20 Mar 2012

ಗುಬ್ಬಿಗಳೆಂಬ ನಮ್ಮ ಹೊಸ ಅತಿಥಿಗಳು.

ನಾಲ್ಕು ದಿನಗಳ ಹಿಂದೆ ಬೆಳಗ್ಗೆ ಹೀಗೆ ಕಂಪ್ಯೂಟರ್ ಮುಂದೆ ಕುಳಿತಿದ್ದೆ . ಇದ್ದಕ್ಕಿದ್ದಂತೆ ಚಿಂವ್ ಚಿಂವ್ ಅಂತ ಶಬ್ದ ಕೇಳಿಸಿತು. ನಮ್ಮ ಮನೆಯ , ಬಾಲ್ಕನಿ , ಕಿಟಕಿಗಳ ಶಜ್ಜದಲ್ಲಿ  ಪಾರಿವಾಳ , ಆಳಿಲಿನಂತಹ ಖಾಯಂ ಅತಿಥಿಗಳಿವೆ. ಆದ್ದರಿಂದ ಅವುಗಳ ಹೂಂಕಾರವೂ , ಚೀಕ್ ಚೀಕ್ ಸದ್ದು ಯಾವಾಗಲೂ ಕೇಳುತ್ತದೆ. ಆದರೆ ಇದು ರೂಮಿನೊಳಗೇ ಕೇಳಿಸಿದ್ದು , ಅದೂ ಗುಬ್ಬಿಯ ಕೂಗು.... ಈ ಹೊಸ ಅತಿಥಿಗಳಿಗಾಗಿ ಸುತ್ತಲೂ ಹುಡುಕಿದೆ.  ಸೀಲಿಂಗ್ ಫ್ಯಾನ್ ಮೇಲೆ ಎರಡು ಗುಬ್ಬಿಗಳು ಕುಳಿತು ನನ್ನನ್ನೇ ನೋಡುತ್ತಿದ್ದವು !   ಗುಬ್ಬಿಗಳ ದಿನಾಚರಣೆ ಇರುವ ನಾಲ್ಕು ದಿನ ಮೊದಲು ಇವುಗಳು ಎಂಟ್ರಿ ಕೊಟ್ಟದ್ದು ನೋಡಿ ನನ್ನ ಮಗಳಿಗೆ ಸಂತೋಷವೋ ಸಂತೋಷ. ಬೆಂಗಳೂರಿನಲ್ಲಿ ಗುಬ್ಬಿಗಳೇ ಕಾಣುತ್ತಿಲ್ಲ ಎಂದು ಹೇಳುತ್ತಾರೆ . ಆದರೆ ನಮ್ಮ ಮನೆಯ ಬಳಿ ನೂರಾರು ಗುಬ್ಬಿಗಳಿವೆ . ಖಾಲಿ ಸೈಟಿನ ಪೊದೆಗಳಲ್ಲಿ ಇವುಗಳ ವಾಸ. ಕೆಲ ಗುಬ್ಬಿಗಳು ನಮ್ಮ ಬಾಲ್ಕನಿಗೆ ಬಂದು ನಾವು ಹಾಕುವ ಅಕ್ಕಿ, ಕಾಳು ತಿಂದು ಹೋಗುತ್ತಿದ್ದವು . ಆದರೆ ಎಂದೂ ಮನೆಯೊಳಗೆ ಬಂದಿರಲಿಲ್ಲ.  