6 Sept 2012

ಇರುವೆ ಇರುವೆ

ಊರಿಗೆ ಹೋದಾಗ ಬೆಳಗಿನ ಎಳೆಬಿಸಿಲಿನಲ್ಲಿ ಮನೆಯೆದುರಿನ ಅಂಗಳದಲ್ಲೋ, ಹಿತ್ತಲತುದಿಯಲ್ಲೋ ಸುಮ್ಮನೆ ಕುಳಿತುಕೊಳ್ಳುವುದು ನನ್ನ ಅಭ್ಯಾಸ.  ಆ ದಿನದ ತಮ್ಮ ಆಹಾರ ಸಂಗ್ರಹಣೆಗಾಗಿ ಶಿಸ್ತಿನ ಸಿಪಾಯಿಗಳಂತೆ ಹೊರಡುವ ಇರುವೆಗಳು, ಅಮ್ಮ ಬಿಸಿಲಲ್ಲಿ ಒಣಗಿಸಲೆಂದು ಇಟ್ಟಿರುವ ಬೇಳೆಕಾಳುಗಳನ್ನು ತಿನ್ನಲು ತನ್ನ ಸಂಗಾತಿಗಳನ್ನೂ ಕರೆಯುತ್ತಾ ಬರುವ ಕಾಗೆ, ಚಂದದ ಬಲೆ ನೇಯುವುದರಲ್ಲಿ ನಿರತವಾಗಿರುವ ಜೇಡ, ರಾತ್ರಿಯಿಡೀ ಮನೆಕಾಯ್ದ ವೀರನಂತೆ ಈಗ ಭಯಂಕರ ನಿದ್ದೆಯಲ್ಲಿರುವ ನಾಯಿ , ಆ ನಾಯಿಯ ಕಡೆಯೆ ಕಳ್ಳ ದೃಷ್ಟಿಯಲ್ಲಿ ನೋಡುತ್ತಾ ಅಡಿಗೆಮನೆಯಲ್ಲಿ ಅಮ್ಮ ಇಟ್ಟಿರಬಹುದಾದ ಹಾಲನ್ನು ನೆನೆದು ಒಳಗೋಡುವ ಬೆಕ್ಕು , ಆ ದಿನದ ತಮ್ಮ ಕಾಯಕ ಪ್ರಾರಂಭಿಸಿರುವ ಇನ್ನೆಷ್ಟೋ ಹೆಸರು ಗೊತ್ತಿಲ್ಲದ ಕ್ರಿಮಿ ಕೀಟಗಳನ್ನು ಗಮನಿಸುತ್ತಾ ದಿವ್ಯಮೌನದಲ್ಲಿ ಕುಳಿತರೆ.....ಆಹಾ!! ಆ ಸ್ವರ್ಗವೆ ಧರೆಗಿಳಿದಂತೆ ನನ್ನ ಪಾಲಿಗೆ.

ಹೀಗೆ ಒಂದು ದಿನ ಕೊಟ್ಟಿಗೆಯ ಸೋಗೆ ಮಾಡಿನ ತುದಿಯಲ್ಲಿದ್ದ   ಕಣಜದ  ಗೂಡನ್ನೇ ಗಮನಿಸುತ್ತಾ ನಿಂತಿದ್ದೆ.  ಅಷ್ಟಾಕಾರದ ಪುಟ್ಟ ಕೋಣೆಗಳಲ್ಲಿ ಪ್ರತೀ ಕೋಣೆಗೊಂದರಂತೆ ಬಿಳಿಯ ಬಣ್ಣದ ಮೊಟ್ಟೆಗಳಿದ್ದವು. ಒಂದು ನಾಲ್ಕಾರು ಕಣಜಗಳು  ಅಲ್ಲಿ ಏನೋ ಕೆಲಸದಲ್ಲಿ ನಿರತವಾಗಿದ್ದವು. ಅಷ್ಟರಲ್ಲಿ ಒಂದು ಕಣಜ ತನ್ನ ಮುಂದಿನ ಎರಡು ಕಾಲ್ಗಳಲ್ಲಿ ಒಂದು ಮೊಟ್ಟೆಯನ್ನು ಎತ್ತಿಕೊಂಡು ಗೂಡಿನಿಂದ ಹೊರ ಹಾರಿತು. ಅರೆ ಇದೇನು ಮಾಡ್ತಿದೆ ಅಂತ ನೋಡುತ್ತಿದ್ದಂತೆಯೆ ಗೂಡಿನಿಂದ ಮಾರು ದೂರಕ್ಕೆ ಹಾರಿದ ಅದು ಅಲ್ಲಿ ಮೊಟ್ಟೆಯನ್ನು ನೆಲಕ್ಕೆ ಬೀಳಿಸಿ ಎಲ್ಲಿಗೋ ಹಾರಿಹೋಯಿತು.
ಛೆ ! ಕಾಯಬೇಕಾದ ತಾಯಿಯೆ ಈ ಮೊಟ್ಟೆಯನ್ನು ತ್ಯಜಿಸಲು ಕಾರಣವೇನಿರಬಹುದು?ಬಹುಶಃ ಆ ಮೊಟ್ಟೆ ದೋಷಪೂರಿತವಾಗಿದ್ದಿರಬೇಕು. ಎಂದು ಯೋಚಿಸುತ್ತಿದ್ದಂತೆಯೆ ಅಲ್ಲಿ ಪ್ರಕೃತಿಯ ನಾಟಕದ ಇನ್ನೊಂದು ದೃಶ್ಯದ ಅನಾವರಣವಾಗಿತ್ತು.

