12 Jan 2011

ಮಾಟ

ಮಾಗಿಯ ಚಳಿಯ ಚುಮು ಚುಮು ಮುಂಜಾವಿಗೇ ದಿನದ ಅಭ್ಯಾಸದಂತೆ ಕಣ್ಣು ಬಿಟ್ಟ ನಿಂಗಿ , ತನ್ನ ಸೊಂಟದ ಮೇಲಿದ್ದ ಪುಟ್ಟ ಮಗ ಸತೀಶನ ಕಾಲನ್ನು ತೆಗೆದು ಕೆಳಗಿಟ್ಟು ಬೆಟ್ಟದ ಚೌಡವ್ವನನ್ನು ನೆನೆಯುತ್ತಾ ಎದ್ದಳು . ಮೈಮುರಿಯುತ್ತಾ ಹಿತ್ತಿಲಿಗೆ ಬಂದು , ಮುಖ ತೊಳೆದು ಪೊರಕೆ, ನೀರು ಹಿಡಿದು ಹೊರಬಾಗಿಲಿಗೆ ಬಂದಳು . ಅಂಗಳ ಗುಡಿಸಿ ನೀರೆರಚುವಾಗ ಅಂಗಳದ ಬಲಪಕ್ಕದ ಬಸಳೇ ಚಪ್ಪರದ ಬಳಿ ಏನೋ ಕಂಡಂತಾಗಿ ನಿಧಾನವಾಗಿ ಹತ್ತಿರ ಹೋದಳು. ಬಳ್ಳಿಯ ಬುಡದ ಬಳಿ ಚೆಲ್ಲಿದ್ದ ಕುಂಕುಮ , ಲಿಂಬೇಹಣ್ಣು, ಬಳೆ ಚೂರು, ಸಣ್ಣ ಮಾನವ ಗೊಂಬೆಯನ್ನು ನೋಡಿದ ನಿಂಗಿಯ ಗಂಟಲೊಣಗಿತು. ಸತ್ಯಕ್ಕೂ ಇದು ಪಕ್ಕದ ಮನೆ ಸೋಮಪ್ಪ ಮತ್ತವನ ಚಿನಾಲಿ ಹೆಂಡತಿ ಮಂಜಿಯದೇ ಕೆಲಸವೆಂದು ನಿಂಗಿಗೆ ಅರ್ಥವಾಗಿಹೋಯಿತು. ಪೊರಕೆ ಚೊಂಬು ಅಲ್ಲೆ ಎಸೆದು ಬಿರಬಿರನೆ ಮನೆಯೊಳ ನೆಡೆದ ನಿಂಗಿ ಇನ್ನೂ ಮಲಗಿ ಗೊರಕೆ ಹೊಡೆಯುತ್ತಿದ್ದ ಕರಿಯನ ಕಂಬಳಿ ಕಿತ್ತೆಸೆದಳು.

"ಏ ಲೌಡಿ ಏನಾಗೈತೆ " ಸಿಟ್ಟಿನಿಂದ ಕೂಗುತ್ತಾ ಎದ್ದ ಕರಿಯ , ಗಾಭರಿ ಭಯಗಳಿಂದ ನಡುಗುತ್ತಾ ಕುಸಿದ ನಿಂಗಿಯನ್ನು ಕಂಡು ಮೃದುವಾಗಿ ಏನಾಗೈತೇ ಹುಸಾರಿಲ್ಲೇನೆ ಎಂದ .

ನಡುಗುತ್ತಲೇ "ನಮ್ಮನೆಯಾಗೆ ಯಾವ್ದೊ ಹೆಣ ಬೀಳತೈತೆ" ಎಂದಳು ನಿಂಗಿ .

ಏ ಅದೇನು ಸರಿಯಾಗಿ ಬೊಗಳೆ ಎಂದ ಕರಿಯ.

" ಐದಾವಲ್ಲ ನಿನ್ನ ಅಣ್ಣ ಅತ್ತಿಗೆ ಅವಕ್ಕೆ ನಮ್ಮ ಮನೆಲಿ ಹೆಣ ಬೀಳಾವರ್ಗೂ ಸಂತೋಸ ಇಲ್ಲ ನೋಡು . ನಮಗಿರೋ ಇದೊಂದು ಮನೇನೂ ನುಂಗಬೇಕೂಂತ ಏನೇನೋ ಆಟ ಆಡಿದ್ರು . ಈಗ.. ಈಗ.. ಮಾಟ ಮಾಡಿಸ್ಯಾರೆ, ನೀನೇ ನೋಡು ಆ ಬಸಳೆಬಳ್ಳಿ ಬುಡದಾಗೆ "

ನಿಂಗಿ ಹೇಳುತ್ತಿದ್ದಂತೇ ಗಡಬಡಿಸಿ ಎದ್ದು ಬಿಚ್ಚಿಹೋಗುತ್ತಿರುವ ಲುಂಗಿ ಸೊಂಟಕ್ಕೆ ಬಿಗಿಯುತ್ತಾ ಹೊರಗೋಡಿದ ಕರಿಯ . ಬಸಳೇ ಬಳ್ಳಿಯ ಬಳಿ ಬಿದ್ದಿದ್ದ ವಸ್ತುಗಳನ್ನು ನೋಡಿ ಅವನಿಗೂ ತಮ್ಮ ಮೇಲೆ ಮಾಟ ಮಾಡಿಸಿರೋದರ ಬಗ್ಗೆ ಅನುಮಾನ ಉಳಿಯಲಿಲ್ಲ.

