Showing posts with label ಪ್ರಕೃತಿ-ವಿಜ್ಞಾನಿ. Show all posts
Showing posts with label ಪ್ರಕೃತಿ-ವಿಜ್ಞಾನಿ. Show all posts

13 Apr 2015

ಗೆದ್ದಲು ಎಂಬ ಪುಟ್ಟ ರೈತ

 ಎರಡು ವರ್ಷಗಳ ಹಿಂದಿನ ಘಟನೆಯಿದು.   ಅದು ಎಪ್ರಿಲ್  ತಿಂಗಳಿನ ಕೊನೆ  .......ಮಲೆನಾಡಿನ ನೆತ್ತಿಯಂತಿರುವ ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುಟ್ಟ ಊರು ನಿಟ್ಟೂರಿನಲ್ಲಿರುವ ನಮ್ಮ ಮನೆಯಲ್ಲಿ ರಜೆಯನ್ನು ಕಳೆಯುತ್ತಿದ್ದೆವು. ಎರಡು ಮೂರು ದಿನದಿಂದ ಸಾಯಂಕಾಲ ಮಳೆ ಬರುತ್ತಿತ್ತು. ಆ ದಿನ ಬೆಳಗ್ಗೆ ಎದ್ದು ಕಾಫಿ ಕಪ್ ಹಿಡಿದು ಹೊರಬಂದರೆ ಅಂಗಳದಲ್ಲಿ ಒಂದು ಅಚ್ಚರಿ ಕಾದಿತ್ತು. ಅಂಗಳದಲ್ಲಿ ಅಲ್ಲಲ್ಲಿ  ಒಂದು ವಿಧಧ ಮಣ್ಣಿನ ರಾಶಿ , ಮಣ್ಣಿನ ಜೊತೆಗೆ ಚಿಕ್ಕ ಚಿಕ್ಕ ಅಸಂಖ್ಯಾತ ಬಿಳಿ ಬಣ್ಣದ ಮೊಟ್ಟೆಯಂತಹ ವಸ್ತು . ಹತ್ತಿರ ಹೋಗಿ ಪರೀಕ್ಷಿಸಿದಾಗ ಆ ರಾಶಿಯೆಲ್ಲವೂ ಒಂದು ಚಿಕ್ಕ ಕುಳಿಯಿಂದ ಹೊರದಬ್ಬಲ್ಪಟ್ಟಂತೆ ಇತ್ತು. ಜೊತೆಗೆ ಅಲ್ಲಿ ಗೆದ್ದಲುಗಳು ಓಡಾಡುತ್ತಿದ್ದವು.
 ಅಂಗಳದಲ್ಲಿ ಅನೇಕ ಕಡೆ ಇಂತಹ ಚಿತ್ತಾರ

ಬಹುಶಃ ಗೆದ್ದಲುಗಳು ಹುತ್ತ ನಿರ್ಮಿಸಲು ಪ್ರಯತ್ನಿಸುತ್ತಿರಬೇಕೆಂದುಕೊಂಡೆ. ಆದರೆ ಆ ಬಿಳಿಯ ಬಣ್ಣದ ಮೊಟ್ಟೆಯಂತಹ ವಸ್ತು ಏನೆಂದು ತಿಳಿಯಲಿಲ್ಲ. ಸ್ವಲ್ಪ ಹೊತ್ತು ಕಳೆದರೆ ಅದೇನೆಂದು ಗೊತ್ತಾಗಬಹುದಿತ್ತು ..ಆದರೆ ಆ ದಿನ ನಾವು ಅಲ್ಲಿಂದ ಬೆಂಗಳೂರಿಗೆ ವಾಪಾಸಾಗಲೇ ಬೇಕಿದ್ದುದರಿಂದ ಅದನ್ನು ಗಮನಿಸಲಾಗಲಿಲ್ಲ. ಅದೇನಿರಬಹುದೆಂಬ ಕುತೂಹಲ ಆಗಾಗ ಮನದ ಮೂಲೆಯಲ್ಲೆಲ್ಲೋ ಕಾಡಿ ಮರೆಯಾಗುತ್ತಿತ್ತು.
ಗೆದ್ದಲಿನ ಗೂಡಿನಿಂದ ಹೊರದಬ್ಬಲ್ಪಟ್ಟ ವಸ್ತು

 ಕಳೆದ ವರ್ಷ ಮತ್ತೆ ಅದೇ ಘಟನೆಯ ಪುನರಾವರ್ತನೆಯಾಯಿತು. ಒಂದಿಷ್ಟು ಮಣ್ಣಿನ ಜೊತೆ ಬಿಳಿ ಬಿಳಿ ಮೊಟ್ಟೆಯಂತಹ ವಸ್ತು ಅಂಗಳದಲ್ಲಿ ಕಾಣಿಸಿತ್ತು .ಕೆದಕಿದಾಗ ಅಲ್ಲೊಂದಿಷ್ಟು ಗೆದ್ದಲುಗಳೂ ಕಾಣಿಸಿದ್ದವು. ಈ ಬಾರಿಯಾದರೂ ಅದನ್ನು ಗಮನಿಸಬೇಕೆಂದುಕೊಂಡಿದ್ದೆ. ಆದರೆ ಆ ದಿನವೇ ಮನೆಗೆ ಯಾರೋ ನೆಂಟರು ಬರುವವರಿದ್ದರಿಂದ ಅಂಗಳದಲ್ಲಿ ಆ ಕಸದ ರಾಶಿಯನ್ನು ಹಾಗೇ ಬಿಡಲು ಮನೆಯವರ್ಯಾರೂ ತಯಾರಿರಲಿಲ್ಲ. ಎಲ್ಲ ಗುಡಿಸಿಬಿಟ್ಟರು.
 ಗೂಡಿನ ದ್ವಾರದಲ್ಲಿ ಗೆದ್ದಲೂ ಇದೆ

ಮರುದಿನ ಹಿಂದಿನ ದಿನ ಆ ರಾಶಿ ಕಾಣಿಸಿದ ಜಾಗದಲ್ಲೆ ಒಂದು ಚಿಕ್ಕ ಅಣಬೆ ಬೆಳೆದಿರುವುದು ಗಮನಕ್ಕೆ ಬಂತು. ಆಗ ಇದು ಗೆದ್ದಲುಗಳು ಹುತ್ತ ನಿರ್ಮಿಸುವ ಕ್ರಿಯೆ ಆಗಿರಲಾರದು ಎಂದು ಯೋಚಿಸಿದೆ. ಹಾಗೆಂದು ಕೇವಲ ಅಣಬೆ ಬೆಳೆಯುವ ಪ್ರಕ್ರಿಯೆಯಾಗಿದ್ದರೆ ಅಲ್ಲಿ ಗೆದ್ದಲುಗಳೇಕಿರಬೇಕಿತ್ತು? ತಲೆಯಲ್ಲೇ ಗೆದ್ದಲುಗಳು ಓಡಾಡಿದ ಅನುಭವ. ಸರಿ ಇದ್ದಾರಲ್ಲ ನಮ್ಮ ಗೂಗಲ್ ಮಾಹಾಶಯರು ...ಅವರಲ್ಲಿ  ಕೇಳಿದಾಗ ....... ಪ್ರಕೃತಿಯ ನಾಟಕರಂಗದಲ್ಲಿ ನಡೆದ ಆ ಚಿಕ್ಕ ಆಟ ಏನೆಂದು ತಿಳಿಯಿತು. ಆದರೂ ನಾನಂದುಕೊಂಡಿದ್ದೇ ನಿಜವೇಕೆಲ ಅನುಮಾನಗಳಿದ್ದವು. ಮತ್ತೆ ಸಹಾಯಕ್ಕೆ ಬಂದಿದ್ದು ಗೂಗಲ್ ಮಹಾಶಯರೇ....ನನಗೆ ಬೇಕಿದ್ದ ವಿಷಯದ ಬಗ್ಗೆ ಇದ್ದ ವಿಡಿಯೋ ತುಣುಕೊಂದು ದಾರಿ ತೋರಿಸಿತು. ಗೋವಾ ಯೂನಿವರ್ಸಿಟಿಯ ಬಟಾನಿಸ್ಟ್ ನಂದಕುಮಾರ್ ಕಾಮತ್ ತೆಗೆದ ಆ ವಿಡಿಯೋದ ಸಹಾಯದಿಂದ ಅವರಿಗೆ ಮೈಲ್ ಮಾಡಿ , ನನ್ನ ಅನುಮಾನಗಳನ್ನು ಮುಂದಿಟ್ಟು , ನಾನು ತೆಗೆದ ಫೋಟೊ ಕಳಿಸಿದೆ . ಮಾರನೇ ದಿನವೇ ಅವರಿಂದ ಉತ್ತರ ಬಂದಿತ್ತು. ಅದರಲ್ಲಿ ನನ್ನ ಬಹುತೇಕ ಅನುಮಾನಗಳಿಗೆ ಉತ್ತರ ದೊರಕಿತ್ತು. 


ಪ್ರಕೃತಿಯಲ್ಲಿ ಅನೇಕ ಜೀವಿಗಳು ಒಂದಕ್ಕೊಂದು ಪೂರಕವಾಗಿ ಸಹಜೀವನ ನಡೆಸುತ್ತವೆ. ಅದರಲ್ಲಿ ಗೆದ್ದಲು ಮತ್ತು ಶಿಲೀಂದ್ರಗಳ ಸಹಜೀವನ  ಪ್ರಾಕೃತಿಕವಾಗಿ ತುಂಬ ಮಹತ್ವದ್ದಾಗಿದೆ.

ಗೆದ್ದಲು ಮತ್ತು ಶಿಲೀಂದ್ರಗಳ ಸಂಘಜೀವನದ ಬಗ್ಗೆ ಅರಿಯುವುದಕ್ಕೂ ಮೊದಲು ಅವೆರಡರ ಜೀವನ ವಿಧಾನಗಳ ಬಗ್ಗೆ ಸ್ವಲ್ಪ ತಿಳಿಯುವುದು ಅವಶ್ಯಕ. 
 ಪುಟ್ಟ ಅಣಬೆಗಳು


ಶಿಲೀಂದ್ರ
ಫಂಗಸ್ ಅಥವಾ ಶಿಲೀಂದ್ರ ಸಸ್ಯವೂ ಅಲ್ಲದ , ಪ್ರಾಣಿಯೂ ಅಲ್ಲದ ವಿಚಿತ್ರ ಜೀವಿ. ಸಸ್ಯಗಳಂತೆ ಸ್ವಂತ ಆಹಾರ ಉತ್ಪಾದಿಸಲಾರದು , ಪ್ರಾಣಿಗಳಂತೆ ಚಲಿಸಲಾರದು .ಆದರೆ ಜೀವಂತ ಅಥವಾ ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಸಸ್ಯಗಳಂತೆಯೆ ಬೆಳೆದು , ಅದರರೊಳಗೆ ತನ್ನ ಬೇರಿನಂತಹ ಹೈಪೆಯನ್ನು ತೂರಿಸಿ ಅದರ ಮೂಲಕ ಕಿಣ್ವಗಳನ್ನು ಸುರಿಸಿ ಆ ಸಾವಯವ ವಸ್ತುವನ್ನು ಸರಳ ಆಹಾರವನ್ನಾಗಿ ಪರಿವರ್ತಿಸಿ , ಅದರ ಶಕ್ತಿಯನ್ನು ಹೀರಿ ಬೆಳೆಯುತ್ತವೆ. ಮನುಷ್ಯನ ಚರ್ಮದಲ್ಲಿ ವಾಸಿಸುವ ರಿಂಗ್ ವರ್ಮ್ ನಂತಹ ಫಂಗಸ್ ನಿಂದ ಹಿಡಿದು , ನಾವು ತಿನ್ನುವ ದೋಸೆ ಇಡ್ಲಿಯಲ್ಲಿ, ಬ್ರೆಡ್ ಪಿಡ್ಜಾದಲ್ಲಿ , ವೈನ್ ಗಳಲ್ಲಿ  ಶಿಲೀಂದ್ರಗಳು ಇರುತ್ತವೆ. ಇವುಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೆಂಬ ಮಟ್ಟಿಗೆ ಇವು ನಮಗೆ ಅನಿವಾರ್ಯವಾಗಿವೆ.
ಶಿಲೀಂದ್ರಗಳ ಸಂತಾನೋತ್ಪತ್ತಿಕ್ರಿಯೆಯೂ ಹೆಚ್ಚು ಕಡಿಮೆ ಸಸ್ಯಗಳಂತೆಯೇ. ಹೈಪೆಗಳ ಕವಲೊಡೆಯುವಿಕೆಯಿಂದ ಹೊಸ ಶಿಲೀಂದ್ರ ಉದಯಿಸುವುದು ಒಂದು ವಿಧ.   ಇನ್ನೊಂದು ವಿಧದ ಸಂತಾನೋತ್ಪತ್ತಿಯಲ್ಲಿ ಇದರಿಂದ ಫ್ರುಟಿಂಗ್ ಬಾಡಿ ಅಥವಾ ಅಣಬೆ ಬೆಳೆದು ಅದರಲ್ಲಿರುವ ಸ್ಪೋರ್ ಗಳಿಂದ ಹೊಸ ಶಿಲೀಂದ್ರಗಳು  ಹುಟ್ಟುತ್ತವೆ  .

ಗೆದ್ದಲು
ಗೆದ್ದಲುಗಳು  ಸಂಘಜೀವಿಗಳು. ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಟ್ಟಿಗೆ ವಾಸಿಸುತ್ತವೆ. ಅವುಗಳ ಒಂದು ಗುಂಪಿನಲ್ಲಿ ರಾಜ ಪರಿವಾರ , ಸೈನಿಕ ಮತ್ತು ಕೆಲಸಗಾರ ಹುಳುಗಳು ಎಂಬ ಮೂರು ಜಾತಿಯ ಹುಳುಗಳಿರುತ್ತವೆ.   ರಾಜ ಮತ್ತು ರಾಣಿಯರದು ಕೇವಲ ಮೊಟ್ಟೆಯಿಡುವ ಕೆಲಸ , ಸೈನಿಕ ಹುಳುಗಳದ್ದು ಗೂಡಿನ ರಕ್ಷಣೆಯ ಹೊಣೆ  .  ಆಹಾರ ಸಂಗ್ರಹಣೇ , ಗೂಡು ಕಟ್ಟುವುದು , ಮರಿಗಳನ್ನು ಬೆಳೆಸುವುದು ಮುಂತಾದ ಎಲ್ಲ ಕೆಲಸಗಳನ್ನು ನಿರ್ವಹಿಸುವುದು ಕೆಲಸಗಾರ ಗೆದ್ದಲುಗಳು. ಭೂಮಿಯನ್ನು ಕೊರೆದು ವ್ಯವಸ್ಥಿತವಾದ ಅನೇಕ ಕೋಣೆಗಳುಳ್ಳ ಗೂಡು ನಿರ್ಮಿಸುವ ಕೆಲಸಗಾರ ಹುಳುಗಳು ಗೂಡಿನಲ್ಲಿಯ ವಾತಾವರಣದ ಉಷ್ಣತೆಯನ್ನು ನಿಯತ್ರಿಸಲು ಅದರ ಮೇಲೆ ಎತ್ತರವಾದ ಹುತ್ತವನ್ನು ನಿರ್ಮಿಸುತ್ತವೆ.

