Showing posts with label ಹೀಗೆ ಸುಮ್ಮನೆ. Show all posts
Showing posts with label ಹೀಗೆ ಸುಮ್ಮನೆ. Show all posts

10 Dec 2023

ಚಳಿಗಾಲಕ್ಕೂ ಮೊದಲೇ ವಸಂತನ ಆಗಮನವೆ?

 ನಾವು ವಾಕಿಂಗ್ ಹೋಗುವ ದಾರಿಯಲ್ಲಿ ಸಾಲಾಗಿ ಹೊಂಗೆ ಮರಗಳಿವೆ.  ಪ್ರತಿದಿನ ಆ ಮರಗಳನ್ನು ನೋಡುತ್ತಾ ಹೋಗುವುದು ಅಭ್ಯಾಸ.

ಹೊಂಗೆ ಮರ,(Pongamia pinnata) ಚಪ್ಪರದಂತೆ ಹರಡಿಕೊಂಡು ಬೆಳೆಯುವ ಮಧ್ಯಮ ಗಾತ್ರದ ಚೆಂದದ ಮರ. ಅದರ ದಟ್ಟ ಎಲೆಗಳು ಬಿರುಬಿಸಿಲಲ್ಲಿ ತಂಪಾದ ನೆರಳು ಕೊಡುತ್ತವೆ. ಕಾಲಕ್ಕೆ ತಕ್ಕಂತೆ ಬದಲಾಗುವ ಚಿಗುರೆಲೆಗಳ ತೆಳು ಹಸಿರು, ಬಲಿತ ಎಲೆಗಳ ದಟ್ಟ ಹಸಿರು ಬಣ್ಣವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಸಂತಕಾಲದಲ್ಲಿ ಅಂದರೆ ಸುಮಾರು ಮಾರ್ಚ್-ಎಪ್ರಿಲ್ ತಿಂಗಳಿನಲ್ಲಂತೂ ತೆಳು ಗುಲಾಬಿ ಬಣ್ಣದ ಹೂಗೊಂಚಲುಗಳು ಮರದ ತುಂಬ ತುಂಬಿಕೊಂಡು ಸೌಂದರ್ಯ ಇಮ್ಮಡಿಸುತ್ತದೆ.  (ಕೆಳಗೆ ರಸ್ತೆಯ ಮೇಲೆ ರಾಶಿ ರಾಶಿಯಾಗಿ ಉದುರುವ ಮೊಗ್ಗು, ಹೂದಳಗಳು ಮತ್ತು ಒಣ ಎಲೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಈ ಮರಗಳು ದೊಡ್ಡ ತಲೆನೋವಾಗುತ್ತವೆ ಎಂಬುದೂ ಅಷ್ಟೇ ಸತ್ಯ.) ಸುತ್ತಲಿನ ಪರಿಸರಕ್ಕೆ ನರುಗಂಪು ಸೂಸುವ ಹೂವುಗಳು, ಅದಕ್ಕೆ ಆಕರ್ಷಿತವಾಗಿ ಹೂವನ್ನು ಮುತ್ತುವ ಜೇನು ನೊಣಗಳು, ದುಂಬಿಗಳು, ಹೀಗೆ ಈ ಮರಗಳನ್ನು ನೋಡುತ್ತಿದ್ದರೆ ಸಮಯ ಸರಿಯುವುದು ತಿಳಿಯುವುದಿಲ್ಲ.

Pongamia pinnata (ಹೊಂಗೆ ಮರ)

ಉದುರಿದ ಹೊಂಗೆ ಹೂವುಗಳು
ಹೊಂಗೆ ಹೂವುಗಳು

ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಬೀದಿಯ ಕೊನೆಯಲ್ಲಿರುವ ಮರವೊಂದು ಹೂವುಗಳನ್ನು ಅರಳಿಸಿಕೊಂಡು ನಿಂತಿತ್ತು.  ವಾಕಿಂಗ್ ಹೋಗುವಾಗ, ಬರುವಾಗಲೆಲ್ಲ ಇದಕ್ಕೇನಾಗಿರಬಹುದೆಂಬ ಕುತೂಹಲ ನನಗೆ. ಬೇರಾವ ಮರಗಳೂ ಇನ್ನೂ ಹೂ ಬಿಟ್ಟಿರಲಿಲ್ಲ. ಮಾರ್ಚ- ಎಪ್ರಿಲ್ ತಿಂಗಳಲ್ಲಿ ಬಿಡಬೇಕಾಗಿರುವ ಹೂವುಗಳನ್ನು ಈಗ ಬಿಟ್ಟಿದೆಯಲ್ಲ ಈ ಮರ, ಈ ಸೆಕೆ ನೋಡಿ ಮಾರ್ಚ ತಿಂಗಳು ಬಂತು ಅಂತ ಅಂದುಕೊಂಡುಬಿಟ್ಟಿದೆಯಲ್ಲ ಪೆದ್ದು ಎಂದು ಗಂಡನಲ್ಲಿ ಹೇಳಿಕೊಂಡು ನಕ್ಕಿದ್ದೂ ಆಯಿತು. ನಂತರ ಹದಿನೈದು ದಿನಗಳಲ್ಲಿ ಆ ಬೀದಿಯ ಎಲ್ಲ ಹೊಂಗೇ ಮರಗಳಲ್ಲೂ ಹೂವರಳಿದ್ದವು! ಈಗ ಆ ಮರ “ಯಾರಮ್ಮ ಪೆದ್ದಿ” ಎಂದು ನನ್ನನ್ನೇ ಅಣಕಿಸಿದಂತಾಗುತ್ತಿತ್ತು. ಈಗ ಡಿಸೆಂಬರ್ ಮೊದಲವಾರದಲ್ಲಿ ನೋಡಿದರೆ ರಿಂಗ್ ರೋಡಿನಲ್ಲಿರುವ ಟಬೂಬಿಯ ಮರಗಳೆಲ್ಲವೂ ಹೂವರಳಿಸಿಕೊಂಡು ನಿಂತಿವೆ!! ಈ ಮರಗಳೂ ಕೂಡ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಹೂ ಬಿಡುತ್ತವೆ!

ಈ ವರ್ಷ ವಾತಾವರಣ ಅದೆಷ್ಟು ಬದಲಾವಣೆಯಾಗಿದೆ ಎಂಬುದಕ್ಕೆ ಸಾಕ್ಷಿ ಈ ಮರಗಳು. ಅತೀ ಕಡಿಮೆ ಮಳೆಯಾಗಿದೆ, ಚಳಿ ಇರಬೇಕಾದ ಕಾಲದಲ್ಲಿ ಸೆಕೆ ಹೆಚ್ಚಿದೆ. ಇದರ ಪರಿಣಾಮ ಈ ಮರಗಳ ಮೇಲಾಗಿದೆ. ಈ ಬದಲಾವಣೆಗಳು ನಮ್ಮ ಮೇಲೆ ಇನ್ನೆಷ್ಟು ಪರಿಣಾಮ ಬೀರಬಹುದು? ಕಾಲವೇ ಹೇಳಬೇಕು.

Tabebuia rosea

(ಈಗೊಂದು ಹತ್ತು ವರ್ಷಗಳ ಹಿಂದೆ ಸುಮಾರು ಸೆಪ್ಟೆಂಬರ್-ಅಕ್ಟೋಬರ್ ಸಮಯಕ್ಕೆ ಆ ಸಾಲು ಮರಗಳಲ್ಲಿ ಕಾಗೆಗಳು ಗೂಡು ಕಟ್ಟುವುದು, ಮೊಟ್ಟೆ ಇಡುವುದು ಮೊದಲಾದ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದವು. ಒಂದೆರಡು ತಿಂಗಳಲ್ಲಿ  ಮರಿಗಳ ಕಲವರವವು, ಶಿವರುದ್ರಪ್ಪನವರ “ಹಕ್ಕಿ ಗಿಲಕಿ” ಯೆಂಬ ಸಾಲನ್ನು ನೆನೆಪಿಸುವಂತೆ ಕೇಳಿಸುತ್ತಿತ್ತು. ಈಗ ಐದು ವರ್ಷಗಳಿಂದೀಚೆಗೆ ಕಾಗೆಗಳು ಇಲ್ಲಿ ಗೂಡು ಕಟ್ಟುತ್ತಿಲ್ಲ. ಪಕ್ಕದಲ್ಲೇ ಇರುವ ರಿಂಗ್ ರೋಡಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದೇ ಕಾರಣವಿರಬಹುದೆ ಗೊತ್ತಿಲ್ಲ.) 

1 Mar 2020

ಮಾಯಾಲೋಕ



{disclaimer - ಹೆಂಡಿಂಗ್ ನೋಡಿ  ತೇಜಸ್ವಿಯವರ "ಮಾಯಾಲೋಕ"ದ ಬಗ್ಗೆ ಏನೋ ಬರೆದಿರಬೇಕು ಎಂದುಕೊಳ್ಳಬೇಡಿ.  ಇದಕ್ಕೆ ಅದಕ್ಕಿಂತ ಸೂಕ್ತವಾದ ಹೆಸರು ದೊರಕಲಿಲ್ಲವಾದ್ದರಿಂದ ಈ ಹೆಸರು}

ಊರಿಗೆ ಹೋದಾಗಲೆಲ್ಲ ನಾನು ಹೆಚ್ಚಿನ ಸಮಯ ಕಳೆಯುವುದು ಅಂಗಳದಲ್ಲೇ. ಅಲ್ಲಿ ಅಕ್ಕ ಬೆಳೆಸಿರುವ ಒಂದಿಷ್ಟು ಸೇವಂತಿಗೆ, ದಾಸವಾಳ, ಕರಿಬೇವು, ಗುಲಾಬಿ ಗಿಡಗಳು, ಆ ಗಿಡಗಳನ್ನಾಶ್ರಯಿಸಿ ಬದುಕುವ ಹೆಸರು ಗೊತ್ತಿಲ್ಲದ ಅನೇಕಾನೇಕ ಕೀಟಗಳು ಇವನ್ನೆಲ್ಲಾ ಗಮನಿಸುತ್ತಾ ಕುಳಿತುಕೊಳ್ಳುವುದು ಸ್ವರ್ಗ.  ಎದುರಿನ  ರಸ್ತೆಯಲ್ಲಿ ಒಂದಿಷ್ಟು ದನಗಳು ಬಂದು ಕರೆಂಟ್ ಕಂಬಕ್ಕೆ ಮೈ ತಿಕ್ಕಿ ತುರಿಕೆ ಪರಿಹರಿಸಿಕೊಳ್ಳುವುದು, ಮಂಗಗಳು ತಮ್ಮ ಮರಿಗಳನ್ನು ಎದೆಗವಚಿಕೊಂಡು ತೆಂಗಿನಮರವನ್ನು ಸರಸರನೆ ಏರಿ ತೆಂಗಿನಕಾಯಿಯನ್ನು ಕಿತ್ತು ನೀರು ಕುಡಿದು ಎಸೆಯುವುದು, ಯಾರಾದರೂ ಮಾತನಾಡಿಸಿದರೆ ಕುಣಿಕುಣಿದು ಮೈಮೇಲೆ ಬರುವ ಸುಂದರಿ ಎಂಬ ಬೀದಿನಾಯಿಯ ನರ್ತನ ಎಲ್ಲವೂ ನನ್ನ ಪಾಲಿಗೆ ಎಷ್ಟುಬಾರಿ ನೋಡಿದರೂ ಬೇಸರವಾಗದ "ಮಲೆಗಳಲ್ಲಿ ಮದುಮಗಳು" ನಾಟಕದಂತೆ!!

ಇತ್ತೀಚೆಗೊಮ್ಮೆ ಊರಿಗೆ ಹೋದಾಗ ಹೀಗೆ ಒಂದು ಸೇವಂತಿಗೆ ಗಿಡವನ್ನು ನೋಡುತ್ತಾ ನಿಂತಿದ್ದೆ. ಹೂವುಗಳೆಲ್ಲಾ ಅರಳಿ ಬಾಡುವ ಹಂತದಲ್ಲಿದ್ದವು. ಗಿಡದ ಅನೇಕ ಎಲೆಗಳೂ ಬಾಡಿದ್ದವು. ಆಗ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ತೆಳುವಾದ ಜೇಡರ ಬಲೆಯಂತಹ ದಾರ ಇರುವುದು ಕಾಣಿಸಿತು, ಹಾಗೆ ಅಲ್ಲಿ ಅನೇಕ ಜೇಡಗಳು ಬಲೆ ಕಟ್ಟಿಕೊಂಡಿರುವುದು ಅತೀ ಸಾಮಾನ್ಯ. ಆದರೆ ಈ ತೆಳುವಾದ ಎಳೆಯಲ್ಲಿ  ಒಣಗಿದ ಸೇವಂತಿಗೆ ಎಲೆಯಂತಿದ್ದ ಕಸವೊಂದಿತ್ತು. ಅದು ನಿಧಾನವಾಗಿ ಮುಂದೆ ಚಲಿಸುತ್ತಿತ್ತು!  ಗಾಳಿಯಿಂದಾಗಿ ಹಾಗೆ ಕಾಣಿಸುತ್ತಿದೆಯೇನೋ ಎಂದುಕೊಂಡರೂ ಸ್ವಲ್ಪ ಅನುಮಾನವಾಗಿ ಅದನ್ನೇ ಗಮನಿಸುತ್ತಿದ್ದೆ. ನಿಧಾನವಾಗಿ ಆ ಬಲೆಯ ಎಳೆಯ ಮೇಲೆ ಮುಂದೆ ಹೋದ ಆ ಕಸದಂತಹ ವಸ್ತು ಆ ಕಡೆಯಿದ್ದ ರೆಂಬೆಯ ಬಳಿ ಹೋಗುತ್ತಿದ್ದಂತೆಯೆ ಮುಂದೆ ಮೂರು ಕಾಲು, ಹಿಂದೆ ಮೂರುಕಾಲುಗಳನ್ನು ಒಂದು ಕ್ಷಣ ಅಗಲಿಸಿತು. ತಕ್ಷಣ ಇದ್ಯಾವುದೋ ಕೀಟ ಎಂಬ ಉತ್ಸಾಹದಲ್ಲಿ ನಾನು ಎಳೆಯ ಸಮೇತ ಕೈಗೆತ್ತಿಕೊಂಡೆ. ಒಂದು ನಿಮಿಷ ನನ್ನ ಕೈಯಲ್ಲೇ ಆಕಡೆ ಈಕಡೆ ಚಲಿಸುತ್ತಿದ್ದ ಆ ಕೀಟ ಮತ್ತೊಂದು ಕ್ಷಣದಲ್ಲಿ, ಥೇಟ್ ಜೇಡ ಬಲೆಯನ್ನು ಅಂಟಿಸಿ ಅದರ ಎಳೆಯನ್ನು ಹಿಡಿದು ತೇಲಿ ಹೋಗುವಂತೆಯೆ ನನ್ನ ಕೈಯಿಂದ ಇಳಿದು ತೇಲಿಕೊಂಡು ಹೋಗಿ ಸೇವಂತಿಗೆಯ ಗಿಡದ ಮೇಲೆ ಬಿತ್ತು, ನಂತರ ಎಷ್ಟೇ ಹುಡುಕಿದರೂ ಕಾಣಿಸಲೇ ಇಲ್ಲ.
ಒಣಗಿದ ಸೇವಂತಿಗೆ ಎಲೆ

ಒಣಗಿದ ಎಲೆಯಂತೆಯೆ ಕಾಣುವ ಕೀಟ
ಒಂದು ಕ್ಷಣಮಾತ್ರ ತನ್ನ ಇರುವನ್ನು ತೋರಿ ಕೊನೆಗೆ ನನ್ನ ಭ್ರಮೆಯೇನೋ ಎಂಬಂತೆ ಮಾಯವಾದ ಆ ಕೀಟ ಬಹುಶಃ ಸೇವಂತಿಗೆ ಗಿಡವನ್ನಷ್ಟೇ ತನ್ನ ವಾಸಸ್ಥಾನವನ್ನಾಗಿಸಿಕೊಂಡು ಬದುಕುತ್ತಿರುವ ಜೀವಿಯಾಗಿರಬಹುದೇ? ಅದಕ್ಕಾಗಿಯೇ ತನ್ನ ದೇಹವನ್ನು ಒಣಗಿದ ಸೇವಂತಿಗೆ ಎಲೆಯಂತಾಗಿಸಿಕೊಂಡಿದೆಯೇ ? ಇಂತಹ ಇನ್ನೆಷ್ಟು ಜೀವಿಗಳು ನಮಗೇ ಅರಿವಿಲ್ಲದಂತೆ ನಮ್ಮ ಸುತ್ತಮುತ್ತ ವಾಸಿಸುತ್ತಿವೆಯೋ ಬಲ್ಲವರಾರು?

ಆ ಕೀಟ ಕೊನೆಗೂ ಕಾಣಿಸಲೇ ಇಲ್ಲವೆಂಬ ನಿರಾಶೆಯಲ್ಲಿ, ಇನ್ನೇನಾದರೂ ನಾಟಕ ನೋಡಲು ಸಿಗಬಹುದಾ ಎಂದು ಪರೀಕ್ಷಿಸುತ್ತಿದ್ದವಳಿಗೆ ಮತ್ತೊಂದು ಗಿಡಕ್ಕೆ ಆಧಾರವಾಗಿ ನೆಟ್ಟಿದ್ದ ಕೋಲೊಂದರ ತುದಿಯಲ್ಲಿ ಪುಟ್ಟ ಜೇಡವೊಂದು ಕಾಣಿಸಿತು. ಅದರ ಬಣ್ಣ ಆ ಒಣಗಿದ ಕೋಲಿನ ಬಣ್ಣವನ್ನೇ ಹೋಲುತ್ತಿತ್ತು. ನಾನು ಅದರ ಒಂದು ಫೋಟೋ ತೆಗೆಯೋಣವೆಂದು ಮೊಬೈಲ್ ಹತ್ತಿರ ತೆಗೆದುಕೊಂಡು ಹೋದೆ, ಸರಕ್ಕನೆ ಕೋಲಿನ ಆಚೆ ದಿಕ್ಕಿಗೆ ಚಲಿಸಿತು. ನಾನು ಅಲ್ಲೇ ನನ್ನ ಕೈಚಾಚಿದೆ, ಈ ಬಾರಿ ಇನ್ನೊಂದು ದಿಕ್ಕಿಗೆ ತಿರುಗಿತು! ಹೀಗೇ ಅದು ಹೋದ ದಿಕ್ಕಿಗೆಲ್ಲ ನನ್ನ ಕೈ ಕೂಡಾ ಚಲಿಸಿದ್ದಷ್ಟೇ ಸಿಕ್ಕ ಭಾಗ್ಯ, ಫೋಟೋ ತೆಗೆಯುವಷ್ಟು ಸಮಯ ಅದು ಕೊಡಲೇ ಇಲ್ಲ. ನಾನು ಅದನ್ನು ಮುಟ್ಟಲಿಲ್ಲ, ಅದಿರುವ ಗಿಡವನ್ನೂ ಅಲುಗಾಡಿಸಲಿಲ್ಲ. ಕೇವಲ ಹತ್ತಿರ ಕೈ ಚಾಚಿದ್ದಷ್ಟೇ. ಆ ಪುಟಾಣಿ ಜೀವಿಗೆ ಕೂಡ  ತನ್ನ ಸುತ್ತಮುತ್ತ ನಡೆಯುವ ಅತೀ ಚಿಕ್ಕ ಬದಲಾವಣೆಯನ್ನೂ ಗ್ರಹಿಸುವ ಶಕ್ತಿ ಇದೆಯೆಂದಾಯ್ತಲ್ಲವೆ!

ಮನೆಯಂಗಳದ ಒಂದೆರಡು ಗಿಡಗಳಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ನಾಟಕ ನಡೆಯುತ್ತಿರುತ್ತದೆಯಾದರೆ  ಇನ್ನು ಸಹಸ್ರಾರು ಗಿಡಮರಗಳುಳ್ಳ ಕಾಡಿನಲ್ಲಿನ್ನೆಷ್ಟು ನಾಟಕ ನಡೆಯುತ್ತದೋ ಎಂಬ ಕುತೂಹಲ ಮನದಲ್ಲಿ ಮೂಡಿತು. ನನಗೆ ಯಾವುದಾದರೂ ಕತೆ, ಕಾದಂಬರಿಗಳಲ್ಲಿ “ಕಾಡಿನ ನೀರವ ಮೌನದಲ್ಲಿ..ನಿಶ್ಚಲವಾಗಿದ್ದ ಕಾಡು...ಎಲೆ ಅಲುಗಿದ ಸದ್ದು.....” ಇತ್ಯಾದಿ ಸಾಲುಗಳನ್ನು ಓದಿದಾಗಲೆಲ್ಲಾ ಅನ್ನಿಸುತ್ತದೆ, ಕಾಡಿನಲ್ಲಿ ಅಷ್ಟೆಲ್ಲ ಜೀವಜಾಲ ಇರುವಾಗ ಮೌನ, ನಿಶ್ಚಲತೆ ಸಾಧ್ಯವೇ? ಪ್ರತೀಕ್ಷಣದಲ್ಲಿ ಅಲ್ಲೊಂದು ಜೈವಿಕಚಟುವಟಿಕೆ ನಡೆಯುತ್ತಿರಲೇಬೇಕು, ನಮ್ಮ ಕಿವಿಗೆ ಕೇಳಿಸದ, ಕಣ್ಣಿಗೆ ಕಾಣಿಸದ ಘಟನೆಗಳು ನಡೆಯುತ್ತಿರಲೇಬೇಕಲ್ಲವೆ?

27 Mar 2018

ಬಾಲ್ಕನಿಯ ಗಿಡಗಳಿಗೆ ಹನಿ ನೀರಾವರಿ ಸಾಧನ

ಬೇಸಿಗೆ ರಜಾ ಪ್ರಾರಂಭವಾಗುವುದರಲ್ಲಿದೆ. ಮಕ್ಕಳಿಗೆ ಊರಿಗೋ ಅಥವಾ ಪ್ರವಾಸಕ್ಕೋ ಹೋಗುವ ಸಂಭ್ರಮ. ಮನೆಯಲ್ಲಿ ಎಲ್ಲರೂ ನಾಲ್ಕಾರು ದಿನಗಳ ಮಟ್ಟಿಗೆ ಹೊರಗೆ ಹೋಗಬೇಕೆಂದರೆ ಎದುರಾಗುವ ಸಮಸ್ಯೆಗಳು ಹಲವು. ಈ ನಗರದ ಪುಟ್ಟಪುಟ್ಟ ಮನೆಗಳಲ್ಲಿ ಮನ ತಣಿಸಲೆಂದೇ ಕುಂಡದಲ್ಲಿ ತುಳಸಿ, ಕರಿಬೇವು, ಬಸಲೆ, ಸೇವಂತಿಗೆ ಇತ್ಯಾದಿ ಗಿಡಗಳನ್ನು ಬೆಳೆಸಿರುತ್ತೇವೆ. ಈ ಬೇಸಗೆಯ ಝಳಕ್ಕೆ ನಾಲ್ಕಾರು ದಿನಗಳವರೆಗೆ ನೀರು ಹಾಕದಿದ್ದರೆ ಎಲ್ಲವೂ ಒಣಗಿ ಕರಕಲಾಗಿರುತ್ತವೆ. ಇದಕ್ಕೊಂದು ಉಪಾಯ ಸರಳವಾಗಿ ನಾವೇ ಮಾಡಿಕೊಳ್ಳಬಹುದಾದ ಹನಿ ನೀರಾವರಿ ಸಾಧನ.