ಒಳಗೆ ಬಂದು ತಲೇ ಮೇಲೆ ಕೈಹೊತ್ತು ಕುಳಿತ ಕರಿಯನನ್ನು ನೋಡಿ "ಹಿಂಗೆ ಕೂತ್ರೆ ಆಗ್ತೈತ ಏಳು ಏನಾದ್ರೂ ಮಾಡು . ಆ ಸೇಸಭಟ್ರ ಹತ್ರ ಹೋಗಿ ಮಾಟ ತೇಗೀತಾರಾ ಕೇಳು" ಎಂದಳು ನಿಂಗಿ.

"ಹೂಂ ಹೌದು ನೋಡು ಅವರೇ ಸೈ ಅದಕ್ಕೆ " ಎನ್ನುತ್ತಾ ಎದ್ದ ಕರಿಯ.


ಬೆಳಂಬೆಳಗ್ಗೆ ಬಂದು ಜಗಲಿ ಕಟ್ಟೆಯ ತುದಿಯಲ್ಲಿ ಕುಳಿತ ಕರಿಯನನ್ನು ನೋಡಿ "ಏನೋ ಮರಾಯ ಇಷ್ಟು ಬೇಗ ಬಂದ್ಯಲ " ಎಂದರು ಶೇಷಭಟ್ಟರು.

ತನ್ನ ಅಣ್ಣನ ದುರ್ಬುದ್ಧಿಯನ್ನು , ಅವನೀಗ ಮಾಡಿದ ಕುಕೃತ್ಯವನ್ನು ಕರುಣೆಯುಕ್ಕುವಂತೆ ಹೇಳಿದ ಕರಿಯ .

ಈ ಊರಿಗೊಬ್ಬನೇ ಮಾಟಗಾರನಾದ ತನ್ನನ್ನು ಬಿಟ್ಟು ಬೇರಾರ ಬಳಿ ಮಾಟ ಮಾಡಿಸಿರಬಹುದು ಆ ಸೋಮಪ್ಪ ಎಂಬ ಗಹನ ವಿಚಾರದಲ್ಲಿ ಮುಳುಗಿದ್ದ ಭಟ್ಟರನ್ನು " ನಮ್ಮನ್ನ ನೀವೆ ಕಾಪಾಡಬೇಕು ಸ್ವಾಮ್ಯೋರೆ " ಎಂಬ ಕರಿಯನ ಧ್ವನಿ ಎಚ್ಚರಿಸಿತು.

"ಕಾಪಾಡಬೋದಿತ್ತು ಆದರೆ ಅದಕ್ಕೆಲ್ಲ ತುಂಬ ಖರ್ಚಾಗತ್ತೆ . ಸುಮಾರು ಮೂರು ಸಾವಿರಾನಾದ್ರೂ ಬೇಕು . ತಂದ್ರೆ ನಾನು ಪೂಜೆ ಮಾಡಿಸ್ತೀನಿ " ಎಂದರು ಭಟ್ಟರು.

"ಬಡವ ಸ್ವಾಮಿ ಅಷ್ಟು ದುಡ್ಡು ಎಲ್ಲಿಂದ ತರಲಿ ಸ್ವಲ್ಪ ಕಮ್ಮಿ ಮಾಡ್ಕಳಿ " ಕರಿಯ ಗೋಗರೆದ .

"ನೋಡೊ ಆ ಪೂಜೆಗೆ ಬೇಕಾಗುವ ಸಾಮಾನುಗಳು ದುಬಾರಿ. ಅಷ್ಟು ದುಡ್ಡು ಬೇಕೆ ಬೇಕು . ಈಗ ತಂದು ಕೊಟ್ಟರೆ ಇವತ್ತು ರಾತ್ರಿಯೇ ಪೂಜೆ ಮಾಡುಸ್ತೀನಿ ... ನಾಳೆ ನಿಂಗೊ ನಿಮ್ಮನೆಯವರಿಗೋ ಅಪಾಯವಾದ ಮೇಲೆ ಬಂದರೆ ಏನೂ ಮಾಡಾಕಾಗಲ್ಲ ನನ್ನ ಕೈಲಿ ಹೇಳಿದ್ದೀನಿ "

ಭಟ್ಟರ ಬೆದರಿಕೆಗೆ ಸಂಪೂರ್ಣ ಬಾಗಿದ ಕರಿಯ , ಈಗಲೇ ದುಡ್ಡು ತಂದು ಕೊಡುವುದಾಗಿ ಹೇಳಿ ಹೊರಟ.

ಅಷ್ಟು ದುಡ್ಡು ಎಲ್ಲಿಂದ ತರಲೆಂದು ಯೋಚಿಸುತ್ತಲೇ ಮನೆಗೆ ಬಂದ ಕರಿಯ. ಏನಾಯ್ತೆಂದು ಕೇಳಿದ ನಿಂಗಿಯ ಬಳಿ ಸಮಸ್ಯೆ ಹೇಳಿದ .