ಆ ಮೊಟ್ಟೆ ಬಿದ್ದ ಜಾಗದ ಬಳಿ ಅತೀ ಚಿಕ್ಕ ಇರುವೆಯೊಂದು ಅಡ್ಡಾದಿಡ್ಡಿಯಾಗಿ ಅಲೆಯುತ್ತಿತ್ತು. ಮೊಟ್ಟೆ ಅಲ್ಲಿ ಬೀಳುತ್ತಿದ್ದಂತೆಯೆ ಅದರ ಹತ್ತಿರ ಬಂದ ಆ ಇರುವೆ ತನ್ನೆಲ್ಲ ಬಲ ಪ್ರಯೋಗಿಸಿ  ಮೊಟ್ಟೆಯನ್ನು ಎಳೆಯಲು ಪ್ರಯತ್ನಿಸಿತು. ಆದರೆ ಸಾಕಷ್ಟು ದೊಡ್ಡದಾಗಿದ್ದ ಮೊಟ್ಟೆಯನ್ನು ಎಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ.

 ಸ್ವಲ್ಪ ಹಿಂದೆ ಸರಿದ ಇರುವೆ ಹಿಂತಿರುಗಿ ಹೊರಟಿತು. ಅಲ್ಲಿಂದ ಸುಮಾರು ಒಂದು ಆಡಿಗಳಷ್ಟು ದೂರದಲ್ಲಿ ನೆಲದಲ್ಲಿದ್ದ ಬಿರುಕೊಂದರ ಒಳಗೆ ಮಾಯವಾಯಿತು. ಅದು ತನ್ನ ಸಂಗಾತಿಗಳಿಗೆ ಇಲ್ಲಿ ಆಹಾರ ಇರುವ ಬಗ್ಗೆ ಸಂದೇಶ ನೀಡಲು ಹೋಗಿದೆ ಎಂದು ಯೋಚಿಸಿದ ನಾನು ಆ ಬಿರುಕಿಂದ ಒಂದು ಪುಟ್ಟ ಇರುವೆ ಸೈನ್ಯ ಹೊರಬರುವುದನ್ನು ನಿರೀಕ್ಷಿಸುತ್ತ ನೋಡುತ್ತಿದ್ದೆ.

ಆದರೆ ಹಾಗೇನೂ ಆಗಲಿಲ್ಲ ಬದಲಾಗಿ ಅಲ್ಲಿಂದ ಮೊದಲಿನ ಇರುವೆಗಿಂತ ಸ್ವಲ್ಪ  ದಪ್ಪವಾಗಿದ್ದ ಇರುವೆಯೊಂದು ಹೊರಬಂದಿತು. ಅದು ಮತ್ತೆ ಅಲ್ಲಿ ಇಲ್ಲಿ ನಿರುಕಿಸುತ್ತಾ ಮೊಟ್ಟೆಯ ಬಳಿಗೆ ಬಂದಿತು . ಮೊಟ್ಟೆಯ ಹತ್ತಿರ ಬರುತ್ತಿದ್ದಂತೆಯೆ ಆ ದಪ್ಪನಾದ ಇರುವೆ ಮೊದಲಿದ್ದ ಇರುವೆಯ ಸೈಜಿನ ಎರಡು ಇರುವೆಗಳಾಯಿತು!! ಅದರಲ್ಲಿ ಒಂದು ಇರುವೆ ಮೊಟ್ಟೆಯನ್ನು ಎಳೆಯಲು ಪ್ರಯತ್ನಿಸತೊಡಗಿದರೆ ಇನ್ನೊಂದು ಇರುವೆ ಮತ್ತೆ ಗೂಡಿನೆಡೆಗೆ ವಾಪಾಸಾಯಿತು.

