23 Feb 2011

ನೀಲಿ ಗೊರಟೆ ಹೂವು !

ಮಾಮೂಲಿನಂತೆ ಕೈಯಲ್ಲಿ ಕಾಫಿ ಕಪ್ ಹಿಡಿದು ಕಿಟಕಿಯಲ್ಲಿ ಕುಳಿತು ಹೊರಗೆ ದೃಷ್ಟಿ ಹರಿಸಿದ್ದೆ. ನಮ್ಮ ಬಿಲ್ಡಿಂಗಿಗೆ ಒತ್ತಿಕೊಂಡಂತಿರುವ ಹಿಂದಿನ ಶೆಡ್ ಮನೆಯ ಪುಟ್ಟ ಹುಡುಗಿ , ತನ್ನ ಗೆಳತಿಯೊಡನೆ ಅಂಗಳದ ಗೊರಟೆ ಗಿಡದಿಂದ ಹೂವು ಕೊಯ್ಯುತ್ತಿದ್ದಳು. ಅದೂ ನೀಲಿ ಗೊರಟೇ ಹೂವು!! ನನ್ನ ನೆನಪು ಇಪ್ಪತ್ತು ವರ್ಷಗಳಷ್ಟು ಹಿಂದೋಡಿತು.

ಆಗ ಹೂವು ಹೆಂಗಳೆಯರ , ಹೆಣ್ಣುಮಕ್ಕಳ ಅತ್ಯಂತ ಪ್ರೀತಿಯ ವಸ್ತು. ದಿನಾ ತಲೆ ಬಾಚಿ ಯಾವುದೋ ಒಂದು ಹೂವು ಮುಡಿಗೇರಿಸಿದರಷ್ಟೆ ಶೃಂಗಾರ ಪೂರ್ಣವಾದಂತೆ. ಇದಕ್ಕೆ ನಮ್ಮೂರಿನ ಹುಡುಗಿಯರೂ ಹೊರತಾಗಿಗರಿಲ್ಲ . ಎಣ್ಣೆ ಹಾಕಿ ಇದ್ದ ಬದ್ದ ಮೋಟು , ಪೀಚು ಕೂದಲನ್ನು ಸೇರಿಸಿ , ಬಿಗಿಯಾಗಿ ಎರಡು ಜಡೆ ಹೆಣೆದು , ದಾಸವಾಳವೊ , ಕರವೀರವೋ ಅಥವಾ ಮಂದಾರವೋ ಯಾವುದೋ ಒಂದು ಹೂವನ್ನು ಮುಡಿದು ಶಾಲೆಗೆ ಹೊರಟೆವೆಂದರೆ ಏನೋ ಸಂತೋಷ.

ಒಮ್ಮೊಮ್ಮೆ ಅಮ್ಮಂದಿರಿಗೆ ಪ್ರೀತಿ ಉಕ್ಕಿದಾಗ , ಸಮಯ ಸಿಕ್ಕಿದಾಗ, ಮಲ್ಲಿಗೆ , ಕನಕಾಂಬರ ,ಅಥವಾ ಗೊರಟೆ ಹೂವಿನ ಮಾಲೆ ಮಾಡಿ ಮುಡಿಸುವುದಿತ್ತು . ಹಾಗೆ ಮಾಲೆ ಮುಡಿದ ಹುಡುಗಿಯಂತೂ ತಾನೇ ವಿಶ್ವಸುಂದರಿಯೇನೂ , ಎಲ್ಲರೂ ತನ್ನ ಹೂವಿನ ಮಾಲೆಯನ್ನೇ ಗಮನಿಸುತ್ತಾರೇನೋ ಎಂಬ ಹಮ್ಮಿನಲ್ಲಿ ಇರುತ್ತಿದ್ದಳು.

