16 Sept 2010

ಹಬ್ಬದ ವಿಶೇಷ ಅಥಿತಿಗಳು

ಬಂದ ನಮ್ಮ ಗಣಪಾ...
ಉಂಡೆ ಚಕ್ಕುಲಿ ತಾರಪ್ಪಾ...
ಎಂದು ರಾಗವಾಗಿ ಒಕ್ಕೊರಲಿನಿಂದ ಆ ಹನ್ನೆರಡು ಪುಟ್ಟ ಬಾಲಕಿಯರು ಹಾಡುತ್ತಿದ್ದರೆ ನೊಡುತ್ತಿದ್ದ ನಮ್ಮ ಕಣ್ಣು ಹನಿಗೂಡಿದ್ದವು. ಕುಳ್ಳನೆಯ ಶರೀರ , ಬಿಳಿ ಬಣ್ಣ , ಅಗಲ ಮುಖ , ಚಿಕ್ಕ ಕಣ್ಣುಗಳ ಆ ಬಾಲಕಿಯರು ನಮ್ಮ ಊರಿನವರೇನಲ್ಲ . ಊರೇನು ಅವರು ನಮ್ಮ ರಾಜ್ಯದವರೇ ಅಲ್ಲ . ದೂರದ ಮೇಘಾಲಯದ ಬಾಲಕಿಯರವರು.

ಅಲ್ಲಿನ ಬುಡಕಟ್ಟು ಜನಾಂಗದವರಾದ ಅವರೆಲ್ಲರೂ ಉಗ್ರಗಾಮಿಗಳ ಹಾವಳಿಗೆ ಸಿಲುಕಿ ನಿರಾಶ್ರಿತರಾದ ಬಡ ಕುಟುಂಬದ ಮಕ್ಕಳು. ಸಾಗರದ ಮಂಜಪ್ಪಣ್ಣ ಎಂಬುವವರ ವನಶ್ರೀ ಶಾಲೆಯಲ್ಲಿ ಇಂತಹ ನೂರು ಮಕ್ಕಳು ಓದುತ್ತಿದ್ದಾರೆ ..... ಎಂದು ತಿಳಿಸಿದ್ದು ಆ ಹನ್ನೆರಡು ಮಕ್ಕಳನ್ನು ತಮ್ಮ ಮನೆಗೆ ಹಬ್ಬದ ವಿಶೇಷ ಅತಿಥಿಗಳನ್ನಾಗಿ ಕರೆತಂದಿದ್ದ ಶ್ರೀಧರಮೂರ್ತಣ್ಣ.

ಪ್ರತೀ ವರ್ಷ ಗಣಪತಿ ಹಬ್ಬಕ್ಕೆ ನನ್ನವರ ತವರುಮನೆಗೂ , ದೀಪಾವಳಿಗೆ ನನ್ನ ತವರುಮನೆಗೂ ಹೋಗುವುದು ನಮ್ಮ ಅಭ್ಯಾಸ. ಈ ಬಾರಿ ಕೆಲ ಕಾರಣಗಳಿಂದ ನನ್ನ ತವರಿನಲ್ಲೇ ಹಬ್ಬ ಆಚರಿಸಿದೆವು .

ಸಾಯಂಕಾಲ ಗಣಪತಿ ನೋಡಲೆಂದು ಊರಿನ ಮನೆಗಳಿಗೆ ಭೇಟಿಕೊಟ್ಟಾಗ ... ಶ್ರಿಧರಮುರ್ತಣ್ಣನ ಮನೆಯಲ್ಲಿದ್ದ ಈ ಮಕ್ಕಳನ್ನು ಕಂಡು ಆಶ್ಚರ್ಯವಾಯಿತು. ಅವರ ಬಗ್ಗೆ ತಿಳಿಸಿದ ಅಣ್ಣ , ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲೆಂದು ಅವರನ್ನು ಕರೆದಿರುವುದಾಗಿ ತಿಳಿಸಿದಾಗ ನಿಜಕ್ಕೂ ಹೆಮ್ಮೆಯೆನಿಸಿತು . ಅವರ ಮನೆಯಷ್ಟೇ ಅಲ್ಲ , ಶ್ರೀಧರಣ್ಣ ಚಂದ್ರಮತಿಯಕ್ಕ ಅವರ ಮನೆಗೂ ಆರು ಮಕ್ಕಳು ಆಹ್ವಾನಿತರಾಗಿದ್ದರೆಂದು ತಿಳಿದು ನಿಜಕ್ಕೂ ಸಂತಸವಾಯಿತು.
ಅನಾಥ ಮಕ್ಕಳಿಗೆ ದುಡ್ಡು ,ಬಟ್ಟೆ , ಪುಸ್ತಕಗಳನ್ನು ಕೊಡಿಸಿ ಸಹಾಯ ಮಾಡುವವರು ಸಿಗುತ್ತಾರೆ .ಆದರೆ ಹೀಗೆ ಹಬ್ಬದಂತಹ ಸಂದರ್ಭದಲ್ಲಿ ಅವರನ್ನು ಕರೆದು ಮನೆಯ ವಾತಾವರಣದಲ್ಲಿ ಅವರನ್ನು ಅತ್ಮೀಯವಾಗಿ ಸತ್ಕರಿಸುವವರು ಎಷ್ಟು ಮಂದಿ ಸಿಗುತ್ತಾರೆ ಹೇಳಿ?

