27 Sept 2010

ಚೂಟಿ ಅಳಿಲು

"ಏ ಸುಮ್ನೆ ಇರ್ತೀಯ ಇಲ್ಲ ಎರಡು ಬಾರಿಸಲಾ" ನಮ್ಮ ಕೆಲಸದ ರುಕ್ಕಮ್ಮ ಮನೆಯ ಹಿಂದಿನ ಯುಟಿಲಿಟಿಯಲ್ಲಿ ನಿಂತು , ತುಂಬ ಹೊತ್ತಿನಿಂದ ಪಕ್ಕದ ಬಿಲ್ಡಿಂಗ್ ಕಿಟಕಿ ಶಜ್ಜದ ಮೇಲೆ ಕುಳಿತು ಕ್ರೀಚ್ ಕ್ರೀಚ್ ಎಂದು ಕೂಗುತ್ತಿದ್ದ ಅಳಿಲಿಗೆ ಗದರಿಸುತ್ತಿದ್ದಳು. ಅವಳ ಮಾತು ಅರ್ಥವಾದವರಂತೆ ಅದು ಕೂಗುವುದನ್ನು ನಿಲ್ಲಿಸಿ ಓಡಿ ಹೋಯಿತು. ರುಕ್ಕಮ್ಮನ ಸಿಟ್ಟು ಈಗ ನನ್ನ ಮೇಲೆ ತಿರುಗಿತು. " ಏನಕ್ಕ ತೆಂಗಿನಕಾಯನ್ನು ತುರಿದವಳು ಪೂರ್ತಿಯಾಗಿ ತುರಿಯಲೇನಾಗತ್ತೆ ನಿನಗೆ ? ಇಷ್ಟೊಂದು ಹಾಗೆ ಉಳಿಸಿ ಅಳಿಲು ತಿನ್ನಲೆಂದೇ ಇಲ್ಲಿಡುತ್ತೀಯ ಅಲ್ವ? ಯಾಕೆ ನಿನಗೆ ಪಾರಿವಾಳಗಳ ಕಾಟ ಸಾಲುತ್ತಿಲ್ಲವೆ? ಇನ್ನು ಇದು ಇದರ ಸಂಸಾರ ಎಲ್ಲವಕ್ಕು ಜಾಗ ಕೊಡು " ಎಂದು ಗೊಣಗುತ್ತಾ ಪೊರಕೆ ಎತ್ತಿಕೊಂಡಳು. ನಾನಲ್ಲಿಂದ ಸುಮ್ಮನೇ ಜಾಗ ಖಾಲಿ ಮಾಡಿದೆ.
ಬೆಳಗಿನ ಬಿಸಿಲು ಬೀಳುತ್ತಿದ್ದಂತೆ ಈ ಅಳಿಲಿನ ಚಟುವಟಿಕೆ ಪ್ರಾರಂಭವಾಗುತ್ತದೆ . ಹಿಂದಿನ ಮನೆಯ ಮಾಡಿನಲ್ಲಿ ಕುಳಿತು ಕ್ರೀಚ್ ಕ್ರೀಚ್ ಸದ್ದುಮಾಡುತ್ತ , ಅತ್ತಿಂತ್ತಿತ್ತ ಇತ್ತಿಂದತ್ತ ಅದು ಓಡಾಡುವುದನ್ನು ನೋಡುತ್ತಿದ್ದರೆ ನಮಗೂ ಉತ್ಸಾಹ ಪುಟಿಯುತ್ತದೆ. ನಾನು ಯುಟಿಲಿಟಿಯ ಬಾಗಿಲು ಹಾಕಿದ್ದು ಅದಕ್ಕೆ ಹೇಗೆ ತಿಳಿಯುತ್ತೋ ...... ಪಕ್ಕದ ಬಿಲ್ಡಿಂಗಿನಿಂದ ಜಿಗಿದು ಬಂದು ಅಲ್ಲೇನು ಸಿಗುತ್ತದೆಂದು ಹುಡುಕುತ್ತದೆ . ಅದು ಬರುತ್ತದೆಂದೇ ನಾನಿಡುವ ತೆಂಗಿನಕಾಯಿಯ ಚಿಪ್ಪನ್ನು ತನ್ನ ಮುಂಗಾಲುಗಳಿಂದ ಹಿಡಿದು , ತನ್ನೆರಡು ಚೂಪಾದ ಹಲ್ಲುಗಳಲ್ಲಿ ಕಾಯಿ ಹೆರೆಯುತ್ತಾ ಸುತ್ತಮುತ್ತಲೂ ಗಮನಿಸುವ ಅದು ನನ್ನ ಹೆಜ್ಜೆ ಸಪ್ಪಳವಾದರೆ ಸಾಕು ಓಡಿಬಿಡುತ್ತದೆ. ತನ್ನ ಬೆನ್ನಬೇಲಿನ ಮೂರು ಪಟ್ಟೆಯಿಂದಾಗಿ ಪಟ್ಟೆ ಅಳಿಲು ಎಂಬ ಹೆಸರು ಗಳಿಸಿರುವ ಈ ಅಳಿಲುಗಳು ದಕ್ಷಿಣಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬೆನ್ನ ಮೇಲೆ ಐದು ಪಟ್ಟೆಗಳಿರುವ ಇದರ ಸಮೀಪದ ಸಂಭಂದಿ ಅಳಿಲುಗಳು ಉತ್ತರಭಾರತದಲ್ಲಿ ಹಚ್ಚಾಗಿರುತ್ತವಂತೆ. ಅದರ ಬೆನ್ನಮೇಲಿರುವ ಪಟ್ಟೆಗೆ ವೈಜ್ಞಾನಿಕ ಕಾರಣಗಳೇನಿವೆಯೋ ಗೊತ್ತಿಲ್ಲ. ಅದರೆ ನಮ್ಮ ಭಾರತೀಯರ ಪ್ರಕಾರ ಅದು ಶ್ರೀರಾಮನ ಬೆರಳ ಗುರುತು. {ರಾಮ ಸೇತುವೆ ಕಟ್ಟುವ ಸಮಯದಲ್ಲಿ ಒಂದು ಅಳಿಲು ತಾನೂ ಸಹಾಯ ಮಾಡಬೇಕೆಂಬ ಸಂಕಲ್ಪದಿಂದ ಮರಳಲ್ಲಿ ಹೊರಳಾಡಿ ಸೇತುವೆಯ ಮೇಲೆ ಹೋಗಿ ಮೈಯ್ಯಲ್ಲಿರುವ ಮರಳನ್ನು ಬೀಳಿಸುತ್ತಿತ್ತಂತೆ . ಅದರಿಂದ ಸಂತುಷ್ಟಗೊಂಡ ರಾಮ ಪ್ರೀತಿಯಿಂದ ಅದರ ಬೆನ್ನುಮೇಲೆ ಬೆರಳಾಡಿಸಿದನಂತೆ. ಅದರ ಗುರುತು ಇಂದಿಗೂ ಇದೆಯಂತೆ. ಎಷ್ಟು ಚೆಂದದ ವಿವರಣೆಯಲ್ಲವೇ?}

