ಮೇ ತಿಂಗಳಲ್ಲಿ ಊರಿಗೆ ಹೋಗಿದ್ದಾಗ ಬೆಳಗ್ಗೆ ಸಿಮೆಂಟ್ ರಸ್ತೆಯಲ್ಲಿ ಅಲೆಯುತ್ತಿರುವಾಗ ಅಂದರೆ ವಾಕಿಂಗ್ ಮಾಡುವಾಗ ಒಂದು ಕಡೆ ಗುಯ್ ಎಂಬ ಶಬ್ದ ಕೇಳಿಸಿತು. ಹೀಗೆ ಶಬ್ದ ಕೇಳಿಸುವುದೇನು ಹೊಸದಲ್ಲ. ಜೇನು ಗೂಡು ಇರುವಲ್ಲಿ, ಅಥವಾ ಅವುಗಳು ಗುಂಪಾಗಿ ಹಾರುವಾಗ ಹೀಗೆ ಶಬ್ದ ಬರುತ್ತದೆ. ಆದರೆ ಅಲ್ಲಿ ನೆಲದಿಂದ ಶಬ್ದ ಬರುತ್ತಿತ್ತು, ಅದು ಸ್ವಲ್ಪ ವಿಚಿತ್ರ ಎನ್ನಿಸಿ ನೋಡಿದರೆ, ನೆಲದ ತುಂಬ ಪುಟ್ಟ ಪುಟ್ಟ ಬಿಳಿ ಹೂವುಗಳ ಹಾಸು... ಆ ಹೂವುಗಳಿಗೆ ಮುತ್ತಿರುವ ಜೇನುನೊಣಗಳು.
ಅಲ್ಲೇ ರಸ್ತೆ ಬದಿಯಲ್ಲಿ ಇರುವ ನಂದಿ ಮರದಲ್ಲಿ ಎಲೆಗಳು ಕಾಣಿಸದಷ್ಟು ಅರಳಿರುವ ಬಿಳಿ ಹೂವುಗಳನ್ನೂ ಮುತ್ತಿರುವ ಜೇನುಗಳ ಝೇಂಕಾರವು ಜೊತೆಗೆ ಕೇಳಿಬಂತು.
ನಂದಿ ಮರದ ಹೂವು ಇಷ್ಟು ಚೆಂದವಿದೆಯೆಂಬುದನ್ನು ಹಿಂದೆಂದೂ ಗಮನಿಸಿಯೇ ಇರಲಿಲ್ಲ. ಈಗ ಚೆಂದದ ಹೂವುಗಳೂ ಮತ್ತು ಅದಕ್ಕೆ ಮುತ್ತಿರುವ ಜೇನುಗಳನ್ನು ನೋಡಿ ಒಮ್ಮೆಲೇ ಆ ಮರದ ಮೇಲೆ ಪ್ರೀತಿ ಹುಟ್ಟಿಬಿಟ್ಟಿತು. ಕೆಳಗೆ ಉದುರಿರುವ ಹೂವುಗಳ ಮಕರಂದವು ವ್ಯರ್ಥವಾಗಲು ಬಿಡದೆ ಅಲ್ಲಿಯೂ ಜೇನುಗಳು ಮುತ್ತಿದ್ದವು. ಬಿಸಿಲೇರಿದ ಹಾಗೆ ಕೆಳಗೆ ಬಿದ್ದ ಹೂಗಳು ಬಾಡಿ ಜೇನು ನೊಣಗಳು ಮತ್ತೆ ಮರದಲ್ಲಿರುವ ಹೂಗಳ ಬಳಿ ಹಾರಿದವು. ಮಧ್ಯಾಹ್ನದ ವೇಳೆಗೆ ಅಲ್ಲಿ ಬೆಳಗ್ಗೆ ಅಷ್ಟೆಲ್ಲ ವಿದ್ಯಮಾನ ನಡೆದಿದ್ದೆ ಸುಳ್ಳೇನೋ ಎಂಬಂತೆ ಹೂವುಗಳು ಬಿದ್ದ ಕುರುಹು ಕೂಡ ಇರಲಿಲ್ಲ.
ಬಾಡಿದ ಹೂವು ಮಣ್ಣಿನಲ್ಲಿ ಸೇರಿಹೋಗಿತ್ತು. ಪ್ರಕೃತಿಯಲ್ಲಿ ಯಾವುದೂ ಕಸವಲ್ಲ. ಕೆಳಗೆ ಬಿದ್ದಿರುವ ಹೂಗಳಲ್ಲೂ ಮಕರಂದ ಹುಡುಕಿ ಹೀರಿದ ಜೇನುಗಳನ್ನು ನೋಡಿ ಖುಷಿಯಾಯ್ತು. ಪ್ರಕೃತಿ ಹೇಳುವ ಪಾಠಗಳನ್ನು ಕೇಳುವ ಮನಸ್ಸಿದ್ದರೆ ಮಾನವ ಜನಾಂಗ ಇನ್ನೂ ನೆಮ್ಮದಿಯಿಂದ ಇರಬಹುದಾಗಿತ್ತು ಅಲ್ಲವೇ.
