್ನೂ ಕರೆಸಿಕೊಂಡಿದ್ದಳು. ಮಗಳು ರಜಾ ಹಾಕಿದ ಖುಷಿಗೆ ಅವಳ ಅಪ್ಪ ಎರಡು ದಿನಗಳ ಮಟ್ಟಿಗೆ ಎರ್ಕಾಡ್ ಗೆ ಪ್ರವಾಸ ಹೋಗುವ ಪ್ಲಾನ್ ಹಾಕಿದರು.
ತಮಿಳುನಾಡಿನ ಸೇಲಂ ಎಂಬ ಉರಿಬಿಸಿಲಿನ, ಉರಿ ಸೆಕೆಯ ಊರಿಗೆ ಕೇವಲ 30 ಕಿಲೋಮೀಟರ್ ದೂರದಲ್ಲಿರುವ, ಸಮುದ್ರಮಟ್ಟದಿಂದ ಸುಮಾರು 4900 ಅಡಿಗಳಷ್ಟು ಎತ್ತರದ ತಂಪಾದ ಬೆಟ್ಟಗುಡ್ಡಗಳ ಊರು ಎರ್ಕಾಡು. ಇದು ಸೆರ್ವರಾಯನ್ ಅಥವಾ ಶೆವರಾಯ್ ಬೆಟ್ಟಸಾಲಿನಲ್ಲಿದೆ.
.ಸುಮಾರು ನಲವತ್ತು ಸಾವಿರ ಜನಸಂಖ್ಯೆ ಯೆರ್ಕಾಡ್ ತಾಲ್ಲೂಕಿನಲ್ಲಿದೆಯೆಂದು
ವಿಕಿಪಿಡಿಯಾ ಹೇಳುತ್ತದೆ.
ಈ ಅಂಗಡಿ ಸಾಲುಗಳಲ್ಲಿ ಅಲೆಯುತ್ತಿರುವಾಗ, ಹಲವಾರು ಅಂಗಡಿಗಳ ಬಾಗಿಲ ಬಳಿ ಬುಟ್ಟಿಯೊಂದರಲ್ಲಿ ಇಟ್ಟಿದ್ದ ವಸ್ತುವೊಂದು ತನ್ನ ವಿಚಿತ್ರ ಆಕಾರದಿಂದ ಗಮನ ಸೆಳೆಯಿತು. ಯಾವುದೋ ಬೇರು, ಗಡ್ಡೆಗಳ ಜಾತಿಗೆ ಸೇರಿದ ತರಕಾರಿಯಿರಬೇಕೆಂದು ಅನಿಸಿದರೂ ರೋಮ ಸಹಿತವಾದ ಕುರಿಯ ಕಾಲಿನಂತಿದ್ದ ಅದರ ಆಕಾರ ನೋಡಿದರೆ ಕುತೂಹಲ ಕೆರಳುತ್ತಿತ್ತು. ಅದೇನೆಂದು ವಿಚಾರಿಸಿದಾಗ, ತಮಿಳು ಸ್ವಲ್ಪ ಮಟ್ಟಿಗೆ ಅರ್ಥವಾದರೂ ಅವರು ಅದಕ್ಕೆ ಹೇಳುತ್ತಿದ್ದ ಹೆಸರಿನ ಉಚ್ಚಾರಣೆ ಸ್ಪಷ್ಟವಾಗಲೇ ಇಲ್ಲ.
ಅದೊಂದು ಅತ್ಯಂತ ಉಪಯುಕ್ತ ಔಷಧೀಯ ಗುಣವುಳ್ಳ ವಸ್ತುವೆಂದೂ ಅದರ ಸೂಪ್ ತಯಾರಿಸಿ ಕುಡಿದರೆ,
ಕೈಕಾಲು ಗಂಟುಗಳ ನೋವು ಮಾಯವಾಗುತ್ತದೆಂದೂ ಅವರ ಮಾತಿನಿಂದ ಅರ್ಥವಾಯ್ತು.
ಕೆಲವರಂತೂ ಅಲ್ಲೇ ಪುಟ್ಟ ಕೆಂಡದೊಲೆಯಲ್ಲಿ ಸೂಪ್ ತಯಾರಿಸಿ ಮಾರುತ್ತಿದ್ದರು ಕೂಡ.
ರುಚಿ ನೋಡುವ ಆಸೆಯಾದರೂ ಬೀದಿ ಬದಿಯ ಆಹಾರದ ಬಗೆಗೆ ಸ್ವಲ್ಪ ಭಯವಿರುವುದರಿಂದ
ಕುಡಿಯುವ ಸಾಹಸ ಮಾಡಲಿಲ್ಲ.
ಕೊನೆಗೆ ಗೂಗಲಮ್ಮ ಅದರ ವಿವರಗಳನ್ನು ತಿಳಿಸಿದಳು. ಗೂಗಲಮ್ಮನ ಪ್ರಕಾರ ಆ ವಸ್ತು “ಮುದವಟ್ಟುಕಲ್ ಕಿಲಂಗೋ”.