 ಮುಚ್ಚಳವಿರುವ ಬಕೆಟ್ ತೆಗೆದುಕೊಂಡು ಕೆಳಭಾಗದಲ್ಲಿ ಒಂದು ಫಿಟಿಂಗ್ ಪೈಪ್ ತೂರಬಹುದಾದಷ್ಟು ದೊಡ್ಡದಾಗಿ ಕೊರೆದು  ಫಿಟ್ಟಿಂಗ್ ಪೈಪ್ ತೂರಿಸಿ ಎಂಸೀಲ್ ನಿಂದ ಅಂಟಿಸುವುದು. ನಂತರ ಇದಕ್ಕೆ ಪ್ಲಾಸ್ಟಿಕ್ ಟ್ಯೂಬ್ ಅನ್ನು ಜೋಡಿಸಿಕೊಳ್ಳಬೇಕು. ಬಕೆಟ್ ಸ್ವಲ್ಪ ಮೇಲ್ಭಾಗದಲ್ಲಿರಿಸಿ ಕೆಳಗೆ ನೀರಿನ ಅವಶ್ಯಕತೆ ತೀರಾ ಹೆಚ್ಚಿರುವ ಗಿಡಗಳಿರುವ ಕುಂಡಗಳನ್ನು ಸಾಲಾಗಿ ಇರಿಸಬೇಕು. ನೀರಿನ ಟ್ಯೂಬ್ ಅನ್ನು ಕುಂಡಗಳ ಮೇಲೆ ಇರಿಸಿ ಪ್ರತೀ ಗಿಡಗಳಿಗೂ ನೀರು ತಾಗುವಂತೆ ಟ್ಯೂಬಿನಲ್ಲಿ ಚಿಕ್ಕ ತೂತೊಂದನ್ನು ಕೊರೆಯಬೇಕು. ಟ್ಯೂಬಿನ ತುದಿಯನ್ನು ಲಂಬವಾಗಿ ನಿಲ್ಲಿಸಿದ ಕೋಲೊಂದಕ್ಕೆ ಬಿಗಿಯಾಗಿ ಕಟ್ಟಬೇಕು. ಬಕೆಟ್ ತುಂಬಾ ನೀರು ತುಂಬಿಸಿದೊಡನೆ ಟ್ಯೂಬ್ ಗಳಲ್ಲಿ ನೀರು ಹರಿಯುತ್ತದೆ. ಅದರಲ್ಲಿನ ಚಿಕ್ಕ ತೂತಿನ ಮೂಲಕ ಗಿಡಕ್ಕೆ ಹನಿಹನಿಯಾಗಿ ನೀರು ತಲುಪುತ್ತದೆ.  ಈ ತೂತುಗಳಲ್ಲಿ ಚಿಕ್ಕದೊಂದು ಕಡ್ಡಿಯನ್ನು ತೂರಿಸುವುದರ ಮೂಲಕ ಬೇಕಾದ ಪ್ರಮಾಣದ ಹನಿಯನ್ನು ಪಡೆಯಬಹುದು.



(ಊರಿನಲ್ಲಿ ನಿಮಿಷ ಬಿಡುವಿಲ್ಲದೆ ತೋಟದ ಕೆಲಸದಲ್ಲಿ ಮುಳುಗುವ ಅಪ್ಪನಿಗೆ, ಈ ಬೆಂಗಳೂರಿನ ನಮ್ಮ ಮನೆಗೆ ಬಂದಾಗೆಲ್ಲ ಹೊತ್ತು ಕಳೆಯುವುದೇ ಕಷ್ಟವಾಗಿಬಿಡುತ್ತದೆ. ಹೊತ್ತು ಕಳೆಯಲು ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿ ಏನನ್ನಾದರೂ ಮಾಡುವ ಅಭ್ಯಾಸವಿರುವ ಅಪ್ಪ ಈ ಬಾರಿ ಬಂದಾಗ ಈ ಮಿನಿ ಹನಿ ನೀರಾವರಿ ಸಾಧನವನ್ನ ಮಾಡಿಕೊಟ್ಟಿದ್ದಾರೆ.)



  

11 Dec 2017

“ನುಡಿಸಿರಿ” ಎಂಬ ಸಾಂಸ್ಕೃತಿಕ ಜಾತ್ರೆಯಲ್ಲಿ ಮೂರು ದಿನ


"ಆಳ್ವಾಸ್ ನುಡಿಸಿರಿ"ಗೆ ಹೋಗಬೇಕೆಂಬ ಅನೇಕ ವರ್ಷದ ಕನಸು ಈ ವರ್ಷ ಕೈಗೂಡಿತು. ಮೂರು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ನನಗೆ ದಕ್ಕಿದ್ದು ಇಷ್ಟು.

ಹನ್ನೆರಡು ವೇದಿಕೆಗಳಲ್ಲಿ ನಮ್ಮ ನೆಲದ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜಾತ್ರೆ. “ಬಹುತ್ವದ ನೆಲೆಗಳು” ಎಂಬ ನುಡಿಸಿರಿಯ ಆಶಯಕ್ಕೆ ಹೊಂದುವಂತೆ ಜನಪದ ಕಲೆಗಳು, ಯಕ್ಷಗಾನ ಬಯಲಾಟಗಳು, ಶಾಸ್ತ್ರೀಯ ನೃತ್ಯ ಸಂಗೀತಗಳು, ಸಾಹಿತ್ಯ ಸಂವಾದಗಳು, ಕವಿಗೋಷ್ಟಿಗಳು, ಚಿತ್ರಕಲೆ, ವಿಶಿಷ್ಟ ವಸ್ತುಸಂಗ್ರಹಗಳ ಪ್ರದರ್ಶನ ಮಳಿಗೆಗಳು, ವ್ಯಾಪಾರೀ ಮಳಿಗೆಗಳು ಒಹ್! ಏನುಂಟು ಏನಿಲ್ಲ ಇಲ್ಲಿ!
ಡಿಸೆಂಬರ್ ೧ - ಉದ್ಘಾಟನೆಯ ವೇಳೆಯಲ್ಲಿ ರಸ್ತೆಯುದ್ದಕ್ಕೂ ನೆರೆದ ವಿವಿಧ ದೊಡ್ಡ ದೊಡ್ಡ ಗಾತ್ರದ ಪಕ್ಷಿ, ಪ್ರಾಣಿಗಳ, ಯಕ್ಷಗಾನ ಪಾತ್ರಗಳ ಗೊಂಬೆಗಳ ವೇಷ, ಡೊಳ್ಳುಕುಣಿತ, ಮರಗಾಲು ಕುಣಿತ, ಪೂಜಾ ಕುಣಿತ, ಕರಗ, ಹುಲಿವೇಷ, ಹಗಲುವೇಷ, ಕೊರಗ ನೃತ್ಯ ಇತ್ಯಾದಿ ವಿವಿಧ ಜನಪದ ಕಲಾವಿದರ ವೈಭಯುತ ಮೆರವಣಿಗೆಯೇ ನಮ್ಮನ್ನು ಬೇರೆಯ ಲೋಕಕ್ಕೆ ಕೊಂಡೊಯ್ದುಬಿಟ್ಟಿತ್ತು. ಮುಖ್ಯವೇದಿಕೆಯಲ್ಲಿ ಬೆಳಗ್ಗೆ ೯.೩೦ ರ ವೇಳೆಗೇ ಕಾಲಿಡಲೂ ಸಾಧ್ಯವಿಲ್ಲದಷ್ಟು ಜನಸಂದಣಿ! ಮುಖ್ಯವೇದಿಕೆಯ ಬದಿಯಲ್ಲಿ ಚಿತ್ರಸಿರಿ, ವ್ಯಂಗಚಿತ್ರಸಿರಿ, ಛಾಯಾಚಿತ್ರಸಿರಿ ಸೆಳೆಯುತ್ತಿತ್ತು





ತೇಜಸ್ವಿನಿ ಹೆಗಡೆಯವರ ಕಾದಂಬರಿಯ ಬಿಡುಗಡೆ ಸಮಾರಂಭವೂ ಅಲ್ಲಿ ಇದ್ದದ್ದು, ಗೆಳತಿಯರನ್ನು ಭೇಟಿ ಮಾಡಿದ್ದು ಖುಷಿಕೊಟ್ಟ ಸಂಗತಿ.

ಕೆ.ವಿ ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ ಕೊರಗರ ಸಾಂಸ್ಕೃತಿಕ ವೈಭವ ಕೊರಗ ಜನಾಂಗದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳುವಳಿಕೆ ಮೂಡಿಸಿದ ಕಾರ್ಯಕ್ರಮ. ಅವರ ಸಾಂಪ್ರದಾಯಿಕ ಡೊಳ್ಳು ಕುಣಿತದಲ್ಲಿ ಸಂದರ್ಭಕ್ಕೆ ತಕ್ಕಂತೆ ಇರುವ ಮಟ್ಟುಗಳು, ಕುಣಿತಗಳನ್ನು ತೋರಿಸಿದಲ್ಲದೆ, ಆ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಾ ನಿರೂಪಕರು ಗಮನ ಸೆಳೆದರು.
ನಂತರ ನೋಡಿದ ಕಾರ್ಯಕ್ರಮ ಹಗಲು ವೇಷ . ಹೆಸರೇ ಸೂಚಿಸುವಂತೆ ವೇಷವೇ ಪ್ರಧಾನವಾಗಿರುವ ಪ್ರದರ್ಶನ ಕಲೆ. ಕಣ್ಣುಕುಕ್ಕುವ ಬಣ್ಣ ಬಣ್ಣದ ಚಿತ್ರವಿಚಿತ್ರ ಉಡುಪುಗಳಲ್ಲಿ, ಡಾಳಾದ ಮುಖವರ್ಣಿಕೆಯಲ್ಲಿ ರಾಮಾಯಣ ಮಹಾಭಾರತ ಕತೆಗಳ ಕೆಲ ತುಣುಕನ್ನು ಅಭಿನಯಿಸುವ ಕಲಾಪ್ರಾಕಾರವಿದು.
ದಕ್ಷಿಣ ಕನ್ನಡದಲ್ಲಿ ಯಾವುದೇ ಉತ್ಸವವೂ ಪ್ರಾಯಶಃ ಹುಲಿವೇಷ ಇಲ್ಲದೇ ಕೊನೆಗೊಳ್ಳಲಾರದು. ಮೊದಲೂ ಅದರ ಬಗ್ಗೆ ಗೊತ್ತಿದ್ದರೂ, ಕೆಲವೊಮ್ಮೆ ಟಿವಿಯಲ್ಲಿ ನೋಡಿದರೂ “ಉಳಿದವರು ಕಂಡಂತೆ” ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿಯ ಹುಲಿಕುಣಿತಕ್ಕೆ ಮಾರುಹೋಗಿ ಒಮ್ಮೆ ಪ್ರತ್ಯಕ್ಷವಾಗಿ ಅದರ ಮೂಲ ಊರಿನಲ್ಲಿ ಹುಲಿಕುಣಿತ ನೋಡಬೇಕೆಂಬ ಆಸೆಯುತ್ತು. ಅದು ನೆರವೇರಿದ್ದು ನುಡಿಸಿರಿಯಲ್ಲಿ. ಬೆದ್ರ ಫ್ರೆಂಡ್ಸ್ ಎಂಬ ತಂಡದವರಿಂದ ನಡೆದ ಹುಲಿವೇಷ ಪ್ರದರ್ಶನದಲ್ಲಿ ಗಮನಸೆಳೆದದ್ದು ದೇಹದ ಮೇಲೆ ಬಳಿದ ನಿಜವಾದ ಹುಲಿ ಚಿರತೆಗಳಿಗೆ ಎಳ್ಳಷ್ಟೂ ಕಡಿಮೆಯೆನಿಸದ ಬಣ್ಣಗಳ ನಿಖರತೆ, ಅಪಾರ ಶಕ್ತಿ ಬೇಡುವ ಹೆಜ್ಜೆಗಳಲ್ಲಿ ಕಲಾವಿದರು ತೋರಿದ ದೃಡತೆ, ವಿವಿಧ ರೀತಿಯ ಕಸರತ್ತು ಪ್ರದರ್ಶಿಸುವ ಚಾಕಚಕ್ಯತೆ.
ಸಾಯಂಕಾಲದ ವೇಳೆಯಲ್ಲಿ ನೋಡಿದ “ಪವಿತ್ರ ಭಟ್” ಎಂಬುವವರ ಭರತನಾಟ್ಯ ಕಾರ್ಯಕ್ರಮ ಕೂಡ ಚೆನ್ನಾಗಿತ್ತು. ಅಭಿನಯ, ನೃತ್ಯ ಎರಡರಲ್ಲೂ ಅವರ ನೈಪುಣ್ಯ ನೋಡುಗರನ್ನು ಹಿಡಿದಿಟ್ಟುಕೊಂಡಿತ್ತು. ಸಂಜೆ ನಡೆದ ವಿದುಷಿ ಮಾನಸಿ ಸುಧೀರ್ ಕೊಡವೂರು ಅವರ ನೃತ್ಯ ನಿಕೇತನ ತಂಡದ ಪ್ರದರ್ಶನವೂ ಮನಸೆಳೆಯಿತು.
ಬಡಗು ತಿಟ್ಟಿನ ಯಕ್ಷಗಾನಗಳನ್ನು ತುಂಬಾ ಇಷ್ಟಪಟ್ಟು ನೋಡುವ ನಾನು ತೆಂಕು ತಿಟ್ಟಿನ ಯಕ್ಷಗಾನವನ್ನು ನೋಡಿದ್ದು ಕಡಿಮೆ. ಇಲ್ಲಿ ನಡೆದ ದಶಾವತಾರ ತೆಂಕುತಿಟ್ಟಿನ ಯಕ್ಷಗಾನವನ್ನು ಸ್ವಲ್ಪ ನೋಡಿದೆ. ಬಡಗು ತಿಟ್ಟಿನಲ್ಲಿರುವಂತೆ ಹೆಚ್ಚಿನ ಕುಣಿತ ಅಭಿನಯ ಅಲ್ಲಿಲ್ಲವಾದರೂ ಅವು ಒಟ್ಟಾರೆ ಕತೆಯನ್ನು ಕಟ್ಟಿಕೊಡುವ ಪರಿ ಅನನ್ಯ.
ರಾತ್ರಿ ಊಟವಾದ ಮೇಲೆ “ಆಳ್ವಾಸ್ ಸಾಂಸ್ಕೃತಿಕ ವೈಭವ” ಎಂಬ ಆಳ್ವಾಸ್ ವಿಧ್ಯಾರ್ಥಿಗಳು ನಡೆಸಿಕೊಡುವ ಕಾರ್ಯಕ್ರಮಕ್ಕೆ ಹೋಗಿ ಕುಳಿತದ್ದಾಯ್ತು. ಹೆಚ್ಚಿನ ನಿರೀಕ್ಷೆಗಳೇನೂ ಇಲ್ಲದೇ, ಏನೋ ಮಾಮೂಲಿ ಕಾಲೇಜು ಮಕ್ಕಳ ಕಾರ್ಯಕ್ರಮ ನೋಡೋಣವೆಂದು ಕುಳಿತುಕೊಂಡಿದ್ದ ನಾವು ಕಾರ್ಯಕ್ರಮ ಶುರುವಾದ ಮೇಲೆ ನಿಜಕ್ಕೂ ಆಶ್ಚರ್ಯಚಕಿತರಾದೆವು. ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹುಟ್ಟುವಂತಹ ಎಲ್ಲಾ ಕಲೆಗಳನ್ನೂ ಆಳ್ವಾಸ್ ಸಾಂಸ್ಕೃತಿಕ ವೈಭವ ಒಳಗೊಂಡಿತ್ತು. ಮಕ್ಕಳೂ ಸಹ ಯಾವುದೇ ವೃತ್ತಿನಿರತ ಕಲಾವಿದರಿಗೂ ಬಿಟ್ಟುಕೊಡದ ಹಾಗೆ ಪ್ರದರ್ಶನ ನೀಡಿದರು. ಹಿಂದಿನ ದಿನ ರಾತ್ರಿ ಪ್ರಯಾಣ, ಬೆಳಗಿನಿಂದ ತಿರುಗಿದ ಸುಸ್ತು ಎಲ್ಲವೂ ಸೇರಿ ನಿದ್ರೆ ಎಳೆಯುತ್ತಿದ್ದರೂ ಎದ್ದು ಬರುವ ಮನಸ್ಸಾಗದೇ ೧೨ ಗಂಟೆಗೆ ಮುಗಿಯುವವರೆಗೂ ನೋಡಿ ಮನತುಂಬಿಕೊಂಡೆವು.
ಅವರು ಪ್ರದರ್ಶಿಸಿದ ರಾಮಾಯಣ ಯಕ್ಷಗಾನ ನೃತ್ಯರೂಪಕ ಕೇವಲ ಹತ್ತು ನಿಮಿಷಗಳಲ್ಲಿ ರಾಮಾಯಣದ ಮುಖ್ಯ ಕತೆಯನ್ನು ಹೇಳಿದ್ದಲ್ಲದೆ,ಮಾತೊಂದನ್ನು ಬಿಟ್ಟು ಒಂದು ಪರಿಪೂರ್ಣ ಯಕ್ಷಗಾನದಲ್ಲಿರುವಂತಹ ಇನ್ನೆಲ್ಲ ಅಂಶಗಳನ್ನೂ ಒಳಗೊಂಡಿತ್ತೆಂಬುದು ಇಷ್ಟವಾದ ಸಂಗತಿ. ಮಂಟಪ ಪ್ರಭಾಕರ ಉಪಾಧ್ಯಾಯರಂತ ಪರಿಪೂರ್ಣ ಕಲಾವಿದರು ಇದರ ನಿರ್ದೇಶಕರೆಂದ ಮೇಲೆ ಅದು ಚೆನ್ನಾಗಿ ಮೂಡಿಬಂದಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.


ಮೂಲಮಾನವರು ತಮ್ಮ ಸಂಭ್ರಮವನ್ನು ಅಭಿವ್ಯಕ್ತಿಸಲು ಕಂಡುಕೊಂಡದ್ದು ಸರಳವಾದ ಕುಣಿತಗಳು, ಇನ್ನೂ ಹೆಚ್ಚಿನದೇನನ್ನೋ ಹೇಳಬೇಕೆನ್ನಿಸಿದಾಗ ವೆಷಭೂಷಣಗಳನ್ನು ಬಳಸಿಕೊಂಡು ಕತೆ ಹೇಳುವುದು ಪ್ರಾರಂಭಗೊಂಡಿತು, ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಇನ್ನಷ್ಟು ಸೂಕ್ಷ್ಮವಾದಾಗ ಶಾಸ್ತ್ರೀಯ ಕಲೆಗಳು ಹುಟ್ಟಿಕೊಂಡವು ಎಂದು ಎಲ್ಲೋ ಓದಿದ ನೆನಪು. ಆ ದಿನದ ಪ್ರದರ್ಶನಗಳನ್ನು ನೋಡುವಾಗ ಈ ವಿಷಯ ಹೆಚ್ಚು ಸ್ಪಷ್ಟವಾಯ್ತು. ಡೊಳ್ಳು ಕುಣಿತದವರು, ಲಂಬಾಣಿ ಕುಣಿತದವರು, ಜನಪದ ಹಾಡುಗಾರರು, ಯಾವುದೇ ವೇದಿಕೆಯ ಹಂಗಿಲ್ಲದೇ ಆವರಣದ ಬೀದಿಯಲ್ಲೇ ನಿಂತು ಪ್ರದರ್ಶನ ನೀಡಿದರೂ ಸುತ್ತಲೂ ಜನ ಮುತ್ತಿಕೊಂಡು ನೋಡಿ ಆನಂದಿಸುತ್ತಿದ್ದರು. ಇನ್ನು ಯಕ್ಷಗಾನ, ಬಯಲಾಟ, ಹಗಲುವೇಷ, ನಾಟಕ ಮೊದಲಾದ ಕಥಾ ಪ್ರಾಧಾನ್ಯ ಕಲೆಗಳ ಪ್ರದರ್ಶನ ವೇದಿಕೆಯಲ್ಲಿಯೂ ಸಾಕಷ್ಟು ಜನ ಸೇರಿರುತ್ತಿದ್ದರು. ಭರತನಾಟ್ಯ, ಕಥಕ್ ಮೊದಲಾದ ಶಾಸ್ತ್ರೀಯ ನೃತ್ಯಗಳಿಗೆ, ಕರ್ನಾಟಕ ಸಂಗೀತ ಹಿಂದೂಸ್ತಾನೀ ಸಂಗೀತ ಮೊದಲಾದ ಶಾಸ್ತ್ರೀಯ ಸಂಗೀತ ಪ್ರದರ್ಶನ ನಡೆಯುತ್ತಿದ್ದ ವೇದಿಕೆಗಳಲ್ಲಿ ಜನ ಸೇರುತ್ತಿದ್ದುದು ಕಡಿಮೆ.
ಡೀಸೆಂಬರ್ ೨ – ಬೆಳಗ್ಗೆ ೮.೪೫ ನಡೆದ ಕು.ಮೇಘ ಸಾಲಿಗ್ರಾಮ ಅವರ ಅದ್ಭುತ ಸ್ಯಾಕ್ಸಪೋನ್ ವಾದನದೊಂದಿಗೆ ನುಡಿಸಿರಿಯಲ್ಲಿ ನಮ್ಮ ಎರಡನೆಯ ದಿನದ ಪಯಣ ಆರಂಭಗೊಂಡಿತ್ತು.
ನಂತರ ಶಿವರಾಮ ಕಾರಂತ ಸಭಾಂಗಣದಲ್ಲಿ ನಾವು ನೋಡಿದ ನಾದಸ್ವರ ವಾದನ, ರಾಘವೇಂದ್ರ ಭಟ್ ಅವರ ಹಿಂದೂಸ್ತಾನಿ ಗಾಯನ, ಅಯನಾ ಪೆರ್ಲ ಅವರ ಭರತನಾಟ್ಯ ಮೂರೂ ಕೂಡ ಅತ್ಯುತ್ತಮ ಕಾರ್ಯಕ್ರಮವಾಗಿದ್ದವು. ಆದರೆ ಆ ಸಂಭಾಂಗಣವು ತಳಮಹಡಿಯಲ್ಲಿದ್ದು ಹೆಚ್ಚಿನ ಜನಕ್ಕೆ ಅಲ್ಲಿ ಇದೆಯೆಂಬುದೇ ಗೊತ್ತಾಗದೇ ಇದ್ದುದರಿಂದಾಗಿ ಪ್ರೇಕ್ಷಕರೇ ಇರಲಿಲ್ಲ. ನಾಲ್ಕೇ ಜನ ಪ್ರೇಕ್ಷಕರಿದ್ದರೂ ತಲೆಕೆಡಿಸಿಕೊಳ್ಳದೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾವಿದರ ಬಗ್ಗೆ ನಿಜಕ್ಕೂ ಹೆಮ್ಮೆಯೆನ್ನಿಸಿತು.
ಸರಳ ಸಜ್ಜನರಾದ ಚುಕ್ಕಿಚಿತ್ರ ಕಲಾವಿದ ಮೋಹನ್ ವರ್ಣೇಕರ್ ಮತ್ತು ಅವರ ಪತ್ನಿಯವರನ್ನು ಭೇಟಿ ಮಾಡಿದ್ದು ಖುಷಿ ಕೊಟ್ಟಿತು. ನೂರಾ ಎಂಟು ಕನ್ನಡ ಸಾಹಿತ್ಯ ದಿಗ್ಗಜರ ಚುಕ್ಕಿ ಚಿತ್ರಗಳನ್ನು ರಚಿಸಿರುವುದು ವರ್ಣೇಕರ್ ಅವರ ಸಾಧನೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಚುಕ್ಕಿಚಿತ್ರಗಳನ್ನು ರಚಿಸುತ್ತಾ ಬಂದಿರುವ ವರ್ಣೇಕರ್ ಅವರು “ಚುಕ್ಕಿಚಿತ್ರಗಳಲ್ಲಿ ಸಾಹಿತ್ಯ ಚೇತನಗಳು” ಎಂಬ ಪುಸ್ತಕವನ್ನು ಬರೆದಿದ್ದಾರೆ.
ನೆಚ್ಚಿನ ಲೇಖಕಿ ಭುವನೇಶ್ವರು ಹೆಗಡೆಯವರು ಲೇಖಕಿ ಎಂ ಕೆ ಇಂದಿರಾ ಅವರನ್ನು ಸ್ಮರಿಸುತ್ತಾ ಹಳೆಯ ಕಾಲದ ಮಲೆನಾಡಿಗೊಮ್ಮೆ ಕರೆದೊಯ್ದರು. ತಮ್ಮ ೪೫ ವರ್ಷದಲ್ಲಿ ಸಾಹಿತ್ಯಲೋಕ ಪ್ರವೇಶಿಸಿ ಇಂದಿಗೂ ಓದಿಸಿಕೊಳ್ಳುವಂತಹ ಕಾದಂಬರಿಗಳನ್ನು ನೀಡಿರುವ ಇಂದಿರಾ ಬಗ್ಗೆ ಹೆಮ್ಮೆಯೆನ್ನಿಸಿತು.
ಘೇವರ್ ಖಾನ್ ಬಳಗದ ರಾಜಾಸ್ಥಾನಿ ಜನಪದ ಸಂಗೀತ ಮತ್ತು ನೃತ್ಯ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ನಂತರ ಇದುವರೆಗೂ ಹೆಚ್ಚು ಗೊತ್ತಿಲ್ಲದ ಭೂತಾನಿನ ಬಗ್ಗೆ ಕೆಲ ವಿಷಯಗಳನ್ನು ಇಲ್ಲಿ ತಿಳಿದೆ. ಭೂತಾನಿನ ಜನಪದ ಪ್ರದರ್ಶನದಲ್ಲಿ ಎದ್ದು ತೋರುತ್ತಿದ್ದುದು ಅವರ ಸರಳ ಸಜ್ಜನಿಕೆಯ ನಡುವಳಿಕೆ, ಭಾರತದ ಬಗ್ಗೆ ತುಂಬ ಗೌರವಯುತವಾಗಿ ಮಾತನಾಡುತ್ತಿದ್ದ ನಿರೂಪಕ ಮನಸೆಳೆದರು. ಹೆಜ್ಜೆಗಳು ಅತ್ಯಂತ ಸರಳವಾಗಿದ್ದರೂ ಲಾಲಿತ್ಯಪೂರ್ಣವಾದ ದೇಹಚಲನೆಯಿಂದ ಅವರ ಜನಪದ ನೃತ್ಯ ಗಮನ ಸೆಳೆಯುತ್ತಿತ್ತು. ವಿವಿಧ ರೀತಿಯ ಮುಖವಾಡಗಳನ್ನು ಬಳಸಿ ರಾಮಾಯಣ, ಬೌದ್ಧಧರ್ಮಕ್ಕೆ ಸಂಬಂಧಿಸಿದ ಅನೇಕ ಪೌರಾಣಿಕ ಕತೆಗಳ ನೃತ್ಯರೂಪಕಗಳು ಅವರ ಮತ್ತು ನಮ್ಮ ಸಂಸ್ಕೃತಿಗೆ ಇರುವ ಸಾಮ್ಯತೆಯನ್ನು ತಿಳಿಸುವಂತಿತ್ತು.

