7 Mar 2011

ಇಂದು ಮಹಿಳಾದಿನಾಚರಣೆಯಂತೆ !

" ಅಕ್ಕ ನನ್ನ ಕೆಲಸ ಶುರು ಆಗದು ಬೆಳ್ಗೆ ಆರು ಗಂಟೆಗೆ . ಎದ್ದವ್ಳು ಹಲ್ಲುಜ್ಜಿ ಮಖ ತೊಳ್ದು , ಗಂಡ ತಂದ ಆಲು ಕಾಸಿ ಚಾ ಮಾಡಿ ಗಂಡಂಗೆ ಕೊಟ್ಟು ನಾನು ಕುಡಿತಿನಾ .. ಅಷ್ಟೊತ್ತಿಗೆ 7 ಗಂಟೆ ಆಗ್ತದೆ . ಒಂದು ಮನೆ ಕೆಲಸಕ್ಕೆ ಹೊರಡ್ತೀನಿ. ಅಲ್ಲಿ ಕೆಲಸ ಮುಗಿಯೋದು 8.15 ಅಗ್ತದೆ ...ಮನೆಗೆ ಬರ್ತೀನಾ... ಅಷ್ಟರಲ್ಲಿ ನನ್ನ ಗಂಡ ಅನ್ನ ಬೇಯಿಸಿ , ಮಕ್ಕಳನ್ನ ಎಬ್ಬಿಸಿ ಚಾ ಕೊಟ್ಟಿರ್ತಾನೆ . ನಾನು ಚಿತ್ರಾನ್ನನೊ , ಪುಳಿಯೋಗರೆನೋ ಮಾಡಿ ಮಕ್ಕಳಿಗೆ ಕೊಟ್ಟು , ಅದನ್ನೇ ಟಿಫನ್ ಕಟ್ಟೀ ಅವರನ್ನ ಶಾಲೆಗೆ ತಾಯಾರು ಮಾಡಿ ಆಚೆ ರೋಡಲ್ಲೈತಲ್ಲ ಸ್ಕೂಲು ಅಲ್ಲಿಗೆ ಇಬ್ಬರ ಬ್ಯಾಗ್ ಹೊತ್ತುಕೊಂಡು ಹೋಗಿ ಬಿಟ್ಟು ಬರ್ತೀನಿ. ಅಷ್ಟರಲ್ಲಿ 9.15 ಆಗಿರ್ತದೆ . ಮನೆಗ್ ಬಂದು ನಾನೂ ಒಂದಷ್ಟು ಹೊಟ್ಟೆಗೆ ಹಾಕ್ಕೊಂಡು ಮತ್ತೆ ಕೆಲಸಕ್ಕೆ ಹೊರಡ್ತೀನಕ್ಕಾ . ಮೂರು ಮನೆ ಕೆಲಸ ಮುಗಿಸೋಷ್ಟರಲ್ಲಿ 12.3o ಆಗೋಗ್ತದೆ .
ಆಮೇಲೆ ಮನೆಗೆ ಬಂದು ನಮ್ಮನೆ ಪಾತ್ರೆ ತೊಳೆದು , ಗುಡಿಸಿ ಒರೆಸಿ , ಬಟ್ಟೆ ತೊಳ್ದು , ನೀರು ಕಾಸಿ ,ಸ್ನಾನ ಮಾಡಿ ಊಟ ತಿನ್ನೋವಾಗ 3.30 ಆಗ್ತದೆ . ಮತ್ತೆ ಮಕ್ಕಳ ಸ್ಕೂಲಿಗೆ ಹೋಗಿ ಅವರನ್ನ ಕರ್ಕೊಂಡು ಬಂದು , ಅವಕ್ಕೆ ತಿನ್ನಕ್ಕೇನಾದ್ರು ಕೊಡ್ತೀನಿ. ಸ್ವಲ್ಪ ಹೊತ್ತು ಮಲಕ್ಕೊಳ್ಳಾ ಅಂತ ನೋಡ್ತೇನಕ್ಕ. ಆದ್ರೆ ಆ ಪಕ್ಕದ ಮನೆ ತಮಿಳಮ್ಮನೋ ಅಥವಾ ಹಿಂದಿನ ಬೀದಿ ಸಾಕಮ್ಮನೋ ಬಂದು ಬಿಡ್ತದೆ ... ಮನೆಗೆ ಬಂದವರನ್ನ ಹೋಗು ಎನ್ನಕ್ಕಾಯ್ತದಾ ? ..... ಹಿಂಗೆ ಕಷ್ಟ ಸುಖ ಮಾತಾಡ್ಕೊಂಡು ಸ್ವಲ್ಪ ಹೊತ್ತು ಕುತ್ಕಾತೀವಾ ... ಅಷ್ಟರಲ್ಲಿ 6 ಗಂಟೆ ಆಗಿಬಿಡ್ತದೆ , ಮಗನ್ನ ಟ್ಯೂಷನ್ನಿಗೆ ಬಿಟ್ಟು , ಮಾರ್ಕೆಟಲ್ಲಿ ತರಕಾರಿ ತಗಂಡು ಮನೆಗೆ ಬರ್ತೀನಿ .