ನೋಡುತ್ತಿದ್ದಂತೆಯೆ ಮತ್ತೆ ಗೂಡಿನಿಂದ ದಪ್ಪ ಇರುವೆಯೊಂದು ಹೊರಬಂತು. ಜಾದೂ ಶೋ ನೋಡುವಂತೆ ಆಶ್ಚರ್ಯದಿಂದ  ಬಾಯಿ ತೆರೆದು ಕುಳಿತಿದ್ದ  ನನ್ನ ಮೆದುಳು ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಕೈಲಿದ್ದ ಕ್ಯಾಮರದಿಂದ ಜೂಮ್ ಮಾಡಿ ಅ ದಪ್ಪ ಇರುವೆಯನ್ನು ನೋಡಿದೆ. ಅದು ಒಂದೇ ಇರುವೆಯಾಗಿರಲಿಲ್ಲ. ಒಂದರ ಬೆನ್ನ ಮೇಲೆ ಇನ್ನೊಂದರಂತೆ ಎರಡು ಇರುವೆಗಳಿದ್ದವು!! ಮತ್ತೆ ಮೊದಲಿನಂತೆಯೆ ನಡೆಯಿತು. ಮೊಟ್ಟೆಯ ಹತ್ತಿರ ಆ ಇನ್ನೊಂದು ಇರುವೆಯನ್ನು ತಲುಪಿಸಿದ ಮೊದಲಿನ ಇರುವೆ ಪುನಃ ಗೂಡಿಗೆ ಹೊರಟಿತ್ತು!!

ಹೀಗೆಯೆ ಸುಮಾರು ಹತ್ತು  ಸಂಗಾತಿಗಳನ್ನು ಬೆನ್ನ ಮೇಲೆ ಹೊತ್ತು ತಂದ  ಆ ಪುಟ್ಟ ಇರುವೆ ಸ್ವಲ್ಪವೂ ಆಯಾಸಗೊಳ್ಳದೆ ತನ್ನ ಕೆಲಸ ಮುಂದುವರೆಸಿತ್ತು. ಇತ್ತ ಆ ಹತ್ತು ಇರುವೆಗಳು ಒಟ್ಟುಗೂಡಿ  ಮೊಟ್ಟೆಯನ್ನು ನಿಧಾವಾಗಿ ಗೂಡಿನತ್ತ ಎಳೆಯಲು ಪ್ರಾರಂಭಿಸಿದವು. ಸುಮಾರು ಅರ್ಧಘಂಟೆಯ ಸಮಯದಲ್ಲಿ ಅನೇಕ ಇರುವೆಗಳು ಗುಂಪು ಗೂಡಿ ಮೊಟ್ಟೆಯನ್ನು ತಮ್ಮ ಗೂಡಿನೊಳಕ್ಕೆ ಎಳೆದೊಯ್ದವು. ಆ ಚಿಕ್ಕ ಇರುವೆಗಳ ಅಷ್ಟೂ ಗುಂಪನ್ನು ಮೊದಲು ಮೊಟ್ಟೆಯನ್ನು ಗಮನಿಸಿದ ಇರುವೆಯೇ ಬೆನ್ನ ಮೇಲೆ ಹೊತ್ತು ತಂದಿತ್ತು !!