"ಅಷ್ಟೇಯ!.. ಹೆಗಡೇರ ಹತ್ರ ಕೇಳಿದರಾತು ಬಿಡು .. ಇಬ್ಬರೂ ಅವರ ಬಳಿ ಕೆಲಸ ಮಾಡ್ತೇವಲ್ಲ .. ಇಷ್ಟು ಸಾಲ ಕೊಡಲ್ಲಾಂದಾರ ?’" ನಿಂಗಿಯೆಂದಾಗ ಅದೇ ಸರಿಯೆಂದು ತೋರಿತು ಕರಿಯನಿಗೆ.


ಬೇಗ ಬೇಗ ಇನ್ನೂ ಮಲಗಿದ್ದ ಮಕ್ಕಳನ್ನೆಬ್ಬಿಸಿ , ಅವಕ್ಕೆ ಗಂಜಿ ಕುಡಿಸಿ , ಯಾರೂ ಬಸಳೇಬಳ್ಳಿಯ ಬುಡಕ್ಕೆ ಮಾತ್ರ ಹೋಗಬಾರದೆಂದೂ ಹೋದರೆ ಸತ್ತೇ ಹೋಗುವಿರೆಂದೂ ಹೆದರಿಸಿ , ಟೇಮಾಗೋತು ಹೆಗಡೇರ ಹತ್ತಿರ ಬೈಸಿಕೊಳ್ಳೊದೇ ಸೈ ಎಂದುಕೊಳ್ಳುತ್ತ ಕರಿಯ ನಿಂಗಿ ಇಬ್ಬರೂ ದಿನದ ಕೆಲಸಕ್ಕೆ ಹೆಗಡೇರ ಮನೆಗೆ ಹೊರಟರು.


ಕರಿಯ ಹೆಗಡೇರ ಮನೆಯ ಕೊಟ್ಟಿಗೆಯ ದನಗಳನ್ನೆಲ್ಲ ಹೊರಬಿಟ್ಟು, ಸಗಣಿ ತೆಗೆದು, ಗೋಬರ್ ಗ್ಯಾಸ್ ಟ್ಯಾಂಕಿಗೆ ಸಗಣಿ ನೀರು ಹಾಕಿ ಕದಡುವ ಹೊತ್ತಿಗೆ ನಿಂಗಿ ಹೊರ ಅಂಗಳ , ಹಿತ್ತಿಲ ಅಂಗಳಗಳನ್ನು ಗುಡಿಸಿ ಸಾರಿಸಿದಳು.


ಒಂದು ಬಾಳೆ ಎಲೆಯಲ್ಲಿ ನಾಲ್ಕು ದೋಸೆ ಸ್ವಲ್ಪ ಮಿಡಿಮಾವಿನ ಉಪ್ಪಿನಕಾಯಿ ರಸಗಳನ್ನು ಹಾಕಿಕೊಂಡು ಹಿತ್ತಿಲಿಗೆ ಬಂದ ಹೆಗಡೇರ ಹೆಂಡತಿ ಸಣ್ಣಮ್ಮ ಅದನ್ನು ನಿಂಗಿಗೆ ಕೊಡುತ್ತಾ ತಿಂದಾದ ಮೇಲೆ ಅಕ್ಕಿ ಘನಮಾಡಿಕೊಡಬೇಕೆಂದು ಆದೇಶಿಸಿದರು.


ಇಬ್ಬರೂ ಕುಳಿತು ಮಿಡಿ ಉಪ್ಪಿನಕಾಯಿ ರಸದೊಂದಿಗೆ ಒಂದೊಂದು ದೋಸೆ ತಿನ್ನುವಾಗ ನಿಂಗಿ ಇನ್ನೊಮ್ಮೆ ದುಡ್ಡಿನ ವಿಷಯ ನೆನಪಿಸಿದಳು. ಉಳಿದ ದೋಸೆಯನ್ನು ಮಕ್ಕಳಿಗೆಂದು ಬಾಳೆ ಎಲೆಯಲ್ಲಿ ಸುತ್ತಿ ಸೊಂಟದ ಸೀರೆ ಗಂಟಿನಲ್ಲಿ ಸಿಕ್ಕಿಸಿದ ನಿಂಗಿ ಅಕ್ಕಿ ಘನಮಾಡಲು ಹೊರಟಳು.


ಕರಿಯ ಜಗುಲಿಗೆ ಬಂದು ಆಗತಾನೆ ತಿಂಡಿ ಮುಗಿಸಿ ಕವಳ ಹಾಕುತ್ತಿದ್ದ ಹೆಗಡೇರ ಎದುರು ನಿಂತ .

"ಹೋ ಬಂದ್ಯ ಇವತ್ತು ತೋಟದಿಂದ ಏಲಕ್ಕಿ ಕೊಯ್ದು ತರಬೇಕು " ಆದೇಶಿಸಿದರು.

ತಲೆ ಕೆರೆಯುತ್ತ ಇನ್ನೂ ನಿಂತೇ ಇದ್ದ ಕರಿಯನನ್ನು ನೋಡಿ " ಏನೋ ಹೇಳಿದ್ದು ಕೇಳಿಸಲಿಲ್ವಾ ..ಎಂದರು ಹೆಗಡೇರು.

