6 Apr 2011

ಸರಳುಗಳ ಹಿಂದಿನಿಂದ


ನಾಲ್ಕನೆ ಮಹಡಿಯ ಬಾಲ್ಕನಿಯಲ್ಲಿ ನಿಂತು ಗ್ರಿಲ್ ಸರಳುಗಳನ್ನು ಹಿಡಿದು ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದಾಳೆ ಮಗಳು ಎದುರುರಸ್ತೆಯಲ್ಲಿ ಆಡುವ ಕಟ್ಟಡ ಕಾರ್ಮಿಕರ ಮಕ್ಕಳೆಡೆಗೆ.
ಒಂದು ಕ್ಷಣ ಸಿನೆಮಾಗಳಲ್ಲಿ ತೋರಿಸುವ ಜೈಲಿನ ಕೈದಿಗಳ ನೆನಪಾಯಿತು ನನಗೆ.
ಬೀಳುವ ಚಡ್ಡಿಯನ್ನೊಂದು ಕೈಯಲ್ಲಿ ಹಿಡಿದುಕೊಂಡೇ ಓಡುತ್ತಿರುವ ಆ ಪುಟ್ಟ ಹುಡುಗ , ಗೊಣ್ಣೆ ಸುರಿಸುತ್ತಾ ಓಡುತ್ತಿರುವ ಈ ಹುಡುಗಿಯನ್ನು ಇನ್ನೇನು ಹಿಡಿದೇ ಬಿಟ್ಟ ....
ಓಡು ಓಡು .. ನಿಂತಲ್ಲೇ ಕೂಗುತ್ತಿದ್ದಾಳೆ ಮಗಳು , ಇವಳೇ ಸಿಕ್ಕಿಬಿದ್ದಳೇನೋ ಎಂಬ ಭಾವದಲ್ಲಿ . ಕಣ್ಣುಗಳಲ್ಲೇನೋ ಹೊಳಪು.

ಅಮ್ಮ ನಾನೂ ಅಲ್ಲಿ ಆಡಲು ಹೋಗಲೆ? ಕೇಳಿದ್ದಳೊಮ್ಮೆ . ಸುಮ್ಮನಿರಿಸಿದ್ದೆ ಅವರ ಕೊಳಕುತನ , ಕೆಟ್ಟ ಭಾಷೆ, ಹರುಕು ಬಟ್ಟೆ ಅದು ಇದು ಹೀಗೆ ನೂರೆಂಟು ಕಾರಣ ಕೊಟ್ಟು.
ಛೆ! ಆ ಬೀದಿ ಮಕ್ಕಳ ಜೊತೆ ಆಡಲು ಕಳಿಸುವುದೆ ? ನಮ್ಮ ಅಂತಸ್ತೇನು ? ಪಕ್ಕದ ಬಿಲ್ಡಿಂಗಿನ ಮಿಸೆಸ್ ಶರ್ಮ , ಎದುರು ಮನೆಯ ಮಿಸೆಸ್ ರಾವ್ , ಕೊನೆ ಮನೆಯ ನಿಕಿತಾ ಜೈನ್ ಎಲ್ಲ ಏನೆಂದಾರು!

ಅಂದಿನಿಂದ ಇವಳದು ನಿತ್ಯ ಸಾಯಂಕಾಲ ಇದೇ ಕಾಯಕ .....ಬಾಲ್ಕನಿಯಲ್ಲಿ ನಿಂತು ಗ್ರಿಲ್ನಲ್ಲಿ ಹಣುಕಿ ಹೊರನೋಡುತ್ತಾ ನಿಲ್ಲುವುದು .... ಆ ಬೀದಿ ಮಕ್ಕಳಾಡುವ ಆಟಗಳನ್ನು ಕಣ್ತುಂಬಿಕೊಳ್ಳುವುದು , ತಾನೇ ಆಡುತ್ತಿರುವಂತೆ ಪ್ರತಿಕ್ರಿಯಿಸುವುದು .

ಕತ್ತಲೆಯಾಗುವವರೆಗೂ ಅವರ ಆಟ ಮುಂದುವರೆಯುತ್ತದೆ . ಇವಳ ನೋಟವೂ.... ನಂತರ ಕಾಲು ಸೋತಂತೆ , ಮಂಕು ಮುಖದಿಂದ ಒಳಬರುತ್ತಾಳೆ.

ಅವಳ ಈ ದಿನಚರಿ ತಪ್ಪಿಸಲು ನಾನು ಏನೇನೆಲ್ಲ ಮಾಡಿದೆ ಗೊತ್ತೆ ? ಕಂಪ್ಯೂಟರ್ ಗೇಮ್ಸ್ , ವಿಡಿಯೋ ಗೇಮ್ಸ್ , ಕಾರ್ಟೂನ್ ಫಿಲ್ಮ್ , ರಿಮೋಟ್ ಏರೋಪ್ಲೇನ್ .........ಒಂದೇ ಎರಡೇ ...ಊಹುಂ ....ಯಾವುದೂ ಅವಳ ಕಣ್ಣುಗಳಲ್ಲಿ ಬೀದಿ ಮಕ್ಕಳ ಆಟ ನೋಡುತ್ತಿರುವಾಗ ಕಾಣುವ ಹೊಳಪನ್ನು ತರಲಿಲ್ಲ.

ಇಂದೇಕೊ ನನ್ನ ಸಮೃದ್ಧ ಬಾಲ್ಯದ ನೆನಪಾಗುತ್ತದೆ . .... ತುಂಬಾ ಮಳೆ ಎಂದು ಶಾಲೆಗೆ ರಜೆ ಕೊಟ್ಟರೆ ಸಾಯಂಕಾಲದವರೆಗೂ ರಸ್ತೆ ,ಚರಂಡಿ ನೀರಿನಲ್ಲಿ ಅಟವಾಡುತ್ತಿದ್ದುದು ... ಮನೆಯೆದುರಿನ ಚಿಕ್ಕ ಹಳ್ಳದ ನೀರಿನಲ್ಲಿರುತ್ತಿದ್ದ ಬಣ್ಣ ಬಣ್ಣದ ಕಲ್ಲುಗಳನ್ನು ತೇಯ್ದು ಆ ಬಣ್ಣಗಳನ್ನು ಮೈ ,ಮುಖಕ್ಕೆಲ್ಲ ಬಳಿದುಕೊಂಡು ಯಕ್ಷಗಾನದ ಬಣ್ಣದ ವೇಷ ಕಟ್ಟಿದ್ದು.... ಮಾವಿನಮರದ ಕೊಂಬೆಗೆ ಜೋಕಾಲಿ ಕಟ್ಟಿ ಜೋರಾಗಿ ಜೀಕಿ ಬಿದ್ದದ್ದು .... ಸೈಕಲ್ ಕಲಿಯುತ್ತೇನೆಂದು ಹೊಂಗೆ ಮರದ ಬಳಿಯ ಏರಿನಿಂದ ಸ್ಪೀಡಾಗಿ ಬಂದು ಜಾರಿ ಬಿದ್ದು ಕಾಲು ಮುರಿದುಕೊಂಡದ್ದು .....ಮದುವೆಯಾಟ ಆಡೋಣ ಎಂದು ಪುಟ್ಟ ರಶ್ಮಿಗೂ ಮತ್ತು ತುಂಟ ರಾಮುಗೂ ಶೃಂಗರಿಸಿ ಕುಳ್ಳಿರಿಸಿ ಆರತಿ ಎತ್ತಿದ್ದು .....ತಂಗಿಗೆ ಸ್ಕೂಟರ್ ಸವಾರಿ ಮಾಡಿಸುತ್ತೇನೆಂದು ತೆಂಗಿನ ಹೆಡೆಯ ಮೇಲೆ ಕೂರಿಸಿ ಎಳೆದದ್ದು ......ಅವಳಿಗೆ ಸೌತೆಮಿಡಿ ಕೊಡುತ್ತೇನೆಂದು ಕಹಿಹಿಂಡಲೆ ಕಾಯಿ ತಿನ್ನಿಸಿ ಅಳಿಸಿದ್ದು ......ಕಣ್ಣೆ ಮುಚ್ಚೆ ಆಟವಾಡುವಾಗ ದೊಡ್ಡಜ್ಜನಮನೆಯ ಕತ್ತೆಲೆಕೋಣೆಯಲ್ಲಿ ಗಂಟೆಗಟ್ಟಲೆ ಅವಿತು ಕುಳಿತದ್ದು......ಅಜ್ಜನ ಹತ್ತಿರ ತೆಂಗಿನ ಮಡಿಲುಗಳ ಚಾಪೆ ನೇಯಿಸಿಕೊಂಡು ಸೀಮಾ ಮನೆಯ ಅಂಗಳದಲ್ಲಿ ಗುಡಿಸಲು ಕಟ್ಟಿ ಖಾರಅವಲಕ್ಕಿ ಮಾಡಿ ತಿಂದ್ದದ್ದು.......ಕೆಳಗಿನ ಗದ್ದೆಯ ಹೊಳೆಯ ಒಂಟಿ ಸಂಕದ ಮೇಲೆ ದೊಂಬರ ಹುಡುಗಿಯಂತೆ ಸರ್ಕಸ್ ಮಾಡಿ ನಡೆಯುತ್ತಿದ್ದುದು.... ಭತ್ತದ ಕಣದ ಮೂಲೆಯಲ್ಲಿದ್ದ ಹುಲ್ಲಿನ ಗೊಣಬೆ ಹತ್ತಿ ಜಾರುತ್ತಿದ್ದುದು....ತುಳಸಿಯೊಂದಿಗೆ ಹುಣಸೇ ಮರದ ಹಿಂದೆ ಅವಿತು ಕುಳಿತು, ಸಾಯಂಕಾಲದ ವೇಳೆ ಆಚೆ ದಿಂಬದ ತನ್ನ ಮನೆಗೆ ಹೋಗುತ್ತಿದ್ದ ಮಡಿವಾಳ ಗಂಗೆಯನ್ನು ಗೂಬೆಯಂತೆ ಕೂಗಿ ಹೆದರಿಸುತ್ತಿದ್ದುದು.....ಬೇಸಗೆ ಬಂತೆಂದರೆ ರಸ್ತೆಯಲ್ಲಿ ಡಾಂಕಿ ಮಂಕಿ, ಉಪ್ಪಾಟ , ಸಗಣಿ ಕೋಲು ಇತ್ಯಾದಿ ಆಟಗಳನ್ನು ರಾತ್ರೆಯವರೆಗೂ ಆಡುತ್ತಿದ್ದುದು .....ಸಾಯಂಕಾಲ ರೈಲು ನೋಡಲು ದೂರದ ಬ್ಯಾಣದ ಬಳಿಯಿದ್ದ ರೈಲ್ವೆ ರಸ್ತೆಗೆ ಓಡುತ್ತಿದ್ದುದು..........ಒಹ್ ನೆನೆದಷ್ಟೂ ಮುಗಿಯದ ನೆನಪಿನ ಸುರುಳಿ !

ವಾಸ್ತವದ ಈ ಲೋಕಕ್ಕೆ ಜಾರಿದಾಗ ಗ್ರಿಲ್ ಹಿಂದೆ ನಿಂತ ಮಂಕು ಕಣ್ಗಳ ಮಗಳ ಮುಖ ನೋಡಿ ನನ್ನ ಕಣ್ಣಂಚು ಒದ್ದೆಯಾಗುತ್ತದೆ .
ನಿಧಾನಕ್ಕೆ ಹೊರಬಾಗಿಲು ತೆಗೆದು , ಹೋಗು ಪುಟ್ಟ ಎನ್ನುತ್ತೇನೆ ....ಸಂತಸದಿಂದ ಅರಳುವ ಅವಳ ಕಣ್ಗಳ ಬೆಳಕಲ್ಲಿ ಮಿಸೆಸ್ ಶರ್ಮ, ಮಿಸೆಸ್ ರಾವ್ , ನಿಖಿತಾ ಜೈನ್ ಎಲ್ಲರೂ ಮಸುಕಾಗುತ್ತಾರೆ.


14 comments:

  1. ಪುಟ್ಟ ಕತೆಯ ಮೂಲಕ ಮಹತ್ವದ ಸಂದೇಶ ನೀಡಿದ್ದೀರಿ. ಅಂತಸ್ತು-ಪ್ರಜ್ಞೆಯ ಸರಳುಗಳ ಹಿಂದೆ ಸಿಲುಕಿದ ನಾವು, ನಮ್ಮ ಮಕ್ಕಳ ಬಾಲ್ಯವನ್ನು ಸಂಕುಚಿತಗೊಳಿಸುತ್ತಿದ್ದೇವೆ!

    ReplyDelete
  2. ಅರ್ಥಪೂರ್ಣವಾದ ಬರಹ.

    ReplyDelete
  3. ತು೦ಬಾ ಇಷ್ಟವಾದ ಬರಹ..... ಒ೦ತರಾ ನನ್ನ ಬಾಲ್ಯವೂ ಸಹ ಇದೇ ತರಹ.. ಲ೦ಗುಲಗಾಮಿಲ್ಲದ ಸು೦ದರ ಬಾಲ್ಯ :)

    ReplyDelete
  4. nimm blog nodide. tuMbaa khushi aytu. nimma parisara kaalajiy apta baraha istavaytu.

    ReplyDelete
  5. ಸುಮ,

    ವಿಚಿತ್ರ ನೋವಾಯ್ತು ಬರಹ ಓದಿ.. ಕಾರಣ ನನಗೂ ಇಂತಹದೇ ಅನುಭವ ಆಗಿರುವುದು.... ಆಗುತ್ತಿರುವುದು. ನಾಲ್ಕು ಗೋಡೆಗಳ ನಡುವೆ ಬಂಧಿಯಂತೆ ಬಾಲ್ಯ ಕಳೆಯುತ್ತಿರುವ ನನ್ನ ಪುಟ್ಟಿಯ ಬಾಲ್ಯ ಒಂದೆಡೆ... ಗರಟಿಯಲ್ಲಿ ಸೊಪ್ಪು, ನೀರು ಹಾಕಿ ಆಡುತ್ತಿದ್ದ ಅಡುಗೆ ಆಟ.. ಮಾಣ್ಣಿನ ಗೊಂಬೆ ಮಾಡಿ ಮದುವೆ ಮಾಡುತ್ತಿದ್ದ ಪರಿ... ಸಿಕ್ಕಲ್ಲಿ ಬಿದ್ದು.. ಎದ್ದು.. ಮಣ್ಣಲ್ಲೇ ಹೊರಳಾಡಿ.. ದಣಿದಷ್ಟೂ ಸುಸ್ತಾಗದಿರುತ್ತಿದ್ದ ನನ್ನ ಬಾಲ್ಯ ಇನ್ನೊಂದೆಡೆ!

    ಮನಸಿಗೆ ಬೇಸರವಾಗುತ್ತದೆ ತುಂಬಾ... ಕಳೆದು ಹೋದ ಬಾಲ್ಯವದಿಂದ ಮನಸು ನೆನೆದರೆ.. ಈಗ ಅಂತಹ ಬಾಲ್ಯದಿಂದ ವಂಚಿತಳಾಗಿರುವ ಪುಟ್ಟಿಯ ನೋಡಿ ಸಂಕಟವೂ ಆಗುತ್ತಿರುತ್ತದೆ!.

    ಆಪ್ತ ಬರಹಕ್ಕೆ ಧನ್ಯವಾದ.

    ReplyDelete
  6. ತುಂಬಾ ಚೆನ್ನಾಗಿದೆ! ನಾನು ಸಣ್ಣವನಿದ್ದಾಗ ಅಟ್ಟದ ಮೇಲೆ ಮನೆ ಕಟ್ಟೊ ಆಟವಾಡಲು ತೆಂಗಿನಗರಿಗಳನ್ನು ತಂದು ಕಟ್ಟಿದ್ದು. ಆಟೋ ಡ್ರೈವರ್ ಮಗನ ಜೊತೆ ಆಟವಾಡಲು ಹೋಗಿ ಅಪ್ಪನ ಕೈಯ್ಯಲ್ಲಿ ಏಟು ತಿಂದದ್ದು ಎಲ್ಲಾ ನೆನಪಾಯ್ತು.

    ReplyDelete
  7. ತುಂಬಾ ಇಷ್ಟ ಆತು ಸುಮಕ್ಕ..Very nice..:-)

    ReplyDelete
  8. ಸುಮ...

    ತುಂಬ ಸೊಗಸಾದ ಕಥೆ...

    ತಡವಾಗಿ ಓದಿದ್ದಕ್ಕೆ ಬೇಸರವಾಯಿತು..

    ಇನ್ನಷ್ಟು ಕಥೆಗಳು ಬರಲಿ...

    ReplyDelete
  9. ಸುಮ ಅವರೇ,
    ತುಂಬಾ ಇಷ್ಟವಾಯ್ತು ಕಥೆ..
    ಬಾಲ್ಯದ ದಿನಗಳ ವರ್ಣನೆ ಸೂಪರ್

    ReplyDelete
  10. ನಿಜ, ಇಂದು ಆದಿನಗಳ ಬಾಲ್ಯವನ್ನು ಊಹಿಸಲೂ ಸಾಧ್ಯವಿಲ್ಲ. ಆಗ ಆಡಲು ಸಾಕಷ್ಟು ಜಾಗವಿರುತ್ತಿತ್ತು. ಕೈಕಾಲು ಆಡಿಸುವ 'ನಿಜವಾದ' ಆಟಗಳಾಡುತ್ತಿದ್ದೆವು. ಈಗ ಪುರುಸೊತ್ತು ಕಡಿಮೆ, ಜಾಗ ಕಡಿಮೆ, ಮತ್ತು ಟಿವಿ, ಮೊಬೈಲ್, ಕಂಪ್ಯೂಟರ್ ಹಾವಳಿ

    ReplyDelete
  11. nimma baalyadalli nanna baalyavu nenapaayitu. olle sandesha neediddiraa...

    ReplyDelete