ಪೂಜೆ , ಪಟಾಕಿ , ಹಬ್ಬದಡಿಗೆ , ನಂತರ ಊರ ಮನೆಗಳಿಗೆ ಭೇಟಿ ಎಲ್ಲದರಿಂದ ಆ ಪುಟ್ಟ ಮಕ್ಕಳು ನಿಜಕ್ಕೂ ಸಂತೋಷಗೊಂಡಿದ್ದರು. ಮೂರ್ತಣ್ಣನ ಅಮ್ಮ ಸವಿತಮ್ಮನಲ್ಲಿ ತಮ್ಮ ಅಮ್ಮನನ್ನು ಕಂಡ ಮಕ್ಕಳು ಅವರನ್ನು ತಬ್ಬಿಕೊಂಡು ಗದ್ಗದಿತರಾದ ವಿಷಯವನ್ನು ಸವಿತಮ್ಮಮ್ಮ ಹನಿಗಣ್ಣಾಗಿ ತಿಳಿಸಿದರು.

ಕಣ್ಣಂಚಿನಲ್ಲಿ ನೀರುತುಂಬಿಕೊಂಡು ಆ ಮಕ್ಕಳನ್ನೇ ನೋಡುತ್ತಿದ್ದ ನನ್ನ ಅಮ್ಮ ದೀಪಾವಳಿಗೆ ನಮ್ಮ ಮನೆಗೂ ಕೆಲ ಮಕ್ಕಳನ್ನು ಕರೆತರುವಂತೆ ಶ್ರೀಧರಮೂರ್ತಣ್ಣನಿಗೆ ಹೇಳಿದಾಗ ಅವನ ಮುಖದಲ್ಲಿ ಸಾರ್ಥಕಭಾವ ಇಣುಕಿತ್ತು.

13 comments:

  1. ನಿಮ್ಮ ಅಣ್ಣ ಹಾಗು ನಿಮಗೂ ನನ್ನ ಅಭಿನಂದನೆಗಳು...ಉತ್ತಮ ಕಾರ್ಯ ಇದ್ದನ್ನ ಹೀಗೆ ಮುಂದುವರೆಸಿ

    ReplyDelete
  2. ಮೇಡಮ್,

    ಇದು ನಿಜಕ್ಕೂ ಸಾರ್ಥಕತೆಯ ಕೆಲಸ. ಮೇಘಾಲಯದ ಮಕ್ಕಳ ಬಾಯಿಂದ ಗಣೇಶನ ಹಾಡು! ನಿಜಕ್ಕೂ ಖುಷಿಯ ವಿಚಾರ..ಅವರಿಗೆ ಅಭಿನಂದನೆಗೆಗಳು.

    ReplyDelete
  3. ಸಾರ್ಥಕವಾದ ಹಬ್ಬದ ಆಚರಣೆ , ಉತ್ತಮ ಅಭ್ಯಾಸ ಬೇರೆಯವರೂ ಇದೆ ರೀತಿ ಆಚರಿಸಿದಲ್ಲಿ ನಿಜವಾದ ಅರ್ಥ ಬರುತ್ತದೆ.