ಸಸ್ಯಗಳಲ್ಲಿರುವ ಸೆಲ್ಯುಲೋಸ್ ಗೆದ್ದಲುಗಳ ಪ್ರಮುಖ ಆಹಾರ. ಆದ್ದರಿಂದ ಅವು ಸಸ್ಯಜನ್ಯವಾದ ಒಣ ಮರ , ಪೀಠೋಪಕರಣ , ಕಾಗದ ಇತ್ಯಾದಿ ಎಲ್ಲಾ ವಸ್ತುಗಳನ್ನೂ ತಿನ್ನಬಲ್ಲವು!   ವಿಶೇಷವೆಂದರೆ ಸೆಲ್ಯುಲೋಸ್ ಜೀರ್ಣಿಸಿಕೊಳ್ಳಲು ಅವು ಕೆಲ ಸೂಕ್ಷಾಣುಗಳ ಸಹಾಯ ಪಡೆಯುತ್ತವೆ. ಗೆದ್ದಲುಗಳ ಗಂಟಲಿನಲ್ಲಿ ವಾಸಿಸುವ ಕೆಲ ಬ್ಯಾಕ್ಟೀರಿಯಾಗಳು , ಪ್ರೋಟೋಜೋವಾಗಳು ಉತ್ಪಾದಿಸುವ ಕಿಣ್ವಗಳು ಸೆಲ್ಯುಲೋಸನ್ನು ವಿಭಜಿಸುತ್ತವೆ.

ಗೆದ್ದಲು ಮತ್ತು ಶಿಲೀಂದ್ರಗಳ ಸಂಘಜೀವನ
ಆದರೆ ಕೆಲ ಜಾತಿಯ ಗೆದ್ದಲುಗಳು ಸೆಲ್ಯುಲೋಸನ್ನು ಜೀರ್ಣಿಸಿಕೊಳ್ಳಲು ಕೆಲವು ಶಿಲೀಂದ್ರಗಳ ಸಹಾಯ ಪಡೆಯುತ್ತವೆ . ಅಂತಹ ಶಿಲೀಂದ್ರಗಳನ್ನು ಗೆದ್ದಲುಗಳು ತಮ್ಮ ಗೂಡಿನಲ್ಲಿಯೆ ಬೆಳೆಸುತ್ತವೆ.
ಕೆಲಸಗಾರ ಗೆದ್ದಲುಗಳು ತಿಂದ ಆಹಾರವನ್ನು ಗೂಡಿನಲ್ಲಿ ವಿಸರ್ಜಿಸುತ್ತವೆ. ಅರೆಬರೆಯಾಗಿ ಜೀರ್ಣವಾದ ಆ ಆಹಾರವಸ್ತುಗಳನ್ನು ಪೇರಿಸಿ ಫಂಗಸ್ ಕಾಂಬ್ ರಚಿಸುತ್ತವೆ ನಂತರ ಅದರ ಮೇಲೆ ಹೊರಗಡೆಯಿಂದ ಸಂಗ್ರಹಿಸಿ ತಂದ ಫಂಗಸ್ ಸ್ಪೋರ್ ಗಳನ್ನು ಚೆಲ್ಲುತ್ತವೆ. ಸೆಲ್ಯುಲೋಸ್ ಭರಿತವಾದ ಫಂಗಸ್ ಕಾಂಬ್ ಮೇಲೆ ಬೆಳೆವ ಫಂಗಸ್ ತನ್ನ ಕಿಣ್ವಗಳಿಂದ ಅದನ್ನು ವಿಭಜಿಸುತ್ತದೆ. ಜೀರ್ಣವಾಗಿ ಸರಳ ಸಕ್ಕರೆಯ ರೂಪಕ್ಕೆ ಬಂದ ಆ ಆಹಾರವನ್ನು ಗೆದ್ದಲುಗಳು ತಿನ್ನುತ್ತವೆ.
ಫಂಗಸ್ ಮತ್ತು ಗೆದ್ದಲುಗಳ ಈ ಸಹಜೀವನ ಪ್ರಕೃತಿಯಲ್ಲಿ ಸಹಬಾಳ್ವೆಗೊಂದು ಅತ್ಯುತ್ತಮ ಉದಾಹರಣೆ.

ಅಂದು  ನಮ್ಮ ಮನೆಯ ಅಂಗಳದಲ್ಲಿದ್ದದ್ದು ಇಂತಹುದೇ ಒಂದು ಗೆದ್ದಲುಗಳ ಗೂಡಿನಲ್ಲಿ ಬೆಳೆದ ಶಿಲೀಂದ್ರದಿಂದ ಹೊರಹೊಮ್ಮಿದ ಅಣಬೆಯಾಗಿತ್ತು. Macrotermitinae ಜಾತಿಯ ಗೆದ್ದಲುಗಳು ತಮ್ಮ ಗೂಡಿನಲ್ಲಿ Termitomyces  ಎಂಬ ಜಾತಿಯ ಶಿಲೀಂದ್ರಗಳ ಬೇಸಾಯ ಮಾಡುತ್ತವೆ. ಮಳೆ ಬಂದಾಗ ನೆಲದಾಳದಲ್ಲಿದ್ದ ಗೆದ್ದಲುಗೂಡಿನಲ್ಲಿ ಬೆಳೆದಿದ್ದ ಶಿಲೀಂದ್ರಗಳು ಸಂತಾನೋತ್ಪತ್ತಿ ನಡೆಸುವ ಕ್ರಿಯೆ ಆರಂಭಿಸುತ್ತವೆ. ಗೆದ್ದಲುಗಳು ರಾತ್ರಿ ವೇಳೆಯಲ್ಲಿ ಫಂಗಸ್ ಕಾಂಬ್ ಗಳನ್ನು ಹೊರತಂದು ಹಾಕುತ್ತವೆ . ಅಲ್ಲಿ Termitomyces microcarpus Heim ಎಂಬ ಈ ಅಣಬೆ ಬೆಳೆಯುತ್ತದೆ. ಈ ಅಣಬೆ ಬೆಳೆದು ಅದರಲ್ಲಿನ ಸ್ಫೋರ್ ಗಳನ್ನು ಗಾಳಿಗೆ ಹೊರಚೆಲ್ಲುವಾಗ ಅದನ್ನು ಸಂಗ್ರಹಿಸುವ ಗೆದ್ದಲುಗಳು ಅದನ್ನು ಮತ್ತೆ ತಮ್ಮ ಗೂಡಿಗೊಯ್ದು ಹೊಸದಾಗಿ ಶಿಲೀಂದ್ರಗಳ ವ್ಯವಸಾಯ ಆರಂಭಿಸುತ್ತವೆ.
ನಮ್ಮ ಪಶ್ಚಿಮಘಟ್ಟಗಳಲ್ಲಿ ಮಳೆಗಾಲದಲ್ಲಿ ಈ ಚಟುವಟಿಕೆಯನ್ನು ಕಾಣಬಹುದು. ಗೋವಾ,ಕೊಂಕಣದಲ್ಲಿ ಮಳೆಗಾಲದಲ್ಲಿ ಗುಂಪು ಗುಂಪಾಗಿ ಹುಟ್ಟುವ ಈ ಅಣಬೆಗಳನ್ನು ಸಂಗ್ರಹಿಸಿ ಅಡುಗೆಗೆ ಬಳಸುತ್ತಾರೆ ಎನ್ನುತ್ತಾರೆ ಗೋವಾದ ಬಟಾನಿಸ್ಟ್ ನಂದಕುಮಾರ್ ಕಾಮತ್ 
ನಂದಕುಮಾರ್ ಕಾಮತ್ ಅವರ ವಿಡಿಯೋ ತುಣುಕುಗಳನ್ನು ಇಲ್ಲಿ ನೋಡಬಹುದು 
https://www.youtube.com/watch?v=T0sBMfdUvq0
https://www.youtube.com/watch?v=aGis1BRv6s8

ಅಷ್ಟು ಪುಟ್ಟ ದೇಹದ ಗೆದ್ದಲುಗಳು ತಮ್ಮ ಸಮುದಾಯದ ಹಸಿವು ನೀಗಿಸಲು   ಶಿಲೀಂದ್ರಗಳ ವ್ಯವಸಾಯ ಮಾಡುವುದು ಮತ್ತು ಇದರಿಂದ ಆ ಶಿಲೀಂದ್ರಗಳಿಗೂ ಬದುಕಲು ಅನುಕೂಲವಾಗುವುದು , ಪ್ರಕೃತಿಯು ಜೀವಿಗಳಿಗೆ ಬದುಕಲು  ಹೇಗೆಲ್ಲ ದಾರಿತೋರಿಸುತ್ತದೆ ಎಂಬುದಕ್ಕೊಂದು ನಿದರ್ಶನ.

4 Dec 2014

ಕಣಜಗಳ ( wasp ) ವಿಸ್ಮಯ ಪ್ರಪಂಚ

ಕಣಜ / ಕೊಣಜ ( wasp ) ಎಂಬ ಈ ಕೀಟವು ಜೇನುನೊಣಗಳ ಪಂಗಡಕ್ಕೇ ಸೇರಿದೆ. ನೋಡಲು ಸಹ (ಇದರ ಸೊಂಟ ಸ್ವಲ್ಪ ಸಣ್ಣಗಿರುವುದನ್ನು ಬಿಟ್ಟರೆ ) ಹೆಚ್ಚುಕಡಿಮೆ ಜೇನುನೊಣವನ್ನೇ ಹೋಲುತ್ತದೆ .
 ಪ್ರಾಕೃತಿಕವಾಗಿ ಜೇನುನೊಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ಕಣಜಗಳು. ಆದರೂ ಸಹ ನಾವು ಮಾನವರು ಜೇನುನೊಣಗಳಿಗೆ ಕೊಡುವಷ್ಟು ಗೌರವವನ್ನು ಇವುಗಳಿಗೆ ಕೊಡುವುದಿಲ್ಲ.  ಜೇನು ಗೂಡು ಕಂಡರೆ ಅದನ್ನು ಜತನದಿಂದ ಕಾಪಾಡುತ್ತೇವೆ. ಕಣಜದ ಗೂಡು ಮನೆಯ ಆಸುಪಾಸಿನಲ್ಲಿ ಕಂಡರೆ ಬೆಂಕಿಯಿಂದ ಸುಟ್ಟುಬಿಡುತ್ತೇವೆ.   ಕಚ್ಚಿದರೆ( ಅದು ಹಲ್ಲುಗಳಿಂದ  ಕಚ್ಚುವುದಿಲ್ಲ, ದೇಹದ ಹಿಂಭಾಗದಲ್ಲಿರುವ ಚೂಪಾದ  ಕೊಂಡಿಯಿಂದ ಚುಚ್ಚುತ್ತದೆ.)  ತುಂಬ ಉರಿಯೆಂಬ ಕುಖ್ಯಾತಿ ಕಣಜಗಳಿಗಿದೆ. ಆದರೆ ವಾಸ್ತವವಾಗಿ  ಸುಮಾರು ಮುವತ್ತು ಸಾವಿರಕ್ಕೂ ಹೆಚ್ಚಿನ ಜಾತಿಯ ಕಣಜಗಳನ್ನು ಗುರುತಿಸಲಾಗಿದ್ದು , ಎಲ್ಲ ಜಾತಿಯ ಕಣಜಗಳೂ ಕಚ್ಚುವುದಿಲ್ಲ .
ವಿಧಗಳು
ಮುಖ್ಯವಾಗಿ ಎರಡು ರೀತಿಯ ಕಣಜಗಳಿವೆ . ಜೇನುನೊಣಗಳಂತೆ ಗುಂಪುಗುಂಪಾಗಿ ಸಂಸಾರ ನಡೆಸುವ ಕಣಜಗಳು ಮತ್ತು ಒಂಟಿಯಾಗಿ ಜೀವಿಸುವ ಕಣಜಗಳು.
ಸಂಘಜೀವಿ ಕಣಜಗಳು ( social wasp )
ಗುಂಪಾಗಿ ವಾಸಿಸುವ ಕಣಜಗಳು ಜೇನುನೊಣಗಳಂತೆಯೆ ದೊಡ್ಡ ಗೂಡನ್ನು ಕಟ್ಟುತ್ತವೆ. ಆದರೆ ಅವುಗಳಂತೆ ಇವುಗಳಲ್ಲಿ ಮೇಣ ಸ್ರವಿಸುವ ಗ್ರಂಥಿಗಳಿಲ್ಲ.


 ಮಣ್ಣು , ಸಸ್ಯಗಳ ತಿರುಳು , ತಮ್ಮ ತ್ಯಾಜ್ಯ ಇತ್ಯಾದಿ ವಸ್ತುಗಳನ್ನು ಬಳಸಿ ಈ ಕಣಜಗಳು ಗೂಡು ಕಟ್ಟುತ್ತವೆ. ರಾಜ ಪರಿವಾರ , ಕೆಲಸಗಾರರು , ಸೈನಿಕರು ಇತ್ಯಾದಿ ವರ್ಗೀಕರಣ ಇವುಗಳಲ್ಲಿದೆ. ಮೊಟ್ಟೆ ಮರಿಗಳನ್ನು ಇವು ಪಾಲಿಸುತ್ತವೆ.
ಒಂಟಿ ಕಣಜಗಳು ( solitary wasp )
ಒಂಟಿಯಾಗಿ ವಾಸಿಸುವ  ಹೆಚ್ಚಿನ  ಕಣಜಗಳು ಬಾಲ್ಯಾವಸ್ಥೆಯನ್ನು ಬೇರೆ ಜೀವಿಗಳ ದೇಹದಲ್ಲಿ ಅಥವಾ ದೇಹದ ಮೇಲೆ ಕಳೆಯುವ ಪರೋಪಜೀವಿಗಳಾಗಿವೆ.



ಕೆಲವು ಜಾತಿಯ ಹೆಣ್ಣು ಕಣಜಗಳು , ಅದರ ಬಲಿ ಜೀವಿಯನ್ನು( ಕೀಟಗಳು , ಕಂಬಳಿಹುಳುಗಳು , ಜೇಡಗಳು ) ಹುಡುಕಿ ಅದನ್ನು ತನ್ನ ಕಿಣ್ವಗಳಿಂದ ನಿಷ್ಕ್ರಿಯಗೊಳಿಸಿ , ಅದರಲ್ಲಿ ಮೊಟ್ಟೆಗಳನ್ನಿಟ್ಟು ಸುತ್ತ ಗೂಡು ಕಟ್ಟಿ ಮುಚ್ಚಿಬಿಡುತ್ತವೆ. ಅಥವಾ ಗೂಡಿನೊಳಗೆ ಮೊಟ್ಟೆಯಿಟ್ಟು, ಅಲ್ಲೇ ಬಲಿಜೀವಿಯನ್ನು ಇಡುತ್ತದೆ  ಹೊರಬರುವ ಮರಿ , ಬಲಿ ಜೀವಿಯನ್ನು ತಿನ್ನುತ್ತಾ ಬೆಳೆಯುತ್ತದೆ. ಸಂಪೂರ್ಣವಾಗಿ ಬೆಳೆದ ನಂತರ ಗೂಡನ್ನು ಒಡೆದು ಹೊರಬರುತ್ತವೆ.


