23 Apr 2010

ಹೀರೋಯಿನ್ಗೆ ಚಳಿಯಾಗಲ್ವ?

"ಅಮ್ಮ ಈ ಹೀರೋಯಿನ್ಗೆ ಚಳಿಯಾಗಲ್ವ " ಟಿವಿಯಲ್ಲಿ ಬರುತ್ತಿದ್ದ ಯಾವುದೋ ಸಿನೇಮಾದಲ್ಲಿ ಹಿಮಾಲಯದ ತಪ್ಪಲಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ನಾಯಕ ನಾಯಕಿಯರನ್ನು ನೋಡುತ್ತ ಕೇಳಿದಳು ಮಗಳು . ಅದನ್ನೇ ನೋಡುತ್ತಾ ಅರೆನಿದ್ರೆಗೆ ಜಾರಿದ್ದ ನನಗೆ ಸರಿಯಾಗಿ ಎಚ್ಚರವಾಗಿ ಏನು ಕೇಳಿದಳೆಂಬುದು ಅರ್ಥವಾಗದೆ ಪಿಳಿ ಪಿಳಿ ಕಣ್ಣು ಬಿಟ್ಟೆ.


ನನ್ನ ಕಿವಿಯ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಅರಿವಿರುವ ಅವಳು ಪುನಃ " ನೋಡಮ್ಮ ಅಲ್ಲಿ ಆ ಹೀರೋ ಪ್ಯಾಂಟ್, ಶರ್ಟ್, ಸ್ವೆಟರ್ , ಎಲ್ಲ ಹಾಕ್ಕೊಂಡಿದಾನೆ . ಆದರೆ ಹೀರೋಯಿನ್ ನೋಡು ಸ್ಲೀವ್ ಲೆಸ್ ಬ್ಲೌಸ್ ಹಾಕ್ಕೊಂಡು ತೆಳು ಸೀರೆ ಉಟ್ಟಿದಾಳೆ . ಪಾಪ ಅವಳಿಗೆ ಚಳಿಯಾಗಲ್ವ?" ಎಂದಳು .


"ಬಿಡು ಪುಟ್ಟ ಅವರೇನು ಹಾಗೇ ತುಂಬಾ ಹೊತ್ತು ಇರುವುದಿಲ್ಲ. ಶೂಟಿಂಗ್ ಮಾಡುವಾಗಷ್ಟೇ ಹಾಗಿರುತ್ತಾರೆ ,ಆಮೇಲೆ ಬೆಚ್ಚಗೆ ಬಟ್ಟೆ ಹಾಕ್ಕೋತಾರೆ " ಎಂದೇನೋ ಹೇಳಿ ಅವಳ ಸಮಸ್ಯೆ ಬಗೆಹರಿಸಿದೆ . ಆದರೆ ನನ್ನ ತಲೆಯಲ್ಲಿ ಹುಳ ಕೊರೆಯಲಾರಂಭಿಸಿತು.


ಹೌದಲ್ಲವೇ ಈ ದೃಶ್ಯ ಎಷ್ಟು ಕಾಮನ್ ಎಂದರೆ ನಮಗೇನೂ ಅನ್ನಿಸದೇ ಇರುವಷ್ಟು . ಅದೆಷ್ಟೇ ಮಳೆಯಿರಲಿ ಚಳಿಯಿರಲಿ ಇನ್ನುಳಿದ ಪಾತ್ರಗಳು ಸ್ವೆಟರ್ , ಶಾಲ್ ಗಳಲ್ಲಿ ಹುದುಗಿದ್ದರೂ ಹೀರೋಯಿನ್ ಮಾತ್ರ ಆದಷ್ಟೂ ಕಡಿಮೆ ಉಡುಗೆ ತೊಟ್ಟಿರುತ್ತಾಳೆ .


ಕೇವಲ ಸಿನೆಮಾ ಅಂತ ಅಲ್ಲ , ಇತ್ತೀಚೆಗೆ ನಡೆಯುವ ಸಿನೆಮಾ ಅವಾರ್ಡ್ ಫಂಕ್ಷನ್ , ಟಿವಿ ರಿಯಾಲಿಟಿ ಶೋಗಳು ಎಲ್ಲ ಕಡೆ ಅತೀ ಕನಿಷ್ಟ ಬಟ್ಟೆ ತೊಟ್ಟರಷ್ಟೇ ಪ್ರವೇಶವೇನೋ ಎನ್ನುವಂತೆ ಮಹಿಳಾಮಣಿಗಳಿರುತ್ತಾರೆ.


ಹಿಂದಿ ಚಾನಲ್ಲುಗಳಲ್ಲಂತೂ ಯಾವುದೇ ಅಡೇತಡೆಯೇ ಇಲ್ಲದೆ ಈ ಬಿಚ್ಚಮ್ಮಗಳ ದರ್ಬಾರ್ ನಡೆಯುತ್ತದೆ. ಯಾವುದೋ ಸೀರಿಯಲ್ ನಲ್ಲಿ ಮೈತುಂಬ ಬಟ್ಟೆ ತೊಟ್ಟ ಒಬ್ಬಳನ್ನು "ಬಹನ್ ಜೀ ಟೈಪ್" ಅಂತ ಗೇಲಿ ಮಾಡುವುದನ್ನು ನೋಡಿ ಎಲ್ಲಿಗೆ ಬಂತು ಪರಿಸ್ಥಿತಿ ಅಂತ ಆಶ್ಚರ್ಯ ಪಟ್ಟಿದ್ದೇನೆ.

