18 Dec 2023

ವ್ಯಾಕ್ಸ್ ರೋಸ್ ಕ್ಯಾಕ್ಟಸ್ (Pereskia bleo)

ನಮ್ಮ ಬೆಂಗಳೂರಿನ ಲಾಲ್ಬಾಗ್ನಲ್ಲಿ ಅಲೆಯುವುದೆಂದರೆ ನನಗೆ ಬಹಳ ಇಷ್ಟದ ಸಂಗತಿ. ಅಲ್ಲಿನ ದೇಶವಿದೇಶಗಳ ಸಸ್ಯಗಳು, ದೊಡ್ಡ ದೊಡ್ಡ ಬೃಹದಾಕಾರದ ಮರಗಳು, ವಿಚಿತ್ರಾಕಾರದ ಹೂವು ಹಣ್ಣು ಬಿಡುವ ಮರಗಳು ಎಲ್ಲವನ್ನೂ ನೋಡುತ್ತಾ ಕಳೆದುಹೋಗಬಹುದು. ಪ್ರತಿಯೊಂದು ಋತುವಿನಲ್ಲೂ ಇಲ್ಲಿಯ ಸೌಂದರ್ಯ ಬದಲಾಗುತ್ತಿರುತ್ತದೆ. ವರ್ಷದ ಎಲ್ಲಾ ಋತುಗಳಲ್ಲೂ ಒಂದಿಲ್ಲೊಂದು ಸಸ್ಯಗಳು ಹೂವು, ಹಣ್ಣು, ಚಿಗುರುಗಳಿಂದ ತುಂಬಿಕೊಂಡಿರುತ್ತವೆಯಾದ್ದರಿಂದ ಹೋದವರಿಗೆ ಯಾವತ್ತೂ ನಿರಾಸೆಯಾಗುವುದಿಲ್ಲ. 
ಇತ್ತೀಚೆಗೊಮ್ಮೆ ಅಲ್ಲಿ ಅಲೆಯುತ್ತಿದ್ದಾಗ ಚಿಕ್ಕ ಪೊದೆಯಂತಿದ್ದ ಸಸ್ಯವೊಂದು ಗಮನ ಸೆಳೆಯಿತು. ದಟ್ಟ ಹಸಿರು ಬಣ್ಣದ ಎಲೆಗಳ ಜೊತೆಜೊತೆಗೇ ಅಷ್ಟೇ ಸಂಖ್ಯೆಯಲ್ಲಿ ಗಾಢ ಹಳದಿ ಬಣ್ಣದ ಬಟ್ಟಲಿನಾಕಾರದ ಹಣ್ಣುಗಳಿದ್ದವು. ಹತ್ತಿರ ಹೋಗಿ ನೋಡಿದಾಗ ಗಿಡದ ಕಾಂಡದಲ್ಲಿ ಚೂಪಾದ ಉದ್ದನೆಯ ಮುಳ್ಳುಗಳಿದ್ದವು. ಇದರ ಸಾಮಾನ್ಯ ನಾಮ ವ್ಯಾಕ್ಸ್ ರೋಸ್ ಕ್ಯಾಕ್ಟಸ್ ಹಾಗೂ ವೈಜ್ಞಾನಿಕ ನಾಮ Pereskia bleo. 
ಮಧ್ಯ ಅಮೇರಿಕಾ ಮೂಲದ ಈ ಕ್ಯಾಕ್ಟಸ್ ಬೇರೆ ಸಾಮಾನ್ಯ ಕ್ಯಾಕ್ಟಸ್ಗಳಂತಿಲ್ಲ. ಮಾರ್ಪಾಟಾಗಿ ಕಾಂಡದಂತೆ ಕಾಣಿಸುವ ದಪ್ಪ ಎಲೆಗಳು ಬೇರೆ ಕ್ಯಾಕ್ಟಸ್ಗಳ ಲಕ್ಷಣ. ಇದರ ಎಲೆಗಳು ಸಾಮಾನ್ಯ ರೂಪದಲ್ಲಿಯೇ ಇವೆ. ಎಲೆಗಳ ಮೇಲೆ ಮೇಣವನ್ನು ಸವರಿದಂತೆ ಹೊಳಪಾಗಿದೆ. ಕಾಂಡದಲ್ಲಿ ಕ್ಯಾಕ್ಟಸ್ಗಳಲ್ಲಿ ಇರುವಂತೆಯೆ ಚೂಪಾದ ಉದ್ದನೆಯ ಮುಳ್ಳುಗಳಿವೆ. ಕಿತ್ತಳೆ ಕೆಂಪು ಬಣ್ಣದ ಗುಲಾಬಿಯನ್ನು ಹೋಲುವ ಸುಂದರವಾದ ಹೂವುಗಳಿವೆ. ಆದ್ದರಿಂದಲೆ ಇದರ ಸಾಮಾನ್ಯ ನಾಮಧೇಯ ವ್ಯಾಕ್ಸ್ ರೋಸ್ ಕ್ಯಾಕ್ಟಸ್ . 
ಹಣ್ಣಂತೂ ಅದೆಷ್ಟು ವಿಚಿತ್ರವಾಗಿದೆಯೆಂದರೆ ಐಸ್ಕ್ರೀಂ ಕೋನ್ ನೆನಪಿಸುವ ಆಕಾರ, ಮೇಲ್ಭಾಗದಲ್ಲಿ ಮುಚ್ಚಳವೊಂದನ್ನು ಸೀಲ್ ಮಾಡಿದಂತೆ, ಹಣ್ಣೊಂದನ್ನು ಕತ್ತರಿಸಿ ಅರ್ಧ ಹಣ್ಣನ್ನು ಸೀಲ್ ಮಾಡಿದಂತೆಲ್ಲ ಕಾಣಿಸುವಂತಿದೆ. ಮಧ್ಯೆ ಕತ್ತರಿಸಿದರೆ ತ್ರಿಕೋನಾಕಾರದಲ್ಲಿ ಕಾಣಿಸುವ ಒಳಭಾಗ ರಸಭರಿತವಾದ ತಿರುಳಿಂದ ಕೂಡಿದ್ದು, ಕಪ್ಪು ಬೀಜಗಳು ತ್ರಿಕೋನಾಕಾರದಲ್ಲಿ ಜೋಡಿಸಲ್ಪಟ್ಟಿರುವುದು ಕಾಣಿಸುತ್ತದೆ. ಹಣ್ಣು ಹುಳಿ ರುಚಿಯನ್ನು ಹೊಂದಿದ್ದು, ಸ್ಟಾರ್ ಫ್ರುಟ್ ಹಣ್ಣಿನ ರುಚಿಯನ್ನು ನೆನೆಪಿಸುತ್ತದೆ.