ಇನ್ನು ಕೆಲವು ಜಾತಿಯ ಕಣಜಗಳು ಬಲಿ  ಕೀಟಗಳ ಮೊಟ್ಟೆ , ಅಥವಾ ಕೋಶಾವಸ್ಥೆಯನ್ನು ಹುಡುಕಿ ಅದರೊಳಗೆ ತನ್ನ ಮೊಟ್ಟೆಯನ್ನಿಡುತ್ತವೆ. ಬಲಿ ಜೀವಿಯು ಬೆಳೆದು ಮರಿಯಾಗುತ್ತಿದ್ದಂತೆ ಅದರೊಳಗೇ ಕಣಜದ ಮೊಟ್ಟೆಯೂ ಒಡೆದು ಮರಿಯಾಗಿ ಬೆಳೆಯುತ್ತವೆ. ಕ್ರಮೇಣ ಕಣಜ ಬೆಳೆದಂತೆ ಅದಕ್ಕೆ ಬಲಿ ಜೀವಿ ಬಲಿಯಾಗುತ್ತದೆ.



 ಕೆಲವು ಗಿಡಮರಗಳ ಕಾಂಡ ಎಲೆ , ಕಾಯಿಗಳ  ಮೇಲೆ  ಗಂಟು ಗಂಟಾದ ಆಕೃತಿ ಕಾಣುತ್ತದೆ . ಇದೂ ಸಹ ಕೆಲ ಜಾತಿಯ ಕಣಜಗಳ ಕೆಲಸ. ಕಣಜವು ಸಸ್ಯಕೋಶದೊಳಗೆ ಮೊಟ್ಟೆಗಳನ್ನಿಟ್ಟು ಆ ಸಸ್ಯಕೋಶವು ಅದರ ಸುತ್ತಲೂ ಇನ್ನಷ್ಟು ಪೋಷಕಾಂಶಗಳನ್ನು ಸಂಗ್ರಹಿಸುವಂತೆ ಮಾಡುತ್ತದೆ. ಹೊರಬರುವ ಮರಿಯು ಆ ಕೋಶಗಳನ್ನೇ ತಿಂದು ಬೆಳೆಯುತ್ತದೆ.




ಅಂಜೂರ ಕಣಜ ( fig wasp )
ಇವೆಲ್ಲಕ್ಕಿಂತಲೂ ಅತ್ಯಾಕರ್ಷಕವಾದ ಜೀವನಚಕ್ರ  ಅಂಜೂರದ  ಮರಗಳ ಜಾತಿಗೆ ಸೇರಿದ ಹಣ್ಣುಗಳಲ್ಲಿರುವ ಕಣಜಗಳದ್ದು. ಅಂಜೂರದ ಮರದಲ್ಲಿ ಕಾಯಿಯಂತೆ ತೋರುವುದು ವಾಸ್ತವವಾಗಿ ಗಂಡು ಮತ್ತು ಹೆಣ್ಣು ಹೂವುಗಳನ್ನೊಳಗೊಂಡಿರುವ ಹೂಗುಚ್ಛ. ಈ ಹೂಗುಚ್ಛದೊಳಗೆ ಹೋಗಲು ಚಿಕ್ಕದಾದ ಒಂದು ಕಿಂಡಿಯಿದೆ. ಈ ಕಿಂಡಿಯೊಳಗೆ ನುಸುಳುವ ಹೆಣ್ಣು ಕಣಜ , ಹೀಗೆ ನುಗ್ಗುವಾಗ ತನ್ನ ರೆಕ್ಕೆಗಳು , ಮೀಸೆ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಒಂದು ಹೂಗುಚ್ಚದಲ್ಲಿ ಗಂಡು ಹೂವು , ಉದ್ದನೆಯ ಹೆಣ್ಣು ಹೂವು ಮತ್ತು ಗಿಡ್ಡನೆಯ ಹೆಣ್ಣು ಹೂಗಳಿರುತ್ತವೆ.
 ಉದ್ದನೆಯ ಹೂಗಳೇ ಹೆಚ್ಚಾಗಿದ್ದಲ್ಲಿ ಅಲ್ಲಿ ಆ ಕೀಟಕ್ಕೆ ಮೊಟ್ಟೆಯಿಡಲಾಗುವುದಿಲ್ಲ . ತನ್ನೊಡನೆ ತಂದ ಪರಾಗರೇಣುವಿನಿಂದ ಹೆಣ್ಣುಹೂವಿನಲ್ಲಿ ಪರಾಗಸ್ಪರ್ಶ ನಡೆಸುವ ಕಣಜ ನಂತರ ಅಲ್ಲೇ ಸಾಯುತ್ತದೆ. ಅದು ಸತ್ತೊಡನೆಯೇ ಕಿಣ್ವವೊಂದರ ಮೂಲಕ ಹೂವು ಅದನ್ನು ಕರಗಿಸಿಬಿಡುತ್ತದೆ. ಪರಾಗಸ್ಪರ್ಶವಾದ್ದರಿಂದ ಅದು ಮುಂದೆ ಬೆಳೆದು ಬೀಜೋತ್ಪತ್ತಿ ಆಗುತ್ತದೆ. ಇಂತಹ ಹಣ್ಣುಗಳು ತಿನ್ನಲು ಯೋಗ್ಯವಾಗಿರುತ್ತವೆ.
   ಗಿಡ್ಡನೆಯ  ಹೆಣ್ಣು ಹೂವುಗಳು ಹೆಚ್ಚಿರುವ ಹೂಗುಚ್ಛವಾದರೆ ಹೆಣ್ಣು ಅಲ್ಲಿ ತನ್ನ ಮೊಟ್ಟೆಗಳನ್ನಿಟ್ಟು  ಸಾಯುತ್ತದೆ. ಮೊದಲು ಮೊಟ್ಟೆಯೊಡೆದು ಹೊರಬರುವ ಗಂಡು ಮರಿಗಳು , ಹೆಣ್ಣನ್ನು ಹುಡುಕಿ , ಸಂತಾನಕ್ರಿಯೆ ನಡೆಸುತ್ತವೆ. ಹೊರಬರಲು ದಾರಿ ಅಗೆಯುತ್ತಾ , ಅಲ್ಲೇ ಸಾಯುತ್ತವೆ. ನಂತರ ಹೊರಬರುವ ಹೆಣ್ಣು ಕಣಜ , ಆ ವೇಳೆಗೆ ಅರಳಿರುವ ಗಂಡು ಹೂವುಗಳಿಂದ ಪರಾಗರೇಣುಗಳನ್ನೂ ಸಂಗ್ರಹಿಸಿಕೊಂಡು ಅಲ್ಲಿಂದ ಹೊರಬೀಳುತ್ತವೆ. ಮತ್ತೆ ಹೊಸ ಮರ ಹುಡುಕಿ , ಅದರ ಹೂಗುಚ್ಛದೊಳಗೆ ನುಸುಳುತ್ತವೆ ಹೀಗೆ ಅವುಗಳ ಜೀವನಚಕ್ರ ಮುಂದುವರೆಯುತ್ತದೆ.
 ಈ ಜಾತಿಗೆ ಸೇರಿದ ನೂರಾರು ಮರಗಳಿವೆ , ಪ್ರತಿಯೊಂದು ಮರಕ್ಕೂ ಅದರದೇ ಆದ ಒಂದು ಜಾತಿಯ ಕಣಜಗಳು ಪರಾಗಸ್ಪರ್ಶ ನಡೆಸುತ್ತವೆ.

ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಕಣಜಗಳದು ಬಹುಮುಖ್ಯ ಪಾಲಿದೆ . 
ಅನೇಕ ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಸಿ ಬೀಜೋತ್ಪತ್ತಿಗೆ ಕಾರಣವಾಗುತ್ತದೆ .
ರೈತರ ಬೆಳೆ ಹಾನಿಗೆ ಕಾರಣವಾಗುವ ಅನೇಕ ಕೀಟಗಳು ಇದರ ಆಹಾರವಾಗಿರುವುದರಿಂದ ಇದೊಂದು ಉತ್ತಮ ಜೈವಿಕ ಕೀಟನಾಶಕ .
ಎಲ್ಲ ಕೀಟಗಳಂತೆ ಅತಿಯಾದ ಕೀಟನಾಶಕಗಳ ಬಳಕೆ , ಈ ಕೀಟಗಳನ್ನೂ ಸಂಕಷ್ಟಕ್ಕೆ ದೂಡಿದೆ. 

ಈ ವಿಡಿಯೋ ತುಣುಕು fig wasp ಗಳ ಬಗ್ಗೆ ತಿಳಿಸುತ್ತದೆ .
https://www.youtube.com/watch?v=JfkiYfrStrU

18 Aug 2014

ನೀರ ಮೇಲಿನ ಗುಳ್ಳೆಯೂ ನಿಜ ಹರಿಯೆ !!



ಮಲೆನಾಡಿನ ಮಳೆಗಾಲದ ಒಂದು ರಾತ್ರಿ , ಮಳೆಯ ಶಬ್ದದ ಜೊತೆಗೆ ಪೈಪೋಟಿಗಿಳಿದಂತೆ ಕೂಗುವ ವಿವಿಧ ಕೀಟಗಳು , ಮನೆಯ ಸುತ್ತಲೂ ಗಾಢವಾದ ಕತ್ತಲೆ , ಕರೆಂಟ್ ಇಲ್ಲವಾದ್ದರಿಂದ ಮನೆಯೊಳಗೂ ಕತ್ತಲೆ . ಚಿಕ್ಕವಳಿದ್ದಾಗ ಇಂತಹ ಸನ್ನಿವೇಶದಲ್ಲಿ ಕುಳಿತಲ್ಲಿಂದ ಏಳಲೂ ಕೂಡ ಭಯವಾಗುತ್ತಿದ್ದುದು ಏಕೆ ಗೊತ್ತ ? ಕಾಲಿಟ್ಟರೆ ಕಪ್ಪೆ ಎಲ್ಲಾದರೂ ಮೈಮೇಲೆ ಹಾರೀತು ಎಂದು.
ನಿಜ , ಹಾವಿಗೂ ಕೂಡ ಅಷ್ಟೊಂದು ಭಯವಾಗುತ್ತಿರಲಿಲ್ಲ , ಆದರೆ ಈ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹಾರುವ ಪುಟ್ಟ ಕಪ್ಪೆಗಳು  ಒಂದು ರೀತಿ ಭಯ ಮಿಶ್ರಿತ ಅಸಹ್ಯ ಹುಟ್ಟಿಸುತ್ತಿದ್ದವು , ಅವುಗಳಿಂದ ಏನೂ ಅಪಾಯವಿಲ್ಲವೆಂದು ತಿಳಿದಿದ್ದರೂ! ತಣ್ಣನೆಯ ದೇಹದ , ಕುತ್ತಿಗೆಯೇ ಇಲ್ಲದ ವಿಚಿತ್ರಾಕಾರದ , ಹೊರಚಾಚಿದ ಕಂಗಳ ,  ಕುಪ್ಪಳಿಸುವ ಕಪ್ಪೆ ಭಯ ಹುಟ್ಟಿಸುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ  ಬಿಡಿ !


ಮಳೆಗಾಲದಲ್ಲಂತೂ ಅನೇಕ ಗಾತ್ರ ಆಕಾರಗಳ ಕಪ್ಪೆಗಳು ಶಾಲೆಗೆ ಹೋಗುವ ದಾರಿಯಲ್ಲಿ ಕಾಣಿಸುವುದು ಸಾಮಾನ್ಯವಾಗಿತ್ತು.  ಎಷ್ಟೋ ಕಪ್ಪೆಗಳು ವಾಹನಗಳಿಗೆ ಸಿಲುಕಿ ಸತ್ತು ಕೊಳೆಯುತ್ತಾ ಕೆಟ್ಟ ವಾಸನೆ ಸೂಸುತ್ತಾ ಬಿದ್ದಿರುತ್ತಿದ್ದವು.

 ಸ್ವಲ್ಪ ದೊಡ್ಡವಳಾದ ಮೇಲೆ ಅವುಗಳ ಮೇಲಿದ್ದ ಭಯ ಕಡಿಮೆಯಾಗಿ ಗಮನಿಸತೊಡಗಿದ್ದೆ. ನಮ್ಮ ಮನೆಯ ಜಗುಲಿಯ ಮೂಲೆಯಲ್ಲೊಂದು ದೊಡ್ಡ ಕಪ್ಪೆ ಕುಳಿತಿರುತ್ತಿತ್ತು. ಅಮ್ಮ ಅದನ್ನು ಎಷ್ಟು ಬಾರಿ ಹೊರಗೆ ಹಾಕಿದರೂ , ಸ್ವಲ್ಪ ಹೊತ್ತಿನಲ್ಲಿ ವಾಪಾಸ್ ಅಲ್ಲೇ ಕುಳಿತಿರುತ್ತಿತ್ತು.  ಹಾಗಾದರೆ  ಅವುಗಳಿಗೂ ತಮ್ಮ ಜಾಗ ತಮ್ಮ ಮನೆ ಇದು ಎಂಬ ಭಾವ ಮತ್ತು ಅದನ್ನು ಗುರುತಿಸಿ ಅಲ್ಲಿಗೇ ವಾಪಾಸಾಗುವ ಸಾಮರ್ಥ್ಯ ಎಲ್ಲಾ ಇರಬಹುದೆ ಎಂಬ ಆಶ್ಚರ್ಯ . ಅದನ್ನು ಇನ್ನಷ್ಟು ಪರೀಕ್ಷಿಸಬೇಕೆಂಬ ಯೋಚನೆಯಲ್ಲಿ , ಹಿಡಿದು, ಗುರುತಿಗಾಗಿ ಕಾಲಿಗೊಂದು ಚಿಕ್ಕ ದಾರ ಸುತ್ತಿ , ಎರಡು ಫರ್ಲಾಂಗ್ ದೂರದಲ್ಲಿದ್ದ ಚಿಕ್ಕ ಹಳ್ಳವೊಂದರ ಬಳಿ ಬಿಟ್ಟು ಬಂದೆ. ನಾನು ಅದನ್ನು ಬಿಟ್ಟು ಬಂದಾಗ ಸುಮಾರು ಬೆಳಗಿನ ಹತ್ತು ಗಂಟೆ , ಸಾಯಂಕಾಲ ನಾಲ್ಕರ ವೇಳೆಗೆ ಅದು ಜಗಲಿಯ ಮೂಲೆಯ ತನ್ನ ಎಂದಿನ ಸ್ಥಾನದಲ್ಲಿ ಗಾಢ ಆಲೋಚನೆಯಲ್ಲಿ ಮುಳುಗಿರುವ ತತ್ವಜ್ಞಾನಿಯಂತೆ ಕುಳಿತಿತ್ತು.  ಆಮೇಲೆ ಅದನ್ನು ಎತ್ತಿ ಹೊರೆಗೆ ಹಾಕುವ ಸಾಹಸವನ್ನು ನಾವೆಲ್ಲರೂ ಕೈಬಿಟ್ಟೆವು. ಅದು ಸಹಾ ತನ್ನ ಮನೆಯೆಂಬ ಹಕ್ಕಿನಿಂದ ಕುಳಿತಿರುತ್ತಿತ್ತು. ಅದ್ಯಾವಾಗ ಏನನ್ನು ತಿನ್ನುತ್ತಿತ್ತೋ ನಾವ್ಯಾರು ಗಮನಿಸಲಿಲ್ಲ. ಆ ವರ್ಷ ಮಳೆಗಾಲ ಕಳೆದು ಚಳಿಗಾಲ ಮುಗಿಯುವವರೆಗೂ ಅಲ್ಲಿ ಇರುತ್ತಿದ್ದ ಆ ಕಪ್ಪೆರಾಯ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಮಾಯವಾಗಿದ್ದ. ಅದೆಲ್ಲಿ ಹೋಗಿ ಅಡಗಿದನೋ ಅಥವಾ ಸತ್ತೇ ಹೋದನೋ ತಿಳಿಯಲಿಲ್ಲ.

