25 Dec 2023

ಹಾರುವ ಓತಿ

 ಹಾರುವ ಓತಿಪೂರ್ಣ ಚಂದ್ರ ತೇಜಸ್ವಿಯವರ ಕರ್ವಾಲೋಕಾದಂಬರಿಯ ಓದುಗರಿಗೆ ಇದರ ಪರಿಚಯವಿರುತ್ತದೆ. ನನಗೂ ಸಹ ಆ ಕಾದಂಬರಿಯನ್ನು ಓದುವಾಗಲೇ ಮೊದಲ ಬಾರಿಗೆ ಇದರ ಬಗ್ಗೆ ತಿಳಿದದ್ದು. ಕಾದಂಬರಿಯಲ್ಲಿ ಹಾರುವ ಓತಿಯ ಹುಡುಕಾಟದಲ್ಲಿರುವವರಿಗೆ ಓತಿ ಕಂಡರೂ, ಕೈಗೆ ಸಿಗದೇ ತಪ್ಪಿಸಿಕೊಂಡು ಅನಂತದಲ್ಲಿ ಲೀನವಾಗುತ್ತದೆ. ಇತ್ತೋ ಇಲ್ಲವೋ ಎಂಬ ಅನುಮಾನ ಹುಟ್ಟಿಸುವಂತೆ ಮಾಯವಾಗುತ್ತದೆ.

ಕಾದಂಬರಿ ಓದಿದ ಮೇಲೆ ಹಾರುವ ಓತಿಯನ್ನು ನೋಡಬೇಕೆಂದು ಅನ್ನಿಸಿದ್ದರೂ ಅದು ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿರುವ ಜೀವಿ, ಅಲ್ಲಿಗೆ ಹೇಗೂ ಹೋಗಿ ಅದನ್ನೆಲ್ಲ ನೋಡಲಾಗುವುದಿಲ್ಲವೆಂದು ತೀರ್ಮಾನಿಸಿ ಸುಮ್ಮನಾಗಿದ್ದೆ. ಹೀಗೆ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂದಿರುವ ಜೀವಿಗಳ ದೊಡ್ಡ ಪಟ್ಟಿಯೇ ಇರುವುದರಿಂದ, ಇದೂ ಒಂದು ಆ ಪಟ್ಟಿಯಲ್ಲಿ ಸೇರಿಹೋಗಿತ್ತು.

ಆದರೆ ಇತ್ತೀಚೆಗೆ ಅನಿರೀಕ್ಷಿತವಾಗಿ ಸಾಗರ ತಾಲ್ಲೂಕಿನ ವರದಹಳ್ಳಿಯ ದುರ್ಗಾಂಬ ದೇವಾಲಯದ ಎದುರಿನ ಅಡಿಕೆ ತೋಟದಲ್ಲಿ ಹಾರುವ ಓತಿಯ ದರ್ಶನವಾಯ್ತು! ಕುಟುಂಬದ ಕಾರ್ಯಕ್ರಮವೊಂದಕ್ಕಾಗಿ ನಾವಲ್ಲಿಗೆ ಹೋಗಿದ್ದೆವು

ನಾನಾಗಿಯೇ ಅದನ್ನೆಂದೂ ನೋಡಲು ಸಾಧ್ಯವಾಗುತ್ತಿರಲಿಲ್ಲವೇನೋ, ಆದರೆ ವಾರಗಟ್ಟಲೆ ಅದರ ಹಿಂದೆ ಬಿದ್ದು ಅವುಗಳ ಫೋಟೋ ತೆಗೆದ ಅನುಭವವಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾದ ಗಣೇಶ್ ಹೆಚ್ ಶಂಕರ್ (ನನ್ನ ಸೋದರಮಾವ) ಅಡಿಕೆ ಮರವೊಂದರಲ್ಲಿ ಕುಳಿತಿದ್ದ ಹಾರುವ ಓತಿಯನ್ನು ಗುರುತಿಸಿ ತೋರಿಸಿದರು

ನೋಡುತ್ತಿದ್ದಂತೆಯೆ ಅದು ತನ್ನ ರೆಕ್ಕೆಯನ್ನು ಬಿಚ್ಚಿ ಒಂದು ಮರದಿಂದ ಇನ್ನೊಂದು ಮರಕ್ಕೆ ತೇಲಿತು. ಅಲ್ಲಿಂದ ಒಂದಷ್ಟು ಮೇಲೇರಿ, ತನ್ನ ಕುತ್ತಿಗೆಯಲ್ಲಿನ ಹಳದಿ ಬಣ್ಣದ ತೊಗಲನ್ನು (dewlap) ಆಗಾಗ ಮುಂದಕ್ಕೆ ಚಾಚುತ್ತಾ ಕುಳಿತಿತ್ತು. ನೋಡುತ್ತಿದ್ದಂತೆಯೆ ಮತ್ತೆ ಅದು ಅಲ್ಲಿಂದಲೂ ಹಾರಿ ನಮ್ಮ ಕಣ್ಣಿಗೆ ಕಾಣಿಸದಂತೆ ಮಾಯವಾಗಿತ್ತು. ಒಳಗಿದ್ದ ನನ್ನ ಗಂಡನನ್ನು ಕರೆದು ತೋರಿಸುವಷ್ಟರಲ್ಲಿ ಅದು ಅಲ್ಲಿರಲಿಲ್ಲ. ಆದರೆ ಅದರ ಚಲನವಲನಗಳ ಸಂಪೂರ್ಣ ಪರಿಚಯವಿದ್ದ ಗಣೇಶಮಾವ ಮತ್ತೆ ತೋಟಕ್ಕೇ ಇಳಿದು ಮತ್ತೊಂದು ಮರದಲ್ಲಿದ್ದ ಓತಿಯನ್ನು ಗುರುತಿಸಿ ತೋರಿಸಿದರು.  ಅಪರೂಪದ ಜೀವಿಯೊಂದನ್ನು ನೋಡಿದ ಖುಷಿಯಿಂದ ಮರಳಿದ್ದಾಯ್ತು.

ಗಣೇಶಮಾವ ಪುತ್ತೂರಿನ ಹತ್ತಿರದ ಹಳ್ಳಿಯೊಂದರ ಅಡಿಕೆ ಮರದಲ್ಲಿ ಅವುಗಳ ಫೋಟೋ ತೆಗೆದ ಅನುಭವಗಳನ್ನು ಹಂಚಿಕೊಂಡರು. ಅವುಗಳು ಹಾರುವಾಗ ಫೋಟೋ ತೆಗೆಬೇಕೆಂಬ ಆಸೆಯಿಂದ ತೋಟದಲ್ಲಿ ದಿನಗಟ್ಟಲೇ ಟ್ರೈಪಾಡ್ ಅಳವಡಿಸಿಕೊಂಡು ಕುಳಿತಿರುತ್ತಿದ್ದೆ ಎನ್ನುತ್ತಾರೆ ಅವರು. “ಬೆಳಗಿನ ಬಿಸಿಲು ಬೀಳುತ್ತಿದ್ದಂತೆ ತಮ್ಮ ಚಟುವಟಿಕೆಯನ್ನು ಅವು ಪ್ರಾರಂಭಿಸುತ್ತವೆ, ಇರುವೆಗಳು ಅವುಗಳ ಪ್ರಿಯವಾದ ಆಹಾರವಾಗಿದ್ದು ಒಂದೆಡೆ ಕುಳಿತು ತಮ್ಮ ಕುತ್ತಿಗೆಯಲ್ಲಿನ ಹಳದಿ ಬಣ್ಣದ  ತೊಗಲನ್ನು ಮುಂಚಾಚುತ್ತಿರುತ್ತವೆ, ಇರುವೆಗಳು ಹತ್ತಿರ ಬಂದಾಗ ನಾಲಿಗೆಯಿಂದ ಹಿಡಿದು ತಿನ್ನುತ್ತವೆ. ಭಕ್ಷಕಗಳಾದ ಹಕ್ಕಿಗಳು, ಮನುಷ್ಯರು ಮೊದಲಾದವುಗಳಿಂದ ಅಪಾಯವಿದೆ ಎನ್ನಿಸಿದರೆ ದೇಹವನ್ನು ಸಾಧ್ಯವಾದಷ್ಟು ಚಪ್ಪಟೆಯಾಗಿಸಿಕೊಂಡು ಮರಕ್ಕೆ ಅಂಟಿಕೊಳ್ಳುತ್ತದೆ! ತಾನಿರುವ ಮರದ ಕಾಂಡಕ್ಕೆ ತಕ್ಕಂತೆ ಬಣ್ಣವನ್ನೂ ಸಹ ಬದಲಾಯಿಸಿಕೊಳ್ಳುತ್ತದೆ. ಅತ್ಯಂತ ವೇಗವಾಗಿ ಅದು ಹಾರುತ್ತದೆಯಾದ್ದರಿಂದ ಫೋಟೋ ತೆಗೆಯುವುದೊಂದು ಸವಾಲು. ನಾನು ಅದರ ಫೋಟೋ ತೆಗೆಯಲೆಂದು ದಿನಗಟ್ಟಲೇ ತಲೆಯೆತ್ತಿ ಮರವನ್ನೇ ನೋಡುತ್ತಾ ಕುಳಿತು ಕತ್ತು ನೋವು ಪ್ರಾರಂಭವಾಗಿತ್ತುಎನ್ನುತ್ತಾರೆ ಗಣೇಶ್. ವರದಹಳ್ಳಿಯ ತೋಟದಲ್ಲಿ ಕಾಣಿಸಿದೆಯೆಂದರೆ ಇಲ್ಲಿನ ಸುತ್ತಮುತ್ತಲ ತೋಟಗಳೂ ಸಹ ಅವುಗಳ ವಾಸಸ್ಥಾನಗಳಾಗಿವೆ ಎಂಬುದು ಗಣೇಶರ ಅಭಿಪ್ರಾಯ.