ಆದರೆ ಆಗ ನಮ್ಮೂರಿನ ಅನೇಕ ಮನೆಗಳಲ್ಲಿ ಹೆಚ್ಚು ಹೂವಿನ ಗಿಡಗಳಿರಲಿಲ್ಲ . ನನ್ನಜ್ಜನ ಹಲವು ಹವ್ಯಾಸಗಳಲ್ಲಿ ಹೂವಿನ ಗಿಡಗಳನ್ನು ಬೆಳಸುವುದೂ ಒಂದು. ಅಂತೆಯೇ ಅನೇಕ ಜಾತಿಯ ಹೂವಿನ ಗಿಡಗಳನ್ನು ಮನೆಯ ಸುತ್ತಲೂ ಬೆಳೆಸಿದ್ದರು . ವಿವಿಧ ಜಾತಿಯ ದಾಸವಾಳ , ಮಲ್ಲಿಗೆ , ಗುಲಾಬಿ ,ಕನಕಾಂಬರ , ಗೊರಟೆ , ಕರವೀರ , ಲಿಲ್ಲಿ , ಜರ್ಬೆರಾ ಹೂಗಳು ಮನೆಯ ಸುತ್ತಮುತ್ತ ನಳನಳಿಸುತ್ತಿದ್ದವು.

ನಾನೆಂದೂ ಅವುಗಳ ಅರೈಕೆ ಮಾಡದಿದ್ದರು ಮೊದಲ ಫಲಾನುಭವಿ ಮಾತ್ರ ನಾನೆ ಆಗಿದ್ದೆ. ಯಾರು ಹೂವುಗಳನ್ನು ಕೊಯ್ದರು ಜಗಳವಾಡುತ್ತಿದ್ದೆ . ದಿನಾ ಬೆಳಗ್ಗೆ ದೇವರಿಗೆ ಹೂವು ಕೊಯ್ಯಲು ಬರುತ್ತಿದ್ದ ಪಕ್ಕದ ಮನೆ ಗಣಪತಜ್ಜ ಕರವೀರ ದಾಸವಾಳ ಮಾತ್ರ ಕೊಯ್ಯಬೇಕಿತ್ತು . ಬೇರೆ ಹೂವುಗಳನ್ನು ಕೊಯ್ದರೆ ನನ್ನ ಸಿಡಿಮಿಡಿ ಶುರುವಾಗುತ್ತಿತ್ತು. ಅಮ್ಮ "ಹಾಗೆಲ್ಲ ದೇವರಿಗೆ ಹೂ ಕೊಯ್ಯುವವರಿಗೆ ಬೇಡ ಎನ್ನಬಾರದು " ಎಂದು ಬುದ್ಧಿ ಹೇಳುತ್ತಿದ್ದರು .

ಗೊರಟೇ ಹೂ ಬಿಡುವ ಕಾಲದಲ್ಲಿ ಅಕ್ಕಪಕ್ಕದ ಮನೆಯ ಕೆಲ ಹುಡುಗಿಯರು ನಮ್ಮ ಮನೆಗೆ ಹೂ ಕೊಯ್ಯಲು ಬರುವುದಿತ್ತು. ಅತೀ ಹೆಚ್ಚು ಹೂ ಬಿಡುತ್ತಿದ್ದ ಬೂದು ಮತ್ತು ಗುಲಾಬಿ ಬಣ್ಣದ ಗೊರಟೆ ಹೂವುಗಳನ್ನಷ್ಟೆ ಅವರು ಕೊಯ್ಯಲು ನನ್ನ ಅನುಮತಿಯಿತ್ತು. ಸ್ವಲ್ಪ ವಿರಳವಾಗಿದ್ದ ನೀಲಿ ಗೊರಟೆ ಹೂವಿನ ಗಿಡದ ಬಳಿ ಅವರಾರೂ ಸುಳಿಯುವಂತಿರಲಿಲ್ಲ. ನಾನೇ ಅದರಲ್ಲಿರುತ್ತಿದ್ದ ಕೆಲವೇ ಮೊಗ್ಗುಗಳನ್ನು ಕೊಯ್ದು , ಲೆಕ್ಕ ಮಾಡಿ ಎಲ್ಲರಿಗೂ ನಾಲ್ಕೊ ಐದೋ ಮೊಗ್ಗುಗಳನ್ನಷ್ಟೇ ಕೊಡುತ್ತಿದ್ದೆ . ನಾನು ಮಾತ್ರ ಸ್ವಲ್ಪ ಹೆಚ್ಚು ಇಟ್ಟುಕೊಳ್ಳುತ್ತಿದ್ದೆ. ಮರುದಿನ ಶಾಲೆಯಲ್ಲಿ ನಾನು ಮಾತ್ರ ಹೆಚ್ಚು ನೀಲಿ ಗೊರಟೇ ಮುಡಿದದ್ದನ್ನು ಪ್ರದರ್ಶಿಸಿ , ಅದೆಲ್ಲಾ ನಮ್ಮನೆಯಲ್ಲೇ ಇರುವುದು ಎಂದು ಜಂಬ ಪಟ್ಟುಕೊಳ್ಳಬೇಕಿತ್ತಲ್ಲಾ!!

