27 Jul 2012

ಹೊಸಬಾಳಿನ ಹೊಸ್ತಿಲಲ್ಲಿರುವ ತಂಗಿಗೊಂದು ಪತ್ರ



ಪ್ರೀತಿಯ ಗುಂಡಮ್ಮ
ನೀನು ಹೇಗಿದ್ದೀಯ? ಹೇಗಿರುತ್ತೀಯ ಎಂದು ಕಲ್ಪಿಸಿಕೊಳ್ಳಬಲ್ಲೆ ಬಿಡು , ಬಟ್ಟಲುಕಂಗಳ ತುಂಬ ಕನಸುಗಳು , ನಿರೀಕ್ಷೆಗಳು , ಕೊಂಚ ಭಯ ಆತಂಕ , ಕೊಂಚ ನಾಚಿಕೆ , ಮಧ್ಯೆ ಮಧ್ಯೆ ಅವನೊಡನೆ ಪೋನಿನಲ್ಲಿ ಪಿಸುಮಾತುಗಳು , ಕದ್ದುಮುಚ್ಚಿ ವಿನಿಮಯವಾಗುವ ಎಸ್ಸೆಮ್ಮೆಸ್ಸುಗಳು ......
 "ಪುಟ್ಟಿ ಈ ವರ್ಷ ಗುಂಡುಮರಿಯ ಮದುವೆ ಮಾಡಬೇಕು ಅಂತ ಅಂದ್ಕೊಂಡಿದ್ದೀನಿ .. ಏಲ್ಲಾದ್ರೂ ಒಳ್ಳೆ ವರ ಇದ್ದರೆ ಹೇಳು " ಅಂತ  ನಾಲ್ಕು ತಿಂಗಳ ಹಿಂದೆ  ಚಿಕ್ಕಪ್ಪ ಹೇಳಿದಾಗ  ನನಗನ್ನಿಸಿದ್ದು  ಅರೆ ಕಾಲ ಎಷ್ಟು ಬೇಗ ಓಡ್ತಿದೆಯಲ್ಲ ....ಆಗಲೆ ಈ ನನ್ನ ಪುಟ್ಟ ತಂಗಿ ಮದುವೆಗೆ ತಯಾರಾಗಿ ನಿಂತಿದ್ದಾಳೆ !!
ನೀನು ಹುಟ್ಟಿದ ದಿನದ ನೋಟವಿನ್ನೂ ನನಗೆ ನೆನಪಿದೆ . ಏಳನೆಯ ಕ್ಲಾಸ್ ಮುಗಿಸಿ ಹೈಸ್ಕೂಲಿಗೆ ಆಗ ತಾನೆ ಸೇರಿದ ನಾನು ಅವತ್ತೇ ಹುಟ್ಟಿದ ನಿನ್ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದೆ . ಕೆಂಪಗೆ , ಗುಂಡಗೆ , ಬಿಳಿಬಟ್ಟೆಯಲ್ಲಿ ಮಲಗಿ ನಿದ್ರಿಸುತ್ತಿದ್ದ  ನಿನ್ನನ್ನು ಆಗಲೇ ಎತ್ತಿಕೊಂಡು ಮನೆಗೆ ಬಂದುಬಿಡಬೇಕೆನ್ನಿಸಿತ್ತು ನನಗೆ . ಮನೆಗೆ ಕರೆದುಕೊಂಡು ಬಂದ ಮೇಲೆ ನೀನೊಂದು ಪುಟ್ಟ ಗೊಂಬೆಯೇ ಆಗಿದ್ದೆ ನಮಗೆ. ಸ್ಕೂಲಿಂದ ಬರುತ್ತಿದ್ದಂತೆ ಬ್ಯಾಗ್ ಬಿಸಾಡಿ ನಾನು ಮತ್ತು   ತಂಗಿ ನಿನ್ನ ಬಳಿ ಠಿಕಾಣಿ ಹೂಡುತ್ತಿದ್ದೆವು . ಎತ್ತಿಕೊಳ್ಳಲು ನಮ್ಮಲ್ಲೇ ಜಗಳ,ಹೊಡೆದಾಟ ರಾಮಾಯಣ ಮಹಾಭಾರತ ಎಲ್ಲ ನಡೆದು ಕೊನೆಗೆ ಚಿಕ್ಕಮ್ಮ ಬಂದು ರಾಜಿ ಮಾಡಿಸಿ ಇಬ್ಬರಿಗೂ ಸರದಿಯಂತೆ ಎತ್ತಿಕೊಳ್ಳಲು ಕೊಡಬೇಕಾಗುತ್ತಿತ್ತು!
ನಮ್ಮನ್ನು ಅಂಟಿಕೊಂಡೇ ಬೆಳೆದ ನೀನು ಈಗ ಹೊಸ ಜೀವನದ ಹೊಸ್ತಿಲಿನಲ್ಲಿ ನಿಂತಿದ್ದೀಯ ....ಇಲ್ಲಿಂದ ಮುಂದೆ ನಿನ್ನ ದಾರಿಯಲ್ಲಿ ಎದುರಾಗುವ ಹೊಸ ಹೊಸ ಸವಾಲುಗಳು , ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಲು ಈ ದಾರಿಯಲ್ಲಿನ ಹದಿನೈದು ವರ್ಷಗಳ ಪಯಣಿಗಳಾದ ನನ್ನ  ಪುಟ್ಟ ಸಲಹೆಗಳ ಕೈಪಿಡಿಯಿದು - ಓದಿ ಅರ್ಥೈಸಿಕೊಂಡು, ಅಳವಡಿಸಿಕೊಂಡರೆ ಒಂದಿಷ್ಟು ಹಾದಿ ಸುಗಮ .

