5 Sept 2011

ಚೋರಟೆ ಚಕ್ಲಿ !!





ಬಿಸಿಲು ಮಳೇ ಜೋಡೀ
ಮಂಗನ ಮದುವೆ
ನಂಜುಳ್ಳೇ ಪಾಯ್ಸ
ಚ್ವಾರಟೇ ಚಕ್ಲಿ
ಮೇ ಜೂನ್ ತಿಂಗಳಲ್ಲಿ ಬಿಸಿಲು ಮತ್ತು ಮಳೆ ಒಟ್ಟಿಗೇ ಇದ್ದಾಗ ಹೀಗೇನೋ ಒಂದಿಷ್ಟು ಸಾಲುಗಳನ್ನು ಹಾಡಿಕೊಳ್ಳುತ್ತ ನಮ್ಮೂರಿನ ಮಕ್ಕಳೆಲ್ಲ ಕುಣಿಯುತ್ತಿದ್ದೆವು.  ನಮ್ಮೂರಿನಲ್ಲಿ ಹೆಚ್ಚಿನವರೆಲ್ಲ ಶುದ್ಧ ಶಾಖಾಹಾರಿಗಳು.  ಸ್ವಲ್ಪ ಮಡಿವಂತ ಹಿರಿಯರು ಛೀ ..ಅದೇನೆಲ್ಲ ಹೇಳ್ತೀರಲ್ಲ ಮಕ್ಕಳೇ ಎಂದು ಬಯ್ಯುವುದೂ ಇತ್ತು.


ಈ ಪುಟ್ಟ ತರಲೆ ಹಾಡಿನಲ್ಲಿ ಬರುವ "ನಂಜುಳ್ಳೇ" ಎಂಬ ಎರೆಹುಳುವಿನ ಜಾತಿಯ ಜೀವಿಯು ಶ್ಯಾವಿಗೆಯನ್ನು ಹೋಲುವುದರಿಂದ ಅದರ ಪಾಯಸ , ಹಾಗೂ ಮುಟ್ಟಿದರೆ ಚಕ್ಕುಲಿಯಂತೆ ಸುತ್ತಿಕೊಳ್ಳುವ ಸಹಸ್ರಪದಿ "ಚ್ವಾರಟೆ"ಯ ಚಕ್ಕುಲಿ , ಮಂಗಣ್ಣನ ಮದುವೆಗೆ ಒಳ್ಳೇ ಕಾಂಬಿನೇಷನ್ ...ಅಲ್ಲವೆ?


ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಂಡುಬರುವ ಚಿತ್ರವಿಚಿತ್ರ ಜೀವಜಾಲಗಳಲ್ಲಿ  ಸಹಸ್ರಪದಿಯೂ ಒಂದು . ರಸ್ತೆ , ತೋಟ , ಮನೆಯಂಗಳ , ಮನೆ... ಹೀಗೆ ಎಲ್ಲೆಡೆ  ತಮ್ಮ ನೂರೆಂಟು ಕಾಲುಗಳಿಂದ, ನಿಧಾನವಾಗಿ, ಭಯಂಕರ ಕೆಲಸವಿರುವಂತೆ ಇವು ಓಡಾಡುತ್ತಿರುತ್ತವೆ.                  
                                                                            