ಪಿಯುಸಿಯಲ್ಲಿ ಪ್ರಾಣಿಶಾಸ್ತ್ರದ ತರಗತಿಗಳಲ್ಲಿ ಕಪ್ಪೆಗಳ ದೇಹರಚನೆಯ ಬಗ್ಗೆಯೆ ವಿಸ್ತ್ರುತವಾದ ಪಾಠವಿತ್ತು.   ಅದರ ದೇಹದ ಹೊರಚರ್ಮವನ್ನು ಕೊಯ್ದು ಒಳಭಾಗಗಳನ್ನು ಗಮನಿಸುವಾಗ ಇನ್ನೂ  ಹೊಡೆದುಕೊಳ್ಳುತ್ತಿದ್ದ ಅದರ ಹೃದಯವನ್ನು ನೋಡಿ ಪಾಪಪ್ರಜ್ಞೆಯಿಂದ ಬೇಸರವಾಗಿಬಿಟ್ಟಿತ್ತು.

  ಬೆಂಗಳೂರಿಗೆ ಬಂದ ನಂತರ ಇಲ್ಲಿ ಕಪ್ಪೆಗಳನ್ನು ನೋಡೇ ಇಲ್ಲ . ಮಳೆಗಾಲದಲ್ಲೂ ಕೂಡ ಇಲ್ಲಿ ಕಪ್ಪೆಗಳನ್ನು ಕಂಡಿಲ್ಲ .




ಈ ಬಾರಿ ಮಳೆಗಾಲದ ಪ್ರಾರಂಭದಲ್ಲಿ ಊರಿಗೆ ಹೋಗಿದ್ದೆ . ಮಳೆ ಬಂದು ರಸ್ತೆಗಳಲ್ಲೆಲ್ಲಾ ನೀರು ನಿಂತಿತ್ತು.  ಹೊಸ ತೋಟದ ಬಳಿಯಂತೂ ಅಲ್ಲಲ್ಲಿ ನೀರು ನಿಂತು ಪುಟ್ಟ ಪುಟ್ಟ ಕೆಂಪು ನೀರಿನ ಕೆರೆಯೆ ಸೃಷ್ಟಿಯಾದಂತಿತ್ತು. ಹೀಗೆ ಸೃಷ್ಟಿಯಾದ ಕೆಲ ಪುಟ್ಟ ಹೊಂಡಗಳಲ್ಲಿ ಚಿಕ್ಕ ಚಿಕ್ಕ ನೊರೆಗಳಿಂದಾದ ದೊಡ್ಡ ಗುಳ್ಳೆಗಳು  ತೇಲುತ್ತಿದ್ದವು. ಮಧ್ಯೆ ಮಧ್ಯೆ ಬಿಳಿಯ ಮೊಟ್ಟೆಯಂತಹ ವಸ್ತು ಕಾಣಿಸುತ್ತಿತ್ತು.  ನಿಧಾನವಾಗಿ ಅದರ ಒಂದು ಬದಿಯನ್ನು ಮುಟ್ಟಿದೆ. ಜೆಲ್ಲಿಯನ್ನು ಸ್ಪರ್ಶಿಸಿದ ಅನುಭವವಾಯ್ತು .  "ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ " ಎಂಬ ದಾಸವಾಣಿಯನ್ನು ಸುಳ್ಳಾಗಿಸುವಂತೆ ಅಚಲವಾಗಿತ್ತು ಆ ನೊರೆಗುಳ್ಳೆ. ಇದೇನಿರಬಹುದೆಂಬ ಅಚ್ಚರಿಯಲ್ಲಿ ತಲೆಕೆಡಿಸಿಕೊಂಡು ನಿಂತಿದ್ದಾಗ , ಅಪ್ಪ ಇದು ಕಪ್ಪೆಗಳು ಇಟ್ಟಿರುವ ಮೊಟ್ಟೆಗಳು , ಇಂತಹ ನೊರೆಗುಳ್ಳೆಗಳು ಈ ಕಾಲದಲ್ಲಿ  ಬೇಕಾದಷ್ಟು ಕಾಣಿಸುತ್ತವೆ ಎಂದರು.



ನನಗೆ ಕಾಲೇಜಿನಲ್ಲಿ ಕಪ್ಪೆಗಳ ಬಗ್ಗೆ ಓದುವಾಗ ಅವು ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ , ಎಂದು ಓದಿದ ನೆನಪಿತ್ತು. ಆದರೆ ಹೀಗೆ ನಾಲ್ಕಾರು  ದಿನಗಳಲ್ಲಿ ಒಣಗಿ ಹೋಗುವ ಈ ಪುಟ್ಟ ಹೊಂಡದಲ್ಲಿ   ನೊರೆಗುಳ್ಳೆಗಳನ್ನು ನಿರ್ಮಿಸಿ ಮೊಟ್ಟೆಗಳನ್ನಿಡುವ ಬಗ್ಗೆ ಓದಿದ ನೆನಪಿರಲಿಲ್ಲ.  ಹೊರಬಂದ ಮರಿಗಳು ಇಲ್ಲಿ ಬೆಳೆಯುವುದಾದರೂ ಹೇಗೆ? ಅವಕ್ಕೆ ಆಹಾರವೆಲ್ಲಿ ಸಿಗುತ್ತದೆ?

ಕೊನೆಗೆ ಗೂಗಲಮ್ಮ ಇದಕ್ಕೆಲ್ಲ ಉತ್ತರ ತಿಳಿಸಿದಳು.

 ಕಪ್ಪೆಗಳಲ್ಲಿ ಅನೇಕ ಜಾತಿಗಳಿವೆ. ನೆಲದಲ್ಲಿ , ನೀರಿನ  ಸನಿಹ  ವಾಸಿಸುವಂತವು ಹಲವಾದರೆ, ಮರಗಳ ಮೇಲೆ ಇರುವಂತವು ಕೆಲವು. ನಮ್ಮ ಪಶ್ಚಿಮಘಟ್ಟದ ಕಾಡುಗಳಲ್ಲಿ ಪ್ರಪಂಚದಲ್ಲಿ ಬೇರೆಲ್ಲೂ ಇರದ ಅನೇಕ ಜಾತಿಯ ಅಪೂರ್ವ ಕಪ್ಪೆಗಳಿವೆಯಂತೆ.  ಕಪ್ಪೆಗಳ ಜೀವನಚಕ್ರದಲ್ಲಿ,  ಮೊಟ್ಟೆ - ಗೊದಮೊಟ್ಟೆ - ಕಪ್ಪೆ ಈ ಮೂರು ಹಂತಗಳಿವೆ . ಕಪ್ಪೆಗಳು ಕೆರೆ ಹಳ್ಳಗಳಲ್ಲಿ   ಒಂದು ರೀತಿಯ ಲೋಳೆ ದ್ರವದಿಂದ ಆವರಿಸಿದ ಕಪ್ಪುಬಣ್ಣದ ಮೊಟ್ಟೆಗಳನ್ನು ಇಡುತ್ತವೆ . ಮೊಟ್ಟೆಯೊಡೆದು ಹೊರಬರುವ ಮರಿಗಳೇ ಗೊದಮೊಟ್ಟೆಗಳು . ಮೀನಿನಾಕಾರದಲ್ಲೆ ಇರುವ ಇವುಗಳು ಮೀನಿನಂತೆಯೆ ಜಲವಾಸಿಗಳು. ಈ ಗೊದಮೊಟ್ಟೆ ಎರಡು ಮೂರು ಹಂತದಲ್ಲಿ ಬೆಳೆದು ನಂತರ ಕಪ್ಪೆಯಾಗುತ್ತದೆ.  ಕಪ್ಪೆಗಳ ಮೊಟ್ಟೆಗಳು, ಮರಿಗಳು ಅನೇಕ ಜಲಚರಗಳಿಗೆ ಆಹಾರವಾದ್ದರಿಂದ ಬದುಕಿ ಉಳಿಯುವ ಸಂಖ್ಯೆ ಕಡಿಮೆ.


  ಕೆಲವು ನೆಲವಾಸಿ , ಮರವಾಸಿ ಕಪ್ಪೆಗಳು ಮೊಟ್ಟೆಯಿಡಲು ಇನ್ನೂ ಸುರಕ್ಷಿತ ವಿಧಾನವನ್ನನುಸರಿರುತ್ತವೆ. ಮರವಾಸಿ ಕಪ್ಪೆಗಳು  ಕೆರೆ ಕೊಳ್ಳಗಳ ಬಳಿಯಿರುವ ಮರಗಿಡಗಳನ್ನು ಅಯ್ದುಕೊಳ್ಳುತ್ತವೆ. ಅಲ್ಲಿ ನೀರಿನ ಮೇಲೆ ಬಾಗಿರುವ ಟೊಂಗೆಯನ್ನು ಹುಡುಕಿ ಅದರ ಎಲೆಯ ಮೇಲೆ ನೊರೆಗೂಡನ್ನು ನಿರ್ಮಿಸಿ ಅದರಲ್ಲಿ ಮೊಟ್ಟೆಯಿಡುತ್ತವೆ.  ಮೊಟ್ಟೆಯೊಡೆದು ಹೊರಬರುವ ಮರಿ ನೇರವಾಗಿ ನೀರಿಗೆ ಬೀಳುತ್ತದೆ.ಅಲ್ಲಿ ಬೆಳೆದು ಕಪ್ಪೆಯಾಗಿ , ದಡ ಸೇರಿ ಮರಗಳಲ್ಲಿ ವಾಸಿಸುತ್ತವೆ.
ಇನ್ನು ಕೆಲ ನೆಲವಾಸಿ ಕಪ್ಪೆಗಳು ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಸೃಷ್ಠಿಯಾಗುವ ನೀರಿನ ಹೊಂಡಗಳಲ್ಲಿ ನೊರೆಗೂಡು ನಿರ್ಮಿಸಿ ಮೊಟ್ಟೆಯಿಡುತ್ತವೆ. ಮರಿಯಾದ ನಂತರ ಇವುಗಳು ಮಳೆಯ ನೀರಿನ ಜೊತೆ ತೇಲುತ್ತಾ ಹತ್ತಿರದ ಕೆರೆಕೊಳ್ಳಗಳನ್ನು ಸೇರಿಕೊಂಡು ಬೆಳೆಯುತ್ತವೆ.


ನೊರೆಗೂಡು ನಿರ್ಮಿಸಲು ಹೆಣ್ಣು ಕಪ್ಪೆ ಮೊದಲು ಲೋಳೆಯಾದ ದ್ರವವನ್ನು ಸ್ರವಿಸುತ್ತದೆ.   ಗಂಡು ಕಪ್ಪೆಗಳು  ಕಾಲಿನಲ್ಲಿ ಅದನ್ನು ಬೀಟ್ ಮಾಡಿ ನೊರೆ ಉಂಟುಮಾಡುತ್ತವೆ.  ಒಮ್ಮೆ ಚೆನ್ನಾಗಿ ನೊರೆ ಉಂಟಾದ ಮೇಲೆ ಹೆಣ್ಣು ಅದರ ಮಧ್ಯೆ ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತದೆ.   ನೊರೆಗುಳ್ಳೆಯ ಮೇಲ್ಭಾಗ ಗಾಳಿಯ ಸಂಪರ್ಕದಿಂದ ಗಟ್ಟಿಯಾಗಿ ಜೆಲ್ಲಿಯಂತಾಗುತ್ತದೆ.  ಕೆಸರು ನೀರಿನಲ್ಲಿ ಇದು ಇರುವುದರಂದ ಸೂಕ್ಷ್ಮಾಣುಗಳಿಂದ  ಮೊಟ್ಟೆಗಳು ನಾಶವಾಗದಂತೆ ತಡೆಯುವ ಸೂಕ್ಷ್ಮಾಣು ನಿರೋಧಕ ಅಂಶ ನೊರೆಯಲ್ಲಿರುವ ಪ್ರೋಟೀನ್ ಗಳಲ್ಲಿರುತ್ತದೆ. ಆದರೆ ಆ ಪ್ರೋಟೀನ್ ಮೊಟ್ಟೆಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟುಮಾಡುವುದಿಲ್ಲ. ನೊರೆಯ ಈ ಗುಣವೀಗ ಜೀವವಿಜ್ಞಾನಿಗಳ ಗಮನ ಸೆಳೆದಿದೆಯಂತೆ. ರೋಗಾಣುಗಳನ್ನು ನಾಶಪಡಿಸುವ , ದೇಹದ ಜೀವಕೋಶಗಳಿಗೆ ಯಾವುದೇ ಹಾನಿಯುಂಟುಮಾಡದ ಔಷಧಿಗಳನ್ನು ತಯಾರಿಸಲು ಇದು ನೆರವಾಗಲಿದೆಯಂತೆ.
ಇಷ್ಟೇ ಅಲ್ಲದೆ ಈ ನೊರೆ , ಮೊಟ್ಟೆಗಳಿಗೆ ಅವಶ್ಯಕವಾದ ತೇವಾಂಶವನ್ನೂ ಒದಗಿಸಿ ಕಾಪಾಡುತ್ತದೆ. ತಾತ್ಕಾಲಿಕ ನೀರಿನ ಹೊಂಡಗಳು ಬೇಗನ ಒಣಗಿಹೋಗಬಹುದಾದ್ದರಿಂದ ಇಂತಹ ಜಾಗದಲ್ಲ್ಲಿರುವ ನೊರೆಗುಳ್ಳೆಗಳಲ್ಲಿರುವ ಮೊಟ್ಟೆಗಳು ಬೇಗನೇ ಬೆಳೆದು ಮರಿಯಾಗುತ್ತದೆ.
ಈ ರೀತಿಯ ತತ್ಕಾಲಿಕ ಹೊಂಡಗಳಲ್ಲಿ ಮೀನು ಮೊದಲಾದ ಯಾವುದೇ ಜಲಚರಗಳು ಇರುವುದಿಲ್ಲವಾದ್ದರಿಂದ ಇಲ್ಲಿ ಕಪ್ಪೆಗಳಿಡುವ ಮೊಟ್ಟೆಗಳನ್ನು ತಿನ್ನುವ ವೈರಿಗಳಿಲ್ಲ .  ಬೇರಾವುದೇ ನೆಲವಾಸಿಗಳಿಗೆ ಜೆಲ್ ನಂತಿರುವ ನೊರೆಯನ್ನು ಬೇಧಿಸಿ ಮೊಟ್ಟೆ ತಿನ್ನಲು ಸಾಧ್ಯವಿಲ್ಲ .
ನಿಜಕ್ಕೂ ಪ್ರಕೃತಿ ವಿಸ್ಮಯಗಳ ಸಂತೆ !! ಅಲ್ಲವೆ?