ರಾತ್ರಿ ಮಧುಲಿತ ಮೊಹಪಾತ್ರ ಅವರ ತಂಡದ ಒಡಿಸ್ಸಿ ನೃತ್ಯ ಇಷ್ಟವಾಯ್ತು. ನಂತರ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಪ್ರಸ್ತುತಪಡಿಸಿದ ಕೂಚುಪುಡಿ ನೃತ್ಯಪ್ರದರ್ಶನ ಅತ್ಯಂತ ರಮಣೀಯವಾಗಿತ್ತು. ದೇಶದ ಹೆಸರಾಂತ ಕಲಾವಿದರಾದ ವೈಜಯಂತಿ ಕಾಶಿಯವರು ಈ ವಯಸ್ಸಿನಲ್ಲೂ ತಮ್ಮ ಇಪ್ಪತ್ತರ ಹರೆಯದ ಮಗಳಿಗೆ ಸರಿಸಮನಾದ ವೇಗದಲ್ಲಿ ನರ್ತಿಸುವುದನ್ನು ನೋಡಿ ಸಂತೋಷವಾಯ್ತು.
ಆಳ್ವಾಸ್ ವಿಧ್ಯಾರ್ಥಿಗಳ ಸಾಂಸ್ಕೃತಿಕ ಸೌರಭದಲ್ಲಿ ಅಂದು ನಡೆದ ಮಲ್ಲಕಂಬ ಪ್ರದರ್ಶನ ಮೈನವಿರೇಳಿಸಿತ್ತು. ಹಗ್ಗದಲ್ಲಿ, ಕಂಬದಲ್ಲಿ ವಿವಿಧ ರೀತಿಯ ಆಸನಗಳನ್ನು, ಆಕೃತಿಗಳನ್ನು ನಿರ್ಮಿಸುತ್ತಾ ಹೋದ ಮಕ್ಕಳ ಸಾಧನೆ ಶ್ಲಾಘನೀಯವಾಗಿತ್ತು.
ಪ್ರಾಹ್ಲಾದ ಆಚಾರ್ಯ ಮತ್ತು ಅವರ ಇಬ್ಬರು ಮಕ್ಕಳು ನಡೆಸಿಕೊಟ್ಟ ಶ್ಯಾಡೋ ಪ್ಲೇ ಒಂದು ಕಲೆಯನ್ನು ಹೇಗೆಲ್ಲಾ ಪ್ರದರ್ಶಿಸಬಹುದೆಂಬುದಕ್ಕೆ ನಿದರ್ಶನದಂತಿತ್ತು. ಗೋವಿನ ಹಾಡನ್ನು ತಮ್ಮ ಕೈಬೆರಳುಗಳ ಮೂಲಕ ಪ್ರಸ್ತುತಪಡಿಸಿದ ಮಕ್ಕಳು ಗಮನಸೆಳೆದರು.
ಡಿಸೆಂಬರ್೩ – ಕೊನೆಯ ದಿನದ ಕಾರ್ಯಕ್ರಮಗಳು- ಬೆಳಗ್ಗೆ ೭ ಗಂಟೆಗೆ ನುಡಿಸಿರಿಯ ರೂವಾರಿ ಮೋಹನ್ ಆಳ್ವಾ ಅವರ ಜೊತೆಗಿನ ಸಂವಾದ, ಸಂಭಾಂಗಣ ತುಂಬಿ ತುಳುಕುತ್ತಿತ್ತು. ಒಂದು ಗಂಟೆಯ ಕಾಲ ಒಂಟಿಕಾಲಿನಲ್ಲಿ ನಿಂತಾದರೂ ಜನ ಅವರ ಮಾತನ್ನು ಕೇಳಿಸಿಕೊಂಡಿದ್ದು ಜನರಿಗೆ ಈ ಕಾರ್ಯಕ್ರಮ ಹಾಗೂ ಅದನ್ನು ರೂಪಿಸಿದವರ ಮೇಲಿದ್ದ ಅಭಿಮಾನವನ್ನು ಸೂಚಿಸುತ್ತಿತ್ತು.
ಅಂದು ಬೆಳಿಗ್ಗೆ ಮೂಡುಬಿದರೆಯ ಸಾವಿರ ಕಂಬದ ಬಸದಿಯನ್ನು ನೋಡಿ ನುಡಿಸಿರಿಗೆ ವಾಪಾಸಾದೆವು. ಇತ್ತೀಚೆಗೆ ನಮ್ಮನ್ನಗಲಿದ ಮಹಾನ್ ಯಕ್ಷಗಾನ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಂಸ್ಮರಣಾ ಭಾಷಣದಲ್ಲಿ ವಿದ್ವಾನ್ ಉಮಾಕಾಂತ ಭಟ್ಟರು, ಚಿಟ್ಟಾಣಿಯವರು ಬಡಗುತಿಟ್ಟಿನ ಯಕ್ಷಗಾನವನ್ನು ಬೆಳಿಸಿದ ಬಗೆಯನ್ನು ಕಟ್ಟಿಕೊಟ್ಟರು. ಅಭಿಮಾನಿಗಳ ಅತೀವ ಹೊಗಳಿಕೆಯೋ ಅಥವಾ ವಿಮರ್ಶಕರ ಅತೀವ ತೆಗಳುವಿಕೆಯೋ ಇಲ್ಲದ ಸಮಚಿತ್ತದ ಮಾತುಗಳಿಂದ ಮೇರು ಕಲಾವಿದನನ್ನು ಕಟ್ಟಿಕೊಟ್ಟ ಬಗೆ ಇಷ್ಟವಾಯ್ತು.
“ಸವಿತಕ್ಕನ ಅಳ್ಳಿ ಬ್ಯಾಂಡ್” ಎಂಬ ವಿಶಿಷ್ಟ ಹೆಸರಿನಿಂದಲೇ ಗಮನ ಸೆಳೆದ ಶ್ರೀಮತಿ ಸವಿತಾ ಮತ್ತು ಬಳಗದವರು, ಮಂಡ್ಯ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮಹದೇಶ್ವರ ಸ್ವಾಮಿಯ ಗೀತೆಗಳು, ಮಂಟೇ ಸ್ವಾಮಿಯ ರಚನೆಗಳೇ ಮೊದಲಾದವುಗಳನ್ನು ರಂಜನೀಯವಾಗಿ ಹಾಡಿದರು.
ಸಾಯಂಕಾಲ ಕಥಕ್ ನೃತ್ಯ ಪ್ರದರ್ಶನ ನೀಡಿದ ಪೂರ್ಣ ಆಚಾರ್ಯ ಅವರು ತಮ್ಮ ಭಾವಾಭಿನಯದಿಂದ ಗಮನ ಸೆಳೆದರು. ಗುಜರಾತಿ ಭಜನೆಯೊಂದಕ್ಕೆ ಅವರು ನೀಡಿದ ಅಭಿನಯ ಕಲೆಗೆ ಭಾಷೆಯ ಹಂಗಿಲ್ಲವೆಂಬುದನ್ನು ಸಾರಿ ಹೇಳಿತ್ತು.
ಸಮಾರೋಪ ಸಮಾರಂಭ ಮುಗಿದ ನಂತರ ನಡೆದ ಫಯಾಜ್ ಖಾನ್ ಅವರ ದಾಸವಾಣಿ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ನಾವು ನೋಡಿರದ ಚಿತ್ರವಿಚಿತ್ರ ಚಿಪ್ಪುಗಳ ಸಂಗ್ರಹದ ಪ್ರದರ್ಶನ, ಬೋನ್ಸಾಯ್, ಪಕ್ಷಿ, ಮೀನುಗಳ ಪ್ರದರ್ಶನ, ಜಾನುವಾರುಗಳ ಪ್ರದರ್ಶನ ಮುದಗೊಳಿಸಿತು. ಬೆಕ್ಕು, ನಾಯಿಗಳ ಫ್ಯಾಷನ್ ಶೋ ಸಮಯದ ಅಭಾವದಿಂದ ನೋಡಲಾಗಲಿಲ್ಲ.
ನುಡಿಸಿರಿಯಲ್ಲಿ ಎದ್ದು ತೋರುವ ಅಂಶವೆಂದರ ಸಂಘಟಕರ ಶಿಸ್ತುಬದ್ಧ ಆಯೋಜನೆ. ನಾಡಿನ ನಾನಾ ಭಾಗಗಳಿಂದ ಬರುವ ಪ್ರೇಕ್ಷಕರಿಗೆ ವಸತಿ ವ್ಯವಸ್ಥೆ, ಊಟೋಪಚಾರದಲ್ಲಿ ಎಳ್ಳಷ್ಟೂ ಲೋಪವಾಗದಂತೆ ನಿರ್ವಹಿಸುವ ಪರಿ ಅನನ್ಯ. ಮೂರೂದಿನಗಳು ಇಪ್ಪತ್ತೈದು ಸಾವಿರ ಜನರಿಗೆ ವಸತಿ ವ್ಯವಸ್ಥೆ, ಒಂದೂವರೆ ಲಕ್ಷದಷ್ಟು ಜನರಿಗೆ ಊಟ ತಿಂಡಿಯ ವ್ಯವಸ್ಥೆ ಅತ್ಯಂತ ಚೆನ್ನಾಗಿತ್ತು. ಅಷ್ಟೆಲ್ಲ ಜನರಿದ್ದರೂ ಎರಡು ನಿಮಿಷಕ್ಕಿಂತ ಹೆಚ್ಚು ಯಾವುದಕ್ಕೂ ಕಾಯುವ ಪ್ರಸಂಗ ಇರಲಿಲ್ಲ. ಇಡೀ ಕ್ಯಾಂಪಸ್ಸಿನಲ್ಲಿ ಕಸ ಕೊಳಕು ಕಾಣಸಿಗಲಿಲ್ಲ. ಊಟಕ್ಕೆ ಉಪಯೋಗಿಸಿದ ಅಡಿಕೆ ಹಾಳೆಯ ತಟ್ಟೆಗಳನ್ನು ಹಾಕಲು ಕಸದಬುಟ್ಟಿ, ಅದು ತುಂಬುತ್ತಿದ್ದಂತೆಯೇ ತಕ್ಷಣ ರಿಪ್ಲೇಸ್ ಮಾಡುತ್ತಿದ್ದ ಕಾರ್ಯಕರ್ತರ ತತ್ಪರತೆ, ದಿನವಿಡೀ ಬಡಿಸಿದರೂ ಮುಖದಲ್ಲಿ ನಗು ಉಳಿಸಿಕೊಂಡಿರುತ್ತಿದ್ದ ಆಳ್ವಾಸ್ ವಿದ್ಯಾರ್ಥಿಗಳ ಉತ್ಸಾಹ ಎಲ್ಲವೂ ನಿಜಕ್ಕೂ ಅನುಕರಣೀಯ. ಅನ್ನದ ಮಹತ್ವದ ಬಗ್ಗೆ, ಶುಚಿತ್ವದ ಮಹತ್ವದ ಬಗ್ಗೆ ಆಗಾಗ ಮೈಕಿನಲ್ಲಿ ಹೇಳುತ್ತಿದ್ದ ಬುದ್ಧಿವಾದಗಳ ಪ್ರಭಾವವೋ, ಅಥವಾ ಅಲ್ಲಿನ ವಾತಾವರಣವೋ ಗೊತ್ತಿಲ್ಲ, ಅನ್ನವನ್ನು ಚೆಲ್ಲುವವರ ಸಂಖ್ಯೆ, ತಿಂದ ತಟ್ಟೆಗಳನ್ನು ಕಸದ ಬುಟ್ಟಿಗಲ್ಲದೇ ಬೇರೆಡೆ ಹಾಕುವವರ ಸಂಖ್ಯೆ ತೀರಾ ತೀರಾ ಕಡಿಮೆಯಿತ್ತು.
ಸಮಯಪಾಲನೆಗೆ ಇಲ್ಲಿರುವ ಮಹತ್ವವನ್ನು ಎಲ್ಲರೂ ಅಳವಡಿಸಿಕೊಂಡರೆ ದೇಶ ಉದ್ಧಾರವಾಗುವುದರಲ್ಲಿ ಅನುಮಾನವಿಲ್ಲ. ವೇದಿಕೆಯ ಕಾರ್ಯಕ್ರಮಗಳಿರಲಿ, ಊಟ ತಿಂಡಿಯ ವ್ಯವಸ್ಥೆ ಇರಲಿ ಎಲ್ಲವೂ ನಿಗದಿತ ಸಮಯದ ಪ್ರಕಾರವೇ ನಡೆಯುತ್ತಿತ್ತು.
ಜನಪದ ಕಲೆಗಳನ್ನು ನೋಡುವವರಿಗೆ, ಶಾಸ್ತ್ರೀಯ ಸಂಗೀತ ನೃತ್ಯಗಳನ್ನು ನೋಡುವವರಿಗೆ, ಚಿತ್ರಕಲಾಸಕ್ತರಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮಗಳನ್ನು ನೋಡುವವರಿಗೆ, ಕೃಷಿ ಸಂಬಂಧಿ ಚಟುವಟಿಕೆಗಳ ಆಸಕ್ತರಿಗೆ, ಇದ್ಯಾವುದೂ ಇಷ್ಟವಿಲ್ಲದವರಿಗೂ ಸುಮ್ಮನೇ ತಿರುಗಾಡಿ ಶಾಪಿಂಗ್ ಮಾಡುವವರಿಗಾಗಿ ಪುಸ್ತಕ, ಬಟ್ಟೆ, ಆಹಾರ ಮಳಿಗೆಗಳು ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಮೇಳವೇ ನುಡಿಸಿರಿ.
ಕುಂದುಕೊರತೆಗಳು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ನನಗೆ ಕಾಣಿಸಿದ ಒಂದೆರಡು ದೋಷಗಳೆಂದರೆ,
• ಮುಖ್ಯ ವೇದಿಕೆಯು ಸಾಕಷ್ಟು ದೊಡ್ಡದಾಗಿದ್ದು, ಹಿಂದೆ ಕುಳಿತವರಿಗೆ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಹಿಂದೆ ಒಂದೆರಡು ಸ್ಕ್ರೀನ್ ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ.
• ಡಾ.ಶಿವರಾಮ ಕಾರಂತ ವೇದಿಕೆ ಹೊಸ ಕಟ್ಟಡದ ನೆಲಮಾಳಿಗೆಯಲ್ಲಿದ್ದು, ಅದು ಇರುವ ಜಾಗ ಸುಲಭವಾಗಿ ತಿಳಿಯುವಂತಿರಲಿಲ್ಲ. ಇದರಿಂದಾಗಿ ಕೆಲ ಅತ್ಯುತ್ತಮ ಕಾರ್ಯಕ್ರಮಗಳಿಗೆ ಪ್ರೇಕ್ಷಕರೇ ಇರಲಿಲ್ಲವೆಂಬುದು ಆ ಕಲಾವಿದರಿಗಾದ ಅನ್ಯಾಯವೆಂದೇ ತೋರಿತು.
• ಚಪ್ಪಾಳೆಯ ಕೊರತೆ. ಯಾವುದೇ ಕಲಾವಿದರಿಗೆ ಅವರ ಪ್ರದರ್ಶನಕ್ಕೆ ದೊರಕುವ ಸಂಭಾವನೆಗಿಂತಲೂ ಹೆಚ್ಚು ಖುಷಿಕೊಡುವುದು ಪ್ರೇಕ್ಷಕರ ಚಪ್ಪಾಳೆ. ಅತ್ಯುತ್ತಮ ಪ್ರದರ್ಶನ ನೀಡಿದಾಗಲೂ ಪ್ರೇಕ್ಷಕರು ನೀರಸವಾಗಿ ಬೇಕೋ ಬೇಡವೋ ಎಂಬಂತೆ ಚಪ್ಪಾಳೆ ತಟ್ಟುತ್ತಿದ್ದುದು ಏಕೆಂದು ಅರ್ಥವಾಗುತ್ತಿರಲಿಲ್ಲ. ಇದು ಸಂಘಟಕರಿಗೆ ಸಂಬಂಧಿಸಿದ ಸಮಸ್ಯೆ ಅಲ್ಲವಾದರೂ, ನಿರೂಪಕರು ಈ ಬಗ್ಗೆ ಪ್ರೇಕ್ಷಕರಿಗೆ ತಿಳುವಳಿಕೆ ನೀಡಿದರೆ ಸುಧಾರಿಸಬಹುದೆಂಬುದು ನನ್ನ ಅಭಿಪ್ರಾಯ.
ಮೊಟ್ಟ ಮೊದಲಬಾರಿಗೆ ಗಂಡ, ಮನೆ ಮಕ್ಕಳನ್ನು ಬಿಟ್ಟು ನಾನು, ನನ್ನ ಅಕ್ಕ ವಿಜಯಶ್ರೀ ಮತ್ತು ಅತ್ತಿಗೆಯ ಮಗಳು ರೂಪಶ್ರೀ ಮೂವರೇ ಹೋಗಿ, ಮೂರುದಿನ ಈ ಸಾಂಸ್ಕೃತಿಕ ಜಾತ್ರೆಯಲ್ಲಿ ಕಳೆದುಹೋಗಿದ್ದು ಸಾರ್ಥಕವೆನ್ನಿಸಿತ್ತು.
ಮೂರು ದಿನಗಳ ಕಾಲ ಹನ್ನೆರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ರಸದೌತಣ, ಅತಿಯಾದ ಆಡಂಬರವಿಲ್ಲದಿದ್ದರೂ, ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವಂತೆ ಶೃಂಗಾರಗೊಂಡ ಇಡೀ ಕ್ಯಾಂಪಸ್, ಬೀದಿ ಬೀದಿಗಳಲ್ಲೇ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಹಬ್ಬದ ವಾತಾವರಣವನ್ನು ಉಂಟುಮಾಡಿದ್ದ ಜನಪದ ಕಲಾವಿದರು, ಕರಾವಳಿಯ ಸೊಗಡಿನ ಊಟೋಪಚಾರ ಎಲ್ಲವನ್ನೂ ಅನುಭವಿಸಿ ವರ್ಷಕ್ಕಾಗುವಷ್ಟು ನೆನಪಬುತ್ತಿಯನ್ನು ಕಟ್ಟಿಕೊಂಡು ವಾಪಾಸ್ಸಾದೆವು.

3 Mar 2017

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ



ನಮ್ಮ ದಿನನಿತ್ಯದ ಬದುಕಿನಲ್ಲಿನ ಜಂಜಾಟಗಳಿಂದ ಮುಕ್ತಿ ಹೊಂದಿ ಮನಸ್ಸನ್ನು ಸಂತೋಷವಾಗಿಡಬಲ್ಲ ಯಾವುದೇ ಸಂಗತಿಯನೊಡನೆ ತಾದ್ಯಾತ್ಮ ಸಾಧಿಸುವುದು ಆಧ್ಯಾತ್ಮಿಯೊಬ್ಬನ ಕನಸಾಗಿರುತ್ತದೆ. ಕೆಲವರಿಗೆ ದೇವರ, ಗುರುವಿನ ಧ್ಯಾನ ಆಧ್ಯಾತ್ಮವಾದರೆ, ಕೆಲವರಿಗೆ ತನ್ನಿಷ್ಟದ ಹವ್ಯಾಸದಲ್ಲಿ ತೊಡಗುವುದು ಆಧ್ಯಾತ್ಮವಾಗುತ್ತದೆ. ಪ್ರಕೃತಿಪ್ರಿಯನೊಬ್ಬ ಸುಂದರ ಪರಿಸರದಲ್ಲಿ ಆಧ್ಯಾತ್ಮಿಕ ಅನುಭೂತಿಗೊಳಗಾದರೆ, ಕಲಾಸಕ್ತನೊಬ್ಬ ಕಲೋಪಾಸನೆಯಲ್ಲಿ ಆಧ್ಯಾತ್ಮಿಕ ಅನುಭೂತಿ ಪಡೆಯುತ್ತಾನೆ.    ಈ ಒಂದು ಆಧ್ಯಾತ್ಮಿಕ ಅನುಭೂತಿಗಾಗಿ ಇರುವುದೆಲ್ಲವನ್ನೂ ಬಿಟ್ಟು ಇನ್ನೇನನ್ನೋ ಅರಸಿ ಹೊರಡುವವರೂ ಇದ್ದಾರೆ, ತಮ್ಮ ಕರ್ತವ್ಯವದಲ್ಲೇ ಇದನ್ನು ಪಡೆದವರೂ ಇದ್ದಾರೆ.

ಇಂತಹ ಆಧ್ಯಾತ್ಮಕ್ಕೂ ಪ್ರಾಣಿಜಗತ್ತಿಗೂ ಎತ್ತಲ ನೆಂಟು? ಜೀವಜಗತ್ತಿನಲ್ಲಿ ತುಂಬಾ ಉನ್ನತ ಸ್ಥಾನದಲ್ಲಿದ್ದೇವೆ ಎಂದುಕೊಂಡಿರುವ, ಉಳಿದೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತರೆಂದುಕೊಂಡಿರುವ ನಾವು, ಪ್ರಾಣಿಗಳು ಯಾವುದೇ ಸಂಸ್ಕಾರವಿಲ್ಲದ, ಆಧ್ಯಾತ್ಮಿಕ ಪ್ರಜ್ಞೆ ಇಲ್ಲದ ಜೀವಿಗಳು ಎಂದುಕೊಂಡಿದ್ದೇವೆ. ಆದರೆ ನಿಜ ಅರ್ಥದಲ್ಲಿ  ಪ್ರಕೃತಿಯೆಂಬ ಮಾಹಾಶಕ್ತಿಯೊಡನೆ ತಾದ್ಯಾತ್ಮ ಸಾಧಿಸಿ ಬದುಕುತ್ತಿರುವ ಪ್ರಾಣಿಗಳು ನಮಗಿಂತ ಹೆಚ್ಚಿನ ಆಧ್ಯಾತ್ಮಿಗಳೆನ್ನಬಹುದು.
ಬಾಲ್ಯ
 ಪ್ರಾಣಿ, ಪಕ್ಷಿ, ಕೀಟಗಳು ಬಾಲ್ಯದಿಂದಲೆ ಬದುಕಿಗೆ ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾದುದದ್ದು ಅನಿವಾರ್ಯ. ಪಕ್ಷಿಜಗತ್ತಿನಲ್ಲಿ ಬಲಹೀನ ಮರಿಗಳನ್ನು ಬಲಶಾಲಿಯಾದ ಸೋದರ ಮರಿಗಳೇ ಕೊಂದುಬಿಡುತ್ತವೆ. ಆದ್ದರಿಂದ ಕಣ್ಣೂ ಸಹ ಕಾಣದ ಪುಟ್ಟ ಹಕ್ಕಿ ಮರಿಯೊಂದು ಹತ್ತಿರದಲ್ಲಿ ತಾಯಿ ಅಥವಾ ತಂದೆಯ ಇರುವಿನ ಸುಳಿವು ದೊರಕುತ್ತಿದ್ದಂತೆಯೆ ಹೆಚ್ಚು ಹೆಚ್ಚು ಕೂಗುತ್ತದೆ, ಹೀಗೆ ಹೆಚ್ಚು ಕೂಗುವ ಮರಿಗಳಿಗೇ ಹೆಚ್ಚಿನ ಆಹಾರ ದೊರಕುತ್ತದೆ. ಬೇಗ ದೊಡ್ಡದಾಗಿ ಹಾರಲು ಕಲಿತಷ್ಟೂ ಅದು ಬದುಕುವ ಸಾಧ್ಯತೆ ಹೆಚ್ಚುತ್ತದೆ.
ಚಿಟ್ಟೆಗಳ ಬಾಲ್ಯಾವಸ್ಥೆಯಾದ ಕಂಬಳಿಹುಳುವೊಂದು ತನ್ನ ಗಾತ್ರಕ್ಕೆ ಅತೀ ಎನ್ನುವಷ್ಟು ತಿಂದು ಶಕ್ತಿ ಸಂಚಯಿಸಿಕೊಳ್ಳುತ್ತದೆ. ಹೀಗೆ ಸಂಚಯಗೊಂಡ ಶಕ್ತಿಯಿಂದ ಮುಂದೆ ಕೋಶಾವಸ್ಥೆಯಲ್ಲಿ ಕುಳಿತು ರೆಕ್ಕೆ ಗಳಿಸಿ ಚಿಟ್ಟೆಯಾಗಿ ಬದಲಾಗುತ್ತದೆ.
 ಮನೆಯ ಬೆಕ್ಕಿನ ಮರಿಗಳು, ಮಲಗಿರುವ ಅಮ್ಮನ ಬಾಲದಲ್ಲಿ ಚಿನ್ನಾಟವಾಡುತ್ತಿರುವುದನ್ನು ಗಮನಿಸಿರಬಹುದು. ತಾಯಿ ತನ್ನ ಬಾಲವನ್ನು ಆಕಡೆ ಈಕಡೆ ಆಡಿಸುತ್ತಿರುತ್ತದೆ, ಅತ್ಯಂತ ತಲ್ಲೀನತೆಯಿಂದ ಮರಿಗಳು ಅದನ್ನು ಹಿಡಿದು ಕಚ್ಚಲು ಪ್ರಯತ್ನಿಸುತ್ತಿರುತ್ತವೆ. ಇದು ಆ ಸಮಯದಲ್ಲಿ ಆಟದಂತೆ ಕಂಡರೂ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸುವ ವಿಧಾನವಾಗಿರುತ್ತದೆ.  

