25 Aug 2024

 

ನೀವು ತಪ್ಪು ಮಾಡ್ತಾ ಇದ್ದೀರಿ

ಮಗಳ ಸೆಕೆಂಡ್ಪಿಯುಸಿ ಪರೀಕ್ಷೆಗೆ ಎರಡು ತಿಂಗಳಿದ್ದಾಗ ಅವಳ ಟೀಚರ್ನಮ್ಮನ್ನು ಕರೆಸಿದ್ದರು.  ತನಗೆ ಬೇಸಿಕ್ಸೈನ್ಸ್ಓದಬೇಕಿದೆ, ಹಾಗಾಗಿ ಮುಂದೆ ಬಿಎಸ್ಸಿಗೆ  ಸೇರುತ್ತೇನೆ ಎಂದು ಇವಳು ಅವರಿಗೆ ಹೇಳಿದಾಗ ಅವರಿಗೆ ಗಾಭರಿಯೇ ಆಗಿತ್ತು. ಮೆಡಿಕಲ್ಸೇರುವಂತೆ ಅವಳ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ, ಸೋತು ನಮ್ಮನ್ನು ಕರೆಸಿದ್ದರು. ನಾವೂ ಸಹ ಅವಳಿಚ್ಛೆಯಂತೆ ಬಿಎಸ್ಸಿಗೆ ಸೇರಿಸುತ್ತೇವೆ ಎಂದದ್ದು ಕೇಳಿ ಅವರಿಗೆ ತೀರಾ ಬೇಸರವಾಗಿತ್ತು.

ನಿಮ್ಮ ಮಗಳಿಗೆ ಅರಾಮಾಗಿ ಮೆಡಿಕಲ್ಸೀಟ್ ಸಿಗತ್ತೆ, ಅವಳು ಬಿಎಸ್ಸಿ ಮಾಡ್ತೀನಿ ಅಂತ ಹೇಳ್ತಾ ಇದ್ದಾಳೆ, ನೀವು ಅವಳಿಗೆ ಸ್ವಲ್ಪ ಬುದ್ಧಿ ಹೇಳುವುದು ಬಿಟ್ಟು ಬಿಎಸ್ಸಿಗೇ ಸೇರಿಸ್ತೀವಿ ಅಂತಿದ್ದೀರಲ್ಲ! ನೀವು ತಪ್ಪು ಮಾಡ್ತಾ ಇದ್ದೀರಿ! ಎಂದುಬಿಟ್ಟಿದ್ದರು.

ಇರಲಿ ಬಿಡಿ, ಮಕ್ಕಳಿಗೆ ಅವರಿಷ್ಟದ ವಿಷಯ ಓದಲು ಪ್ರೋತ್ಸಾಹಿಸುವುದು ತಪ್ಪು ಎಂದಾದರೆ ನಾವು ಅದನ್ನೇ ಮಾಡುತ್ತೇವೆ ಎಂದು ಹೇಳಿ ಬಂದಿದ್ದೆವು.

ಹೀಗೆ ತನ್ನಿಷ್ಟದ ಮೈಕ್ರೋಬಯಾಲಜಿಯಲ್ಲಿ ಬಿಎಸ್ಸಿ, ಎಮ್ಎಸ್ಸಿ ಮುಗಿಸಿದ ಇಂಚರ ನಂತರ ತನ್ನ ಕನಸಾಗಿದ್ದ ಪಿಎಚ್ಡಿಗೆ ಆಯ್ದುಕೊಂಡಿದ್ದು ನ್ಯಾಷನಲ್ಸೆಂಟರ್ಫಾರ್ಬಯಲಾಜಿಕ್ಸೈನ್ಸ್ ಸಂಸ್ಥೆ. ಎಮ್ಎಸ್ಸಿ ಓದುವಾಗಲೇ ಕೊನೆಯ ಸೆಮಿಸ್ಟರ್ಗೆ ಮಾಡಬೇಕಿದ್ದ ಡಸರ್ಟೇಷನ್ ಅದೇ ಸಂಸ್ಥೆಯಲ್ಲಿ ಮಾಡಿ, ನಂತರ ಅವರ ಪಿಐ ಅದೇಶದಂತೆ ಅಲ್ಲಿ ಒಂದು ವರ್ಷ ಅಸಿಸ್ಟೆಂಟ್ರೀಸರ್ಚರ್ಆಗಿ ಕೆಲಸ ಮಾಡಿ, ನಂತರ JGEEBILS ಪರೀಕ್ಷೆಯಲ್ಲಿ ತೇರ್ಗಡೆಯಾಗಿ,  ಪಿಹೆಚ್ಡಿಗೆ ಅಲ್ಲೇ ಪ್ರವೇಶ ಪಡೆದು ಈಗ ವರ್ಷವಾಗಿದೆ.



ನ್ಯಾಷನಲ್ಸೆಂಟರ್ಫಾರ್ಬಯಲಾಜಿಕ್ಸೈನ್ಸ್(ಎನ್ಸಿಬಿಎಸ್) ಸಂಸ್ಥೆಯು ಮುಂಬೈನ ಟಿಐಎಫ್ಆರ್ನ ಅಂಗಸಂಸ್ಥೆಯಾಗಿದ್ದು ಜೀವವಿಜ್ಞಾನಕ್ಕೆಂದೇ ಮೀಸಲಾಗಿರುವ ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲೊಂದು. ಇಲ್ಲಿ ಪಿಹೆಚ್ಡಿ ಪದವಿ ಪಡೆಯಲು ಕನಿಷ್ಟ ಐದು ವರ್ಷ ಬೇಕು. ಪಿಹೆಚ್ಡಿ ಪಡೆಯಲು ಒಂದು ಪೇಪರ್‌” ಆದರೂ ಅವರ ಹೆಸರಿನಲ್ಲಿ ಇರಬೇಕು ಎಂಬ ನಿಯಮವಿದೆ. “ಪೇಪರ್‌” ಅಂದರೆ ಇವರು ಮಾಡಿದ ಅಧ್ಯಯನವನ್ನು ವಿಧಿವತ್ತಾಗಿ ಬರೆದು ಅಂತರರಾಷ್ಟ್ರೀಯ ವಿಜ್ಞಾನ ವೇದಿಕೆಗಳಾಗಿರುವ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟಿಸುವುದು, ಹಾಗೆ ಪ್ರಕಟವಾಗುವುದಕ್ಕೂ ಮೊದಲು ಅದು ಆಯಾ ಕ್ಷೇತ್ರದ ಹಲವಾರು ಪರಿಣಿತರಿಂದ ಪರೀಕ್ಷಿಸಲ್ಪಡುತ್ತದೆ. ಅವರೇನಾದರೂ, ಇನ್ನೂ ಅಧ್ಯಯನದ ಅಗತ್ಯವಿದೆಯೆಂದರೆ ಮತ್ತೆ ಮಾಡಬೇಕು. ಒಟ್ಟಿನಲ್ಲಿ ಅವರ ಒಪ್ಪಿಗೆಯ ಮುದ್ರೆ ಬಿದ್ದರಷ್ಟೇ ಪ್ರಕಟವಾಗುತ್ತದೆ. ಹೀಗೆ ಪರೀಕ್ಷೆಗೆ ಒಳಪಡುವ ಮುನ್ನ ಅವರ ಪೇಪರ್ಅನ್ನು ಬಯೋಆರ್ಕೈವ್ನಲ್ಲಿ ಹಾಕಿಡಬಹುದು. ಒಂದು ವಿಷಯದ ಮೇಲೆ ಇವರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಪ್ರಪಂಚದಾದ್ಯಂತ ಇರುವ ವೈಜ್ಞಾನಿಕ ಸಮುದಾಯಕ್ಕೆ ತಿಳಿಸುವ ವಿಧಾನವಿದು. ಇದು ಅವರ ಪೇಪರ್ಪ್ರಕಟವಾಗುವುದರ ಮೊದಲ ಹಂತ ಎನ್ನಬಹುದು.

ಮಗಳ ಮೊಟ್ಟಮೊದಲ ಪೇಪರನ್ನು  ಬಯೋಆರ್ಕೈವ್ಗೆ ಸಲ್ಲಿಸಲಾಗಿದೆ. ಇದು ನಿಜಕ್ಕೂ ನಾವು ತಪ್ಪು ಮಾಡಿಲ್ಲವೆಂಬ ಭರವಸೆ ನೀಡುತ್ತಿದೆ. ಎನ್ಸಿಬಿಎಸ್ನ ಅಂಜನಾ ಬದರಿನಾರಾಯಣ್ಅವರ ಲ್ಯಾಬ್ನಲ್ಲಿ, ಬ್ಯಾಕ್ಟೀರಿಯಲ್ ಡಿಎನ್ಎ ಡ್ಯಾಮೇಜ್ರಿಪೇರ್ಅಂದರೆ ಬ್ಯಾಕ್ಟೀರಿಯಾಗಳು ತಮ್ಮ ಡಿಎನ್ಎ ನಲ್ಲಿ ತೊಂದರೆಯಾದಾಗ ಹೇಗೆ ರಿಪೇರಿ ಮಾಡಿಕೊಳ್ಳುತ್ತವೆ ಎಂಬ ವಿಶಾಲವಾದ ವಿಷಯದ ಮೇಲೆ ಅಧ್ಯಯನ ಮಾಡಲಾಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ಮಗಳು ಅಧ್ಯಯನ ನಡೆಸುತ್ತಿದ್ದಾಳೆ.


ಈಗಿನ ನಮ್ಮ ಶಿಕ್ಷಣ ವ್ಯವಸ್ಥೆ
,  ಕೆಲವು ಪೋಷಕರ, ಶಿಕ್ಷಕರ ಮನೋಭಾವ ಹೇಗಿದೆಯೆಂದರೆ ಮೆಡಿಕಲ್‌, ಇಂಜಿನಿಯರಿಂಗ್ಎರಡು ಮಾತ್ರವೇ ಜೀವನದ ಮುಖ್ಯ ಗುರಿ. ಅದನ್ನು ಓದಿಕೊಂಡು ಇಪ್ಪತ್ತೈದು, ಇಪ್ಪತ್ತಾರು ವರ್ಷವಾಗುವಷ್ಟರಲ್ಲಿ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳಬೇಕು. ಬೇರೆ ಯಾವ ಫೀಲ್ಡ್ಗೆ ಹೋದರೂ ಇಷ್ಟು ದುಡ್ಡು ಸಿಗುವುದಿಲ್ಲ, ಗೌರವವೂ ಇಲ್ಲ. ಬೇರೆ ಯಾವುದೇ ಫೀಲ್ಡ್ನಲ್ಲಿ ಅಷ್ಟು ದುಡ್ಡು ಇಲ್ಲವೆಂಬುದರಲ್ಲಿ ಸತ್ಯವೂ ಇದೆ. ತನ್ನ ವಾರಗೆಯ ಗೆಳೆಯಗೆಳತಿಯರೆಲ್ಲ ಇಂಜಿನಿಯರ್ಗಳಾಗಿ, ತಿಂಗಳಿಗೆ ಕೆಲವು ಲಕ್ಷಗಳ ಹಣ ಎಣಿಸುವಾಗ, ತಾನಿನ್ನೂ ಸಂಸ್ಥೆ ನೀಡುವ ಕೆಲವು ಸಾವಿರಗಳ ವಿದ್ಯಾರ್ಥಿವೇತನದಲ್ಲಿ ತನ್ನ ಖರ್ಚು ನಿಭಾಸಿಯಿಕೊಂಡು, ಹಗಲುರಾತ್ರಿ ಎನ್ನದೆ ಕೆಲಸವನ್ನೂ ಮಾಡಬೇಕಾಗಿರುವ ವಿಜ್ಞಾನದ ಪಿಎಚ್ಡಿ ವಿದ್ಯಾರ್ಥಿಗಳ ಅವಸ್ಥೆ ಸುಲಭವಾದುದಲ್ಲ. ಅದಕ್ಕೆ ವಿಜ್ಞಾನದ ಬಗ್ಗೆ ಗಟ್ಟಿಯಾದ ಆಸಕ್ತಿ ಇರಬೇಕಾಗುತ್ತದೆ, ಉಳಿದುದರೆಡೆಗೆ ದಿವ್ಯ ನಿರ್ಲಕ್ಷ್ಯವಿರಬೇಕಾಗುತ್ತದೆ. ಪೋಷಕರಿಗೂ ಸಹ ಇದರ ಬಗೆಗೆ ತಿಳುವಳಿಕೆ ಇರಬೇಕಾಗುತ್ತದೆ.

ಆದರೆ ಮೂಲ ವಿಜ್ಞಾನದ ಶಾಖೆಗಳಲ್ಲಿ ಆಸಕ್ತಿ ಉಳ್ಳವರಿಗೆ ಈ ಕ್ಷೇತ್ರ ಸೂಕ್ತವಾದದ್ದು. ಅದರಲ್ಲೂ ನಮ್ಮ ಐಐಎಸ್ಸಿ, ಎನ್ಸಿಬಿಎಸ್‌, ಐಸಾರ್‌, ಟಿಐಎಫ್ಆರ್ಮೊದಲಾದ ವಿಶ್ವಮಾನ್ಯ ಸಂಸ್ಥೆಗಳಲ್ಲಿ ನೀಡುವ ವಿದ್ಯಾರ್ಥಿವೇತನವೂ ಸಹ ಮಧ್ಯಮವರ್ಗದ ಜೀವನಕ್ಕೆ ಸಾಕಾಗುವಷ್ಟಿರುತ್ತದೆ.  ಜೊತೆಗೆ ದೇಶವಿದೇಶಗಳಲ್ಲಿ ನಡೆವ ವಿಜ್ಞಾನ ಸಮ್ಮೇಳನಗಳಿಗೆ ಹೋಗುವ ಅವಕಾಶ, ಅವಶ್ಯಕತೆಯಿದ್ದರೆ ವಿಶ್ವದಾದ್ಯಂತ ಇರುವ ವಿಜ್ಞಾನಿಗಳೊಡನೆ ತರಬೇತಿ ಪಡೆವ ಅವಕಾಶ ಎಲ್ಲವೂ ಇರುತ್ತದೆ. ಓದು ಮುಗಿದ ಮೇಲೆ ವಿವಿಧ ಉದ್ಯಮಗಳಲ್ಲಿಯೋ, ಶಿಕ್ಷಕವೃತ್ತಿಯೋ , ಸ್ವಯಂವೃತ್ತಿಯೋ ಹೀಗೆ ಅವರಿಷ್ಟದ ವೃತ್ತಿ ಮಾಡುವ ಅವಕಾಶವಂತೂ ಇದೆ.  ವಿಪರ್ಯಾಸವೆಂದರೆ ನಮ್ಮ ಬೆಂಗಳೂರಿನಲ್ಲೇ ಇರುವ ಐಐಎಸ್ಸಿ, ಎನ್ಸಿಬಿಎಸ್ನಂತಹ ಸಂಸ್ಥೆಗಳಲ್ಲಿ ನಮ್ಮ ಕನ್ನಡಿಗರ ಸಂಖ್ಯೆ ತುಂಬಾ ಕಡಿಮೆ. ಅದೇನು ನಮ್ಮ ವಿದ್ಯಾರ್ಥಿಗಳಿಗೆ ಇದರ ಬಗೆಗೆ ಹೆಚ್ಚಾಗಿ ತಿಳಿದಿಲ್ಲವೋ ಅಥವಾ ಆಸಕ್ತಿಯಿಲ್ಲವೋ ಗೊತ್ತಿಲ್ಲ. 