18 Nov 2013

ಅಳಿಲು ರಾಣಿಯ ಕಿತಾಪತಿ

    ನಾಲ್ಕು ದಿನಗಳಿಂದ ಮೋಡ, ಚಳಿ . ಒಳಗಿದ್ದ ಸ್ವೆಟರ್ ಶಾಲ್  ಎಲ್ಲ ಹೊರಬಂದಿವೆ.  ಈ ರೀತಿಯ ಚಳಿಗೆ ನಾವೇನೋ ಒಳಗಿರುವುದನ್ನೆಲ್ಲ ಹೊರತೆಗೆದು ಹಾಕಿಕೊಂಡು ಬೆಚ್ಚಗಾಗುತ್ತೇವೆ . ಆದರೆ ಪಾಪ ನಮ್ಮಷ್ಟು  ಅವಕಾಶವಿಲ್ಲದ ಎಷ್ಟೋ ಜೀವಿಗಳಿವೆಯಲ್ಲ ಭೂಮಿಯಲ್ಲಿ .
ಬಿಸಿಲಿರುವ ದಿನಗಳಲ್ಲಿ ಬೆಳಗಾಗುತ್ತಿದ್ದಂತೆ ತಮ್ಮ ಚಟುವಟಿಕೆ ಪ್ರಾರಂಭಿಸುವ ಹಣ್ಣಿನ ಬುಟ್ಟಿಯಲ್ಲಿನ ಚೆನ್ನಾಗಿ ಕಳಿತ ಬಾಳೆಹಣ್ಣಿನ ಮೇಲೆ ಕುಳಿತು ಅದರ ರುಚಿ ನೋಡುವ ಫೂಟ್ ಫ್ಲೈ ಈಗ ಹಾರಾಡುತ್ತಿಲ್ಲ.
ಸಕ್ಕರೆ ಬೆಲ್ಲದ ಡಬ್ಬಿಯನ್ನು ಹುಡುಕಿಕೊಂಡು   ಬರುವ ಇರುವೆಗಳ ಸಾಲು ನಾಲ್ಕು ದಿನಗಳಿಂದ ಕಾಣಿಸುತ್ತಿಲ್ಲ.
ಬಾಲ್ಕನಿಯಲ್ಲಿ ತಿಂಗಳಿಂದ ನಡೆಯುತ್ತಿರುವ ಪಾರಿವಾಳಗಳ ಜಾಗದ ತಕರಾರೂ ಇಲ್ಲದೆ  ರೆಕ್ಕೆಗಳಲ್ಲಿ ಒಂದನ್ನೊಂದು  ಬಡಿದಾಡಿಕೊಳ್ಳುವ ಶಬ್ದ , ಕುಟುರ್ ಕುಟುರ್ ಎಂದು ಬೆದರಿಸುವ ಶಬ್ದವೂ ಇಲ್ಲ .
ಬೆಳಗಾಗುತ್ತಿದ್ದಂತೆ ಮನೆಯ ಹಿಂದಿನ ಯುಟಿಲಿಟಿಯಲ್ಲೆಲ್ಲ ಚೀಂಕ್ ಚೀಂಕ್ ಎನ್ನುತ್ತಾ ಓಡಾಡುವ ಅಳಿಲು ಸಂಸಾರವೂ ಪತ್ತೆಯಿಲ್ಲ.

ಈ ಅಳಿಲು ರಾಣಿ ಮತ್ತು ಪಾರಿವಾಳ ಮಾಡುವ ಕಿತಾಪತಿಗಳು ಒಂದೆರಡಲ್ಲ . ಕೆಲ ದಿನಗಳ ಹಿಂದೆ ನಮ್ಮ ಮನೆಯ ಹಿಂದಿನ ಮನೆಯಾಕೆ ಅವರ ಅಂಗಳದಲ್ಲಿ   ಗೋಧಿಯನ್ನು ಒಣಗಿಸಲೆಂದು ಬಿಸಿಲಿಗೆ ಹಾಕಿದ್ದರು . ಹಾಗೆ ಒಣಗಿಸಿ ಭದ್ರವಾಗಿ ಗೇಟಿಗೆ ಬೀಗ ಹಾಕಿ ಆಕೆ ಎಲ್ಲೋ ಹೋಗಿದ್ದರು. ಇಲ್ಲಿ ಈ ಕಿತಾಪತಿಗಳು ಮಾಡಿದ ಕೆಲಸ ನೋಡಿ .



ಈ ಅಳಿಲು ರಾಣಿಯಿದ್ದಾಳಲ್ಲ ಸಾಮಾನ್ಯದವಳಲ್ಲ ಇವಳು. ಯಾವಾಗ ನೋಡಿದರೂ ದೊಡ್ಡ ಧ್ವನಿಯಲ್ಲಿ ಕೂಗುತ್ತಲೇ ಇರುವ ಈಕೆ ನಮಗೆ ಗೊತ್ತಾಗದಂತೆ ಏನನ್ನಾದರೂ ಕದಿಯುವಾಗ ಮಾತ್ರ ಸ್ವಲ್ಪವೂ ಶಬ್ದವಾಗದಂತೆ ಕೆಲಸ ಮಾಡುತ್ತಾಳೆ.  ಈಗ ಎರಡು ವರ್ಷಗಳಿಂದ ನಮ್ಮ ಮನೆಯ ಯುಟಿಲಿಟಿಯಲ್ಲೇ ಮರಿ ಹಾಕಿ, ಅದನ್ನು ಸಾಕಿ ದೊಡ್ಡದನ್ನಾಗಿ ಮಾಡಿ ಓಡಿಸ್ತಿದ್ದಾಳೆ . ಆದರೆ ನಮಗೆ ಅದೆಲ್ಲಿ ಎಂದು ಕಾಣಿಸದಷ್ಟು ಜಾಗರೂಕತೆಯಿಂದ ಕೆಲಸ ಮಾಡ್ತಾಳೆ.
ಆದರೆ ಈ ವರ್ಷ ಮಾತ್ರ ಅವಳ ಗೂಡನ್ನೂ ಮರಿಯನ್ನೂ ನೋಡಿದೆ.
ಮನೆಯ ಜೈವಿಕ ಕಸದಿಂದ  ಸಾವಯವ ಗೊಬ್ಬರ ತಯಾರಿಸುವ   ಹುಮ್ಮಸ್ಸಿನಲ್ಲಿ  ಒಂದೆರಡು ಟಬ್ ಇಟ್ಟುಕೊಂಡಿದ್ದೇನೆ . ಒಂದರಲ್ಲಿ ಕಸ ಮತ್ತು ಮಣ್ಣು ಹೀಗೆ ತುಂಬುವವರೆಗೆ ಹಾಕುತ್ತಾ ಆ ಟಬ್ ತುಂಬಿದ ಮೇಲೆ ಮುಚ್ಚಿ ಇಡುತ್ತೇನೆ. ಅದನ್ನು ನಾಲ್ಕಾರು ತಿಂಗಳು ಬಿಟ್ಟು ತೆಗೆದಾಗ ಫಲವತ್ತಾದ ಮಣ್ಣು ಸಿಗುತ್ತದೆ.


ಇತ್ತೀಚೆಗೆ  ಹೀಗೆ ಇಟ್ಟ ಟಬ್ ಮುಚ್ಚಳವನ್ನು ತೆಗೆದಾಗ ಪುಟಾಣಿ ಅಳಿಲು ಮರಿಯೊಂದು ಟಣ್ಣೆಂದು ಜಿಗಿದು ಓಡಿಹೋಯ್ತು. ಟಬ್ ನಲ್ಲಿ ನೋಡಿದರೆ ಗೋಣಿನಾರಿನ  ಬೆಚ್ಚನೆಯ ಗೂಡು ಮಾಡಿ ಮರಿಯನ್ನು ಸಾಕಿದ್ದಾಳೆ ಈ ಅಳಿಲುರಾಣಿ !





ಮುಚ್ಚಳದ ಚಿಕ್ಕ ಜಾಗದಲ್ಲೇ ಒಳನುಗ್ಗುವುದು ಹೊರಬರುವು ಎಲ್ಲವೂ . ಅದೂ ಅಲ್ಲೇ ಓಡಾಡುವ ನಮಗಾರಿಗೂ ಸ್ವಲ್ಪವೂ ಗೊತ್ತಾಗದಂತೆ!

  ಹೇಗಿದೆ ಈ ಅಳಿಲು ರಾಣಿಯ ತಾಯ್ತನ !

ಈ ಅಳಿಲುಗಳ ಬಗ್ಗೆ ಹೆಚ್ಚಿನ ಮಾಹಿತಿ ನನ್ನ ಹಳೆಯ    ಚೂಟಿ ಅಳಿಲು ಲೇಖನದಲ್ಲಿದೆ.

22 Oct 2013

ಟೆಂಟ್ ಜೇಡರಬಲೆ

ಅದು ಅಕ್ಕ ಬೆಳೆಸಿದ ಪುಟ್ಟ ಕೈತೋಟ . ಅಲ್ಲಿ ಇಷ್ಟೇ ಜಾಗದಲ್ಲಿ ಪುದಿನಾ, ಟೊಮೊಟೊ , ಬಸಳೆ , ಸೂಜಿಮೆಣಸು , ಹರಿವೆಸೊಪ್ಪು , ಬೆಂಡೆ ಮೊದಲಾದ ತರಕಾರಿ ಗಿಡಗಳೂ , ದಾಸವಾಳ , ಗುಲಾಬಿ , ಸೇವಂತಿಗೆಯಂತಹ ಹೂವಿನ ಗಿಡಗಳೂ ಇವೆ. ಅಲ್ಲೇ ನನಗೆ ಈ ಸುಂದರ ಬಲೆ ಕಾಣಿಸಿದ್ದು.



ದಾಸವಾಳ ಗಿಡದ ಎರಡು ಕೊಂಬೆಗಳ  ನಡುವೆ ಈ  ಜೇಡರ ಬಲೆ ಇತ್ತು. ಮೊದಲೆಲ್ಲ ಜೇಡರಬಲೆಯೆನ್ನೇ ನೋಡಿರಲಿಲ್ಲವೆಂದಲ್ಲ .....ಇಂತಹ ವಿಚಿತ್ರ ಆಕಾರದ ಬಲೆಯನ್ನು ಇದುವರೆಗೂ ಗಮನಿಸಿರಲಿಲ್ಲ. ತೋಟದಲ್ಲಿಯೋ ಮನೆಯ ಮೂಲೆಯಲ್ಲಿಯೋ ಇರುವ ಬಲೆಗಳನ್ನು ನಾನೂ ಗಮನಿಸಿದ್ದೇನೆ . ಅವೆಲ್ಲ ವೃತ್ತಾಕಾರವಾಗಿಯೋ ಅಥವಾ ನಿರ್ದಿಷ್ಟ ಆಕಾರವಿಲ್ಲದ ಎಳೆಗಳ ಗುಂಪಂತೆಯೋ ಇರುವ ಬಲೆಗಳು. ಆದರಿದು ಬೇರೆಯದೇ ರೀತಿ. ದೊಡ್ಡದಾಗಿ ಹರಡಿಕೊಂಡಿರುವ ಬಲೆ , ಕೆಳಭಾಗದಲ್ಲಿ  ಟೆಂಟ್  ಕಟ್ಟಿದಂತಿರುವ ಆಕಾರ . ಆ ಟೆಂಟ್ ಆಕಾರದ ಬಲೆಯಲ್ಲಿ ಎಳೆಗಳು ಅದೆಷ್ಟು ಶಿಸ್ತಾಗಿ ಜೋಡಿಸಲ್ಪಟ್ಟಿವೆಯೆಂದರೆ ಸೊಳ್ಳೆಪರದೆಯೊಂದನ್ನು ಕಟ್ಟಿದಂತೆ ಕಾಣುತ್ತಿತ್ತು .ಬಲೆಯ ಮಧ್ಯದಲ್ಲಿ  ಒಂದರ ಕೆಳಗೊಂದರಂತೆ ಜೋಡಿಸಿಟ್ಟಂತಿರುವ ಮೊಟ್ಟೆಯಂತಹ ಆಕಾರದ ವಸ್ತು. ಜೇಡ ಆ  ಟೆಂಟ್ ಆಕಾರದ ಬಲೆಯಲ್ಲಿ  ಕುಳಿತಿತ್ತು. ಕಪ್ಪು ಬಿಳಿ ತಿಳಿಹಸಿರು ಬಣ್ಣಗಳ ಚಿಕ್ಕ ಗಾತ್ರದ ಜೇಡವದು.




ಇವು Cyrtophora ಎಂಬ ಪ್ರಜಾತಿಗೆ ಸೇರಿದ ಜೇಡಗಳು .   ಹೆಚ್ಚಾಗಿ ಗಿಡಮರಗಳಿರುವಲ್ಲಿ ಕಂಡುಬರುತ್ತದೆ. ಇವು ನಿರ್ಮಿಸುವ ಈ ವಿಶಿಷ್ಟ ಬಲೆ ಉಳಿದ ಜೇಡಗಳ ಬಲೆಯಂತೆ ಅಂಟುವ ಗುಣ ಹೊಂದಿರುವುದಿಲ್ಲವಂತೆ . ಬಲೆಯ ಮಧ್ಯದಲ್ಲಿ ತನ್ನ ಮೊಟ್ಟೆಗಳ ಕೋಶಗಳನ್ನು ಇಟ್ಟು ರಕ್ಷಿಸುತ್ತವೆ.   ಒಣಗಿದ ಎಲೆ , ಹೂವು ಇತ್ಯಾದಿ ಸಸ್ಯ ಕಸ ಬಲೆಯ ಮೇಲೆ ಬಿದ್ದರೆ ಉಳಿದ ಜೇಡಗಳಂತೆ ಅದನ್ನು ತೆಗೆದೆಸೆದು ಬಲೆಯನ್ನು ಸ್ವಚ್ಛಗೊಳಿಸಿಕೊಳ್ಳುವ ಗೋಜಿಗೆ ಹೋಗದೆ ಅದನ್ನು ಉಳಿಸಿಕೊಂಡು ಅದರ ಮರೆಯನ್ನೆ ತನ್ನ ಅಡಗುತಾಣವನ್ನಾಗಿ ಮಾಡಿಕೊಳ್ಳಬಲ್ಲ ಜಾಣ ಜೇಡಗಳಿವು !


