30 Oct 2012

ವೆಲ್ವೆಟ್ ಹುಳ

  ಬಾಲ್ಯದಲ್ಲಿ ನನ್ನನ್ನು ಆಕರ್ಷಿಸಿದ ಜೀವಜಗತ್ತಿನಲ್ಲಿ ಈ ಪುಟ್ಟ ಜೀವಿಯದು ಅಗ್ರಸ್ಥಾನ . ಇದರ ಉಜ್ವಲವಾದ ಕೆಂಪು ಬಣ್ಣ , ಮೆತ್ತನೆಯ ವೆಲ್ವೆಟ್ ಬಟ್ಟೆಯಂತಹ ದೇಹ , ಚುರುಕಾಗಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುವ ಪರಿ, ಮುಟ್ಟಿದೊಡನೆ ಚುರುಕಾಗಿ ದೇಹದೊಳಗೆ ಮಡಚಿಕೊಂಡುಬಿಡುವ ಪುಟ್ಟ ಎಂಟು ಕಾಲ್ಗಳು , ಎಲ್ಲವೂ ಆಕರ್ಷಣೀಯವೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮನೆಯ ಅಂಗಳದಲ್ಲಿ , ಎದುರಿನ ಗುಡ್ಡದಲ್ಲಿ ಆಗಷ್ಟೆ ಚಿಗುರುತ್ತಿದ್ದ ಹಸಿರು ಹುಲ್ಲಿನ ಮೇಲೆ  ಕಾಣಿಸಿಕೊಳ್ಳುತ್ತಿದ್ದ  ವೆಲ್ವೆಟ್ ಹುಳುಗಳನ್ನು ಮೃದುವಾಗಿ ಹಿಡಿದು ಅಮ್ಮನಲ್ಲಿ ಕಾಡಿಬೇಡಿ ಸಂಪಾದಿಸಿದ ಪುಟಾಣಿ ಗಾಜಿನ ಬಾಟಲಿಯಲ್ಲಿ ಹಾಕಿ , ಹುಲ್ಲಿನ ಮೇಲಿರುವುದರಿಂದ ಅದು ಹುಲ್ಲನ್ನೇ ತಿನ್ನುತ್ತೆ ಅಂತ ತೀರ್ಮಾನಿಸಿ ಒಂದಿಷ್ಟು ಹಸಿರುಹುಲ್ಲನ್ನು ಕಿತ್ತು ಅದರಲ್ಲಿ ತುಂಬಿಸಿ ಮನೆಗೆ ತಂದು ನನ್ನ ಟೇಬಲ್ ಮೇಲಿಟ್ಟುಕೊಳ್ಳುತ್ತಿದ್ದೆ.  ಕೆಲ ದಿನಗಳಲ್ಲಿ ಸತ್ತು ಹೋಗುತ್ತಿದ್ದ ಅದನ್ನು ನೋಡಿ ಅತ್ತು ಕರೆದು , ಅಮ್ಮ ಇನ್ನು ಹಾಗೆಲ್ಲ   ಹಿಡಿದು ತರಬೇಡ ಅವು ಸತ್ತುಹೋಗುತ್ತವೆ ನೋಡು ಎಂದಮೇಲೆ ...ಇಲ್ಲಮ್ಮ ಇನ್ನು ತರುವುದಿಲ್ಲ ಎನ್ನುತ್ತಿದ್ದೆ.  ಮತ್ತೆ ಮಾರನೆಯವರ್ಷ ಅವು ಕಂಡಾಗ ಮತ್ತದೇ ಘಟನೆಗಳ ಪುನರಾವರ್ತನೆಯಾಗುತ್ತಿತ್ತು.

ನಮ್ಮೂರಿನಲ್ಲಿ ರೇಷ್ಮೆ ಹುಳ  ಎಂಬ ಹೆಸರಿನಿಂದ ಇದನ್ನು ಕರೆಯುತ್ತಿದ್ದರು.    ರೇಷ್ಮೆ ಸೀರೆಯನ್ನು ಒಂದು ಜಾತಿಯ ಹುಳದಿಂದ ತಯಾರಿಸುತ್ತಾರೆ ಎಂದು ಒಮ್ಮೆ ಎಲ್ಲೋ ಓದಿದ ನನಗೆ ಆಶ್ಚರ್ಯ . ಅಮ್ಮನಲ್ಲಿದ್ದ ನೀಲಿ ಬಣ್ಣದ ರೇಷ್ಮೆ ಸೀರೆಯನ್ನು ಈ ಪುಟಾಣಿ ಕೆಂಪು ಹುಳದಿಂದ ಹೇಗೆ ತಯಾರಿಸಿರಬಹುದೆಂಬುದು ಆಗ ನನ್ನಲ್ಲಿದ್ದ ದೊಡ್ಡ ಪ್ರಶ್ನೆ ..ಕೊನೆಗೊಮ್ಮೆ ಅಪ್ಪ ರೇಷ್ಮೆ ತಯಾರಿಸುವುದು ಈ ಹುಳದಿಂದ ಅಲ್ಲವೆಂದು ಹೇಳಿ , ಅದರ ಬಗ್ಗೆ ವಿವರಿಸಿದಾಗ ಸಮಾಧಾನವಾಗಿತ್ತು.