ಈ ಅಳಿಲುಗಳ ಫ್ಯಾಮಿಲಿಗೆ ಸೇರಿದ ಹಾರುವ ಅಳಿಲು, ಇಂಡಿಯನ್ ಜೈಂಟ್ ಅಳಿಲು , ಹಿಮಾಲಯನ್ ಅಳಿಲು ಮೊದಲಾದವುಗಳೆಲ್ಲ ಹೆಚ್ಚಾಗಿ ಕಾಡುವಾಸಿಗಳು. ಆದರೆ ಈ ಪಟ್ಟೆ ಅಳಿಲು ಮಾತ್ರ ಮಾನವರ ವಾಸಸ್ಥಾನದ ಸನಿಹದಲ್ಲೇ ವಾಸಿಸುತ್ತವೆ. ಮನೆಯ ಮಾಡು , ಕೈತೊಟದ ಗಿಡಮರಗಳು ಬೀದಿಬದಿಯ ಸಾಲುಮರಗಳಲ್ಲಿ ಹೆಚ್ಚಾಗಿ ಒಂಟಿಯಾಗಿ ಇವುಗಳ ವಾಸ.
ಹಣ್ಣು , ಕಾಯಿ, ಬೀಜಗಳು , ಗಿಡಮರಗಳ ಚಿಗುರು, ಕೆಲ ಜಾತಿಯ ಹೂವು , ಕೀಟಗಳು , ಇತ್ಯಾದಿಗಳು ಇವುಗಳ ಅಹಾರ. ಹಕ್ಕಿಯ ಮೊಟ್ಟೆಗಳನ್ನು ಕದ್ದು ತಿನ್ನುವ ಚೋರ ಕೂಡ.
ಮುಂದಿನ ಚೂಪಾದ ಹಲ್ಲುಗಳು ಗಟ್ಟಿಯಾದ ವಸ್ತುಗಳನ್ನೂ ಒಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಮುಂಗಾಲಿನಲ್ಲಿ ಆಹಾರವನ್ನು ಹಿಡಿದು ಬಾಯಿಗಿಡುತ್ತದೆ.
ಮರದ ರೆಂಬೆಗಳು , ಎತ್ತರದ ಕಂಬಿಗಳನ್ನು ಹಿಡಿಯಲು , ಬ್ಯಾಲೆನ್ಸ್ ಮಾಡಲು ಸುಲಭವಾಗುವಂತೆ ಕಾಲುಗಳ ಬೆರಳುಗಳ ರಚನೆಯಿದೆ. ದೇಹದ ರೋಮಗಳು ಬಿಸಿಲು ಚಳಿಯಿಂದ ರಕ್ಷಣೆ ನೀಡುತ್ತದೆ.
ತುಂಬ ಗಲಾಟೆ ಸ್ವಭಾವ ...... ಕೂಗುವುದು ಹೆಚ್ಚು. ತಿನ್ನುವಾಗ ಕೂಡ ಶಬ್ದ ಮಾಡುತ್ತದೆ.
ಹೆಣ್ಣು ಅಳಿಲು ಮರಿಹಾಕುವ ಸಮಯಕ್ಕೆ ಮರದಮೇಲೆ ಅಥವಾ ಮನೆಯ ಮಾಡಿನ ಸಂದುಗಳಲ್ಲಿ ಹುಲ್ಲು, ಒಣಎಲೆಗಳಿಂದ ಗೂಡು ನಿರ್ಮಿಸುತ್ತದೆ.