ಈಗ ಮನೆಯೊಳಗೆ ಬಂದದ್ದೆ ಅಲ್ಲದೆ ಏನನ್ನೋ ಪರೀಕ್ಷಿಸುವಂತೆ ಎಲ್ಲ ಕಡೇ ಹಾರುತ್ತಿವೆ ! ಅಂತೂ ಕೊನೆಗೆ  ಹಾಲ್‍ನಲ್ಲಿ  ಮಾಡಿಗೆ ತೂಗುಬಿಟ್ಟಿರುವ ಚಿಪ್ಪಿನ ಹ್ಯಾಂಗಿಗ್ ಅವುಗಳಿಗೆ ಇಷ್ಟವಾಯ್ತೂಂತ ಕಾಣತ್ತೆ. ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕಷ್ಟ ಸುಖ ಮಾತಾಡಿಕೊಂಡವು.  ಅಲ್ಲೆ ಹಾಕಿದ್ದ ಅಕ್ಕಿ ಕಾಳುಗಳನ್ನು ತಿಂದು ಹೊರಗೆ ಹಾರಿಹೋದವು. ಆ ಮೇಲೆ ಆ ದಿನ ನನಗೆ ಹೊರಗೆ ಕೆಲಸವಿದ್ದುದರಿಂದ ಎಲ್ಲ ಬಾಗಿಲು ಭದ್ರಪಡಿಸಿ ಹೊರಟುಬಿಟ್ಟೇ.
 ಬೆಳಗ್ಗೆ ಎದ್ದವಳೇ ಬಾಲ್ಕನಿಯ ಬಾಗಿಲು ತೆರೆದಿಡುವುದು ನನ್ನ ಅಭ್ಯಾಸ . ಮಾರನೆಯ ದಿನ ಹಾಗೇ ಬಾಗಿಲು ತೆಗೆದಿಟ್ಟು ..ಮಗಳನ್ನು ಶಾಲೆಗೆ ಕಳುಹಿಸುವ ತಯಾರಿಯಲ್ಲಿ ಮುಳುಗಿದೆ.ಸ್ವಲ್ಪ ಹೊತ್ತು ಬಿಟ್ಟು ಹಾಲ್‍ಗೆ ಬಂದು ನೋಡಿದರೆ ಶತಮಾನಗಳಿಂದ ಗುಡಿಸಿಲ್ಲವೇನೋ ಎಂಬಷ್ಟು ಕಸ ಕಡ್ಡಿಗಳಿವೆ!!  ಅಷ್ಟರಲ್ಲಿ ನೆತ್ತಿಯ ಮೇಲೆ ಪುರ‍್ ಎಂದು ಹಾರಿದ ಎರಡು ಗುಬ್ಬಿಗಳು ಇದು ತಮ್ಮದೇ ಕೆಲಸ ಎಂದು ಸಾರಿದ್ದವು. ಅವತ್ತು ಇಡೀ ದಿನ ಅವು ಹೊರಗಿಂದ ಒಣ ಕಡ್ಡಿಗಳನ್ನು ಹೊತ್ತು ತಂದು ಆ ಹ್ಯಾಂಗಿಗ್ ಒಳಗೆ ಗೂಡು ಕಟ್ಟಲು  ಪ್ರಯತ್ನಿಸಿದವು. ಆದರೆ ಪ್ರತೀ ಬಾರಿಯೂ ಎಲ್ಲ ಕಡ್ಡಿಗಳೂ ಕೆಳಗೆ ಬಿದ್ದುಬಿಡುತ್ತಿತ್ತು. ಆದರೂ ಅವು ತಮ್ಮ ಪ್ರಯತ್ನ ಬಿಡಲಿಲ್ಲ.