ಈ ಪುಟ್ಟ ಜೀವಿಗಳು ಉಣುಗಿನ ಜಾತಿಗೆ ಸೇರಿವೆ. ಉಣುಗುಗಳು ಹೆಚ್ಚಾಗಿ ಪರಾವಲಂಬಿ ಜೀವಿಗಳು. ಆದರೆ ಉಣುಗಿನ ಜಾತಿಯಲ್ಲೇ ಅತೀ ದೊಡ್ದದಾದ ಈ ವೆಲ್ವೆಟ್ ಉಣುಗು ಬಾಲ್ಯಾವಸ್ಥೆಯಲ್ಲಿ ಮಾತ್ರ ಪರಾವಲಂಬಿಗಳಾಗಿದ್ದು , ಬೆಳೆದ ಮೇಲೆ ಗೆದ್ದಲು , ಎಪಿಡ್ ಮೊದಲಾದ ಚಿಕ್ಕ ಪುಟ್ಟ ಕೀಟಗಳನ್ನು ಬೇಟೆಯಾಡಿ ತಿನ್ನುವ ಸಮರ್ಥ ಬೇಟೆಗಾರ.
ಮೊದಲೇ ಹೇಳಿದಂತೆ ಮಳೆಗಾಲದ  ಪ್ರಾರಂಭದಲ್ಲಿ ಕೇವಲ ಒಂದೆರಡು ವಾರ ಮಾತ್ರ ಕಾಣಿಸಿಕೊಳ್ಳುವ ಇವು ನಂತರ ಮತ್ತೆ ಮಣ್ಣಿನಲ್ಲಿ ಅಡಗಿಬಿಡುತ್ತವೆ. ಹೀಗೆ ಮಣ್ಣಿನಿಂದ ಹೊರಬಂದಾಗ ಸಂಗಾತಿಯನ್ನು ಹುಡುಕಿ ವಂಶಾಭಿವೃದ್ದಿಕಾರ್ಯ ನಡೆಸುತ್ತವೆ. ಮಣ್ಣಿನಲ್ಲಿಟ್ಟ ಇದರ ಮೊಟ್ಟೆಗಳು ಒಡೆದು ಹೊರಬರುವುದು ತಿಂಗಳ ನಂತರ ಅದೂ ಕೂಡ ಅದರ ಹೋಸ್ಟ್ ಕೀಟದ ವಂಶಾಭಿವೃದ್ದಿಯ ಸಮಯದಲ್ಲೇ .ಒಂದೆರಡು ವಾರಗಳವರೆಗೆ ಬೇರೆ ಕೀಟದ ಮೇಲೆ ಬದುಕುವ ಈ ಮರಿಗಳು ನಂತರ ಮಣ್ಣಿನಲ್ಲಿ ತಮ್ಮ ಜೀವನ ಮುಂದುವರೆಸುತ್ತವೆ.
ಇದರ ಉಜ್ವಲವಾದ ಕೆಂಪು ಬಣ್ಣ ಇದನ್ನು ಹಿಡಿದು ತಿನ್ನಲು ಬರುವ ವೈರಿಗೆ ಕೆಟ್ಟ ರುಚಿ ಎಂಬ ಎಚ್ಚರಿಕೆ ನೀಡುತ್ತದಂತೆ.
ಬೇರೆ ಜೀವಿಗಳು ಸ್ಪರ್ಶಿಸಿದಾಗ ರಕ್ಷಣೆಗಾಗಿ ಇದು ತನ್ನ ಎಂಟು ಕಾಲ್ಗಳನ್ನು ಮಡಚಿಕೊಂಡು ಮುದ್ದೆಯಂತೆ ಸ್ಥಬ್ದವಾಗುತ್ತದೆ. ಆಪಾಯವಿಲ್ಲವೆಂದು ಅನ್ನಿಸಿದರೆ ಚಲಿಸುತ್ತದೆ. ಜೊತೆಗೆ ಇದು ಹೆಚ್ಚಿನ ಸಮಯ ಮಣ್ಣಿನಲ್ಲೇ ಇರುವುದರಿಂದ ಫಂಗಸ್ , ಬ್ಯಾಕ್ಟೀರಿಯಗಳಿಂದ ಸೋಂಕಿಗೊಳಗಾಗದಂತೆ ತಡೆಯುವ ಕಿಣ್ವಗಳನ್ನು ಹೊಂದಿದೆ.

ಉತ್ತರ ಭಾರತದ ಅನೇಕ ಕಡೆಗಳಲ್ಲಿ ಈ ವೆಲ್ವೆಟ್ ಕೀಟವನ್ನು ಸಾಂಪ್ರದಾಯಿಕ ಔಷಧಪದ್ಧತಿಯಲ್ಲಿ ಉಪಯೋಗಿಸುತ್ತಾರಂತೆ. ಇದರಿಂದ ತಯಾರಿಸುವ ತೈಲ ರೋಗನಿರೋಧಕ ಶಕ್ತಿ ಹೆಚ್ಚಿಸುವುದೆಂಬ ನಂಬಿಕೆ ಅನೇಕ ಕಡೆಗಳಲ್ಲಿದೆ.

