4 Jun 2010

ಸರಿದ ಕಾರ್ಮೋಡ

"ಈ ಝಗಮಗಿಸುವ ಶಾಪಿಂಗ್ ಮಾಲ್ ಸುತ್ತುವುದೆಂದರೆ ಮನುಗೆ ಏನು ಇಷ್ಟಾನೊ!! ನನಗಂತೂ ಇಲ್ಲಿನ ಇಂಗ್ಲಿಷ್ ಮಯ ವಾತಾವರಣ....... ಬಿಗಿಯಾದ ಜೀನ್ಸ್ , ಶರ್ಟ್ ನಲ್ಲಿ ಹಾರಾಡುವ ಕೂದಲನ್ನು ಸರಿಪಡಿಸಿಕೊಳ್ಳುತ್ತಾ ನಡೆದಾಡುವ ಹೆಣ್ಣುಗಳು..... ಪ್ರಪಂಚವನ್ನೇ ತನ್ನ ದುಡ್ಡಿನಲ್ಲಿ ಕೊಳ್ಳಬಲ್ಲೆನೆಂಬ ಅಹಂಕಾರದ ಮುಖಭಾವದ ಗಂಡುಗಳು... ಊಫ್... ಉಸಿರು ಕಟ್ಟುವಂತಾಗುತ್ತದೆ . ಗಿಜಿಗುಡುವ ಜನಜಾತ್ರೆ ಯಲ್ಲಿ ಕಳೆದುಹೋದ ಅನುಭವವಾಗುತ್ತದೆ. " ಮಹಾನಗರದ ಹೈಟೆಕ್ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯಲ್ಲಿ ಕುಳಿತು ದೀಪಾ ಯೋಚಿಸುತ್ತಿದ್ದಳು.

" ದೀಪಾ ಈ ಶರ್ಟ್ ಚೆನ್ನಾಗಿ ಕಾಣುತ್ತದಾ ನೋಡು " ಗಂಡ ಮನೋಹರ ಟ್ರಯಲ್ ರೂಮಿಂದ ಹೊರಬಂದು ಕೇಳಿದ. ಸುರಸುಂದರಾಂಗ ಯಾವುದೇ ಬಟ್ಟೆಯೂ ಚೆನ್ನಾಗಿಯೆ ಕಾಣುತ್ತಿತ್ತು .. ಓ ಚೆನ್ನಾಗಿದೆ , ತಗೊ .. ಹೊರಡೋಣವಾ? ಎಂದಳು.

ಅಂತೂ ಅವನ ಸೆಲೆಕ್ಷನ್ ಮುಗಿದು ಹೊರಹೊರಟಾಗ ನಿಟ್ಟುಸಿರಿಟ್ಟಳು ದೀಪಾ. ಛೇ .. ಈ ಭಾನುವಾರವೂ ಸುಮ್ಮನೇ ಕಳೆದುಹೋಯ್ತಲ್ಲ , ನಾನು ಬರೋಲ್ಲ ಎಂದರೂ ಬಿಡುವವನಲ್ಲ ... ಎಷ್ಟೆಲ್ಲ ಬರೆಯುವುದಿತ್ತು , ಮೊನ್ನೆ ಲೈಬ್ರೆರಿಯಿಂದ ತಂದ ಪುಸ್ತಕಗಳನ್ನು ಮಗುಚಿ ಹಾಕಬೇಕಿತ್ತು ... ಯೋಚಿಸುತ್ತಾ ನಡೆಯುತ್ತಿದ್ದವಳನ್ನು "ದೀಪಾ ತರಕಾರಿಗಳನ್ನು ಇಲ್ಲೇ ತೆಗೆದುಕೋ , ಮತ್ತೆ ಮನೆಯ ಬಳಿಯ ಹಾಪ್ ಕಾಮ್ಸ್ ಹತ್ತಿರ ಕಾರ್ ನಿಲ್ಲಿಸು ಅಂತ ಹೇಳಬೇಡ " ಎಂಬ ಮನೋಹರನ ಧ್ವನಿ ಎಚ್ಚರಿಸಿತು.
"ಇಲ್ಲಿ ಬೇಡ ಕಣೋ .... ಇಲ್ಲಿರುವ ದೇಶವಿದೇಶಗಳ ತರಕಾರಿ ಒಳ್ಳೇಯದಿರೋಲ್ಲ. ಫ್ರೆಶ್ ಕಾಣಿಸಲು ವ್ಯಾಕ್ಸ್ ಕೋಟಿಂಗ್ ಕೂಡ ಮಾಡಿರುತ್ತಾರಂತೆ ಗೊತ್ತಾ " ಕೈ ಹಿಡಿದು ಹೇಳಿದಳು ದೀಪಾ .
"ಏ ಏನೂ ಆಗೋಲ್ಲ ಸುಮ್ನೆ ತಗೋ .. ಅಂದಹಾಗೆ ನೀನು ಪೇಪರ್ , ಮ್ಯಾಗಜೀನ್ ಗಳಲ್ಲಿ ಬರುವ ಹೆಲ್ತ್ ಪೇಜ್ ಓದಿ ತಲೆ ಕೆಡಿಸಿಕೊಳ್ಳಬೇಡಾ ಅಯ್ತಾ ... ಏನೇನೆಲ್ಲ ಬರೀತಾರೆ ಅವರು .ಅದರ ಹಿಂದೆ ಏನೇನು ಅಮಿಷಗಳು, ಒತ್ತಡಗಳಿರುತ್ತೋ ಬಲ್ಲವರಾರು? " ಎಂದ ನಗುತ್ತಾ.