 ಅಲ್ಲಿ ಅವುಗಳಿಗೆ ಗೂಡು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಏನನ್ನಾದರೂ ಮಾಡುವ ಮನಸ್ಸಾದರೂ ....ಪ್ರವೇಶದ್ವಾರದಲ್ಲೇ , ಬಂದವರು ಕುಳಿತುಕೊಳ್ಳುವ ಹಾಲ್‍ನಲ್ಲೇ ಅವು ಗೂಡು ಕಟ್ಟಿ  ಅಲ್ಲೆ ಗಲೀಜು ಮಾಡುವುದು ನನಗೆ ಬೇಡವಾಗಿತ್ತು . ಬೇರೆಲ್ಲೂ ಕಟ್ಟಲು ಅವು ತಯಾರಿರಲಿಲ್ಲ . ಅಲ್ಲದೆ ಎಲ್ಲ ಕಿಟಕಿಗಳಲ್ಲೂ ಸೊಳ್ಳೆ ಬಾರದಂತೆ ಜಾಲರಿ ಇರುವುದರಿಂದ  ಅವು ಹೊರ ಹೋಗಿ ಬರಲು ಬಾಗಿಲನ್ನೇ ತೆಗೆಯಬೇಕಾಗುತ್ತದೆ. ನಾವು ಮನೆಯಲ್ಲಿ ಇಲ್ಲದಾಗ ಅವುಗಳಿಗೆ ಜೈಲಿನ ಶಿಕ್ಷೆಯಾಗಿಬಿಡುತ್ತದಲ್ಲ , ಈ ಎಲ್ಲ ಕಾರಣಗಳಿಂದ ನಾನು ಸುಮ್ಮನುಳಿದೆ. ಬಾಲ್ಕನಿಯಲ್ಲಿ ಗೂಡು ಕಟ್ಟುವುದಾದರೆ ಅನುಕೂಲವಾಗಲೆಂದು ಒಂದು ರಟ್ಟಿನ ಬಾಕ್ಸ್ ತೂಗು ಹಾಕಿದೆ . ಆದರೆ ಅಲ್ಲಿ ಮೊದಲೇ ಪಾರಿವಾಳಗಳ ಸಾಮ್ರಾಜ್ಯ ಇರೋದರಿಂದ ಅವಲ್ಲಿ ಗೂಡು ಕಟ್ಟಲಾರವು .
 ನಮ್ಮ ಹಳ್ಳಿಯ ಮನೆಯಲ್ಲಿ ಹಜಾರದಲ್ಲಿ ಗೋಡೆಯ ತುಂಬ ಅಲಂಕರಿಸಿದ್ದ ದೇವಾನುದೇವತೆಗಳ ಪೋಟೋಗಳ ಹಿಂದೆ ಈ ಗುಬ್ಬಿಗಳ ಅನೇಕ ಸಂಸಾರವಿತ್ತು . ಆಗಲೂ ಕೂಡ ಅವು ಅಲ್ಲಿ ಕಸ ಕಡ್ಡಿ ತಂದು ಹಾಕುತ್ತಿದ್ದವು ಆದರೂ ಮನೆಯವರ್ಯಾರಿಗೂ ಅದರ ಬಗ್ಗೆ ಬೇಸರವಿರಲಿಲ್ಲ. ಬಂದ ಅತಿಥಿಗಳೆದುರೇ " ಥೋ ಈ ಗುಬ್ಬಿಗಳು ಮನೆ ತುಂಬ ಕಸ ಮಾಡ್ತವೆ ನೋಡಿ " ಎನ್ನುತ್ತ ಅಮ್ಮನೋ ಚಿಕ್ಕಮ್ಮನೋ ಅಲ್ಲಿ ಗುಡಿಸುತ್ತಿದ್ದರು . ಇಷ್ಟು ಸರಳವಾಗಿ ಬದುಕುವುದು ನಮಗೇಕಿಂದು ಸಾದ್ಯವಿಲ್ಲವೋ ?
ಹಾಗೆಂದು ಆಗ ಯಾರೂ ಈ ಹಕ್ಕಿಗಳಿಗೆಂದು ಕಾಳು ಹಾಕುವುದು ನೀರಿಡುವುದು ಇತ್ಯಾದಿ ಮಾಡುತ್ತಿರಲಿಲ್ಲ. ಆದರೂ  ಮಾನವರೊಂದಿಗೆ ನೆಮ್ಮದಿಯ ಸಹಜೀವನ ನಡೆಸುವ ಅನೇಕ ಪ್ರಾಣಿ ಪಕ್ಷಿಗಳಿದ್ದವು . ಆದರೀಗ ನಾವು ಸರ್ವ ಸ್ವತಂತ್ರವಾದ ಪಕ್ಷಿಗಳಿಗೆ ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳ್ಳುವ ತಾಕತ್ತು ಇದೆಯೆಂದು ತಿಳಿದಿದ್ದರೂ ...ನಮ್ಮ ಸಂತೋಷಕ್ಕಾಗಿ. ಕಾಳು, ಬೇಳೇ ಹಾಕುತ್ತೇವೆ .... ಥೇಟ್ ಪಕ್ಕದ ಮನೆ ಮುದ್ದು ಮಗುವಿಗೆ ಚಾಕ್ಲೇಟ್ ಕೊಡಿಸಿ ಸಂತಸ ಪಡುವಂತೆಯೇ!
ಒಂದು ಕಡೆ ಪ್ರಾಣಿ ಪಕ್ಷಿಗಳೆಡೆಗಿನ ಪ್ರೀತಿ , ಇನ್ನೊಂದೆಡೆ   ನಮ್ಮ ಹಿತಾಸಕ್ತಿಗಳು..... ಈ ದ್ವಂದ್ವದಲ್ಲಿ ಕೊನೆಗೂ  ನಮ್ಮ ಹಿತಾಸಕ್ತಿಗಳೇ ಮುಖ್ಯವಾಗಿಬಿಡುವುದು ದುರಂತವಲ್ಲವೆ?