 ಇದರ ಎಲೆಗಳ ಟೀ ತಯಾರಿಸಿ ಕುಡಿಯುತ್ತಾರೆ. ಬಹಳಷ್ಟು ಔಷಧೀಯ ಗುಣವುಳ್ಳ ಹಣ್ಣನ್ನು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ಉಪಯೋಗಿಸಲಾಗುತ್ತದೆ ಎಂದು ಗೂಗಲಮ್ಮ ತಿಳಿಸಿದಳು. ಕ್ಯಾನ್ಸರ್ ನಿರೋಧಕ ಶಕ್ತಿ ಇದಕ್ಕಿಯೆಂದೂ ಹೇಳಲಾಗುತ್ತದೆ. 
ಎಲೆಗಳು, ಹೂವು, ಹಣ್ಣು ಎಲ್ಲವೂ ಸುಂದರವಾಗಿರುವುದರಿಂದಲೂ, ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಲ್ಲುದಾದ್ದರಿಂದಲೂ, ಹೆಚ್ಚಿನ ಆರೈಕೆ ಬೇಡವಾದ್ದರಿಂದಲೂ, ಕೈತೋಟದಲ್ಲಿ ಬೆಳೆಯುವ ಸಸ್ಯವಾಗಿ ಇದು ಜನಪ್ರಿಯವಂತೆ. ಬಿಸಿಲು ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳಯುತ್ತದೆಯಾದ್ದರಿಂದ ಉಷ್ಣವಲಯದ ದೇಶಗಳಲ್ಲಿ ಬೆಳೆಸುವುದು ಸುಲಭ.

2 comments:

  1. ನಿಸರ್ಗ ಎಷ್ಟು ವಿಚಿತ್ರ ಹಾಗು ವೈವಿಧ್ಯಮಯ ಅಲ್ಲವೆ! ಈ ಸಸ್ಯದ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

    ReplyDelete
    Replies
    1. ನಿಜ, ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಕಾಕ

      Delete