ಒಂದು ದಿನ ನನ್ನ ಗೆಳತಿಯೊಬ್ಬಳು ಈ ನಿಯಮವನ್ನು ಮುರಿದುಬಿಟ್ಟಳು. ಅಂದರೆ ನಾನೆಲ್ಲೋ ಒಳಗಿದ್ದಾಗ ಅವಳು ಒಂದಿಷ್ಟು ನೀಲಿ ಗೊರಟೇ ಮೊಗ್ಗುಗಳನ್ನು ಕೊಯ್ದಳು . ಕೊಯ್ದವಳು ಸುಮ್ಮನೇ ಇರಬಹುದಿತ್ತು . ನನ್ನನ್ನು ಕೆಣಕಬೇಕೆಂದು ಅದನ್ನು ನನಗೆ ತೋರಿಸಿ , ಓಡಿದಳು. ಸುಮ್ಮನಿರಲಾಗುತ್ತದೆಯೇ !
ನಾನೂ ಹಿಂದೆ ಓಡಿದೆ ...ಅವಳು ಹೋಗಿ ತನ್ನ ಅಮ್ಮನ ಹಿಂದೆ ಅವಿತಳು. ನಾನು ಅವರ ಬಳಿ ದೂರು ನೀಡಿದೆ. ಅವರಿಗೇನ್ನನ್ನಿಸಿತೋ ಕಾಣೆ , ಮಗಳನ್ನು ಹಿಡಿದು ಚೆನ್ನಾಗಿ ಎರಡೇಟು ಕೊಟ್ಟುಬಿಟ್ಟರು .

ನನಗೆ ಒಂದು ಕ್ಷಣ ಏನು ಮಾಡಬೇಕೆಂದು ತೋಚದೆ ಬೆಪ್ಪಾಗಿ ನಿಂತೆ . ಅಳುತ್ತಾ ಆ ನನ್ನ ಗೆಳತಿ ನನ್ನೆಡೆಗೆ ನೋಡಿದ ನೋಟವನ್ನು ನಾನೆಂದೂ ಮರೆಯಲಾರೆ.
ಈ ಘಟನೆಯಿಂದ ಇಬ್ಬರಿಗೂ ನೋವಾಗಿತ್ತು . ಆ ನನ್ನ ಗೆಳತಿ ಅನೇಕ ದಿನಗಳವರೆಗೆ ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಹೂವು ಕೊಯ್ಯಲೂ ಬರುತ್ತಿರಲಿಲ್ಲ.
"ಹೂವು ಹಂಚಿ ಮುಡಿಯಬೇಕು , ಹಣ್ಣು ಹಂಚಿ ತಿನ್ನ ಬೇಕು ಅಂತ ಗಾದೆನೇ ಇದೆ ಪುಟ್ಟಿ ... ಹೀಗೆಲ್ಲ ಮಾಡಬಾರದು " ಅಮ್ಮ ಯಾವಾಗಲೂ ಹೇಳುತ್ತಿದ್ದರು . ಆದರೆ ನಾನು ಕೇಳುತ್ತಿರಲಿಲ್ಲ .
ಬಹುಶಃ ಈ ಘಟನೆಯ ನಂತರ ನಮ್ಮ ಮನೆಯ ಹೂವುಗಳ ಬಗ್ಗೆ ನನ್ನ ಪೊಸೆಸಿವ್ ನೆಸ್ ಕಡಿಮೆಯಾಯ್ತು. ಮತ್ತೊಂದು ದಿನ ಯಾವಾಗಲೋ ನೀಲಿ ಗೊರಟೆ ಹೂವಿನ ಮಾಲೆಯನ್ನೇ ಆ ಗೆಳತಿಗೆ ಕೊಟ್ಟು ಅವಳನ್ನು ಒಲಿಸಿಕೊಂಡೆ.
ಈಗಲೂ ಊರಿಗೆ ಹೋದಾಗ ಆ ಘಟನೆಯನ್ನು ನೆನೆಸಿಕೊಂಡು ಇಬ್ಬರೂ ನಗುತ್ತೇವೆ. ಅಮ್ಮ ಹೂವು ಕಟ್ಟಿ ಇಬ್ಬರಿಗೂ ಕೊಡುತ್ತಾರೆ. ಮೊಟು ಜುಟ್ಟದ ಇಬ್ಬರೂ , ಅಮ್ಮನಿಗೆ ಬೇಸರವಾಗಬಾರದೆಂಬ ಒಂದೇ ಕಾರಣಕ್ಕಾಗಿ ಸ್ವಲ್ಪ ಹೊತ್ತು ಮುಡಿಯುತ್ತೇವೆ.