ಈ ನಂದಿ ಮರವೊಂದು ಸ್ವಲ್ಪ ವಿಚಿತ್ರವಾದ ಮರ. ಅದರ ಕಾಂಡ ಉಳಿದ ಮರಗಳ ಕಾಂಡದಂತೆ ಕಂದು ಬಣ್ಣದಲ್ಲಿರುವುದಿಲ್ಲ. ಬದಲಾಗಿ ಬಿಳಿಯಾಗಿರುತ್ತದೆ. ಅದರ ತೊಗಟೆಗಳು ಆಗ್ಗಾಗ್ಗೆ ಕಳಚಿ ಬೀಳುತ್ತಿರುತ್ತವೆ. ಊರಿನಲ್ಲಿ ನಮ್ಮ ಮನೆಯ ಎದುರು ಒಂದಿಷ್ಟು ಮರಗಿಡಗಳಿವೆ. ಅವುಗಳ ಮಧ್ಯೆ ನಂದಿ ಮರವೂ ಇದೆ. ಊರಿನಲ್ಲಿರುವಾಗ ಮನೆ ಹೊರಗಿನ ಸೋಮಾರಿ ಕಟ್ಟೆಯ ಮೇಲೆ ಕುಳಿತು ಈ ಮರಗಿಡಗಳನ್ನು ಆಕಾಶವನ್ನೂ ನೋಡುತ್ತಾ ಗಂಟೆಗಟ್ಟಲೇ ಕುಳಿತಿರುತ್ತಿದ್ದ ನನ್ನ ಕಣ್ಣಿಗೆ ಈ ನಂದಿ ಮರ ಒಮ್ಮೊಮ್ಮೆ, ಎಲ್ಲರೊಳಗೊಂದಾಗದೆ ತಾನೇನೋ ಬೇರೆಯೆಂದು ಭಾವಿಸುವ ಅಹಂಕಾರಿಯಂತೆಯೂ, ಇನ್ನೂ ಕೆಲವೊಮ್ಮೆ ಪಾಂಡುರೋಗ ಬಂದು ಬಿಳುಚಿಹೋಗಿ ದುಃಖದಿಂದ ನಿಂತಿರುವ ಪಾಪದ ಪ್ರಾಣಿಯಂತೆಯೂ ಕಾಣಿಸುತಿತ್ತು. ಉಳಿದೆಲ್ಲ ಮರಗಳೂ ಹಸಿರುಬಣ್ಣದ ಕೆನೊಪಿ ಮತ್ತು ಕಂದು ಬಣ್ಣದ ಕಾಂಡವನ್ನು ಹೊಂದಿದ್ದರೆ ಈ ನಂದಿಮರವೊಂದು ಬಿಳಿಬಣ್ಣದ ಕಾಂಡ ಹೊಂದಿ, ಯೂನಿಫಾರಂ ಧರಿಸಿರುವ ಮಕ್ಕಳ ನಡುವೆ ಯೂನಿಫಾರಂ ಧರಿಸದೆ ಬಂದಿರುವ ಮಗುವೊಂದರಂತೆ ಕಾಣಿಸುತ್ತಿತ್ತು. ಕತ್ತಲಾಗುತ್ತಿದ್ದಂತೆ ಉಳಿದೆಲ್ಲ ಮರಗಳು ಆ ಕತ್ತಲಲ್ಲೊಂದಾಗಿ ಮಾಯವಾದರೆ ಈ ನಂದಿ ಮರ ಮಾತ್ರ ಬೆಳ್ಳಗೆ ಕತ್ತಲಿಂದೆದ್ದು ಬಂದ ಭೂತದಂತೆ ನಿಂತಿರುತ್ತಿತ್ತು. ಅದರ ವಿಚಿತ್ರ ರೂಪಿನಿಂದಾಗಿ ನನಗೆಂದೂ ಆ ಮರ ಇಷ್ಟವಾಗುತ್ತಿರಲಿಲ್ಲ. ಆದರೆ ಅದರ ಕೆಳಗೆ ಬಿದ್ದಿರುತ್ತಿದ್ದ ಅದರ ಕಾಯಿಗಳನ್ನು ಜುಮಕಿಯಂತೆ ಕಿವಿಗೆ ಸಿಕ್ಕಿಸಿಕೊಂಡು ಆಟವಾಡುವಾಗಲೊಂದೇ ಆ ಮರ ಸ್ವಲ್ಪ ಇಷ್ಟವಾಗುತ್ತಿತ್ತು.
Lagerstroemia microcarpa ಎಂಬ ಸಸ್ಯಶಾಸ್ತ್ರೀಯ ಹೆಸರಿನ ನಂದಿ ದಕ್ಷಿಣಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ದೊಡ್ಡ ಜಾತಿಯ ಮರ. ಸುಮಾರು ೨೫ ಮೀಟರ್ ಎತ್ತರ ಬೆಳೆಯಬಲ್ಲದು, ಇದರ ಚೌಬೀನೆಗಳನ್ನು ಕಿಟಕಿ ಬಾಗಿಲುಗಳು, ಪೀಠೋಪಕರಣಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
No comments:
Post a Comment