ಕೇವಲ ವಿಜ್ಞಾನ ಎಂಬುದೊಂದೇ ಅಲ್ಲ, ಈಗಂತೂ ಇನ್ನೂ ಬಹಳಷ್ಟು ಶಾಖೆಗಳಲ್ಲಿ ಓದಲು ವಿಫುಲ ಅವಕಾಶಗಳಿವೆ. ಹಾಗಾಗಿ ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ ಆಸಕ್ತಿ ಇರುವ ವಿಷಯವನ್ನು ಓದಲು, ಆ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಬೇಕು. ಮೆಡಿಕಲ್‌, ಇಂಜಿನಿಯರಿಂಗ್ಎಂಬ ಎರಡೇ ವಿಭಾಗದೆಡೆಗೆ ಎಲ್ಲರನ್ನೂ ತಳ್ಳಬೇಕಾಗಿಲ್ಲ. ಆಗ ಅದಕ್ಕಾಗಿ ಮಕ್ಕಳನ್ನು ಮಾರ್ಕ್ಸ್ ಮೆಷೀನ್ಮಾಡುವ ಅಗತ್ಯವೂ ಇರುವುದಿಲ್ಲ.‌

ಬಯೋಆರ್ಕೈವ್ನ ಈ ಕೆಳಗಿನ ಲಿಂಕ್ನಲ್ಲಿ ಇಂಚರಳ ಪೇಪರ್ನೋಡಬಹುದು.

https://www.biorxiv.org/content/10.1101/2024.08.20.608768v1

4 Jun 2024

ಸುಲಭವಾಗಿ ಬೆಳೆಯಬಲ್ಲ ಉಪಯುಕ್ತ ಸಸ್ಯಗಳು

 

ಮನೆಯೆಂದರೆ ಒಂದಿಷ್ಟಾದರೂ ಗಿಡಗಳಿರಬೇಕು, ಸ್ವಲ್ಪವಾದರೂ ಹಸಿರು ಅಂಗಳದಲ್ಲೋ, ಬಾಲ್ಕನಿಯಲ್ಲೋ, ನಳನಳಿಸುತ್ತಿದ್ದರೆ ಲಕ್ಷಣ.  ಅದಿಲ್ಲವಾದರೆ ಮನೆ ಅದೆಷ್ಟೇ ಚೆನ್ನಾಗಿದ್ದರೂ, ದೊಡ್ಡದಾಗಿದ್ದರೂ ಜೀವಕಳೆಯೇ ಇಲ್ಲವೆನ್ನಿಸಿಬಿಡುತ್ತದೆ ನನಗೆ. ಕಾಲಕಾಲಕ್ಕೆ ನೀರು, ಗೊಬ್ಬರ, ವಾಗಾತಿ ಬೇಡುವ ನಾಜೂಕು ಸಸ್ಯಗಳನ್ನು ಬೆಳೆಸಲು, ಪರಮ ಸೋಮಾರಿಯೂ, ಅಲೆಮಾರಿಯೂ ಆಗಿರುವ ನನಗೆ ಸಾಧ್ಯವಿಲ್ಲವಾದ್ದರಿಂದ ಕಳೆಯಂತೆ ತನ್ನಷ್ಟಕ್ಕೆ ಬೆಳೆವ ಸಸ್ಯಗಳನ್ನಷ್ಟೆ ಬಾಲ್ಕನಿ ಮತ್ತು ಟೆರೆಸ್ಗಳಲ್ಲಿ ಬೆಳೆಯವ ಅಭ್ಯಾಸ ಮಾಡಿಕೊಂಡಿದ್ದೇನೆ. ಹೀಗೆ ಬೆಳೆವ ಸಸ್ಯಗಳಿಂದ ಅಡುಗೆ ಮನೆಗೂ ಸ್ವಲ್ಪವಾದರೂ ಪ್ರಯೋಜನವಾಗಬೇಕೆಂಬುದು ನನ್ನ ಇನ್ನೊಂದು ಸ್ವಾರ್ಥ. ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಮನೆಯಂಗಳದಲ್ಲಿಯೋ, ತೋಟ ಗದ್ದೆಗಳ ಬದಿಯಲ್ಲಿಯೋ ಬೆಳೆವ ವಿವಿಧ ಕಳೆ ಸಸ್ಯಗಳನ್ನು ಅಡುಗೆಗೆ ಮತ್ತು ಔಷಧಿಗೆ ಬಳಸುವುದು ಸಾಮಾನ್ಯ. ಅಲ್ಲಿಯ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುವ ಅವುಗಳನ್ನು ಇಲ್ಲಿ ಬೆಂಗಳೂರಿನಲ್ಲಿ ಬೆಳೆಯಬಹುದೆ ನೋಡೋಣ ಎಂಬ ಕುತೂಹಲದಿಂದ ಊರಿಗೆ ಹೋದಾಗಲೆಲ್ಲ ಒಂದಿಷ್ಟು ಸಸ್ಯಗಳನ್ನು ತಂದು ಪಾಟ್ನಲ್ಲಿ ಬೆಳೆಸಿ ನೋಡುವುದುಂಟು. ಕೆಲವು ಚೆನ್ನಾಗಿ ಬೆಳೆಯುತ್ತವಾದರೆ, ಇನ್ನೂ ಕೆಲವು ಇದೆಲ್ಲಿ ತಂದು ಬಿಟ್ಟೆ ನನ್ನನ್ನು ಎಂದು ಸಿಟ್ಟು ಮಾಡಿಕೊಂಡು ಹೊರಟೇಹೋಗುತ್ತವೆ. ಕೆಲವು ನಾನು ನೀರು ಹಾಕುತ್ತಿದ್ದರೆ ಮಾತ್ರ ಬದುಕುತ್ತವೆ. ಆಗಾಗ ನಾಲ್ಕಾರು ದಿನಗಳ ಮಟ್ಟಿಗೆ ಊರಿಗೋ, ಬೇರೆಲ್ಲಿಗೋ ಹೋಗಿ ವಾಪಾಸ್ಬಂದರೆ ಅವು ಒಣಗಿಹೋಗಿರುತ್ತವೆ. ಆದರೆ ಕೆಲವು ಗಿಡಗಳಿವೆ, ಅವುಗಳಿಗೆ ಹೆಚ್ಚಿನ ನೀರು, ಆರೈಕೆ ಏನೂ ಬೇಡ. ನಾಲ್ಕಾರು ದಿನ ನೀರಿಲ್ಲದೆ ಒಣಗಿಹೋಗಿದ್ದರೂ, ಮತ್ತೆ ನೀರು ಹಾಕಿದೊಡನೆಯೆ ಚಿಗುರಿ ನಳನಳಿಸುತ್ತವೆ. ಇಂತಹ ಗಿಡಗಳಿಗೆ ಕೀಟಬಾಧೆಯೂ ಕಡಿಮೆ.  ಇಂತಹ ಕೆಲ ಸಸ್ಯಗಳ ಪರಿಚಯ ಇಲ್ಲಿದೆ. ಇವುಗಳನ್ನು ನಗರದ ಕಿಷ್ಕಿಂದೆಯ ಮನೆಗಳ ಪುಟ್ಟ ಬಾಲ್ಕನಿ, ಕಿಟಕಿಕಟ್ಟೆ, ಟೆರೆಸ್ಹೀಗೆ ಎಲ್ಲಿಯಾದರೂ ಪಾಟ್ಗಳನ್ನಿಟ್ಟು ಬೆಳೆಯಬಹುದು.

ಗಿಡಬಸಳೆ



Talinum fruticosum ಎಂಬ ವೈಜ್ಞಾನಿಕ ನಾಮಧೇಯದ ಈ ಗಿಡ ಮಲೆನಾಡಿನ ಮನೆಗಳ ಅಂಗಳದಲ್ಲಿ ಯಾವಾಗಲೂ ಇರುವ ಸಸ್ಯ. ಹೆಸರಿನಲ್ಲಿ ಬಸಳೆ ಎಂದಿದ್ದರೂ ಸಾಮಾನ್ಯವಾಗಿ ಮಲಬಾರ್ಸ್ಪೀನಾಚ್ಎಂದು ಕರೆಯಲ್ಪಡುವ ಬಸಳೆಗೂ ಇದಕ್ಕೂ ಸಂಬಂಧವಿಲ್ಲ, ಎರಡೂ ಬೇರೆ ಬೇರೆ ಕುಟುಂಬದ ಸದಸ್ಯರು. ಬಸಳೆ ಬಳ್ಳಿಯಾದರೆ ನೆಲಬಸಳೆ ಸಣ್ಣ ಗಿಡ. ಮೇ ತಿಂಗಳಲ್ಲಿ ಹಳೆ ಮಳೆ ಬೀಳುತ್ತಿದ್ದ ಹಾಗೇ ಚಿಗುರಿಕೊಳ್ಳುವ, ಜಾಗ ಸಿಕ್ಕಲ್ಲೆಲ್ಲ ಹರಡಿಕೊಂಡು ಬೆಳೆಯುವ ಸಸ್ಯ. ಹಾಗಂತ ಬೇಸಿಗೆಯಲ್ಲೇನೂ ಇದು ಒಣಗುವುದಿಲ್ಲ. ನಾಲ್ಕೆಂಟು ದಿನಗಳ ಕಾಲ ನೀರಿಲ್ಲದೆಯೂ ಹಸಿರಾಗಿರುತ್ತದೆ. ದಟ್ಟ ಹಸಿರು ಬಣ್ಣದ ದಪ್ಪ ಎಲೆಗಳಲ್ಲಿ ಇವು ನೀರನ್ನು ಸಂಗ್ರಹಿಸಿಟ್ಟುಕೊಂಡಿರುತ್ತವೆ. ಒಂದೆರಡು ಅಡಿ ಎತ್ತರ ಬೆಳೆಯುತ್ತವೆ. ಚಿಕ್ಕ ಚಿಕ್ಕ ದಟ್ಟ ಗುಲಾಬಿ ಬಣ್ಣದ ಹೂವು ಕೂಡ ನೋಡಲು ಸೊಗಸು. ಕಾಯಿ ಒಣಗಿದ ನಂತರ ಸಿಡಿದು ಚಿಕ್ಕ ಸಾಸುವೆ ಕಾಳಿನಂತಹ ಬೀಜಗಳು ಗಾಳಿಯಲ್ಲಿ ಹಾರಿ ಹೊಸ ಗಿಡಗಳು ಮೊಳೆಯುತ್ತವೆ. ದಪ್ಪನಾದ ಕಾಂಡವನ್ನು ನೆಲಕ್ಕೆ ಊರಿದರೂ ಸಾಕು ಅಲ್ಲೇ ಅದು ಬೇರು ಬಿಡುತ್ತದೆ. ಎಲೆಗಳು, ಚಿಗುರುಗಳನ್ನು ಕೊಯ್ದು ಸಾಂಬಾರು, ಪಲ್ಯ, ದಾಲ್‌, ತಂಬುಳಿ, ಎಲ್ಲವನ್ನೂ ಮಾಡಬಹುದು. ಮತ್ತೆ ವೇಗವಾಗಿ ಚಿಗುರುತ್ತವೆ. ಒಂದಿಷ್ಟು ಟೀ, ಕಾಫಿ ಚರಟು ಮತ್ತು ಹುಳಿ ಮಜ್ಜಿಗೆಯನ್ನು ಬಿಟ್ಟರೆ ಬೇರೇನನ್ನೂ ನಾನು ಹಾಕದಿದ್ದರೂ ಎರಡು ಪಾಟ್ನಲ್ಲಿರುವ ಈ ಗಿಡಗಳಿಂದ ವಾರಕ್ಕೊಮ್ಮೆ ಸಾಂಬಾರು ಮಾಡುವಷ್ಟು ಸೊಪ್ಪು ಸಿಗುತ್ತಿದೆ. ಸಿಕ್ಕಾಪಟ್ಟೆ ಕಬ್ಬಿಣಾಂಶ, ಕ್ಯಾಲ್ಸಿಯಂ ಅಂಶ ವಿಟಾಮಿನ್, ಸಿ ಎಲ್ಲ ಇವುಗಳಲ್ಲಿದೆಯಂತೆ. ಹಾಗಂತ ಹೆಚ್ಚು ತಿಂದರೆ ಅಜೀರ್ಣವಾಗಬಹುದು.

ಇದರ ಮೂಲ ಅಮೇರಿಕಾ ಖಂಡ ಅಂತ ಗೂಗಲಕ್ಕ ಹೇಳಿದಳು. ಸಾವಿರಾರು ಕಿಮೀ ದೂರದ ಈ ಸಸ್ಯ ಅದ್ಯಾವಾಗ ನಮ್ಮ ಈ ಮಲೆನಾಡಿಗರ ಅಡುಗೆಮನೆ ಹೊಕ್ಕಿತೋ ಗೊತ್ತಿಲ್ಲ.

ಎಲವರಿಗೆ (Senna sophera)



ಇದೊಂದು ಮಧ್ಯಮ ಗಾತ್ರದ ಗಿಡ. ಮಳೆ ಬಿದ್ದೊಡನೆ, ಖಾಲಿ ಇರುವ ಜಾಗಗಳಲ್ಲಿ, ರಸ್ತೆ ಬದಿಗಳಲ್ಲಿ ಹುಟ್ಟಿಕೊಳ್ಳುತ್ತದೆ. ದಟ್ಟ ಹಸಿರು ಎಲೆಗಳಿವೆ. ಎಲೆಗಳನ್ನು ಮುಟ್ಟಿದರೆ ಒಂದು ವಿಧವಾದ ವಾಸನೆ ಹೊರಹೊಮ್ಮುತ್ತದೆ. ರಸ್ತೆ ಬದಿಯಲ್ಲೇ ಇದು ಬೆಳೆದರೂ ಜಾನುವಾರುಗಳು ಇದನ್ನು ಮುಟ್ಟದಿರಲು ಈ ವಾಸನೆಯೇ ಕಾರಣವಿರಬಹುದು. ಒಂದೆರಡು ತಿಂಗಳ ನಂತರ ಸುಂದರವಾದ ಹಳದಿ ಬಣ್ಣದ ಹೂವುಗಳು ಅರಳುತ್ತವೆ. ಉದ್ದನೆಯ ಕೋಡಿನಂತ ಹಸಿರು ಕಾಯಿಗಟ್ಟುತ್ತದೆ. ಮಳೆಗಾಲ ಮುಗಿಯುತ್ತ ಬಂದಂತೆ ಗಿಡವು ಒಣಗುತ್ತಾ ಬರುತ್ತದೆ. ಕಾಯಿಯೂ ಒಣಗಿ ಕಪ್ಪುಬಣ್ಣಕ್ಕೆ ತಿರುಗುತ್ತದೆ. ಒಣಗಿದ ಕಾಯಿ ಸಿಡಿದು ಮೆಂತೆ ಕಾಳಿನಂತಹ ಬೀಜ ಸುತ್ತ ಹರಡುಕೊಳ್ಳುತ್ತದೆ. ಮುಂದಿನ ಮಳೆಗಾಲದವರೆಗೆ ಮಣ್ಣಿನಲ್ಲಿ ಸುಪ್ತಾವಸ್ಥೆಯಲ್ಲಿ ಉಳಿಯುವ ಬೀಜಗಳು ಮಳೆ ಬೀಳುತ್ತಿದ್ದ ಹಾಗೆಯೆ ಚಿಗುರುತ್ತವೆ. ನೀರಿನ ಪಸೆ ಇರುವಲ್ಲಿ ಗಿಡ ಒಣಗುವುದಿಲ್ಲ.  ನಾನು ಇದರ ಬೀಜವನ್ನು ಪಾಟ್ನಲ್ಲಿ ಹಾಕಿದೆ, ಗಿಡ ಹುಟ್ಟಿ ಚೆನ್ನಾಗಿ ಬೆಳೆಯಿತು. ಆಗಾಗ ಅಲ್ಪ ಪ್ರಮಾಣದ ನೀರು ಹಾಕಿದರೆ ಸಾಕು, ಸದಾ ಕಾಲ ದಟ್ಟ ಹಸಿರು ಎಲೆಗಳಿಂದ ತುಂಬಿ ನಿಲ್ಲುತ್ತದೆ.

ಇದರ ಎಲೆಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು, ಜೀರಿಗೆ, ಮೆಣಸು, ತೆಂಗಿನ ತುರಿ ಸೇರಿಸಿ ಚಟ್ನಿ ಮಾಡಬಹುದು. ಒಣಕೊಬ್ಬರಿಯನ್ನು ಹಾಕಿ ಚಟ್ನಿಪುಡಿ ಮಾಡಬಹುದು. ಎಳೆ ಎಲೆಗಳನ್ನು ಬೇರೆ ಸೊಪ್ಪುಗಳ ಜೊತೆ ಬೆರೆಸಿ, ಪತ್ರೊಡೆ, ಪಲ್ಯಗಳನ್ನೂ ಮಾಡಬಹುದು.

ಈ ಗಿಡದಲ್ಲಿ ತುಂಬ ಔಷಧೀಯ ಗುಣಗಳಿರುವುದರಿಂದ ಆಯುರ್ವೇದದಲ್ಲಿ ಪ್ರಾಮುಖ್ಯತೆ ಪಡೆದಿದೆ. ರಕ್ತದ ಸಕ್ಕರೆ ಅಂಶ ಕಡಿಮೆ ಮಾಡುವ ಸಾಮರ್ಥ್ಯ, ಲಿವರ್ಕಿಡ್ನಿಗಳ ಸ್ವಾಸ್ಥ್ಯವನ್ನು ಕಾಪಾಡುವ ಸಾಮರ್ಥ್ಯ ಇವಕ್ಕಿದೆ ಎಂದು ತಿಳಿದುಬಂದಿದೆ.

ನಮ್ಮ ಮಲೆನಾಡಿನಲ್ಲಿ ಇದನ್ನು ಆಗಾಗ ಚಟ್ನಿ ರೂಪದಲ್ಲಿ ಅಡುಗೆಗೆ ಬಳಸಲಾಗುತ್ತದೆ. ಬಾಣಂತಿಯರಿಗಂತೂ ವಾರಕ್ಕೊಮ್ಮೆಯಾದರೂ ಇದರ ಚಟ್ನಿಯನ್ನು ಮಾಡಿಕೊಡಲಾಗುತ್ತದೆ.

ಚಕ್ರಮುನಿ ಸೊಪ್ಪು(Sauropus androgynous)



ವಿಟಾಮಿನ್ಗಳ ಆಗರವಾಗಿರುವ ಇದನ್ನು ವಿಟಾಮಿನ್ಸೊಪ್ಪು ಎಂದೂ ಕರೆಯುತ್ತಾರೆ. ನೆಲದಲ್ಲಿದ್ದರೆ ಐದಾರು ಅಡಿಗಳ ಎತ್ತರಕ್ಕೆ ಪೊದೆಯಂತೆ ಬೆಳೆವ ಸಸ್ಯ. ಪಾಟ್ನಲ್ಲಿ ಅಷ್ಟು ಎತ್ತರಕ್ಕಲ್ಲದಿದ್ದರೂ ಚೆನ್ನಾಗಿ ಬೆಳೆಯುತ್ತದೆ. ಬಹಳ ಮುಖ್ಯವೆಂದರೆ ಪೂರ್ಣ ಒಣಗಿಹೋಗಿದ್ದರೂ, ನೀರು ಹಾಕುತ್ತಿದ್ದಂತೆಯೆ ಮತ್ತೆ ಚಿಗುರಿಕೊಳ್ಳುವ ಅದರ ಗುಣ. ಹಾಗಾಗಿ ಬೆಳೆಸಲು ಸುಲಭ. ದಟ್ಟ ಹಸಿರು ಬಣ್ಣದ ಅಂಡಾಕಾರದ ಎಲೆಗಳಿರುತ್ತದೆ. ಇದರ ಹೂವು ಮತ್ತು ಕಾಯಿಗಳು ನೋಡಲು ತುಂಬಾ ಚಂದ. ಗುಲಾಬಿ ಬಣ್ಣದ ಪುಟ್ಟ ಹೂವುಗಳು ಎಲೆತೊಟ್ಟಿನ ಅಡಿಯಲ್ಲಿ ಅರಳುತ್ತವೆ. ಕೆನೆಬಣ್ಣದ ಕಾಯಿಗಳು ಹಣ್ಣಾದಂತೆ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ವಿಟಾಮಿನ್ಕೆ, ಸಿ, ಎ ಗಳು ಇವುಗಳಲ್ಲಿ ಹೇರಳವಾಗಿದೆಯಂತೆ.

ಎಲೆಗಳಿಂದ ತಂಬುಳಿ, ಚಟ್ನಿ, ಚಟ್ನಿಪುಡಿ, ಪಲ್ಯ ಮಾಡಬಹುದು. ಸಕ್ಕರೆ ಖಾಯಿಲೆಗೆ ಔಷಧ ಎನ್ನುತ್ತಾರೆ. ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುತ್ತದೆ ಎನ್ನಲಾಗಿದೆ.

ಇದು ಮೂಲತಃ ನಮ್ಮ ಏಷ್ಯಾ ಖಂಡದ ಸಸ್ಯ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಇದನ್ನು ಔಷಧಿಗಾಗಿ, ಆಹಾರವಾಗಿ ತುಂಬಾ ಪುರಾತನಕಾಲದಿಂದಲೂ ಬಳಸಲಾಗುತ್ತಿದೆ.

ಗೋಳಿಸೊಪ್ಪು(Portulaca oleracea)



 ಕಿರುಗೋಳಿಸೊಪ್ಪು ಎಂದೂ ಕರೆಯಲಾಗುವ ಈ ಪುಟ್ಟ ಸಸ್ಯವು ನೆಲಮಟ್ಟದಲ್ಲಿ ಹರಡಿಕೊಂಡು ಬೆಳೆಯುತ್ತದೆ.  ನೀರಿಲ್ಲದೆಯೂ ಹಲವಾರು ದಿನ ಇರಬಲ್ಲ ಶಕ್ತಿ, ಒಂದು ಬುಡ ಇದ್ದರೆ ಸಾಕು ಆದಷ್ಟು ಬೇಗ ಹೂಬಿಟ್ಟು, ಕಾಯಾಗಿ ತನ್ನಲ್ಲಿರುವ ಲಕ್ಷಗಟ್ಟಲೆ ಬೀಜಗಳನ್ನು ಪ್ರಸರಣ ಮಾಡಿ ಇನ್ನಷ್ಟು ಮತ್ತಷ್ಟು ತಾನಾಗೆ ಹುಟ್ಟಿ, ವೇಗವಾಗಿ ಬೆಳೆವ ಸಾಮರ್ಥ್ಯದ ಈ ಗಿಡ ನಮ್ಮಂತವರಿಗೆ ಬೆಳೆಯಲು ಹೇಳಿ ಮಾಡಿಸಿದಂತಹದ್ದು. ಇದರ ಇನ್ನೊಂದು ಅನುಕೂಲವೆಂದರೆ ಯಾವುದಾರೂ ದೊಡ್ಡ ಗಿಡ ಇರುವ ಪಾಟ್ನಲ್ಲಿಯೂ ಬೆಳೆಸಬಹುದು, ಅದಕ್ಕೆ ಮುಚ್ಚುಗೆ ಸಸ್ಯದಂತೆಯೂ ಆಗುತ್ತದೆ, ನಮಗೆ ಇದರ ಸೊಪ್ಪು ಬಳಸಲೂ ಸಿಗುತ್ತದೆ. ಹ್ಯಾಂಗಿಂಗ್ಪಾಟ್ನಲ್ಲಿ ಹಾಕಿದರೆ ಹರಡಿಕೊಂಡು ಹಳದಿ ಬಣ್ಣದ ಚೆಂದದ ಹೂ ಬಿಡುವುದರಿಂದ ಅಲಂಕಾರಿಕ ಸಸ್ಯವೂ ಆಗುತ್ತದೆ. ಚಿಕ್ಕ ಚಿಕ್ಕ ದಪ್ಪ ಎಲೆಗಳು, ಮೃದುವಾದ ಕಾಂಡ ಎರಡನ್ನೂ ಅಡುಗೆಗೆ ಬಳಸಬಹುದು. ಇದರ ಸಾಂಬಾರು, ಪಲ್ಯಗಳು ಬಲುರುಚಿ. ಬಹಳಷ್ಟು ಔಷಧೀಯ ಗುಣಗಳೂ ಇದಕ್ಕಿದೆ. ವಿಟಾಮಿನ್ ಇ, ವಿಟಾಮಿನ್ಸಿ ,ಒಮೆಗಾ ೩ ಫ್ಯಾಟಿ ಆಸಿಡ್ಸ್ಎಲ್ಲವೂ ಇವುಗಳಲ್ಲಿದೆಯೆನ್ನುತ್ತಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳು, ಆಫ್ರಿಕಾ, ಯೂರೋಪ್ಎಲ್ಲ ಕಡೆಗಳಲ್ಲಿ ಇದನ್ನು ಆಹಾರಕ್ಕಾಗಿ ಬಳಸುತ್ತಾರಂತೆ. ಒಂದು ಕಾಲದಲ್ಲಿ ನಮ್ಮ ಮಲೆನಾಡಿನ ಅಂಗಳಗಳಲ್ಲಿ ತೋಟ, ಗದ್ದೆಗಳ ಬದಿಯಲ್ಲಿ ಕಳೆಯಂತೆ ರಾಶಿ ರಾಶಿ ಬೆಳೆಯುತ್ತಿದ್ದ ಈ ಗಿಡ ಇತ್ತೀಚೆಗೆ ಅಂಗಳಕ್ಕೆ ಕಲ್ಲು ಹಾಕಿಸುವುದು, ತೋಟ ಗದ್ದೆಗಳಿಗೆ ಕಳೆನಾಶಕಗಳನ್ನು ಸಿಂಪಡಿಸುವ ಕ್ರಮದಿಂದಾಗಿ ಬೆಳೆಯುವುದು ಕಡಿಮೆಯಾಗುತ್ತಿದೆ. ಆದರೇನಂತೆ ನಾವು ಇದನ್ನು ನಮಗೆ ಬೇಕಾದಲ್ಲಿ ಬೆಳೆಸಿ, ಬಳಸಬಹುದು. ಕಡಿಮೆ ಖರ್ಚಿನಲ್ಲಿ ರುಚಿ ಜೊತೆಗೆ ಆರೋಗ್ಯಕರ ಸೊಪ್ಪು.

ಚವನ್ಹರಿವೆ(Alternanthera bettzickiana)



ಗಾಢ ನೇರಳೆ ಬಣ್ಣದ ಎಲೆಗಳು, ಕಾಂಡ ಇರುವ ಈ ಗಿಡವು ಹರಿವೆಸೊಪ್ಪಿನ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಸುಂದರ ಬಣ್ಣ ಮತ್ತು ಯಾವ ಆರೈಕೆಯೂ ಬೇಡದೆ ಚೆನ್ನಾಗಿ ಬೆಳೆಯುವ ಸ್ವಭಾವದಿಂದಾಗಿ ಕೈತೋಟಗಳಲ್ಲಿ ಪಾರ್ಕ್‌, ಲಾನ್ಗಳಲ್ಲಿ ಸಾಲಾಗಿ ಗಡಿಸಸ್ಯದಂತೆ ಬೆಳೆಸುತ್ತಾರೆ. ಕುಂಡಗಳಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ ಮತ್ತು ಕೆಲವು ದಿನ ನೀರಿಲ್ಲದೆ ಒಣಗಿದರೂ ನೀರು ಹಾಕುತ್ತಿದ್ದಂತೆ ಮತ್ತೆ ಚಿಗುರುತ್ತದೆ. ಬಿಳಿಯ ಬಣ್ಣದ ಪುಟ್ಟ ಬಲ್ಬ್ನಂತಹ ಹೂಗೊಂಚಲು ನೋಡಲು ಸುಂದರ. ಚಿಕ್ಕ ಚಿಕ್ಕ ಬೀಜಗಳು ಗಾಳಿಯಲ್ಲಿ ಪ್ರಸರಣಗೊಳ್ಳುತ್ತದೆ.

ಇದನ್ನು ಮುಖ್ಯವಾಗಿ ಅಲಂಕಾರಿಕ ಸಸ್ಯವಾಗಿಯೇ ಬೆಳೆಯುತ್ತಾರೆ. ಆದರೆ ಸಾಕಷ್ಟು ಪೌಷ್ಟಿಕಾಂಶಗಳಿರುವುದರಿಂದ ಅಡಿಗೆಯಲ್ಲಿಯೂ ಬಳಸಬಹುದು. ರಕ್ತಹೀನತೆ, ಸಂಧಿವಾತ, ಮುಟ್ಟಿನ ಹೊಟ್ಟೆನೋವು ಮೊದಲಾದ ಅನೇಕ  ಖಾಯಿಲೆಗಳಿಗೆ ಔಷಧವಾಗಿಯೂ ಬಳಕೆಯಲ್ಲಿದೆಯಂತೆ. ಎಲೆಗಳನ್ನು ಸಾಂಬಾರು ಪಲ್ಯ, ದಾಲ್ಮೊದಲಾದ ಅಡುಗೆಯಲ್ಲಿ ಬಳಸಬಹುದು.

ಇದರಂತೆಯೆ ದಂಟಿನ ಸೊಪ್ಪು, ಸಣ್ಣಹರಿವೆ ಅಥವಾ ಕೀರೆ ಸೊಪ್ಪುಗಳೂ ಸಹ ಕಡಿಮೆ ಆರೈಕೆಯಲ್ಲಿ ಕುಂಡದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಕಾಕಿ ಹಣ್ಣಿನ ಗಿಡವು ಸಹ ಚೆನ್ನಾಗಿ ಬೆಳೆಯುತ್ತದೆ, ಇದರ ಪುಟ್ಟ ಕಪ್ಪು ಹಣ್ಣುಗಳು ತಿನ್ನಲು ರುಚಿ, ಸೊಪ್ಪು ಔಷಧೀಯ ಗುಣಗಳನ್ನು ಹೊಂಡಿದ್ದು ತಂಬುಳಿ ಚಟ್ನಿ ಮಾಡಿ ಬಳಸಬಹುದು.

ಸಂಬಾರಸೊಪ್ಪು(Coleus aromaticus)



ದಪ್ಪ ಸುಂದರ ಎಲೆಗಳು, ಗಾಢವಾದ ವಾಸನೆಯ ಈ ಸಸ್ಯ ತನ್ನ ಅಪಾರವಾದ ಔಷಧೀಯ ಗುಣಗಳಿಂದಾಗಿ ಪ್ರಸಿದ್ಧವಾಗಿದೆ. ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದಾಗಿ ತಿಂಗಳುಗಟ್ಟಲೆ ನೀರು ಹಾಕದಿದ್ದರೂ ಬದುಕಿರುತ್ತದೆ. ಮಣ್ಣೂ ಸಹ ಹೆಚ್ಚು ಬೇಡ, ನಮ್ಮ ಬಾಲ್ಕನಿಯಲ್ಲಿರುವ ಪಾಟ್‌ನಲ್ಲಿ ಒಂದು ಗಿಡವಿದೆ. ಅಲ್ಲಿಂದ ಹೇಗೋ ಬಾಲ್ಕನಿಯಂಚಿಗೆ ಹರಡಿಕೊಂಡು ಅಲ್ಲಿನ ಸಿಮೆಂಟ್‌ ಮೇಲೆ ಎರಡು ಗಿಡಗಳು ಬೆಳೆಯುತ್ತಿವೆ!

ಶೀತ, ಕೆಮ್ಮು, ಕಫ, ಕಿವಿನೋವು ಮೊದಲಾದವುಗಳಿಗೆ ಇದರ ರಸವನ್ನು ಔಷಧವಾಗಿ ಬಳಸುತ್ತಾರೆ. ಅಲ್ಲದೆ ಇದರ ಎಲೆಗಳಿಂದ ಮಾಡಿದ ಚಟ್ನಿ, ತಂಬುಳಿ, ಪಲ್ಯ, ದಾಲ್‌, ಬಜ್ಜಿ ತುಂಬಾ ರುಚಿ.

ನೋಡಲೂ ಸುಂದರವಾಗಿ ಗಿಡವನ್ನು ಚೆಂದದ ಕುಂಡಲ್ಲಿ ಬೆಳೆಸಿದರೆ ಅಲಂಕಾರಿಕ ಸಸ್ಯವೂ ಆಗುತ್ತದೆ. ಇದರ ಹೂವನ್ನು ನೋಡುವ ನನ್ನ ಆಸೆ ಇನ್ನೂ ಈಡೇರಿಲ್ಲ. ಯಾಕೋ ನಮ್ಮ ಗಿಡದಲ್ಲಿ ಇದುವರೆಗೂ ಹೂವು ಅರಳಿಲ್ಲ.

 

ಅರಿಸಿನ-



ಮಳೆಗಾಲ ಪ್ರಾರಂಭವಾಗುತ್ತದೆನೆನ್ನುವಾಗ ಅರಿಸಿನದ ಕೊಂಬನ್ನು  ದೊಡ್ಡ ಕುಂಡಗಳಲ್ಲಿ ಹಾಕಿ ಬಾಲ್ಕನಿಯಲ್ಲೋ, ಟೆರೆಸ್‌ನಲ್ಲೋ ಇಟ್ಟರೆ ಸಾಕು ಆರೆಂಟು ತಿಂಗಳ ಬಳಿಕ ಮನೆಯಲ್ಲೇ ಬೆಳೆದ ಅರಿಸಿನವನ್ನು ಅಡುಗೆಗೆ ಬಳಸಬಹುದು. ಹಸಿರುಬಣ್ಣದ ಚೆಂದದ ಎಲೆಗಳಿಂದಾಗಿ ಅಲಂಕಾರಿಕ ಸಸ್ಯವೂ ಆಗುತ್ತದೆ. ಪರಿಮಳ ಬೀರುವ ಎಲೆಗಳಲ್ಲಿ ಕಡುಬು ಮಾಡಿದರೆ ಅದಕ್ಕೆ ವಿಶೇಷ ರುಚಿ ಬರುತ್ತದೆ. ಸ್ವಲ್ಪ ಹೆಚ್ಚು ಜಾಗವಿದ್ದರೆ ಏಳೆಂಟು ಕುಂಡಗಳಲ್ಲಿ ಬೆಳೆಸಿ, ಸ್ವಲ್ಪ ಗೊಬ್ಬರ ಹಾಕಿದರೆ ವರ್ಷಕ್ಕಾಗುವಷ್ಟು ಅರಿಸಿನ ಬೆಳೆಯಬಹುದು. ಹೀಗೆಯೆ ಶುಂಠಿಯನ್ನೂ ಕೂಡ ಬೆಳೆಯಬಹುದು. ನಾಲ್ಕಾರು ದಿನಗಳ ಮಟ್ಟಿಗೆ ನೀರಿಲ್ಲದೆಯೂ ಬದುಕುತ್ತವೆ. ಆದರೆ ಹೆಚ್ಚಿನ ದಿನ ಇರಲಾರವು.  





ಇನ್ನು ಔಷಧೀಯ ಗುಣಗಳುಳ್ಳ ಲೋಳೆಸರ, ತುಳಸಿ, ನೆಲನೆಲ್ಲಿಗಳು, ನಾಚಿಕೆಮುಳ್ಳು, ಚೆಂದದ ಹೂ ಬಿಡುವ ಶಂಖಪುಷ್ಪ, ತುಂಬೆ, ನಿತ್ಯಪುಷ್ಪಗಳೂ, ಕಣಗಿಲೆ ಸಹ ಯಾವುದೇ ಆರೈಕೆ ಬೇಡದೆ ಸುಲಭವಾಗಿ ಬೆಳೆಯುತ್ತವೆ.

ಅಡುಗೆ ಮನೆಯಲ್ಲಿ ಉಳಿಯುವ ಕಸದಿಂದ ಇವುಗಳ ಆರೈಕೆ ಮಾಡಬಹುದು. ಟೀ ಕಾಫಿ ಚರಟ, ಈರುಳ್ಳಿ ಸಿಪ್ಪೆ, ಬಾಳೆಹಣ್ಣಿನ ಸಿಪ್ಪೆಗಳನ್ನು, ತರಕಾರಿ ಸಿಪ್ಪೆಗಳನ್ನು ನೆನೆಸಿಟ್ಟು ಅದರ ನೀರನ್ನು ಗಿಡಗಳಿಗೆ ಹಾಕುವುದು, ಆಗಾಗ್ಗೆ ಮಿಕ್ಕಿದ ಹುಳಿಮಜ್ಜಿಗೆಯನ್ನು ಹಾಕುವುದು ಎರಡೇ ನಾನು ಮಾಡುವ ಅತೀ ದೊಡ್ಡ ಆರೈಕೆ! ಅಡುಗೆಮನೆಯ ಕಸದಿಂದ ಗೊಬ್ಬರ ತಯಾರಿಸಲು ಸುಲಭ ವಿಧಾನಗಳಿವೆ ಅದನ್ನೂ ಸಹ ಅಳವಡಿಸಿಕೊಳ್ಳಬಹುದು.

ಸುಲಭವಾಗಿ ಬೆಳೆಯಬಲ್ಲ ಉಪಯುಕ್ತ ಸಸ್ಯಗಳು…. ಇನ್ನೂ ಪ್ರಯೋಗ ಜಾರಿಯಲ್ಲಿದೆ.

4 Jan 2024

ಶಿವಲಿಂಗದ ಮರ

ಮನೆಯ ಗೇಟ್ ದಾಟಿ ಆಫೀಸ್ ದಾರಿ ಹಿಡಿಯುತ್ತಿದ್ದಂತೆಯೆ ನನಗೆ ಮನೆಯೊಂದು ಇದೆ ಅಂತಲೇ ಮರೆತು ಹೋಗುತ್ತದೆಕೆಲಸದ ಮೇಲಿನ ತನ್ನ ಶ್ರದ್ಧೆಯ ಬಗೆಗೆ ನನ್ನ ವರ್ಕೋಲಿಕ್ ಗಂಡ ಆಗಾಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಮಾತಿದು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಡೈಲಾಗ್ ಸ್ವಲ್ಪ ಬದಲಾಗಿದೆ, ಕೆಲಸಕ್ಕೆಂದು ಹೊರಗೆ ಹೋದಾಗ ಯಾವುದಾದರೂ ಪ್ರಕೃತಿ ವಿಶೇಷ ಅಂದರೆ ವಿಚಿತ್ರವಾದ ಹುಳವೋ, ಪ್ರಾಣಿ ಪಕ್ಷಿಗಳೋ, ಹೂವು, ಹಣ್ಣು, ಕಾಯಿಗಳೋ, ವಿಶಿಷ್ಟ ಪ್ರಕೃತಿ ವಿದ್ಯಮಾನಗಳೋ ಕಾಣಿಸಿದರೆ ತಟ್ಟನೆ ನಿನ್ನ ನೆನಪಾಗತ್ತೆ ಮಾರಾಯ್ತಿ ಎನ್ನುತ್ತಾರೆ! ನನಗೆ ಇದರಿಂದ ಸಂತೋಷವೂ ಆಗುತ್ತದೆ! ಹೀಗೆ ಹುಳಹಪ್ಪಟೆ ಕಾಣಿಸಿದೊಡನೆ ನಿನ್ನ ನೆನಪಾಗುತ್ತದೆ ಎನ್ನುವವರು ಹಲವರಿದ್ದಾರೆ, ಮತ್ತು ಅದರಿಂದ ನನಗೆ ಸಂತೋಷವಾಗುತ್ತದೆ ಎಂಬುದು ವಿಚಿತ್ರವಾದರೂ ಸತ್ಯ.



ಇತ್ತೀಚೆಗೆ ಒಂದು ದಿನ ಯಾವುದೋ ಗ್ರಾಹಕರ ತೋಟಕ್ಕೆ ಹೋಗಿದ್ದವರು ಬರುತ್ತಿದ್ದಂತೆಯೆ ಇದೊಂದು ಹಣ್ಣು ಅವರ ತೋಟದಲ್ಲಿತ್ತು ನೋಡು, ಎಷ್ಟು ವಿಚಿತ್ರವಾಗಿದೆ. ಆ ತೋಟದ ಮಾಲಿ, ತಮ್ಮ ಊರ ಕಡೆ ಈ ಹಣ್ಣನ್ನು ತಿನ್ನುತ್ತೇವೆ ಎಂದು ಹೇಳಿದಎಂದು ತೊಟ್ಟಿನ ಸಮೇತವಾಗಿದ್ದ ಗುಂಡನೆಯ ಟೆನ್ನಿಸ್ ಚೆಂಡಿನಂತಹ ವಸ್ತುವೊಂದನ್ನು ಕೊಟ್ಟರು. ನೋಡಿದೊಡನೆಯೆ ಅದು ಹಣ್ಣಲ್ಲ, ಹೂಗುಚ್ಛ ಎಂದು ತಿಳಿಯಿತು. ಉಳಿದ ವಿವರಗಳನ್ನು ಗೂಗಲಕ್ಕ ತಿಳಿಸಿದಳು.



 ಇದಕ್ಕೆ ಕನ್ನಡದಲ್ಲಿ ಶಿವಲಿಂಗದ ಮರ ಎಂಬ ಹೆಸರಿದೆ. ಇಂಗ್ಲೀಷಿನಲ್ಲಿ ಬ್ಯಾಟ್‍ಮಿಟನ್ ಬಾಲ್ ಟ್ರೀ ಎಂಬ ಸಾಮಾನ್ಯ ಹೆಸರು ಹಾಗೂ Parkia biglandulosa ಎಂಬ ವೈಜ್ಞಾನಿಕ ನಾಮಧೇಯ ಇದಕ್ಕಿದೆ. ಮಿಮೋಸ ಎಂಬ ಜಾತಿಗೆ ಸೇರಿದ ಮರ. ಅಂದರೆ ನಮ್ಮ ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಗಿಡವಿದೆಯಲ್ಲ ಅದೇ ಜಾತಿಗೆ ಸೇರಿದೆ. ಇವೆರಡರ ಎಲೆಗಳು, ಹೂಗುಚ್ಛ, ಕಾಯಿ ಎಲ್ಲದರಲ್ಲೂ ಸಾಮ್ಯತೆಯಿದೆ. ಆದರೆ ಗಾತ್ರದಲ್ಲಿ ಮಾತ್ರ ಅಗಾಧ ವ್ಯತ್ಯಾಸ. “ನಾಚಿಕೆ ಮುಳ್ಳು ನೆಲಕ್ಕೆ ಅಂಟಿಕೊಂಡಂತೆ ಬೆಳೆವ ಬಳ್ಳಿಯಂತಹ (creaper) ಸಸ್ಯವಾದರೆ ಈ ಶಿವಲಿಂಗದ ಮರ ಹೆಸರೇ ಹೇಳುವಂತೆ ಮಧ್ಯಮಗಾತ್ರದ ಮರವಾಗಿ ಬೆಳೆಯುವಂತಹ ಸಸ್ಯ. ಸಸ್ಯಲೋಕದಲ್ಲಿ ಇಂತಹ ವಿಚಿತ್ರಗಳು ಅಪರೂಪವೇನಲ್ಲ. ನೆಲಕ್ಕಂಟಿಕೊಂಡು ಬೆಳೆವ ಹುಲ್ಲು, ಮುಗಿಲು ಮುಟ್ಟುವಷ್ಟು ಎತ್ತರ ಬೆಳೆವ ಬಿದಿರು ಒಂದೇ ಜಾತಿಗೆ ಸೇರಿವೆ! ಮಾನವರ ಹೊಟ್ಟೆ ತುಂಬಿಸುವ ಏಕದಳ ಧಾನ್ಯಗಳಾದ ಭತ್ತ, ರಾಗಿ, ಗೋಧಿ ಮೊದಲಾದ ಸಸ್ಯಗಳು ಸಹ ಹುಲ್ಲಿನ ಜಾತಿಗೇ ಸೇರಿದವುಗಳು!

 



ಈ ಶಿವಲಿಂಗದ ಮರದ ಮೂಲ ನೆಲೆ ಆಫ್ರಿಕಾ ಖಂಡ. ಅಲ್ಲಿ ಈ ಮರದ ಎಲೆ, ಕಾಂಡ, ಬೇರು, ಹೂಗುಚ್ಛ, ಹಣ್ಣು ಹಾಗೂ ಬೀಜಗಳನ್ನು ಆಹಾರಕ್ಕಾಗಿಯೂ ಔಷಧವಾಗಿಯೂ ಉಪಯೋಗಿಸುತ್ತಾರೆ.

ಇದರ ಹೂಗುಚ್ಛ ಆಕರ್ಷಕವಾಗಿರುವುದರಿಂದ ಉಷ್ಣವಲಯದ ದೇಶಗಳ ಪಾರ್ಕ್, ಬಟಾನಿಕಲ್ ಗಾರ್ಡನ್ಕೈತೋಟಗಳಲ್ಲಿ ಮೆಚ್ಚಿನ ಸ್ಥಾನ ಪಡೆದಿದೆನಮ್ಮ ದೇಶದ ಅನೇಕ ಮಹಾನಗರಗಳಲ್ಲಿ ರಸ್ತೆಬದಿಯ ಸಾಲುಮರಗಳ ಸಾಲಿನಲ್ಲಿಯೂ ಇವುಗಳನ್ನು ಬೆಳೆಸಲಾಗಿದೆ. ಕಂದು ಬಣ್ಣದ ಮೊಗ್ಗುಗಳ ಗುಚ್ಛ, ಕೆಲವೇ ದಿನಗಳಲ್ಲಿ ಅರಳಿ ಬಿಳಿಯ ಬಣ್ಣದ ಹೂವುಗಳ ಗುಚ್ಛವಾಗುತ್ತದೆಕಾಯಿಗಳು ಉದ್ದನೆಯ ಕೋಡಿನಾಕಾರದಲ್ಲಿ ಇರುತ್ತವೆಬೀಜದ ಸುತ್ತಲಿನ ತಿರುಳು ರುಚಿಕರವಾಗಿದ್ದು ಸೇವನೆಗೆ ಯೋಗ್ಯವಾಗಿದೆಬೀಜವನ್ನೂ ಸಹ ಔಷಧವಾಗಿ ಆಹಾರವಾಗಿ ಉಪಯೋಗಿಸುತ್ತಾರೆ.



ನಾಲ್ಕು ದಿನಗಳ ನಂತರ ಹೂಗುಚ್ಛದ ಹೂವುಗಳೆಲ್ಲ ಹೀಗೆ ಉದುರಿ ಬಿದ್ದವು ಎಂಬುದರೊಡನೆ ಈ ಪುರಾಣ ಮುಕ್ತಾಯವಾಯ್ತು.😊


25 Dec 2023

ಹಾರುವ ಓತಿ

 ಹಾರುವ ಓತಿಪೂರ್ಣ ಚಂದ್ರ ತೇಜಸ್ವಿಯವರ ಕರ್ವಾಲೋಕಾದಂಬರಿಯ ಓದುಗರಿಗೆ ಇದರ ಪರಿಚಯವಿರುತ್ತದೆ. ನನಗೂ ಸಹ ಆ ಕಾದಂಬರಿಯನ್ನು ಓದುವಾಗಲೇ ಮೊದಲ ಬಾರಿಗೆ ಇದರ ಬಗ್ಗೆ ತಿಳಿದದ್ದು. ಕಾದಂಬರಿಯಲ್ಲಿ ಹಾರುವ ಓತಿಯ ಹುಡುಕಾಟದಲ್ಲಿರುವವರಿಗೆ ಓತಿ ಕಂಡರೂ, ಕೈಗೆ ಸಿಗದೇ ತಪ್ಪಿಸಿಕೊಂಡು ಅನಂತದಲ್ಲಿ ಲೀನವಾಗುತ್ತದೆ. ಇತ್ತೋ ಇಲ್ಲವೋ ಎಂಬ ಅನುಮಾನ ಹುಟ್ಟಿಸುವಂತೆ ಮಾಯವಾಗುತ್ತದೆ.

ಕಾದಂಬರಿ ಓದಿದ ಮೇಲೆ ಹಾರುವ ಓತಿಯನ್ನು ನೋಡಬೇಕೆಂದು ಅನ್ನಿಸಿದ್ದರೂ ಅದು ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿರುವ ಜೀವಿ, ಅಲ್ಲಿಗೆ ಹೇಗೂ ಹೋಗಿ ಅದನ್ನೆಲ್ಲ ನೋಡಲಾಗುವುದಿಲ್ಲವೆಂದು ತೀರ್ಮಾನಿಸಿ ಸುಮ್ಮನಾಗಿದ್ದೆ. ಹೀಗೆ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂದಿರುವ ಜೀವಿಗಳ ದೊಡ್ಡ ಪಟ್ಟಿಯೇ ಇರುವುದರಿಂದ, ಇದೂ ಒಂದು ಆ ಪಟ್ಟಿಯಲ್ಲಿ ಸೇರಿಹೋಗಿತ್ತು.

ಆದರೆ ಇತ್ತೀಚೆಗೆ ಅನಿರೀಕ್ಷಿತವಾಗಿ ಸಾಗರ ತಾಲ್ಲೂಕಿನ ವರದಹಳ್ಳಿಯ ದುರ್ಗಾಂಬ ದೇವಾಲಯದ ಎದುರಿನ ಅಡಿಕೆ ತೋಟದಲ್ಲಿ ಹಾರುವ ಓತಿಯ ದರ್ಶನವಾಯ್ತು! ಕುಟುಂಬದ ಕಾರ್ಯಕ್ರಮವೊಂದಕ್ಕಾಗಿ ನಾವಲ್ಲಿಗೆ ಹೋಗಿದ್ದೆವು

ನಾನಾಗಿಯೇ ಅದನ್ನೆಂದೂ ನೋಡಲು ಸಾಧ್ಯವಾಗುತ್ತಿರಲಿಲ್ಲವೇನೋ, ಆದರೆ ವಾರಗಟ್ಟಲೆ ಅದರ ಹಿಂದೆ ಬಿದ್ದು ಅವುಗಳ ಫೋಟೋ ತೆಗೆದ ಅನುಭವವಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾದ ಗಣೇಶ್ ಹೆಚ್ ಶಂಕರ್ (ನನ್ನ ಸೋದರಮಾವ) ಅಡಿಕೆ ಮರವೊಂದರಲ್ಲಿ ಕುಳಿತಿದ್ದ ಹಾರುವ ಓತಿಯನ್ನು ಗುರುತಿಸಿ ತೋರಿಸಿದರು

ನೋಡುತ್ತಿದ್ದಂತೆಯೆ ಅದು ತನ್ನ ರೆಕ್ಕೆಯನ್ನು ಬಿಚ್ಚಿ ಒಂದು ಮರದಿಂದ ಇನ್ನೊಂದು ಮರಕ್ಕೆ ತೇಲಿತು. ಅಲ್ಲಿಂದ ಒಂದಷ್ಟು ಮೇಲೇರಿ, ತನ್ನ ಕುತ್ತಿಗೆಯಲ್ಲಿನ ಹಳದಿ ಬಣ್ಣದ ತೊಗಲನ್ನು (dewlap) ಆಗಾಗ ಮುಂದಕ್ಕೆ ಚಾಚುತ್ತಾ ಕುಳಿತಿತ್ತು. ನೋಡುತ್ತಿದ್ದಂತೆಯೆ ಮತ್ತೆ ಅದು ಅಲ್ಲಿಂದಲೂ ಹಾರಿ ನಮ್ಮ ಕಣ್ಣಿಗೆ ಕಾಣಿಸದಂತೆ ಮಾಯವಾಗಿತ್ತು. ಒಳಗಿದ್ದ ನನ್ನ ಗಂಡನನ್ನು ಕರೆದು ತೋರಿಸುವಷ್ಟರಲ್ಲಿ ಅದು ಅಲ್ಲಿರಲಿಲ್ಲ. ಆದರೆ ಅದರ ಚಲನವಲನಗಳ ಸಂಪೂರ್ಣ ಪರಿಚಯವಿದ್ದ ಗಣೇಶಮಾವ ಮತ್ತೆ ತೋಟಕ್ಕೇ ಇಳಿದು ಮತ್ತೊಂದು ಮರದಲ್ಲಿದ್ದ ಓತಿಯನ್ನು ಗುರುತಿಸಿ ತೋರಿಸಿದರು.  ಅಪರೂಪದ ಜೀವಿಯೊಂದನ್ನು ನೋಡಿದ ಖುಷಿಯಿಂದ ಮರಳಿದ್ದಾಯ್ತು.

ಗಣೇಶಮಾವ ಪುತ್ತೂರಿನ ಹತ್ತಿರದ ಹಳ್ಳಿಯೊಂದರ ಅಡಿಕೆ ಮರದಲ್ಲಿ ಅವುಗಳ ಫೋಟೋ ತೆಗೆದ ಅನುಭವಗಳನ್ನು ಹಂಚಿಕೊಂಡರು. ಅವುಗಳು ಹಾರುವಾಗ ಫೋಟೋ ತೆಗೆಬೇಕೆಂಬ ಆಸೆಯಿಂದ ತೋಟದಲ್ಲಿ ದಿನಗಟ್ಟಲೇ ಟ್ರೈಪಾಡ್ ಅಳವಡಿಸಿಕೊಂಡು ಕುಳಿತಿರುತ್ತಿದ್ದೆ ಎನ್ನುತ್ತಾರೆ ಅವರು. “ಬೆಳಗಿನ ಬಿಸಿಲು ಬೀಳುತ್ತಿದ್ದಂತೆ ತಮ್ಮ ಚಟುವಟಿಕೆಯನ್ನು ಅವು ಪ್ರಾರಂಭಿಸುತ್ತವೆ, ಇರುವೆಗಳು ಅವುಗಳ ಪ್ರಿಯವಾದ ಆಹಾರವಾಗಿದ್ದು ಒಂದೆಡೆ ಕುಳಿತು ತಮ್ಮ ಕುತ್ತಿಗೆಯಲ್ಲಿನ ಹಳದಿ ಬಣ್ಣದ  ತೊಗಲನ್ನು ಮುಂಚಾಚುತ್ತಿರುತ್ತವೆ, ಇರುವೆಗಳು ಹತ್ತಿರ ಬಂದಾಗ ನಾಲಿಗೆಯಿಂದ ಹಿಡಿದು ತಿನ್ನುತ್ತವೆ. ಭಕ್ಷಕಗಳಾದ ಹಕ್ಕಿಗಳು, ಮನುಷ್ಯರು ಮೊದಲಾದವುಗಳಿಂದ ಅಪಾಯವಿದೆ ಎನ್ನಿಸಿದರೆ ದೇಹವನ್ನು ಸಾಧ್ಯವಾದಷ್ಟು ಚಪ್ಪಟೆಯಾಗಿಸಿಕೊಂಡು ಮರಕ್ಕೆ ಅಂಟಿಕೊಳ್ಳುತ್ತದೆ! ತಾನಿರುವ ಮರದ ಕಾಂಡಕ್ಕೆ ತಕ್ಕಂತೆ ಬಣ್ಣವನ್ನೂ ಸಹ ಬದಲಾಯಿಸಿಕೊಳ್ಳುತ್ತದೆ. ಅತ್ಯಂತ ವೇಗವಾಗಿ ಅದು ಹಾರುತ್ತದೆಯಾದ್ದರಿಂದ ಫೋಟೋ ತೆಗೆಯುವುದೊಂದು ಸವಾಲು. ನಾನು ಅದರ ಫೋಟೋ ತೆಗೆಯಲೆಂದು ದಿನಗಟ್ಟಲೇ ತಲೆಯೆತ್ತಿ ಮರವನ್ನೇ ನೋಡುತ್ತಾ ಕುಳಿತು ಕತ್ತು ನೋವು ಪ್ರಾರಂಭವಾಗಿತ್ತುಎನ್ನುತ್ತಾರೆ ಗಣೇಶ್. ವರದಹಳ್ಳಿಯ ತೋಟದಲ್ಲಿ ಕಾಣಿಸಿದೆಯೆಂದರೆ ಇಲ್ಲಿನ ಸುತ್ತಮುತ್ತಲ ತೋಟಗಳೂ ಸಹ ಅವುಗಳ ವಾಸಸ್ಥಾನಗಳಾಗಿವೆ ಎಂಬುದು ಗಣೇಶರ ಅಭಿಪ್ರಾಯ.