13 comments:

 1. ಹ ಹ.. ಸವಿ ಸವಿ ನೆನಪು.
  ನನಗೂ ಹೂಗಳ ಹುಚ್ಚು.
  ನಮ್ಮ ಮನೆಯಲ್ಲಿ(ಗುಲ್ಬರ್ಗ) ನಾನು ಕೆಲವು ವಿವಧ ಬಗೆಯ(ತುಂಬಾ ಹೂಗಳ ಹೆಸರು ಗೊತ್ತಿಲ್ಲ) ಹೂ ಬೆಳೆಸಿದಿನಿ.
  ಆದರೆ,ಹೂ ಕೀಳುವಾಗ ಏನೋ ಒಂದು ಬೇಜಾರು..!
  ನನ್ನ ಅಮ್ಮನಿಗೂ ನಾನು ಹೂ ಕೀಳುವಾಗ ಹೇಳ್ತೇನೆ,
  ನಾಲ್ಕೇ..ನಾಲ್ಕು-ಸಾಕು.. :)
  "ನನ್ನ ಅಜ್ಜಿಯ ಮಾತು: ಮನ್ಯಾಗ ಹೂವಿನ ಗಿಡಗಳು ಇರಬೇಕು,
  ಹೂವಿನ ಗಿಡ ಅಂದ್ರ 'ಮಕ್ಕಳಿದ್ದಂಗ'.."

  ಸುಂದರ ಲೇಖನ..
  ಧನ್ಯವಾದ.
  -ಅನಿಲ್

  ReplyDelete
 2. ಆಹಾ...

  ಹೂವುಗಳ ಮೇಲೆ ಬಾಲ್ಯದಲ್ಲಿ ನಿಮಗಿದ್ದ ಪೊಸಿಶಿವ್‍ನೆಸ್ ಕಂಡು ಅಚ್ಚರಿಯಾದರೂ ಅದು ಸಹಜವೇ ಅಲ್ಲವೆ...ಗೊರಟೆ,ಕರವೀರ ಇತ್ಯಾದಿ ಹೂವುಗಳ ಬಗ್ಗೆ ಗೆಳತಿಗೆ ಏಟು ಇತ್ಯಾದಿಗಳನ್ನು ಓದಿದಾಗ ನಮ್ಮ ಬಾಲ್ಯವೂ ನೆನಪಾಗುವುದು..

  ReplyDelete
 3. ನೀಲಿ ಗೊರಟೆ ಹೂವು, ಅಂದರೆ ಸ್ಪಟಿಕ ಅಂತಾರಲ್ಲ ಅದಾ ?

  ReplyDelete
 4. baalyada nenapige jaaridevu... tumba chennagide lekhana suma ista aytu..

  ReplyDelete
 5. ಬಾಲ್ಯದ ನೆನಪು ನೀಲಿ ಗೊರಟೆ ಹೂವಷ್ಟೇ ಸೊಗಸಾಗಿದೆ.

  ReplyDelete
 6. ಬಾಲ್ಯದ ನೆನಪನ್ನು ಸವಿಯಾಗಿ ಹೇಳಿ ಸುಂದರ ಸಂದೇಶವೊಂದನ್ನು ನೀಡಿದ್ದೀರಾ..
  ಹೂವು ಚೆಲುವೆಲ್ಲಾ ತಂದೆಂದಿತು .... ಹೆಣ್ಣು ಹೂವ ಮುಡಿದು ಆ ಚೆಲುವೆ ತಾನೆಂದಳು...