3 Oct 2012

ನೀರಿನ ಮೇಲೆ ನಡೆಯುವ ಕೀಟ

Gerridae

 ಕೀಟಪ್ರಪಂಚವೊಂದು ಅದ್ಭುತಗಳ ಲೋಕ. ಭೂಗ್ರಹದಲ್ಲಿರುವ ಜೀವಿಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ಕೀಟಗಳೇ. ಬಿಸಿ ನೀರ ಬುಗ್ಗೆಯಿಂದ ಹಿಡಿದು , ಶೀತಪ್ರದೇಶದವರೆಗೆ ನೀರಿನಾಳದಿಂದ ಹಿಡಿದು ವಾಯುಮಂಡಲದವರೆಗೆ ಎಲ್ಲ ವಾತಾವರಣದಲ್ಲಿ ವಾಸಿಸಬಲ್ಲ ಕೀಟಗಳಿವೆ. ತಾನಿರುವ ಸ್ಥಳಗಳಿಗೆ ಅಗತ್ಯವಾದ ಮಾರ್ಪಾಡುಗಳಿರುವುದರಿಂದಲೇ ಕೀಟಗಳು ಭೂಮಿಯ ಯಶಸ್ವೀ ಜೀವಿಗಳೆನ್ನಿಸಿವೆ.
ನೀರಿನ ಒಳಗೆ ಕೀಟಗಳೂ ಸೇರಿದಂತೆ ಅನೇಕ ಪ್ರಾಣಿಗಳು ವಾಸಿಸುತ್ತವೆ. ಆದರೆ ಇದೊಂದು ಜಾತಿಯ ಕೀಟ (Gerridae) ನದಿ , ಕೆರೆ, ಹಳ್ಳ ಕೊಳ್ಳಗಳ ನೀರಿನ ಮೇಲ್ಮೈ ಮೇಲೆ ವಾಸಿಸುತ್ತದೆ .ವಿಸ್ಮಯದ ಸಂಗತಿಯೆಂದರೆ ಈ ಕೀಟ ನೀರಿನ ಮೇಲೆ ನಡೆಯತ್ತದೆ , ಓಡುತ್ತದೆ.  ತನ್ನ ವಿಶಿಷ್ಠವಾದ ದೇಹರಚನೆಯಿಂದ ಇದು  ನೀರಿನಲ್ಲಿ ಮುಳುಗುವುದಿಲ್ಲ.ನಿಂತ ನೀರಿನಲ್ಲಿ , ಹರಿಯುವ ನೀರಿನಲ್ಲಿ ಇದು ವಾಸಿಸಬಲ್ಲದು. ಹರಿಯುವ ನೀರಿನ ಪ್ರವಾಹಕ್ಕೆ ಒಮ್ಮೆ ನೀರೊಳಗೆ ಸೆಳೆಯಲ್ಪಟ್ಟರೂ ಕ್ಷಣಾರ್ಧದಲ್ಲಿ ಮೇಲೆ ಬರಬಲ್ಲವು.

ತೆಳ್ಳನೆಯ ದೇಹ , ಉದ್ದವಾದ ಮೂರು ಜೊತೆ ಕಾಲುಗಳು , ಕಾಲುಗಳಲ್ಲಿ ಬರಿಗಣ್ಣಿಗೆ ಕಾಣಿಸದಷ್ಟು ಚಿಕ್ಕ ಚಿಕ್ಕ ಅಸಂಖ್ಯಾತ ಕೂದಲುಗಳು , ಎರಡು ಜೊತೆ ಮೀಸೆಗಳು ಇದು ಈ ಕೀಟದ ದೇಹರಚನೆ.
ದೇಹದ ಭಾರ ಉದ್ದನೆಯ ಕಾಲುಗಳ ಮೂಲಕ ಹೆಚ್ಚು ಭಾಗದಲ್ಲಿ ಹರಡಿಕೊಳ್ಳುತ್ತದೆ. ಕಾಲುಗಳಲ್ಲಿರುವ ಕೂದಲುಗಳು ನೀರನ್ನು ವಿಕರ್ಷಿಸಿ , ದೇಹಕ್ಕೆ ನೀರು ತಾಗದಂತೆ ನೋಡಿಕೊಳ್ಳುತ್ತವೆ. ಆ ಕೂದಲುಗಳ ಮಧ್ಯೆ ಇರುವ ಜಾಗದಲ್ಲಿ ಗಾಳಿ ಗುಳ್ಳೆಗಳು ತುಂಬಿಕೊಂಡು ಕೀಟ ತೇಲಲು ಸಹಾಯ ಮಾಡುತ್ತದೆ. ಇವೆಲ್ಲ ಮಾರ್ಪಾಡಿನಿಂದಾಗಿ ಇದು ನೀರಿನ ಮೇಲೆ ನಡೆದರೂ ನೀರಿನ ಮೇಲ್ಮೈ (surface tension ) ಒತ್ತಡ ಏರುಪೇರಾಗದೆ  ಹಾಗೇ ಉಳಿಯುತ್ತದೆ. ಆದ್ದರಿಂದಲೇ ಇದು ನೀರಿನಲ್ಲಿ ಮುಳುಗದೆ ನಡೆಯಲು ಸಾಧ್ಯವಾಗುತ್ತದೆ.
ನೀರಿನಲ್ಲಿರುವ , ಅಥವಾ ನೀರಿಗೆ ಬೀಳುವ ಚಿಕ್ಕಪುಟ್ಟ ಕೀಟಗಳು ಇದರ ಆಹಾರ. ಇರುವೆಯಂತಹ ಚಿಕ್ಕ ಕೀಟಗಳು ನೀರಿಗೆ ಬಿದ್ದಾಗ ಉಂಟಾಗುವ ಅಲೆಗಳನ್ನು ಗ್ರಹಿಸಿ ಅದಿರುವ ದಿಕ್ಕು ಗಾತ್ರಗಳನ್ನು ತಿಳಿದಿಕೊಳ್ಳಬಲ್ಲ ಸಾಮರ್ಥ್ಯ ಇದರ  ಮುಂಗಾಲುಗಳಿಗಿದೆ.  ಕ್ಷಣದಲ್ಲಿ ಆಹಾರಕೀಟದ ಬಳಿ ತಲುಪಿ ಅದರ ಸಾರ ಹೀರುತ್ತದೆ . ಇದಲ್ಲದೆ ತನ್ನದೇ ಜಾತಿಯ ಮರಿಕೀಟಗಳನ್ನು ತಿಂದುಬಿಡುವ ಸ್ವಜಾತಿಭಕ್ಷಕ ಕೂಡ.
ಗಂಡು ಕೀಟ ನೀರಿನಲ್ಲಿ ಅಲೆಗಳ ಮೂಲಕ   ಲೈಂಗಿಕ ಸಂಜ್ಞೆಗಳನ್ನು ಕೊಟ್ಟು ಹೆಣ್ಣು ಕೀಟವನ್ನು ಕೂಡುತ್ತದೆ. ನೀರಿನಲ್ಲಿರುವ ಗಿಡ , ಕಲ್ಲುಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ

ಈ ಕೀಟಗಳು ತನ್ನ ದೇಹವನ್ನು ನೀರಿನಿಂದ ಮೇಲೆತ್ತಿ ಹಿಡಿದು ಕಾಲುಗಳ ಸಹಾಯದಿಂದ ನೀರಿನ ಮೇಲೆ ತೇಲುವುದನ್ನು ನೋಡಿದಾಗ ಪ್ರಕೃತಿಯ ವೈಚಿತ್ರ್ಯಗಳಿಗೆ ತಲೆಬಾಗದಿರಲಾಗುವುದಿಲ್ಲ .

6 Sept 2012

ಇರುವೆ ಇರುವೆ

ಊರಿಗೆ ಹೋದಾಗ ಬೆಳಗಿನ ಎಳೆಬಿಸಿಲಿನಲ್ಲಿ ಮನೆಯೆದುರಿನ ಅಂಗಳದಲ್ಲೋ, ಹಿತ್ತಲತುದಿಯಲ್ಲೋ ಸುಮ್ಮನೆ ಕುಳಿತುಕೊಳ್ಳುವುದು ನನ್ನ ಅಭ್ಯಾಸ.  ಆ ದಿನದ ತಮ್ಮ ಆಹಾರ ಸಂಗ್ರಹಣೆಗಾಗಿ ಶಿಸ್ತಿನ ಸಿಪಾಯಿಗಳಂತೆ ಹೊರಡುವ ಇರುವೆಗಳು, ಅಮ್ಮ ಬಿಸಿಲಲ್ಲಿ ಒಣಗಿಸಲೆಂದು ಇಟ್ಟಿರುವ ಬೇಳೆಕಾಳುಗಳನ್ನು ತಿನ್ನಲು ತನ್ನ ಸಂಗಾತಿಗಳನ್ನೂ ಕರೆಯುತ್ತಾ ಬರುವ ಕಾಗೆ, ಚಂದದ ಬಲೆ ನೇಯುವುದರಲ್ಲಿ ನಿರತವಾಗಿರುವ ಜೇಡ, ರಾತ್ರಿಯಿಡೀ ಮನೆಕಾಯ್ದ ವೀರನಂತೆ ಈಗ ಭಯಂಕರ ನಿದ್ದೆಯಲ್ಲಿರುವ ನಾಯಿ , ಆ ನಾಯಿಯ ಕಡೆಯೆ ಕಳ್ಳ ದೃಷ್ಟಿಯಲ್ಲಿ ನೋಡುತ್ತಾ ಅಡಿಗೆಮನೆಯಲ್ಲಿ ಅಮ್ಮ ಇಟ್ಟಿರಬಹುದಾದ ಹಾಲನ್ನು ನೆನೆದು ಒಳಗೋಡುವ ಬೆಕ್ಕು , ಆ ದಿನದ ತಮ್ಮ ಕಾಯಕ ಪ್ರಾರಂಭಿಸಿರುವ ಇನ್ನೆಷ್ಟೋ ಹೆಸರು ಗೊತ್ತಿಲ್ಲದ ಕ್ರಿಮಿ ಕೀಟಗಳನ್ನು ಗಮನಿಸುತ್ತಾ ದಿವ್ಯಮೌನದಲ್ಲಿ ಕುಳಿತರೆ.....ಆಹಾ!! ಆ ಸ್ವರ್ಗವೆ ಧರೆಗಿಳಿದಂತೆ ನನ್ನ ಪಾಲಿಗೆ.

ಹೀಗೆ ಒಂದು ದಿನ ಕೊಟ್ಟಿಗೆಯ ಸೋಗೆ ಮಾಡಿನ ತುದಿಯಲ್ಲಿದ್ದ   ಕಣಜದ  ಗೂಡನ್ನೇ ಗಮನಿಸುತ್ತಾ ನಿಂತಿದ್ದೆ.  ಅಷ್ಟಾಕಾರದ ಪುಟ್ಟ ಕೋಣೆಗಳಲ್ಲಿ ಪ್ರತೀ ಕೋಣೆಗೊಂದರಂತೆ ಬಿಳಿಯ ಬಣ್ಣದ ಮೊಟ್ಟೆಗಳಿದ್ದವು. ಒಂದು ನಾಲ್ಕಾರು ಕಣಜಗಳು  ಅಲ್ಲಿ ಏನೋ ಕೆಲಸದಲ್ಲಿ ನಿರತವಾಗಿದ್ದವು. ಅಷ್ಟರಲ್ಲಿ ಒಂದು ಕಣಜ ತನ್ನ ಮುಂದಿನ ಎರಡು ಕಾಲ್ಗಳಲ್ಲಿ ಒಂದು ಮೊಟ್ಟೆಯನ್ನು ಎತ್ತಿಕೊಂಡು ಗೂಡಿನಿಂದ ಹೊರ ಹಾರಿತು. ಅರೆ ಇದೇನು ಮಾಡ್ತಿದೆ ಅಂತ ನೋಡುತ್ತಿದ್ದಂತೆಯೆ ಗೂಡಿನಿಂದ ಮಾರು ದೂರಕ್ಕೆ ಹಾರಿದ ಅದು ಅಲ್ಲಿ ಮೊಟ್ಟೆಯನ್ನು ನೆಲಕ್ಕೆ ಬೀಳಿಸಿ ಎಲ್ಲಿಗೋ ಹಾರಿಹೋಯಿತು.
ಛೆ ! ಕಾಯಬೇಕಾದ ತಾಯಿಯೆ ಈ ಮೊಟ್ಟೆಯನ್ನು ತ್ಯಜಿಸಲು ಕಾರಣವೇನಿರಬಹುದು?ಬಹುಶಃ ಆ ಮೊಟ್ಟೆ ದೋಷಪೂರಿತವಾಗಿದ್ದಿರಬೇಕು. ಎಂದು ಯೋಚಿಸುತ್ತಿದ್ದಂತೆಯೆ ಅಲ್ಲಿ ಪ್ರಕೃತಿಯ ನಾಟಕದ ಇನ್ನೊಂದು ದೃಶ್ಯದ ಅನಾವರಣವಾಗಿತ್ತು.

ಆ ಮೊಟ್ಟೆ ಬಿದ್ದ ಜಾಗದ ಬಳಿ ಅತೀ ಚಿಕ್ಕ ಇರುವೆಯೊಂದು ಅಡ್ಡಾದಿಡ್ಡಿಯಾಗಿ ಅಲೆಯುತ್ತಿತ್ತು. ಮೊಟ್ಟೆ ಅಲ್ಲಿ ಬೀಳುತ್ತಿದ್ದಂತೆಯೆ ಅದರ ಹತ್ತಿರ ಬಂದ ಆ ಇರುವೆ ತನ್ನೆಲ್ಲ ಬಲ ಪ್ರಯೋಗಿಸಿ  ಮೊಟ್ಟೆಯನ್ನು ಎಳೆಯಲು ಪ್ರಯತ್ನಿಸಿತು. ಆದರೆ ಸಾಕಷ್ಟು ದೊಡ್ಡದಾಗಿದ್ದ ಮೊಟ್ಟೆಯನ್ನು ಎಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ.

 ಸ್ವಲ್ಪ ಹಿಂದೆ ಸರಿದ ಇರುವೆ ಹಿಂತಿರುಗಿ ಹೊರಟಿತು. ಅಲ್ಲಿಂದ ಸುಮಾರು ಒಂದು ಆಡಿಗಳಷ್ಟು ದೂರದಲ್ಲಿ ನೆಲದಲ್ಲಿದ್ದ ಬಿರುಕೊಂದರ ಒಳಗೆ ಮಾಯವಾಯಿತು. ಅದು ತನ್ನ ಸಂಗಾತಿಗಳಿಗೆ ಇಲ್ಲಿ ಆಹಾರ ಇರುವ ಬಗ್ಗೆ ಸಂದೇಶ ನೀಡಲು ಹೋಗಿದೆ ಎಂದು ಯೋಚಿಸಿದ ನಾನು ಆ ಬಿರುಕಿಂದ ಒಂದು ಪುಟ್ಟ ಇರುವೆ ಸೈನ್ಯ ಹೊರಬರುವುದನ್ನು ನಿರೀಕ್ಷಿಸುತ್ತ ನೋಡುತ್ತಿದ್ದೆ.

ಆದರೆ ಹಾಗೇನೂ ಆಗಲಿಲ್ಲ ಬದಲಾಗಿ ಅಲ್ಲಿಂದ ಮೊದಲಿನ ಇರುವೆಗಿಂತ ಸ್ವಲ್ಪ  ದಪ್ಪವಾಗಿದ್ದ ಇರುವೆಯೊಂದು ಹೊರಬಂದಿತು. ಅದು ಮತ್ತೆ ಅಲ್ಲಿ ಇಲ್ಲಿ ನಿರುಕಿಸುತ್ತಾ ಮೊಟ್ಟೆಯ ಬಳಿಗೆ ಬಂದಿತು . ಮೊಟ್ಟೆಯ ಹತ್ತಿರ ಬರುತ್ತಿದ್ದಂತೆಯೆ ಆ ದಪ್ಪನಾದ ಇರುವೆ ಮೊದಲಿದ್ದ ಇರುವೆಯ ಸೈಜಿನ ಎರಡು ಇರುವೆಗಳಾಯಿತು!! ಅದರಲ್ಲಿ ಒಂದು ಇರುವೆ ಮೊಟ್ಟೆಯನ್ನು ಎಳೆಯಲು ಪ್ರಯತ್ನಿಸತೊಡಗಿದರೆ ಇನ್ನೊಂದು ಇರುವೆ ಮತ್ತೆ ಗೂಡಿನೆಡೆಗೆ ವಾಪಾಸಾಯಿತು.