ಜಾಹೀರಾತುಗಳಲ್ಲಂತೂ ಕೇಳುವುದೇ ಬೇಡ. ಗಂಡಸರ ಬನಿಯನ್ ಆಡ್ ಆದರೂ ಅಲ್ಲೊಬ್ಬ ತುಂಡುಡುಗೆಯ ಚೆಲುವೆ ಇರಲೇಬೇಕು.

ಪತ್ರಿಕೆಗಳೇನೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ . ಪಕ್ಕಾ ಕೌಟುಂಬಿಕ ವಾರಪತ್ರಿಕೆಗಳೆನ್ನಿಸಿಕೊಂಡಿದ್ದ ಸುಧಾ ತರಂಗ ಮೊದಲಾದವೂ ಕೂಡ ಈಗ ಸುದ್ದಿಸ್ವಾರಸ್ಯದ ನೆಪದಲ್ಲೋ, ಸಿನೆಮಾಸುದ್ದಿಯ ನೆಪದಲ್ಲೋ ,ಒಂದೆರಡಾದರೂ ಗರಮಾ ಗರಂ ಫೋಟೊ ಹಾಕದೇ ಹೊರಬರುವುದಿಲ್ಲ. ಇನ್ನು ಕೆಲ ಇಂಗ್ಲೀಷ್ ಪೇಪರ್ ಗಳ ಸಪ್ಲಿಮೆಂಟ್ ಇರುವುದೇ ಹೆಣ್ಣುಗಳ ಅರೆಬೆತ್ತಲೆ ಚಿತ್ರ ಪ್ರಕಟಿಸುವುದಕ್ಕೆಂಬಂತಿರುತ್ತವೆ .

ಈ ಹೆಣ್ಣುಗಳಾದರೂ ಏನು ಸಾಧಿಸಲು ಹೊರಟಿದ್ದಾರೆಂಬುದೇ ಅರ್ಥವಾಗುವುದಿಲ್ಲ. ಯಾರಿಗಾದರೂ ಸೆಕ್ಸಿ ಅಂದರೆ ಅಶ್ಲೀಲ ಬಯ್ಗುಳವೆಂಬಂತೆ ನೊಂದುಕೊಳ್ಳುವ ಕಾಲವೊಂದಿತ್ತು . ಆದರೀಗ ಅದು ಅತಿ ದೊಡ್ಡ ಕಾಂಪ್ಲಿಮೆಂಟ್ ಎನ್ನಿಸಿಕೊಳ್ಳುತ್ತಿದೆ. ಆಕರ್ಷಣೀಯವಾಗಿರಬೇಕೆಂಬುದು ಹೆಣ್ಣಿನ ಪುರಾತನ ಆಸೆ . ಆದರೆ ಅದು ಸಭ್ಯತೆಯ ಎಲ್ಲೆ ಮೀರದಂತಿದ್ದರೆ ಒಳ್ಳೆಯದಲ್ಲವೆ?

ಶತಮಾನಗಳ ಹಿಂದೆ ನಡೆಯುತ್ತಿದ್ದ ಹೆಣ್ಣಿನ ಶೋಷಣೆಯ ಬಗ್ಗೆ ಹೋರಾಡುವ ಮಹಿಳಾವಾದಿಗಳ ಕಣ್ಣಿಗೆ ಇದು ಶೋಷಣೆಯಾಗಿ ಕಾಣದಿರುವುದು ಆಶ್ಚರ್ಯ. ಹೆಣ್ಣು ಇಂದಿಗೂ ಗಂಡಿನ ಕಣ್ಣಿಗೆ ಭೋಗವಸ್ತುವಾಗೇ ಕಾಣುತ್ತಾಳೆ . ಅದಕ್ಕೆ ಅಧುನಿಕತೆಯ ಮುಖವಾಡ ತೊಡಿಸಲಾಗಿದೆ ಅಷ್ಟೇ.

ನಾಲ್ಕು ವರ್ಷದ ಹಸುಗೂಸು ಕೂಡ ಲೈಂಗಿಕ ಅತ್ಯಾಚಾರಕ್ಕೊಳಗಾಗುವುದರ ಹಿಂದೆ ಇಂತಹ ಉದ್ರೇಕಕಾರಿ ಬಟ್ಟೆಗಳ ಪಾತ್ರವೂ ಇದೆಯೆನ್ನಿಸುತ್ತದೆ. ಫ್ಯಾಷನ್ ಹೆಸರಲ್ಲಿ ಏನೋ ಮಾಡಲು ಹೋಗಿ ತನ್ನನ್ನೇ ಅಪಾಯಕ್ಕೊಡ್ಡಿಕೊಳ್ಳುವ ಮಹಿಳೆ ಎಂದಿಗೆ ಎಚ್ಚೆತ್ತುಕೊಳ್ಳುವುದು?

19 comments:

  1. ನಿಜವಾಗಲೂ ನೀವು ಹೇಳಿದ್ದು ಗಂಭೀರವಾದ ಸಂಗತಿ.ಫ್ಯಾಶನ್ ನೆಪದಲ್ಲಿ ಜಗತ್ತು ತುಂಬಾ ಬದಲಾಗಿಬಿಟ್ಟಿದೆ...