" ಸ್ವಲ್ಪ ದುಡ್ಡು ಬೇಕಿತ್ತು ಹೆಗ್ಡೇರೆ " ತನ್ನ ಎಂದಿನ ಶೈಲಿಯಲ್ಲಿ ತಲೆ ಕೆಳಹಾಕಿ ಹೇಳಿದ ಕರಿಯ.

"ಇವತ್ಯಾಕೊ ದುಡ್ಡು , ಸಾಗರ ಸಂತೆಗೆ ಇನ್ನೂ ನಾಲ್ಕು ದಿನ ಇದೆಯಲ್ಲ " . ಕೇಳಿದ ಹೆಗಡೆಯವರ ಬಳಿ ತನ್ನ ಗೋಳನ್ನೆಲ್ಲ ವಿವರಿಸಿದ ಕರಿಯ.

"ಆ ಭಟ್ಟನಿಗೆ ಬೇರೆ ಕೆಲಸವಿಲ್ಲ . ನಿನ್ನ ಬಳಿ ದುಡ್ಡು ಕೀಳಲು ಹಾಗೆ ಹೇಳಿದ್ದಾನೆ . ಮಾಟವಂತೆ , ಮಂತ್ರವಂತೆ ಅವನಿಗೇನು ಗೊತ್ತೊ ... ಸುಮ್ಮನೆ ಮರುಳಾಗ್ತೀರಿ ನೀವು . ಏನೂ ಆಗಲ್ಲ ಹೋಗು " ಹೆಗಡೇರು ಹೇಳಿದಾಗ ಕರಿಯನ ಕಣ್ಣಂಚಿನಿಂದ ನೀರು ಜಿನುಗಿತು.

ಮೆತ್ತಗಾದ ಹೆಗಡೇರು "ಸರಿ ಮಾರಾಯ ಅಳಬೇಡಾ ಮೊದಲೇ ನಿನ್ನ ಸಾಲ ನಾಲ್ಕು ಸಾವಿರವಿದೆ .. ಇನ್ನೂ ಮೂರು ಸಾವಿರ ಕೊಡಲಾಗುವುದಿಲ್ಲ . ಒಂದು ಸಾವಿರ ಕೊಡುತ್ತೇನೆ ತೆಗೆದುಕೊಂಡು ಹೋಗಿ ಅದೇನು ಮಾಡ್ತೀಯೋ ಮಾಡು " ಎನುತ್ತಾ ಒಳಗಿಂದ ದುಡ್ಡು ತಂದು ಕೊಟ್ಟರು.


ಇನ್ನೂ ಎರಡು ಸಾವಿರವನ್ನೆಲ್ಲಿಂದ ತರುವುದೆಂದು ಯೋಚಿಸುತ್ತಾ ನಿಂಗಿಯ ಬಳಿ ಬಂದ ಕರಿಯ ವಿಷಯ ತಿಳಿಸಿದ .

ಸ್ವಲ್ಪ ಯೋಚಿಸಿದ ನಿಂಗಿ ತನ್ನ ಏಕೈಕ ಚಿನ್ನದ ಒಡವೆಯಾದ ಕಿವಿಯಲ್ಲಿದ್ದ ಓಲೆಗಳನ್ನೇ ಕೊಡುತ್ತಾ ಇದನ್ನೇ ಅಡ ಇಡು ಎಂದಳು.



ರಾತ್ರಿ ಹನ್ನೊಂದು ಗಂಟೆಗೆ ಬಂದ ಶೇಷಭಟ್ಟರು ತಾವು ತಂದಿದ್ದ ತೆಂಗಿನಕಾಯಿ ಮಂತ್ರಿಸಿ ಮನೆಯ ಮಾಡಿಗೆ ಕಟ್ಟಿಸಿದರು. ಏನೇನೋ ಮಂತ್ರ ಪಠಿಸುತ್ತಾ ಪೂಜೆ ಮಾಡಿ , ಬಸಳೇಬಳ್ಳೀಯ ಬಳಿ ಬಿದ್ದಿದ್ದ ಗೊಂಬೆ ಲಿಂಬೇಹಣ್ಣುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿದರು . ಕರಿಯನೊಂದಿಗೆ ಸೋಮಪ್ಪನ ಮನೆಯ ಹಿತ್ತಿಲಿಗೆ ಶಬ್ದವಾಗದಂತೆ ಹೋಗಿ ಅಲ್ಲಿನ ಮಲ್ಲಿಗೆ ಬಳ್ಳಿಯ ಬುಡದಲ್ಲಿ ಆ ಗಂಟನ್ನು ಹುಗಿದು ಬಂದಾಗ ನಿಂಗಿ ಕರಿಯರು ಸಮಾಧಾನದ ಉಸಿರು ಬಿಟ್ಟರು.



ಇದನ್ನೆಲ್ಲ ನೋಡುತ್ತಿದ್ದ ನಿಂಗಿಯ ಆರು ವರ್ಷದ ಮಗಳು ಗೌರಿಗೆ ಮಾತ್ರ ತುಂಬ ದುಖಃವಾಯಿತು.