ಅಂತೂ ಶಾಪಿಂಗ್ ಮುಗಿಸಿ ಅಲ್ಲೇ ಫುಡ್ ಕೋರ್ಟ್ ನಲ್ಲಿ ಬರ್ಗರ್ ತಿಂದು, ಇರುವೆ ಸಾಲಿನಂತಹ ಟ್ರಾಫಿಕ್ ನಲ್ಲಿ ಹೆಣಗಿ ಮನೆಸೇರಿದಾಗ ರಾತ್ರಿ ಹತ್ತಾಗಿತ್ತು.

"ಛೆ.. ಎಷ್ಟು ಹೊತ್ತಾಗಿ ಬಿಡ್ತು ... ನನಗೊಂದು ನೋಟ್ಸ್ ಮಾಡಲಿಕ್ಕಿತ್ತು ಗೊತ್ತಾ.... ಗೊಣಗುತ್ತಾ ಬಟ್ಟೆ ಬದಲಿಸುತ್ತಿದ್ದವಳನ್ನು ಎಳೆದುಕೊಳ್ಳುತ್ತಾ " ಅಯ್ಯೋ ಬಿಡು ನಾಳೆ ಮಾಡು ... ಈಗ ಮಾಡಲು ಬೇರೆ ಕೆಲಸವಿದೆ ..." ಎನ್ನುತ್ತಾ ಕಣ್ಣು ಮಿಟುಕಿಸಿದ.
ಆವೇಶವಿಳಿದೊಡನೆ ಕೆನ್ನೆ ತಟ್ಟಿ "ನಿದ್ರೆ ಬರುತ್ತಿದೆ ಚಿನ್ನು ಮಲ್ಕೊಳ್ಲಾ " ಎಂಬ ಮಾಮೂಲಿ ಡೈಲಾಗ್ ಹೇಳಿ ಪಕ್ಕಕ್ಕೆ ತಿರುಗಿ ಮಲಗಿದವನನ್ನು ನೋಡುತ್ತಾ ದೀಪಾಳ ಮನ ಹಿಂದಕ್ಕೋಡಿತು.

ಪ್ರೀತಿಸಿ ಮದುವೆಯಾಗಿದ್ದ ಅವರಿಬ್ಬರೂ ಮೊದಲು ಭೇಟಿಯಾಗಿದ್ದು ಒಂದು ಕವಿಗೋಷ್ಟಿಯಲ್ಲೇ. ಆ ವೇಳೇಗಾಗಲೇ ಅವನು ತನ್ನ ನವಿರಾದ ಕವಿತೆಗಳಿಂದ ಸಾಹಿತ್ಯ ವಲಯದಲ್ಲಿ ಹೆಸರುವಾಸಿಯಾಗಿದ್ದ . ಅವನ ಕವಿತೆಗಳಲ್ಲಿನ ಪ್ರಕೃತಿಪ್ರಿಯತೆ , ಸೂಕ್ಷ್ಮದೃಷ್ಟಿಕೋನ , ಮಾರ್ದವತೆಗೆ, ಮೃದುಮನದ ಸಾಹಿತ್ಯದ ಸ್ನಾತಕೋತ್ತರ ಪದವೀಧರೆ ದೀಪಾ ಮನಸೋತಿದ್ದಳು . ಇಂತಹ ಕವನಗಳನ್ನು ಬರೆಯಬಲ್ಲವನ ಮನಸ್ಸೂ ಹಾಗೇ ಇರಬಹುದೆಂದುಕೊಂಡಿದ್ದಳು.
ಅವನ ಸುಂದರ ರೂಪ , ನಿರರ್ಗಳ ಮಾತುಗಾರಿಕೆ , ನಗುಮೊಗ ಅವಳನ್ನು ಸೆಳೆದಿತ್ತು . ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗುವ ನಿರ್ಧರಕ್ಕೆ ಬಂದಿದ್ದರು. ಜಾತಿ ಮತ ಅಂತಸ್ತುಗಳ ಅಡಚಣೆಯಿರಲಿಲ್ಲವಾದ್ದರಿಂದ ಇಬ್ಬರ ಮನೆಯವರೂ ಸಂತಸದಿಂದಲೇ ಒಪ್ಪಿದ್ದರು.

ಹೀಗೆ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಿಯಾಗಿದ್ದ ಮನೋಹರನ ಕೈಹಿಡಿದು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸಂಸಾರ ಹೂಡಿದ ದೀಪಾಳ ಅದಷ್ಟಕ್ಕೆ ಕರುಬಿದವರಿದ್ದರು.

ಹೊಸಬಿಸಿಯಲ್ಲಿ ಎಲ್ಲವೂ ಚೆನ್ನಾಗಿತ್ತು. ಅವನ ಪ್ರತಿಯೊಂದು ನಡೆ ನುಡಿ ಅವಳಿಗೆ ಮುದ ನೀಡುತ್ತಿತ್ತು. ಚರ್ಚೆಗೆ ಹಗಲುಗಳು ಸಾಲದೇ ನಡುರಾತ್ರಿಯವರೆಗೂ ಮುಂದುವರೆಯುತ್ತಿತ್ತು.