    ReplyDelete
  2. This comment has been removed by the author.

    ReplyDelete
  3. ಅಬ್ಬಾ, ಈಗ್ಲೂ ಹೀಗೆ ಯೋಚಿಸುವ ಬುದ್ಧಿವಂತ ಹೆಣ್ಮಕ್ಳು ಇದ್ದಾರಲ್ಲ ಅನ್ನೋದೇ ಸಂತೋಷ!

    "ಹೆಣ್ಣಿನ ಶೋಷಣೆಯ ಬಗ್ಗೆ ಹೋರಾಡುವ ಮಹಿಳಾವಾದಿಗಳ ಕಣ್ಣಿಗೆ ಇದು ಶೋಷಣೆಯಾಗಿ ಕಾಣದಿರುವುದು ಆಶ್ಚರ್ಯ."

    ಇದೆಲ್ಲಾ ಕಾಣೋಲ್ಲ ಅವರಿಗೆ, ಯಾಕಂದ್ರೆ ಇದರ ಹಿಂದೆ ಸಿಕ್ಕಾಪಟ್ಟೇ ದುಡ್ಡಿರತ್ತಲ್ಲ. ಒಳ್ಳೆಯ ಹಣ ಇರುವ ಕಡೆ ಶೋಷಣೆ ಅನ್ನಿಸಲ್ಲ. ಅದು ಆರ್ಥಿಕ ಸ್ವಾತಂತ್ರ್ಯ, ಲೈಫ್ ಸ್ಟೈಲು ಅನ್ನಿಸಿಕೊಳ್ಳತ್ತೆ. ಇಂತಹ ವಾತಾವರಣ ಇರಲು ಬಿಟ್ಟು ಹೆಣ್ಣು ಭೋಗದ ವಸ್ತು ಅಲ್ಲ ಅಲ್ಲ ಅಂತ ಎಷ್ಟೇ ಬೊಂಬಡ ಹೊಡೆದುಕೊಂಡರೂ ಮಾಧ್ಯಮ, ಪತ್ರಿಕೆಗಳಲ್ಲಿ ಇದನ್ನೇ ನೋಡಿಕೊಂಡು ಬೆಳೆದ ಮಕ್ಕಳಿಗೆ ಹೆಣ್ಣು ಅಂದ್ರೆ ಭೋಗದ ವಸ್ತುವೇ ಅಂತ ಮನಸ್ಸಲ್ಲಿ ಕೂರತ್ತೆ. ಹೆಣ್ಣು ಹಣಕ್ಕೆ ಸಿಗುತ್ತೆ ಅಂತ ಆದ್ಮೇಲೆ ಎಲ್ಲಿಂದ ಬರ್ಬೆಕು ಗೌರವ! ನಮ್ಮ ಪತ್ರಿಕೆ, ಮಾಧ್ಯಮಗಳಲ್ಲೇ ಹೆಣ್ಣಿನ ಶೋಷಣೆ, ದೌರ್ಜನ್ಯ ಅಂತ ಹೋರಾಟ ಮಾಡುವ ಎಷ್ಟು ಜನರಿಲ್ಲ ಹೇಳಿ. ಅವರು ತಮ್ಮದೆ ಪತ್ರಿಕೆಯಲ್ಲಿ ಬರುವ ಇಂತಹ ವಿಷಯಗಳ ಬಗ್ಗೆ ವಿರೋಧವನ್ನೇ ಮಾಡಲ್ಲ.!!

    ReplyDelete
  4. ನಿಜವಾಗಲೂ ವಿಚಾರಪೂರ್ಣ ವಿಷಯ,ಚೆನ್ನಾಗಿ ವಿಶ್ಲೇಷಿದ್ದೀರಿ.

    ಫಸ್ಟ್ ನಂಗೆ ನೆನಪಾದ್ದು ನನ್ನ ಮಗಳು, ಮೊನ್ನೆ ಅಪರೂಪಕ್ಕೆ ಕನ್ನಡದ 'ಗಜ' ಸಿನೆಮಾ ನೋಡುತ್ತಿದ್ದೆವು, ಅದರಲ್ಲಿ ಕತ್ತಿ- ದೊಣ್ಣೆಗಳ ಸೀನು ಸ್ವಲ್ಪ ಜಾಸ್ತೀನೆ ಇತ್ತು..ತಕ್ಷಣ ನನ್ನ ಮಗಳು 'ಅಮ್ಮ ಅಲ್ಲಿ ಏನು ಪೋಲಿಸರೇ ಇಲ್ವಾ?' ಎಂದು ಕೇಳಿದಳು..ಮತ್ತೆ ಅದು ಸಿನೆಮಾ, Nothing is real ಅಂತ ಹೇಳಿದ್ದಕ್ಕೆ..ಆಮೇಲೆ ಪ್ರತಿ ಸೀನಿಗೂ Is it real? ಅಂತ ಕೇಳ್ತಿದ್ಲು!!