ಕಳೆದವಾರ ಸಾಗರದ ಸಂತೆಗೆ ಅಮ್ಮನ ಜೊತೆ ಹೋದಾಗ ಅವಳೊಂದು ಪುಟ್ಟ ಗೊಂಬೆ ನೋಡಿದ್ದಳು. ತುಂಬ ಆಸೆಯಿಂದ ಕೊಡಿಸೆಂದರೂ ಅಮ್ಮ ಕೊಡಿಸಿರಲಿಲ್ಲ. ಮತ್ತೆ ಅಂತಹುದೇ ಗೊಂಬೆಯನ್ನು ಮೊನ್ನೆ ಹೆಗಡೇರ‍ ಮಗಳ ಬಳಿ ನೋಡಿದಾಗ ಆಸೆಯಾಗಿ , ಅವಳಿಲ್ಲದಾಗ ಅದನ್ನೆತ್ತಿಕೊಂಡು ಮನೆಗೆ ಬಂದುಬಿಟ್ಟಿದ್ದಳು.


ಅಪ್ಪ ಅಮ್ಮ ಕೆಲಸಕ್ಕೆ ಹೋದಾಗ ತನ್ನ ದೊಡ್ಡಪ್ಪನ ಮಗಳಾದ ಸುನೀತಾಳೊಡನೆ ಬಸಳೆಬಳ್ಳಿಯ ಬಳಿ ಕುಳಿತು ಗೊಂಬೆಯೊಡನೆ ಆಟ ಆಡುತ್ತಿದ್ದಳು. ಅಲ್ಲೇ ಪಕ್ಕದಲ್ಲಿದ್ದ ಸೌತೇಬಳ್ಳಿಯಲ್ಲಿದ್ದ ಸೌತೇಕಾಯಿ ಕೊಯ್ದು , ಉಪ್ಪು, ಕಾರ, ಲಿಂಬೆಹಣ್ಣುಗಳನ್ನು ತಂದು ತಿಂದಿದ್ದರು.


ಹಾಗೆ ತಿನ್ನುತ್ತಿದ್ದಾಗಲೇ ಸುನೀತನ ಅಮ್ಮ ಮಂಜಿ ಅವಳು ತನ್ನ ವೈರಿಯ ಮಗಳ ಜೊತೆ ಆಡುತ್ತಿರುವುದನ್ನು ಕಂಡು ಹತ್ತಿರ ಬಂದವಳೇ ಬಾಯಲ್ಲಿದ್ದ ಕವಳದ ಕೆಂಪಾದ ರಸ ಉಗುಳಿ , ಸಿಟ್ಟಿನಿಂದ ಸುನೀತಳ ಬೆನ್ನಿಗೆರಡು ಬಾರಿಸಿ ಅವಳನ್ನೆಳೆದೊಯ್ದಿದ್ದಳು . ಅದೇ ಗಾಭರಿಯಲ್ಲಿ ಗೊಂಬೆಯನ್ನೂ ಅಲ್ಲೇ ಬಿಟ್ಟು ಒಳಗೋಡಿಬಂದಿದ್ದಳು ಗೌರಿ.


ಅಪ್ಪ , ಭಟ್ಟರು ಈಗ ಅದೇ ಗೊಂಬೆಯನ್ನು ಗಂಟು ಕಟ್ಟಿ ಹುಗಿಯುವುದನ್ನು ನೋಡಿದ ಗೌರಿಗೆ ಅದು ತನ್ನದೆಂದರೆ ಕದ್ದಿದ್ದೀಯಾ ಎಂದು ಹೊಡೆಯುತ್ತಾರೆನ್ನಿಸಿ ಹೇಳಲಾಗದೆ ಮೌನವಾಗಿ ರೋಧಿಸುತ್ತಾ ಮಲಗಿದಳು.


ನಿಂಗಿ ತನ್ನ ಬಳಿ ಇದ್ದ ಒಂದೇ ಒಂದು ಒಡವೆಯೂ ಸೋಮಪ್ಪ ಮತ್ತವನ ಚಿನಾಲಿ ಹೆಂಡತಿಯ ಕಾರಣದಿಂದಾಗಿ ಕೈತಪ್ಪಿದ್ದಕ್ಕೆ ದುಃಖಿಸುತ್ತಾ ಅವರಿಬ್ಬರನ್ನೂ ಶಪಿಸುತ್ತಾ ಮಲಗಿದಳು.


ಹೆಗಡೇರ ಬಳಿ ತೆಗೆದ ಸಾಲ ಇನ್ನಷ್ಟು ಬೆಳೆದುದನ್ನು ನೆನೆಯುತ್ತಾ ...ಇನ್ನು ಅದನ್ನು ತೀರಿಸಲು ತಾನೇ ಅಲ್ಲದೆ ತನ್ನ ಮಗನೂ ಜೀತ ಮಾಡಬೇಕಾಗಬಹುದೇನೋ ಎಂಬ ಅಲೋಚನೆಯಲ್ಲಿ ನಿಟ್ಟುಸಿರಿಡುತ್ತಾ ಕಂಬಳಿ ಮುಸುಕೆಳೆದು ಬಿದ್ದುಕೊಂಡ ಕರಿಯ.