ನಾವು ಮಾನವರು ಭೂಮಿಯ ಮೇಲೆ ವಾಸ ಮಾಡಲು ಪ್ರಾರಂಭಿಸುವ ಮೊದಲೇ ಅಂದರೆ ನಾನೂರು ಮಿಲಿಯನ್ ವರ್ಷಗಳಿಗಿಂತ ಹಿಂದೆಯೆ ಈ ಸಹಸ್ರಪದಿಗಳು ಭೂಮಿಯ ಮೇಲಿದ್ದವಂತೆ.
ಆರ್ತೊಪೊಡ  ಕುಟುಂಬಕ್ಕೆ ಸೇರಿದ ಇವುಗಳ ದೇಹದ ಮೇಲ್ಮೈ ಹಲವು ವಿಭಾಗಗಳಾಗಿ ವಿಭಾಗಿಸಲ್ಪಟ್ಟಿದ್ದು , ಪ್ರತಿಯೊಂದು ವಿಭಾಗದಲ್ಲೂ (ತಲೆ ಮತ್ತು ಕಾಲುಗಳನ್ನು ಬಿಟ್ಟು) ನಾಲ್ಕು ಕಾಲುಗಳಿವೆ. ಅದರ ಹೆಸರಿಗನುಗುಣವಾಗಿ ಸಾವಿರ ಕಾಲುಗಳಿಲ್ಲವಾದರೂ ಕೆಲವು ಜಾತಿಯಲ್ಲಿ ನಾನೂರಕ್ಕಿಂತ ಹೆಚ್ಚು ಕಾಲುಗಳಿವೆ. ಕಾಲುಗಳ ಸಂಖ್ಯೆ ಜಾಸ್ತಿಯಿರುವುದರಿಂದ ನಡಿಗೆ ನಿಧಾನ. ಇವುಗಳ ದೇಹದ ನೀರಿನಂಶ ಕಾಪಾಡಲು  ತೇವಾಂಶಯುತ ವಾತಾವರಣ ಬೇಕು. ಆದ್ದರಿಂದಲೇ  ಮಳೆಗಾಲದಲ್ಲಿ ಮಾತ್ರ ಇವುಗಳು ಚಟುವಟಿಕೆಯಿಂದಿರುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಕಡೆಗಳಲ್ಲಿ ಅಡಗುತ್ತವೆ.

 ಒಣಗಿದ , ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರ. ಕೆಲವೊಂದು ಜಾತಿಯ ಸಹಸ್ರಪದಿಗಳು ಸಸ್ಯಗಳ ಚಿಗುರನ್ನೂ ತಿನ್ನುವುದರಿಂದ ಅವುಗಳ ಸಂಖ್ಯೆ ಹೆಚ್ಚಿದ್ದಾಗ ಮನೆಯಂಗಳದ ಗಿಡಗಳಿಗೆ ಮಾರಕವಾಗುವುದೂ ಇದೆ. ಕೆಲವೊಂದು ಜಾತಿಯ ಸಹಸ್ರಪದಿಗಳು ಎರೆಹುಳು , ಕೆಲ ಕೀಟಗಳನ್ನೂ ತಿನ್ನುತ್ತವೆ.

ಹೆಣ್ಣು ತೇವಾಂಶಯುತ ಮಣ್ಣಿನಲ್ಲಿ ತನ್ನದೇ ವಿಸರ್ಜನೆಯಿಂದ ಚಿಕ್ಕ ಗೂಡು ನಿರ್ಮಿಸಿ ಮೊಟ್ಟೆಯಿಡುತ್ತದೆ. ಜಾತಿಗನುಗುಣವಾಗಿ ೧೦ ರಿಂದ ೩೦೦ ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ಸೆಗ್ಮೆಂಟ್ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ . ನಂತರ ಎರಡು ಮೂರು ಬಾರಿ ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ .

ಎಲ್ಲಕಿಂತ ವಿಸ್ಮಯವೆಂದರೆ ಸಹಸ್ರಪದಿಗಳ ಸ್ವರಕ್ಷಣಾ ವ್ಯವಸ್ಥೆ. ವೇಗವಾಗಿ ಓಡಲಾರದ , ಕಚ್ಚಲು ಚುಚ್ಚಲು ಯಾವುದೇ ಅಂಗಗಳಿಲ್ಲದ ಸಹಸ್ರಪದಿಗಳು ಬೇರೆ ಜೀವಿಗಳಿಗೆ ಆಹಾರವಾಗುವ ಸಾದ್ಯತೆ ಹೆಚ್ಚು . ಆದ್ದರಂದ ವೈರಿಗಳನ್ನು ಗಲಿಬಿಲಿಗೊಳಿಸಲು ಅವು ತಮ್ಮ ದೇಹವನ್ನು ಸುತ್ತಿಕೊಂಡುಬಿಡುತ್ತವೆ . ಕೆಲವು ಚಕ್ಕುಲಿಯಾಕಾರದಲ್ಲಿ , ಕೆಲವು ಉಂಡೆಯಾಕಾರದಲ್ಲಿ ಹೀಗೆ ಅವುಗಳ ದೇಹ ಸುತ್ತಿಕೊಂಡಾಗ ವೈರಿ ಗಲಿಬಿಲಿಗೊಂಡು ಸುಮ್ಮನಾಗುತ್ತದೆ. ಹೀಗೆ ಸುತ್ತಿಕೊಳ್ಳುವಾಗ ತನ್ನ ನೂರಾರು ಕಾಲುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಅವನ್ನು ಹೊರಗೆಳೆದುಕೊಳ್ಳುತ್ತದೆ. ನಾಯಿಗಳು ಈ ಸಹಸ್ರಪದಿಗಳು ಕಂಡಾಗ ಅವುಗಳನ್ನು ಮುಟ್ಟಿ , ಅವು ಸುತ್ತಿಕೊಳ್ಳುವುದನ್ನು ಮೋಜಿನಿಂದ ನೋಡುತ್ತಿರುತ್ತವೆ.
ಅದಲ್ಲದೇ ಕೆಲ ಸಹಸ್ರಪದಿಗಳು ಇರುವೆಗಳನ್ನು , ಕೀಟಗಳನ್ನು ವಿಕರ್ಷಿಸಲು ಕೆಟ್ಟ ವಾಸನೆ ಬೀರುವ , ವೈರಿಗಳ ದೇಹವನ್ನು ಸುಡಬಲ್ಲ ರಾಸಾಯನಿಕಗಳನ್ನು ಸ್ರವಿಸುತ್ತವೆ.
ಕೆಲ ಮಂಗಗಳು ಈ ಸಹಸ್ರಪದಿಗಳನ್ನು ಬೇಕೆಂದೆ ಮುಟ್ಟಿ ಅವು ಹೊರಸೂಸುವ ರಾಸಾಯನಿಕಗಳನ್ನು ಮೈಕೈಗೆಲ್ಲ ಸವರಿಕೊಂಡು ಸೊಳ್ಳೆಗಳಿಂದ ರಕ್ಷಣೆ ಪಡೆದುಕೊಳ್ಳುತ್ತವೆಯೆಂದು ಕೆಲ ಜೀವವಿಜ್ಞಾನಿಗಳು ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲೂ ಮೊದಲಿಂತೆ ಇವುಗಳು ಕಂಡುಬರುವುದಿಲ್ಲ. ವಿವಿಧ ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಭೂಮಿ , ನಗರೀಕರಣದಿಂದ ಮಾಯವಾಗುತ್ತಿರುವ ಕೈತೋಟಗಳು ಮನೆಯಂಗಳಗಳು , ಕಡಿಮೆಯಾದ ಮಳೆ ಇವೆಲ್ಲವುಗಳಿಂದಾಗಿ ಮಲೆನಾಡಿನಲ್ಲಿ ಈಗ ಇವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಇಂತಹ ಇನ್ನೆಷ್ಟು ನಿರುಪದ್ರವಿ ಜೀವಿಗಳು ನಮಗಾಗಿ ಬಲಿಯಾಗಬೇಕಾಗಿದೆಯೋ :(

10 comments:

  1. ನನ್ನ ಬಾಲ್ಯದಲ್ಲೂ ಇಂತಹ ಹುಳುವನ್ನು ಕಡ್ಡಿಯಲ್ಲಿ ಮೇಲಕ್ಕೆತ್ತಿ, ದೇಹದಿಂದ ದೂರ ಹಿಡಿದುಕೊಂಡು, ಜಾರುತ್ತಿರುವ ಚಡ್ಡಿ ಮೇಲೆಳೆಯುತ್ತಾ, ಗೊಣ್ಣೆ ಪಣ್ಣೆ ಸುರಿಸುತ್ತಾ ಹಳ್ಳಿಯ ರಸ್ತೆಯಲ್ಲಿ ಬರ್ರೋ ಅಂತ ಓಡಿದ ನೆನಪಾಯ್ತು.

    ಫ್ಲಾಷ್ ಬ್ಯಾಕಿಗೆ ಕೊಂಡೊಯ್ದಿದ್ದಕ್ಕೆ ಧನ್ಯವಾದಗಳು ಮೇಡಂ. ಒಂದು ಅರೆ ವೈಜ್ಞಾನಿಕ ಲೇಖನ ಓದಿದ ಅನುಭವ ಕೊಟ್ಟಿರಿ.


    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  2. ಸುಮಾ ಮೇಡಂ,
    ಶಾಲೆಗೆ ಹೋಗುವಾಗ, ರಜಾ ದಿನಗಳಲ್ಲಿ ದನ ಮೆಯಿಸುವಾಗ ಚಕ್ಲಿ ಹುಳು, ಬಸವನ ಹುಳು ಮುಂತಾದವುಗಳೆಲ್ಲಾ ನಮ್ಮ ಒಡನಾಡಿಗಳಾಗಿದ್ದವು. ಇವುಗಳ ಜೊತೆಗೆ ರೇಷ್ಮೆ ಹುಳು ಎಂಬ ಕೆಂಪಾದ ಮುದ್ದಾದ ನಿರುಪದ್ರವಿ ಹುಳುಗಳಂತೂ ನಮ್ಮ ಹತ್ತಿರದ ಗೆಳೆಯರು. ದಾರಿಯಲ್ಲಿ ಕಂಡರೆ ಎಲ್ಲಿ ದೊಡ್ಡವರ ಕಾಲಿಗೆ ಸಿಕ್ಕಿ ಸಾಯುತ್ತವೋ ಎಂದು ಹಿಡಿದು ರಸ್ತೆ ದಾಟಿಸುತ್ತಿದ್ದೆವು. ಕೆಲವೊಮ್ಮೆ ಜೇಬಿನಲ್ಲಿ ಇಟ್ಟುಕೊಂಡು ಹೋಗಿ ನಮ್ಮ ಸಾಹಸವನ್ನು ಸ್ನೇಹಿತರೆದುರು ತೋರಿಸಬೇಕೆಂದು ಜೇಬು ನೋಡಿದರೆ ಅಲ್ಲಿ ಹುಳು ಇರುತ್ತಲೇ ಇರಲಿಲ್ಲ!!!!

    ನಿಮ್ಮ ಈ ಲೇಖನ ಓದಿ ಆ ಎಲ್ಲಾ ಘಟನೆಗಳೂ ಸ್ಮೃತಿ ಪಟಲದ ಮೇಲೆ ಮೂಡಿಬಂದವು..............
    ಧನ್ಯವಾದಗಳು.

    ReplyDelete
  3. Suma.. mattondu swarasyakaravaada maahiti! keep it up!!

    ReplyDelete
  4. ಆಕರ್ಷಕ ಬರಹ ಅಕ್ಕ...
    ಸಹಸ್ರಪದಿ ಒಂದು ಕುತೂಹಲಕರ ಜೀವಿ...ನಮ್ಮ ಕಡೆ ಇದನ್ನು 'ಒನಕೆ ಮಂಡಿ' ಎಂದು ಕರೆಯುತ್ತಾರೆ...
    ಮುಟ್ಟಿದಾಗ ಸುತ್ತಿಕೊಳ್ಳುವುದರಿಂದ ಇದಕ್ಕೆ ಕಣ್ಣು ಕಾಣುವುದಿಲ್ಲವೆಂದು ಬಾಲ್ಯದಲ್ಲಿ ನಂಬಿದ್ದೆವು....ಆಗ ಇದ್ದ ನಂಬಿಕೆ ಪ್ರಕಾರ --
    ಬಹಳ ಹಿಂದೆ ಹಾವು ಮತ್ತು ಸಹಸ್ರಪದಿ ತುಂಬ ಒಳ್ಳೆ ಸ್ನೇಹಿತರಂತೆ...ಹಾವಿಗೆ ಕಾಲಿದ್ದರೆ ಕಣ್ಣು ಇರಲಿಲ್ಲ, ಸಹಸ್ರಪದಿಗೆ ಕಣ್ಣಿದ್ದರೆ ಕಾಲು ಇರಲಿಲ್ಲವಂತೆ...
    ಇವು ಒಂದು ಒಪ್ಪಂದಕ್ಕೆ ಬಂದವಂತೆ..ಕಣ್ಣು ಹಾಗು ಕಾಲನ್ನು ವಿನಿಮಯ ಮಾಡಿಕೊಳ್ಳುವುದು ಎಂದು..ಅದರಂತೆ ಹಾವಿಗೆ ಕಾಲು ಹೋಗಿ ಕಣ್ಣು ಬಂತು...ಸಹಸ್ರಪದಿಗೆ ಕಣ್ಣು ಹೋಗಿ ಕಾಲು ಬಂತು...ಇದನ್ನು ಕೇಳಿ ನಮಗೆ ಸಹಸ್ರಪದಿಯ ಬಗ್ಗೆ ಸಹಾನುಭೂತಿ ಮೂಡಿತ್ತು..