ಈ ಎಲ್ಲ ಉದಾಹರಣೆಗಳಲ್ಲಿ ಕಾಣಿಸುವಂತೆ ಬಾಲ್ಯವೆಂಬುದು ಶಕ್ತಿ ಸಂಚಯನದ ಕಾಲ. ದೈಹಿಕ ಶಕ್ತಿ, ಬೌದ್ಧಿಕ ಶಕ್ತಿಗಳನ್ನು ಹೆಚ್ಚು ಗಳಿಸಿದಷ್ಟೂ ಮುಂದಿನ ಜೀವನ ಸುಗಮ.  ಪ್ರಾಣಿಗಳ ಮರಿಗಳು ಅತ್ಯಂತ ಉತ್ಕಂಟಿತವಾಗಿ ಇದನ್ನು ಸಾಧಿಸುತ್ತವೆ.
ಇದು ಮಾನವನ ಜೀವನಕ್ಕೂ ಅನ್ವಯಿಸುತ್ತದೆ. ಬಾಲ್ಯದಲ್ಲಿನ ಕಲಿಕೆ ಮುಂದಿನ ಜೀವನವನ್ನು ನಡೆಸುವ ದಾರಿದೀಪ. ಬದುಕಿನ ಆ ಕಾಲಘಟ್ಟದಲ್ಲಿ ದೈಹಿಕ ಸಾಮರ್ಥ್ಯ, ಬೌದ್ಧಿಕ ಸಾಮರ್ಥ್ಯ ಎರಡನ್ನೂ ಗಳಿಸುವ ಪ್ರಾಮಾಣಿಕ ಪ್ರಯತ್ನವೇ ಆಧ್ಯಾತ್ಮ.
ಯೌವ್ವನ
ಹುಲಿ, ಸಿಂಹ ಮೊದಲಾದ ಬೇಟೆಯಾಡುವ ಪ್ರಾಣಿಗಳು ತಮ್ಮ ಉಗುರುಗಳನ್ನು ಒರಟಾದ ಮರದ ಕಾಂಡಕ್ಕೆ ತಿಕ್ಕಿ ಚೂಪಾಗಿರಿಸಿಕೊಳ್ಳುತ್ತವೆ. ಇದು ಅವುಗಳು ಬೇಟೆಯಾಡಲು ಅತೀ ಅವಶ್ಯಕ. ಹಕ್ಕಿಗಳು ತಮ್ಮ ರೆಕ್ಕೆಗಳ ನಡುವೆ ಒಂದಿನಿತೂ ಕೊಳೆ ಕಸ ಕೂರದಂತೆ ಆಗಾಗ ಶುಚಿಗೊಳಿಸಿಕೊಳ್ಳುತ್ತಲೇ ಇರುತ್ತವೆ. ಇದರಿಂದ ಹಾರುವಾಗ ರೆಕ್ಕೆಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
ಪ್ರತಿಯೊಂದು ಪ್ರಾಣಿ ಪಕ್ಷಿಯೂ ತನ್ನದೇ ಆದ ಒಂದಿಷ್ಟು ಜಾಗವನ್ನು ಗುರುತಿಸಿಕೊಂಡಿರುತ್ತದೆ. ಆ ಜಾಗವನ್ನು ಅತ್ಯಂತ ಕೆಚ್ಚಿನಿಂದ ಕಾಪಾಡಿಕೊಳ್ಳುತ್ತದೆ. ಹೀಗೆ ತನ್ನದೇ ಆದ ನೆಲೆ ಹೊಂದುವುದು ವಾಸ, ಆಹಾರ, ರಕ್ಷಣೆಗೆ ಅತ್ಯಂತ ಉಪಯುಕ್ತ.
ಆಕ್ಟೋಪಸ್ ಅಕಶೇರುಕಗಳಲ್ಲೇ ಅತೀ ಬುದ್ಧಿವಂತ ಪ್ರಾಣಿ ಎನ್ನಿಸಿಕೊಂಡಿದೆ. ಇದು ತನ್ನನ್ನು ಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಅನೇಕ ಉಪಾಯ ಹೂಡುತ್ತದೆ.ಬೆನ್ನಟ್ಟಿದ ವೈರಿಯ ಮೇಲೆ ಕಣ್ಣು ಕಾಣಿಸದಿರುವಂತೆ, ವಾಸನೆ ತಿಳಿಯದಿರುವಂತೆ ಮಾಡುವ ಇಂಕಿನಂತಹ ದಟ್ಟ ಬಣ್ಣದ, ಕೆಟ್ಟ ವಾಸನೆಯ ದ್ರವವನ್ನು ಎರಚಿಬಿಡುವುದು, ವೈರಿಯನ್ನು  ಭಯಪಡಿಸುವಂತೆ  ದೇಹವನ್ನು ಹಾವಿನ ಆಕಾರಕ್ಕೆ ಬದಲಿಸಿಕೊಳ್ಳುವುದು, ಬಣ್ಣ ಬದಲಿಸಿಕೊಳ್ಳುವುದು, ತನ್ನ ಎಂಟು ಬಾಹುಗಳಲ್ಲಿ ಒಂದನ್ನು ದೇಹದಿಂದ ಕಳಿಚಿಕೊಂಡು ವೈರಿಯನ್ನು ಗೊಂದಲಗೊಳಿಸುವುದು ಅವುಗಳಲ್ಲಿ ಮುಖ್ಯವಾದವು.

ಹೀಗೆ ಪ್ರಾಣಿಗಳಿಗೆ ಯೌವ್ವನವೆಂಬುದು ಕೌಶಲ್ಯವನ್ನು ವೃದ್ದಿಗೊಳಿಸಿಕೊಳ್ಳುವ ಮೂಲಕ ಆಹಾರ ಪಡೆದುಕೊಳ್ಳುವ, ತನ್ನ ಸಾಮ್ರಾಜ್ಯವನ್ನು ಗುರುತಿಸಿಕೊಳ್ಳುವ, ತನ್ನನ್ನು ತಾನು ರಕ್ಷಿಸಿಕೊಳ್ಳುವ ಕಾಲ.
ನಮ್ಮ ಯೌವ್ವನವನ್ನೂ ಇದರಲ್ಲಿ ಸಮೀಕರಿಸಿಕೊಳ್ಳಬಹುದು. ನಾವು ಬಾಲ್ಯದಲ್ಲಿ ಕಲಿತ ವಿದ್ಯೆಯಿಂದ ನಮ್ಮ ಮತ್ತು ಸಮಾಜದ ಉನ್ನತಿಗೆ ಶ್ರಮಿಸುವುದು, ನಮ್ಮ ಕೌಶ್ಯಲ್ಯ ವೃದ್ದಿಗೆ ಬೇಕಾದ ಪ್ರಯತ್ನಗಳನ್ನು ಮನವಿಟ್ಟು ಮಾಡುವುದು, ನಮ್ಮದೆ ನಕಾರಾತ್ಮಕ ಗುಣಗಳೆಂಬ ವೈರಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಈ ವಯಸ್ಸಿನಲ್ಲಿ ಅತೀ ಮುಖ್ಯ.
ಸಂತತಿ
Oophaga pumilio ಮಧ್ಯ ಅಮೆರಿಕಾದ ಮಳೆ ಕಾಡುಗಳಲ್ಲಿ ವಾಸಿಸುವ ಕೆಂಪು ಬಣ್ಣದ ವಿಷಕಪ್ಪೆ. ಇದು ತನ್ನ ಮೊಟ್ಟೆ, ಮರಿಗಳನ್ನು ರಕ್ಷಿಸುವ ವಿಧಾನ ಅತ್ಯಂತ ವಿಶಿಷ್ಟವಾದದ್ದು.  ಮಳೆಕಾಡುಗಳ ದಟ್ಟ ಮರಗಳ ಬಳಿ ಇದರ ವಾಸ. ಹೆಣ್ಣು ಕಪ್ಪೆಯು ಸಂಗಾತಿಯ ಜೊತೆಗೂಡಿ, ಒಟ್ಟಿಗೆ ನಾಲ್ಕಾರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನು ಭಕ್ಷಕಗಳಿಂದ ರಕ್ಷಿಸುವ ಕೆಲಸ ಗಂಡಿನದು. ಮೊಟ್ಟೆಗಳ ಬೆಳವಣಿಗೆಗೆ ತೇವಾಂಶ ಅವಶ್ಯಕವಾದ್ದರಿಂದ ಗಂಡು ಕಪ್ಪೆ ತನ್ನ ಮೂತ್ರವನ್ನೇ ಸಿಂಪಡಿಸಿ ಮೊಟ್ಟೆಗಳ ತೇವಾಂಶವನ್ನು ಕಾಪಾಡುತ್ತದೆ.೧೦-೧೪ ದಿನಗಳ ನಂತರ ಮೊಟ್ಟೆಗಳು ಒಡೆದು ಮರಿಗಳು(ಗೊದಮೊಟ್ಟೆ) ಹೊರಬರುತ್ತವೆ. ಕಪ್ಪೆಯ ಮರಿಗಳು ಬೆಳೆಯಲು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಈಗ ಹೆಣ್ಣು ಕಪ್ಪೆ ಒಂದೊಂದೇ ಮರಿಗಳನ್ನು ತನ್ನ ಬೆನ್ನ ಮೇಲೆ ಹೊತ್ತು ಮಳೆಕಾಡುಗಳ ದೈತ್ಯ ಮರವನ್ನೇರುತ್ತದೆ. ನೀರು ಬೇಕಾದರೆ ಮರವನ್ನೇರುವುದೇಕೆಂದಿರಾ? ಆ ದೈತ್ಯ ಮರಗಳ ಮೇಲೆ ಬೆಳೆದಿರುವ ಬಂದಳಿಕೆ ಸಸ್ಯಗಳು ತಮ್ಮ ಎಲೆಗಳ ನಡುವೆ ಮಳೆನೀರನ್ನು ಹಿಡಿದಿಟ್ಟುಕೊಂಡಿರುತ್ತವೆ.  ಇಂತಹ ಒಂದೊಂದು ಪುಟ್ಟ ನೀರಿನ ಕೊಳದಲ್ಲಿ ತನ್ನ ಒಂದೊಂದು ಮರಿಗಳನ್ನು ಹೊತ್ತೊಯ್ದು ಬಿಡುತ್ತದೆ ಈ ತಾಯಿಕಪ್ಪೆ. ಇಲ್ಲಿ ಅವುಗಳಿಗೆ ಭಕ್ಷಕಗಳ ಕಾಟ ಕಡಿಮೆಯೆಂಬುದು ಬಹುಶಃ ಈ ವಿಧಾನ ಅಳವಡಿಸಿಕೊಳ್ಳಲು ಕಾರಣವಿರಬಹುದು. ಆದರೆ ಹೀಗೆ ಬಿಟ್ಟೊಡನೆ ತಾಯಿ ಕಪ್ಪೆಯ ಕರ್ತವ್ಯ ಮುಗಿಯುವುದಿಲ್ಲ. ಆ ಮರಿಗಳು ಬೆಳೆದು ದೊಡ್ದದಾಗುವವರೆಗೂ ಅಂದರೆ ಸುಮಾರು ಒಂದು ತಿಂಗಳವರೆಗೂ ಪ್ರತಿಯೊಂದು ಮರಿಗಳಿರುವಲ್ಲಿಯೂ ಹೋಗಿ ತನ್ನದೇ  ಅಂಡಾಣುಗಳನ್ನು ಆಹಾರವಾಗಿ ಕೊಡುತ್ತದೆ.
ಕಪ್ಪೆಯಂತಹ ಪುಟ್ಟ ಜೀವಿಯೊಂದು ತಿಂಗಳುಗಳ ಕಾಲ ಅಪಾರ ಶಕ್ತಿ ಬೇಡುವ ಈ ಕೆಲಸಗಳನ್ನು ಮಾಡುವುದು ಒಂದು ರೀತಿಯ ಧ್ಯಾನವೇ ಅಲ್ಲವೆ?
ಮಳೆಕಾಡುಗಳಲ್ಲಿ ವಾಸಿಸುವ ಮಂಗಟ್ಟೆ ಹಕ್ಕಿಗಳಲ್ಲಿ ಹೆಣ್ಣು ಹಕ್ಕಿ ಮರದ ಪೊಟರೆಯೊಳಗೆ ಮೊಟ್ಟೆಗಳನ್ನಿಟ್ಟು ತಾನೂ ಅಲ್ಲೇ ಕುಳಿತು ಕಾವು ಕೊಡುತ್ತದೆ. ಈ ಗೂಡಿಗೆ ಚಿಕ್ಕದೊಂದು ರಂದ್ರವನ್ನು ಬಿಟ್ಟು ಗೂಡನ್ನು ಮುಚ್ಚಿಬಿಡುತ್ತದೆ. ಮುಂದೆ ಮರಿ ಹೊರಬರುವವರೆಗೂ ತಿಂಗಳುಗಳ ಕಾಲ ಅಲ್ಲೇ ಉಳಿಯುವ ಹೆಣ್ಣುಹಕ್ಕಿಗೆ ಆಹಾರವನ್ನು ತಂದು ಕೊಡುವ ಕೆಲಸ ಗಂಡು ಮಂಗಟ್ಟೆ ಹಕ್ಕಿಯದು. ತಮ್ಮ ಸಂತತಿಯನ್ನು ಬೆಳೆಸುವುದಕ್ಕಾಗಿ ಮಂಗಟ್ಟೆ ದಂಪತಿಗಳು ತಮ್ಮ ಬದುಕನ್ನೇ ಮುಡಿಪಾಗಿಡುತ್ತವೆ.

ಆಸ್ಟ್ರೇಲಿಯಾದ ಸಸ್ತನಿ ಕಾಂಗರು ತನ್ನ ಮರಿಗಳನ್ನು ಬೆಳೆಸುವ ರೀತಿಯೆ ಅನನ್ಯ. ಅದರ ಮರಿಗಳು ಹುಟ್ಟುವಾಗ ಅತ್ಯಂತ ಚಿಕ್ಕದಾಗಿರುತ್ತವೆ. ಕಣ್ಣೂ ಸಹ ಕಾಣದ ಮರಿ ಹುಟ್ಟಿದ ತಕ್ಷಣ ಹೇಗೋ ತೆವಳಿಕೊಂಡು ತಾಯಿಯ ಹೊಟ್ಟೆಯಲ್ಲಿರುವ ಚೀಲದೊಳಕ್ಕೆ ನುಸುಳುತ್ತದೆ. ಈ ಚೀಲದಲ್ಲಿರುವ ಮೊಲೆಗಳಲ್ಲಿ ಒಂದನ್ನು ಕಚ್ಚಿ ಹಾಲು ಹೀರುತ್ತಾ ಮುಂದಿನ ಒಂಬತ್ತು ತಿಂಗಳುಗಳ ಕಾಲ ಅಲ್ಲೇ ಬೆಳೆಯುತ್ತವೆ. ಈ ಮರಿ ಸ್ವಲ್ಪ ದೊಡ್ಡದಾಗುತ್ತಿರುವಂತೆಯೆ ತಾಯಿ ಕಾಂಗರೂ ತನ್ನಲ್ಲಿದ್ದ ಇನ್ನೊಂದು ಭ್ರೂಣವನ್ನು ಬೆಳೆಸತೊಡಗುತ್ತದೆ. ಆ ಮರಿ ಹೊರಬಂದ ನಂತರ ತಾಯಿಯ ಚೀಲದಲ್ಲಿ ಇನ್ನೊಂದು ಮೊಲೆಯನ್ನು ಕಚ್ಚಿ ಬೆಳೆಯುತ್ತದೆ. ಹೀಗೆ ಏಕಕಾಲದಲ್ಲಿ ತಾಯಿ ಕಾಂಗರೂ ಒಂದು ದೊಡ್ಡ ಮರಿಯನ್ನೂ ಇನ್ನೊಂದು ಚಿಕ್ಕ ಮರಿಯನ್ನೂ ಬೆಳೆಸುತ್ತದೆ. ಅದರ ಎರಡು ಮೊಲೆಗಳಲ್ಲಿ ಆಯಾ ಮರಿಗಳಿಗೆ ಬೇಕಾದ ಪೋಷಕಾಂಶವಿರುವ ಹಾಲು ಉತ್ಪತ್ತಿಯಾಗುವುದು ವಿಶೇಷ.

ಹೀಗೆ ತಮ್ಮ ಸಂತತಿಯನ್ನು ಬೆಳೆಸಲು ತಮ್ಮೆಲ್ಲ ಶಕ್ತಿ ವ್ಯಯಿಸುವ ಪ್ರಾಣಿಗಳು ಮರಿಗಳು ಬದುಕಲು ಬೇಕಾದ ಕೌಶಲ್ಯ ಬೆಳೆಸಿಕೊಳ್ಳುತ್ತಿದ್ದಂತೆಯೆ ಅವುಗಳನ್ನು ಅವುಗಳ ಪಾಡಿಗೆ ಸ್ವತಂತ್ರವಾಗಿ ಬಿಟ್ಟುಬಿಡುತ್ತವೆ. ನಂತರ ಪರಸ್ಪರರಲ್ಲಿ ಯಾವುದೇ ಹಕ್ಕೊತ್ತಾಯ ಪ್ರಾಣಿಜಗತ್ತಿನಲ್ಲಿಲ್ಲ.

ನಮ್ಮ ಸಂತತಿಯನ್ನು ಬೆಳೆಸುವುದರಲ್ಲಿ ನಾವು ಮಾನವರೂ ನಮ್ಮೆಲ್ಲ ಶಕ್ತಿಯನ್ನೂ ವ್ಯಯಿಸುತ್ತೇವೆ, ನಿಜ. ಮಕ್ಕಳ ಕೌಶಲ್ಯಾಭಿವೃದ್ದಿಗೆ ಗಮನ ಹರಿಸುವುದಕ್ಕಿಂತ ಅವರಿಗೆ ಆಸ್ತಿ ಮಾಡಿಡುವ ಬಗ್ಗೆ ಯೋಚಿಸುವವರು, ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮನ್ನು ನೋಡಿಕೊಳ್ಳಲೆಂದೇ  ಮಕ್ಕಳನ್ನು ಬೆಳೆಸುವವರು, ಅಪ್ಪ ಅಮ್ಮ ಮಾಡಿಟ್ಟ ಆಸ್ತಿಯಲ್ಲೇ ಜೀವನ ಕಳೆಯುವವರು, ಆಸ್ತಿ ಕೊಡಲಿಲ್ಲವೆಂದು ಅಪ್ಪ ಅಮ್ಮನನ್ನೇ ಸಾಯಿಸುವವರು...ಒಹ್ ಮಾನವರಲ್ಲಿ ಪೋಷಕರ ಮತ್ತು ಮಕ್ಕಳ ಸಂಭಂದಕ್ಕೆ ಎಷ್ಟೊಂದು ಮುಖಗಳು.....ಅದರಿಂದಾಗಿಯೆ ಎಷ್ಟೊಂದು ನೋವುಗಳು ಅಲ್ಲವೆ?

ಸಾವು
ಬಹುಶಃ ಮಾನವ ಸಾವಿಗೆ ಹೆದರುವಷ್ಟು ಬೇರಾವ ಜೀವಿಯೂ ಹೆದರುವುದಿಲ್ಲ. ಸಾವನ್ನು ಮುಂದೂಡಲು, ಚಿರಂಜೀವಿಯಾಗಿ ಬದುಕಿಬಿಡಲು ಶತಶತಮಾನಗಳಿಂದ ಮಾನವ ಪ್ರಯತ್ನಿಸುತ್ತಲೇ ಇದ್ದಾನೆ.  ಹುಟ್ಟು ಬದುಕು ತನ್ನ ಸಂತತಿಗೆ ತನ್ನೆಲ್ಲ ಕೌಶಲ್ಯ ವರ್ಗಾವಣೆಯ ನಂತರ ಹೆಚ್ಚಿನ ಜೀವಿಗಳು ಸಹಜವಾಗಿ ಸಾವನ್ನಪ್ಪುತ್ತವೆ. ವಯಸ್ಸಿಗನುಗುಣವಾಗಿ ಬರುವ ಸಾವನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಮಾನವನಿಗೆ ಬಂದರೆ ಅವನ ಅರ್ಧ ಮನಃಕ್ಲೇಶ ತಪ್ಪುತ್ತದೆ.
ಮರುಹುಟ್ಟು
“Energy can neither be created nor be destroyed” ಎಂದು ಹೇಳುತ್ತದೆ ವಿಜ್ಞಾನ. "ಭೌತಿಕ ದೇಹಕ್ಕೆ ಸಾವುಂಟು ಆದರೆ ಆತ್ಮಕ್ಕೆ ಸಾವಿಲ್ಲ" ಆಧ್ಯಾತ್ಮದ ಮಾತು. ಮರುಹುಟ್ಟು ಪ್ರಕೃತಿಯಲ್ಲಿ ಅತ್ಯಂತ ಸಹಜವಾಗಿ ನಡೆಯುವ ಪ್ರಕ್ರಿಯೆ. ಮನೆಯ ಅಡಿಗೆ ಕೋಣೆಯಲ್ಲಿ ರಾತ್ರಿ ಸತ್ತು ಬಿದ್ದ ಜಿರಲೆಯೊಂದು ಮಾರನೆಯ ದಿನ ಸಾವಿರಾರು ಇರುವೆಗಳ ದೇಹದ್ರವವಾಗಿ ಜೀವ ಪಡೆದಿರುತ್ತದೆ. ಗಿಡಮರಗಳ ಒಣಗಿ ಬಿದ್ದ ತರಗಲೆಗಳು ಲಕ್ಷಾಂತರ ಸೂಕ್ಷಾಣುಗಳ ಆಹಾರವಾಗಿ ಮತ್ತೆ ಮೂಲ ಧಾತುಗಳಾಗಿ ಬದಲಾಗಿ ಇನ್ನಷ್ಟು ಹೊಸ ಗಿಡಮರಗಳಲ್ಲಿ ಬದುಕು ಕಂಡುಕೊಳ್ಳುತ್ತವೆ.  ಹುಲಿಗೆ ಬಲಿಯಾದ ಜಿಂಕೆಯೊಂದು ಕೇವಲ ಹುಲಿಗಷ್ಟೇ ಅಲ್ಲದೆ, ಉಳಿದ ಮಾಂಸ ತಿನ್ನುವ ಹೈನಾ, ರಣಹದ್ದು, ಕಾಗೆ ಮೊದಲಾದ ಪ್ರಾಣಿಗಳಿಗೆ, ಸೂಕ್ಷ್ಮಾಣುಗಳಿಗೂ ಆಹಾರವಾಗಿ ಅವುಗಳಲ್ಲಿ ಬದುಕುತ್ತದೆ. ಜೀವಚಕ್ರ ಹೀಗೆ ನಿರಂತರವಾಗಿ ತಿರುಗುತ್ತಲೇ ಇರುತ್ತದೆ.
ಕೊನೇಹನಿ

ಪ್ರಾಣಿಗಳಂತೆ ಬದುಕನ್ನು ಉತ್ಕಟವಾಗಿ ಪ್ರೀತಿಸಿ, ಆಯಾ ಕಾಲಘಟ್ಟದಲ್ಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಕೊನೆಕಾಲದಲ್ಲಿ ಎಲ್ಲಾ ಮೋಹಗಳಿಂದ ಕಳಚಿಕೊಂಡು ಮುಕ್ತರಾಗುವುದು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಆಧ್ಯಾತ್ಮಿಕ ಬದುಕಿಲ್ಲ.  