  ReplyDelete
 7. ಧನ್ಯವಾದಗಳು ಅನಿಲ್ . ನಿಮ್ಮ ಅಜ್ಜಿ ಹೇಳುವ ಮಾತುಗಳು ಸತ್ಯ .ಮನ್ಯಾಗ ಹೂವಿನ ಗಿಡಗಳು ಇರಬೇಕು,
  ಹೂವಿನ ಗಿಡ ಅಂದ್ರ 'ಮಕ್ಕಳಿದ್ದಂಗ'.." ನೈಸ್!

  ಶಿವೂ ಧನ್ಯವಾದಗಳು .ಬಾಲ್ಯದಲ್ಲಿ ಪೊಸೆಸಿವ್ ನೆಸ್ ಸ್ವಲ್ಪ ಹೆಚ್ಚು ಇರುತ್ತದೆ ಅಲ್ಲವೆ?
  ಈಗ ಅದನ್ನು ನೆನೆಸಿಕೊಂಡರೆ ನಗು ಬರುತ್ತದೆ.

  ಜಿನ್ನು ಅವರೆ ಧನ್ಯವಾದಗಳು. ನೀಲಿ ಗೊರಟೆ ಹೂವಿಗೆ ಸ್ಫಟಿಕ ಎಂದೂ ಕರೆಯುತ್ತಾರೆಯೆ? ನನಗೆ ತಿಳಿದಿಲ್ಲ.

  ಸುಗುಣ , ಕಾಕ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
  ಸೀತಾರಾಂ ಧನ್ಯವಾದಗಳು.

  ReplyDelete
 8. ಸುಮ,

  ನೀಲಿಗೊರಟೆ ಹೂವಿನ ವಿಶ್ವಸುಂದರಿ ನಾನೂ ಹಿಂದೊಮ್ಮೆ ಆಗಿದ್ದೆ... :) ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕುವಂತೆ ಮಾಡಿತು ನಿಮ್ಮ ಲೇಖನ. ತುಂಬಾ ಚೆನ್ನಾಗಿದೆ.

  ReplyDelete
 9. ಒಳ್ಲೆ ಮಾಹಿತಿ ಮತ್ತು ಕಾಳಜಿ ಭರಿತ ಲೇಖನ, ಅಭಿನಂದನೆಗಳು ಸುಮಾ

  ReplyDelete
 10. ಸುಮಾ...

  ಈ ಹೆಣ್ಣೂ ಮಕ್ಕಳಿಗೆ ಹಾಗೆ ಹೂವೆಂದರೆ ಇಷ್ಟ...

  ನಿಮ್ಮ ಬಾಲ್ಯದ ಸುಂದರ ಘಟನೆಯೊಂದರಿಂದ ನಮ್ಮನ್ನೂ ನಮ್ಮ ಬಾಲ್ಯಕ್ಕೆ ಕರೆದೊಯ್ದು ಬಿಟ್ರಿ...

  ನನ್ನ ಅಕ್ಕನಿಗಾಗಿ ನಾನೂ ಒಮ್ಮೆ ಹೂವಿನ ಬಗೆಗೆ ಜಗಳ ಕಾಯ್ದಿದ್ದೆ...

  ಬಾಲ್ಯದ ನೆನಪೂ ಕೂಡ ಹೂವಿನ ಹಾಗೆ...
  ಸದಾ ಸುಂದರ... ಪರಿಮಳ...

  ಚಂದದ ಲೇಖನಕ್ಕಾಗಿ ಅಭಿನಂದನೆಗಳು...

  ReplyDelete
 11. thumba aathmeeyavaagidhe baraha :) chennagi odhisikondu hoyithu :)

  ReplyDelete
 12. ಚೆನ್ನಾಗಿದ್ದು
  ರಮೇಶ್

  ReplyDelete
 13. ನನಗೂ ದಿನ ಸ್ಪಟಿಕ ಹೂ ಜ್ಞಾನಪಕಕ್ಕೆ ಬಂದು, ಗೂಗಲ್ ಹುಡುಕಿದರೆ, ಅದೆಷ್ಟು ಬರವಣಿಗೆಗಳು ಈ ಹೂವನ್ನು ಹಾಡಿ ಹೊಗಳಿ ಮೆಚ್ಚಿ ನೆನಪಿಸಿಕೊಂಡರು. ನನ್ನದೂ ಒಂದು ನೆನಪಿನ ಕಾಣಿಕೆ.

  ReplyDelete