ಈ ಅಳಿಲುಗಳು ಮಾನವರಿಗೆ ಉಪಕಾರಿಗಳೂ ಹೌದು ಮತ್ತು ಅಪಕಾರಿಗಳೂ ಹೌದು.
ಅಳಿಲುಗಳು ಹಣ್ಣು ಕಾಯಿಗಳು, ಮರಗಿಡಗಳ ಚಿಗುರು , ಹೂವುಗಳನ್ನು ತಿನ್ನುವುದರಿಂದ ಅನೇಕ ಬೆಳೆ ನಾಶವಾಗುತ್ತದೆ. ಅಲ್ಲದೆ ತನ್ನ ಹತ್ತಿರದ ಸಂಭಂದಿ ಇಲಿಗಳಂತೆಯೇ ಇವೂ ಕೂಡ ಪ್ಲೇಗ್ ಮಹಾಮಾರಿಯ ವಾಹಕಗಳು. ಈ ರೀತಿಯಲ್ಲಿ ಇವು ಮಾನವರಿಗೆ ಅಪಕಾರಿಗಳು.
ಗಿಡಮರಗಳಿಗೆ ಕಾಟ ಕೊಡುವ ಅನೇಕ ಕೀಟಗಳನ್ನು ಇವು ಹಿಡಿದು ತಿನ್ನುತ್ತವೆ. ಕೆಲ ಹೂವುಗಳ ಮಕರಂದ ಹೀರುವ , ಹಣ್ಣುಗಳನ್ನು ತಿನ್ನುವ ಇವುಗಳಿಂದ ಪಾಲಿನೇಶನ್ ಹಾಗೂ ಬೀಜಪ್ರಸರಣ ಕ್ರಿಯೆ ನಡೆಯುತ್ತದೆ. ಅಲ್ಲದೇ ಇವುಗಳು ಅನೇಕ ಮಾಂಸಾಹಾರಿ ಪ್ರಾಣಿಗಳಿಗೆ ಸುಲಭವಾಗಿ ದೊರಕುವ ಆಹಾರವಾಗಿವೆಯಾದ್ದರಿಂದ ಪ್ರಕೃತಿಯ ಆಹಾರ ಸರಪಳಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಈ ರೀತಿಯಲ್ಲಿ ಅಳಿಲುಗಳು ಮಾನವರಿಗೆ ಉಪಕಾರಿ ಕೂಡ.