19 Nov 2015

ಹೀಗೊಂದು ವಾಕಿಂಗ್ ಪುರಾಣ

ಸುಮೀ ...ಏಳು , ನಾಲ್ಕೂಮುಕ್ಕಾಲು ಆಗೋಯ್ತು , ವಾಕಿಂಗ್ ಹೋಗೋಣ ಏಳು.....  ಪತಿರಾಯ ಎಬ್ಬಿಸ್ತಾ ಇದ್ದರೆ ಈ ಬೆಳಗಿನ ಜಾವ ಮಾತ್ರ ಆತ ಹಾಗೆ ಕರೆಯೋದನ್ನ ಇನ್ನಷ್ಟು ಕೇಳುವ ಆಸೆಯಿಂದ ಮತ್ತೆ ಮುಸುಕೆಳೆದು ಮಲಗಿಬಿಡ್ತೇನೆ. ಥಟ್ಟನೆ ನನ್ನ ಹೊದಿಕೆಯನ್ನು ಎಳೆದು ಹಾಕುವ ಆ ಅಶುಕವಿ ಏನೋನೋ ಕವನ ಕಟ್ಟಿ ಯಕ್ಷಗಾನದ ಧಾಟಿಯಲ್ಲಿ ಹಾಡಿ , ನಾಲ್ಕು ಹೆಜ್ಜೆಯನ್ನೂ ಹಾಕುವಷ್ಟರಲ್ಲಿ ಜೋರಾಗಿ ನಗು ಬಂದು ನಿದ್ರೆ ಹಾರಿಹೋಗುತ್ತದೆ. ಆದರೂ "ಇವತ್ಯಾಕೋ ಕಾಲು ನೋವು , ಮಳೆ ಬರೋ ಹಾಗಿದೆ ಅಲ್ವಾ , ಚಳಿ ಜಾಸ್ತಿ  , ಇವತ್ತೊಂದಿನ ನಿದ್ದೆ ಮಾಡ್ತೀನಿ ಪ್ಲೀಸ್ ....ಹೀಗೆ ಮುಗಿಯದ ಕಾರಣಗಳನ್ನು ಕೊಡ್ತಾ ಮಲಗಿರುವುದು ನಂಗಿಷ್ಟ . ಆದರೆ ನನ್ನ ಸೋಮಾರಿತನ ಚೆನ್ನಾಗಿ ಗೊತ್ತಿರೋ ಪತಿರಾಯ ಬಿಡೋದುಂಟೆ? ಅಂತೂ ಎದ್ದು ತಯಾರಾಗಿ ಮನೆಯಿಂದ ಹೊರಟರೆ ನಿರುತ್ಸಾಹ ಮಾಯವಾಗಿ ಎಷ್ಟು ದೂರವಾದರೂ ನಡೆಯುವ ಉತ್ಸಾಹ ತುಂಬಿಕೊಳ್ಳೊದು ಆಶ್ಚರ್ಯವೇ ಸರಿ.


ಪಕ್ಕದ ಮನೆಯ ಹೊರಕಟ್ಟೆಯ ಮೇಲೆ ಯಾರೋ ಗೆರೆ ಎಳೆದು ಮಲಗಿಸಿದಂತೆ ಸಮಾನ ಅಂತರದಲ್ಲಿ ನಿತ್ಯವೂ ಮಲಗಿರುವ ಮೂರು ನಾಯಿಗಳನ್ನು ನೋಡುತ್ತಾ ರಸ್ತೆಗಿಳಿದರೆ ನಮ್ಮ ವಾಕಿಂಗ್ ಪ್ರಾರಂಭ. ನಮ್ಮ ರಸ್ತೆಯ ಭೈರಪ್ಪ ವಾಠರದಲ್ಲಾಗಲೇ  ದಿನಚರಿ ಪ್ರಾರಂಭವಾಗಿರುವುದರ ಗುರುತಾಗಿ ಲೈಟ್ ಉರಿಯುತ್ತಿರುತ್ತದೆ. ಹೆಂಗಸರಾಗಲೇ ಬಾಗಿಲಿಗೆ ನೀರು ಎರಚುವ , ಬಟ್ಟೆ ತೊಳೆಯುವ ಕೆಲಸಗಳಲ್ಲಿದ್ದರೆ , ಕೆಲ ಚಿಲ್ಟು ಪಿಲ್ಟುಗಳು ಅಮ್ಮನ ಬೆಚ್ಚನೆ ಮಡಿಲು ತಪ್ಪಿದ್ದಕ್ಕೆ ಅಳುತ್ತಾ , ತೂಕಡಿಸುತ್ತಾ ಅಲ್ಲೇ ಕುಳಿತಿರುವುದನ್ನೂ ನೋಡಬಹುದು. ಈ ವಠಾರವನ್ನು ದಾಟಿ ಪಕ್ಕಕ್ಕೆ ಹೊರಳಿದರೆ ಇನ್ನೊಂದು ಬೀದಿ , ಇಲ್ಲಿ ಪ್ರಾರಂಭದ ಮನೆಯೊಂದರಲ್ಲಾಗಲೇ ರೊಟ್ಟಿ ಫ್ಯಾಕ್ಟರಿ ಶುರುವಾಗಿರುತ್ತದೆ. ಬೆಳಗಿನ ಏಳು ಗಂಟೆಯ ಒಳಗೆ ೨೫೦ ರೊಟ್ಟಿಗಳನ್ನು ತಯಾರಿಸಿ ಈ ಏರಿಯಾದ ವಿವಿಧ ಹೋಟೆಲುಗಳಿಗೆ ತಲುಪಿಸುತ್ತಾನಾತ. ಸುಡುತ್ತಿರುವ ರೊಟ್ಟಿಯ ಘಮವನ್ನು ಆಘ್ರಾಣಿಸುತ್ತಾ ಈ ಬೀದಿಯಲ್ಲಿ ಮುಂದುವರೆದರೆ ರಪ್ಪನೆ ರಾಚುವುದು ಕೋಳಿ ಫಾರಂನ ದುರ್ನಾತ. ಅಲ್ಲಿ ಆ ದಿನ ಯಾವುದೋ ಅಡುಗೆಮನೆ ಸೇರಿ , ಮಸಾಲೆಯೊಂದಿಗೆ ಬೆರೆತು ಯಾರದೋ ಜಿಹ್ವೆಯನ್ನು ತಣಿಸಲಿರುವ ಕೋಳಿಗಳು ಒತ್ತೊತ್ತಾಗಿ ಉಸಿರಾಡಲೂ ಕಷ್ಟವಾಗುವಂತೆ ಕೇಜ್ ನಲ್ಲಿ ತುರುಕಲ್ಪಡುತ್ತಿರುತ್ತವೆ. ಹೇಗಾದರೂ ಅದರಲ್ಲೊಂದು ತನಗೆ ಆಹಾರವಾಗಲಾರದೆ ಎಂಬಂತೆ ಹಾಗೆ ತುರುಕುವುದನ್ನೇ ಆಸೆಗಣ್ಣಿನಿಂದ ನೋಡುತ್ತಾ ನಿಂತಿರುವ ನಾಲ್ಕು ನಾಯಿಗಳು ಮತ್ತು ಅವುಗಳನ್ನು ಹೆದರಿಸಿ ಓಡಿಸುತ್ತಾ , ಕೋಳಿ ಕೇಜ್ ಗಳನ್ನು ವ್ಯಾನಿಗೆ ತುಂಬಿಸುವವನ ಮುಖದ ನಿರ್ಲಿಪ್ತತೆ ತುಂಬ ಹೊತ್ತು ಕಾಡುತ್ತದೆ.

ಇಲ್ಲಿಂದ ಮುಂದೆ ಬಂದು ಬಲಕ್ಕೆ ತಿರುಗಿದರೆ ಎದುರಾಗುವುದು , ಬೆಂಗಳೂರನ್ನು ಸುತ್ತುವರೆದಿರುವ ರಿಂಗ್ ರೋಡಿನ ಪಕ್ಕದ ಸರ್ವೀಸ್ ರೋಡ್. ಇದೇ ನಮ್ಮ ವಾಕಿಂಗ್ ರಸ್ತೆ. ಇದುವರೆಗೆ ಕಾಣುತ್ತಿದ್ದ ಬೆಳಗಾಗುವುದರ ಸೂಚನೆ ಇಲ್ಲಿ ಹಠಾತ್ತನೆ ಮಾಯವಾಗಿಬಿಡುತ್ತದೆ.  ಇಲ್ಲಿ ನಡೆಯುವಾಗ ಅನೇಕ ಭಾವಗಳು ಮನದಲ್ಲಿ ಹಾದು ಹೋಗುತ್ತವೆ.  ಒಮ್ಮೊಮ್ಮೆ ಬೆಂಗಳೂರೆಂಬ ಮಾಯಾನಗರಿ ಮಲಗಿರುವ ದೊಡ್ಡ ರಾಕ್ಷಸಿಯಂತೆ , ರಿಂಗ್ ರೋಡಿನಲ್ಲಿ ನಿರಂತರವಾಗಿ ಹರಿದಾಡುವ ವಾಹನಗಳ ಶಬ್ದ ಆಕೆಯ ಉಸಿರಾಟದಂತೆಯೂ ಕೇಳಿಸಿ  ಸಿಕ್ಕಾಪಟ್ಟೆ ಥ್ರಿಲ್  ಆಗುತ್ತದೆ.  ಇನ್ನೊಮ್ಮೆ  ಈ ನಿರ್ಜನವಾದ ಸರ್ವೀಸ್ ರೋಡಿನಲ್ಲಿ ನಡೆಯುತ್ತಿರುವಾಗ , ಪಕ್ಕದ ರಿಂಗ್ ರೋಡಿನಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದಾಗಿ ಕಾಲಪ್ರವಾಹದಲ್ಲಿ ಎಷ್ಟೋ ಹಿಂದುಳಿದುಬಿಟ್ಟೆವೇನೋ ಎಂಬ ಭ್ರಮೆ ಉಂಟಾಗಿಬಿಡುತ್ತದೆ.

ಮುಂದೆ ನಡೆಯುತ್ತಿದ್ದಂತೆ ಎದುರಾಗೋದು ರಾಜು ಮತ್ತವನ  ಅದ್ಭುತ ಮೊಪೆಡ್.  ಫಿನೈಲ್  ಊದುಬತ್ತಿಯಿಂದ ಹಿಡಿದು ಬಕೆಟ್ ಬಿಂದಿಗೆಯವರೆಗೆ ತುಂಬಿಕೊಂಡಿರುವ ಆ ಮೊಪೆಡ್ ಒಂದು ಚಲಿಸುವ ಸೂಪರ್ ಮಾರ್ಕೆಟ್. ರಾಜು ಆ ಬೆಳಗಿನ ಜಾವದಲ್ಲಿ ಅದೆಲ್ಲ ಸಾಮಾನುಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಮೊಪೆಡ್ ನಲ್ಲಿ ತುಂಬಿ ಕಟ್ಟುವುದನ್ನು ನೋಡುತ್ತಿದ್ದರೆ ಬಾಲ್ಯದಲ್ಲಿ ಅಪ್ಪನ ಕೈ ಹಿಡಿದು ಯಕ್ಷಗಾನದ ಚೌಕಿಮನೆಯಲ್ಲಿ ಬಣ್ಣದ ವೇಷ ಕಟ್ಟುವುದನ್ನು ಬೆರಗುಗಣ್ಣಿನಿಂದ ನೋಡಿದ ನೆನಪು ಬರುವುದು ಏಕೋ ಗೊತ್ತಿಲ್ಲ!

ಮುಂದೆ ನಡೆದಂತೆ ಸಿಗುವುದು ಒಂದು ಕಲ್ಯಾಣ ಮಂಟಪ.  ಮದುವೆ ಇತ್ಯಾದಿ ಫಂಕ್ಷನ್ ಇದ್ದರೆ ಆ ವೇಳೆಗೆ ಅಲ್ಲಿ ಒಂದು ಸಡಗರದ ವಾತಾವರಣ ಬಿಚ್ಚಿಕೊಳ್ಳುತ್ತಿರುತ್ತದೆ.  ಗೇಟಿನಲ್ಲಿ   ಆರ್ಕಿಡ್ ಹೂವೋ , ಗುಲಾಬಿಯೋ ಅಥವಾ ಬಣ್ಣ ಬಣ್ಣದ ಉಲ್ಲನ್ ಚೂರುಗಳಿಂದಲೋ ಅಲಂಕರಿಸಲ್ಪಟ್ಟ ವಧುವರರ ಹೆಸರನ್ನು ಒಳಗೊಂಡ ಸುಂದರವಾದ ಕಮಾನು ಇರುತ್ತದೆ,   ಒಂದು  ಮೂಲೆಯಲ್ಲಿ ವಧುವರರ ಹೆಸರನ್ನು ತಗುಲಿಸಿಕೊಂಡು ಹೂವಿನಿಂದ ಅಲಂಕರಿಸಲ್ಪಟ್ಟ ಅಂತಸ್ತಿಗೆ ತಕ್ಕ ಕಾರೊಂದು ನಿಂತಿರುತ್ತದೆ. ಕೆಲವೇ ಕೆಲವು ಜನ ಬಹಳ ಗಡಿಬಿಡಿ ಸಂಭ್ರಮಗಳಿಂದ ಒಳಗೆ ಹೊರಗೆ ಓಡಾಡುತ್ತಿರುತ್ತಾರೆ. ಹೊರಗಿನ ಕಾಂಪೌಂಡಿಗೆ ಹೊಂದಿಕೊಂಡಂತಿರುವ ಪುಟ್ಟ ಗುಡಿಯ ಗಣಪ ಇವೆಲ್ಲವನ್ನೂ ನೋಡುತ್ತಾ ನಗುವಂತೆ ನಿಂತಿರುತ್ತಾನೆ.
ಯಾವುದೇ ಕಾರ್ಯಕ್ರಮ ಇಲ್ಲದ ದಿನಗಳಲ್ಲಿ ಇದೊಂದು ನಿರ್ಜೀವವಾದ ಕಟ್ಟಡ.

ಇನ್ನು ಮುಂದೆ ನಡೆದರೆ ಸಿಗುವುದು ಭಿಕ್ಷುಕರ ಕಾಲೋನಿಗೆ ಸೇರಿದ ದೊಡ್ಡ ಕಾಂಪೌಂಡ್. ಒಳಗಿನ ವಿಶಾಲ ಜಾಗದಲ್ಲಿ ಕಾಡಿನಂತೆ ದಟ್ಟ ಮರಗಿಡಗಳಿರುವುದು ಈ ಪ್ರದೇಶಕ್ಕೊಂದು ತಂಪಾದ ವಾತಾರಣ ನೀಡಿವೆ.
ಇಲ್ಲಿ ಎಡಭಾಗದಲ್ಲಿರುವ ದಿನವಿಡೀ ಅದೆಷ್ಟೋ ನಿರ್ಜೀವ ದೇಹಗಳನ್ನು ಸುಟ್ಟು ಭಸ್ಮ ಮಾಡುವ ಕ್ರಿಮೆಟೋರಿಯಂನ ಸುಂದರವಾದ ಕಟ್ಟಡ ಬೆಳಗಿನ ಜಾವದಲ್ಲಿ ಕ್ರೌರ್ಯವನ್ನೆಲ್ಲ ಅಡಗಿಸಿಟ್ಟು ಮುಗುಳ್ನಗುವ ಸುಂದರಿ ಶೂರ್ಪನಖಿಯಂತೆ ಗೋಚರಿಸುತ್ತದೆ!
ಅದರ ಪಕ್ಕದಲ್ಲಿರುವ ಬಿಎಂಟಿಸಿ ಬಸ್ ಡಿಪೋದಲ್ಲಿ ನೂರಾರು , ಕಲ್ಲಿನಂತೆ ನಿಂತ ಬಸ್ಸುಗಳು ಬೆರಳ ತುದಿಯಿಂದ ತಮಗೆ ಜೀವ ನೀಡುವ ಡ್ರೈವರ್ ಗಳಿಗೆ ಅಹಲ್ಯೆಯರಂತೆ ಕಾದಿರುತ್ತವೆ.

ಈಗ ಮತ್ತೆ ಬಂದ ದಾರಿಯಲ್ಲೇ ವಾಪಾಸಾಗುವುದು. ಈಗ  ಬಂದ ಹಾದಿಯ ಚಿತ್ರಣ ಸ್ವಲ್ಪ ಬದಲಾಗಿರುತ್ತದೆ. ಸುಮಾರು ಜನ ಸೀನಿಯರ್ ಸಿಟಿಜನ್ನರು, ಹಲವು ನಡುವಯಸ್ಕರು, ಕೆಲವೇ ಕೆಲವು ಯೌವ್ವನಿಗರು ಹೀಗೆ ವಾಕಿಂಗ್  ಹೊರಟ ಅನೇಕರು ಎದುರಾಗುತ್ತಾರೆ.   ಅಮ್ಮನ ಜೊತೆ ತಾನೂ ಬರುತ್ತೇನೆಂದು ಹಠ ಹಿಡಿದು ಬಂದಿರಬಹುದಾದ  ಚಿಲ್ಟಾರಿಗಳೂ  ಆಗಾಗ್ಗೆ ಕಾಣುವುದುಂಟು.
ಹೀಗೆ ವಾಪಾಸಾಗುವಾಗ   ಪತಿರಾಯರು  ನನ್ನ ಬಗ್ಗೆ ವಿಶೇಷವಾದ ಗಮನ ನೀಡುತ್ತಾರೆ. ನನ್ನನ್ನು ಬಿಟ್ಟು ಒಂದು ಹೆಜ್ಜೆಯನ್ನೂ ಮುಂದಿಡುವುದಿಲ್ಲ. ಬೇರೇನಿಲ್ಲ , ನಾನು ಮೇಲೆ ಪಕ್ಷಿಗಳನ್ನು ನೋಡುತ್ತಾ ಕೆಳಗೇನನ್ನೋ ಎಡವಿ ಬಿದ್ದರೆ ಎತ್ತಬೇಕಾದ ಕಷ್ಟ ಅವರದಲ್ವೇ ಅದಕ್ಕೆ ! ಹೌದು ಈಗ ಹಕ್ಕಿಗಳೆಲ್ಲ ನಿದ್ರೆಯಿಂದ ಎಚ್ಚೆತ್ತು ತಮ್ಮ ಚಟುವಟಿಕೆ ಪ್ರಾರಂಭಿಸಿರುತ್ತವೆ.


ಸುಮಾರು ನವೆಂಬರ್ ತಿಂಗಳಿನಿಂದ ರಿಂಗ್ ರೋಡಿನಲ್ಲಿ ಸಾಲಾಗಿರುವ ಮರಗಳಿಂದ ಕೇಳುವ ಕಾಗೆ ಮರಿಗಳ ಚಿಲಿಪಿಲಿ, ಶಿವರುದ್ರಪ್ಪನವರ ಸ್ತ್ರೀ ಪದ್ಯದ “ ಹಕ್ಕಿ ಗಿಲಕಿ ಹಿಡಿಸಿದಾಕೆ “ ಸಾಲುಗಳ ಸರಿಯಾದ ಅರ್ಥವನ್ನು ಮಾಡಿಸುತ್ತದೆ.
ಇದೇ ಸಮಯದಲ್ಲಿ ಅಸಂಖ್ಯ ಕಾಡು ಗೊರವಂಕಗಳ ಕೊನೆ ಮೊದಲು ಕಾಣದ ಗುಂಪೊಂದು ಆಕಾಶದಲ್ಲಿ ಆಗ್ನೇಯ ದಿಕ್ಕಿನಿಂದ ವಾಯುವ್ಯದೆಡೆಗೆ ದಿನದ ಆಹಾರಕ್ಕಾಗಿ ಹಾರುತ್ತವೆ.  ಈ ಹಕ್ಕಿಗಳ ಸಾಲು ಹಾರುವುದನ್ನು ಕಂಡಾಗಲೆಲ್ಲ ಕುವೆಂಪು ಅವರ ಕವನವೊಂದರ “ ದೇವರು ರುಜು ಮಾಡಿದನು “ ಎಂಬ ಸಾಲುಗಳು ನೆನಪಾಗುತ್ತವೆ.
ಹಕ್ಕಿಗಳ ದೊಡ್ದ ಗುಂಪು ಗಂಭೀರವಾಗಿ ಹಾರಿದ ನಂತರ ಸ್ವಲ್ಪ ಲೇಟಾಗಿ ಬೆಳಗಾದ ಹಕ್ಕಿಗಳ ಚಿಕ್ಕ ಚಿಕ್ಕ ಗುಂಪುಗಳು ಗಡಿಬಿಡಿಯಿಂದ ಹಾರುತ್ತಿರುತ್ತವೆ.
ಈ ವೇಳೆಗೆ ಲಗ್ಗೆರೆ ಬ್ರಿಡ್ಜ್  ಸರ್ಕಲ್ ಬಳಿ ಹಾಲು ಏಜೆನ್ಸಿ , ಪೇಪರ್ ಏಜೆನ್ಸಿಯವರ ಕೆಲಸ ನಡೆಯುತ್ತಿರುತ್ತದೆ . ಒಂದೆರಡು ಗಂಟೆ ಪೇಪರ್ ಹಾಕುವ ಕೆಲಸ ಮಾಡಿ , ನಂತರ ಸ್ಕೂಲಿಗೆ ಹೋಗಬೇಕಾದ ಹುಡುಗರ ಮುಖದಲ್ಲಿ ಮುದಗೊಳಿಸುವ ಜೀವನೋತ್ಸಾಹ. ಅಲ್ಲಿಯ ಎರಡು ಪುಟ್ಟ ಹೋಟೆಲ್ಲುಗಳ ರೈಸ್ ಬಾತ್ ಪರಿಮಳ ಆ ಪ್ರದೇಶವನ್ನೆಲ್ಲ ವ್ಯಾಪಿಸಿರುತ್ತದೆ.  ಯಶವಂತಪುರದ ತರಕಾರಿ ಮಾರುಕಟ್ಟೆಗೆ ತರಕಾರಿ ತರಲು ಹೊರಟಿರುವ ತಳ್ಳುಗಾಡಿಯವರು , ಹೂವುಗಳ ವ್ಯಾಪಾರಿಗಳ ಗಡಿಬಿಡಿ ಗಲಾಟೆ ನಡೆಯುತ್ತಿರುತ್ತದೆ.

ಇದೆಲ್ಲ ದೃಶ್ಯವೈಭವದ ಜೊತೆಗೆ ಸಂಗಾತಿಯೊಂದಿಗೆ , ಎದುರುಮನೆಯ ಆಂಟಿಯ ಬಗೆಗಿನ ಗಾಸಿಪ್ ನಿಂದ ಹಿಡಿದು , ಇಸಿಸ್ ಉಗ್ರರ ಬಗ್ಗೆ ಫ್ರಾನ್ಸ್ ನ ಮುಂದಿನ ನಡೆಯವರೆಗೆ ; ನಮ್ಮದೇ ಮಲೆನಾಡಿನ ಇಂಬಳದಿಂದ ಹಿಡಿದು , ಅಮೆಜಾನ್ ನದಿಯ ಪಿರಾನ ಮೀನಿನವರೆಗೆ ; ಎಂದೋ ನೋಡಿದ ತಾಳಮದ್ದಳೆಯಿಂದ ಹಿಡಿದು ರಣವೀರ್ ಕಪೂರನ  ಲೇಟೆಸ್ಟ್  ಸಿನೆಮಾದವರೆಗೆ ಜಗತ್ತಿನ ಸಕಲೆಂಟು ವಿಚಾರಗಳು, ಆಗುಹೋಗುಗಳ ಬಗ್ಗೆ ಚರ್ಚಿಸುತ್ತಾ ನಡೆವ ಖುಷಿ ಬೋನಸ್. 