ಆಗ ಕೆಲವೊಮ್ಮೆ ಅವನ ಕವನಗಳಲ್ಲಿರುವ ಭಾವತೀವ್ರತೆ ಅವನ ವ್ಯಕ್ತಿತ್ವಕ್ಕಿಲ್ಲವೆಂದೆನಿಸುತ್ತಿತ್ತು . ಜಡೆಯ ಸೌಂದರ್ಯದ ಬಗ್ಗೆ ಅದ್ಬುತವೆನ್ನಿಸುವಂತೆ ಕವನ ಬರೆದಿದ್ದ ಆದರೆ ಉದ್ದವಾಗಿದ್ದ ದೀಪಾಳ ಕೂದಲನ್ನು ಹಳೇ ಫ್ಯಾಷನ್ ಎಂದು ಕಟ್ ಮಾಡಿಸು ಎನ್ನುತ್ತಿದ್ದ. ಪ್ರಕೃತಿಯ ಬಗ್ಗೆ ಅವ ಬರೆದ ಕವನವೊಂದು ನಾಡಿನೆಲ್ಲ ಪರಿಸರಪ್ರೇಮಿಗಳ ಬಾಯಲ್ಲಿ ನಲಿದಾಡುತ್ತಿತ್ತು . ಆದರೆ ಪರಿಸರ ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನು ಧಾರಾಳವಾಗಿ ನೀಡುತ್ತಿದ್ದ. ದೇಶಪ್ರೇಮದ ಬಗ್ಗೆ ಮನಮುಟ್ಟುವಂತೆ ಬರೆಯುತ್ತಿದ್ದ . ತಾನು ಮಾತ್ರ ಎಮ್ ನ್ ಸಿ ನಲ್ಲೇ ಕೆಲಸ ಮಾಡುತ್ತಿದ್ದ . ಕನ್ನಡಕದಿಂದ ಹಿಡಿದು ಶೂ ವರೆಗೋ ಎಲ್ಲವೂ ಇಂಪೂರ್ಟೆಡ್ ಆಗಬೇಕಿತ್ತು....ಆಗೆಲ್ಲ ದೀಪಾ ಅವನೊಡನೆ ವಾದಕ್ಕಿಳಿಯುತ್ತಿದ್ದಳು . "ಚಿನ್ನು ನಿನಗಿದೆಲ್ಲ ಗೊತ್ತಾಗೊಲ್ಲ . ’ಶಾಸ್ತ್ರ ಹೇಳಲು ಬದನೆಕಾಯಿ ತಿನ್ನಲು ’ ಅಂತ ಗಾದೆಯೆ ಇದೆಯಲ್ವಾ . ಭಾವನೆಗಳಿಂದ ಯಾವತ್ತೂ ಹೊಟ್ಟೆ ತುಂಬುವುದಿಲ್ಲ ತಿಳಿದುಕೋ " ಎಂದು ನಕ್ಕು ಬಿಡುತ್ತಿದ್ದ.

ವರ್ಷವೊಂದು ಕಳೆದಂತೆ ಮಗ ನಿಧಿ ಹುಟ್ಟಿದ್ದ. ಅವನ ಲಾಲನೆ ಪಾಲನೆಯಲ್ಲಿ ದಿನಗಳುರುಳಿದವು. ನೋಡುತ್ತಿದ್ದಂತೆ ಮಗ ಸ್ಕೂಲಿಗೆ ಹೋಗಲು ಪ್ರಾರಂಭಿಸಿದ.

ಇದರ ಮಧ್ಯೆ ಅವಳ ಪ್ರಿಯ ಮನು ಎಲ್ಲೋ ಕಳೆದೇ ಹೋಗಿದ್ದ . ಈಗಿರುವುದು ಅವನ ರೂಪವಷ್ಟೇ ಎಂದೆನಿಸುತ್ತಿತ್ತು ಅವಳಿಗೆ.
ಅವನ ಕವಿತೆಗಳಲ್ಲಿನ ಮಾರ್ದವತೆ ಹಾಗೇ ಉಳಿದಿತ್ತು . ಆದರೆ ಅವ ಇನ್ನೂ ಹೆಚ್ಚು ಪ್ರಾಕ್ಟಿಕಲ್ ಆಗಿಬಿಟ್ಟಿದ್ದ.
ಅವನಿಗೀಗ ಅವಳೊಂದಿಗಿನ ಚರ್ಚೆಗಿಂತ ಸಿ ಎನ್ ಬಿ ಸಿ ಛಾನಲ್ ನೋಡುವುದು ಮುಖ್ಯವಾಗುತ್ತಿತ್ತು.
ಮೊದಲೆಲ್ಲಾ ಅವಳ ಮನಸ್ಥಿತಿ ಸರಿಯಿಲ್ಲದಿದ್ದರೆ ತಕ್ಷಣ ಅದನ್ನರಿತು ಹೇಗಾದರೂ ಅವಳ ಮುಖದಲ್ಲಿ ನಗುವರಳಿಸುತ್ತಿದ್ದ . ಈಗ ಅವಳು ಹೇಗಿದ್ದರೂ ಅವನಿಗೆ ತಿಳಿಯುತ್ತಲೇ ಇರಲಿಲ್ಲ.
ಅವಳ ಬರ್ತ್ ಡೇ , ಮದುವೆ ದಿನ , ಏನೊಂದೂ ಅವನಿಗೆ ನೆನಪಿರುತ್ತಿರಲಿಲ್ಲ. ಕೇಳಿದರೆ .....ಛೆ ಅದೆಲ್ಲ ಸಿಲ್ಲಿ... ದೀಪಾ.. ಗ್ರೋ ಅಪ್ ಎನ್ನುತ್ತಿದ್ದ.
ಹೆಂಡತಿಗೆ ಚಿಕ್ಕ ಪುಟ್ಟ ಗಿಫ್ಟ್ ತಂದುಕೊಡುವ ಗಂಡಸರು ಅವನ ಕಣ್ಣಿಗೆ ಹೇಡಿಗಳಾಗಿ ಸ್ವಾರ್ಥಿಗಳಾಗಿ ಕಾಣಿಸುತ್ತಿದ್ದರು . ಅವರನ್ನು ಆಡಿಕೊಂಡು ನಗುತ್ತಿದ್ದ .
ಪ್ರೀತಿಯನ್ನು ಗಿಫ್ಟ್ ನಿಂದ ಅಳೆಯುತ್ತೀರ ನೀವು? ಕೇಳುತ್ತಿದ್ದ. ಅವ ತರುವ ಗಿಫ್ಟಿನ ಬೆಲೆಗಿಂತಲೂ , ಅದರ ಹಿಂದಿರುವ , ಅವನ ಮನದಲ್ಲಿ ಪ್ರತಿಕ್ಷಣ ನಾನಿದ್ದೇನೆಂಬುದರ ಭಾವ , ಹೆಂಗಸರಿಗೆ ಮುಖ್ಯವಾಗುತ್ತವೆಂಬುದನ್ನು ಅವನಿಗೆ ಹೇಗೆ ಅರ್ಥ ಮಾಡಿಸಲಿ? ಎಂದು ಅವಳು ಯೋಚಿಸುತ್ತಿದ್ದಳು.