ಮನೇಲಿ ಮಗಳನ್ನ ಹಿಡ್ದು ಓದಾಕೆ ಕೂರಿಸಿ ತರಕಾರಿ ಹೆಚ್ಚಿ ಎನಾದ್ರೂ ಸಾರು ಮಾಡ್ತೀನಾ ...ಅಷ್ಟರಲ್ಲಿ 8 ಆಗಿಬಿಡ್ತದೆ. ಮಗನ್ನ ಮತ್ತೆ ವಾಪಾಸ್ ಕರ್ಕೊಂಡು ಬರ್ತೀನಿ. ಒಂದೊಂದಿನ ನನ್ನ ಗಂಡನೇ ಕರ್ಕೋಂಡು ಬರ್ತಾನೆ ಪಾಪ. ಆಮೇಲೆ ಮುದ್ದೆ ಮಾಡಿ ತಿನ್ನೋಷ್ಟರಲ್ಲಿ ನಿದ್ದೆ ಎಳ್ಕೊಡು ಬರತದೆ ನೋಡೂ..... ಆದ್ರೂ ಆ ಟಿವಿನಾಗೇನೋ ಗಂಡ ಹೆಂಡತಿ ಜಗಳಾಡೋದು ಆಮೇಲೆ ಸಿನಿಮಾದಾಗೆ ಮಾಡ್ತೈತಲ್ಲ ಆ ಯಮ್ಮ ನ್ಯಾಯ ಹೇಳೋದು ತೋರಸ್ತಾರಲ್ಲ ಅದನ್ನೊಂದು ನೋಡ್ತೀನಕ್ಕ ... ಅವರ ಜಗಳಾ ಒಳ್ಳೇ ತಮಾಸೆಯಾಗಿರ್ತೈತೆ ......ಇದರ ಮದ್ಯ ಆ ನಲ್ಲಿ ನೀರು ಬಿಡೋನು ಬೇರೆ ಎಷ್ಟೆಷ್ಟೋ ಹೊತ್ತಿಗೆ ನೀರು ಬಿಟ್ಟುಬಿಡ್ತಾನ .... ನೀರು ಬಿಟ್ಟ ದಿನ ಆ ಬೀದಿಲಿ ನಿಂತು ಎದುರು ಬೀದಿಯ ವಟಾರದ ಮನೆ ಜನಗಳ ಜೊತೆ ಜಗಳಾ ಆಡಿ ... ನೀರು ತುಂಬಿಸಿ ಮಲಗೋದು ಹನ್ನೆರಡಾದ್ರೂ ಆಗ್ಬೋದಕ್ಕ ಹೇಳಾಕಾಗಲ್ಲ .
ಏನೋ... ನಾನು ನನ್ನ ಗಂಡ ಇಬ್ರೂ ಓದಿಲ್ಲ . ಅದ್ಕೆ ಮಕ್ಕಳಾದ್ರೂ ಓದ್ಲಿ ಅಂತ ನನ್ನಾಸೆ. ನನ್ನ ಗಂಡ ಕಾರ್ಪೆಂಟರಿ ಕೆಲ್ಸ ಮಾಡ್ತಾನಾ ... ಪಾಪ ತುಂಬಾ ಒಳ್ಳೇನು .... ಓನರ್ ಜೋರಾಗಿ ಮಾತಾಡಿದ್ರೆ ದುಡ್ಡೇ ಬೇಡಾ ಅಂತ ಬಂದು ಬಿಡ್ತಾನೆ . .... ಮನೆ ಖರ್ಚು , ಎರಡು ಮಕ್ಕಳ ಸ್ಕೂಲು ಫೀಸು .... ಸುಮ್ನೆ ಆಗ್ತದ ..... ಕೆಲ್ಸ ಮಾಡ್ಲೇಬೇಕಲ್ಲ ....."