ಹಾಲು ತೆಗೆದುಕೊಂಡು ವಾಪಾಸಾಗುವಾಗ ದೇಹ ಮನಸ್ಸು ಎಲ್ಲವೂ ಹಗುರವಾದ ಅನುಭವ . ಬೆಳಗಿನ ಆ ಒಂದು ಘಂಟೆಯಲ್ಲಿ ಕಾಣುವ ಪ್ರಪಂಚ ಬೇರೆಯದೇ . ಬೆಳಗಾದ ಮೇಲೆ ಇದೇ ಬೀದಿಗಳು , ಇದೇ ಪ್ರಪಂಚ ,  ಸಂಪೂರ್ಣ ಬೇರೆಯದಾಗಿ ತೋರುತ್ತದೆ. ಗಿಜಿಗುಡುವ ಜನಪ್ರವಾಹ , ವಾಹನಗಳ ಸದ್ದಿನ ಮಧ್ಯೆ ಮುಂಜಾವಿನ ಮಾರ್ದವತೆ ಮರೆಯಾಗಿರುತ್ತದೆ. ಬೆಳಗಿನ ಜಾವದಲ್ಲಿ ಚಿರಪರಿಚಿತವಾಗಿ ಕಾಣುವ ಬೀದಿಗಳು ಆಮೇಲೆ ಅಪರಿಚಿತವೆನಿಸುವ ಪರಿಗೆ ಬೆರಗಾಗಿ  ಮತ್ತೆ ಮಾರನೆಯ ದಿನ ಬೆಳಗಾಗುವುದನ್ನೇ ಕಾಯುವಂತಾಗುವುದು ಸತ್ಯ.  


10 Sept 2014

ನಡುಮನೆಯಲ್ಲಿ ತಾಳಮದ್ದಲೆ

ಕಾಲ ಕಾಲಕ್ಕೆ ನಮ್ಮ ಅಭಿರುಚಿಗಳು ಬದಲಾಗುತ್ತವೆ . ಬಾಲ್ಯದಲ್ಲಿ ಇಷ್ಟವಾದ ಎಷ್ಟೋ ಸಂಗತಿಗಳು ಯೌವ್ವನದಲ್ಲಿ ಇಷ್ಟವಾಗದಿರಬಹುದು , ಯೌವ್ವನದಲ್ಲಿ ಇಷ್ಟವಾಗದ ಸಿನೆಮಾವೊಂದು ಮಧ್ಯವಯಸ್ಸಿನಲ್ಲಿ ಅದ್ಭುತ ಎನ್ನಿಸಬಹುದು.  ಇದಕ್ಕೆ ಆಯಾ ಕಾಲಘಟ್ಟದ ನಮ್ಮ ಮನಸ್ಥಿತಿ ಕಾರಣವಾಗುತ್ತದೆ. ಹೀಗೆ ನನಗೆ ಮೊದಲೆಂದೂ ನಾನು ಇಷ್ಟಪಡದ ಸಂಗತಿಯೊಂದು ಈಗ ಇಷ್ಟವಾಗತೊಡಗಿದೆ! ಅದು ತಾಳಮದ್ದಲೆ.
ತಾಳಮದ್ದಲೆಯೆಂಬುದು ಯಕ್ಷಗಾನದ ಒಂದು ವಿಧ. ಆದರೆ ಇಲ್ಲಿ ಯಕ್ಷಗಾನದಲ್ಲಿರುವಂತೆ ಪಾತ್ರಧಾರಿಗಳು ವೇಷಭೂಷಣ ಧರಿಸಿ ಕುಣಿಯುವುದಿಲ್ಲ. ಬದಲಾಗಿ ಕುಳಿತು ಯಕ್ಷಗಾನದ ಪದ್ಯಗಳಿಗೆ ಭಾವಪೂರ್ಣವಾಗಿ ಅರ್ಥ ಹೇಳುತ್ತಾರೆ.  ಯಕ್ಷಗಾನವು ಸುಂದರ ವೇಷಭೂಷಣ , ಪದ್ಯಕ್ಕೆ ತಕ್ಕ ಕುಣಿತದೊಂದಿಗೆ ಕಣ್ಣಿಗೆ ಹಬ್ಬವಾದರೆ , ತಾಳಮದ್ದಲೆ ಬುದ್ಧಿಗೆ ಹಬ್ಬ. ರಾಮಾಯಣ , ಮಹಾಭಾರತದ ಅನೇಕ ಉಪಕತೆಗಳೇ ತಾಳಮದ್ದಲೆಗಳ ಜೀವಾಳ. ಇದರಲ್ಲಿ ಒಂದು ಪೌರಾಣಿಕ ಪ್ರಸಂಗವನ್ನು ಅರ್ಥಧಾರಿಗಳು ತಮ್ಮದೇ ಆದ ವಿಶ್ಲೇಷಣೆಯೊಂದಿಗೆ ಪ್ರಸ್ತುತಪಡಿಸುತ್ತಾರೆ.  ಅರ್ಥಧಾರಿಗಳಲ್ಲಿ ನಡೆವ ತರ್ಕ , ವಾಗ್ವಾದ ಪಾತ್ರವೊಂದಕ್ಕೆ ಹೊಸ ಹೊಸ ಹೊಳಹುಗಳನ್ನು ನೀಡುತ್ತದೆ. ಆದರೆ ಇದರಲ್ಲಿ ಆಸಕ್ತಿ ಹುಟ್ಟಲು ಪ್ರೇಕ್ಷಕರಿಗೂ ತಯಾರಿ ಬೇಕಾಗುತ್ತದೆ. ಮೊದಲಿಗೆ ಆ ಪೌರಾಣಿಕ ಕತೆಯ ಅರಿವಿರಬೇಕಾಗುತ್ತದೆ, ಕುಳಿತು ಕೇಳುವ ಸಹನೆ ಬೇಕಾಗುತ್ತದೆ. ಅರ್ಥಧಾರಿಗಳ ಮಾತಿನಲ್ಲಿನ ಭಾವವನ್ನು ಗುರುತಿಸುವ ರಸಗ್ರಹಣ ಸಾಮರ್ಥ್ಯ ಇದ್ದರೆ ಮಾತ್ರ ಇದು ರುಚಿಸುತ್ತದೆ.

ಸಹಜವಾಗಿಯೆ ಮಕ್ಕಳಿದ್ದಾಗ ಇದು ಇಷ್ಟವಾಗುವುದಿಲ್ಲ. ಬಾಲ್ಯದಲ್ಲೆ ಯಕ್ಷಗಾನದ ಮೋಹಕ್ಕೆ ಬಿದ್ದ ನನಗೆ  ತಾಳಮದ್ದಲೆ ಇತ್ತೀಚಿನವರೆಗೂ ನೀರಸವಾಗೇ ಕಾಣಿಸುತ್ತಿತ್ತು.  ಆದರೀಗ ಇದರ ರುಚಿ ಹತ್ತಿದೆ.

ರಾಮಾಯಣ , ಮಹಾಭಾರತದ ವಿವಿಧ ಪಾತ್ರಗಳನ್ನು ತಮ್ಮ ಮಾತಿನಲ್ಲೆ ಕಟ್ಟಿಕೊಡುವ ವಿದ್ವಾಂಸರ ಮಾತಿನ ಮಂಟಪದಿಂದಾಗುವ ಪ್ರಯೋಜನಗಳು ಬಹಳಷ್ಟು.  ಉತ್ತಮ ಕಲಾವಿದರ ಮಾತುಗಾರಿಕೆಯು ಭಾಷೆಯ ಬೆಳವಣಿಗೆಗೆ ಸಹಕಾರಿ ,   ಪೌರಾಣಿಕ ಪಾತ್ರಗಳ ಬಗ್ಗೆ ಇರುವ ಅನೇಕ ಗೊಂದಲಗಳನ್ನು ಪರಿಹರಿಸುತ್ತದೆ.  ಮನದಲ್ಲೊಂದು ಚಿಂತನೆಯ ಕ್ರಮ ಬೆಳೆಸುತ್ತದೆ .


ಗಣಪತಿ ಹಬ್ಬದ ಮಾರನೆಯ ದಿನ ನಮ್ಮ ಮನೆಯಲ್ಲಿ ಸ್ಠಳೀಯ ಕಲಾವಿದರಿಂದ ತಾಳಮದ್ದಲೆ ಏರ್ಪಡಿಸಿದ್ದೆವು." ಶರಸೇತುಬಂಧನ " ಪ್ರಸಂಗ .    ವಿಜಯಶ್ರೀ ನಟರಾಜ್ ಅವರ  ಪ್ರಾರ್ಥನೆಯೊಂದಿಗೆ  ಕಾರ್ಯಕ್ರಮ  ಪ್ರಾರಂಭವಾಯಿತು .

ಅರ್ಜುನನಾಗಿ ಅನಂತಣ್ಣ ತಮ್ಮ ನವಿರಾದ ಹಾಸ್ಯ ಭರಿತ ಮಾತುಗಳಿಂದ ರಂಜಿಸಿದರು. ಹನುಮಂತನಾಗಿ ನಮ್ಮ ಊರಿನ ಹೆಮ್ಮೆಯ ವಿದ್ವಾಂಸರಾದ ಡಾ|| ಶಾಂತಾರಾಮ ಪ್ರಭುಗಳ  ವಿದ್ವತ್ಪೂರ್ಣ ಮಾತುಗಳು ಮನದಾಳಕ್ಕಿಳಿಯುವಂತಿತ್ತು. ಅನೇಕ ವರ್ಷಗಳಿಂದ ತೆರೆಮರೆಗೆ ಸರಿದಿದ್ದ ನಮ್ಮ ಊರಿನ ಹೆಮ್ಮೆಯ ತಾಳಮದ್ದಲೆ ಅರ್ಥದಾರಿ ಶ್ರೀನಿವಾಸಣ್ಣನವರ ಬ್ರಾಹ್ಮಣ ಮತ್ತು ಕೃಷ್ಣ ಪಾತ್ರದ ಚಮತ್ಕಾರಭರಿತ ಮಾತುಗಳು ಇಂದಿಗೂ ಅವರ ಸಾಮರ್ಥ್ಯ ಕುಂದಿಲ್ಲ ಎಂಬುದಕ್ಕೆ ಸಾಕ್ಷಿಯಾದವು. ವೈಜ್ಞಾನಿಕವಾದ ಜೀವವಿಕಾಸದ ಕ್ರಮವನ್ನು ದಶಾವತಾರಕ್ಕೆ ಸಮೀಕರಿಸಿದ್ದು ಶ್ರೀನಿವಾಸಣ್ಣನವರ ಚಮತ್ಕಾರಕ್ಕೆ ಒಂದು ಉದಾಹರಣೆ.  ನಮ್ಮ ಊರಿನ ಉತ್ಸಾಹಿ ಯುವಕ ಕುಮಾರನ ಚಂಡೆವಾದನ ಅವರೊಬ್ಬ ಭರವಸೆಯ ಚಂಡೆವಾದಕರಾಗಿ ಬೆಳೆಯಬಲ್ಲರೆಂಬುದನ್ನು ತೋರಿಸುತ್ತಿತ್ತು. ವೆಂಕಟರಮಣ ಅವರ ಮದ್ದಳೆವಾದನ ಗಾಯನಕ್ಕೆ ಪೂರಕವಾಗಿತ್ತು. ಎಲ್ಲದಕ್ಕೂ ಕಲಶವಿಟ್ಟಂತೆ ಇದ್ದುದು ಲಂಬೋದರ ಅವರ ಭಾಗವತಿಗೆ. ಇಂಪಾದ ಶಾರೀರ , ಸ್ಪಷ್ಟವಾದ ಉಚ್ಚಾರಣೆ , ಔಚಿತ್ಯಪೂರ್ಣವಾದ ಯಕ್ಷಗಾನೀಯಶೈಲಿಯ ಭಾಗವತಿಕೆ ಅವರದು .


ಮಾಮೂಲಿಯಾಗಿ ಇಂತಹುದಕ್ಕೆ ನೀಡುವ ಗೌರವಧನದ ಜೊತೆಗೆ ನೀಡಿದ  ಸುಧಾಕಿರಣ್ ಪರಿಕಲ್ಪನೆಯಲ್ಲಿ ರಚಿಸಲ್ಪಟ್ಟ  ಪ್ರಿಂಟೆಡ್ ಕೃತಜ್ಞತಾ ಪತ್ರ ಕಲಾವಿದರಿಗೆ ಖುಷಿ ನೀಡಿತು. ಶಾಂತಾರಾಮ ಪ್ರಭುಗಳು "ಹಣ ಇಂದು ಇರುತ್ತದೆ ನಾಳೆ ಇರುವುದಿಲ್ಲ, ಆದರೆ ಇಂತಹ ಕಾಣಿಕೆ ಅಮೂಲ್ಯವಾದುದು, ಇವು ಯಾವಾಗಲೂ ಈ ಕಾಲವನ್ನು ನೆನಪಿನಲ್ಲಿ ಉಳಿಸುತ್ತವೆ . ಇಂತದ್ದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದದ್ದು ಸಾರ್ಥಕಭಾವ ಮೂಡಿಸಿತು.

ಎಲ್ಲ ರೀತಿಯ ಕಲೆಗಳನ್ನು ಇಷ್ಟಪಡುತ್ತಿದ್ದ , ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದ    ಮಾವನವರಾದ ಸೂರ್ಯನಾರಾಯಣಭಟ್ ಅವರ  ಸ್ಮರಣಾರ್ಥ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ , ಪುತ್ರರಾದ ಸುಧಾಕಿರಣ್ ಸ್ವಾಗತಿಸಿದರೆ  ರಮೇಶ್ ಕಲಾವಿದರನ್ನು ಸನ್ಮಾನಿಸಿದರು , ನಟರಾಜ್ ವಂದನಾರ್ಪಣೆ ಸಲ್ಲಿಸಿದರು.
ಹೊರಗೆ ಧಾರಾಕಾರ ಮಳೆ , ಮನೆಯೊಳಗೆ ಅರ್ಥಧಾರಿಗಳ ಮಾತಿನ ಸುರಿಮಳೆಯಲ್ಲಿ  ಒಂದು  ಸಂಜೆ ಸುಂದರವಾಗಿ ಕಳೆಯಿತು

9 Jan 2014

ನಾವೇನನ್ನು ಕೇಳಿಸಿಕೊಳ್ಳಬಯಸುತ್ತೇವೋ ಅದನ್ನೇ ಕೇಳೀಸಿಕೊಳ್ಳುತ್ತೇವೆ

ಸುಮಾ ಏಳು ಗಂಟೆ ಐದಾಗ್ತಿದೆ ...ದಿನದಂತೆ ಪತಿರಾಯ ಎಬ್ಬಿಸಿದರು. ಏಳಲು ಹೊರಟರೆ ಸೊಂಟ ಚುಳ್ ಎಂದಿತು . ಓಹ್ ಇವತ್ತು ವಾಕಿಂಗ್ ತಪ್ಪಿಸಿಕೊಳ್ಳೋಕೆ ಒಳ್ಳೆ ನೆಪ ಸಿಕ್ತಲ್ಲ ಅಂತ ಖುಷಿಯಾಗಿ ...." ನಾನೇನೂ ವಾಕಿಂಗ್ ಬರಲ್ಲ " ಎನ್ನುತ್ತಾ ಮುಸುಕೆಳೆದೆ .

 ಅದೆಲ್ಲ ಬೇಡ ಸುಮ್ನೆ ಏಳು ಹೋಗಲೇಬೇಕು ....ಹೊದಿಕೆಯನ್ನೆಳೆದು ಹಾಕಿದರು. ಪ್ರತಿದಿನ ಹೀಗೆ ಏನಾದರೊಂದು ನೆಪ ಹೇಳಿ ವಾಕಿಂಗ್ ತಪ್ಪಿಸಿಕೊಳ್ಳಲು ಯತ್ನಿಸುವ ನನ್ನ ಬುದ್ಧಿಯ ಅರಿವಿರುವುರುವದಿಂದ ಅವರು  ಸುಲಭಕ್ಕೆ ಬಿಡುವುದಿಲ್ಲ .

"ಇಲ್ಲ ನಿಜ್ವಾಗ್ಲೂ ನಂಗೆ ತುಂಬಾ ಸೊಂಟ ನೋವು ಪ್ಲೀಸ್ ಬರಲ್ಲ ಇವತ್ತು " ಅಳು ಮುಖ ನೋಡಿ ಸರಿ ಬಿಡು ನಾನೊಬ್ನೇ ಹೋಗ್ತೀನಿ ಅಂತ ಹೊದಿಕೆ ಹೊದೆಸಿ , ಬಾತ್ ರೂಮ್ ಕಡೆ ಹೊರಟರು .

ಮುಸುಕೆಳೆದು ಮಲಗಿದವಳಿಗೆ ಮತ್ತೆ ಎಚ್ಚರವಾದದ್ದು  ಆರು ಗಂಟೆಗೆ . ಒಹ್ ಇನ್ನು ಮಲಗಿದರೆ ಲೇಟಾಗತ್ತೆ ಎಂದುಕೊಳ್ಳುತ್ತಾ ಎದ್ದೆ. ಮತ್ತೆ ಸೊಂಟ ಚುಳ್ ಎಂದಿತು . ಅಬ್ಬ ! ಇವತ್ಯಾಕೋ ತುಂಬಾನೆ ನೋವು ...ಮಾಡಾಬೇಕಾದ ಕೆಲಸಗಳನ್ನು ನೆನೆಸಿಕೊಂಡು ಸ್ವಲ್ಪ ಬಿ ಪಿ ಏರಿತು . ಇವತ್ತೆಲ್ಲಾದರೂ  ರುಕ್ಕಮ್ಮನೂ ಕೈಕೊಟ್ಟರೆ ! ಯಾಕೋ ಯೋಚನೆಯೂ ಭಯ ಹುಟ್ಟಿಸಿತು . ಹಾಗೇನಾಗಲಿಕ್ಕಿಲ್ಲ ಎಂದು ನನಗೆ ನಾನೆ ಭರವಸೆ ಕೊಟ್ಟುಕೊಳ್ಳುತ್ತಾ ಕೆಳಗಿಳಿದು ಬೆಳಗಿನ ಕೆಲಸಗಳನ್ನು ಪ್ರಾರಂಭಿಸಿದೆ.

ಮಗಳ ಲಂಚ್ ಬಾಕ್ಸಿಗೆ  ಪಲಾವ್ ಮಾಡಿ , ಬೆಳಗಿನ ತಿಂಡಿ ದೋಸೆಗೆ ಚಟ್ನಿ ಮಾಡುವಷ್ಟರಲ್ಲಿ ಕರೆಗಂಟೆ ಸದ್ದು. ಮತ್ತೊಮ್ಮೆ ಬಿ ಪಿ ಏರಿತು . ಸಾಮಾನ್ಯವಾಗಿ  ರುಕ್ಕಮ್ಮ ಕೆಲಸಕ್ಕೆ ಬರೋದಿಲ್ಲ ಅಂತ ತಿಳಿಸೋದಿಕ್ಕೆ ಮಗನನ್ನು ಕಳುಹಿಸೋದು ಇದೇ ಸಮಯಕ್ಕೆ ...ಹಾಗಾದರೆ ?

ಬಾಗಿಲು ತೆಗೆದರೆ ಬಂದದ್ದು ಪೇಪರ್ ಹುಡುಗ . ಸಮಾಧಾನದ ಉಸಿರು ಹೊರಹಾಕಿ ಪೇಪರ್ ತೆಗೆದುಕೊಂಡು ಒಳಬಂದೆ . ಯಾವಾಗಲೂ ಪೇಪರ್ ಬಾಗಿಲಲ್ಲಿ ಎಸೆದು ಹೋಗುವವ ಇವತ್ತು ನನ್ನನ್ನ ಹೆದರಿಸಲೆಂದೇ ಬೆಲ್ ಮಾಡಿದ್ದನಿರಬೇಕೆನ್ನಿಸಿತ್ತು .

ಮಗಳಿಗೆ ದೋಸೆ ಮಾಡಿಕೊಡುತ್ತಿರುವಾಗ ಮತ್ತೊಮ್ಮೆ ಬೆಲ್  ಸದ್ದಾಗಿತ್ತು .ಗಂಟೆ ಏಳೂವರೆಯಾಗಿತ್ತು . .  ಹೋಗಿ ಬಾಗಿಲು ತೆಗೆದರೆ ರುಕ್ಕಮ್ಮ .. ಅವಳು  ಕೆಲಸಕ್ಕೆ ಬರುವ ಸಮಯವಂತೂ ಇದಲ್ಲ ......ಹಾಗಾದರೆ !!!
ಆತಂಕದಿಂದಲೇ " ಏನು ರುಕ್ಕಮ್ಮ "ಎಂದೆ . ಅವಳ ಮಾಮೂಲಿ ನಗುವಿನೊಂದಿಗೆ " ಅಕ್ಕ ಕೆಲಸಕ್ಕೆ  ಬರಲ್ಲ " ಎಂದಳು !! 
ಸಿಟ್ಟು ಗಂಟಲ ಬುಡದವರೆಗೂ ಬಂದಿತು " ಯಾಕೆ ಇವತ್ತು ಯಾವ ದೇವಸ್ಥಾನಕ್ಕೆ ಹೋಗಬೇಕು ?" ಎಂದೆ  . ಪೆಚ್ಚು ನಗೆ ನಗುತ್ತಾ ಸುಮ್ಮನೆ ನಿಂತಳು .
ಈಗ ನನಗೆ  ಸಿಟ್ಟು ನೆತ್ತಿಗೇ ಏರಿತು . "ಇತ್ತೀಚೆಗೆ ಜಾಸ್ತಿ ಆಯ್ತು ನಿಂದು , ನಂಗೆ ಬೇರೆ ಹುಷಾರಿಲ್ಲ  , ನಾಳೆನಾದ್ರೂ ಬಾ" ಎನ್ನುತ್ತಾ ಬಾಗಿಲು ದಡಾರನೆ ಹಾಕಿ ಒಳಬಂದೆ.

ಪೇಪರ್ ಓದುತ್ತಾ ಕುಳಿತಿದ್ದ ಪತಿರಾಯ " ಏನು ಕಷ್ಟವೋ ಕೇಳದೇ ಸುಮ್ನೆ ರೇಗ್ತೀಯಲ್ಲ ಪಾಪ , ಹೋಗ್ಲಿ ಬಿಡು ನಾನೆ ಪಾತ್ರೆ ತೊಳೆದುಕೊಡ್ತೀನಿ " ಎಂದರು .
"ಅವಳಿಗೇನೂ ಕಷ್ಟವಿಲ್ಲ ಈಗ ಅರಾಮಾಗೇ ನಗ್ತಿದ್ಲು ....ಯಾವುದೋ ದೇವಸ್ಥಾನ ಸುತ್ತೋದಿಕ್ಕೆ ಹೊರಟಿರಬೇಕಷ್ಟೆ , ನೀವು ಕೆಲಸ ಮಾಡಿಕೊಡೋದೇನೂ ಬೇಡ ...ನಾನೇ ಮಾಡ್ಕೋತೀನಿ " ರುಕ್ಕಮ್ಮನ ಮೇಲಿನ ಸಿಟ್ಟು ತನ್ನ ಮೇಲೆ ತಿರುಗ್ತೀರೋದರ ಅರಿವಾಗಿ ಪತಿರಾಯರು ಸುಮ್ಮನೇ ಪೇಪರ್ ನಲ್ಲಿ ತಲೆ ಹುದುಗಿಸಿದರು.

ಯೂನಿಫಾರಂ ಹಾಕಿಕೊಂಡು ಸ್ಕೂಲಿಗೆ ಹೊರಟ ಮಗಳು ಷೂ ಹಾಕಿಕೊಳ್ಳುತ್ತಿರುವಾಗ ವ್ಯಾನ್ ಹಾರನ್ ಕೇಳಿತು . ಆಗ ಅವಳಿಗೆ   ನೀರನ್ನು ತೆಗೆದುಕೊಂಡಿಲ್ಲ ಎಂಬ ನೆನಪೂ ಬಂತು.  " ಅಮ್ಮ ಪ್ಲೀಸ್ ನೀರಿನ ಬಾಟಲ್ ಕೊಡಮ್ಮ  " ಅವಳ ಕೂಗು . ಸರಿ ಬರಗಾಲದಲ್ಲಿ ಅಧಿಕ ಮಾಸ ಎಂಬಂತೆ ಇಂತಹ ಸಮಯದಲ್ಲೇ ಇವಳಿಗೂ ಮರೆವು ಎಂದುಕೊಳ್ಳುತ್ತಾ ನೀರು ತುಂಬಿಸಿ ಅಷ್ಟರಲ್ಲಾಗಲೇ ಕೆಳಗಿಳಿಯುತ್ತಿದ್ದ ಅವಳ ಬಳಿ ಓಡಿ ಬಾಟಲ್ ತಲುಪಿಸಿದೆ .

ಅಷ್ಟರಲ್ಲಿ ಪತಿರಾಯರು ಸ್ನಾನ , ತಿಂಡಿ ಮುಗಿಸಿ ಆಫೀಸಿಗೆ ಹೊರಟಾಗಿತ್ತು . ಸುಮಾ ರೆಸ್ಟ್ ತಗೋ ..ನೋವು ಜಾಸ್ತಿಯಾದರೆ ಫೋನ್ ಮಾಡು ಎನ್ನುತ್ತಾ ಹೊರಟರು.