ಇತ್ತೀಚೆಗಂತೂ ಬದುಕು ತುಂಬ ನೀರಸವಾಗಿದೆ ಎನ್ನಿಸುತ್ತಿತ್ತು. ಏನೋ ಒಂದು ಕೆಲಸವೆಂಬಂತೆ , ದಿನಚರಿಯಂತೆ ಮುಗಿದುಹೋಗುತ್ತಿದ್ದ ಕಾಮಕೇಳಿ ಕೂಡ ಅವಳಿಗಿತ್ತೀಚೆಗೆ ಅಸಹ್ಯ ಹುಟ್ಟಿಸುತ್ತಿತ್ತು .

"ಅಮ್ಮಾ" ಪಕ್ಕದ ರೂಮಿನಲ್ಲಿ ಮಲಗಿದ್ದ ಮಗ ಕರೆದಂತಾಗಿ ದೀಪಾಳ ಯೋಚನಾ ಸರಣಿ ತುಂಡಾಯಿತು . ಎದ್ದು ಬಂದು ಚಳಿಯಿಂದ ಮುರುಟುತ್ತಿದ್ದ ಮಗನಿಗೆ ಕೆಳಗೆ ಬಿದ್ದಿದ್ದ ರಗ್ ಹೊದೆಸಿ ಬಂದು ಮಲಗಿದವಳನ್ನು ನಿದ್ರೆ ಆವರಿಸಿತ್ತು.


"ಏಯ್ ಹೇಗಿದ್ದಿ ? ನಿನ್ನ ಹೀರೋ ಹೇಗಿದ್ದಾನೆ ? ಪುಟ್ಟ ಹೀರೋ ಏನು ಮಾಡ್ತಾನೆ ....." ಒಂದೇ ಉಸಿರಿನಲ್ಲಿ ಬಡಬಡಿಸುತ್ತಾ ತನ್ನೆದುರು ಬಂದು ಕುಳಿತ ಜೀವದ ಗೆಳತಿ ನಿಶಾಳನ್ನು ಕಂಡು ದೀಪಾಗೆ ಸಂತೋಷವಾಯಿತು. ಮುಂಬೈನ ಅಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮನಶಾಸ್ತ್ರಜ್ಞೆ ನಿಶಾ , ದೀಪಾಳ ಬಾಲ್ಯದ ಗೆಳತಿ. ಇಲ್ಲಿರುವ ತಾಯಿ ಮನೆಗೆ ಬಂದ ಅವಳು ದೀಪಾಳನ್ನು ಹುಡುಕಿಕೊಂಡು ಅವಳ ಕಾಲೇಜಿಗೆ ಬಂದಿದ್ದಳು.

ಕಾಲೇಜಿನ ಎದುರಿನ ಕಾಫಿ ಡೇಯಲ್ಲಿ ಕುಳಿತು ಕೋಲ್ಡ್ ಕಾಫಿ ಕುಡಿಯುತ್ತಾ .. ಹಾಂ ಹೇಳಮ್ಮ ಏನು ನಮ್ಮ ರಾಣಿಯ ಚಿಂತೆ? ಎಂದಳು ನಿಶಾ.
"ಏ ಏನಿಲ್ಲಪ್ಪ ನನಗ್ಯಾವ ಚಿಂತೆ ಹೇಳು !!"..... ದೀಪಾ ಚಿಪ್ಪಿನೊಳಸರಿದಳು.
"ನನ್ನ ಹತ್ತಿರವೇ ಸುಳ್ಳು ಹೇಳುತ್ತೀಯಲ್ಲೆ ... ನಿನ್ನ ಮುಖದಲ್ಲಿನ ಭಾವಗಳು ನನಗರಿವಾಗದಿರಲು ಸಾಧ್ಯವೇನೆ .... ಹುಂ ಹೇಳು ದೀಪಾ ...ಏನಾಯ್ತು? " ........ಆತ್ಮೀಯ ದನಿಯಲ್ಲಿ ಕೇಳಿದ ಗೆಳತಿಯ ಬಳಿ ತನ್ನೆಲ್ಲ ಸಮಸ್ಯೆಗಳನ್ನು ಹೇಳಿಕೊಂಡಳು ದೀಪಾ.

ಮನೋಹರನ ಮೇಲಿನ ಅವಳ ಎಲ್ಲ ಕಂಪ್ಲೇಂಟ್ ತಾಳ್ಮೆಯಿಂದ ಆಲಿಸಿದ ನಿಶಾಳ ಮುಖ ಗಂಭೀರವಾಯಿತು.