    ಈಗ ನಾಶವಾಗುತ್ತಿರುವ ಇವುಗಳ್ಳನ್ನು ದೊಡ್ಡ ಪ್ರಾಣಿಗಳಂತೆಯೇ ಸಂರಕ್ಷಿಸುವ ಕಾಲ ಹತ್ತಿರ ಬಂದಿದೆ..

    ಜೀವ ವೈವಿಧ್ಯತೆ ಪರಿಚಯ ಹೀಗೆ ಮುಂದುವರೆಯಲಿ..ಧನ್ಯವಾದಗಳು!!

    ReplyDelete
  5. ಉತ್ತಮ, ಸ್ವಾರಸ್ಯಕರ ಲೇಖನ.

    ReplyDelete
  6. ಲೇಖನ ತುಂಬಾ ಚೆನ್ನಾಗಿತ್ತು.

    ReplyDelete
  7. ಹತ್ತಾರು ಸಲ ಇದರ ಫೋಟೊಗ್ರಫಿ ಮಾಡಿದ್ದರೂ ಚೋರಟೆ ಚಕ್ಲಿ ಅಂತ ಕನ್ನಡ ಹೆಸರು ನನಗೆ ಗೊತ್ತೇ ಇರಲಿಲ್ಲ. ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  8. Good one ...aadare sasyahaari, shaakhahaari ...was it a mistake?

    ReplyDelete
  9. ಚಾರಂಟೆ ಬಗ್ಗೆ ಬಾಲ್ಯದ ನೆನಪು ಹರವಿ ನಮ್ಮ ನೆನಪನ್ನು ಕೆಣಕಿ ಕೊನೆಗೆ ಅವುಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿ ಲೇಖನ ಅರ್ಥಪೂರ್ಣವಾಗಿಸಿದ್ದಿರಾ...

    ReplyDelete
  10. ಸುಮ ಒಳ್ಳೆ ಮಾಹಿತಿ...ಸಹಸ್ರ ಮತ್ತು ಶತಪದಿಗಳು (ಮಿಲಿಪಿಡ್, ಸೆಂಟಿಪಿಡ್ ನ ಯಥಾವತ್ ಭಾಷಾನುವಾದ ಅಲ್ಲವಾದ್ರೂ ಹೀಗೇ ಇವನ್ನು ಕರೆಯೋದು...). ಹಹಹ ಹೌದು ಸಹಸ್ರ ಪದಿ ಕನ್ನಡದಲ್ಲಿ ಸ್ವಲ್ಪ ಅರ್ಥ ಸಿಗುತ್ತೆ ಅದೇ ಇಂಗ್ಲೀಷಿನ ಮಿಲಿಪಿಡ್ (ಹತ್ತು ಲಕ್ಷ ಕಾಲು....ಸಾಧ್ಯಾನೇ ಇಲ್ಲ....ಹಹಹಹ).
    ನೋಡಿರ್ಲಿಲ್ಲ ನಿಮ್ಮ ಈ ಪೋಸ್ಟ್...

    ReplyDelete