ಎಲ್ಲಕ್ಕಿಂತ ಮನೆಯ ಆಸುಪಾಸಿನಲ್ಲಿ ಈ ಆಳಿಲುಗಳು ತುಂಬ ಚಟುವಟಿಕೆಯಿಂದಿರುವುದು ನೋಡಲು ಚೇತೋಹಾರಿಯಾಗಿರುತ್ತದೆ.

20 comments:

 1. ಸುಮ...

  ನಮ್ಮನೆಯ ಬಾಲ್ಕನಿಗೂ ದಿನ ಒಂದು ಅಳಿಲು ಸಂಸಾರ ಬರುತ್ತದೆ...
  ಬಹಳ ಚೂಟಿಯಾಗಿರುತ್ತವೆ..

  ಅವುಗಳನ್ನು ನೋಡುವದು ಬಹಳ ಖುಷಿಯಾಗಿರುತ್ತದೆ...

  ಫೋಟೊಗಳು ಚೆನ್ನಾಗಿವೆ..

  ಅಭಿನಂದನೆಗಳು...

  ReplyDelete
 2. ಸುಮ
  ಬಹಳ ಚೂಟಿ ಅಲ್ಲವಾ ಅಳಿಲುಗಳು...? ಒಳ್ಲೆಯ ಅಬ್ಸರ್ವೇಶನ್...ಮತ್ತೆ ಅಷ್ಟೇ ಸ್ವಾರರ್ಸ್ಯಕರವಾಗಿ ಮಾಹಿತಿಯನ್ನ ಪೋಣಿಸಿದ್ದೀರಿ...ಒಳ್ಲೆಯ ಫೋಟೋಸ್

  ReplyDelete
 3. ಅಳಿಲುಗಳನ್ನ ನೋಡಿದರೇ ಖುಷಿಯಾಗುತ್ತೆ..... ತುಂಬಾ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು

  ReplyDelete
 4. ಅಳಿಲುಗಲ ಆಟ ನೋಡುತ್ತಿದ್ದರೆ ಮನಸ್ಸಿಗೋ ಏನೋ ಮುದ ಅಲ್ಲವೇ..
  ಅಳಿಲುಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ....

  ReplyDelete
 5. ಸುಮಾ,
  ಅಳಿಲುಗಳ ಬಗೆಗೆ ಸೊಗಸಾದ ಮಾಹಿತಿ ಓದಿ ಹಾಗು ಅಳಿಲಿನ ಚಿತ್ರ ಮೋಡಿ ಖುಶಿಯಾಯಿತು. ಮುದ್ದು ಅಳಿಲಿನ ಬಗೆಗೆ ಮುದ್ದು ಬರದೆ ಇರಬಹುದೆ? ಅದಕ್ಕಾಗಿ ನಿಮಗೆ ಧನ್ಯವಾದಗಳು.

  ReplyDelete
 6. ಸುಮಾ, ಒಳ್ಳೆಯ ವಿವರಣೆ :-)
  ಇಲ್ಲಿ ಮನೆಯ ಹೊರಗಡೆ ಅಳಿಲು ಬಿಟ್ರೆ ಬೇರೆ ಯಾವ ಪ್ರಾಣಿನು ಕಾಣ ಸಿಗುವುದಿಲ್ಲ. ಇಲ್ಲಿಯ ಅಲಿಳುಗಳಲ್ಲಿ ಮೂರು ನಾಮ ಇರುವುದಿಲ್ಲ, ಮತ್ತು ಅವು ಸ್ವಲ್ಪಾನೂ ಹೆದರೋದಿಲ್ಲ.ಕೆಲವೊಮ್ಮೆ ನನ್ನ ಮಗಳು stepsನಲ್ಲಿ ಹಾಕಿದ bird feedನ್ನು ತಿಂದು ಹೋಗ್ತವೆ.ಯಾವಾಗಲೂ pine treeಯಲ್ಲಿ ಕುಳಿತುಕೊಂಡು pine coneಗಳನ್ನ ತಿನ್ನುತ್ತ ಇರ್ತವೆ.ನಮ್ಮನೆಯವರಿಗೆ ಅದರ ಬಗ್ಗೆ ತುಂಬಾ worries..ಅವಕ್ಕೆ winterನಲ್ಲಿ ಏನು ತಿನ್ನಕ್ಕೆ ಇರಲ್ಲ ಅಂತ :(