ಇದು ನಾಲ್ಕು ಮನೆ ಕೆಲಸ ಮಾಡಿ ಗಂಡನ ಹೆಗಲಿಗೆ ಹೆಗಲು ಜೋಡಿಸಿ ಸಂಸಾರದ ಜವಾಬ್ದಾರಿ ನಿರ್ವಹಿಸುತ್ತಿರುವ ಮಹಿಳೆಯೊಬ್ಬಳ ದಿನಚರಿ . ಹೆಚ್ಚಿನ ಮಹಿಳೆಯರ ದಿನಚರಿ ಇದಕ್ಕಿಂತ ಭಿನ್ನವಾಗೇನೂ ಇರೋದಿಲ್ಲ ಅಂತ ನನ್ನ ಅಭಿಪ್ರಾಯ . ಕೆಲಸದ ಸ್ವರೂಪದಲ್ಲಿ ಬದಲಾವಣೆಯಿರಬಹುದಷ್ಟೇ. ಇಂದು ಮಹಿಳಾ ದಿನಾಚರಣೆಯಂತೆ . ಸುಶಿಕ್ಷಿತ ನಾಗರಿಕ ಸಮಾಜ ನಿರ್ಮಾತೃಗಳಾದ ಎಲ್ಲ ಮಹಿಳೆಯರಿಗೆ ಜಯವಾಗಲಿ.

7 comments:

 1. ನಿಮಗೂ ಶುಭಾಶಯಗಳು
  Swarna

  ReplyDelete
 2. <>

  ಸುಮ ಇದು ನನ್ನ ಅಭಿಪ್ರಾಯ ಸಹ... :)

  ಹೌದು. ಹೆಗಲಿಗೆ ಬಲಕೊಟ್ಟು, ತಾನೂ ಬಲವಾಗಿ, ಬಲವೃದ್ಧಿಸುವ... ನಾಕರೀಕ ಸಮಾಜದ ಬೆಳವಣಿಗೆಗೆ ಪ್ರಮುಖ ರೂವಾರಿಯಾಗಿರುವ ಮಹಿಳೆಯರೆಲ್ಲರಿಗೂ ಅಭಿನಂದನೆಗಳು.

  ಚೆನ್ನಾಗಿದೆ ಲೇಖನ.

  ReplyDelete
 3. ಸರಿಯಾಗಿ ಹೇಳಿದ್ರಿ. ಮಾಡುವ ಕೆಲಸಗಳು ಮಾತ್ರ ಬೇರೆ ಬೇರೆ, ದಿನಚರಿ ಸಾಮಾನ್ಯವಾಗಿ ಇದೇ ಎಲ್ಲರದು. ಅದರೂ, ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಶಕ್ತಿ ಇರುವುದು ಮಹಿಳೆಗೇ ನನ್ನ ಪ್ರಕಾರ. Proud to be a woman :) Happy Women's Day!!

  ReplyDelete
 4. ಸುಮಾ,
  ಮಹಿಳಾ ದಿನಾಚರಣೆಯ ಶುಭಾಶಯಗಳು.
  ಇಂದಿನ ದಿನದಲ್ಲಿ ಮಹಿಳೆಯೇ ಪುರುಷನಿಗಿಂತ ಹೆಚ್ಚಿನ ಭಾರವನ್ನು ಹೊರುತ್ತಿದ್ದಾಳೆ ಎನ್ನುವದು ವಾಸ್ತವ.

  ReplyDelete
 5. ಸುಮ ಅವರೇ,
  ಶುಭಾಶಯಗಳು !
  ಸರ್ವಶಕ್ತಿಧಾರಣಿ ಸ್ತ್ರೀಗೆ ನಮನಗಳು..

  ReplyDelete
 6. ಸುಮಾ ಮೇಡಮ್,
  ತಡವಾಗಿ ಅಭಿನಂದಿಸುತ್ತಿದ್ದೇನೆ. ಅದಕ್ಕೆ ತಕ್ಕಂತೆ ಸೊಗಸಾದ ಲೇಖನ.

  ReplyDelete