ನೋಡುತ್ತಿದ್ದಂತೆಯೆ ಮತ್ತೆ ಗೂಡಿನಿಂದ ದಪ್ಪ ಇರುವೆಯೊಂದು ಹೊರಬಂತು. ಜಾದೂ ಶೋ ನೋಡುವಂತೆ ಆಶ್ಚರ್ಯದಿಂದ  ಬಾಯಿ ತೆರೆದು ಕುಳಿತಿದ್ದ  ನನ್ನ ಮೆದುಳು ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಕೈಲಿದ್ದ ಕ್ಯಾಮರದಿಂದ ಜೂಮ್ ಮಾಡಿ ಅ ದಪ್ಪ ಇರುವೆಯನ್ನು ನೋಡಿದೆ. ಅದು ಒಂದೇ ಇರುವೆಯಾಗಿರಲಿಲ್ಲ. ಒಂದರ ಬೆನ್ನ ಮೇಲೆ ಇನ್ನೊಂದರಂತೆ ಎರಡು ಇರುವೆಗಳಿದ್ದವು!! ಮತ್ತೆ ಮೊದಲಿನಂತೆಯೆ ನಡೆಯಿತು. ಮೊಟ್ಟೆಯ ಹತ್ತಿರ ಆ ಇನ್ನೊಂದು ಇರುವೆಯನ್ನು ತಲುಪಿಸಿದ ಮೊದಲಿನ ಇರುವೆ ಪುನಃ ಗೂಡಿಗೆ ಹೊರಟಿತ್ತು!!

ಹೀಗೆಯೆ ಸುಮಾರು ಹತ್ತು  ಸಂಗಾತಿಗಳನ್ನು ಬೆನ್ನ ಮೇಲೆ ಹೊತ್ತು ತಂದ  ಆ ಪುಟ್ಟ ಇರುವೆ ಸ್ವಲ್ಪವೂ ಆಯಾಸಗೊಳ್ಳದೆ ತನ್ನ ಕೆಲಸ ಮುಂದುವರೆಸಿತ್ತು. ಇತ್ತ ಆ ಹತ್ತು ಇರುವೆಗಳು ಒಟ್ಟುಗೂಡಿ  ಮೊಟ್ಟೆಯನ್ನು ನಿಧಾವಾಗಿ ಗೂಡಿನತ್ತ ಎಳೆಯಲು ಪ್ರಾರಂಭಿಸಿದವು. ಸುಮಾರು ಅರ್ಧಘಂಟೆಯ ಸಮಯದಲ್ಲಿ ಅನೇಕ ಇರುವೆಗಳು ಗುಂಪು ಗೂಡಿ ಮೊಟ್ಟೆಯನ್ನು ತಮ್ಮ ಗೂಡಿನೊಳಕ್ಕೆ ಎಳೆದೊಯ್ದವು. ಆ ಚಿಕ್ಕ ಇರುವೆಗಳ ಅಷ್ಟೂ ಗುಂಪನ್ನು ಮೊದಲು ಮೊಟ್ಟೆಯನ್ನು ಗಮನಿಸಿದ ಇರುವೆಯೇ ಬೆನ್ನ ಮೇಲೆ ಹೊತ್ತು ತಂದಿತ್ತು !!

ಇರುವೆಗಳು ಸಾಮಾನ್ಯವಾಗಿ ರಾಸಾಯನಿಕ ಸಂಪರ್ಕದಿಂದ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ಆಹಾರ ಹುಡುಕುತ್ತಾ ಸಾಗುವ ಇರುವೆಯೊಂದು , ಸೂಕ್ತವಾದ ಆಹಾರ ದೊರಕಿದ ಕೂಡಲೇ ಅದನ್ನು ಗೂಡಿಗೆ ಸಾಗಿಸಲು ಪ್ರಯತ್ನಿಸುತ್ತದೆ . ಆಹಾರದ ಪ್ರಮಾಣ ಹೆಚ್ಚಿದ್ದು ತನ್ನಿಂದ ಅಷ್ಟನ್ನೂ ಸಾಗಿಸುವುದು ಅಸಾದ್ಯ ಎನ್ನಿಸಿದಾಗ ತನ್ನ ಗೂಡಿನಲ್ಲಿರುವ ಸಂಗಾತಿಗಳನ್ನು  ಕರೆಯಲು ಹೊರಡುತ್ತದೆ.   ಆಹಾರದ ವಾಸನೆ ಮತ್ತು ಅದರಿಂದ ಸ್ರವಿಸಲ್ಪಡುವ ಫೇರಾಮೋನ್ , ಮತ್ತು ಇರುವೆಯ ಮೀಸೆಗಳನ್ನು ತಾಗಿಸಿ ನೀಡುವ ಸಂದೇಶಗಳಿಂದ   ಗೂಡಿನಲ್ಲಿಯ ಉಳಿದ ಸಂಗಾತಿಗಳು ಆಹಾರದ ಇರುವಿಕೆಯ ಸ್ಥಳ ಅರಿಯುತ್ತವೆ. ನಂತರ ಅನೇಕ ಇರುವೆಗಳು ಸೇರಿ ಆಹಾರವನ್ನು ಗೂಡಿಗೆ ಸಾಗಿಸಿ ಮರಿಗಳಿಗಾಗಿ ಸಂಗ್ರಹಿಸುತ್ತವೆ.

ಆದರೆ  ಇಲ್ಲಿ ಅವುಗಳ ನಡುವಿನ ಈ ರೀತಿಯ ಸಂಪರ್ಕ ವ್ಯವಸ್ಥೆ ನೋಡಿ ನಿಜಕ್ಕೂ ಮೂಕಳಾಗಿದ್ದೆ.  ಕೆಲವು  ಕೀಟಭಕ್ಷಕ ಇರುವೆಗಳಲ್ಲಿ ಗುಂಪುಗೂಡಿ ಆಹಾರ ಸಂಗ್ರಸುವ ಅವಶ್ಯಕತೆ ಇಲ್ಲವಾದ್ದರಿಂದ ಉಳಿದ ಇರುವೆಗಳಂತೆ ಫೆರಾಮೋನ್ ಕಮ್ಯುನಿಕೇಷನ್ ಇರುವುದಿಲ್ಲ . ಬಹುಶಃ ಆ ರೀತಿಯ ಸಂಪರ್ಕ ಸಾಧ್ಯವಾಗದೆ ಈ ಪುಟ್ಟ ಇರುವೆ ತನ್ನ ಸಂಗಾತಿಗಳನ್ನು ಹೊತ್ತು ತಂದು ಆಹಾರ ಸಂಗ್ರಹಣೆಗೆ ಮುಂದಾಗಿತ್ತು. ಸಾಮುದಾಯಿಕ ಚಿಂತನೆಗೆ ಅತ್ಯುತ್ಕೃಷ್ಟ ಉದಾಹರಣೆಯಾಗಿ  ಈ ಇರುವೆಗಳು ನಿಲ್ಲುತ್ತದೆ  ಅಲ್ಲವೆ?

11 Jan 2012

ಸಸ್ಯಲೋಕದ ಬಿನ್ನಾಣಗಿತ್ತಿಯರು

Heliconia

 mango ginger

 Mussaenda 


Euphorbia milii
Justicia
Lollipop Plant

 Anthurium 
poinsettia 




 wild Mussaenda  
ಈ ಎಲ್ಲ ಬಣ್ಣ ಬಣ್ಣದ ಹೂಗಳನ್ನು ನೋಡಿದಿರಲ್ಲ  :) ಇವೆಲ್ಲ ನಿಜಕ್ಕೂ ಹೂವುಗಳೇ?  ಅಲ್ಲ ! ಇವುಗಳಲ್ಲಿ ನಿಜವಾದ ಹೂವುಗಳು ತುಂಬಾ ಚಿಕ್ಕದಾಗಿದೆ . ಆಕರ್ಷಕವಾದ ಬಣ್ಣದಲ್ಲಿ  ಹೂವಿನ ದಳಗಳಂತೆ ಕಾಣುವ ರಚನೆಗಳು ' bract ' ಗಳು. ವೈಜ್ಞಾನಿಕವಾಗಿ ಈ  bract ಗಳು ಹೂವಿನ ಭಾಗಗಳಲ್ಲ . ಆದರೆ ಹೂವಿನ ದಳಗಳು ಏನೇನು ಕೆಲಸ ಮಾಡುತ್ತವೋ ಅದೆಲ್ಲವನ್ನು ಇವು ಮಾಡುತ್ತವೆ. ಅಂದರೆ ತಮ್ಮ ಮನಸೆಳೆವ ಬಣ್ಣಗಳಿಂದ ಕೀಟಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಕರಿಸುವುದು , ಹೂವಿನ ಕೋಮಲ ಭಾಗಗಳನ್ನು ರಕ್ಷಿಸುವುದು , ಕಿಟಾಹಾರಿ ಸಸ್ಯಗಳಲ್ಲಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ಹಿಡಿಯುವುದು , ಮುಂತಾದ ಕಾರ್ಯ ಇವುಗಳದ್ದು.

ಸಸ್ಯಗಳಲ್ಲಿ  ಹೂ ಬಿಡುವ  ಸಮಯಕ್ಕೆ  ಇವುಗಳ ಉದಯವಾಗುತ್ತದೆ.  bract ಗಳು  ಹೂವಿನ ಬುಡದಲ್ಲಿ ಇರಬಹುದು , ಅಥವಾ ಹೂ ಹೊಂಚಲಿನ ಬುಡದಲ್ಲಿ , ಪ್ರತಿ ಹೂಗಳ ಮಧ್ಯದಲ್ಲಿ  ಇರಬಹುದು

ವೈವಿಧ್ಯಮಯ ರಚನೆ ಇವುಗಳದು  . ಎಲೆಗಳಂತೆ  , ಹೂವಿನಂತೆ , ಹೂವಿನ ದಳಗಳಂತೆ ,  ತೊಟ್ಟಿನಂತೆ , ತೊಗಟೆಯಂತೆ ಕಾಣುವ bract ಗಳಿವೆ .   . ಇನ್ನು ಬಣ್ಣಗಳಲ್ಲಂತೂ ವರ್ಣಿಸಲಾಗದ ವೈವಿಧ್ಯತೆ .  ಕಾಡಿನ ಮಧ್ಯದಲ್ಲೆಲ್ಲೋ ಬೆಂಕಿ ಉರಿವಂತೆ ಕಾಣುವ ಕೆಂಪು , ಕಡು ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದಂತೆ ತೋರುವ ಬಿಳಿ ,  ಮುಳುಗುತ್ತಿರುವ ಸೂರ್ಯನ ಚಿನ್ನದ ಬಣ್ಣ , ಕಡು ನೇರಳೆ , ನಸುಗುಲಾಬಿ , ಹಳದಿ ಒಹ್ ಒಂದೆ ಎರಡೇ ....ಕಣ್ಣಿಗೆ ಹಬ್ಬ.
ತಮ್ಮ  ಆಕರ್ಷಕ ಬಣ್ಣ ಸೌಂದರ್ಯದಿಂದ ಈ bract ಇರುವ ಸಸ್ಯಗಳು ಕೈತೋಟ , ಉದ್ಯಾನವನ , ಮೊದಲಾದವುಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಅಲ್ಲದೆ ಹೂವಿನಿಂದ ಮಾಡುವ ಒಳಾಂಗಣ ಅಲಂಕಾರಗಳಲ್ಲು ಇವುಗಳನ್ನು ಉಪಯೋಗಿಸುತ್ತಾರೆ. 


 


 

6 Jun 2011

ಪರಿಸರ ದಿನದ ನೆಪದಲ್ಲಿ ಹೀಗೊಂದು ಅವಲೋಕನ

ಆಕೆ ಒಬ್ಬ ಪುಟ್ಟ ಬಾಲೆ.  ಧಗಧಗಿಸುವ ತಂದೆಗಿಂತ ತುಂಬ ಭಿನ್ನವಾದ ಸ್ವಭಾವ ಅವಳದು. ಸುಂದರ ಆಕಾರ. ಬೆಳೆಯುತ್ತ ಬೆಳೆಯುತ್ತ ಇನ್ನಷ್ಟು ಸುಂದರಿಯಾದಳು . ಸಾಗರ , ಪವನ ಅವಳ ಅಂದವನ್ನೂ ಗುಣವನ್ನೂ ಹೆಚ್ಚಿಸಿದರು. ನವಯುವತಿಯನ್ನಾಗಿಸಿದರು. ತುಂಬ ಬುಧ್ದಿವಂತೆಯಾಗಿದ್ದ ಅವಳು ಶಿಸ್ತಿಗೂ ಹೆಸರಾದಳು.

ಹೊಸದೇನನ್ನೋ  ಸೃಷ್ಟಿಸುವ   ತಹತಹ ಅವಳಿಗೆ.  ಪವನ , ಬೆಳಕು ಮತ್ತು ಸಾಗರನ ಜೊತೆಗೂಡಿ ಪ್ರಥಮ ಕೂಸೊಂದನ್ನು   ಸೃಷ್ಟಿಸಿದಳು ಆ ಸುಂದರಿ .  ಆಕೆಗೂ ಹೊಸದು ... ಮಗುವಿನ ಬೆಳವಣಿಗೆ ಆಶಾದಾಯಕವಾಗೇನೂ ಇರಲಿಲ್ಲ.


ಆಕೆಯೇನೂ ಸುಮ್ಮನಿರುವ ಜಾತಿಯಲ್ಲ. ಇನ್ನಷ್ಟು ಉತ್ತಮ ಜೀವಿಗಳನ್ನು ಸೃಷ್ಟಿಸುವ ಹೊಣೆ ಹೊತ್ತಳು. ಒಂದಾದ ಮೇಲೊಂದರಂತೆ ಅವಳ ಪ್ರಯೋಗಗಳು ಹೊಸ ಹೊಸ ಜೀವಿಗಳ ಜನನಕ್ಕೆ ಕಾರಣವಾಯ್ತು.

ಪ್ರತೀ ಜೀವಿಗೂ ವಿಶಿಷ್ಟ ಗುಣಲಕ್ಷಣಗಳು .... ಒಂದಕ್ಕಿಂತ ಒಂದು ಭಿನ್ನ ....ಕೆಲವು ದೈತ್ಯಾಕಾರದವು, ಕೆಲವು ಕಣ್ಣಿಗೂ ಕಾಣದಷ್ಟು ಸಣ್ಣವು.... ಕೆಲವು ಅವಳ ಮೈಮೇಲೆಲ್ಲ ಸಂಚರಿಸಬಲ್ಲವು ,ಇನ್ನು ಕೆಲವು ಅವಳ ದೇಹದಲ್ಲಿ ಬೇರೂರಿ  , ಅವಳಿಂದಲೇ ಬೇಕಾದ ಸತ್ವವನ್ನು ಹೀರಿ ಬೆಳೆಯಬಲ್ಲಂಥವು...... ಸಾಗರದಾಳದಲ್ಲಿ , ಅವಳೊಡಲಲ್ಲಿ , ಆಕಾಶದ ಅವಕಾಶದಲ್ಲಿ ಬಾಳಬಲ್ಲಂತವು........ಹೀಗೆ ಅವಳ ಪ್ರಯೋಗಶಿಲತೆಗೆ ಕೊನೆಯೇ ಇಲ್ಲ.