    ReplyDelete
  4. ಮೇಡಮ್, senti ಮಾಡ್ಬಿಟ್ರಿ.. ಮನಸ್ಸಿಗೆ ತುಂಬಾ ನಾಟಿತು... ಇದು ನಿಜವಾದ ಮಾನವೀಯತೆ. ನೀ ಏನೇ ಆಗು.. ಮೊದಲು ಮಾನವನಾಗು... ಕವಿ ನುಡಿ ಎಂದೆಂದು ಪಾಲನಾರ್ಹ...

    ReplyDelete
  5. ಅನುಕರಣೀಯ ಆದರ್ಶ ಎಲ್ಲರದಾಗಲಿ, ನಿಮಗೆ ಬರೆದು ಹಂಚಿದ್ದಕ್ಕೆ ಅಭಿನಂದನೆಗಳು

    ReplyDelete
  6. ಸುಮ ಮೇಡಮ್,
    ಮಕ್ಕಳ ಸಂತೋಷದಲ್ಲಿ ನಮಗೂ ಸಂತೋಷವಿದೆಯಲ್ವಾ ... ಒಳ್ಳೆಯ ಕೆಲಸ ಮಾಡಿದಿರಿ....
    ಕೆಲವೊಂದು ಫೋಟೊ ಹಾಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.....

    ReplyDelete
  7. ಸುಮ ಮೇಡಂ;ಲೇಖನ ಓದಿ ಮನಸ್ಸು ಆರ್ದ್ರಗೊಂಡಿತು.ಧನ್ಯವಾದಗಳು.

    ReplyDelete
  8. ಸುಮ,

    ಇಂತಹ ಪುಟಾಣಿಗಳಿಗೆ ಸಂತೃಪ್ತಿ, ಸಂತೋಷವನ್ನಿತ್ತರೆ ನಿಜವಾಗಿಯೂ ಆ ಭಗವಂತ ನಮಗೆಲ್ಲಾ ಒಳಿತನ್ನುಂಟುಮಾಡುವನು. ಹಬ್ಬದ ನಿಜವಾದ ಅರ್ಥವನ್ನು ಕಾಣಿಸಿದ ನಿಮ್ಮ ಶ್ರೀಧರಮೂರ್ತಣ್ಣನವರಿಗೆ, ಅದನ್ನು ಬರಹದ ಮೂಲಕ ತಿಳಿಸಿದ ನಿಮಗೆ ತುಂಬಾ ಧನ್ಯವಾದ.

    ReplyDelete
  9. ಸಾರ್ಥಕತೆಯ ಬದುಕಿನ ಸಂಕೇತ..
    ಶುಭವಾಗಲಿ..

    ReplyDelete
  10. ಸುಮಾರವರೆ,
    ನಿಮಗೆ ಹಾಗು ನಿಮ್ಮ ಅಣ್ಣನಿಗೆ hats off!

    ReplyDelete
  11. ಸುಮಾ ಮೇಡಂ,
    ಓದಿ ತುಂಬಾ ಸಂತೋಷವಾಯಿತು. ನಿಮ್ಮೆಲ್ಲರ ಈ ಅನುಕರಣೆ ಅಮಗೆ ಆದರ್ಶವಾಗಿರಲಿ,

    ReplyDelete
  12. ಸುಮ ಅವರೇ,

    ಶ್ರೀಧರಣ್ಣನಿಗೆ ನಮ್ಮ ಕಡೆಯಿಂದ ನಮಸ್ಕಾರಗಳು..

    ಹೆಚ್ಚಿಗೆ ಎನು ಹೇಳಲು ಮನಸ್ಸು ಯಾಕೋ ಗದ್ಗತವಾಗಿದೆ

    ReplyDelete
  13. ಇಂತಹ ಮಕ್ಕಳೊಡನೆ ಹಬ್ಬ ಆಚರಿಸುವದು ನಿಜಕ್ಕೂ ದೇವನಿಗೆ ಸಲ್ಲಿಸುವ ಪೂಜೆ. ನಿಮ್ಮ ಅಣ್ಣನವರಿಗೆ ಅವರ ಕುಟುಂಬದ ವರ್ಗಕ್ಕೆ ನಮ್ಮ ವಂದನೆಗಳು. ಅವರು ನಮಗೆ ಮಾದರಿಯಾಗಲಿ.
    ಈ ತರದ ಆಚರಣೆ ನಾನು ಸಂಕಲ್ಪಿಸಿರುವೆ.
    ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete