10 Dec 2023

ಚಳಿಗಾಲಕ್ಕೂ ಮೊದಲೇ ವಸಂತನ ಆಗಮನವೆ?

 ನಾವು ವಾಕಿಂಗ್ ಹೋಗುವ ದಾರಿಯಲ್ಲಿ ಸಾಲಾಗಿ ಹೊಂಗೆ ಮರಗಳಿವೆ.  ಪ್ರತಿದಿನ ಆ ಮರಗಳನ್ನು ನೋಡುತ್ತಾ ಹೋಗುವುದು ಅಭ್ಯಾಸ.

ಹೊಂಗೆ ಮರ,(Pongamia pinnata) ಚಪ್ಪರದಂತೆ ಹರಡಿಕೊಂಡು ಬೆಳೆಯುವ ಮಧ್ಯಮ ಗಾತ್ರದ ಚೆಂದದ ಮರ. ಅದರ ದಟ್ಟ ಎಲೆಗಳು ಬಿರುಬಿಸಿಲಲ್ಲಿ ತಂಪಾದ ನೆರಳು ಕೊಡುತ್ತವೆ. ಕಾಲಕ್ಕೆ ತಕ್ಕಂತೆ ಬದಲಾಗುವ ಚಿಗುರೆಲೆಗಳ ತೆಳು ಹಸಿರು, ಬಲಿತ ಎಲೆಗಳ ದಟ್ಟ ಹಸಿರು ಬಣ್ಣವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಸಂತಕಾಲದಲ್ಲಿ ಅಂದರೆ ಸುಮಾರು ಮಾರ್ಚ್-ಎಪ್ರಿಲ್ ತಿಂಗಳಿನಲ್ಲಂತೂ ತೆಳು ಗುಲಾಬಿ ಬಣ್ಣದ ಹೂಗೊಂಚಲುಗಳು ಮರದ ತುಂಬ ತುಂಬಿಕೊಂಡು ಸೌಂದರ್ಯ ಇಮ್ಮಡಿಸುತ್ತದೆ.  (ಕೆಳಗೆ ರಸ್ತೆಯ ಮೇಲೆ ರಾಶಿ ರಾಶಿಯಾಗಿ ಉದುರುವ ಮೊಗ್ಗು, ಹೂದಳಗಳು ಮತ್ತು ಒಣ ಎಲೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಈ ಮರಗಳು ದೊಡ್ಡ ತಲೆನೋವಾಗುತ್ತವೆ ಎಂಬುದೂ ಅಷ್ಟೇ ಸತ್ಯ.) ಸುತ್ತಲಿನ ಪರಿಸರಕ್ಕೆ ನರುಗಂಪು ಸೂಸುವ ಹೂವುಗಳು, ಅದಕ್ಕೆ ಆಕರ್ಷಿತವಾಗಿ ಹೂವನ್ನು ಮುತ್ತುವ ಜೇನು ನೊಣಗಳು, ದುಂಬಿಗಳು, ಹೀಗೆ ಈ ಮರಗಳನ್ನು ನೋಡುತ್ತಿದ್ದರೆ ಸಮಯ ಸರಿಯುವುದು ತಿಳಿಯುವುದಿಲ್ಲ.

Pongamia pinnata (ಹೊಂಗೆ ಮರ)

ಉದುರಿದ ಹೊಂಗೆ ಹೂವುಗಳು
ಹೊಂಗೆ ಹೂವುಗಳು

ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಬೀದಿಯ ಕೊನೆಯಲ್ಲಿರುವ ಮರವೊಂದು ಹೂವುಗಳನ್ನು ಅರಳಿಸಿಕೊಂಡು ನಿಂತಿತ್ತು.  ವಾಕಿಂಗ್ ಹೋಗುವಾಗ, ಬರುವಾಗಲೆಲ್ಲ ಇದಕ್ಕೇನಾಗಿರಬಹುದೆಂಬ ಕುತೂಹಲ ನನಗೆ. ಬೇರಾವ ಮರಗಳೂ ಇನ್ನೂ ಹೂ ಬಿಟ್ಟಿರಲಿಲ್ಲ. ಮಾರ್ಚ- ಎಪ್ರಿಲ್ ತಿಂಗಳಲ್ಲಿ ಬಿಡಬೇಕಾಗಿರುವ ಹೂವುಗಳನ್ನು ಈಗ ಬಿಟ್ಟಿದೆಯಲ್ಲ ಈ ಮರ, ಈ ಸೆಕೆ ನೋಡಿ ಮಾರ್ಚ ತಿಂಗಳು ಬಂತು ಅಂತ ಅಂದುಕೊಂಡುಬಿಟ್ಟಿದೆಯಲ್ಲ ಪೆದ್ದು ಎಂದು ಗಂಡನಲ್ಲಿ ಹೇಳಿಕೊಂಡು ನಕ್ಕಿದ್ದೂ ಆಯಿತು. ನಂತರ ಹದಿನೈದು ದಿನಗಳಲ್ಲಿ ಆ ಬೀದಿಯ ಎಲ್ಲ ಹೊಂಗೇ ಮರಗಳಲ್ಲೂ ಹೂವರಳಿದ್ದವು! ಈಗ ಆ ಮರ “ಯಾರಮ್ಮ ಪೆದ್ದಿ” ಎಂದು ನನ್ನನ್ನೇ ಅಣಕಿಸಿದಂತಾಗುತ್ತಿತ್ತು. ಈಗ ಡಿಸೆಂಬರ್ ಮೊದಲವಾರದಲ್ಲಿ ನೋಡಿದರೆ ರಿಂಗ್ ರೋಡಿನಲ್ಲಿರುವ ಟಬೂಬಿಯ ಮರಗಳೆಲ್ಲವೂ ಹೂವರಳಿಸಿಕೊಂಡು ನಿಂತಿವೆ!! ಈ ಮರಗಳೂ ಕೂಡ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಹೂ ಬಿಡುತ್ತವೆ!

ಈ ವರ್ಷ ವಾತಾವರಣ ಅದೆಷ್ಟು ಬದಲಾವಣೆಯಾಗಿದೆ ಎಂಬುದಕ್ಕೆ ಸಾಕ್ಷಿ ಈ ಮರಗಳು. ಅತೀ ಕಡಿಮೆ ಮಳೆಯಾಗಿದೆ, ಚಳಿ ಇರಬೇಕಾದ ಕಾಲದಲ್ಲಿ ಸೆಕೆ ಹೆಚ್ಚಿದೆ. ಇದರ ಪರಿಣಾಮ ಈ ಮರಗಳ ಮೇಲಾಗಿದೆ. ಈ ಬದಲಾವಣೆಗಳು ನಮ್ಮ ಮೇಲೆ ಇನ್ನೆಷ್ಟು ಪರಿಣಾಮ ಬೀರಬಹುದು? ಕಾಲವೇ ಹೇಳಬೇಕು.

Tabebuia rosea

(ಈಗೊಂದು ಹತ್ತು ವರ್ಷಗಳ ಹಿಂದೆ ಸುಮಾರು ಸೆಪ್ಟೆಂಬರ್-ಅಕ್ಟೋಬರ್ ಸಮಯಕ್ಕೆ ಆ ಸಾಲು ಮರಗಳಲ್ಲಿ ಕಾಗೆಗಳು ಗೂಡು ಕಟ್ಟುವುದು, ಮೊಟ್ಟೆ ಇಡುವುದು ಮೊದಲಾದ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದವು. ಒಂದೆರಡು ತಿಂಗಳಲ್ಲಿ  ಮರಿಗಳ ಕಲವರವವು, ಶಿವರುದ್ರಪ್ಪನವರ “ಹಕ್ಕಿ ಗಿಲಕಿ” ಯೆಂಬ ಸಾಲನ್ನು ನೆನೆಪಿಸುವಂತೆ ಕೇಳಿಸುತ್ತಿತ್ತು. ಈಗ ಐದು ವರ್ಷಗಳಿಂದೀಚೆಗೆ ಕಾಗೆಗಳು ಇಲ್ಲಿ ಗೂಡು ಕಟ್ಟುತ್ತಿಲ್ಲ. ಪಕ್ಕದಲ್ಲೇ ಇರುವ ರಿಂಗ್ ರೋಡಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದೇ ಕಾರಣವಿರಬಹುದೆ ಗೊತ್ತಿಲ್ಲ.) 

No comments:

Post a Comment