 ಎಲ್ಲೆಡೆ ಕಾಣಸಿಗುವ ಸಾಮಾನ್ಯ ಓತಿಕ್ಯಾತಗಳಂತೆಯೆ ಇವೂ ಕಾಣಿಸಿದರು, ಗಾತ್ರದಲ್ಲಿ ಚಿಕ್ಕದಾಗಿವೆ ಮತ್ತು  ಸಂಪೂರ್ಣವಾಗಿ ಮರವಾಸಿಯಾಗಿವೆ. ಮರದಲ್ಲಿ ವಾಸಿಸುವುದಕ್ಕೆ ಸಹಕಾರಿಯಾಗಿ ದೈಹಿಕವಾಗಿ ಇವುಗಳಲ್ಲಿ ಕೆಲವೊಂದು ವಿಶೇಷ ಮಾರ್ಪಾಟುಗಳಿವೆ. ಬಾವಲಿಗಳಂತೆ ಇದರ ದೇಹದ ಚರ್ಮವು,  ಮುಂದಿನ ಕಾಲಿನಿಂದ ಹಿಂದಿನ ಕಾಲಿನವರೆಗೂ ಹೊರಚಾಚಿದಂತಿದೆ. ಪೆಟಾಜಿಯಂ ಎಂಬ ಹೆಸರಿನ ಈ ಚರ್ಮದ ರೆಕ್ಕೆಯು ಓತಿಯು ಮರದಿಂದ ಮರಕ್ಕೆ ತೇಲಿಹೋಗಲು ಸಹಕಾರಿಯಾಗಿದೆ.  ಹಕ್ಕಿಗಳಂತೆ ಇವು ರೆಕ್ಕೆಯನ್ನು ಬಡಿದು ಹಾರುವುದಿಲ್ಲ, ಪೆಟಾಜಿಯಂ ಸಹಾಯದಿಂದ ಎತ್ತರದ ಸ್ಥಳದಿಂದ ತೇಲಿ ಇನ್ನೊಂದು ಮರದ ಕೆಳಭಾಗಕ್ಕೆ ಬಂದು (ಗ್ಲೈಡಿಂಗ್) ಕುಳಿತುಕೊಳ್ಳುತ್ತವೆ, ಮತ್ತು ತಕ್ಷಣ ವೇಗವಾಗಿ ನಡೆದು ಮರವೇರಿ ಎತ್ತರದ ಸ್ಥಳದಲ್ಲೇ ಇರುತ್ತವೆ. . ದಕ್ಷಿಣ ಏಷ್ಯಾದ ಹಲವಾರು ದೇಶಗಳು ಇವುಗಳ ಆವಾಸಸ್ಥಾನಗಳಾಗಿವೆ. ನಮ್ಮ ದೇಶದ ಪಶ್ಚಿಮಘಟ್ಟಗಳಲ್ಲಿರುವ ಮಳೆಕಾಡುಗಳಲ್ಲಷ್ಟೇ ಅಲ್ಲದೆ, ಇಲ್ಲಿನ ಅಡಿಕೆ ತೋಟಗಳಲ್ಲಿ, ತೆಂಗು, ಸಿಲ್ವರ್ ಓಕ್ ಮರಗಳಲ್ಲಿ, ನೆಡುತೋಪುಗಳಲ್ಲಿ ಇವು ಕಾಣಿಸುತ್ತವೆ. ಗಾತ್ರದಲ್ಲಿ ಗಂಡು ಓತಿಯು ಹೆಣ್ಣಿಗಿಂತ ಚಿಕ್ಕದು

ತನ್ನ ವಾಸಸ್ಥಾನವನ್ನೇ ಹೋಲುವ ಮೈಬಣ್ಣ ಅಂದರೆ ಮರದ ಮೇಲ್ಮೈ ರೀತಿಯಲ್ಲೇ ಕಾಣಿಸುವ ಮೈಬಣ್ಣ ಇವುಗಳದ್ದು. ಮರದಿಂದ ಮರಕ್ಕೆ ತೇಲಿ ಬರುವಾಗ ಒಣಗಿದ ಎಲೆಯೊಂದು ಬೀಳುತ್ತಿರುವಂತೆ ಭ್ರಮೆ ಹುಟ್ಟಿಸುತ್ತದೆ. ಅಲ್ಲದೆ ಅತ್ಯಂತ ವೇಗವಾದ ಚಲನೆ, ಅಡಗುವ ಸ್ವಭಾವಗಳಿಂದಾಗಿ ಇವುಗಳು ಮಾನವನ ಗಮನಕ್ಕೆ ಬರುವುದೇ ಅಪರೂಪ.

ಗಂಡು ಓತಿಗಳು ಒಂದೆರಡು ಮರಗಳನ್ನು ಒಳಗೊಂಡಿರುವ ತಮ್ಮದೇ ವಾಸಸ್ಥಾನ್ನು ಗುರುತಿಸಿಕೊಳ್ಳುತ್ತವೆ ಮತ್ತು ಅಲ್ಲಿಗೆ  ಬೇರೆ ಗಂಡು ಓತಿಗಳು ಪ್ರವೇಶಿಸಿದರೆ ಉಗ್ರವಾಗಿ ವಿರೋಧಿಸಿ, ಹೋರಾಡಿ ಓಡಿಸುತ್ತವೆ. ಹೆಣ್ಣು ಓತಿಗಳ ಪ್ರವೇಶಕ್ಕೆ ಹೆಚ್ಚು ವಿರೋಧವಿರುವುದಿಲ್ಲವಂತೆ! ಇವು ಕೀಟಾಹಾರಿಗಳು. ಇರುವೆ, ಗೆದ್ದಲು ಮೊದಲಾದ ಕೀಟಗಳನ್ನು ಹಿಡಿದು ತಿನ್ನುತ್ತವೆಹಾಗಾಗಿ ಇವು ಸ್ವಾಭಾವಿಕ ಕೀಟನಾಶಕಗಳೂ ಹೌದು!

ನಮ್ಮ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ Draco dussumieri ಎಂಬ ಪ್ರಬೇಧದ ಹಾರುವ ಓತಿಗಳಿವೆ.  ಸಂತಾನೋತ್ಪತ್ತಿ ಕಾಲದಲ್ಲಿ, ಹೆಣ್ಣುಗಳನ್ನು ಆಕರ್ಷಿಸಲು ಗಂಡು ತನ್ನ ದೇಹವನ್ನು ಹಿಗ್ಗಿಸಿಕೊಂಡು, ಮುಂಗಾಲುಗಳಿಂದ ಪುಶ್ ಅಪ್ಸ್ ಮಾಡುವುದು, ತನ್ನ ಕುತ್ತಿಗೆಯಲ್ಲಿನ ಹಳದಿ ಬಣ್ಣದ ತೊಗಲನ್ನು (dewlap)  ಹಿಗ್ಗಿಸುತ್ತ ಗಾಢ ಬಣ್ಣವನ್ನು ಪ್ರತಿಫಲಿಸುವುದು ಮೊದಲಾದ ನಡುವಳಿಕೆಗಳನ್ನು ತೋರುತ್ತದೆ ಎಂದು ಅಧ್ಯಯನವೊಂದು ಪ್ರತಿಪಾದಿಸುತ್ತದೆ. ತಾನಿರುವ ಮರದಿಂದ ಕೆಳಗಿಳಿಯುವ ಹೆಣ್ಣು ತನ್ನ ತಲೆಯಿಂದ ಮಣ್ಣಿನಲ್ಲಿ ಗುಳಿಯನ್ನು ತೋಡಿ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮುಚ್ಚುತ್ತದೆ. ಒಂದು ದಿನದವರೆಗೆ ಸುತ್ತಮುತ್ತ ಗಮನಿಸುತ್ತದೆ. ನಂತರ ಮತ್ತೆ ಮರವೇರುತ್ತದೆ. ಮೊಟ್ಟೆಗಳು ತಿಂಗಳ ನಂತರ ಮರಿಯಾಗಿ ಹೊರಬಂದು ಹತ್ತಿರದ ಮರವೇರುತ್ತವೆ. ಮೊಟ್ಟೆಯಿಡುವಾಗ ಬಿಟ್ಟರೆ ಬೇರೆ ಸಮಯದಲ್ಲಿ ಇವು ನೆಲಕ್ಕಿಳಿಯುವುದಿಲ್ಲ.

ತಮ್ಮ ಜೀವಿತಾವಧಿಯನ್ನೆಲ್ಲ ಮರದ ಮೇಲೇ ಕಳೆಯುವ ಇವುಗಳು ಮಾನವರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಹಾಗಾಗಿ ಅವುಗಳ ಬಗೆಗೆ ನಮಗೆ ತಿಳಿದಿರುವುದೂ ಅತ್ಯಲ್ಪಒಂದುಕಾಲದಲ್ಲಿ ಹಾರುವ ಓತಿಗಳು ಇವೆಯೆಂಬುದೇ ಹಲವಾರು ದೇಶದ ವಿಜ್ಞಾನಿಗಳಿಗೆ ಅನುಮಾನಾಸ್ಪದವಾಗಿತ್ತು. ಆದರೆ ಅತ್ಯಾಧುನಿಕ ಕ್ಯಾಮರಾಗಳ ಬಳಕೆಯಿಂದ ಇತ್ತೀಚೆಗಿನ ವರ್ಷಗಳಲ್ಲಿ ಅವುಗಳ ಚಲನವಲನಗಳು ದಾಖಲೆಯಾಗಿರುವುದರಿಂದಾಗಿ ಅವುಗಳ ಬಗೆಗೆ ಹೆಚ್ಚಿನ ಅಧ್ಯಯನ ಸಾಧ್ಯವಾಗುತ್ತಿದೆ.

ನಮ್ಮ ದೇಶದಲ್ಲಿ ಇವುಗಳ ಆವಾಸಸ್ಥಾನವಾದ ಮಳೆಕಾಡುಗಳ ವಿಸ್ತೀರ್ಣ ಕ್ಷೀಣಿಸುತ್ತಿದೆಯಾದರೂ ಅವುಗಳು ಕಾಡಿಗೆ ಹೊಂದಿಕೊಂಡಂತಿರುವ ನೆಡುತೋಪುಗಳಲ್ಲಿ ಸಹಾ ನೆಲೆಯನ್ನು ಕಂಡುಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಜೀವವಿಜ್ಞಾನಿಗಳು ಹೇಳುತ್ತಾರೆ.  

ಇಂತಹ ಅಪರೂಪದ ಜೀವಿಯೊಂದನ್ನು ಉಳಿಸಿಕೊಳ್ಳುವ ಹೊಣೆ ನಮ್ಮದು.

 

 https://www.naturelyrics.com/pages/search_image_library.php?keyword_tokens=dracಈ ಲಿಂಕ್‍ನಲ್ಲಿ ಗಣೇಶರವರು ತೆಗೆದ ಹಾರುವ ಓತಿಯ ಫೋಟೋಗಳಿವೆ.

ಮಾಹಿತಿ ಕೃಪೆಗಣೇಶ್ ಹೆಚ್ ಶಂಕರ್,

https://animaldiversity.org

https://www.britannica.com

https://en.wikipedia.org/wiki/Draco_dussumieri

https://www.theanimalfacts.com

18 Dec 2023

ವ್ಯಾಕ್ಸ್ ರೋಸ್ ಕ್ಯಾಕ್ಟಸ್ (Pereskia bleo)