"ನೋಡು ದೀಪಾ ನಾನೀಗ ನಿನ್ನ ಗೆಳತಿಗಿಂತಲೂ ಹೆಚ್ಚಾಗಿ ಒಬ್ಬ ಮನಶಾಸ್ತ್ರಜ್ಞೆಯಾಗಿ ಇದಕ್ಕೆ ಪರಿಹಾರ ಸೂಚಿಸುತ್ತೇನೆ . ವಿಶಾಲ ಮನಸ್ಸಿನಿಂದ ನನ್ನ ಸಲಹೆಯನ್ನು ಪರಿಗಣಿಸುವೆಯಾ ? ನಿಜಕ್ಕು ನಿನಗೆ ಈ ಸಮಸ್ಯೆಯಿಂದ ಹೊರಬರಬೇಕೆಂದರೆ
ಜೀವನದಲ್ಲಿ ಸಂತೋಷವಾಗಿರಬೇಕೆಂಬ ಆಸೆಯಿದ್ದರೆ ನನ್ನ ಮಾತು ಕೇಳು".... ಕೈಲಿದ್ದ ಕಾಫಿ ಗುಟುಕರಿಸುತ್ತಾ ನಿಶಾ ಹೇಳಿದಳು.

"ಹೇಳು ನಿಶಾ ನಿನ್ನ ಮೇಲೆ ನನಗೆ ತುಂಬಾ ಭರವಸೆಯಿದೆ..... ದೀಪಾ ಹೇಳಿದಳು.

ನೋಡು ನಿನ್ನ ದುಖಃಕ್ಕೆ ಕಾರಣ ಸ್ವಲ್ಪ ಮಟ್ಟಿಗೆ ಮನುವಿನ ವರ್ತನೆ ನಿಜ , ಆದರೆ ಅದಕ್ಕಿಂತಲೂ ನಿನ್ನ ಸೂಕ್ಷ್ಮ ಮನಸ್ಸೇ ಹೆಚ್ಚು ಕಾರಣ ಎಂದು ಗೊತ್ತಾ .
ಇದೇ ರೀತಿಯ ಸಮಸ್ಯೆಯಿಂದ ಬಳಲುವ ನೂರಾರು ಜನರನ್ನು ನಾನು ಬಲ್ಲೆ.
ನೋಡು ದೀಪಾ ಹೆಣ್ಣು ಮತ್ತು ಗಂಡು ದೈಹಿಕವಾಗಷ್ಟೇ ಅಲ್ಲ , ಮಾನಸಿಕವಾಗೂ ತುಂಬ ವಿಭಿನ್ನರು .ಇಬ್ಬರೂ ಯೋಚಿಸುವ , ಘಟನೆಯೊಂದಕ್ಕೆ ಪ್ರತಿಕ್ರಿಯಿಸುವ ರೀತಿ ಬೇರೆಯೆ. ನಮಗೆ ಮುಖ್ಯವೆನಿಸುವ ಎಷ್ಟೋ ಸಂಗತಿಗಳು ಅವರಿಗೆ ಸಿಲ್ಲಿಯಾಗಿ ತೋರಿದರೆ , ಅವರಿಗೆ ಮುಖ್ಯವಾಗುವ ಎಷ್ಟೋ ಸಂಗತಿಗಳು ನಮಗೆ ಅರ್ಥಹೀನವೆಂದು ತೋರುತ್ತವೆ.


ಮದುವೆಯಾದ ಪ್ರಾರಂಭದಲ್ಲಿ ಇಬ್ಬರ ನಡುವಿರುವ ಉತ್ಕಟ ಪ್ರೀತಿ , ಬಿಟ್ಟಿರಲಾಗದ ತುಡಿತ , ಆಕರ್ಷಣೆ ಅತೀ ಹೆಚ್ಚು . ಅದಕ್ಕೆ ಕಾರಣ ಆ ಸಮಯದಲ್ಲಿ ಉತ್ಪತ್ತಿಯಾಗುವ ಕೆಲ ಹಾರ್ಮೋನ್ ಗಳು ಎಂದು ಸೈನ್ಸ್ ಹೇಳುತ್ತದೆ . ಆದರೆ ಕ್ರಮೇಣ ಅಂತಹ ತೀವ್ರ ಭಾವನೆಗಳು ಕಡಿಮೆಯಾಗುವುದು ತುಂಬ ಸಹಜ. ಅದರಲ್ಲೂ ಗಂಡು ಬಹುಬೇಗ ಅಂತಹ ಸ್ಥಿತಿಯಿಂದ ಹೊರಬರುತ್ತಾನೆ . ಮೊದಲು ಸಂಗಾತಿ ಏನು ಮಾಡಿದರೂ ಚೆಂದವೆನಿಸುತ್ತದೆ . ಕ್ರಮೇಣ ವಾಸ್ತವದ ಅರಿವಾಗುತ್ತದೆ. ನಿಜವಾದ ಪ್ರೀತಿ ನಂತರವಷ್ಟೇ ಪ್ರಾರಂಬವಾಗುತ್ತದೆ . ಅದು ಪರಸ್ಪರ ಗೌರವದಿಂದ ಹುಟ್ಟುವಂತಹುದು.