ಇರುವೆಗಳು ಸಾಮಾನ್ಯವಾಗಿ ರಾಸಾಯನಿಕ ಸಂಪರ್ಕದಿಂದ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ಆಹಾರ ಹುಡುಕುತ್ತಾ ಸಾಗುವ ಇರುವೆಯೊಂದು , ಸೂಕ್ತವಾದ ಆಹಾರ ದೊರಕಿದ ಕೂಡಲೇ ಅದನ್ನು ಗೂಡಿಗೆ ಸಾಗಿಸಲು ಪ್ರಯತ್ನಿಸುತ್ತದೆ . ಆಹಾರದ ಪ್ರಮಾಣ ಹೆಚ್ಚಿದ್ದು ತನ್ನಿಂದ ಅಷ್ಟನ್ನೂ ಸಾಗಿಸುವುದು ಅಸಾದ್ಯ ಎನ್ನಿಸಿದಾಗ ತನ್ನ ಗೂಡಿನಲ್ಲಿರುವ ಸಂಗಾತಿಗಳನ್ನು  ಕರೆಯಲು ಹೊರಡುತ್ತದೆ.   ಆಹಾರದ ವಾಸನೆ ಮತ್ತು ಅದರಿಂದ ಸ್ರವಿಸಲ್ಪಡುವ ಫೇರಾಮೋನ್ , ಮತ್ತು ಇರುವೆಯ ಮೀಸೆಗಳನ್ನು ತಾಗಿಸಿ ನೀಡುವ ಸಂದೇಶಗಳಿಂದ   ಗೂಡಿನಲ್ಲಿಯ ಉಳಿದ ಸಂಗಾತಿಗಳು ಆಹಾರದ ಇರುವಿಕೆಯ ಸ್ಥಳ ಅರಿಯುತ್ತವೆ. ನಂತರ ಅನೇಕ ಇರುವೆಗಳು ಸೇರಿ ಆಹಾರವನ್ನು ಗೂಡಿಗೆ ಸಾಗಿಸಿ ಮರಿಗಳಿಗಾಗಿ ಸಂಗ್ರಹಿಸುತ್ತವೆ.

ಆದರೆ  ಇಲ್ಲಿ ಅವುಗಳ ನಡುವಿನ ಈ ರೀತಿಯ ಸಂಪರ್ಕ ವ್ಯವಸ್ಥೆ ನೋಡಿ ನಿಜಕ್ಕೂ ಮೂಕಳಾಗಿದ್ದೆ.  ಕೆಲವು  ಕೀಟಭಕ್ಷಕ ಇರುವೆಗಳಲ್ಲಿ ಗುಂಪುಗೂಡಿ ಆಹಾರ ಸಂಗ್ರಸುವ ಅವಶ್ಯಕತೆ ಇಲ್ಲವಾದ್ದರಿಂದ ಉಳಿದ ಇರುವೆಗಳಂತೆ ಫೆರಾಮೋನ್ ಕಮ್ಯುನಿಕೇಷನ್ ಇರುವುದಿಲ್ಲ . ಬಹುಶಃ ಆ ರೀತಿಯ ಸಂಪರ್ಕ ಸಾಧ್ಯವಾಗದೆ ಈ ಪುಟ್ಟ ಇರುವೆ ತನ್ನ ಸಂಗಾತಿಗಳನ್ನು ಹೊತ್ತು ತಂದು ಆಹಾರ ಸಂಗ್ರಹಣೆಗೆ ಮುಂದಾಗಿತ್ತು. ಸಾಮುದಾಯಿಕ ಚಿಂತನೆಗೆ ಅತ್ಯುತ್ಕೃಷ್ಟ ಉದಾಹರಣೆಯಾಗಿ  ಈ ಇರುವೆಗಳು ನಿಲ್ಲುತ್ತದೆ  ಅಲ್ಲವೆ?

15 comments:

 1. ಬಾಲ್ಯದಲ್ಲಿ ಓದಿದ್ದ ಪದ್ಯ..ಇರುವೆ ಇರುವೆ ಕರಿಯ ಇರುವೆ..ನಾನು ನಿನ್ನ ಜೊತೆ ಬರುವೆ..ಆಹಾ ಇರುವೆಗಳ ಜೀವನ, ಒಗ್ಗಟ್ಟು ಎಷ್ಟು ಚೆನ್ನು...ಕೂಡಿಬಾಳಿದರೆ ಸ್ವರ್ಗ ಸುಖ ಎನ್ನುವ ನಾಣ್ಣುಡಿಯನ್ನು ಪಾಲಿಸುತ್ತಿರುವ ಚಿಕ್ಕದಾದ ಆದ್ರೆ ಮನುಜನಿಗೆ ದೊಡ್ಡ ಪಾಠ ಹೇಳುವ ಇರುವೆಗಳ ಒಂದು ಚಟುವಟಿಕೆಯ ಲೇಖನ ಖುಷಿ ಕೊಟ್ಟಿತು..ಸುಂದರವಾಗಿದೆ..