ನಮ್ಮ ಬೆಂಗಳೂರಿನ ಲಾಲ್ಬಾಗ್ನಲ್ಲಿ ಅಲೆಯುವುದೆಂದರೆ ನನಗೆ ಬಹಳ ಇಷ್ಟದ ಸಂಗತಿ. ಅಲ್ಲಿನ ದೇಶವಿದೇಶಗಳ ಸಸ್ಯಗಳು, ದೊಡ್ಡ ದೊಡ್ಡ ಬೃಹದಾಕಾರದ ಮರಗಳು, ವಿಚಿತ್ರಾಕಾರದ ಹೂವು ಹಣ್ಣು ಬಿಡುವ ಮರಗಳು ಎಲ್ಲವನ್ನೂ ನೋಡುತ್ತಾ ಕಳೆದುಹೋಗಬಹುದು. ಪ್ರತಿಯೊಂದು ಋತುವಿನಲ್ಲೂ ಇಲ್ಲಿಯ ಸೌಂದರ್ಯ ಬದಲಾಗುತ್ತಿರುತ್ತದೆ. ವರ್ಷದ ಎಲ್ಲಾ ಋತುಗಳಲ್ಲೂ ಒಂದಿಲ್ಲೊಂದು ಸಸ್ಯಗಳು ಹೂವು, ಹಣ್ಣು, ಚಿಗುರುಗಳಿಂದ ತುಂಬಿಕೊಂಡಿರುತ್ತವೆಯಾದ್ದರಿಂದ ಹೋದವರಿಗೆ ಯಾವತ್ತೂ ನಿರಾಸೆಯಾಗುವುದಿಲ್ಲ. 
ಇತ್ತೀಚೆಗೊಮ್ಮೆ ಅಲ್ಲಿ ಅಲೆಯುತ್ತಿದ್ದಾಗ ಚಿಕ್ಕ ಪೊದೆಯಂತಿದ್ದ ಸಸ್ಯವೊಂದು ಗಮನ ಸೆಳೆಯಿತು. ದಟ್ಟ ಹಸಿರು ಬಣ್ಣದ ಎಲೆಗಳ ಜೊತೆಜೊತೆಗೇ ಅಷ್ಟೇ ಸಂಖ್ಯೆಯಲ್ಲಿ ಗಾಢ ಹಳದಿ ಬಣ್ಣದ ಬಟ್ಟಲಿನಾಕಾರದ ಹಣ್ಣುಗಳಿದ್ದವು. ಹತ್ತಿರ ಹೋಗಿ ನೋಡಿದಾಗ ಗಿಡದ ಕಾಂಡದಲ್ಲಿ ಚೂಪಾದ ಉದ್ದನೆಯ ಮುಳ್ಳುಗಳಿದ್ದವು. ಇದರ ಸಾಮಾನ್ಯ ನಾಮ ವ್ಯಾಕ್ಸ್ ರೋಸ್ ಕ್ಯಾಕ್ಟಸ್ ಹಾಗೂ ವೈಜ್ಞಾನಿಕ ನಾಮ Pereskia bleo. 
ಮಧ್ಯ ಅಮೇರಿಕಾ ಮೂಲದ ಈ ಕ್ಯಾಕ್ಟಸ್ ಬೇರೆ ಸಾಮಾನ್ಯ ಕ್ಯಾಕ್ಟಸ್ಗಳಂತಿಲ್ಲ. ಮಾರ್ಪಾಟಾಗಿ ಕಾಂಡದಂತೆ ಕಾಣಿಸುವ ದಪ್ಪ ಎಲೆಗಳು ಬೇರೆ ಕ್ಯಾಕ್ಟಸ್ಗಳ ಲಕ್ಷಣ. ಇದರ ಎಲೆಗಳು ಸಾಮಾನ್ಯ ರೂಪದಲ್ಲಿಯೇ ಇವೆ. ಎಲೆಗಳ ಮೇಲೆ ಮೇಣವನ್ನು ಸವರಿದಂತೆ ಹೊಳಪಾಗಿದೆ. ಕಾಂಡದಲ್ಲಿ ಕ್ಯಾಕ್ಟಸ್ಗಳಲ್ಲಿ ಇರುವಂತೆಯೆ ಚೂಪಾದ ಉದ್ದನೆಯ ಮುಳ್ಳುಗಳಿವೆ. ಕಿತ್ತಳೆ ಕೆಂಪು ಬಣ್ಣದ ಗುಲಾಬಿಯನ್ನು ಹೋಲುವ ಸುಂದರವಾದ ಹೂವುಗಳಿವೆ. ಆದ್ದರಿಂದಲೆ ಇದರ ಸಾಮಾನ್ಯ ನಾಮಧೇಯ ವ್ಯಾಕ್ಸ್ ರೋಸ್ ಕ್ಯಾಕ್ಟಸ್ . 
ಹಣ್ಣಂತೂ ಅದೆಷ್ಟು ವಿಚಿತ್ರವಾಗಿದೆಯೆಂದರೆ ಐಸ್ಕ್ರೀಂ ಕೋನ್ ನೆನಪಿಸುವ ಆಕಾರ, ಮೇಲ್ಭಾಗದಲ್ಲಿ ಮುಚ್ಚಳವೊಂದನ್ನು ಸೀಲ್ ಮಾಡಿದಂತೆ, ಹಣ್ಣೊಂದನ್ನು ಕತ್ತರಿಸಿ ಅರ್ಧ ಹಣ್ಣನ್ನು ಸೀಲ್ ಮಾಡಿದಂತೆಲ್ಲ ಕಾಣಿಸುವಂತಿದೆ. ಮಧ್ಯೆ ಕತ್ತರಿಸಿದರೆ ತ್ರಿಕೋನಾಕಾರದಲ್ಲಿ ಕಾಣಿಸುವ ಒಳಭಾಗ ರಸಭರಿತವಾದ ತಿರುಳಿಂದ ಕೂಡಿದ್ದು, ಕಪ್ಪು ಬೀಜಗಳು ತ್ರಿಕೋನಾಕಾರದಲ್ಲಿ ಜೋಡಿಸಲ್ಪಟ್ಟಿರುವುದು ಕಾಣಿಸುತ್ತದೆ. ಹಣ್ಣು ಹುಳಿ ರುಚಿಯನ್ನು ಹೊಂದಿದ್ದು, ಸ್ಟಾರ್ ಫ್ರುಟ್ ಹಣ್ಣಿನ ರುಚಿಯನ್ನು ನೆನೆಪಿಸುತ್ತದೆ.

 ಇದರ ಎಲೆಗಳ ಟೀ ತಯಾರಿಸಿ ಕುಡಿಯುತ್ತಾರೆ. ಬಹಳಷ್ಟು ಔಷಧೀಯ ಗುಣವುಳ್ಳ ಹಣ್ಣನ್ನು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ಉಪಯೋಗಿಸಲಾಗುತ್ತದೆ ಎಂದು ಗೂಗಲಮ್ಮ ತಿಳಿಸಿದಳು. ಕ್ಯಾನ್ಸರ್ ನಿರೋಧಕ ಶಕ್ತಿ ಇದಕ್ಕಿಯೆಂದೂ ಹೇಳಲಾಗುತ್ತದೆ. 
ಎಲೆಗಳು, ಹೂವು, ಹಣ್ಣು ಎಲ್ಲವೂ ಸುಂದರವಾಗಿರುವುದರಿಂದಲೂ, ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಲ್ಲುದಾದ್ದರಿಂದಲೂ, ಹೆಚ್ಚಿನ ಆರೈಕೆ ಬೇಡವಾದ್ದರಿಂದಲೂ, ಕೈತೋಟದಲ್ಲಿ ಬೆಳೆಯುವ ಸಸ್ಯವಾಗಿ ಇದು ಜನಪ್ರಿಯವಂತೆ. ಬಿಸಿಲು ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳಯುತ್ತದೆಯಾದ್ದರಿಂದ ಉಷ್ಣವಲಯದ ದೇಶಗಳಲ್ಲಿ ಬೆಳೆಸುವುದು ಸುಲಭ.

10 Dec 2023

ಚಳಿಗಾಲಕ್ಕೂ ಮೊದಲೇ ವಸಂತನ ಆಗಮನವೆ?

 ನಾವು ವಾಕಿಂಗ್ ಹೋಗುವ ದಾರಿಯಲ್ಲಿ ಸಾಲಾಗಿ ಹೊಂಗೆ ಮರಗಳಿವೆ.  ಪ್ರತಿದಿನ ಆ ಮರಗಳನ್ನು ನೋಡುತ್ತಾ ಹೋಗುವುದು ಅಭ್ಯಾಸ.

ಹೊಂಗೆ ಮರ,(Pongamia pinnata) ಚಪ್ಪರದಂತೆ ಹರಡಿಕೊಂಡು ಬೆಳೆಯುವ ಮಧ್ಯಮ ಗಾತ್ರದ ಚೆಂದದ ಮರ. ಅದರ ದಟ್ಟ ಎಲೆಗಳು ಬಿರುಬಿಸಿಲಲ್ಲಿ ತಂಪಾದ ನೆರಳು ಕೊಡುತ್ತವೆ. ಕಾಲಕ್ಕೆ ತಕ್ಕಂತೆ ಬದಲಾಗುವ ಚಿಗುರೆಲೆಗಳ ತೆಳು ಹಸಿರು, ಬಲಿತ ಎಲೆಗಳ ದಟ್ಟ ಹಸಿರು ಬಣ್ಣವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಸಂತಕಾಲದಲ್ಲಿ ಅಂದರೆ ಸುಮಾರು ಮಾರ್ಚ್-ಎಪ್ರಿಲ್ ತಿಂಗಳಿನಲ್ಲಂತೂ ತೆಳು ಗುಲಾಬಿ ಬಣ್ಣದ ಹೂಗೊಂಚಲುಗಳು ಮರದ ತುಂಬ ತುಂಬಿಕೊಂಡು ಸೌಂದರ್ಯ ಇಮ್ಮಡಿಸುತ್ತದೆ.  (ಕೆಳಗೆ ರಸ್ತೆಯ ಮೇಲೆ ರಾಶಿ ರಾಶಿಯಾಗಿ ಉದುರುವ ಮೊಗ್ಗು, ಹೂದಳಗಳು ಮತ್ತು ಒಣ ಎಲೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಈ ಮರಗಳು ದೊಡ್ಡ ತಲೆನೋವಾಗುತ್ತವೆ ಎಂಬುದೂ ಅಷ್ಟೇ ಸತ್ಯ.) ಸುತ್ತಲಿನ ಪರಿಸರಕ್ಕೆ ನರುಗಂಪು ಸೂಸುವ ಹೂವುಗಳು, ಅದಕ್ಕೆ ಆಕರ್ಷಿತವಾಗಿ ಹೂವನ್ನು ಮುತ್ತುವ ಜೇನು ನೊಣಗಳು, ದುಂಬಿಗಳು, ಹೀಗೆ ಈ ಮರಗಳನ್ನು ನೋಡುತ್ತಿದ್ದರೆ ಸಮಯ ಸರಿಯುವುದು ತಿಳಿಯುವುದಿಲ್ಲ.

Pongamia pinnata (ಹೊಂಗೆ ಮರ)

ಉದುರಿದ ಹೊಂಗೆ ಹೂವುಗಳು
ಹೊಂಗೆ ಹೂವುಗಳು

ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಬೀದಿಯ ಕೊನೆಯಲ್ಲಿರುವ ಮರವೊಂದು ಹೂವುಗಳನ್ನು ಅರಳಿಸಿಕೊಂಡು ನಿಂತಿತ್ತು.  ವಾಕಿಂಗ್ ಹೋಗುವಾಗ, ಬರುವಾಗಲೆಲ್ಲ ಇದಕ್ಕೇನಾಗಿರಬಹುದೆಂಬ ಕುತೂಹಲ ನನಗೆ. ಬೇರಾವ ಮರಗಳೂ ಇನ್ನೂ ಹೂ ಬಿಟ್ಟಿರಲಿಲ್ಲ. ಮಾರ್ಚ- ಎಪ್ರಿಲ್ ತಿಂಗಳಲ್ಲಿ ಬಿಡಬೇಕಾಗಿರುವ ಹೂವುಗಳನ್ನು ಈಗ ಬಿಟ್ಟಿದೆಯಲ್ಲ ಈ ಮರ, ಈ ಸೆಕೆ ನೋಡಿ ಮಾರ್ಚ ತಿಂಗಳು ಬಂತು ಅಂತ ಅಂದುಕೊಂಡುಬಿಟ್ಟಿದೆಯಲ್ಲ ಪೆದ್ದು ಎಂದು ಗಂಡನಲ್ಲಿ ಹೇಳಿಕೊಂಡು ನಕ್ಕಿದ್ದೂ ಆಯಿತು. ನಂತರ ಹದಿನೈದು ದಿನಗಳಲ್ಲಿ ಆ ಬೀದಿಯ ಎಲ್ಲ ಹೊಂಗೇ ಮರಗಳಲ್ಲೂ ಹೂವರಳಿದ್ದವು! ಈಗ ಆ ಮರ “ಯಾರಮ್ಮ ಪೆದ್ದಿ” ಎಂದು ನನ್ನನ್ನೇ ಅಣಕಿಸಿದಂತಾಗುತ್ತಿತ್ತು. ಈಗ ಡಿಸೆಂಬರ್ ಮೊದಲವಾರದಲ್ಲಿ ನೋಡಿದರೆ ರಿಂಗ್ ರೋಡಿನಲ್ಲಿರುವ ಟಬೂಬಿಯ ಮರಗಳೆಲ್ಲವೂ ಹೂವರಳಿಸಿಕೊಂಡು ನಿಂತಿವೆ!! ಈ ಮರಗಳೂ ಕೂಡ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಹೂ ಬಿಡುತ್ತವೆ!

ಈ ವರ್ಷ ವಾತಾವರಣ ಅದೆಷ್ಟು ಬದಲಾವಣೆಯಾಗಿದೆ ಎಂಬುದಕ್ಕೆ ಸಾಕ್ಷಿ ಈ ಮರಗಳು. ಅತೀ ಕಡಿಮೆ ಮಳೆಯಾಗಿದೆ, ಚಳಿ ಇರಬೇಕಾದ ಕಾಲದಲ್ಲಿ ಸೆಕೆ ಹೆಚ್ಚಿದೆ. ಇದರ ಪರಿಣಾಮ ಈ ಮರಗಳ ಮೇಲಾಗಿದೆ. ಈ ಬದಲಾವಣೆಗಳು ನಮ್ಮ ಮೇಲೆ ಇನ್ನೆಷ್ಟು ಪರಿಣಾಮ ಬೀರಬಹುದು? ಕಾಲವೇ ಹೇಳಬೇಕು.

Tabebuia rosea

(ಈಗೊಂದು ಹತ್ತು ವರ್ಷಗಳ ಹಿಂದೆ ಸುಮಾರು ಸೆಪ್ಟೆಂಬರ್-ಅಕ್ಟೋಬರ್ ಸಮಯಕ್ಕೆ ಆ ಸಾಲು ಮರಗಳಲ್ಲಿ ಕಾಗೆಗಳು ಗೂಡು ಕಟ್ಟುವುದು, ಮೊಟ್ಟೆ ಇಡುವುದು ಮೊದಲಾದ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದವು. ಒಂದೆರಡು ತಿಂಗಳಲ್ಲಿ  ಮರಿಗಳ ಕಲವರವವು, ಶಿವರುದ್ರಪ್ಪನವರ “ಹಕ್ಕಿ ಗಿಲಕಿ” ಯೆಂಬ ಸಾಲನ್ನು ನೆನೆಪಿಸುವಂತೆ ಕೇಳಿಸುತ್ತಿತ್ತು. ಈಗ ಐದು ವರ್ಷಗಳಿಂದೀಚೆಗೆ ಕಾಗೆಗಳು ಇಲ್ಲಿ ಗೂಡು ಕಟ್ಟುತ್ತಿಲ್ಲ. ಪಕ್ಕದಲ್ಲೇ ಇರುವ ರಿಂಗ್ ರೋಡಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದೇ ಕಾರಣವಿರಬಹುದೆ ಗೊತ್ತಿಲ್ಲ.) 