ನಿನ್ನ ವಿಚಾರದಲ್ಲೂ ಹಾಗೆ ಆಗಿದೆ . ಅವನ ಕವನಗಳಲ್ಲಿ ನೀನು ಅವನ ವ್ಯಕ್ತಿತ್ವ ಅರಸಿ ಸೋಲುತ್ತಿದ್ದೀಯ. ಕವಿ ಮನೋಹರನನ್ನು ಬದಿಗಿಟ್ಟು ನಿನ್ನ ಗಂಡ ಮನು ಎಂದು ಮೊದಲು ಸ್ವೀಕರಿಸು . ಅವನನ್ನು ಬೇರೆ ವ್ಯಕ್ತಿಯಾಗಿ ನೋಡು . ಅವನ ಒಳ್ಳೆಯ ಗುಣಗಳನ್ನು ನೆನೆಸಿಕೋ. ನಿನ್ನ ಅವನ ಅಭಿರುಚಿಗಳು ಭಿನ್ನವಾಗಿರಬಹುದು . ನಿನ್ನ ಅಭಿಪ್ರಾಯಗಳನ್ನು ಅವನ ಮೇಲೆ ಹೇರಬೇಡ . ತಪ್ಪೆನಿಸುವುದನ್ನು ಸಮಾಧಾನದಿಂದ ಹೇಳು. ಹೊಂದಾಣಿಕೆಯೆ ಸುಖ ದಾಂಪತ್ಯದ ಪ್ರಥಮ ಸೂತ್ರ ಗೊತ್ತಾ ".... ದೀರ್ಘವಾದ ನಿಶಾಳ ಮಾತುಗಳನ್ನು ತುಂಡರಿಸುತ್ತಾ ದೀಪಾ ಕೇಳಿದಳು " ಸರಿ ನೀನು ಹೇಳಿದಂತೆ ಗಂಡು ಹೆಣ್ಣುಗಳ ಆಲೋಚನಾಧಾಟೀ ಬೇರೆಯೆ .. ಆದರೆ ಪ್ರತಿಯೊಂದಕ್ಕೂ ನಾನೆ ಹೊಂದಿಕೊಳ್ಳಬೇಕೆ ? ನಮಗಾಗಿ ನಮ್ಮ ಸ್ವಭಾವಕ್ಕೆ ಅವರೂ ಹೊಂದಿಕೊಳ್ಳಬಹುದಲ್ಲವೆ? "
" ನಿಜ ಅದನ್ನು ಡೈರೆಕ್ಟಾಗಿ ಅವನ ಬಳೀ ಮಾತನಾಡು . ನಿನ್ನ ಇಷ್ಟಾನಿಷ್ಟಗಳನ್ನು ತಿಳಿಸು , ನೀನು ಹೇಳದೇ ತಿಳಿದುಕೊಳ್ಳುವ ಸೂಕ್ಷ್ಮತೆ ಅವನಿಗಿಲ್ಲದಿರಬಹುದು ಅಲ್ಲವೆ . ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಂಡು ದುಖಃ ಪಡಬೇಡ. ನಾನು ಇನ್ನೊಮ್ಮೆ ಬರುವಾಗ ನಿನ್ನ ಮುಖದ ನಗು ವಾಪಾಸಾಗಿರಬೇಕು." ಬಿಲ್ ಹಣ ನೀಡಿ ಇಬ್ಬರೂ ಹೊರಬಂದಾಗ ಚಿಂತೆಯ ಕಾರ್ಮೋಡ ಕವಿದಂತಿದ್ದ ದೀಪಾಳ ಮೊಗ ತಿಳಿಯಾಗಿತ್ತು.

15 comments:

  1. ಕತೆ ಸಕಾಲಿಕವಾಗಿದೆ. ನಿತ್ಯ ಮಹಾನಗರಗಳಲ್ಲಿ ಯಾಂತ್ರಿಕ ಬದುಕಿನ ನಡುವೆ ಬೇಯುತ್ತಿರುವ ಎಷ್ಟೋ ಜೀವಿಗಳ ಮನಸ್ಥಿತಿ ದೀಪಾಳಂತೆ ಒಮ್ಮೆಯಾದರೂ ಆಗಿರುತ್ತದೆ. ಅಂತಹ feel ನಿಂದ ಹೊರಬರಲು ಒಳ್ಳೆಯ Counseling ಕೊಟ್ಟಿದ್ದೀರಿ. ತುಂಬ ಇಷ್ಟವಾಯಿತು.

    ReplyDelete
  2. ದಾ೦ಪತ್ಯ ಸ೦ಭ೦ಧಗಳಲ್ಲಿ ಇ೦ದು ಧುತ್ತೆ೦ದು ನಿಲ್ಲುತ್ತಿರುವ ತಿವಿಕ್ರಮ ಸಮಸ್ಯೆಯ ಸುತ್ತ ಮನೋವೈಜ್ಞಾನಿಕ ಕಾರಣ ಮತ್ತು ಪರಿಹರವನ್ನ ನವಿರಾಗಿ ಎಳೆ-ಎಳೆಯಾಗಿ ಬಿಡಿಸಿ ನೀಡಿದ್ದಿರಾ... ಕಥೆ ತು೦ಬಾ ಚೆ೦ದವಿದ್ದೂ ಒ೦ದೇ ಉಸಿರಿಗೆ ಓದಿಸಿಕೊ೦ಡು ಹೋಯಿತು- ಸ್ವಲ್ಪ ದೊಡ್ಡದಿದ್ದರೂ ಸಹ!
    ಬಹು ಉಪಯುಕ್ತ ಸಾ೦ಧರ್ಭಿಕ ಕಥೆ!

    ReplyDelete
  3. ಶಹರದ ಮೋಜು ಹಣದ ಹುಚ್ಚು ಹಿಡಿದರೆ ಇದೆಲ್ಲಾ ಮಾಮೂಲಿ ಅಲ್ಲವಾ?!

    ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ...........
    ಸಕಾಲಿಕ ಬರಹ.

    ReplyDelete
  4. ಸುಮಾ...

    ಬಹಳ ಚಂದದ ಕಥೆ...
    ಸುಂದರ , ಸರಳ ಶೈಲಿಯಲ್ಲಿ...
    ಓದುತ್ತ.. ಓದುತ್ತ... ಮನಸ್ಸೆಲ್ಲ ಆವರಿಸಿತು...
    ಇಂದಿನ ಮಹಾನಗರಗಳಲ್ಲಿನ "ಮನೆ ಹೆಂಡತಿಯರ" ಮನಸ್ಥಿತಿಯ ಕನ್ನಡಿ ಇದು..

    ನನಗೆ ತ್ರಿವೇಣಿಯವರ ನೆನಪಾಯಿತು...

    ಬಹಳ ಚಂದವಾದ ಬರವಣಿಗೆ..
    ಇನ್ನಷ್ಟು ಕಥೆಗಳ ನಿರೀಕ್ಷೆಯಲ್ಲಿರುವೆವು...

    ReplyDelete
  5. ಸುಮಾ ಮೇಡಂ,
    ಸುಂದರ ನಿರೂಪಣೆಯೊಂದಿಗೆ ಕತೆ ಚೆನ್ನಾಗಿ ಮೂಡಿ ಬಂತು. ನಗರ ಜೀವನದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯ. ಆದರೆ ಅದರ ಪರಿಣಾಮ ಗಂಭೀರ! ಅಂತಹ ಒಂದು ಗಂಬೀರ ಸಮಸ್ಯೆಗೆ ಮನಃಶಾಸ್ತ್ರದ ನೆರವಿನಿಂದ ಪರಿಹಾರ ಸೂಚಿಸಿ ಸುಂದರ ಬದುಕು ಹೆಣೆಯಲು ಸೂಚಿಸಿದ್ದೀರಾ.......
    ಚಂದದ ಕತೆಗೆ ಧನ್ಯವಾದಗಳು

    ReplyDelete
  6. ದಾಂಪತ್ಯದಲ್ಲ್ಯಿಯ ಸಮಸ್ಯೆ ಹಾಗು ಅದರ ಪರಿಹಾರವನ್ನು ಕತೆಯಲ್ಲಿ ಚೆನ್ನಾಗಿ ಹೆಣೆದಿದ್ದೀರಿ. ಅಭಿನಂದನೆಗಳು.

    ReplyDelete
  7. ನಿಮ್ಮೆಲ್ಲರ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು.

    .....ಸುಬ್ರಮಣ್ಯ ಅವರೆ ಮಹಾನಗರಗಳಲ್ಲೊಂದೆ ಅಲ್ಲ ಇಂದಿನ ಹಳ್ಳಿಗಳಲ್ಲಿರುವ ಯುವಜನತೆ ಕೂಡ ಒತ್ತಡಗಳಿಂದ ಮುಕ್ತವಾಗಿಲ್ಲ. ಮತ್ತು ಯಾವುದೇ ಸಮಸ್ಯೆಯ ಮೂಲ ಹುಡುಕಿದಾಗ ಪರಿಹಾರ ಸುಲಭವಲ್ಲವೆ?
    .....ಸೀತಾರಾಂ ಸರ್ ಧನ್ಯವಾದಗಳು .. ನಿಜ ಹೇಳಬೇಕೆಂದರೆ ನನ್ನ ಮನದಲ್ಲಿ ಕಥೆ ಇನ್ನೂ ದೊಡ್ಡದಿತ್ತು . ಆದರೆ ಬರೆಯುತ್ತಾ ಬರೆಯುತ್ತಾ ನನಗೆ ಬೇಸರ ಬಂದು ಮೊಟಕುಗೊಳಿಸಿಬಿಟ್ಟೆ !!! ಹ..ಹ..ಹ
    ........ಜಿತೇಂದ್ರ ಕಶ್ಯಪ್ ಅವರೆ ಶಹರದ ಮೋಜು ಹಣದ ಹಿಂದೆ ಬಿದ್ದವರ ನಡುವೆ ಸೂಕ್ಷ್ಮ ಮನದ ಆದರ್ಶವಾದಿಗಳು ಸಿಕ್ಕಿಕೊಂಡಾಗ ಅವರ ಪಾಡು ಬಲು ಕಷ್ಟ. ಬದುಕಿನೊಂದಿಗೆ ಪ್ರತಿ ಕ್ಷಣ ರಾಜಿ ಮಾಡಿಕೊಳ್ಳಬೇಕಾದುದು ಇಂದಿನ ಅನಿವಾರ್ಯತೆ ಅಲ್ಲವೆ?
    ........ಪ್ರಕಶಣ್ಣ ಇದು ಕೇವಲ " ಮನೆ ಹೆಂಡತಿಯರ" ಸಮಸ್ಯೆಯಲ್ಲ . ಇಲ್ಲಿ ನನ್ನ ಕಥಾನಾಯಕಿ ದೀಪ ಕಾಲೇಜ್ ಲೆಚ್ಚರರ್ . ಸೂಕ್ಷ್ಮ ಮನದ ಮಹಿಳೆ . ಆತ್ಮಸಾಂಗತ್ಯವನ್ನು ಗಂಡನಲ್ಲಿ ಹುಡುಕುತ್ತಿದ್ದಾಳೆ. ಗಂಡು ಮತ್ತು ಹೆಣ್ಣುಗಳಲ್ಲಿರುವ ವಿಭಿನ್ನತೆಯನ್ನರಿತು , ಪರಸ್ಪರ ಭಾವನೆಗಳನ್ನು ಗೌರವಿಸಿದಾಗ ದಾಂಪತ್ಯ ಸೊಗಸಲ್ಲವೆ?
    ......