11 comments:

  1. ಸುಮ ಮೇಡಮ್,
    "ನೀಲಿಬಣ್ಣದ ಅಮ್ಮನ ಸೀರೆಯನ್ನು ಕೆಂಪುಬಣ್ಣದ ಈ ಹುಳ ಹೇಗೆ ತಯಾರಿಸುತ್ತದೆ? ನಿಜಕ್ಕೂ ಒಂದು ಅದ್ಬುತವೆನಿಸುವಂತ ಮುಗ್ದ ಪ್ರಶ್ನೆ...ಇಂಥವೆ ನಮ್ಮಲ್ಲಿ ಹೊಸತನಕ್ಕೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡುವುದು..
    ವೆಲ್ವೆಟ್ ಕೀಟದ ಬಗ್ಗೆ ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  2. ಉತ್ತಮ ಲೇಖನ.. ಇದರ ವೈಜ್ಞಾನಿಕ ಹೆಸರು Red velvet mite (Trombidiidae)

    ReplyDelete
  3. ಪ್ರತಿಯೊಂದು ಜೀವಿಯ ಜೀವನ, ಆಹಾರ ಕ್ರಮ ಇದನ್ನ ಬಿಡಿ ಬಿಡಿಯಾಗಿ ವಿವರಿಸುವ ಪರಿ ಅಚ್ಚರಿ ಮೂಡಿಸುತ್ತೆ. ನಿಮ್ಮ ಹವ್ಯಾಸಕ್ಕೆ, ಆಸಕ್ತಿ ಅಭಿನಂದನೆಗಳು.., ಕಣ್ಣಿಗೆ ಕಾಣದ ಕೀಟಗಳು, ಜೀವಿಗಳು ಕಂಡರೂ, ಕೆಲವೊಮ್ಮೆ ಕಂಡರೂ ನಿಕೃಷ್ಟವಾಗಿ ಅದನ್ನು ನೋಡುವ ಗುಂಪಿಗೆ ಸೇರಿದ್ದ ನಾನು ನಿಮ್ಮ ಬ್ಲಾಗಿನ ಒಂದೊಂದೇ ಲೇಖನಗಳು ಮಧುರ ಅನುಭವ ಕೊಡುತ್ತವೆ..ಸೂಕ್ಷ್ಮ ಜೀವಿಗಳ ವಿರಾಟ್ ರೂಪ ನಿಮ್ಮ ಲೇಖನದಲ್ಲಿ ಅನಾವರಣಗೊಳ್ಳುವ ಪರಿ ಇಷ್ಟವಾಗುತ್ತದೆ ಅಭಿನಂದನೆಗಳು

    ReplyDelete
  4. ಉಪಯುಕ್ತ ಲೇಖನ ...ಅಭಿನಂದನೆಗಳು .

    ReplyDelete
  5. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ಉತ್ತಮ ವೈಜ್ಞಾನಿಕ ಲೇಖನಕಾಗಿ ಧನ್ಯವಾದಗಳು.

    ReplyDelete
  6. Very good article, We use to call this 'Suryan Enjalu' :) we use to see this while going to school during rainy season, and we considered is to bring good fortune if you see this :) ...

    ReplyDelete
  7. Excellent. Nangoo velvet hula sikki chikkandinalli achari aagittu. Devaru estu olle artist alwaa anta yavagloo annisutte. Intadella nodi , adara bagge tilidukollalu kotoohala hecchagutte.

    olle write up. keep up the good work.

    Kusuma

    ReplyDelete
  8. nice article...is it a spider-relative Suma..??
    We have similar colourful crabs in the deep sea..with lots of designs...
    Thanks for a nice informative article...

    ReplyDelete
    Replies
    1. Kingdom: Animalia
      Phylum: Arthropoda
      Subphylum: Chelicerata
      Class: Arachnida
      Subclass: Acari
      Order: Trombidiformes
      Superfamily: Trombidioidea
      Family: Trombidiidae

      ಇದು ಇದರ ಕ್ಲಾಸಿಫಿಕೇಷನ್ ಆಜಾದ್ ಸರ್ . ನೀವು ಹೇಳಿದಂತೆ ಒಂದು ರೀತಿಯಲ್ಲಿ ಸ್ಪೈಡರ್ ರಿಲೇಟೆಡ್ ಹೌದು. ಎರಡೂ ಅರಾಕ್ನಿಡ್ ಎಂಬ ಕ್ಲಾಸ್ ಗೇ ಸೇರಿವೆ .

      Delete
  9. ನನ್ನ ಅತ್ಯಂತ ಪ್ರಿಯವಾದ ಹುಳವನ್ನು ಪುನಃ ಜ್ಞಾಪಿಸಿದಕ್ಕೆ ಧನ್ಯವಾದಗಳು

    ReplyDelete