4 Jan 2024

ಶಿವಲಿಂಗದ ಮರ

ಮನೆಯ ಗೇಟ್ ದಾಟಿ ಆಫೀಸ್ ದಾರಿ ಹಿಡಿಯುತ್ತಿದ್ದಂತೆಯೆ ನನಗೆ ಮನೆಯೊಂದು ಇದೆ ಅಂತಲೇ ಮರೆತು ಹೋಗುತ್ತದೆಕೆಲಸದ ಮೇಲಿನ ತನ್ನ ಶ್ರದ್ಧೆಯ ಬಗೆಗೆ ನನ್ನ ವರ್ಕೋಲಿಕ್ ಗಂಡ ಆಗಾಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಮಾತಿದು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಡೈಲಾಗ್ ಸ್ವಲ್ಪ ಬದಲಾಗಿದೆ, ಕೆಲಸಕ್ಕೆಂದು ಹೊರಗೆ ಹೋದಾಗ ಯಾವುದಾದರೂ ಪ್ರಕೃತಿ ವಿಶೇಷ ಅಂದರೆ ವಿಚಿತ್ರವಾದ ಹುಳವೋ, ಪ್ರಾಣಿ ಪಕ್ಷಿಗಳೋ, ಹೂವು, ಹಣ್ಣು, ಕಾಯಿಗಳೋ, ವಿಶಿಷ್ಟ ಪ್ರಕೃತಿ ವಿದ್ಯಮಾನಗಳೋ ಕಾಣಿಸಿದರೆ ತಟ್ಟನೆ ನಿನ್ನ ನೆನಪಾಗತ್ತೆ ಮಾರಾಯ್ತಿ ಎನ್ನುತ್ತಾರೆ! ನನಗೆ ಇದರಿಂದ ಸಂತೋಷವೂ ಆಗುತ್ತದೆ! ಹೀಗೆ ಹುಳಹಪ್ಪಟೆ ಕಾಣಿಸಿದೊಡನೆ ನಿನ್ನ ನೆನಪಾಗುತ್ತದೆ ಎನ್ನುವವರು ಹಲವರಿದ್ದಾರೆ, ಮತ್ತು ಅದರಿಂದ ನನಗೆ ಸಂತೋಷವಾಗುತ್ತದೆ ಎಂಬುದು ವಿಚಿತ್ರವಾದರೂ ಸತ್ಯ.



ಇತ್ತೀಚೆಗೆ ಒಂದು ದಿನ ಯಾವುದೋ ಗ್ರಾಹಕರ ತೋಟಕ್ಕೆ ಹೋಗಿದ್ದವರು ಬರುತ್ತಿದ್ದಂತೆಯೆ ಇದೊಂದು ಹಣ್ಣು ಅವರ ತೋಟದಲ್ಲಿತ್ತು ನೋಡು, ಎಷ್ಟು ವಿಚಿತ್ರವಾಗಿದೆ. ಆ ತೋಟದ ಮಾಲಿ, ತಮ್ಮ ಊರ ಕಡೆ ಈ ಹಣ್ಣನ್ನು ತಿನ್ನುತ್ತೇವೆ ಎಂದು ಹೇಳಿದಎಂದು ತೊಟ್ಟಿನ ಸಮೇತವಾಗಿದ್ದ ಗುಂಡನೆಯ ಟೆನ್ನಿಸ್ ಚೆಂಡಿನಂತಹ ವಸ್ತುವೊಂದನ್ನು ಕೊಟ್ಟರು. ನೋಡಿದೊಡನೆಯೆ ಅದು ಹಣ್ಣಲ್ಲ, ಹೂಗುಚ್ಛ ಎಂದು ತಿಳಿಯಿತು. ಉಳಿದ ವಿವರಗಳನ್ನು ಗೂಗಲಕ್ಕ ತಿಳಿಸಿದಳು.