ಮದುವೆಗೆ ಒಪ್ಪಿಗೆ ಕೊಟ್ಟ ಮೇಲೆ ಸಂಪೂರ್ಣವಾಗಿ ಅದಕ್ಕೆ ಸಿದ್ಧವಾಗಬೇಕು ...ಕೇವಲ ಬಟ್ಟೆ ಬರೆ ಒಡವೆಗಳ ಸಿದ್ಧತೆಯಲ್ಲ , ಇನ್ನೊಬ್ಬ ಬೇರೆಯದೇ ವ್ಯಕ್ತಿತ್ವವುಳ್ಳ ವ್ಯಕ್ತಿಯೊಡನೆ ತನುಮನವನ್ನು ಹಂಚಿಕೊಳ್ಳಲು ಬೇಕಾಗುವ ಮಾನಸಿಕ ಸಿದ್ಧತೆ , ಸಂಪೂರ್ಣ ಬೇರೆ ವಾತಾವರಣವಿರಬಹುದಾದ ಮನೆಯೊಂದರಲ್ಲಿ ವಾಸಿಸಲು ಬೇಕಾಗುವ ಮಾನಸಿಕ ಸಿದ್ಧತೆ , ವಿಭಿನ್ನ ಸ್ವಭಾವದ ಮನೆ ಜನರೊಂದಿಗೆ ಹೊಂದಿಕೊಳ್ಳಲು ಬೇಕಾಗುವ ಮಾನಸಿಕ ಸಿದ್ಧತೆ ...ಎಲ್ಲಕ್ಕಿಂತಲೂ ಮುಖ್ಯವಾಗಿ ಇಷ್ಟು ವರ್ಷ ಬೆಚ್ಚನೆಯ ಆಸರೆಯಾಗಿದ್ದ ಅಪ್ಪ ಅಮ್ಮನನ್ನು ಬಿಟ್ಟಿರಲು ಬೇಕಾದ ಮಾನಸಿಕ ಸಿದ್ಧತೆ .....ಅಬ್ಬ ಎಷ್ಟೊಂದು ಅಲ್ಲವೆ ಪುಟ್ಟಾ? ಹೆದರಬೇಡ ಪ್ರತಿಯೊಬ್ಬ ಹುಡುಗಿಗೂ ಈ ಅಗ್ನಿಪರೀಕ್ಷೆ ಅನಿವಾರ್ಯ ...  ಇಂತಹ ಎಲ್ಲ ಪರೀಕ್ಷೆಗಳನ್ನು ಎದುರಿಸಿ ಗೆಲ್ಲಬಲ್ಲ ಸಾಮರ್ಥ್ಯ ಎಲ್ಲ ಹೆಣ್ಣುಗಳಿಗಿರುತ್ತದೆ . ಅದೇ ಆಕೆಯ ಶಕ್ತಿ .