10 comments:

 1. ನಮ್ಮನೆಲೂ ಇದೇ ಪರಿಸ್ತಿತಿ..:)

  ReplyDelete
 2. ಹಹಹ ಚೆನ್ನಾಗಿದೆ... ಹೂ ಹಿತಾಸಕ್ತಿಯೇ ಮುಖ್ಯ...

  ReplyDelete
 3. ಬಹಳ ಚೆನ್ನಾಗಿದೆ.

  ReplyDelete
 4. "ಥೋ ಈ ಗುಬ್ಬಿಗಳು ಮನೆ ತುಂಬ ಕಸ ಮಾಡ್ತವೆ ನೋಡಿ , ಎನ್ನುತ್ತ ಅಮ್ಮನೋ ಚಿಕ್ಕಮ್ಮನೋ ಅಲ್ಲಿ ಗುಡಿಸುತ್ತಿದ್ದರು . ಇಷ್ಟು ಸರಳವಾಗಿ ಬದುಕುವುದು ನಮಗೇಕಿಂದು ಸಾದ್ಯವಿಲ್ಲವೋ ?"


  ಯಾಕೆ ಸಾಧ್ಯ ಇಲ್ಲ?! ಮನಸು ಮಾಡಿ ನೋಡಿ. ಅಪರೂಪದ ಅವಕಾಶ ಸಿಕ್ಕಿದೆ ನಿಮಗೆ!

  ReplyDelete
 5. ಗುಬ್ಬಿಗಳು ನಿಮಗೆ ನೋಡಲು ಸಿಕ್ಕವೆಂದರೆ, ನೀವೇ ಪುಣ್ಯವಂತರು! ನನಗೆ ಅನೇಕ ವರ್ಷಗಳಿಂದ ಗುಬ್ಬಿಯನ್ನು ನೋಡಲು ಸಾಧ್ಯವಾಗಿಲ್ಲ.

  ReplyDelete
 6. ಚೆನ್ನಾಗಿದೆ ಮೇಡಂ.
  ನಮ್ಮನೆ ಹತ್ರನೂ ಗುಬ್ಬಿಗಳು ಬಂದಿವೆ.
  ಅವುಗಳಿಗಾಗೇ customized ಗೂಡುಗಳು ಮಡಕೆ ಮಾಡುವವರ ಬಳಿ ಸಿಗುತ್ತದೆ.
  ಬೇರೆ ಯಾವ ಪಕ್ಷಿಗೂ ಆ ಗೂಡು ಸಾಲದು, ಗುಬ್ಬಿ ಮಾತ್ರ ಬರುತ್ತೆ ಅಂತ
  ಮಾರುವವರು ಹೇಳಿದ್ದನ್ನ ಕೇಳಿದ್ದೇನೆ .(try ಮಾಡಿಲ್ಲ)
  ಸ್ವರ್ಣಾ

  ReplyDelete
 7. ಕೊನೆಯ ಪ್ಯಾರ ಕನ್ನಡಿಯಾಗಿ ಕಾಡುತ್ತೆ...

  ReplyDelete
 8. ತುಂಬಾ ಚೆನ್ನಾಗಿ ಬರೆದಿದ್ದೀರಿ...

  ReplyDelete
 9. ನಮ್ಮ ಮನಸ್ಸಿಗೆ,ನಮ್ಮ ಕಥೆಗಳಿಗೆ ತೀರಾ ಆತ್ಮೀರಾಗಿದ್ದು,ಕಣ್ತುಂಬಾ ನೋಡುವಷ್ಟು ಸಂಖ್ಯೆಯಲ್ಲಿದ್ದು,ದಿಡೀರನೆ ಮಾಯವಾಗಿರುವ ಹಕ್ಕಿಗಳೆಂದರೆ ಗುಬ್ಬಕ್ಕಗಳೇನೋ...ಅವುಗಳನ್ನು ಮತ್ತೆ ನೆನಪು ಮಾಡಿಸಿದ್ದಕ್ಕೆ ಧನ್ಯವಾದಗಳು...
  ಬನ್ನಿ ನಮ್ಮನೆಗೂ,
  http://chinmaysbhat.blogspot.com/

  ಇತಿ ನಿಮ್ಮನೆ ಹುಡುಗ,
  ಚಿನ್ಮಯ ಭಟ್

  ReplyDelete