  ReplyDelete
 2. ನಿಮ್ಮ ಈ ಲೇಖನ ನನ್ನನ್ನು ಆಶ್ಚರ್ಯದ ಕಡಲಲ್ಲಿ ಮುಳುಗಿಸಿತು. ನಮ್ಮ ಮನೆಯಲ್ಲಿ ಇರುವೆಗಳ ಸೈನ್ಯವೊಂದು ಅರಿಸಿ ಒಗೆದ ದೀಪದ ಕಡ್ಡಿಗಳನ್ನು ಹೊತ್ತೊಯ್ಯುವ ಕಾಯಕ ನಡೆಸುತ್ತಿದ್ದವು. ಯಾಕೊ, ನಾನರಿಯೆ!ಜೀವಶಾಸ್ತ್ರವನ್ನು ಆಸಕ್ತಿಕರವಾಗಿ ತಿಳಿ ಹೇಳುತ್ತಿರುವ ನಿಮಗೆ ಧನ್ಯವಾದಗಳು.

  ReplyDelete
 3. Nivu jeeva vaividhyavannu tiLIsi heLuva riti superb.....

  tumbaa ishTa aagatte...sulabhadalli artha aagatte....

  ReplyDelete
 4. ಚೆನ್ನಾಗಿದೆ :)

  ReplyDelete
 5. ಇರುವೆಗಳ ಬಗ್ಗೆ ಮಾಹಿತಿಯುಕ್ತ ಬರಹ.

  ReplyDelete
 6. ಇರುವೆ ಬಗ್ಗೆ ಸುಂದರ ಮಾಹಿತಿ ಕೂಡಿದ ಬರಹ ಓದಿ ಸಂತಸವಾಯಿತು.
  ಮಾಲಾ

  ReplyDelete
 7. ಇರುವೆಗಳ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸುಮಾ.. ಧನ್ಯವಾದಗಳು, ಚಿಕ್ಕಂದಿನಲ್ಲಿದ್ದಾಗ ಇರುವೆ ಸಾಲುಗಳನ್ನು ಹಿಂಬಾಲಿಸಿ ಹೋಗಿ ನೋಡುತ್ತಿದ್ದೆ ಎಲ್ಲಿಗೆ ಹೋಗುತ್ತವೆ ಯಾಕೀ ಗುಂಪುಗಾರಿ ಎಂದುಕೊಳ್ಳುತ್ತಿದೆ.:)

  ReplyDelete
 8. ಇರುವೆಗಳ ಸಾಲನ್ನು ಹಿಂಬಾಲಿಸಿ ಹೋಗುವ ಕೆಲಸವನ್ನು ನಾನು ಮಾಡಿದವನು.....ಇರುವೆಗಳ ಬಗ್ಗೆ ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ..ಉತ್ತಮ ಲೇಖನ ...ಧನ್ಯವಾದಗಳು...

  ReplyDelete
 9. ತುಂಬಾ ಚೆನ್ನಾಗಿದೆ ಲೇಖನ. ಕೀಟಶಾಸ್ತ್ರ ಅಭ್ಯಸಿಸಿದ್ದರೂ, ನನಗೆ ಇರುವೆಗಳ ಈ ವಿದ್ಯಮಾನ ತಿಳಿದಿರಲಿಲ್ಲ. ರಾಸಾಯನಿಕ ಸಂಪರ್ಕದಿಂದ ಪರಸ್ಪರ ಮಾಹಿತಿ ವಿನಿಮಯದ ಬಗ್ಗೆ ಮಾತ್ರ ತಿಳಿದಿದ್ದ ನನಗೆ ಈ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು..

  ReplyDelete
 10. ಚೆನ್ನಾಗಿದ್ದು.. ಫೆರಾಮಿನ್ ಮೂಲಕ ಸಂಪರ್ಕ ಸಾಧಿಸೋದ್ರ ಬಗ್ಗೆ ಓದಿದ್ದಿ. ಆದ್ರೆ ಈ ತರದ ವಿದ್ಯಮಾನದ ಬಗ್ಗೆ ಗೊತ್ತಿರ್ಲೆ..
  ಹೊಸ ವಿಷ್ಯ ತಿಳಿಸಿದ್ದಕ್ಕೆ ಧನ್ಯವಾದಗಳು :-) ಅಂದಂಗೆ ಈ ರೀತಿಯ ವಿಶೇಷತೆ ಇರೋ ಇರುವೆ ಯಾವ ಪ್ರಭೇದ ಹೇಳ ಮಾಹಿತಿನೂ ಕೊಟ್ಟಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಅಂದ್ಕತ್ತಿ..

  ReplyDelete
 11. tamma theekshna veekshane mattu vishleshane buddhige namonnamaha... uttama lekhana.

  ReplyDelete