ಮನುಷ್ಯರಲ್ಲಿ ಎರಡು ಜಾತಿ . ಒಂದು ಗಂಡು ಮತ್ತೊಂದು ಹೆಣ್ಣು . ಹೀಗ್ಯಾಕೆ ಹೇಳ್ತಾಳೆ ಅಂತ ಆಶ್ಚರ್ಯನಾ ? ಕಾರಣವಿದೆ . ಹೀಗೆ ಬೇರೆ ಬೇರೆ ಜಾತಿಯಾಗಿರೋದರಿಂದಲೇ ಹೆಣ್ಣು ಮತ್ತು ಗಂಡಿನ ಅಲೋಚನೆಗಳು ತುಂಬ ಭಿನ್ನವಾಗಿರುತ್ತವೆ. ನಮಗೆ ತುಂಬ ಮುಖ್ಯವಾಗಿ ಕಾಣಿಸೋದು ಗಂಡಸರಿಗೆ ಸಿಲ್ಲಿಯಾಗಿಯೂ ...ಅವರಿಗೆ ಅತೀಮುಖ್ಯವೆನ್ನಿಸಿದ್ದು ನಮಗೆ ನೀರಸವಾಗಿಯೂ ಕಾಣಿಸುವ ಅಪಾಯವಿದೆ.

 ನಾನೇನೂ ಹೇಳದೆಯೆ ನನ್ನ ಮನವನ್ನು ಅರ್ಥಮಾಡಿಕೊಂಡು ಪಾನಿಪುರಿ ಕೊಡಿಸಲಿ ಅಂತ ಹುಡುಗಿ ಆಸೆಪಟ್ಟರೆ ....ಹಸಿವಿದೆಯಾ? ಏನಾದ್ರೂ ತಿಂತೀಯ ಅಂತ ಕೇಳಿಬಿಡುತ್ತಾನೆ ಹುಡುಗ ...ಇಲ್ಲ ಅಂದರೆ ಹೌದು ಅಂತ ಅವನಿಗೆ ಅರ್ಥ ಆಗೋದಾದ್ರು ಹೇಗೆ ? ಆಮೇಲೆ ಸೂಕ್ಷ್ಮ ಮನದವರಾದ್ರೆ  ನನ್ನವನಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ  ಅನ್ನಿಸಿಬಿಡುತ್ತೆ . ಹಾಗೆಲ್ಲ ಅಂದುಕೊಳ್ಳೋದಕ್ಕಿಂತ  ಮನದ ಭಾವನೆಗಳನ್ನ ಸ್ವಷ್ಟವಾಗಿ ಹಂಚಿಕೊಂಡರೆ ವಾಸಿ ಅಲ್ಲವೆ? ಹೌದು ಗಂಡಿನ ಮನದಲ್ಲೇನಿದೆ ಎಂಬುದನ್ನು ಹೆಣ್ಣು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲಳು. ಆದರೆ ಹೆಣ್ಣಿನ ಭಾವನೆಗಳನ್ನು ಗಂಡು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲಾರ. ಆದ್ದರಿಂದ ನಿನ್ನಗನ್ನಿಸುವುದನ್ನು ನಿನ್ನ ಇಷ್ಟಾನಿಷ್ಟಗಳನ್ನು ಸ್ಪಷ್ಟವಾಗಿ ಹಂಚಿಕೋ