  ReplyDelete
 7. ಸುಮ ಮೇಡಮ್,
  ಅಂತೂ ಊರಲ್ಲಿ ಒಳ್ಳೋಳ್ಳೆ ವಿಷಯವನ್ನೇ ಆರಿಸಿ ತಂದಿದ್ದೀರಾ.... ಅಳಿಲಿನ ಫೊಟೊ ತೆಗೆಯಬೇಕೆಂದು ತುಂಬಾ ಪ್ರಯತ್ನ ಪಟ್ಟಿದ್ದೆ..... ಆಗಿರಲಿಲ್ಲ..... ಧನ್ಯವಾದ ನಿಮ್ಮ ವಿವರಣೆ ಮತ್ತು ಫೋಟೊಗೆ.....

  ReplyDelete
 8. ಕಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು.
  ----ವನಿತಾ ಅವರೆ ಚಳಿಗಾಲದಲ್ಲಿ ಅಲ್ಲಿಯ ಅಳಿಲುಗಳು ಹೈಬರ್ನೇಟ್[hybernate] ಅಗುತ್ತವೆಂದು ಓದಿದ ನೆನಪು . ಹೀಗೆ ಚಳಿಗಾಲದಲ್ಲಿ ಹೈಬರ್ನೇಟ್ ಆಗುವ ಪ್ರಾಣಿಗಳ ದೈಹಿಕ ಚಟುವಟಿಕೆ ತುಂಬಾ ಕಮ್ಮಿ ಇರುವುದರಿಂದ ಆಗ ಆಹಾರದ ಅವಶ್ಯಕತೆಯೂ ಕಡಿಮೆ. ನೀವು ಗಮನಿಸಿದಂತೆ ಚಳಿಗಾಲದಲ್ಲಿ ಅವುಗಳ ಚಟುವಟಿಕೆ ಹೇಗಿರುತ್ತೆ?
  ----ದಿನಕರ್ ಅವರೆ ಈ ಅಳಿಲು ಬೆಂಗಳೂರಿನದೇ , ಊರಿನದಲ್ಲ.

  ReplyDelete
 9. ಜಿಗಣಿ ಆತು ಈಗ ಅಳಿಲಿನ ಪಾಳಿ. ನಾ ಈ ಬೆಂಗಳೂರಿನಲ್ಲಿಯೇ ಇಷ್ಟು ಅಳಿಲು ನೋಡಿದ್ದು ನಮ್ಮ ಹುಬ್ಬಳ್ಳಿಯಲ್ಲಿ
  ಇವು ಅಪರೂಪ .ನಮ್ಮ ಮನೆ ಒಳಗೂ ಒಂದೆರಡು ಸಾರಿ ಬಂದು ಹೋಗಿವೆ..

  ReplyDelete
 10. ಅಳಿಲಿನ ಬಗೆಗಿನ ಲೇಖನ ತುಂಬಾ ಚೆನ್ನಾಗಿ ಇದೆ....ಗುಡ್ ಒನ್.... ಒಳ್ಳೆಯ ಮಾಹಿತಿ....

  ReplyDelete
 11. ಸುಮಮೇಡಮ್,
  ಆಳಿಲಿನ ಆಟವನ್ನು ನೋಡಲು ಬಲು ಖುಷಿಯಾಗುತ್ತದೆ. ನಿಮ್ಮ ಮನೆಯಂಗಳದ ಅಳಿಲಿನ ಆಟವನ್ನು ಅದರ ಚಿತ್ರವನ್ನು ಜೊತೆಗೆ ಪೂರ್ಣ ಮಾಹಿತಿಯನ್ನು ಕೊಟ್ಟಿದ್ದೀರಿ..ತುಂಬಾ ಚೆನ್ನಾಗಿ ವಿವರವೂ ಇದೆ.