 ಎಲ್ಲೆಡೆ ಕಾಣಸಿಗುವ ಸಾಮಾನ್ಯ ಓತಿಕ್ಯಾತಗಳಂತೆಯೆ ಇವೂ ಕಾಣಿಸಿದರು, ಗಾತ್ರದಲ್ಲಿ ಚಿಕ್ಕದಾಗಿವೆ ಮತ್ತು  ಸಂಪೂರ್ಣವಾಗಿ ಮರವಾಸಿಯಾಗಿವೆ. ಮರದಲ್ಲಿ ವಾಸಿಸುವುದಕ್ಕೆ ಸಹಕಾರಿಯಾಗಿ ದೈಹಿಕವಾಗಿ ಇವುಗಳಲ್ಲಿ ಕೆಲವೊಂದು ವಿಶೇಷ ಮಾರ್ಪಾಟುಗಳಿವೆ. ಬಾವಲಿಗಳಂತೆ ಇದರ ದೇಹದ ಚರ್ಮವು,  ಮುಂದಿನ ಕಾಲಿನಿಂದ ಹಿಂದಿನ ಕಾಲಿನವರೆಗೂ ಹೊರಚಾಚಿದಂತಿದೆ. ಪೆಟಾಜಿಯಂ ಎಂಬ ಹೆಸರಿನ ಈ ಚರ್ಮದ ರೆಕ್ಕೆಯು ಓತಿಯು ಮರದಿಂದ ಮರಕ್ಕೆ ತೇಲಿಹೋಗಲು ಸಹಕಾರಿಯಾಗಿದೆ.  ಹಕ್ಕಿಗಳಂತೆ ಇವು ರೆಕ್ಕೆಯನ್ನು ಬಡಿದು ಹಾರುವುದಿಲ್ಲ, ಪೆಟಾಜಿಯಂ ಸಹಾಯದಿಂದ ಎತ್ತರದ ಸ್ಥಳದಿಂದ ತೇಲಿ ಇನ್ನೊಂದು ಮರದ ಕೆಳಭಾಗಕ್ಕೆ ಬಂದು (ಗ್ಲೈಡಿಂಗ್) ಕುಳಿತುಕೊಳ್ಳುತ್ತವೆ, ಮತ್ತು ತಕ್ಷಣ ವೇಗವಾಗಿ ನಡೆದು ಮರವೇರಿ ಎತ್ತರದ ಸ್ಥಳದಲ್ಲೇ ಇರುತ್ತವೆ. . ದಕ್ಷಿಣ ಏಷ್ಯಾದ ಹಲವಾರು ದೇಶಗಳು ಇವುಗಳ ಆವಾಸಸ್ಥಾನಗಳಾಗಿವೆ. ನಮ್ಮ ದೇಶದ ಪಶ್ಚಿಮಘಟ್ಟಗಳಲ್ಲಿರುವ ಮಳೆಕಾಡುಗಳಲ್ಲಷ್ಟೇ ಅಲ್ಲದೆ, ಇಲ್ಲಿನ ಅಡಿಕೆ ತೋಟಗಳಲ್ಲಿ, ತೆಂಗು, ಸಿಲ್ವರ್ ಓಕ್ ಮರಗಳಲ್ಲಿ, ನೆಡುತೋಪುಗಳಲ್ಲಿ ಇವು ಕಾಣಿಸುತ್ತವೆ. ಗಾತ್ರದಲ್ಲಿ ಗಂಡು ಓತಿಯು ಹೆಣ್ಣಿಗಿಂತ ಚಿಕ್ಕದು

ತನ್ನ ವಾಸಸ್ಥಾನವನ್ನೇ ಹೋಲುವ ಮೈಬಣ್ಣ ಅಂದರೆ ಮರದ ಮೇಲ್ಮೈ ರೀತಿಯಲ್ಲೇ ಕಾಣಿಸುವ ಮೈಬಣ್ಣ ಇವುಗಳದ್ದು. ಮರದಿಂದ ಮರಕ್ಕೆ ತೇಲಿ ಬರುವಾಗ ಒಣಗಿದ ಎಲೆಯೊಂದು ಬೀಳುತ್ತಿರುವಂತೆ ಭ್ರಮೆ ಹುಟ್ಟಿಸುತ್ತದೆ. ಅಲ್ಲದೆ ಅತ್ಯಂತ ವೇಗವಾದ ಚಲನೆ, ಅಡಗುವ ಸ್ವಭಾವಗಳಿಂದಾಗಿ ಇವುಗಳು ಮಾನವನ ಗಮನಕ್ಕೆ ಬರುವುದೇ ಅಪರೂಪ.

ಗಂಡು ಓತಿಗಳು ಒಂದೆರಡು ಮರಗಳನ್ನು ಒಳಗೊಂಡಿರುವ ತಮ್ಮದೇ ವಾಸಸ್ಥಾನ್ನು ಗುರುತಿಸಿಕೊಳ್ಳುತ್ತವೆ ಮತ್ತು ಅಲ್ಲಿಗೆ  ಬೇರೆ ಗಂಡು ಓತಿಗಳು ಪ್ರವೇಶಿಸಿದರೆ ಉಗ್ರವಾಗಿ ವಿರೋಧಿಸಿ, ಹೋರಾಡಿ ಓಡಿಸುತ್ತವೆ. ಹೆಣ್ಣು ಓತಿಗಳ ಪ್ರವೇಶಕ್ಕೆ ಹೆಚ್ಚು ವಿರೋಧವಿರುವುದಿಲ್ಲವಂತೆ! ಇವು ಕೀಟಾಹಾರಿಗಳು. ಇರುವೆ, ಗೆದ್ದಲು ಮೊದಲಾದ ಕೀಟಗಳನ್ನು ಹಿಡಿದು ತಿನ್ನುತ್ತವೆಹಾಗಾಗಿ ಇವು ಸ್ವಾಭಾವಿಕ ಕೀಟನಾಶಕಗಳೂ ಹೌದು!

ನಮ್ಮ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ Draco dussumieri ಎಂಬ ಪ್ರಬೇಧದ ಹಾರುವ ಓತಿಗಳಿವೆ.  ಸಂತಾನೋತ್ಪತ್ತಿ ಕಾಲದಲ್ಲಿ, ಹೆಣ್ಣುಗಳನ್ನು ಆಕರ್ಷಿಸಲು ಗಂಡು ತನ್ನ ದೇಹವನ್ನು ಹಿಗ್ಗಿಸಿಕೊಂಡು, ಮುಂಗಾಲುಗಳಿಂದ ಪುಶ್ ಅಪ್ಸ್ ಮಾಡುವುದು, ತನ್ನ ಕುತ್ತಿಗೆಯಲ್ಲಿನ ಹಳದಿ ಬಣ್ಣದ ತೊಗಲನ್ನು (dewlap)  ಹಿಗ್ಗಿಸುತ್ತ ಗಾಢ ಬಣ್ಣವನ್ನು ಪ್ರತಿಫಲಿಸುವುದು ಮೊದಲಾದ ನಡುವಳಿಕೆಗಳನ್ನು ತೋರುತ್ತದೆ ಎಂದು ಅಧ್ಯಯನವೊಂದು ಪ್ರತಿಪಾದಿಸುತ್ತದೆ. ತಾನಿರುವ ಮರದಿಂದ ಕೆಳಗಿಳಿಯುವ ಹೆಣ್ಣು ತನ್ನ ತಲೆಯಿಂದ ಮಣ್ಣಿನಲ್ಲಿ ಗುಳಿಯನ್ನು ತೋಡಿ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮುಚ್ಚುತ್ತದೆ. ಒಂದು ದಿನದವರೆಗೆ ಸುತ್ತಮುತ್ತ ಗಮನಿಸುತ್ತದೆ. ನಂತರ ಮತ್ತೆ ಮರವೇರುತ್ತದೆ. ಮೊಟ್ಟೆಗಳು ತಿಂಗಳ ನಂತರ ಮರಿಯಾಗಿ ಹೊರಬಂದು ಹತ್ತಿರದ ಮರವೇರುತ್ತವೆ. ಮೊಟ್ಟೆಯಿಡುವಾಗ ಬಿಟ್ಟರೆ ಬೇರೆ ಸಮಯದಲ್ಲಿ ಇವು ನೆಲಕ್ಕಿಳಿಯುವುದಿಲ್ಲ.

ತಮ್ಮ ಜೀವಿತಾವಧಿಯನ್ನೆಲ್ಲ ಮರದ ಮೇಲೇ ಕಳೆಯುವ ಇವುಗಳು ಮಾನವರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಹಾಗಾಗಿ ಅವುಗಳ ಬಗೆಗೆ ನಮಗೆ ತಿಳಿದಿರುವುದೂ ಅತ್ಯಲ್ಪಒಂದುಕಾಲದಲ್ಲಿ ಹಾರುವ ಓತಿಗಳು ಇವೆಯೆಂಬುದೇ ಹಲವಾರು ದೇಶದ ವಿಜ್ಞಾನಿಗಳಿಗೆ ಅನುಮಾನಾಸ್ಪದವಾಗಿತ್ತು. ಆದರೆ ಅತ್ಯಾಧುನಿಕ ಕ್ಯಾಮರಾಗಳ ಬಳಕೆಯಿಂದ ಇತ್ತೀಚೆಗಿನ ವರ್ಷಗಳಲ್ಲಿ ಅವುಗಳ ಚಲನವಲನಗಳು ದಾಖಲೆಯಾಗಿರುವುದರಿಂದಾಗಿ ಅವುಗಳ ಬಗೆಗೆ ಹೆಚ್ಚಿನ ಅಧ್ಯಯನ ಸಾಧ್ಯವಾಗುತ್ತಿದೆ.

ನಮ್ಮ ದೇಶದಲ್ಲಿ ಇವುಗಳ ಆವಾಸಸ್ಥಾನವಾದ ಮಳೆಕಾಡುಗಳ ವಿಸ್ತೀರ್ಣ ಕ್ಷೀಣಿಸುತ್ತಿದೆಯಾದರೂ ಅವುಗಳು ಕಾಡಿಗೆ ಹೊಂದಿಕೊಂಡಂತಿರುವ ನೆಡುತೋಪುಗಳಲ್ಲಿ ಸಹಾ ನೆಲೆಯನ್ನು ಕಂಡುಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಜೀವವಿಜ್ಞಾನಿಗಳು ಹೇಳುತ್ತಾರೆ.  

ಇಂತಹ ಅಪರೂಪದ ಜೀವಿಯೊಂದನ್ನು ಉಳಿಸಿಕೊಳ್ಳುವ ಹೊಣೆ ನಮ್ಮದು.

 

 https://www.naturelyrics.com/pages/search_image_library.php?keyword_tokens=dracಈ ಲಿಂಕ್‍ನಲ್ಲಿ ಗಣೇಶರವರು ತೆಗೆದ ಹಾರುವ ಓತಿಯ ಫೋಟೋಗಳಿವೆ.

ಮಾಹಿತಿ ಕೃಪೆಗಣೇಶ್ ಹೆಚ್ ಶಂಕರ್,

https://animaldiversity.org

https://www.britannica.com

https://en.wikipedia.org/wiki/Draco_dussumieri

https://www.theanimalfacts.com

2 comments:

  1. ಹಾರುವ ಓತಿಗಳ ಈ ಲೇಖನವು ಸೊಗಸಾಗಿದೆ. ಧನ್ಯವಾದಗಳು.

    ReplyDelete