ಇನ್ನೊಂದು ಗುಟ್ಟಿನ ಸಂಗತಿ ಗೊತ್ತಾ? ತುಂಬ ಹುಡುಗಿಯರು ಮೊದಮೊದಲು ಲೈಂಗಿಕಜೀವನದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿರುತ್ತಾರೆ . ರೋಮ್ಯಾಂಟಿಕ್ ಸಂಗತಿಗಳಿಗೆ ಪ್ರಾಮುಖ್ಯತೆ ಕೊಡುವ ಹೆಣ್ಣಿಗೆ , ಗಂಡಿನ ನೇರಾನೇರೆ ಕಾಮ ಅಸಹ್ಯವೆನ್ನಿಸಿಬಿಡುತ್ತದೆ .ಇಂತಹ ಸಂದರ್ಭಗಳಲ್ಲಿ ಇಬ್ಬರೂ ಮನಬಿಚ್ಚಿ ಪರಸ್ಪರರ ಆಸೆ ಆಕಾಂಕ್ಷೆಗಳನ್ನು ಹಂಚಿಕೊಂಡು , ಪರಸ್ಪರರ ಸಂತೋಷಕ್ಕೆ ಸಹಕರಿಸಿದರೆ ಇಬ್ಬರ ಸಂಬಂಧ ಗಟ್ಟಿಗೊಳ್ಳುತ್ತದೆ.

 ಜೀವನ ಪೂರ್ತಿಯಾಗಿ ಅಷ್ಟೆಲ್ಲ ವರ್ಷ ಜೊತೆಗಿರಬೇಕಾದ ದಂಪತಿಗಳು ಪರಸ್ಪರರಿಗೆ ಸ್ನೇಹಿತರಂತೆ ಇದ್ದರೆ ಎಷ್ಟು ಚೆನ್ನ ಆಲ್ಲವೆ? ಅದು ಸುಲಭ ಕೂಡ . ಪರಸ್ಪರ ನಂಬಿಕೆ , ವಿಶ್ವಾಸ, ಗೌರವ ಇರಬೇಕಾಗಿರೋದು ಮುಖ್ಯ. ಕೆಲಸಗಳನ್ನು ಹಂಚಿಕೊಳ್ಳುವುದು , ಭಿನ್ನಾಭಿಪ್ರಾಯಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳುವುದು ,ಜಗಳಗಳನ್ನು ಬೆಳೆಸದಿರುವುದು , ಇಬ್ಬರ ಮಧ್ಯೆ ಹಮ್ಮು(ಈಗೊ) ನುಸುಳಲು ಅವಕಾಶ ಕೊಡದಿರುವುದು  ಒಳ್ಳೆಯ ಬಾಂಧವ್ಯ ಬೆಸೆಯುತ್ತದೆ.

ಇನ್ನು ಅತ್ತೆ ,ಮಾವನ ಮನಗೆಲ್ಲೋದು ನಿನಗೆ ಕಷ್ಟವಾಗೊಲ್ಲ ಬಿಡು . ನಿನ್ನ ಹೊಸಜೀವನದ ಅಪ್ಪ ಅಮ್ಮ ಇವರು ಅಂದುಕೊಂಡುಬಿಡು ಅಷ್ಟೆ . ಅತ್ತೆಯಾಗಲೀ ಮಾವನಾಗಲೀ ಏನಾದ್ರೂ ಹೇಳಿದರೆ ಅದನ್ನೇ ದೊಡ್ದ ಇಶ್ಯೂ ಮಾಡೊ ಅಗತ್ಯ ಇರೋಲ್ಲ . ನಮ್ಮ ಅಪ್ಪ ಅಮ್ಮ ಬಯ್ದರೆ ನಾವು ನಮ್ಮ ಒಳ್ಳೇದಕ್ಕೇ ಹೇಳ್ತಿದ್ದಾರೆ ಅಂತ ಅಂದುಕೊಳ್ತೀವಲ್ವಾ ...ಹಾಗೇ ಇವರೂ ಅಂತ ತಿಳಿಯಬೇಕು . ಅವರ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುವುದು , ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು , ಆತ್ಮೀಯವಾಗಿ ನಡೆದುಕೊಳ್ಳೋದು ಅವರ ಮನಗೆಲ್ಲಲು ಸಹಕಾರಿ . ಇನ್ನೊಂದು ಗುಟ್ಟು ಗೊತ್ತ ಪುಟ್ಟಾ ತನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಹೆಂಡತಿಯನ್ನು ಗಂಡ ಇನ್ನೂ ಹೆಚ್ಚು ಪ್ರೀತಿಸುತ್ತಾನೆ ಮತ್ತು ಗೌರವಿಸುತ್ತಾನೆ !