2 Aug 2023

ಯೆರ್ಕಾಡ್ ಎಂಬ ಊರೂ, ಮುದವಟ್ಟುಕಲ್ ಕಿಲಂಗುವೂ

 ಅಪರೂಪಕ್ಕೆ ಕೆಲದಿನಗಳ ರಜೆ ತೆಗೆದುಕೊಂಡಿದ್ದ ಮಗಳು, ಮನೆಗೆ ಬಂದಿದ್ದಳುಊರಿನಿಂದ ಅಜ್ಜ, ಅಜ್ಜಿಯನ್ನೂ ಕರೆಸಿಕೊಂಡಿದ್ದಳು. ಮಗಳು ರಜಾ ಹಾಕಿದ ಖುಷಿಗೆ ಅವಳ ಅಪ್ಪ ಎರಡು ದಿನಗಳ ಮಟ್ಟಿಗೆ ಎರ್ಕಾಡ್ ಗೆ ಪ್ರವಾಸ ಹೋಗುವ ಪ್ಲಾನ್ ಹಾಕಿದರು.

ತಮಿಳುನಾಡಿನ ಸೇಲಂ ಎಂಬ ಉರಿಬಿಸಿಲಿನ, ಉರಿ ಸೆಕೆಯ ಊರಿಗೆ ಕೇವಲ 30 ಕಿಲೋಮೀಟರ್ ದೂರದಲ್ಲಿರುವ, ಸಮುದ್ರಮಟ್ಟದಿಂದ ಸುಮಾರು 4900 ಅಡಿಗಳಷ್ಟು ಎತ್ತರದ ತಂಪಾದ ಬೆಟ್ಟಗುಡ್ಡಗಳ ಊರು ಎರ್ಕಾಡು. ಇದು ಸೆರ್ವರಾಯನ್ ಅಥವಾ ಶೆವರಾಯ್ ಬೆಟ್ಟಸಾಲಿನಲ್ಲಿದೆ.

 


ತಮಿಳುನಾಡಿನ ಎಲ್ಲ ಹಿಲ್ಸ್ ಸ್ಟೇಷನ್ ತರಹವೇ ಪ್ರವಾಸೋದ್ಯಮ ಚೆನ್ನಾಗಿ ಬೆಳೆದಿರುವ ಊರು
. ಹಲವಾರು ವ್ಯೂ ಪಾಯಿಂಟ್ಗಳು, ದೋಣಿ ವಿಹಾರ ವ್ಯವಸ್ಥೆ ಇರುವ ಒಂದು ಕೆರೆ, ಸಸ್ಯವೈವಿಧ್ಯಗಳಿರುವ ಬಟಾನಿಕಲ್ ಗಾರ್ಡನ್, ಗುಲಾಬಿ ತೋಟ, ಮೊದಲಾದವುಗಳು ಪ್ರವಾಸಿಗಳನ್ನು ಸೆಳೆವ ತಾಣಗಳು. ಈ ಬೆಟ್ಟಸಾಲಿನ ಅತ್ಯಂತ ಎತ್ತರದ ಗುಡ್ಡದ ಮೇಲೆ, ಪುಟ್ಟ ಗುಹೆಯೊಂದರಲ್ಲಿ ಇರುವ ಸೆರ್ವರಾಯನ್ ದೇಗುಲವು ಅತ್ಯಂತ ಪುರಾತನವಾದದ್ದೆಂದು ಹೇಳುತ್ತಾರೆ.

ಸುಮಾರು ನಲವತ್ತು ಸಾವಿರ ಜನಸಂಖ್ಯೆ ಯೆರ್ಕಾಡ್ ತಾಲ್ಲೂಕಿನಲ್ಲಿದೆಯೆಂದು ವಿಕಿಪಿಡಿಯಾ ಹೇಳುತ್ತದೆ.


ಎಲ್ಲ ಪ್ರವಾಸಿ ತಾಣಗಳಲ್ಲಿ ಇರುವಂತೆಯೆ
, ಇಲ್ಲಿನ ಎಲ್ಲ ಪ್ರೇಕ್ಷಣೀಯ ತಾಣಗಳಲ್ಲಿಯೂ ಸಾಲು ಸಾಲು ಅಂಗಡಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಸ್ಥಳೀಯ ಹಣ್ಣುತರಕಾರಿಗಳ ಅಂಗಡಿಗಳು, ಕೀ ಚೈನ್, ಹ್ಯಾಟ್, ಬಳೆ, ಕ್ಲಿಪ್, ಮಕ್ಕಳ ಆಟಿಕೆಗಳು ಇತ್ಯಾದಿಗಳನ್ನು ಮಾರುವ ಅಂಗಡಿಗಳು, ಬೋಂಡ, ಬಜ್ಜಿ, ಮಂಡಕ್ಕಿ, ಕೂಲ್ ಡ್ರಿಂಕ್ಸ್, ಜೋಳ ಇತ್ಯಾದಿ ತಿನಿಸುಗಳನ್ನು ಮಾರುವ ಅಂಗಡಿಗಳು ಹೀಗೆ ಇಲ್ಲಿ ಎಲ್ಲವೂ ಲಭ್ಯ.

ಈ ಅಂಗಡಿ ಸಾಲುಗಳಲ್ಲಿ ಅಲೆಯುತ್ತಿರುವಾಗ, ಹಲವಾರು ಅಂಗಡಿಗಳ ಬಾಗಿಲ ಬಳಿ ಬುಟ್ಟಿಯೊಂದರಲ್ಲಿ ಇಟ್ಟಿದ್ದ ವಸ್ತುವೊಂದು ತನ್ನ ವಿಚಿತ್ರ ಆಕಾರದಿಂದ ಗಮನ ಸೆಳೆಯಿತು. ಯಾವುದೋ ಬೇರು, ಗಡ್ಡೆಗಳ ಜಾತಿಗೆ ಸೇರಿದ ತರಕಾರಿಯಿರಬೇಕೆಂದು ಅನಿಸಿದರೂ ರೋಮ ಸಹಿತವಾದ ಕುರಿಯ ಕಾಲಿನಂತಿದ್ದ ಅದರ ಆಕಾರ ನೋಡಿದರೆ ಕುತೂಹಲ ಕೆರಳುತ್ತಿತ್ತು. ಅದೇನೆಂದು ವಿಚಾರಿಸಿದಾಗ, ತಮಿಳು ಸ್ವಲ್ಪ ಮಟ್ಟಿಗೆ  ಅರ್ಥವಾದರೂ ಅವರು ಅದಕ್ಕೆ ಹೇಳುತ್ತಿದ್ದ ಹೆಸರಿನ ಉಚ್ಚಾರಣೆ ಸ್ಪಷ್ಟವಾಗಲೇ ಇಲ್ಲ.


ಅದೊಂದು ಅತ್ಯಂತ ಉಪಯುಕ್ತ ಔಷಧೀಯ ಗುಣವುಳ್ಳ ವಸ್ತುವೆಂದೂ ಅದರ ಸೂಪ್ ತಯಾರಿಸಿ ಕುಡಿದರೆ, ಕೈಕಾಲು ಗಂಟುಗಳ ನೋವು ಮಾಯವಾಗುತ್ತದೆಂದೂ ಅವರ ಮಾತಿನಿಂದ ಅರ್ಥವಾಯ್ತು. ಕೆಲವರಂತೂ ಅಲ್ಲೇ ಪುಟ್ಟ ಕೆಂಡದೊಲೆಯಲ್ಲಿ ಸೂಪ್ ತಯಾರಿಸಿ ಮಾರುತ್ತಿದ್ದರು ಕೂಡ. ರುಚಿ ನೋಡುವ ಆಸೆಯಾದರೂ ಬೀದಿ ಬದಿಯ ಆಹಾರದ ಬಗೆಗೆ ಸ್ವಲ್ಪ ಭಯವಿರುವುದರಿಂದ ಕುಡಿಯುವ ಸಾಹಸ ಮಾಡಲಿಲ್ಲ.

ಕೊನೆಗೆ ಗೂಗಲಮ್ಮ ಅದರ ವಿವರಗಳನ್ನು ತಿಳಿಸಿದಳು. ಗೂಗಲಮ್ಮನ ಪ್ರಕಾರ ಆ ವಸ್ತುಮುದವಟ್ಟುಕಲ್ ಕಿಲಂಗೋ”. ಇದು ದೊಡ್ಡದೊಡ್ಡ ಮರಗಳ ಮೇಲೆ ಬೆಳೆಯುವ ಫರ್ನ್ ಜಾತಿಗೆ ಸೇರಿದ ಓಕ್ ಲೀಫ್ ಫರ್ನ್ (Aglaomorpha quercifolia )  ಸಸ್ಯದ ರೈಜೋ಼ಮ್ (ಗಡ್ಡೆ). ನಮ್ಮ ಮಲೆನಾಡಿನಲ್ಲಿ ಕೂಡ ಮಾವಿನ ಮರ, ಹಲಸಿನ ಮರ ಮೊದಲಾದ ದೊಡ್ಡ ದೊಡ್ಡ ಹಳೆಯ ಮರಗಳ ಮೇಲೆ ಈ ಸಸ್ಯ ಬೆಳೆಯುತ್ತದೆ. “ಬಂದಳಿಕೆಎಂದು ಕರೆಯಲಾಗುವ ಇದರ ಔಷಧೀಯ ಉಪಯೋಗ ನಮ್ಮ ಕಡೆಗೆ ತಿಳಿದಿಲ್ಲವೆನ್ನಿಸುತ್ತದೆ.






ಎಪಿಫೈಟ್‍ ಅಂದರೆ ಬೇರೆ ಸಸ್ಯಗಳ ಮೇಲೆ ಬೆಳೆಯುವ ಈ ಫರ್ನ್ ಗಿಡಗಳಲ್ಲಿ ರೈಜೋ಼ಮ್ ಎಂದು ಕರೆಯಲಾಗುವ ಬೇರು, ಮತ್ತು ಎರಡು ವಿಧದ ಎಲೆಗಳಂತಹ ರಚನೆಯಾದ ಫ್ರಾಂಡ್‍ಗಳು ಇರುತ್ತವೆ. ಒಂದು ರೀತಿಯ ಎಲೆಗಳ ಗುಚ್ಛ ಮರದ ಕಾಂಡಗಳಿಗೆ ತಾಗಿದಂತೆ ಪುಟಾಣಿ ಬುಟ್ಟಿಯಾಕಾರದಲ್ಲಿರುತ್ತವೆ. ಒಣ ಎಲೆಗಳಂತೆ ತೋರುವ ಇವುಗಳು ಗಿಡ ಬೆಳೆಯಲು ಬೇಕಾದ ಸಾವಯವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಉದ್ದವಾಗಿ ಬೆಳೆಯುವ ಇನ್ನೊಂದು ರೀತಿಯ ಎಲೆಗಳಂತಹ ರಚನೆಯಿಂದ ಆಹಾರೋತ್ಪತ್ತಿ, ಸಂತಾನೋತ್ಪತ್ತಿ ಮೊದಲಾದವುಗಳು ನಡೆಯುತ್ತವೆ. ವಾತಾವರಣದಲ್ಲಿರುವ ತೇವಾಂಶ, ಮಳೆ ನೀರು, ಗಾಳಿಯಲ್ಲಿನ ನೈಟ್ರೋಜನ್ ಮೊದಲಾದವುಗಳನ್ನೇ ಬಳಸಿಕೊಂಡು ಈ ಎಲೆಗಳು ಆಹಾರ ತಯಾರಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿ ಕಾಲದಲ್ಲಿ ಎಲೆಗಳ ಹಿಂಭಾಗದಲ್ಲಿ ಬೆಳೆಯುವ ಚಿಕ್ಕೆಗಳಂತೆ ತೋರುವ ಸ್ಪೋರ್‍ಗಳು ಗಾಳಿಯಲ್ಲಿ ತೇಲಿ ಬೇರೆಡೆ ಪಸರಿಸಿ ಹೊಸ ಸಸ್ಯ ಬೆಳೆಯುತ್ತದೆ.

ಸಂಧಿವಾತದ ಸಾಮಾನ್ಯ ಲಕ್ಷಣಗಳಾದ ಮೂಳೆಗಳ ಸಂಧಿಗಳ ಉರಿಯೂತ, ನೋವು ಮೊದಲಾದವುಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಈ ಗಿಡದ ಗಡ್ಡೆಗಳಿಗೆ ಇದೆ ಎಂದು ಸಾಬೀತಾಗಿದೆ. ಆಗಾಗ ಇದರ ಸೂಪ್ ತಯಾರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆಯೆಂಬುದು ಆ ಭಾಗದಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ನಂಬಿಕೆ.

ಸಿಕ್ಕ ಸಿಕ್ಕ ಸೊಪ್ಪು ಸದೆಗಳನ್ನೆಲ್ಲವನ್ನೂ ಬಳಸಿ ಅಡುಗೆ, ಔಷಧಿ ತಯಾರಿಸುವ ಅಮ್ಮ ಊರಿಗೆ ಹೋಗುತ್ತಿದ್ದಂತೆಯೆ ಈ ಬಂದಳಿಕೆಯ ಗೆಡ್ಡೆಯನ್ನು ತರಲು ಹೇಳಿ, ಯೂ ಟ್ಯೂಬ್ ನೋಡಿಕೊಂಡು ಸೂಪ್ ಮಾಡಿ ಕುಡಿಸಿದರೇನು ಗತಿ ಎಂಬುದು ಈಗ ಅಪ್ಪನನ್ನು ಕಾಡುತ್ತಿರುವ ದೊಡ್ಡ ಚಿಂತೆಯಾಗಿದೆ ಎಂಬಲ್ಲಿಗೆ ಈ ಪುರಾಣ ಮುಕ್ತಾಯವಾಗುತ್ತದೆ.


ವಿ.ಸೂ - ಪ್ರಪಂಚದ ಚರಾಚರ ವಸ್ತುಗಳೆಲ್ಲವೂ ದೊರಕುವ ಮಾಯಾತಾಣ ಅಮೆಜಾನ್ನಲ್ಲಿ ಈ ಮುದವಟ್ಟುಕಲ್ ಕಿಲಂಗುವೂ ದೊರಕುತ್ತದೆ