    ಇನ್ನೊಂದು ಸಂಗತಿ ನಂಗೆ ನೆನಪಾಗುವುದು ' ಮೈಸೂರಿನಲ್ಲಿದ್ದಾಗ (3 yrs back) ಆವಾಗ low waist pant ಮತ್ತು short topsನ ಫ್ಯಾಶನ್ ಕಾಲ!!!!..ಮೈಸೂರಿನ ಪ್ರತಿಷ್ಟಿತ ಅರಸ್ ರೋಡ್ ನ ಎಲ್ಲ ಶಾಪ್ಗಳಿಗೆ ಹೋಗಿ
    ನಂಗೆ Normal waistನ ಪ್ಯಾಂಟ್ ಬೇಕು ಎಂದು ಕೇಳಿದ್ರೆ ಎಲ್ಲ ಅಂಗಡಿ ಯವರು ನನ್ನನ್ನು ಮೇಲಿನಿಂದ ಕೆಳಗೆವರೆಗೆ ನೋಡಿ, ಕೊನೆಗೆ 'ಅದು ಇಲ್ಲ ಮೇಡಂ ' ಅಂತಿದ್ರು..ಒಂದು ಶಾಪ್ ನವನಂತೂ 'ಮೇಡಂ ಅದು ಬರೀ ಅಜ್ಜಿ ಗಳು ಹಾಕೋದ್' ಅನ್ನುಬಿಡೋದೇ..ಹೀಗಿದೆ ಫ್ಯಾಶನ್!!!

    ReplyDelete
  5. ವಿಷಯವನ್ನು ತುಂಬಾ ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ್ದೀರಿ .ಅಭಿನಂದನೆಗಳು .ಸಧ್ಯದ ಪರಿಸ್ಥಿತಿಯಲ್ಲಿ ಹೀರೋಯಿನ್ ಗಳು ಕಡಿಮೆ ಬಟ್ಟೆ ಧರಿಸಿದರೆ ಮಕ್ಕಳ ಎದುರಿಗೆ ನಾವು ನಡುಗಬೇಕು !ನನ್ನ ಬ್ಲಾಗಿಗೆ ಭೇಟಿ ಕೊಡಿ .ನಮಸ್ಕಾರಗಳು.

    ReplyDelete
  6. ಈ ಪಿಡುಗು ಕೇವಲ ಸಿನೆಮಾ ಮತ್ತು ಟೀವಿಗಳಿಗೆ ಮಾತ್ರ ಮೀಸಲಾಗಿ ಉಳಿದಿಲ್ಲ. ಟೀವಿಯಲ್ಲಿ ಜರ್ಮನಿಯ ಯಾವುದೋ ಒಂದು ಸುದ್ದಿಯನ್ನು ನೋದುತ್ತಿದ್ದೆ. ಅಲ್ಲಿಯ ರೇಲ್ವೆ ನಿಲ್ದಾಣದ ದೃಶ್ಯ ನೋಡಿ ಅವಾಕ್ ಆದೆ. ಗಂಡು ಪ್ರಯಾಣಿಕರೆಲ್ಲರೂ ಫುಲ್ ಸೂಟಿನಲ್ಲಿದ್ದರೆ,
    ಹೆಣ್ಣು ಪ್ರಯಾಣಿಕರೆಲ್ಲರೂ ತುಂಡುಡುಗೆಯವರೆ! ಗಂಡಸಿನ ಕಣ್ಣು ಸೆಳೆಯುವದೇ ತನ್ನ ಆದ್ಯ ಕರ್ತವ್ಯ ಎನ್ನುವ ಈ ಭಾವನೆ ಪಾಶ್ಚಿಮಾತ್ಯ ಸ್ತ್ರೀಯರಲ್ಲಿ ಇರಬಹುದು. ನಮ್ಮಲ್ಲಿ ಹಾಗಾಗದಿರಲಿ ಎಂದು ಹಾರೈಸುತ್ತೇನೆ.

    ReplyDelete
  7. ಭೂರಮೆ....

    ಇದು ಕೇವಲ ಸಿನೇಮಾಕ್ಕೊಂದೇ ಅಲ್ಲ...
    ಟಿವಿ ಸೀರಿಯಲ್ಲುಗಳಲ್ಲು ಇದೆ...
    ಇಷ್ಟೇ ಅಲ್ಲ...

    ಕಳೆದ ತಿಂಗಳು ಸಿರ್ಸಿ ಜಾತ್ರೆಗೆ ಹೋಗಿದ್ದೆ...
    ಗೆಳೆಯರೆಲ್ಲ ಸೇರಿ ಒಂದು ನಾಟಕಕ್ಕೆ ಹೋಗಿದ್ದೇವು...

    ಅಲ್ಲಿ ಸಿನೇಮಾದವರನ್ನೂ ನಾಚಿಸುವಂಥಹ ತುಂಡು ಉಡುಗೆಯನ್ನು ಧರಿಸಿದ್ದರು...!!

    ಇಂಥಹ ತುಂಡು ಉಡುಗೆಯನ್ನು..
    ನೋಡಿ.. ನೋಡಿ ...
    ಇನ್ನು ಮುಂದೆ ಅದರಲ್ಲಿ ಏನೂ ವಿಶೇಷತೆ ಇಲ್ಲ ಅಂತ ಅನ್ನಿಸಿಬಿಡ ಬಹುದಾ ?

    ಬಹಳ ಸುಂದರವಾಗಿ ವಿಶ್ಲೇಷಿಸಿದ್ದೀರಿ...
    ಅಭಿನಂದನೆಗಳು...

    ReplyDelete
  8. ಎಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.