  ReplyDelete
 12. ಸುಮ ಅವರೇ,
  ನೆಹರು ಜೈಲಿನಲ್ಲಿದ್ದಾಗ ಅವರ ಕೊಠಡಿಯ ಹತ್ತಿರ ಬರುತ್ತಿದ್ದ ಪ್ರಾಣಿಗಳ ಬಗ್ಗೆ ಬರೆದಿದ್ದು ನೆನಪಾಯಿತು. ಚೆನ್ನಾಗಿದೆ ಅಳಿಲು ಸೇವೆ :)

  ReplyDelete
 13. Hi Suma..came here after looking in to ur blog link in orkut thinking that you might have posted new post!!
  anyway, In Texas its not freezing cold, temp goes to 0-1C during winter, and rarely we can see snow..so as for my knowledge,I see them during winter too..
  yeah...they may hibernate during severe weather:)

  ReplyDelete
 14. ನಮ್ಮ ಮನ್ನೆಯ ಮುಂದಿನ ವಿಧುತ ಕಂಬದಿಂದ ರಸ್ತೆ ಆಚೆಪಕ್ಕದಲ್ಲಿರುವ ಮನೆಗೆ ಎಳೆದ ಪೂರೈಕೆ ಕೇಬಲ್ನಿಂದ ಆಚೆಮನೆಯಿಂದ ಕಂಬಕ್ಕೆ ಬಂದು ಮತ್ತೆ ನಮ್ಮ ಪೂರೈಕೆ ಕೇಬಲ್ ಮುಖಾಂತರ ಬರುವ ಅಳಿಲುಗಳು ಸದಾ ಕೌತಕದಿಂದಲೇ ಅತ್ತಿತ್ತ ನೋಡುತ್ತಾ ಸರ ಸರ ಹರಿಯುತ್ತಾ ನಮ್ಮ ಗಮನ ಬಂದರೆ ಪಟ್ಟನೆ ಓಡುವವು.
  ಅಳಿಲಿನ ಬಗೆಗಿನ ಮಾಹಿತಿಗೆ ಮತ್ತು ಉತ್ತಮ ಚಿತ್ರಗಳಿಗೆ ವಂದನೆಗಳು. ನಾನು ಚಿತ್ರ ಹಿಡಿಯಬೇಕೆಂದು ತಯಾರಿ ನಡೆಸಿ ಬರುವದರಲ್ಲಿ ಅವು ಮಾಯವಗಿರುತ್ತವೆ. :-(

  ReplyDelete
 15. ತುಂಬಾ ಚನ್ನಾಗಿವೆ ಬರಹಗಳು ಹಾಗೆ ಪೂರಕ ಫೋಟೋಗಳು ಅವೂ ಸ್ವತಹ ತೆಗೆದವು, ಅಳಿಲೆಂದರೆ ನಗೆ ತುಂಬಾ ಇಷ್ಟ.. ಅಳಿಲ ನೋಡುತ್ತಾ ಕೂರುತ್ತಿದ್ದ ಚಿಕ್ಕಂದಿನ ನೆನಪಿಗೆ ಒಯ್ದಿರಿ ನನ್ನ..
  ಹೀಗೆ ಬರೀರಿ,

  -ವೆಂಕಟ್ರಮಣ ಭಟ್

  ReplyDelete
 16. ತುಂಬಾ ಚನ್ನಾಗಿವೆ ಬರಹಗಳು ಹಾಗೆ ಪೂರಕ ಫೋಟೋಗಳು ಅವೂ ಸ್ವತಹ ತೆಗೆದವು, ಅಳಿಲೆಂದರೆ ನಗೆ ತುಂಬಾ ಇಷ್ಟ.. ಅಳಿಲ ನೋಡುತ್ತಾ ಕೂರುತ್ತಿದ್ದ ಚಿಕ್ಕಂದಿನ ನೆನಪಿಗೆ ಒಯ್ದಿರಿ ನನ್ನ..
  ಹೀಗೆ ಬರೀರಿ,

  -ವೆಂಕಟ್ರಮಣ ಭಟ್

  ReplyDelete
 17. ಪ್ರಕೃತಿ ಬಗೆಗಿನ ನಿಮ್ಮ ಲೇಖನಗಳು ಚೆನ್ನಾಗಿವೆ.....

  RAGHU- ನನ್ನ ಬ್ಲಾಗ್ www.ragat-paradise.blogspot.com

  ReplyDelete