 ಇದಕ್ಕೆ ಕನ್ನಡದಲ್ಲಿ ಶಿವಲಿಂಗದ ಮರ ಎಂಬ ಹೆಸರಿದೆ. ಇಂಗ್ಲೀಷಿನಲ್ಲಿ ಬ್ಯಾಟ್‍ಮಿಟನ್ ಬಾಲ್ ಟ್ರೀ ಎಂಬ ಸಾಮಾನ್ಯ ಹೆಸರು ಹಾಗೂ Parkia biglandulosa ಎಂಬ ವೈಜ್ಞಾನಿಕ ನಾಮಧೇಯ ಇದಕ್ಕಿದೆ. ಮಿಮೋಸ ಎಂಬ ಜಾತಿಗೆ ಸೇರಿದ ಮರ. ಅಂದರೆ ನಮ್ಮ ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಗಿಡವಿದೆಯಲ್ಲ ಅದೇ ಜಾತಿಗೆ ಸೇರಿದೆ. ಇವೆರಡರ ಎಲೆಗಳು, ಹೂಗುಚ್ಛ, ಕಾಯಿ ಎಲ್ಲದರಲ್ಲೂ ಸಾಮ್ಯತೆಯಿದೆ. ಆದರೆ ಗಾತ್ರದಲ್ಲಿ ಮಾತ್ರ ಅಗಾಧ ವ್ಯತ್ಯಾಸ. “ನಾಚಿಕೆ ಮುಳ್ಳು ನೆಲಕ್ಕೆ ಅಂಟಿಕೊಂಡಂತೆ ಬೆಳೆವ ಬಳ್ಳಿಯಂತಹ (creaper) ಸಸ್ಯವಾದರೆ ಈ ಶಿವಲಿಂಗದ ಮರ ಹೆಸರೇ ಹೇಳುವಂತೆ ಮಧ್ಯಮಗಾತ್ರದ ಮರವಾಗಿ ಬೆಳೆಯುವಂತಹ ಸಸ್ಯ. ಸಸ್ಯಲೋಕದಲ್ಲಿ ಇಂತಹ ವಿಚಿತ್ರಗಳು ಅಪರೂಪವೇನಲ್ಲ. ನೆಲಕ್ಕಂಟಿಕೊಂಡು ಬೆಳೆವ ಹುಲ್ಲು, ಮುಗಿಲು ಮುಟ್ಟುವಷ್ಟು ಎತ್ತರ ಬೆಳೆವ ಬಿದಿರು ಒಂದೇ ಜಾತಿಗೆ ಸೇರಿವೆ! ಮಾನವರ ಹೊಟ್ಟೆ ತುಂಬಿಸುವ ಏಕದಳ ಧಾನ್ಯಗಳಾದ ಭತ್ತ, ರಾಗಿ, ಗೋಧಿ ಮೊದಲಾದ ಸಸ್ಯಗಳು ಸಹ ಹುಲ್ಲಿನ ಜಾತಿಗೇ ಸೇರಿದವುಗಳು!

 



ಈ ಶಿವಲಿಂಗದ ಮರದ ಮೂಲ ನೆಲೆ ಆಫ್ರಿಕಾ ಖಂಡ. ಅಲ್ಲಿ ಈ ಮರದ ಎಲೆ, ಕಾಂಡ, ಬೇರು, ಹೂಗುಚ್ಛ, ಹಣ್ಣು ಹಾಗೂ ಬೀಜಗಳನ್ನು ಆಹಾರಕ್ಕಾಗಿಯೂ ಔಷಧವಾಗಿಯೂ ಉಪಯೋಗಿಸುತ್ತಾರೆ.

ಇದರ ಹೂಗುಚ್ಛ ಆಕರ್ಷಕವಾಗಿರುವುದರಿಂದ ಉಷ್ಣವಲಯದ ದೇಶಗಳ ಪಾರ್ಕ್, ಬಟಾನಿಕಲ್ ಗಾರ್ಡನ್ಕೈತೋಟಗಳಲ್ಲಿ ಮೆಚ್ಚಿನ ಸ್ಥಾನ ಪಡೆದಿದೆನಮ್ಮ ದೇಶದ ಅನೇಕ ಮಹಾನಗರಗಳಲ್ಲಿ ರಸ್ತೆಬದಿಯ ಸಾಲುಮರಗಳ ಸಾಲಿನಲ್ಲಿಯೂ ಇವುಗಳನ್ನು ಬೆಳೆಸಲಾಗಿದೆ. ಕಂದು ಬಣ್ಣದ ಮೊಗ್ಗುಗಳ ಗುಚ್ಛ, ಕೆಲವೇ ದಿನಗಳಲ್ಲಿ ಅರಳಿ ಬಿಳಿಯ ಬಣ್ಣದ ಹೂವುಗಳ ಗುಚ್ಛವಾಗುತ್ತದೆಕಾಯಿಗಳು ಉದ್ದನೆಯ ಕೋಡಿನಾಕಾರದಲ್ಲಿ ಇರುತ್ತವೆಬೀಜದ ಸುತ್ತಲಿನ ತಿರುಳು ರುಚಿಕರವಾಗಿದ್ದು ಸೇವನೆಗೆ ಯೋಗ್ಯವಾಗಿದೆಬೀಜವನ್ನೂ ಸಹ ಔಷಧವಾಗಿ ಆಹಾರವಾಗಿ ಉಪಯೋಗಿಸುತ್ತಾರೆ.



ನಾಲ್ಕು ದಿನಗಳ ನಂತರ ಹೂಗುಚ್ಛದ ಹೂವುಗಳೆಲ್ಲ ಹೀಗೆ ಉದುರಿ ಬಿದ್ದವು ಎಂಬುದರೊಡನೆ ಈ ಪುರಾಣ ಮುಕ್ತಾಯವಾಯ್ತು.😊


1 comment:

  1. ಮುಟ್ಟಿದರ ಮುನಿಯ ಸಸ್ಯದ ಎಲೆಗಳು ಮುದುರಿಕೊಳ್ಳುವಂತೆ, ಈ ಮರದ ಎಲೆಗಳೂ ಸಹ ಮುಟ್ಟಿದಾಗ ಮುದುರಿಕೊಳ್ಳುವುವೊ ಹೇಗೆ? ಲೇಖನ ಹಾಗು ಚಿತ್ರಗಳು ಆಕರ್ಷಕವಾಗಿವೆ.

    ReplyDelete