ಅನಿರೀಕ್ಷಿತವಾಗಿ ಸಿಕ್ಕಿದ ಮೂರು ಸಾವಿರ ಲಾಭದಿಂದ ಪ್ರಸನ್ನರಾಗಿ ....ಈ ಘಟನೆಯನ್ನು ಹೇಗಾದರೂ ಸೋಮಪ್ಪನ ಕಿವಿಗೆ ತಲುಪಿಸಿದರೆ ...ಅವನೂ ತಮ್ಮ ಬಳಿ ಮಾಟ ತೆಗೆಸಲು ಬರಬಹುದು, ಆಗ ಅವನ ಬಳಿಯೂ ಹಣ ದೋಚಬಹುದೆಂದು ಯೋಚಿಸುತ್ತಾ ಶೇಷಭಟ್ಟರೂ ತಮ್ಮ ಮನೆಯಲ್ಲಿ ಮಲಗಿದರು.

17 comments:

  1. sakkatagide kate... enta mugdharu nodi...haLLi janaru... chennagide heege barita iri

    ReplyDelete
  2. ಈ ಮಾಟ ಮಂತ್ರ ಗಳ ಮೂಢನಂಬಿಕೆ ಮೇಲೆ ನಮ್ಮ ಹಳ್ಳಿಯ ಜನಗಳಿಗೆ ಮಾತ್ರ ಇದೆ ಅಂದುಕೊಂಡಿದ್ದೆ. ಆದರೆ ನಗರದ ಜನರಿಗೂ ಇಂಥ ಮೂಢ ನಂಬಿಕೆಗಳಿರುತ್ತವೆ ಅಂತ ನಾವು ದೇಹಲಿಯಲ್ಲಿರುವಾಗ ಗೊತ್ತಾಗಿ ಆಶ್ಚರ್ಯವಾಗಿತ್ತು. ಅದೇ ಧ್ಯಾನದಲ್ಲಿರುವವನಿಗೆ ಹಗ್ಗವೂ ಹಾವಾಗಿ ಕಾಣುವುದು ಎಂಬ ಗಾದೆಮಾತಿದೆ. ನಂಬುವವನಿಗೆ ಎಲ್ಲ ಕಲ್ಲುಗಳಲ್ಲೂ ದೇವರ ಮುಖ ಕಾಣುತ್ತವೆ ಅಂತ ಹೇಳ್ತಾರೆ. ನಿಮ್ಮ ಕಥೆ ಓದಿದ ನಂತರ ಈ ಎಲ್ಲ ಗಾದೆ ಮಾತುಗಳು ನೆನಪಾದವು. ತುಂಬಾ ಚೆನ್ನಾಗಿದೆ ಕಥೆ. ಎಲ್ಲವೂ ನಮ್ಮ ನಂಬಿಕೆಗಳ ಮೇಲೆ ಆಧಾರಿತ ಅನ್ನೋ ಸರಳ ನೀತಿಯನ್ನು ಮೂಢ ನಂಬಿಕೆಯ ಕಥೆಯ ಮೂಲಕ ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಕಥೆ ಬರೆದ ಶೈಲಿ ತುಂಬಾ ಇಷ್ಟವಾಯ್ತು.

    ReplyDelete
  3. ಸುಮಾ...

    ನಮ್ಮ ಮೌಢ್ಯಗಳನ್ನು ನೆನೆದು ಬೇಸರವಾಯಿತು..

    ಇಂಥಹ ಮುಗ್ಧ ಜನ ಇನ್ನೂ ನಮ್ಮ ಹಳ್ಳಿಕಡೆ ಇದ್ದಾರೆ...

    ಅವರ ಮುಗ್ಧತೆಯಿಂದ ಹೊಟ್ಟೆ ತುಂಬಿಸಿ ಕೊಳ್ಳುವ ಜನರೂ ಇದ್ದಾರೆ...

    ReplyDelete
  4. ಸುಮಾ ಮೇಡಮ್,

    ಮಾಟ ಮಂತ್ರಗಳ ಬಗ್ಗೆ ಬರೆದಿರುವ ಪುಟ್ಟ ಕತೆಯನ್ನು ಓದಿ ನಮ್ಮ ಹಳ್ಳಿಜನಗಳ ಮೂಢನಂಬಿಕೆಗಳ ಬಗ್ಗೆ ಅದರಿಂದ ಹಣ ಮಾಡಿಕೊಳ್ಳುವ ಜನರು ಇದ್ದಾರಲ್ಲ ಅಂದುಕೊಂಡು ಬೇಸರ ಉಂಟಾಯಿತು. ಭಾಷಾ ಶೈಲಿಯೂ ಇಷ್ಟವಾಗುವುದರಿಂದ ಅರಾಮವಾಗಿ ಓದಿಸಿಕೊಂಡು ಹೋಗುತ್ತದೆ.

    ReplyDelete
  5. ಒಳ್ಳೆಯ ಕಥೆ, ಚೆನ್ನಾಗಿ ಓದಿಸಿಕೊಂಡು ಹೋಯ್ತು. ನಿಜ ಇಂಥ ಮೂಢ ನಂಬಿಕೆಗಳು ಇನ್ನೂ ಜೀವಂತವಾಗಿವೆ. ಅದನ್ನು ನಂಬುವ ಮುಗ್ದ ಜನರು ಹಾಗು ಅದರಿಂದ ಲಾಭ ಪಡೆಯುವ ಜನ ಇರುವವರೆಗೂ ಇಂಥ ಮೂಢ ನಂಬಿಕೆಗಳು ಹೋಗಲ್ಲ ಅನ್ಸುತ್ತೆ ..