    ReplyDelete
  8. ತುಂಬಾ ಸುಂದರವಾದ ನೀತಿ ಕಥೆ, ಉತ್ತಮ ಉದಾರಣೆ ಸಹಿತ.
    ನಿಮ್ಮವ,
    ರಾಘು.

    ReplyDelete
  9. ಮೊದಲಿಗೆ ಸ್ಲೇಟು ಬರೆವಾಗ ಇರುವ ಮೋಜು ಎಲ್ಲ ಅಕ್ಷರ ಮುದ್ದು ಅನಿಸುವಂತೆ...ಮದುವೆಯ ಮೊದಲಿಗೆ ಎಲ್ಲಾ ಸರಿಯೇ ಎನಿಸೋದು ಮತ್ತೆ ಗೋಜಲಾಗೋದು ಮತ್ತೆ ಕಲಹ ಕಾದಾಟಗಳು..ನಂತರ ಸಾಮರಸ್ಯ..ಹೊಂದಾಣಿಕೆ..ಮತ್ತೆ ಅದೇ ಎಲ್ಲಾ ಸರಿ..ಎನ್ನುವ ರೀತಿ...ಇವೆಲ್ಲಾ ಇದ್ದರೇನೆ ಜೀವನ ..ಅಲ್ಲವೇ..
    ಹೌದು ಸುಮ..ನೀವು ಮುಂಚೇನೂ ಕಥೆ ಬರೆದಿದ್ರಾ...? ಚನ್ನಾಗಿ ಓದಿಸಿಕೊಳ್ಳೋ ಗುಣ ಇದೆ ಬರವಣಿಗೆಗೆ..ಅಭಿನಂದನೆಗಳು...

    ReplyDelete
  10. ಕಥೇನು ಚೆನ್ನಾಗಿ ಬರದ್ದೇ ಮಾರಾಯ್ತಿ! ಹೀಗೆ ದ್ವಂದ್ವ ಹುಟ್ಟಿಸೋ ಘಟನೆಗಳೇ ದಾಂಪತ್ಯದಲ್ಲಿ ಬಿರುಕು ಮೂಡಿಸೋದು..ಇದು ಎಲ್ಲರಿಗೂ ಒಂದಲ್ಲ ಒಂದು ಸಲ ಅನುಭವಕ್ಕೆ ಬರುತ್ತೆ ಅನ್ನು!

    ReplyDelete
  11. Tumba chennagi barediddiri ...very touching ...
    keep writing ...

    ReplyDelete
  12. ಬಹಳ ಚನಾಗಿದೆ...ಮನಮುಟ್ಟಿತು ನಿಮ್ಮ ಲೇಖನ...

    ReplyDelete
  13. ಸುಮಾ ಮೇಡಂ,
    ಚಂದದ ಕಥೆಗೆ ಅಭಿನಂದನೆ...... ನನಗೂ ಈ ರೀತಿಯ ಗೆಳತಿಯರ ಪರಿಚಯ ಇದೆ...... ನನ್ನ ಪ್ರಕಾರ ಗಂಡಸಿನ ಆದ್ಯತೆಗಳು ಕಾಲ ಕಾಲಕ್ಕೆ ಬೇರೆಯಾಗುತ್ತಾ ಇರತ್ತೆ..... ಮೊದ ಮೊದಲು ಯಾವ ಹುಡುಗಿಯ ಮನಸ್ಸು ಗೆಲ್ಲಲ್ಲು ಕೆಲಸ ಕಾರ್ಯ ಬಿಟ್ಟು ಅವಳ ಹಿಂದೂ ಮುಂದು ಸುತ್ತುತ್ತಾನೋ, ಅದೇ ಅವಳನ್ನು ಮದುವೆಯಾದ ನಂತರ, ಅವಳ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿಗೆ ದುಡಿಯಲು ಪ್ರಯತ್ನ ಮಾಡುತ್ತಾನೆ.... ಆವಾಗ ಅವನಿಗೆ, ಅವಳ ಪ್ರೀತಿ ಗೆಲ್ಲೋದು ಮುಖ್ಯ ಅನಿಸೋದೇ ಇಲ್ಲ..... ಆದರೆ ಹೆಂಗಸು ಮಾತ್ರ, ಅದೇ ಮೊದಲಿನ ಪ್ರೀತಿ ಗುಂಗಿನಲ್ಲೇ ಇರುತ್ತಾಳೆ...... ಇದರಲ್ಲಿ, ಇಬ್ಬರದೂ ತಪ್ಪು ಇರತ್ತೆ ನನ್ನ ಪ್ರಕಾರ,......... ಗಂಡಸು, ಹೆಣ್ಣನ್ನು ಅವನ ಮುಂದಿನ ಆದ್ಯತೆಯನ್ನು ಮನದಟ್ಟು ಮಾಡಿ ಮುಂದುವರಿಯಬೇಕು.......

    ReplyDelete
  14. ಸುಮಾ ಮೇಡಂ,
    ಅದೆಷ್ಟು ಚೆನ್ನಾಗಿ ಕಥೆ ಬರಿತಿರಾ
    ನಾನು ಬರೆಯೋಕೆ ಸ್ಟಾರ್ಟ್ ಮಾಡಿದ್ದೆ
    ಮುಂದೆ ಹೋಗಲೇ ಇಲ್ಲ
    ಸುಂದರ ಕಥೆ

    ReplyDelete