ಇದು ದೊಡ್ಡದೊಡ್ಡ ಮರಗಳ ಮೇಲೆ ಬೆಳೆಯುವ ಫರ್ನ್ ಜಾತಿಗೆ ಸೇರಿದ ಓಕ್ ಲೀಫ್ ಫರ್ನ್
(Aglaomorpha quercifolia ) ಸಸ್ಯದ ರೈಜೋ಼ಮ್ (ಗಡ್ಡೆ). ನಮ್ಮ ಮಲೆನಾಡಿನಲ್ಲಿ ಕೂಡ ಮಾವಿನ ಮರ, ಹಲಸಿನ ಮರ ಮೊದಲಾದ ದೊಡ್ಡ ದೊಡ್ಡ ಹಳೆಯ ಮರಗಳ ಮೇಲೆ ಈ ಸಸ್ಯ ಬೆಳೆಯುತ್ತದೆ. “ಬಂದಳಿಕೆ’ ಎಂದು ಕರೆಯಲಾಗುವ ಇದರ ಔಷಧೀಯ ಉಪಯೋಗ ನಮ್ಮ ಕಡೆಗೆ
ತಿಳಿದಿಲ್ಲವೆನ್ನಿಸುತ್ತದೆ.
ಎಪಿಫೈಟ್ ಅಂದರೆ ಬೇರೆ ಸಸ್ಯಗಳ ಮೇಲೆ ಬೆಳೆಯುವ ಈ ಫರ್ನ್ ಗಿಡಗಳಲ್ಲಿ
ರೈಜೋ಼ಮ್ ಎಂದು ಕರೆಯಲಾಗುವ ಬೇರು, ಮತ್ತು ಎರಡು ವಿಧದ ಎಲೆಗಳಂತಹ ರಚನೆಯಾದ ಫ್ರಾಂಡ್‍ಗಳು ಇರುತ್ತವೆ.
ಒಂದು ರೀತಿಯ ಎಲೆಗಳ ಗುಚ್ಛ ಮರದ ಕಾಂಡಗಳಿಗೆ ತಾಗಿದಂತೆ ಪುಟಾಣಿ ಬುಟ್ಟಿಯಾಕಾರದಲ್ಲಿರುತ್ತವೆ. ಒಣ
ಎಲೆಗಳಂತೆ ತೋರುವ ಇವುಗಳು ಗಿಡ ಬೆಳೆಯಲು ಬೇಕಾದ ಸಾವಯವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ.
ಉದ್ದವಾಗಿ ಬೆಳೆಯುವ ಇನ್ನೊಂದು ರೀತಿಯ ಎಲೆಗಳಂತಹ ರಚನೆಯಿಂದ ಆಹಾರೋತ್ಪತ್ತಿ, ಸಂತಾನೋತ್ಪತ್ತಿ ಮೊದಲಾದವುಗಳು
ನಡೆಯುತ್ತವೆ. ವಾತಾವರಣದಲ್ಲಿರುವ ತೇವಾಂಶ, ಮಳೆ ನೀರು, ಗಾಳಿಯಲ್ಲಿನ ನೈಟ್ರೋಜನ್ ಮೊದಲಾದವುಗಳನ್ನೇ
ಬಳಸಿಕೊಂಡು ಈ ಎಲೆಗಳು ಆಹಾರ ತಯಾರಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿ ಕಾಲದಲ್ಲಿ ಎಲೆಗಳ ಹಿಂಭಾಗದಲ್ಲಿ
ಬೆಳೆಯುವ ಚಿಕ್ಕೆಗಳಂತೆ ತೋರುವ ಸ್ಪೋರ್‍ಗಳು ಗಾಳಿಯಲ್ಲಿ ತೇಲಿ ಬೇರೆಡೆ ಪಸರಿಸಿ ಹೊಸ ಸಸ್ಯ ಬೆಳೆಯುತ್ತದೆ.
ಸಿಕ್ಕ ಸಿಕ್ಕ ಸೊಪ್ಪು ಸದೆಗಳನ್ನೆಲ್ಲವನ್ನೂ ಬಳಸಿ ಅಡುಗೆ, ಔಷಧಿ ತಯಾರಿಸುವ ಅಮ್ಮ ಊರಿಗೆ ಹೋಗುತ್ತಿದ್ದಂತೆಯೆ ಈ ಬಂದಳಿಕೆಯ ಗೆಡ್ಡೆಯನ್ನು ತರಲು ಹೇಳಿ, ಯೂ ಟ್ಯೂಬ್ ನೋಡಿಕೊಂಡು ಸೂಪ್ ಮಾಡಿ ಕುಡಿಸಿದರೇನು ಗತಿ ಎಂಬುದು ಈಗ ಅಪ್ಪನನ್ನು ಕಾಡುತ್ತಿರುವ ದೊಡ್ಡ ಚಿಂತೆಯಾಗಿದೆ ಎಂಬಲ್ಲಿಗೆ ಈ ಪುರಾಣ ಮುಕ್ತಾಯವಾಗುತ್ತದೆ.
ವಿ.ಸೂ - ಪ್ರಪಂಚದ ಚರಾಚರ ವಸ್ತುಗಳೆಲ್ಲವೂ ದೊರಕುವ ಮಾಯಾತಾಣ ಅಮೆಜಾನ್ನಲ್ಲಿ ಈ ಮುದವಟ್ಟುಕಲ್ ಕಿಲಂಗುವೂ ದೊರಕುತ್ತದೆ.
ಎಷ್ಟು ಕಾಲದ ನಂತರ ಬ್ಲಾಗ್ ಅಪ್‌ಡೇಟ್ ಆಯ್ದಲಾ!
ReplyDeleteಹೌದು :)
Deleteಚಿಕ್ಕದಾದ ಚೊಕ್ಕದಾದ ಪ್ರಯಾಣ ಕಥೆ
ReplyDeleteನಮ್ಮ ಶುಂಠಿಯೂ ಸಹ ರೈಝೋಮ್ ವರ್ಗದಲ್ಲಿ ಬರುತ್ತದೆಯೆ?
ReplyDeleteಹೌದು ಕಾಕ. ಶುಂಠಿಯೂ ಸಹ ರೈಝೋಮ್.
Delete