    ReplyDelete
  6. ಮೂಢ ನಂಬಿಕೆಯ ಬಗ್ಗೆ ಒಳ್ಳೆಯ ಕಥೆಯನ್ನು ಹೆಣೆದಿದ್ದಿರಿ...ಚೆನ್ನಾಗಿದೆ..

    ReplyDelete
  7. ಅಮಾಯಕ ಜನರಿಂದ ಹಣ ಸೊಗಿಯುವ ಇಂತಹ ಸೋಗಿನವರು ತುಂಬಾ ಇದ್ದಾರೆ. ನಾನೂ ಇದೇ ವಿಷಯವನ್ನಿಟ್ಟುಕೊಂಡು ಕಥೆ ಬರೆದಿದ್ದೆ.... "ತಿರುಗುಬಾಣ" ಎಂದು. ಕರ್ಮವೀರದಲ್ಲೂ ಪ್ರಕಟವಾಗಿತ್ತು.

    ಕಥೆಯ ಶೈಲಿ ಚೆನ್ನಾಗಿದೆ. ಗ್ರಾಮ್ಯ ಭಾಷೆ ಬಳಸಿಕೊಂಡಿದ್ದು ಹೆಚ್ಚು ಮೆರುಗು ಕೊಟ್ಟಿದೆ.

    ReplyDelete
  8. haLLI yalli idu naDeyuttaa ide.... chennaagi barediddiraa madam...

    ReplyDelete
  9. ಸುಮಾ ಚೆನ್ನಾಗಿದೆ..ಹಳ್ಲ್ಲಿಯ ಜನರು ಎಂಥ ಮುಗ್ಧರು ಅಲ್ವ!!!ಮೂಢ ನಂಬಿಕೆ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.....ಗ್ರಾಮ್ಯ ಭಾಷೆ ಚೆನ್ನಾಗಿ ಒತ್ತು ಕೊಟ್ಟಿತು ಕತೆಗೆ..

    ReplyDelete
  10. ಸುಮ,
    ನಂಬುಗೆಗಳು, ಅಪನಂಬುಗೆಗಳು ಮತ್ತು ಅವುಗಳನ್ನು ಉಪಯೋಗಿಸಿಕೊಳ್ಳುವ ಜನಗಳ ಬಗ್ಗೆ ಕತೆ ಸೊಗಸಾಗಿ ಬಂದಿದೆ. ನೀವು ಉಪಯೋಗಿಸಿದ ಭಾಷೆ ಇಷ್ಟವಾಯ್ತು.

    ReplyDelete
  11. ಸುಮಾ..,

    ಕಥೆಯೇನೋ ಕಣ್ಣಿಗೇ ಕಟ್ಟುವಂತೆ ಇದೆ..
    ಮಾಟ-ಗೀಟ ವಿಚಾರದಲ್ಲಿ ನನಗೆ ನಂಬಿಕೆ ಇದೆ..
    ಒಂದು ವಿಷಯ..: ಮಕ್ಕಳಿಗೆ ಮಾಟಕ್ಕೆ ಉಪಯೋಗಿಸುವ ರೀತಿಯಲ್ಲಿ ಗೊಂಬೆ ಮಾಡಿಸಿಕೊಡುವರೆ..??
    ಒಂದೆರಡು ಸಾವಿರಕ್ಕೆ ವರ್ಷವಿಡೀ ಜೀತ ಮಾಡುವ ಊರಲ್ಲಿ ಸಾವಿರ ಕೇಳುವ ಭಟ್ಟರಿರುವರೆ..??

    ReplyDelete
  12. ಸುಮಾ..,

    ಕಥೆಯೇನೋ ಕಣ್ಣಿಗೇ ಕಟ್ಟುವಂತೆ ಇದೆ..
    ಮಾಟ-ಗೀಟ ವಿಚಾರದಲ್ಲಿ ನನಗೆ ನಂಬಿಕೆ ಇದೆ..
    ಒಂದು ವಿಷಯ..: ಮಕ್ಕಳಿಗೆ ಮಾಟಕ್ಕೆ ಉಪಯೋಗಿಸುವ ರೀತಿಯಲ್ಲಿ ಗೊಂಬೆ ಮಾಡಿಸಿಕೊಡುವರೆ..??
    ಒಂದೆರಡು ಸಾವಿರಕ್ಕೆ ವರ್ಷವಿಡೀ ಜೀತ ಮಾಡುವ ಊರಲ್ಲಿ ಮಾಟ ತೆಗೆಯಲು ಮೂರು ಸಾವಿರ ಕೇಳುವ ಭಟ್ಟರಿರುವರೆ..??