    -ನಿಜ ಗೌತಮ್ ಫ್ಯಾಷನ್ ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಆದರೆ ಹಿಂದೆಂದಿಗಿಂತಲೂ ಅದೀಗ ಅಧೋಗತಿಗಿಳಿದಿದೆಯೆನ್ನಿಸುತ್ತಿದೆ.

    -ವಿ.ರಾ.ಹೆ ಬುದ್ಧಿವಂತ ಹೆಣ್ಮಕ್ಕಳು ಬೇಕಾದಷ್ಟು ಜನ ಇದ್ದಾರೆ . ಆದರೆ ಹೀಗಿರುವವರನ್ನು ಅನಾಗರಿಕರಂತೆ ನೋಡುವವರೇ ಹೆಚ್ಚಿರುವಾಗ ಬುಧ್ಧಿಯಿದ್ದರೂ ಇಲ್ಲದವರಂತೆ ವರ್ತಿಸುತ್ತಾರೆ.ನೀವೆಂದಂತೆ ಇಂತಹ ವಾತಾವರಣದಲ್ಲಿ ಮಕ್ಕಳಿಗೆ ಹೆಣ್ಣೆಂದರೆ ಭೋಗವಸ್ತುವೆಂಬ ಸಂದೇಶವೇ ತಲುಪುವುದು. ಇನ್ನು ಪತ್ರಿಕೆಗಳನ್ನು , ಪತ್ರಕರ್ತರನ್ನೂ ನಂಬುವ ಪರಿಸ್ಥಿತಿಯೇ ಇಲ್ಲ ಬಿಡಿ . ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದೇ ಅರಿಯುತ್ತಿಲ್ಲ ಅವರಿಗೆ. ಇಂತಹ ವೇಳೇಯಲ್ಲಿ ನಮ್ಮ ಹೆಣ್ಣುಮಕ್ಕಳು ಎಚ್ಚೆತ್ತುಕೊಳ್ಳುವುದೊಂದೇ ಮಾರ್ಗ.

    ReplyDelete
  9. ವನಿತಾ ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅನುಭವ ನನಗೂ ಆಗಿದೆ ಮಗಳಿಗೆ ಬಟ್ಟೆ ತೆಗೆದುಕೊಳ್ಳಲು ಹೋದರೆ ಹೆಚ್ಚಿನ ಕಡೆಗೆ ಮಿನಿ ಮಿಡಿಗಳು , ಶಾರ್ಟ್ ಟಾಪ್ ನಂತಹ ಬಟ್ಟೆಗಳೇ ಸಿಗುವುದು .
    ಹೆಚ್ಚಿನ ಮಕ್ಕಳು ಅಂತಹ ಬಟ್ಟೆಗಳನ್ನೇ ಹಾಕಿಕೊಳ್ಳುತ್ತಾರಲ್ಲ! ಆದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂದಹಾಗೆ ಚಿಕ್ಕವರಿದ್ದಾಗಲೇ ತಾಯಂದಿರು ಮಕ್ಕಳಿಗೆ ಸಭ್ಯ ಉಡುಗೆ ತೊಡುವುದನ್ನು ಕಲಿಸಿದರೆ ಒಳ್ಳೆಯದಲ್ಲವೇ.

    ReplyDelete
  10. ಕೃಷ್ಣಮೂರ್ತಿಯವರೇ ಧನ್ಯವಾದಗಳು . ನಿಮ್ಮ ಬ್ಲಾಗ್ ಓದಿದ್ದೇನೆ.ಚೆನ್ನಾಗಿ ಬರೆಯುತ್ತೀರಿ.

    -ಸುನಾಥ ಕಾಕ ನಿಜ ನಿಮ್ಮ ಮಾತು ಈ ತುಂಡುಡುಗೆ ಪಾಶ್ಚಿಮಾತ್ಯರ ಕೊಡುಗೆಯೆ . ಅಲ್ಲಿಯ ಚಳಿಯ ವಾತಾವರಣದಲ್ಲೂ ಅಂತಹ ಬಟ್ಟೆ ಅತಿರೇಕವೇ ಸರಿ. ಅವರನ್ನೇ ಅಂಧಾನುಕರಣೆ ಮಾಡುವ ನಮ್ಮ ಜನರ ಗುಲಾಮ ಮನಸ್ಥಿತಿಗೆ ಬೇಸರವಾಗುತ್ತದೆ.

    -ಪ್ರಾಕಾಶಣ್ಣ ಈ ಪಿಡುಗು ಕೇವಲ ಮಾಧ್ಯಮಗಳಿಗಷ್ಟೇ ಅಲ್ಲ ನಮ್ಮ ಸಮಾಜದ ನಡುಮನೆಗೇ ಬಂದು ಕುಳಿತಿದೆಯಲ್ಲ ಇದು ಆತಂಕಕಾರಿಯೆನ್ನಿಸುತ್ತಿದೆ.