ಸಿಂಕ್ ನಲ್ಲಿದ್ದ ಪಾತ್ರೆಗಳನ್ನೆಲ್ಲಾ ತೊಳೆದು ಅಡಿಗೆ ಮನೆ ಒರೆಸಿ ಸ್ವಚ್ಛಗೊಳಿಸುವಷ್ಟರಲ್ಲಿ ಸೊಂಟ ಇನ್ನು ನಿಲ್ಲಲಾರೆ ಎಂದು ಚೀರುತ್ತಿತ್ತು. ಬೆನ್ನನ್ನು ಕುರ್ಚಿಗಾನಿಸಿ ಕಾಫಿ , ಪೇಪರ್ ಹಿಡಿದು ಕುಳಿತದ್ದಷ್ಟೇ ಮತ್ತೆ ಬೆಲ್ ಸದ್ದು.

ಬಾಗಿಲು ತೆಗೆಯುತ್ತಿದ್ದಂತೆ ರುಕ್ಕಮ್ಮ ಒಳಬಂದಳು ...ಅರೆ ಮತ್ತೆ ಯಾಕೆ ಬಂದೇ? ನಾನು ಪಾತ್ರೆಗಳನ್ನೆಲ್ಲ ತೊಳೆದಾಯ್ತು ...ಸಿಡುಕಿದೆ.

"ಅಕ್ಕ ಏನಾಯ್ತಕ್ಕ ನಿಂಗೆ ಹುಷಾರಿಲ್ಲ ಅಂತೀಯ ಕೆಲಸ ಬೇರೆ ನೀನೆ ಮಾಡ್ಕೊಂಡಿದ್ದೀಯ , ಯಾಕೆ " ಎಂದಳು.
"ನೀನೇ ಕೆಲಸಕ್ಕೆ ಬರಲ್ಲ ಅಂದ್ಯಲ್ಲೆ "

ಆಂ ಅಕ್ಕ ಎಲ್ಲಕ್ಕ ...ನಾನು ಕೆಲಸಕ್ಕೆ ಬರ್ಲಾ ಅಂತ ಕೇಳಿದ್ದು ! ನೀನು   ಹೀಗೆ ಅಂದ್ಕೊಡ್ಯ.....ಅದು ನಾನು ದೇವಸ್ಥಾನಕ್ಕೆ ಹೋಗಬೇಕಾಗಿದ್ದು ಹೌದು ...ಅದಕ್ಕೆ ನಿಮ್ಮ ಮನೆ ಕೆಲಸ ಬೇಗ ಮುಗಿಸಿಬಿಡೋಣ ಅಂತ ಬಂದೆ , ಮತ್ತೆ ತಿಂಡಿ ತಿಂತಿರ್ತೀರೇನೋ ಅಂತ ಕೆಲಸಕ್ಕೆ ಬರಲಾ ಅಂತ ಕೇಳಿದೆ . ನೀನು ನೋಡಿದ್ರೆ ಏನೋ ಹೇಳ್ತಾ ದಡಾರ್ ಅಂತ ಬಾಗಿಲು ಹಾಕಿ ಹೋಗೇ ಬಿಟ್ಟೆ ...ಈವಕ್ಕಂಗೇನಾಯ್ತಪ್ಪ ಎಂದೂ ಇಲ್ಲದ್ದು ಅಂತ ನಾನು ಮನೆಗೆ ವಾಪಾಸ್ ಹೋದೆ. ಮತ್ತೆಲ್ಲಾದ್ರೂ ಕೆಲಸ ಎಲ್ಲಾ ಮಾಡ್ಕೊಂಡ್ ಬಿಡ್ತೀಯೇನೋ ಅಂತಲೇ ಮಕ್ಕಳನ್ನು ಬೇಗ ಸ್ಕೂಲಿಗೆ ಕಳ್ಸಿ ಈಗ ಬಂದೆ ಅಕ್ಕ ...ಎಂದಳು.

ನಗಬೇಕೋ ಅಳಬೇಕೋ ತಿಳಿಯದೆ ಬೆಪ್ಪಾದೆ . ಬೆಳಗಿನಿಂದ ಇದ್ದ ಆತಂಕದಲ್ಲಿ ಅವಳು ಕೆಲಸಕ್ಕೆ ಬರಲಾ ಎಂದದ್ದು ನನಗೆ ಕೆಲಸಕ್ಕೆ ಬರಲ್ಲ ಅಂತ ಕೇಳಿಸಿತ್ತು .

 " ನಾವೇನನ್ನು ಕೇಳಿಸಿಕೊಳ್ಳಬಯಸುತ್ತೇವೋ ಅದನ್ನೇ ಕೇಳಿಸಿಕೊಳ್ಳುತ್ತೇವೆ " ಅಂತ ಎಲ್ಲೋ ಓದಿದ್ದು ನೆನಪಾಗಿ ಜೋರಾಗಿ ನಗತೊಡಗಿದೆ.
ರುಕ್ಕಮ್ಮನಿಗೆ ನಡೆದದ್ದು ಹೇಳಿದಾಗ  "ನಿನಗೆ ಸ್ವಲ್ಪ ಕೆಪ್ಪು ಅಂತ ಗೊತ್ತಿತ್ತು ಆದರೆ ಇಷ್ಟು ಅಂತ ಗೊತ್ತಿರ್ಲಿಲ್ಲ " ಎನ್ನುತ್ತಾ ಅವಳೂ ಜೋರಾಗಿ ನಗತೊಡಗಿದಳು .

26 Nov 2013

ಹೆಸರಿನಲ್ಲೇನಿದೆ?

ಹೆಸರಿನಲ್ಲೇನಿದೆ ಸ್ವಾಮಿ ಎಂದು ಕೇಳೋರನ್ನ ನೋಡಿರ್ತೀರಲ್ಲ . ನಂಗೆ ಈ ಮಾತು ಮಾತ್ರ ಇಲ್ಲಿಯವರೆಗೆ ಅರ್ಥವೇ ಆಗಿಲ್ಲ . ಹೆಸರಿನಲ್ಲೇ ಅಲ್ಲವೆ ಎಲ್ಲವೂ ಇರುವುದು . ಅದಿಲ್ಲವಾದರೆ ಇಷ್ಟೊಂದು ವೈವಿಧ್ಯಮಯ ಹೆಸರುಗಳಾದರೂ ಏಕಿರುತ್ತಿದ್ದವು ? ಎಲ್ಲರಿಗೂ ಎ,ಬಿ , ಸಿ  , ಡಿ ಎಂದೋ ಅಥವಾ ಅ , ಆ, ಇ ,ಈ ಎಂದೋ ಇಡಬಹುದಿತ್ತಲ್ಲ .

ಮೊದಲೆಲ್ಲ ಹೆಸರುಗಳು ಎಷ್ಟು ಸರಳವಾಗಿರುತ್ತಿದ್ದವು ಅಲ್ಲವೆ.  ಹಿರಿಯ ಮಗು ಗಂಡಾದರೆ ಅದರ ಅಜ್ಜನ ಹೆಸರು , ಹೆಣ್ಣಾದರೆ ಅದರ ಅಜ್ಜಿಯ ಹೆಸರು ಇನ್ನುಳಿದ ಮಕ್ಕಳಿಗೆ ಮನೆದೇವರ ಅಥವಾ ದೇವಿಯ ಹೆಸರು ( ಎಲ್ಲಾ ದೇವರುಗಳಿಗೂ ಶತ , ಸಹಸ್ರ ನಾಮಾವಳಿಗಳು ಇರುವುದರಿಂದ ಎಷ್ಟು ಮಕ್ಕಳಾದರೂ ದೇವರ ಹೆಸರಿಗೆ ಕೊರತೆಯಾಗುತ್ತಿರಲಿಲ್ಲ ಬಿಡಿ .)

ಆದರೆ ನಿಧಾನವಾಗಿ ಕಾಲ ಬದಲಾಯಿತು . ಕುಟುಂಬ ಯೋಜನೆಯೆಂಬುದು ಸಂಸಾರಗಳಲ್ಲಿ ಸಾಮಾನ್ಯವಾದಾಗ ಮಕ್ಕಳ ಸಂಖ್ಯೆ ಎರಡಕ್ಕೆ ಸೀಮಿತವಾಯಿತು . ಆಗ ಸಹಜವಾಗಿ ಮಕ್ಕಳ ಬಗ್ಗೆ ಗಮನವೂ ಹೆಚ್ಚಿತು . ಹೆಸರು ಇಡುವುದರಲ್ಲೂ ಪೈಪೋಟಿ ಪ್ರಾರಂಭವಾಯಿತು.
ನನ್ನ ಬಾಲ್ಯದಲ್ಲಾಗಲೇ ಹೊಸ ಹೊಸ ಹೆಸರುಗಳನ್ನು ಇಡುವ ಪದ್ಧತಿ ಪ್ರಾರಂಭವಾಗಿತ್ತು. ಅಂತದ್ದರಲ್ಲಿ ನನ್ನ ಹೆಸರು ಹೇಳಿಕೊಳ್ಳುವಷ್ಟು ನವೀನವಾಗಿದ್ದೇನಾಗಿರಲಿಲ್ಲ. ಕ್ಲಾಸಿನಲ್ಲಿ ಒಂದಿಬ್ಬರಾದರೂ ಸುಮಗಳು ಇರುತ್ತಿದ್ದರು . ಹಾಗಾಗಿ ನನಗೆ ಎಷ್ಟೋ ಬಾರಿ ಬೇರೆ ಹೆಸರಿರಬಾರದೆ ಎನ್ನಿಸಿದ್ದುಂಟು. ಇನ್ನು  ಹಳೆಯ ಕಾಲದ ಹೆಸರು ಇದ್ದ ಕೆಲವು ಗೆಳತಿಯರಂತೂ ತಮ್ಮ ಹೆಸರನ್ನು ಹೇಳಲು ಮುಜುಗರ ಅನುಭವಿಸುತ್ತಿದ್ದುದನ್ನು ನೋಡಿದ್ದೆ. ಆಗಿನ ಕಾಲಕ್ಕೆ ನಮ್ಮ ಊರಿನಲ್ಲಿ ಅತೀ ಅಪರೂಪ ಎನ್ನಬಹುದಾದ ಸುಷ್ಮಾ ಎಂಬ ಹೆಸರಿದ್ದರೂ ತಂಗಿಗೆ ತನ್ನ ಹೆಸರು ಚೆನ್ನಾಗಿಲ್ಲವೆಂಬ ಕೊರಗಿತ್ತು .

ಅವಿಭಕ್ತ ಕುಂಟುಂಬವಾಗಿದ್ದ ನಮ್ಮ ಮನೆಯಲ್ಲಿ ನಾನು ಮೊದಲ ಮಗು . ನನಗೆ ಸುಮ ಎಂದು ಹೆಸರಿಟ್ಟರಲ್ಲ ಆಮೇಲೆ ಹುಟ್ಟಿದ ಎಲ್ಲ ಮಕ್ಕಳ ಹೆಸರೂ " ಸು "  ಅಕ್ಷರದಿಂದಲೇ ಪ್ರಾರಂಭವಾಗಬೇಕೆಂದು ನನ್ನ ಹಠವಾಗಿರುತ್ತಿತ್ತು. ಚಿಕ್ಕಮ್ಮಂದಿರು ತಾಯಿಯಾಗಲಿದ್ದಾರೆ ಎಂದ ತಕ್ಷಣ ನಾನು ಮತ್ತು ಸಣ್ಣ ಚಿಕ್ಕಪ್ಪ ಹೆಸರು ಹುಡುಕಲು ಶುರು ಮಾಡುತ್ತಿದ್ದೆವು. ಆ ಮಕ್ಕಳ ಅಪ್ಪ ಅಮ್ಮನ ಆಸೆಯನ್ನೂ ಕೇಳದೆ ನಾವಿಬ್ಬರು ಸೆಲೆಕ್ಟ್ ಮಾಡಿದ ಹೆಸರನ್ನೇ ಇಡುವಂತೆ ಮಾಡುತ್ತಿದ್ದೆವು. ಅದರಿಂದಾಗಿ ನನ್ನ ಎಲ್ಲ ತಮ್ಮ , ತಂಗಿಯರ ಹೆಸರೂ "  ಸು " ಅಕ್ಷರದಿಂದಲೇ ಪ್ರಾರಂಭವಾಗುತ್ತದೆ.

ಇನ್ನು ಯಾವ ಹೆಸರನ್ನೇ ಇಟ್ಟರೂ  ಅಪ್ಪ ಅಮ್ಮ ಅದನ್ನು ಹಾಗೇ ಕರಿಯೋದು ಕಡಿಮೆಯೆ .   ಪಾಪು , ಪುಟ್ಟಿ , ಮಗು , ಈಗೀಗ ಟಿಂಕು ರಿಂಕು ಡಿಂಕು ಬೇಬಿ ಇತ್ಯಾದಿ ಎಂಬ ನಿಕ್ ನೇಮ್ ಇದ್ದೇ ಇರತ್ತೆ.

  ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಡಿಫರೆಂಟ್ ಆಗಿರೋ ಹೆಸರನ್ನೇ ಹುಡುಕಿ ಹುಡುಕಿ ಇಡುತ್ತಾರೆ .
 ಎಲ್ಲರ ಸುದ್ದಿ ಯಾಕೆ ನಮ್ಮ ವಿಷಯವನ್ನೇ ಹೇಳುತ್ತೇನೆ . ಗರ್ಭದಲ್ಲೊಂದು ಕುಡಿ ಚಿಗುರುತ್ತಿದೆಯೆಂದು ತಿಳಿದ ಸ್ವಲ್ಪ ದಿನಗಳಲ್ಲೇ ನಾನು ಮತ್ತು ನನ್ನ ಗಂಡ ಅದರ ಹೆಸರನ್ನು ಹುಡುಕಲು ಪ್ರಾರಂಭಿಸಿದ್ದೆವು .  ಇದುವರೆಗೆ ಯಾರೂ ಇಟ್ಟಿರಬಾರದು ಅಂತಹ ಹೆಸರು ಅದೂ ಅರ್ಥಪೂರ್ಣವಾಗಿರುವಂತದ್ದನ್ನು ಇಡಬೇಕೆಂಬುದು ನಮ್ಮಿಬ್ಬರ ಆಸೆಯಾಗಿತ್ತು. ಅಂತೂ ಹೆಣ್ಣು ಮತ್ತು ಗಂಡು ಹೆಸರುಗಳೆರಡರದ್ದೂ ಲಿಸ್ಟ್ ಮಾಡಿ ...ಅದರಲ್ಲಿ ಒಂದೊಂದು ಹೆಸರು ಸೆಲೆಕ್ಟ್ ಮಾಡಿದೆವು . ಯಾವ ಮಗು ಆದರೂ ನಮ್ಮ ಹೆಸರು ರೆಡಿ ಇತ್ತು.

ಅಂತೂ ಒಂದು ಶುಭದಿನ ನಮ್ಮ ಮುದ್ದು ಹೊರಬಂದಿತು . ಮಗು ಮತ್ತು ನನ್ನನ್ನು ನೋಡಲು ಕಾತರದಿಂದ ವಾರ್ಡ್ ಒಳಗೆ ಬಂದ ಪತಿರಾಯರಿಗೆ " ಇಂಚರ ಹೊರಬಂದಳು " ಎಂದೆ .  ನಿಜ ನಮಗೆ ಹೆಣ್ಣು ಮಗುವಾದರೆ ಇಂಚರ ಎಂದು ಹೆಸರಿಡಬೇಕೆಂದು ನಾವಂದುಕೊಂಡಿದ್ದೆವು. ಹದಿನಾಲ್ಕು ವರ್ಷಗಳ ಹಿಂದೆ ಅದು ಅಪರೂಪದ ಹೆಸರಾಗಿತ್ತು. ನಮಗೆ ಗೊತ್ತಿರುವವರ್ಯಾರೂ ಇಟ್ಟದ್ದು ನಾವು ಕೇಳಿರಲಿಲ್ಲ. ಮುದ್ದು ಮಗುವಿಗೆ ನಾಮಕರಣವಾಯ್ತು . ಅಮ್ಮನ ಮನೆಯಲ್ಲಿ ಮೂರು ತಿಂಗಳು ಬೆಚ್ಚಗೆ ಬಾಳಂತನ ಕಳೆಯಿತು .

ಒಂದು ದಿನ ಮಗುವನ್ನು ನೋಡಲು ನನ್ನ ಅಜ್ಜಿ( ಅಮ್ಮನ ತಾಯಿ ) ಯ ಜೊತೆಗೆ ಅವರ ಮನೆಯ ಕೆಲಸಕ್ಕೆ ಬರುವ ಮಂಜಕ್ಕ ಬಂದರು . ಮಗುವನ್ನು ಎತ್ತಿ ಮುದ್ದಾಡುತ್ತಾ ಹೆಸರೇನಮ್ಮ ಎಂದರು . ನಾನು ಹೆಮ್ಮೆಯಿಂದ " ಇಂಚರ ಅಂತ ಹೊಸ ಹೆಸರು ಮಂಜಕ್ಕ ನನ್ನ ಮಗಳದು" ಎಂದೆ . " ಓ ನನ್ನ ನಾದಿನಿ ಮಗಳಿಗೂ ಇದೇ ಹೆಸ್ರು . ಅದೀಗ ಎರಡನೆ ಕ್ಲಾಸು ಓದ್ತದೆ " ಎಂದ ಮಂಜಕ್ಕನ ಮಾತು ಕೇಳಿ ನಾನು ಬೆಪ್ಪು .

ಸ್ವಲ್ಪ ದಿನಗಳಾಗಿದ್ದವೇನೋ ಟಿ ವಿ ಯಲ್ಲಿ ಯಾವುದೋ ಒಂದು ಹಾಡಿನ ರಿಯಾಲಿಟಿ ಶೋ ಬರುತ್ತಿತ್ತು ಅದರಲ್ಲಿ ಭಾಗವಹಿಸಿದ್ದ ಒಬ್ಬಳು ಇಪ್ಪತ್ತರ ಯುವತಿಯ ಹೆಸರೂ ಇಂಚರ ಎಂದಿತ್ತು ! ಆ ನಂತರ ಹೊಸ ಹೆಸರನ್ನು ಇಟ್ಟಿದ್ದೇವೆಂಬ ನಮ್ಮ ಭ್ರಮೆ ಸಂಪೂರ‍್ಣ ಅಳಿದಿತ್ತು.


18 Nov 2013

ಅಳಿಲು ರಾಣಿಯ ಕಿತಾಪತಿ

    ನಾಲ್ಕು ದಿನಗಳಿಂದ ಮೋಡ, ಚಳಿ . ಒಳಗಿದ್ದ ಸ್ವೆಟರ್ ಶಾಲ್  ಎಲ್ಲ ಹೊರಬಂದಿವೆ.  ಈ ರೀತಿಯ ಚಳಿಗೆ ನಾವೇನೋ ಒಳಗಿರುವುದನ್ನೆಲ್ಲ ಹೊರತೆಗೆದು ಹಾಕಿಕೊಂಡು ಬೆಚ್ಚಗಾಗುತ್ತೇವೆ . ಆದರೆ ಪಾಪ ನಮ್ಮಷ್ಟು  ಅವಕಾಶವಿಲ್ಲದ ಎಷ್ಟೋ ಜೀವಿಗಳಿವೆಯಲ್ಲ ಭೂಮಿಯಲ್ಲಿ .
ಬಿಸಿಲಿರುವ ದಿನಗಳಲ್ಲಿ ಬೆಳಗಾಗುತ್ತಿದ್ದಂತೆ ತಮ್ಮ ಚಟುವಟಿಕೆ ಪ್ರಾರಂಭಿಸುವ ಹಣ್ಣಿನ ಬುಟ್ಟಿಯಲ್ಲಿನ ಚೆನ್ನಾಗಿ ಕಳಿತ ಬಾಳೆಹಣ್ಣಿನ ಮೇಲೆ ಕುಳಿತು ಅದರ ರುಚಿ ನೋಡುವ ಫೂಟ್ ಫ್ಲೈ ಈಗ ಹಾರಾಡುತ್ತಿಲ್ಲ.
ಸಕ್ಕರೆ ಬೆಲ್ಲದ ಡಬ್ಬಿಯನ್ನು ಹುಡುಕಿಕೊಂಡು   ಬರುವ ಇರುವೆಗಳ ಸಾಲು ನಾಲ್ಕು ದಿನಗಳಿಂದ ಕಾಣಿಸುತ್ತಿಲ್ಲ.
ಬಾಲ್ಕನಿಯಲ್ಲಿ ತಿಂಗಳಿಂದ ನಡೆಯುತ್ತಿರುವ ಪಾರಿವಾಳಗಳ ಜಾಗದ ತಕರಾರೂ ಇಲ್ಲದೆ  ರೆಕ್ಕೆಗಳಲ್ಲಿ ಒಂದನ್ನೊಂದು  ಬಡಿದಾಡಿಕೊಳ್ಳುವ ಶಬ್ದ , ಕುಟುರ್ ಕುಟುರ್ ಎಂದು ಬೆದರಿಸುವ ಶಬ್ದವೂ ಇಲ್ಲ .
ಬೆಳಗಾಗುತ್ತಿದ್ದಂತೆ ಮನೆಯ ಹಿಂದಿನ ಯುಟಿಲಿಟಿಯಲ್ಲೆಲ್ಲ ಚೀಂಕ್ ಚೀಂಕ್ ಎನ್ನುತ್ತಾ ಓಡಾಡುವ ಅಳಿಲು ಸಂಸಾರವೂ ಪತ್ತೆಯಿಲ್ಲ.

ಈ ಅಳಿಲು ರಾಣಿ ಮತ್ತು ಪಾರಿವಾಳ ಮಾಡುವ ಕಿತಾಪತಿಗಳು ಒಂದೆರಡಲ್ಲ . ಕೆಲ ದಿನಗಳ ಹಿಂದೆ ನಮ್ಮ ಮನೆಯ ಹಿಂದಿನ ಮನೆಯಾಕೆ ಅವರ ಅಂಗಳದಲ್ಲಿ   ಗೋಧಿಯನ್ನು ಒಣಗಿಸಲೆಂದು ಬಿಸಿಲಿಗೆ ಹಾಕಿದ್ದರು . ಹಾಗೆ ಒಣಗಿಸಿ ಭದ್ರವಾಗಿ ಗೇಟಿಗೆ ಬೀಗ ಹಾಕಿ ಆಕೆ ಎಲ್ಲೋ ಹೋಗಿದ್ದರು. ಇಲ್ಲಿ ಈ ಕಿತಾಪತಿಗಳು ಮಾಡಿದ ಕೆಲಸ ನೋಡಿ .



ಈ ಅಳಿಲು ರಾಣಿಯಿದ್ದಾಳಲ್ಲ ಸಾಮಾನ್ಯದವಳಲ್ಲ ಇವಳು. ಯಾವಾಗ ನೋಡಿದರೂ ದೊಡ್ಡ ಧ್ವನಿಯಲ್ಲಿ ಕೂಗುತ್ತಲೇ ಇರುವ ಈಕೆ ನಮಗೆ ಗೊತ್ತಾಗದಂತೆ ಏನನ್ನಾದರೂ ಕದಿಯುವಾಗ ಮಾತ್ರ ಸ್ವಲ್ಪವೂ ಶಬ್ದವಾಗದಂತೆ ಕೆಲಸ ಮಾಡುತ್ತಾಳೆ.  ಈಗ ಎರಡು ವರ್ಷಗಳಿಂದ ನಮ್ಮ ಮನೆಯ ಯುಟಿಲಿಟಿಯಲ್ಲೇ ಮರಿ ಹಾಕಿ, ಅದನ್ನು ಸಾಕಿ ದೊಡ್ಡದನ್ನಾಗಿ ಮಾಡಿ ಓಡಿಸ್ತಿದ್ದಾಳೆ . ಆದರೆ ನಮಗೆ ಅದೆಲ್ಲಿ ಎಂದು ಕಾಣಿಸದಷ್ಟು ಜಾಗರೂಕತೆಯಿಂದ ಕೆಲಸ ಮಾಡ್ತಾಳೆ.
ಆದರೆ ಈ ವರ್ಷ ಮಾತ್ರ ಅವಳ ಗೂಡನ್ನೂ ಮರಿಯನ್ನೂ ನೋಡಿದೆ.
ಮನೆಯ ಜೈವಿಕ ಕಸದಿಂದ  ಸಾವಯವ ಗೊಬ್ಬರ ತಯಾರಿಸುವ   ಹುಮ್ಮಸ್ಸಿನಲ್ಲಿ  ಒಂದೆರಡು ಟಬ್ ಇಟ್ಟುಕೊಂಡಿದ್ದೇನೆ . ಒಂದರಲ್ಲಿ ಕಸ ಮತ್ತು ಮಣ್ಣು ಹೀಗೆ ತುಂಬುವವರೆಗೆ ಹಾಕುತ್ತಾ ಆ ಟಬ್ ತುಂಬಿದ ಮೇಲೆ ಮುಚ್ಚಿ ಇಡುತ್ತೇನೆ. ಅದನ್ನು ನಾಲ್ಕಾರು ತಿಂಗಳು ಬಿಟ್ಟು ತೆಗೆದಾಗ ಫಲವತ್ತಾದ ಮಣ್ಣು ಸಿಗುತ್ತದೆ.