    ReplyDelete
  13. ಸುಮಾ
    ನೀವು ಹಳ್ಳಿಜನರ ಬಗ್ಗೆ ಹೇಳಿದ್ರಿ...ಅದು ಅವರ ಪರಿಸರ ನಂಬಿಕೆಗಳ ಬೇರು ಬಲವಾಗಿರುವ ಕಾರಣ...ಟೀ.ವಿಯಲ್ಲಿ ನೋಡಿರಬೇಕು ಮುಳ್ಳಿನ ಬಾಬ ಕೂಸುಗಳನ್ನ ಮುಳ್ಳಿನ ಮೇಲೆ ಕೂರಿಸ್ತಾನೆ...ಇದರಿಂದ ಅವರ ರೋಗರುಜಿನ ದೂರವಾಗುತ್ತವಂತೆ...ಅದ್ರಲ್ಲಿ ಡಾಕ್ಟರೊಬ್ರು ..ತಮ್ಮ ಮಗೂನ ಕೂರಿಸಿದ್ದು ನೋಡಿದೆ...ಅಲ್ಲಾ ವಿದ್ಯಾವಂತರೂ ಮಾಡಿದ್ರೆ ಹೇಗೆ..?? ಇನ್ನು ಮಂತ್ರಿಗಳ..ಕಥೆ ಒಂದು ರೀತಿಯದ್ದಾದರೆ..ಮುಖ್ಯಮಂತ್ರಿಗಳನ್ನು ಕೇಳೋದೇ ಬೇಡ....ಮಾಟ ಅಲ್ದೇ ಇದ್ರೂ ಹೋಮ ಹವನ.....ಯಾರನ್ನು ಯಾರು ಎನ್ನುವುದೇ ಕಷ್ಟ,..ಒಳ್ಲೆ ಲೇಖನ ಸುಮಾ

    ReplyDelete
  14. ಕತೆಯನ್ನು ಓದಿ ಕಮೆಂಟಿಸಿ ಪ್ರೋತ್ಸಾಹಿಸಿದವರೆಲ್ಲರಿಗೂ ಧನ್ಯವಾದಗಳು.
    ಮೂಢನಂಬಿಕೆಗಳು ಸರ್ವವ್ಯಾಪಿಯಾಗಿವೆ. ಬಡವ - ಬಲ್ಲಿದ, ಹಳ್ಳಿಗರು -ಪೇಟೆಯವರು , ಅವಿದ್ಯಾವಂತರು - ವಿದ್ಯಾವಂತರು ಎಂಬ ಬೇಧ ಭಾವ ಇಲ್ಲದೇ ಇಂತವಕ್ಕೆ ಬಲಿಯಾಗುವವರು ಎಲ್ಲೆಡೆಯೂ ಸಿಗುತ್ತಾರೆ.
    "ವಿಚಲಿತ..." ಅವರೇ ನಿಮ್ಮ ಅನುಮಾನ ಸೂಕ್ತವಾಗಿದೆ. ಅದರೆ ಇದರಲ್ಲಿ ಕೆಲ ಸೂಕ್ಷ್ಮಗಳಿವೆ. ಈ ಕಥೆಯಲ್ಲಿ ನಿಜವಾಗಿಯೂ ಯರೂ ಮಾಟ ಮಾಡಿಸಿಲ್ಲ. ಮೊದಲೇ ತನ್ನ ವೈರಿಗಳು ತಮ್ಮ ಮೇಲೆ ಕತ್ತಿ ಮಸೆಯುತ್ತಲೇ ಇರುತ್ತಾರೆ ಎಂಬ ಭ್ರಮೆಯಲ್ಲಿರುವ ನಿಂಗಿ ಸಾಧಾರಣ ಮಕ್ಕಳಾಡುವ ಪ್ಲಾಸ್ಟಿಕ್ ಗೊಂಬೆಯನ್ನೇ ನೋಡಿ ಮಾಟ ಎಂದುಕೊಳ್ಳುತ್ತಾಳೆ. ಹೆದರಿದವರಿಗೆ ಹಗ್ಗವೂ ಹಾವಂತೆ ಕಾಣುತ್ತದಂತೆ ಅಲ್ಲವೆ?
    ಇನ್ನು ಮಾಟ , ಮಂತ್ರ ಮಾಡಿಸುವವರು ಹೇಳಿದ ಬೆಲೆ ಹೇಗಾದರೂ ಹೊಂದಿಸಿ ಕೊಟ್ಟು ಕೃತಾರ್ಥರದೆವೆಂದುಕೊಳ್ಳುವ ಮುಗ್ದರಿರುವಾಗ ಮೂರು ಸಾವಿರವೋ ಆರುಸಾವಿರವೋ ಎಂದು ಸುಲಿಯುವವರೇನೂ ಕಮ್ಮಿಯಿಲ್ಲ ಬಿಡಿ.

    ReplyDelete
  15. ತುಂಬಾ ಉತ್ತಮವಾದ ಕಥೆ. ಮೌದ್ಯತೆಯನ್ನು ಹೇಗೆ ಶೋಷಣೆಗೆ ಬಳಸುತ್ತಾರೆ ಅನ್ನುವದನ್ನ ಚೆನ್ನಾಗಿ ಹೇಳಿದ್ದಿರಾ...

    ReplyDelete
  16. ತುಂಬಾ ಚೆನ್ನಾಗಿ ಕಥೆ ಹೆಣೆದಿದ್ದೀರ ...ನಮ್ಮೂರಲ್ಲಿ ಹೀಗೆ ನಡೆಯುವುದುಂಟು ...ತೇಜಸ್ವಿನಿ ಇದೇ ವಸ್ತು ಇಟ್ಟುಕೊಂಡು ಕಥೆ ಬರೆದಿದ್ದರು .ಅಭಿನಂದನೆಗಳು .

    ReplyDelete