    ReplyDelete
  11. ಸುಮಾರವರೇ ಲೇಖನ ಚೆನ್ನಾಗಿದೆ. ನಮ್ಮ ಟಿವಿ ರಿಯಾಲಿಟಿ ಶೋಗಳಲ್ಲಿ ಸೆಕ್ಸಿ ಎನಿಸಿಕೊಳ್ಳುವದು ಒ೦ದು ಗೌರವದ ಮತ್ತು ಹೆಮ್ಮೆಯೆಯ ವಿಚಾರ ಎ೦ಬ೦ತೆ ಬಿ೦ಬಿಸುತ್ತಿದ್ದಾರೆ. ಚಿತ್ರಗಳಲ್ಲ೦ತೂ ಕೇಳುವದೇ ಬೇಡ!
    ಒಳ್ಳೆ ವಿಚಾರದ ಲೇಖನ. ತಮ್ಮ ಬ್ಲೊಗ್-ಚಟುವಟಿಕೆ ಯಾಕೋ ಕಡಿಮೆಯಾಗಿದೆ ಇತ್ತೀಚೆಗೆ.ನಾಗ೦ದಿಗೆಯಲ್ಲೂ ವಾರಕ್ಕೊ೦ದು ಏರಿಸುವ ಭರವಸೆ ಹುಸಿಮಾಡಿದ್ದರೆ ತಮ್ಮವರು!

    ReplyDelete
  12. ಹೀರೋಯಿನ್ಗೆ ಚಳಿಯಾಗಲ್ವ !
    ಹ್ಹ ಹ್ಹ ಹ್ಹ ಈ ನಿಮ್ಮ ಶೀರ್ಷಿಕೆಯ ಬಗ್ಗೆ ನಾನು ಚಿಕ್ಕವನಿದ್ದಾಗ ತುಂಬಾ ಯೋಚಿಸಿದಿನಿ !
    ಉತ್ತಮವಾದ ವಿಷಯದ ಬಗ್ಗೆ ಬರ್ದಿದಿರಾ ತುಂಬಾ ಇಷ್ಟ ಆಯ್ತು,
    ನಿಜ ಹೇಳ್ಬೇಕು ಅಂದ್ರೆ ನಮ್ಮ ಸಂಸ್ಕೃತಿ ನಮ್ಮ ಉಡುಗೆ ತೊಡುಗೆ ಸದ್ಯಕ್ಕೆ ಎಲ್ಲೋ ಇಲ್ಲಾ ಅನಿಸುತ್ತೆ !
    ಮೊನ್ನೆ ನಮ್ಮ ಫ್ರೆಂಡ್ ಊರಿಗೆ ಜಾತ್ರೆ ಇದೇ ಅಂತ ಹೋದಾಗ ನಾನು ಅನ್ಕೊಂಡಿದ್ದೆ ಹಳ್ಳಿ ಹುಡುಗಿರು "ಲಂಗ ದಾವಣಿ" ಹಕೊಂಡಿರ್ತರೆ ಅಂತ ಗೆಳೆಯರ ಜೊತೆ ಊರೆಲ್ಲ ಸುತ್ತಿದರು ಒಂದು ಲಂಗ ದಾವಣಿನೂ ಕಾಣಲಿಲ್ಲ ರೀ ಈ ಕಣ್ಣುಗಳಿಗೆ ಯೆಲ್ಲಿ ನೋಡಿದರು ಜೆನ್ಸ್ ಪ್ಯಾಂಟ್ ಪುಣ್ಯಕ್ಕೆ "ಲೋ ಮಗ ಆ ಹುಡುಗಿಗೆ ಚಳಿಯಾಗಲ್ವೇನೋ" ಅನ್ನೋ ಡೈಲಾಗ್ ಕೇಳೋ ಅಂತ ಪರಿಸ್ತಿತಿ ಇರ್ಲಿಲ್ಲ ಹ್ಹ ಹ್ಹ ಹ್ಹ

    ನಿಮ್ಮ ಲೇಖನ ಓದಿ ನನಗೆ ಅಮ್ಮ ಹೇಳ್ತಾ ಇದ್ದ ಹಾಡು ನೆನಪಾಯ್ತು ನೋಡಿ "ಇದೇನು ಸಭ್ಯತೆ ಇದೇನು ಸಂಸ್ಕೃತಿ"