ಇತ್ತೀಚೆಗೆ  ಹೀಗೆ ಇಟ್ಟ ಟಬ್ ಮುಚ್ಚಳವನ್ನು ತೆಗೆದಾಗ ಪುಟಾಣಿ ಅಳಿಲು ಮರಿಯೊಂದು ಟಣ್ಣೆಂದು ಜಿಗಿದು ಓಡಿಹೋಯ್ತು. ಟಬ್ ನಲ್ಲಿ ನೋಡಿದರೆ ಗೋಣಿನಾರಿನ  ಬೆಚ್ಚನೆಯ ಗೂಡು ಮಾಡಿ ಮರಿಯನ್ನು ಸಾಕಿದ್ದಾಳೆ ಈ ಅಳಿಲುರಾಣಿ !





ಮುಚ್ಚಳದ ಚಿಕ್ಕ ಜಾಗದಲ್ಲೇ ಒಳನುಗ್ಗುವುದು ಹೊರಬರುವು ಎಲ್ಲವೂ . ಅದೂ ಅಲ್ಲೇ ಓಡಾಡುವ ನಮಗಾರಿಗೂ ಸ್ವಲ್ಪವೂ ಗೊತ್ತಾಗದಂತೆ!

  ಹೇಗಿದೆ ಈ ಅಳಿಲು ರಾಣಿಯ ತಾಯ್ತನ !

ಈ ಅಳಿಲುಗಳ ಬಗ್ಗೆ ಹೆಚ್ಚಿನ ಮಾಹಿತಿ ನನ್ನ ಹಳೆಯ    ಚೂಟಿ ಅಳಿಲು ಲೇಖನದಲ್ಲಿದೆ.

5 Sept 2013

ಬೆಂಗಳೂರಿನ ಗಣೇಶೋಸ್ತವ

ಸಾಯಂಕಾಲ ಆರು ಗಂಟೆ ..ತರಕಾರಿ ಅಂಗಡಿಯಿಂದ ನಾನು ಮತ್ತು ಮಗಳು ವಾಪಾಸ್ ಮನೆಗೆ ಬರುತ್ತಿದ್ದೆವು. ಎದುರಿನಿಂದ ನಾಲ್ಕಾರು ಮಕ್ಕಳ ಗುಂಪೊಂದು ಬಂದಿತು. ಎಲ್ಲರ ಕೈಯ್ಯಲ್ಲಿ ಕಾಣಿಕೆ ಡಬ್ಬಿ . ಹತ್ತಿರವಾಗುತ್ತಿದ್ದಂತೆಯೆ " ಅಕ್ಕ ಗಣೇಸನ್ನ ಕೂರಿಸ್ತೀವಿ ..ಕಾಣಿಕೆ ಕೊಡಿ ಅಕ್ಕ " ಅಂತ ಶುರು ಮಾಡಿಕೊಂಡವು . ನಾನು "ಇಲ್ಲಪ್ಪ ನಾನು ಕೊಡಲ್ಲ " ಎಂದು ಮುಂದುವರೆದೆ... ಒಬ್ಬ ಚಿಲ್ಟಾರಿ ನನ್ನ ಮಗಳನ್ನು ಅಡ್ಡಗಟ್ಟಿ ನಿಂತುಬಿಟ್ಟ . ಏನೋ ಕೈಲಾಗಿದ್ದು ಹಾಕಕ್ಕ ಅಂತ ಗೋಗರೆಯಲು ಪ್ರಾರಂಭಿಸಿದ್ದನ್ನ ಕೇಳಿ ಮಗಳು ನನ್ನೆಡೆ ನೋಡಿದಳು . ಅವಳನ್ನು ಎಳೆದುಕೊಂಡು ಮುಂದೆ ನಡೆದೆ. ಅವಳಿಗೆ ಕೋಪ . " ಪಾಪ ಅಮ್ಮ  ಚಿಕ್ಕ ಹುಡುಗ , ಒಂದು ಹತ್ತ್ ರೂಪಾಯಿ ಕೊಟ್ಟರೇನಾಗ್ತಿತ್ತು " ಅಂತ ಬಯ್ದಳು .

ಹೂಂ ಈಗೇನೋ ಅವನ್ನು ನೋಡಿದರೆ ಪಾಪ ಎನ್ನಿಸುತ್ತೆ. ಆದರೆ ಆಮೇಲೆ ನಾವೆ ಅನುಭವಿಸಬೇಕಲ್ವಾ ?   ಈ ಚಿಲ್ಟಾರಿಗಳೇನು ಸಾಮಾನ್ಯದವಾ? ಈಗೇನೊ ಹೀಗೆ ಚಿಕ್ಕ ಪುಟ್ಟ ಡಬ್ಬಿ ಹಿಡಿದು ವಸೂಲಿ ಮಾಡ್ತವೆ. ಗಣೇಶನ ಹಬ್ಬದ ದಿನ ಇಲ್ಲೆ ಎಲ್ಲೋ ಖಾಲಿ ಸೈಟ್ ನಲ್ಲಿ  ನಾಲ್ಕು ಕಡ್ಡಿ ಹುಗಿದು , ಅದಕ್ಕೆ ಎಲ್ಲಿಂದಲೋ ಒಂದು ದೊಡ್ಡ ಪ್ಲಾಸ್ಟಿಕ್ ಶೀಟ್ ಸಂಪಾದಿಸಿ , ಮಾಡು ಮಾಡುತ್ತವೆ. ಚಿಕ್ಕದೊಂದು ಗಣೇಶನನ್ನ ಕೂರಿಸಿ , ತಮಗೆ ತೋಚಿದಂತೆ ಅಲಂಕರಿಸುತ್ತವೆ, ಅವರವರ ಅಮ್ಮಂದಿರನ್ನು ಕಾಡಿ ನೇವೇದ್ಯಕ್ಕೆ ಅವಲಕ್ಕಿಯೋ ಮತ್ತೊಂದೋ ಮಾಡಿಸಿ ಹಂಚಿ ತಿನ್ನುತ್ತವೆ. ಎಲ್ಲಾ ನೋಡೋಕೆ ಕೇಳೋಕೆ ಚೆನ್ನಾಗೇನೋ ಇರತ್ತೆ.



ನಾಳೆ ಈ ಹುಡುಗರು ದೊಡ್ಡೋರಾಗ್ತಾರೆ . ಬೀದಿಯಲ್ಲಿ ಡಬ್ಬಿ ಹಿಡಿದು ವಸೂಲಿ ಮಾಡೋದನ್ನ ನಿಲ್ಲಿಸಿ , ಮನೆಗಳಿಗೆ , ಅಂಗಡಿ , ಕಛೇರಿಗಳಿಗೆ ರಸೀದಿ ಪುಸ್ತಕ ಹಿಡಿದು ನುಗ್ಗುತ್ತಾರೆ. ಅವರ ಗಾತ್ರ , ಮುಖಭಾವಗಳನ್ನು ನೋಡಿದರೆ ಇಲ್ಲ ಎನ್ನಲು ಧೈರ್ಯ ಸಾಲದೆ ಏನೋ ಕೊಟ್ಟು ಸುಮ್ಮನಾಗ್ತೀವಿ .
ಆಮೇಲೆ ನಿಜವಾದ ಕಷ್ಟ ಶುರುವಾಗತ್ತೆ ನೋಡಿ.  ಈಗ ದೊಡ್ಡೋರಾಗಿರ್ತಾರಲ್ಲ , ಹಬ್ಬ ಇಂತಹ ದಿನವೇ ಆಗಬೇಕೆಂಬ ನಿಯಮವೇನೂ  ಇರೋದಿಲ್ಲ.   ಯಾವುದೋ ಒಂದು ಬುಧವಾರ ಯಾವುದೋ ರಸ್ತೆಯಲ್ಲಿ ಪೆಂಡಾಲ್ ಮೇಲೇಳುತ್ತದೆ. ಇಡೀ ಬೀದಿಗೂ ದೀಪಾಲಂಕಾರವಾಗುತ್ತದೆ . ಗುರುವಾರ ಬೆಳಿಗ್ಗೆ ಆರಕ್ಕೆಲ್ಲ  ಮೈಕಾಸುರ ಮಂಜುನಾಥನನ್ನು ಎಬ್ಬಿಸಲು ಪ್ರಾರಂಭಿಸುತ್ತಾನೆ. ಆಮೇಲೆ ಗಜಮುಖನೆ ಗಣಪತಿಯೆ ಶುರುವಾಗುತ್ತದೆ. ಎಂಟು ಗಂಟೆ ಆಗುತ್ತಿದ್ದಂತೆ ಖನ್ನಡದ ಸುಪುತ್ರನೊಬ್ಬನ ಕೈಗೆ ಮೈಕ್ ಬರುತ್ತದೆ. ಆತ ಒಂದಿಷ್ಟು ಹೊತ್ತು ಕಾಲೊನಿಯ ಜನರಿಗೆಲ್ಲ ತಮ್ಮ ಕಾರ್ಯಕ್ರಮದ ರೂಪುರೇಷೆಗಳನ್ನು ತನ್ನ ಅದ್ಬುತವಾದ ಖನ್ನಡದಲ್ಲಿ ವಿವರಿಸಿ, ಎಲ್ಲರೂ ತಮ್ಮ ಯುವಕಸಂಘದ ಗಣೇಶೋಸ್ತವದಲ್ಲಿ ಎಚ್ಚಿನ ಸಂಕ್ಯೆಯಲ್ಲಿ ಬಾಗವಯಿಸಬೇಕಾಗಿ ಕೋರಿಕೊಳ್ಳುತ್ತಾನೆ. ಆಮೇಲೆ ವೈಭವದೊಂದಿಗೆ ಗಣೇಶನ ಪ್ರತಿಷ್ಟಾಪನೆಯಾಗುತ್ತದೆ.

ಅಷ್ಟು ಹೊತ್ತು ಇದ್ದಬದ್ದ ದೇವರುಗಳನ್ನೆಲ್ಲ ಎಬ್ಬಿಸಿದ ಮೈಕಾಸುರನಿಗೆ ಕನ್ನಡಚಿತ್ರೋದ್ಯಮ ಅದೇನು ಲಂಚ ಕೊಟ್ಟಿರತ್ತೋ ಆ ಗಣೇಶನಿಗೇ ಗೊತ್ತು . ಅದು "ತಲೆ ಬಾಚ್ಕೊಳೊ , ಪೌಡ್ರ್ ಹಾಕ್ಕೊಳೊ"ದಿಂದ ಹಿಡಿದು "ಪ್ರೀತ್ಸೆ ಪ್ರೀತ್ಸೆ" ವರೆಗೂ ಎಲ್ಲವನ್ನೂ ಹಾಡಿ ಮುಗಿಸುತ್ತದೆ. ಒಂದು ಸಾರಿ ತಂದ ಸಿಡಿಯಲ್ಲಿನ ಎಲ್ಲಾ ಹಾಡು ಮುಗಿದರೆ ಮತ್ತೆ ವಾಪಾಸ್ ಸಾಯಂಕಾಲ ಆರರವರೆಗೂ ಅದನ್ನೇ ಹಾಕಲಾಗುತ್ತದೆ . 
ಸಾಯಂಕಾಲ ಆರರಿಂದ ಪ್ರಸಿದ್ಧ ತಂಡದಿಂದ ರಸಮಂಜರಿ ಕಾರ್ಯಕ್ರಮವಿರುತ್ತದೆ. ಅವರು ಸ್ವಲ್ಪ ಹಳೆಯದು ಸ್ವಲ್ಪ ಹೊಸದು ಹೀಗೆ ಕಾಂಬಿನೇಷನ್ ಮಾಡಿ ಮತ್ತೆ ಕನ್ನಡ ಚಿತ್ರಗಳ ಹಾಡುಗಳನ್ನು ರಾತ್ರಿ ಹನ್ನೊಂದರವರೆಗೆ ಹಾಡುತ್ತಾರೆ. 

ಇದೇ ದಿನಚರಿ ಗುರುವಾರ ಬೆಳೆಗ್ಗೆಯಿಂದ ಭಾನುವಾರದವರೆಗೂ ನಡೆಯುತ್ತದೆ. ಭಾನುವಾರ ಸಾಯಂಕಾಲ ಡಕ್ಕಣಕ ಡಕ್ಕಣಕಣ ವಾದ್ಯ, ಪಟಾಕಿಗಳ ಕಿವಿಗಡಚಿಕ್ಕುವ ಶಬ್ದದೊಂದಿಗೆ ....ಕಾರ್ಯಕರ್ತರುಗಳ ಟಪ್ಪಂಗುಚ್ಚಿ ನೃತ್ಯದೊಂದಿಗೆ ಮೆರವಣಿಗೆ ಮಾಡಿ ಗಣೇಶನನ್ನು ಮುಳುಗಿಸಲಾಗುತ್ತದೆ .

ಇದೆಲ್ಲಾ ಕತೆ ಕೇವಲ ಒಂದು ಬಾರಿಯಾದರೆ ಸಹಿಸಬಹುದು .   ಏರಿಯಾದಲ್ಲಿಯೂ ಎಷ್ಟೊಂದು ರಸ್ತೆಗಳಿರುತ್ತವಲ್ಲ ...ಕನಿಷ್ಟ ಎರಡು ರಸ್ತೆಗಳಿಗೊಂದು ಯುವಕ ಸಂಘಗಳೂ ಇರುತ್ತವಲ್ಲ . ಎಲ್ಲರೂ ಒಂದೇ ಬಾರಿ ಹಬ್ಬ ಮಾಡಲಾಗುತ್ತದೆಯೆ ? ಹಾಗಾಗಿ   ಚೌತಿಯಿಂದ ಪ್ರಾರಂಭಿಸಿದರೆ ದೀಪಾವಳಿ ಬರುವವರೆಗೂ ಪ್ರತೀ ವಾರವೂ ಒಂದಲ್ಲ ಒಂದು ರಸ್ತೆಯಲ್ಲಿ ಗಣೇಶೋತ್ಸವ ನಡೆಯುತ್ತದೆ . ಕೆಲವರು ಇನ್ನೂ ತಲೆ ಓಡಿಸಿ ಡಿಸೆಂಬರ್ ನಲ್ಲೂ ಗಣೇಶೋಸ್ತವ, ಖನ್ನಡ ರಾಜ್ಯೋಸ್ತವ  ಎರಡನ್ನೂ ಒಟ್ಟಿಗೇ ಆಚರಿಸುತ್ತಾರೆ !
 ನಮ್ಮ ಮನೆ ಬೇರೆ ನಮ್ಮ ಏರಿಯಾದಲ್ಲಿ ಎತ್ತರದ ಪ್ರದೇಶದಲ್ಲಿರುವುದರಿಂದ ಎಲ್ಲೇ ಮೈಕ್ ಹಾಕಿದರೂ ನಮ್ಮ ಮನೆಯಲ್ಲೇ ಹಾಕಿದಷ್ಟು ಸ್ಪಷ್ಟವಾಗಿ ಕೇಳುತ್ತದೆ . ಪ್ರತೀ  ಗುರುವಾರ ಅಥವಾ ಶುಕ್ರವಾರ ಬೆಳಿಗ್ಗೆ ಮೈಕ್ ಕೇಳಿಸಿತೆಂದರೆ  ಇನ್ನು ಮುಂದಿನ ಮೂರು ದಿನಗಳವರೆಗೆ ಮೈಕಾಸುರನ ಟಾರ್ಚರ್ ಎದುರಿಸಲು ಮಾನಸಿಕವಾಗಿ ಸಿದ್ಧರಾಗಲೇ ಬೇಕಾಗುತ್ತದೆ !

ಇವೆಲ್ಲ ಕಾರಣಗಳಿಂದಾಗಿ ಮೊದಲೆಲ್ಲ ತುಂಬ ಇಷ್ಟವಾಗಿದ್ದ ಚೌತಿಹಬ್ಬ ಮತ್ತು ಗಣೇಶ ಈಗೀಗ ಭಯ  ಹುಟ್ಟಿಸುತ್ತಿವೆ. ಈಗ ಹೇಳಿ ನಾನು ಆ ಮಕ್ಕಳ ಕಾಣಿಕೆ ಡಬ್ಬಿಗೆ ದುಡ್ಡು ಹಾಕಿದಿದ್ದದ್ದು ಸರಿ ತಾನೆ?

ಏನಾದರಾಗಲಿ ಸದ್ಯಕ್ಕಂತೂ ನಾವು ಇದರಿಂದ ತಪ್ಪಿಸಿಕೊಂಡು ಊರಿಗೆ ಹೋಗಿ ಶಾಂತಿ ನೆಮ್ಮದಿಯಿಂದ ಹಬ್ಬ ಆಚರಿಸುತ್ತೇವೆ . ಹಾಗಾಗಿ ನಾಲ್ಕುದಿನ ಮೊದಲೇ ಗಣೇಶನ ಹಬ್ಬದ ಶುಭಾಶಯಗಳು .

18 Jun 2013

ನಾಲ್ಕು ವರ್ಷದ ಭೂರಮೆ !

 ಬ್ಲಾಗ್ ಪ್ರಾರಂಭಿಸಿ ನಾಲ್ಕು ವರ್ಷಗಳು. ನಾಲ್ಕು ವರ್ಷಗಳಲ್ಲಿ ಬರೆದ ಲೇಖನಗಳ ಸಂಖ್ಯೆ ಕೇವಲ ೯೫ . ನಿಜ ಹೆಚ್ಚೇನೂ ಬರೆದಿಲ್ಲ . ಆದರೆ ಈ ಬ್ಲಾಗ್ ನನ್ನನ್ನು ಅನೇಕ ರೀತಿಯಲ್ಲಿ ಬೆಳೆಸಿದೆ. ಸುಮ್ಮನೆ ಮನಸ್ಸಿಗೆ ಅನ್ನಿಸಿದ್ದನ್ನು ಬರೆದಾಗ ಮನ ನಿರಾಳವಾದಂತೆಯೆ , ಪ್ರಕೃತಿಯ ವಿಸ್ಮಯಗಳ ಬಗ್ಗೆ , ಜೀವವೈವಿಧ್ಯದ ಬಗ್ಗೆ ಬರೆದಾಗ ಅತೀವ ಸಂತೋಷ ಅನುಭವಿಸಿದ್ದೇನೆ . ಕೆಲ ತಮ್ಮಂದಿರು , ತಂಗಿಯರು , ಮಕ್ಕಳು, ಓದುಗರು ಯಾವ್ಯಾವುದೋ ಜೀವಿಗಳ ಫೋಟೋ ತೋರಿಸಿ ಇದರ ಬಗ್ಗೆ ಹೇಳು   ಎಂದಾಗ ಸಾರ್ಥಕಭಾವ ಉಂಟಾಗಿದೆ.

ಇದೆಲ್ಲದರೊಂದಿಗೆ ಈ ವರ್ಷ ಹೇಳಿಕೊಳ್ಳಲು ಚಿಕ್ಕದೊಂದು ಖುಷಿಯ ವಿಚಾರವಿದೆ. ಸುಮಾರು ಎಂಟು ತಿಂಗಳಿನಿಂದ
  ವಿಜಯಕರ್ನಾಟಕ ಪತ್ರಿಕೆಯ   ಸಾಪ್ತಾಹಿಕ ಪುರವಣಿಯ ಮಕ್ಕಳಪುಟ " ಆಟಂ ಪಾಠಂ " ಗೆ ಪ್ರತೀ ವಾರ ಒಂದೊಂದು ಕೀಟ ಮತ್ತು ಪಕ್ಷಿಯ ಬಗ್ಗೆ  ನಾಲ್ಕು ಸಾಲು ಬರೆಯುತ್ತಿದ್ದೇನೆ . ಈ ಚಿಕ್ಕ ಅಂಕಣದಿಂದ ಜೀವಜಾಲದೊಂದಿಗೆ , ಪ್ರಕೃತಿಯೊಂದಿಗೆ ಇನ್ನಷ್ಟು ಹತ್ತಿರವಾದಂತೆ  ಭಾಸವಾಗಿದೆ ನನಗೆ.    ಪ್ರತೀ ವಾರ ಸಮಯಕ್ಕೆ ಸರಿಯಾಗಿ ಕಳಿಸುವ ಶಿಸ್ತು ಅಭ್ಯಾಸವಾಗಿದೆ. ಅಲ್ಲದೆ ಜೀವಲೋಕದ ಅದ್ಭುತ ಜೀವಿಗಳಾದ ಪಕ್ಷಿಲೋಕದ ಬಗ್ಗೆ ನಾನು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವಂತಾಗಿದ್ದು ಈ ಪುಟ್ಟ ಅಂಕಣಕ್ಕೆ ಬರೆಯಲು ಪ್ರಾರಂಭಿಸಿದ್ದರಿಂದಾಗಿ .



 ಬ್ಯಾಕ್ಟೀರಿಯಾದಿಂದ ಹಿಡಿದು ಹುಲಿಗಳವರೆಗೆ ಪ್ರಾಣಿಲೋಕದ ಎಲ್ಲ ಜೀವಿಗಳೂ ನನ್ನಲ್ಲಿ ಕುತೂಹಲ ಹುಟ್ಟಿಸುತ್ತಿದ್ದವು ಅವುಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ಉಂಟುಮಾಡುತ್ತಿದ್ದವು ....ಆದರೂ ಪಕ್ಷಿಲೋಕವನ್ನು ನಾನು ಗಮನಿಸಿದ್ದು ಕಡಿಮೆ.   ಓಡುವ , ಹರಿಯುವ ,ಅಲೆಯುವ ತೆವಳುವ ಅನೇಕ ಜೀವಿಗಳನ್ನು ಗುರುತಿಸಬಲ್ಲವಳಾಗಿದ್ದೆ . ಆದರೆ ತಲೆಯೆತ್ತಿದರೆ ಕಾಣುವ ಈ ಅದ್ಭುತ ಹಾರುವಜೀವಿಗಳಲ್ಲಿ ಬೆರಳೆಣಿಕೆಯಷ್ಟರ ಬಗ್ಗೆ  ಮಾತ್ರ  ಅರಿತಿದ್ದೆ . ಕಾರಣ ಅದಕ್ಕಿದ್ದ ಜನಪ್ರಿಯತೆಯೆ ಇರಬಹುದೇನೋ ...ಬಹುಶಃ ಪಕ್ಷಿಗಳನ್ನು ಇಷ್ಟಪಡದಿದ್ದವರು ಕಡಿಮೆಯೇನೋ...ಯಾವ ಪತ್ರಿಕೆ, ಕ್ಯಾಲೆಂಡರ್ , ಮನೆಯ ಗೋಡೆ , ಮಕ್ಕಳ ಚಿತ್ರದ ಪುಸ್ತಕ ಹೀಗೆ ಎಲ್ಲಿ ನೋಡಿದರೂ ಸುಂದರವಾದ ಪಕ್ಷಿಗಳ ಚಿತ್ರಗಳು ಇರುತ್ತವೆ. ಅವುಗಳ ಬಗ್ಗೆ ಲೇಖನಗಳು ಬರುತ್ತವೆ.


ಅದ್ದರಿಂದಲೇ ಇಂತಹ ಜನಪ್ರಿಯ ಜೀವಿಗಳ ಬಗ್ಗೆ ತಿಳಿಯಲು ಹೊಸದೇನಿರುತ್ತದೆ ಎಂಬ ಉದಾಸೀನಭಾವವಿತ್ತು .ಆದರೀಗ ಈ ಸುಂದರ ಲೋಕದ ಅಭಿಮಾನಿಯಾಗಿಬಿಟ್ಟಿದ್ದೇನೆ. ಮೊದಲೆಲ್ಲ ನಡೆಯುವಾಗ ನೆಲ , ಅಕ್ಕ ಪಕ್ಕದ ಗಿಡ,ಪೊದೆಗಳಲ್ಲಿನ ಜೀವಜಾಲಗಳನ್ನು ಗಮನಿಸುತ್ತಿದ್ದವಳೀಗ ಮರದತುದಿ ,ಆಕಾಶ ನೋಡಿಕೊಂಡು ನಡೆಯುತ್ತಿದ್ದೇನೆ . ಇದನ್ನು ಸಾಧ್ಯವಾಗಿಸಿದ ವಿಕೆ ಬಳಗಕ್ಕೆ , ಶ್ರೀದೇವಿಯವರಿಗೆ ತುಂಬ ತುಂಬ ಥ್ಯಾಂಕ್ಸುಗಳು .

ಎಂದಿನಂತೆ ನನ್ನ ಬ್ಲಾಗ್ ಓದುವ, ಪ್ರೋತ್ಸಾಹಿಸುವ ಎಲ್ಲರಿಗೂ ಧನ್ಯವಾದಗಳು .