  ಈ ಹೊಸ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡು ಸಂತೋಷದಿಂದಿರುತ್ತೇನೆಂದು ನೀನು ತೀರ್ಮಾನಿಸಿದರೆ ಎಲ್ಲ  ಸರಳ. ಹಾಗೆ ಮಾಡುತ್ತೀಯೆಂಬ ನಂಬಿಕೆ ನನ್ನದು .

ನಿನ್ನ ಜೀವನ ಸುಖಮಯವಾಗಿರಲೆಂದು ಆಶಿಸುವ
ನಿನ್ನ ಅಕ್ಕ 

11 comments:

  1. sumakkaa ,olle lekhana.gundammana jeevana sukhamayavaagiralendu ee akkana kadeyindaloo ondu putta haaraike.......

    ReplyDelete
  2. ಸುಮಾ ಅವರೇ, ತುಂಬಾ ಚೆನ್ನಾಗಿದೆ ಲೇಖನ. ಒಂದೊಂದು ಮಾತೂ ಸತ್ಯ. ನಿಮ್ಮ ತಂಗಿಯ ಬಾಳು ಹಸನಾಗಿರಲಿ...

    ReplyDelete
  3. ಪ್ರತಿ ಗುಂಡು ಮರಿಗೂ ಇಂಥ ಅಮ್ಮನಂಥ ಅಕ್ಕ ಿದ್ದರೆ ಎಷ್ಟು ಚೆನ್ನ...

    ReplyDelete
  4. ಮತ್ತೆ, ನಿಮ್ಮ ತಂಗಿಯ ಬಾಳು ಹೂವಿನಂತೆ ಅರಳಿ ನಗಲಿ

    ReplyDelete
  5. good one and nice suggestions too

    ReplyDelete
  6. ಮದುವೆಯ ಹೊಸ್ತಿಲನಲ್ಲಿರುವ ಎಲ್ಲ ತರುಣಿಯರಿಗೂ ಇವು ಅತ್ಯುತ್ತಮವಾದ ಸಲಹೆಗಳಾಗಿವೆ. ಹುಡುಗರೂ ಸಹ ಈ ಸಲಹೆಗಳಿಂದ ಲಾಭ ಪಡೆಯಬಹುದು!

    ReplyDelete
  7. ನೈಸ್ ಸುಮಕ್ಕ ಉತ್ತಮವಾದ ಬರಹ ,...ನನಗೂ ಅನ್ವಯಿಸಿಕೊಂಡೆ ...ಧನ್ಯವಾದಗಳು ..

    ReplyDelete
  8. ತುಂಬಾ ಉತ್ತಮವಾದ ಲೇಖನ ಸುಮಕ್ಕ... ಹೊಸ ಬಾಳಿಗೆ ಕಾಲಿಡುತ್ತಿರುವ ಗುಂಡಮ್ಮನಿಗೆ ಈ ಗೆಳತಿಯ ಶುಭ ಹಾರೈಕೆಗಳು...

    ReplyDelete
  9. ಹುಡುಗಿಯರಿಗೆ ತುಂಬಾ ಉಪಯುಕ್ತ ಲೇಖನ....
    ನೈಸ್...

    ReplyDelete
  10. ಸುನಾಥರ ಅಭಿಪ್ರಾಯವೇ ನನ್ನದು....
    ತುಂಬಾ ಉತ್ತಮ ಲೇಖನ...

    ReplyDelete
  11. THANKS FOR WRITING VERY NICE

    ReplyDelete