    ReplyDelete
  13. ನಮಸ್ಕಾರ,
    ಸಮಾಜದ ಸ್ವಾಸ್ಥ್ಯಕ್ಕೆ ಕೇವಲ ಕಾನೂನು ಸುವ್ಯವಸ್ಥೆ ಸಾಕೆ? ಮೊರಲ್ ಪೋಲಿಸಿಂಗು ಬೇಕೇ?
    ಸ್ವಲ್ಪ ರೆಗ್ಯುಲೆಶನ್ ಇದ್ದರೆ ಈ ಹಂತಕ್ಕೆ ಬರುತ್ತಿರಲಿಲ್ಲ ಅಲ್ಲವೇ?. ಕೆಲವು ಕಾನೂನು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗದೆ
    ಈ ರೀತಿ ಆಗುತ್ತಿದೆ. ಕಾನೂನಿಗೆ ಎಲ್ಲ ಕ್ಷೇತ್ರಗಳನ್ನು ಸಮರ್ಪಕವಾಗಿ ನಿಭಾಯಿಸುವ ವಿಸ್ತಾರವಿಲ್ಲ. ನಮ್ಮ ಮಾಧ್ಯಮಗಳು, ಸಿನಿಮಾ ಪತ್ರಿಕೆ ಎಲ್ಲವೂ teanagers ಮತ್ತು ಪಡ್ಡೆ ಹುಡುಗರ ಕೈಯಲ್ಲಿ ಸಿಕ್ಕಿದೆ. ಈ ಮೊರಲ್ ರೆಗ್ಯುಲೆಶನ್ ನಮ್ಮ ಮಕ್ಕಳಿಗೆ ಮನೆಯಲ್ಲಿ ಇದ್ದರೂ ಸಾಕು.
    ತಾಯಂದಿರೆ ಈ ಜವಾಬ್ದಾರಿ ಹೊರಬೇಕಾಗಿದೆ. ಮಹಿಳೆಯರು ಅಧಿಕಾರ ಪಡೆದಮೇಲೆ ಇಂತಹ ಬದಲಾವಣೆ ಬರಬಹುದೇನೋ?
    ಯಾಕೆಂದರೆ ಪುರುಷರಲ್ಲಿ ಅದು ಶ್ರೀಮಂತ, ಅಧಿಕಾರ ವರ್ಗದಲ್ಲಿ ಚಪಲ ಹೆಚ್ಚು.
    ಪಾಶ್ಚಿಮಾತ್ಯರಲ್ಲಿ ಕೇವಲ ಸೌಂದರ್ಯ ಪ್ರದರ್ಶನ ಮಾತ್ರ ಉದ್ದೇಶ. ಇಲ್ಲಿ ಶೋಷಣೆಯ ಭಾವ ಇಲ್ಲ. ಅಮೆರಿಕಾದಲ್ಲಂತೂ ಮಹಿಳಾ ಪ್ರಾಬಲ್ಯ.
    ಆದರೆ ಭಾರತ ವಿಭಿನ್ನ ದೇಶ. ನಮ್ಮಲ್ಲಿ ಕಾನೂನು ಪಾಲನೆಯೂ ಇಲ್ಲ. ಹಾಗಾಗಿಯೇ ನೀವಂದಂತೆ ಭವಿಷ್ಯ ಭೀಕರ ಅನ್ನಿಸುತ್ತದೆ.
    ಕಡಿಮೆ ಬಟ್ಟೆ ತೊಟ್ಟವರನ್ನು ಕಂಡರೆ ಶುಧ್ಧ ಭಾವನೆ ಬರದು. ಗೌರವದ ಮಾತು ಆಮೇಲೆ. ಅಂತಹವರನ್ನು ಸಹೋದರಿ, ತಾಯಿ, ಮಗಳೇ ಎಂದು ಕರೆಯಲು ಸುಲಭವೇ?
    ಧರ್ಮ-ಸಂಸ್ಕ್ರುತಿಯೆಲ್ಲ ಮಾಯವಾಗಿ ಹೆಣ್ಣು - ಗಂಡು ಭೇದವು ಮರೆತು ಹೋಗಿರುವ ಈ ಕಾಲದಲ್ಲಿ ಇಂದ್ರಿಯಗಳು ದುರ್ಬಲವಾಗುವವರೆಗೆ
    ಅನುಭವಿಸಿ ನಾಸ್ತಿಕ ಜೀವನ ಬದುಕಿ ಒಂದು ದಿನ ಮಣ್ಣಾಗುವ ಸಮಾಜಕ್ಕೆ ಸಾತ್ವಿಕ ಭಾವನೆಗಳು ಹೇಗೆ ಪಥ್ಯವಾದೀತು?
    ಅನುಭವಿಸಿ ಬಸವಳಿದು ಬೆಂಡಾಗಿ ಶೂನ್ಯತ್ವ ಆವರಿಸಿ ಮುಂದೊಂದುದಿನ ಉದ್ದೀಪನ ಸೇವನೆಯೋ ಆತ್ಮಹತ್ಯೆಯೋ ದಾರಿ ಅನ್ನುತ್ತಿವೆ
    ಈ ಅಧುನಿಕ ಜಗತ್ತು. ಸೌಮ್ಯ ಶಬ್ದಗಳ ಬಳಕೆ ಹೆಚ್ಚು ಇದ್ದು ಕೆಟ್ಟ,ವಿಚಿತ್ರ ಕುತೂಹಲ ಮುಡದಂತೆ ಎಚ್ಚರ ವಹಿಸಿದರೆ ನಮ್ಮ ಮಕ್ಕಳನ್ನಾದರೂ ರಕ್ಷಿಸಬಹುದು!!.
    ಒಳ್ಳೆ ಅಭಿರುಚಿಯ ಇಂತಹ ಬರಹಗಳು ಗೋಡೆಯ ಮೇಲಿರುವ ಕೆಲವರನ್ನಾದರೂ ಪ್ರಭಾವಗೊಳಿಸಿ ಸನ್ಮಾರ್ಗದತ್ತ ಮರಳಿಸಿದರೆ ಸಾರ್ಥಕ.
    ಶಿವರಾಮ ಭಟ್

    ReplyDelete
  14. ಧನ್ಯವಾದಗಳು ಸೀತಾರಾಂ ಸರ್ .ಹಾಂ ..ನೀವೆಂದಂತೆ ಭೂರಮೆ ಮತ್ತು ನಾಗಂದಿಗೆಯ ಚಟುವಟಿಕೆ ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿತ್ತು . ಮೊದಲು ಮಾವನವರ ಮರಣದಿಂದ ಒಂದುವಿಧದ ಶೂನ್ಯ ಕವಿದಂತಾಗಿದ್ದು ...ನಂತರ ಮಗಳಿಗೆ ಬೇಸಿಗೆ ರಜೆ ಪ್ರಾರಂಭವಾದ ಕಾರಣ ಅವಳೊಡನೆ ಸುತ್ತಾಟ ಜಾಸ್ತಿಯಾಗಿದ್ದು ....ಎಲ್ಲ ಕಾರಣಗಳಿಂದ ಹಾಗಾಗಿತ್ತು. ಇನ್ನು ಹಾಗಾಗಲಾರದೆಂದುಕೊಡಿದ್ದೇನೆ.

    ReplyDelete
  15. ದೊಡ್ಡಮನಿ ಮಂಜು ಮತ್ತು ಶಿವರಾಮ ಭಟ್ ಅವರಿಗೆ ಧನ್ಯವಾದಗಳು.

    ReplyDelete
  16. ಸುಮಾ ಮೇಡಮ್,

    ನಿಮ್ಮ ಲೇಖನದ ಟೈಟಲ್ ನೋಡಿ ಓಡಿಬಂದರೆ, ನೀವು ಇಲ್ಲಿ ಈ ವಿಚಾರವನ್ನು ಗಂಭೀರವಾಗಿ ಬರೆದಿದ್ದೀರಿ! ಮಗುವಿನ ಪ್ರಶ್ನೆಗಳು ಹೀಗೆ ಅನೇಕ ಚಿಂತನೆಗೆ ಒಳಗಾಗುವಂತೆ ಮಾಡಿದೆಯಲ್ಲಾ....
    ಮತ್ತು ಮಕ್ಕಳ ಮುಂದೆ ಈಗಿನ ಕಡಿಮೆ ಬಟ್ಟೆ ಧರಿಸಿದ ಹೀರೋಯಿನ್‍ಗಳನ್ನು ನೋಡಲು ನಮಗೂ ಮುಜುಗರವಾಗುತ್ತದೆ.

    ಉತ್ತಮ ಬರಹಕ್ಕೆ ಅಭಿನಂದನೆಗಳು.

    ReplyDelete
  17. ಸುಮಾ ಮೇಡಂ,
    ಇದು ನಿಜವಾಗಿಯೂ ವಿಚಾರಭರಿತ ಲೇಖನ. ಮಕ್ಕಳ ಪ್ರಶ್ನೆಗಳನ್ನು ಕೇಳಿದಾಗಲೇ ಇಂತಹ ವಿಚಾರಗಳು ಕಂಡುಬರುತ್ತವೆ ಎನಿಸುತ್ತದೆ. ಇಂತಹ ದೃಶ್ಯಗಳು ಕೇವಲ ಚಲನಚಿತ್ರ, ಟಿವಿಗಳಲ್ಲಿ ಮಾತ್ರವಲ್ಲ, ಶಾಲಾ ಕಾಲೇಜುಗಳಲ್ಲಿ, ರಸ್ತೆಗಳಲ್ಲಿಯೂ ಸಹ ಇಂತಹ ದಿರಿಸನ್ನು ಧರಿಸಿ ಓಡಾಡುವವರ ನೋಡಬಹುದು. ಇಂಥಹವು ನಿಜಕ್ಕೂ ಖೇದಕರ ಹಾಗೂ ಭಾರತೀಯ ಸಂಸ್ಕೃತಿಗೆ ಅಗೌರವ ತೋರುವಂತಹದು. ಇನ್ನು ಕ್ರಿಕೆಟ್ ಆಟದ ಮೈದಾನಗಳಲ್ಲಿಯೂ 'ಚಿಯರ್‍ಸ್ ಗರ್ಲ್ಸ್' ಹೆಸರಿನಲ್ಲಿ ನಡೆಯುತತಿವೆ. ಅದನ್ನು ಭಾರತೀಯರಷ್ಟೇ ಅಲ್ಲದ ವಿಶ್ವದ ಅನೇಕ ದೇಶಗಳಲ್ಲಿ ಟಿವಿಯಲ್ಲಿ ಬಿತ್ತರವಾಗುತ್ತದೆ. ಹೀಗಿರುವಾಗ, ಭಾರತದ ಬಗ್ಗೆ ಇರುವ ಗೌರವವೂ ಸಂಪೂರ್ಣ ಬೇರೆಯದೇ ಆಗಿ ಹೊರಹೊಮ್ಮುತ್ತಿದೆ ಎಂದರೆ ... ನಿಜಕ್ಕೂ ಬೇಸರವಾಗುತ್ತದೆ.

    ಪಾಲಕರೂ ತಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಕನಿಷ್ಠ ಉಡುಪಿನಿಂದಾಗುವ ಅಪಾಯಗಳನ್ನು ಅರಿವುಮಾಡಿಸಬೇಕು.

    ಉತ್ತಮ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  18. tumba uttama baraha.. nijavaagiyoo vimarshe madikilluva vishaya..

    ReplyDelete
  19. ಸುಮ,
    ಚಳಿಯಾಗದೆ ಹೇಳಿದ್ದಾರೆಯೇ.. "ಚಳಿ ಚಳಿ ತಾಳೆನು ಈ ಚಳಿಯ ಎಂದು..?/"
    ನಿಮ್ಮ ಬರಹ ಉತ್ತಮ ವಿಚಾರಿಕತೆಯ ಹಾದಿಯಲ್ಲಿದೆ..

    ReplyDelete