ಆಕೆಯ ಪ್ರತೀ ಸೃಷ್ಟಿಯಲ್ಲೂ ಪರಿಪೂರ್ಣತೆಯಿತ್ತು. ತನ್ನ ಎಲ್ಲ ಮಕ್ಕಳಿಗೂ ಆಹಾರ ದೊರಕಿಸಿಕೊಂಡು ಬಾಳುವ , ತಮ್ಮ ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಲು ಬೇಕಾದ ಬುದ್ಧಿಯನ್ನಾಕೆ ನೀಡಿದ್ದಳು. ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ವಿದ್ಯೆಯನ್ನೂ ಅವಳು ದಯಪಾಲಿಸಿದ್ದಳು.
 
ಅದೇ ರೀತಿ  ತನ್ನ ಮಕ್ಕಳ ಬಗ್ಗೆ ಕುರುಡು ಪ್ರೀತಿಯನ್ನೇನೂ ಅವಳು ಇಟ್ಟುಕೊಳ್ಳಲಿಲ್ಲ. ತನಗೆ ಹೊಂದಿಕೊಂಡು ಬಾಳುವ ಸಾಮರ್ಥ್ಯ ಅವಕ್ಕಿಲ್ಲ ಎನ್ನಿಸಿದರೆ  ಅವುಗಳನ್ನು  ನಾಮಾವಶೇಷಗೊಳಿಸಲು ಆಕೆಯೇನೂ ಹಿಂಜರಿಯಲಿಲ್ಲ.
ಎಷ್ಟು ಮಮತಾಮಯಿಯೋ ಅಷ್ಟೇ ನಿಷ್ಟುರಳಾದ ತಾಯಿ ಆಕೆ .

ಎಷ್ಟೋ ಲಕ್ಷ ಲಕ್ಷ ಜೀವಿಗಳನ್ನು ಸೃಷ್ಟಿಸಿದರೂ ಅವಳಿಗೆ ತೃಪ್ತಿಯಿಲ್ಲ.....ಕೊನೆಗೊಮ್ಮೆ ಒಂದು ಅದ್ಭುತ ನಡೆಯಿತು.... ಅವಳೊಂದು ಅದ್ಭುತ ಕೂಸಿಗೆ ಜನ್ಮವಿತ್ತಿದ್ದಳು . ಅದು ದೈಹಿಕವಾಗಿ ಅವಳ ಹಿಂದಿನ ಅನೇಕ ಮಕ್ಕಳಿಗಿಂತ ದುರ್ಬಲವಾಗೇ ಇತ್ತು. ಆದರೆ ಅದರ ಬುದ್ಧಿ ಮತ್ತು ಬುದ್ಧಿಯನ್ನು ಉಪಯೋಗಿಸುವ ಕಲೆ ಅತ್ಯಂತ  ಉತ್ತಮವಾಗಿತ್ತು. ಸಹಜವಾಗೇ ಆ ಬುದ್ಧಿವಂತ ಕೂಸಿನ ಮೇಲೆ ಅವಳಿಗೆ ಪ್ರೀತಿ ಹೆಚ್ಚಿತು. ತನ್ನ ಪ್ರೀತಿಯ ಮಗುವಿನ ಆಟಪಾಠ ಅವಳಿಗೆ ಖುಷಿ ನೀಡಿತು. ಪೀಳಿಗೆಯಿಂದ ಪೀಳಿಗೆಗೆ ಆ ಕೂಸಿನ ಬೌದ್ಧಿಕ ಸಾಮರ್ಥ್ಯ ಬೆಳೆಯುವಂತೆ ಆಶೀರ್ವದಿಸಿದಳಾ ತಾಯಿ.

ತನ್ನ ಹೊಟ್ಟೆ  ಸುಲಭದಲ್ಲಿ ತುಂಬಿಸಿಕೊಳ್ಳಲು ಕಲಿತ ಆ ಮಗು  ಮೊದಮೊದಲು ತಾಯಿಯನ್ನು ದೇವರೆಂದೇ ಪೂಜಿಸುತ್ತಿತ್ತು. ಒಡಹುಟ್ಟಿದವರನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಆದರೆ ಅದರ ಬುದ್ಧಿ ವಿಕಾಸಹೊಂದಿದಂತೆಲ್ಲ ಅದರ ಗುಣಬದಲಾಗತೊಡಗಿತು.

ಕ್ರಮೇಣ  ಅದು ತನ್ನ ಬುದ್ಧಿ ಸಾಮರ್ಥ್ಯದಿಂದ ತನ್ನ ಒಡಹುಟ್ಟಿದವರನ್ನೆಲ್ಲ  ತನಗಾಗಿ ಉಪಯೋಗಿಸಿಕೊಳ್ಳತೊಡಗಿತು... ಪ್ರೀತಿಯ ಮಗುವಲ್ಲವೆ , ಎಲ್ಲಾಮಕ್ಕಳಿಗೂ ಹಿರಿಯಣ್ಣನಾಗಿರಲಿ ಎಂದುಕೊಂಡ  ತಾಯಿ ಸುಮ್ಮನಿದ್ದಳು.

ತಾಯಿಯ ಮೇಲಿನ ಗೌರವ ಕಡಿಮೆಯಾಗಿ , ಕುತೂಹಲ ಹೆಚ್ಚಾಗಿ ಅವಳ ರಹಸ್ಯವನ್ನು ಶೋಧಿಸಲು ಪ್ರಾರಂಭಿಸಿತು! ಪ್ರೀತಿಯ ಮಗುವಿಗೆ ತನ್ನ ಅನೇಕ ಗುಟ್ಟು ಬಿಟ್ಟುಕೊಟ್ಟಳು ತಾಯಿ ... ಆ ಮಗುವಾದರೋ ಪ್ರಳಯಾಂತಕನಾಯ್ತು. ಅವನ್ನೆಲ್ಲ ತನ್ನ ಸ್ವಾರ್ಥಸಾಧನೆಗೆ ಉಪಯೋಗಿಸತೊಡಗಿತು. ತನ್ನೆಲ್ಲ ಒಡಹುಟ್ಟಿದವರನ್ನು ಮೆಟ್ಟಿ ನಿಂತುತು. ತಾಯಿಯನ್ನೇ ವಶಪಡಿಸಿಕೊಳ್ಳಲು ಯತ್ನಿಸಿತು .

ತಾಯಿಯೂ ಸಂಪೂರ್ಣವಾಗಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಆ ಮಗುವಿಗೆ ಆಧೀನನಾದಳು. ಆತನ ಪುಂಡಾಟವನ್ನು ಸಹಿಸಿಸಿದಳು . ಅನೇಕವೇಳೆ ಶಿಕ್ಷಿಸಿದರು  , ಸಂಪೂರ್ಣವಾಗಿ ದಮನಗೊಳಿಸಲಿಲ್ಲ.

ಇದು ಆ ಮಗುವಿನ ಸೊಕ್ಕನ್ನು ಇನ್ನೂ ಹೆಚ್ಚಿಸಿ ಇನ್ನಷ್ಟು ದುಷ್ಟನನ್ನಾಗಿಸಿತು . ತನ್ನ ಅತೀ ಬುದ್ಧಿಯಿಂದ , ಸಂತಾನ ಹೆಚ್ಚಿಸಿಕೊಂಡು , ತನ್ನ ಅನೇಕ ಒಡಹುಟ್ಟಿದವರಿಗೆ ತಾಯಿಯೊಡಲಲ್ಲಿ ಸ್ಥಳವೇ ಇಲ್ಲದಂತೆ ಮಾಡಿ , ಅವರನ್ನು ನಾಶಪಡಿಸಿತು!!

ತಾಯಿಯ ಎಲ್ಲ ಸಹಜ ಕ್ರಿಯೆಗಳೂ ತನ್ನ ಅಣತಿಯಂತೆ ನಡೆಯಬೇಕೆಂಬ ಆಸೆ ಅದಕ್ಕೆ , ತನ್ನ ಸುಖ ಸಂತೋಷಗಳಷ್ಟೇ ಮುಖ್ಯ. ......ಅವಳೊಡಲನ್ನು ಬಗೆಯಿತು , ಜೀವಸೆಲೆಯನ್ನೇ ಬತ್ತಿಸಿತು,  ಅವಳ ಗೆಳೆಯ ಪವನನನ್ನು ಮಲಿನಗೊಳಿಸಿತು .......ಹೀಗೆ ತನ್ನೆಲ್ಲ ಚಟುವಟಿಕೆಗಳಿಂದ ತಾಯಿಯ ಆರೋಗ್ಯವನ್ನು  ಹಾಳುಗೆಡವಿದ ಮಗುವಿನ ಮೇಲೆ ತಾಯಿ ಕೋಪಗೊಂಡು ತನ್ನ ತಾಪ ಹೆಚ್ಚಿಸಿಕೊಂಡಳು.

ಅದರಿಂದಾದ ಪರಿಣಾಮಕ್ಕೆ ಈಗ ಸ್ವಲ್ಪ ಮಟ್ಟಿಗೆ ಭಯಗೊಂಡ ಮಗು ತಾನು ತಪ್ಪಿದ್ದೆಲ್ಲಿ ಎಂದು ಯೋಚಿಸತೊಡಗಿದೆ. ತಡವಾಗಿಯಾದರೂ ಅದಕ್ಕೆ ತನ್ನಮ್ಮನ ಬೆಲೆ ಅರ್ಥವಾಗುತ್ತಿದೆ.  ಅವಳಿಲ್ಲದೇ ತಾನಿಲ್ಲ ಎಂಬ ಸತ್ಯ ಅದಕ್ಕೆ ಮನವರಿಕೆಯಾದಂತಿದೆ.

ಉಳಿದಾವ ಮಕ್ಕಳಿಗಿಲ್ಲದ ಸವಲತ್ತುಗಳನ್ನು ತನಗೆ ನೀಡಿ ಮಮತಾಮಯಿಯಾಗಿ ಕಾಪಾಡಿದ ತಾಯಿಯನ್ನು ರಕ್ಷಿಸುವ ಹೊಣೆ ಆ ಮಗುವಿನದಲ್ಲವೆ? ಹಿರಿಯಣ್ಣನಾಗಿ , ತನ್ನೆಲ್ಲ ಒಡಹುಟ್ಟಿದವರನ್ನು ರಕ್ಷಿಸಿ, ಆ ಮೂಲಕ ತಾಯಿಯನ್ನು ಸಂತೋಷಪಡಿಸಬೇಕಾದ ಹೊಣೆ  ಆ ಮಗುವಿನದಲ್ಲವೇ?







1 Jul 2010

ಹೂವಿನ ಸ್ವಗತ


ನಮಸ್ಕಾರ.... ಯಾರೂಂತ ಗೊತ್ತಾಗ್ಲಿಲ್ವ .... ನಾನ್ರೀ ನಿಮ್ಮೆಲ್ಲರ ಮೆಚ್ಚಿನ ಹೂವು . ಗುಲಾಬಿ , ಮಲ್ಲಿಗೆ , ಸಂಪಿಗೆ , ಜಾಜಿ , ನಂದಿಬಟ್ಟಲು , ಜರ್ಬೆರ , ಲಿಲ್ಲಿ , ಕಮಲ ........... ಇನ್ನೂ ಅನೇಕ ಹೆಸರಿನಿಂದ ನನ್ನನ್ನು ಗುರುತಿಸುತ್ತೀರಲ್ಲವೆ . ಇನ್ನೂ ನಿಮಗೆ ಹೆಸರಿಸಲಾಗದ ಅದೆಷ್ಟೋ ವಿಧಗಳಲ್ಲಿ ನಾನಿದ್ದೇನೆ . ಕಾಡಿನ ದೈತ್ಯಾಕಾರದ ಮರಗಳಲ್ಲಿ .... ಚಿಕ್ಕ ಪುಟ್ಟ ಗಿಡಗಳಲ್ಲಿ ..... ಕಾಂಕ್ರೀಟ್ ಕಾಡಿನ ಬಾಲ್ಕನಿಯ ಪಾಟ್ ನಲ್ಲಿ ......ಮರಳುಗಾಡಿನ ಮುಳ್ಳಿನ ಗಿಡಗಳಲ್ಲಿ.....ನೀರಿನಲ್ಲಿ ..... ಎಲ್ಲೆಲ್ಲೂ ನಾನಿದ್ದೇನೆ .


ಅಬ್ಬಬ್ಬ ನೀವು ಮನುಷ್ಯರಿಗೆ ನನ್ನನ್ನು ಕಂಡರೆ ಅದೆಷ್ಟು ಇಷ್ಟ ...... ವಾಕಿಂಗ್ ನೆಪದಲ್ಲಿ ಹೊರಟು ಅಕ್ಕಪಕ್ಕದವರು ಬೆಳೆಸಿರುವ ಹೂವುಗಳನ್ನು ಕೊಯ್ದು ದೇವರ ಪೂಜೆ ಮಾಡುವ ಆ ತಾತ ....... ತನ್ನ ಅಂದ ಹೆಚ್ಚಿಸಿಕೊಳ್ಳಲು ತಾನೇ ಬೆಳೆಸಿದ ಸೇವಂತಿಗೆಯನ್ನು ಮುಡಿಗೇರಿಸುವ ಈ ಆಂಟಿ ...... ಮುನಿದ ಮಡದಿಯನ್ನು ಸಂತೈಸಲು ಆಫಿಸಿಂದ ಬರುವಾಗ ಹೂಗೊಂಚಲು ತರುವ ಆ ಅಂಕಲ್ ....... ಅಜ್ಜಿ ನನ್ನ ಜುಟ್ಟಿಗೆ ಹೂ ಮುಡಿಸು ಎನ್ನುವ ಮೊಮ್ಮಗಳಿಗಾಗಿ , ಹೂ ಮಾರುವವಳ ಬಳಿ ಚೌಕಾಶಿ ಮಾಡಿ ಹೂ ಕೊಳ್ಳುವ ಅಜ್ಜಿ ..... ರಿಸಲ್ಟ್ ದಿನ ದೇವರ ಮೇಲೆ ಎಲ್ಲಿಲ್ಲದ ಭಕ್ತಿ ಹುಟ್ಟಿ ದೇವಸ್ಥಾನದ ಬಳಿಯ ಹೂವಿನಂಗಡಿಯಲ್ಲಿ ಆತ ಹೇಳಿದಷ್ಟು ದುಡ್ದು ಕೊಟ್ಟು ಹೂ ಕೊಂಡು ದೇವರಿಗೆ ಲಂಚವಾಗಿ ನೀಡುವ ಈ ಕಿಶೋರಿ ..........ನಡುಗುವ ಹೃದಯದೊಂದಿಗೆ ಪ್ರಥಮ ಬಾರಿ ಪ್ರೇಮಪತ್ರದ ಜೊತೆ ಕೆಂಗುಲಾಬಿಯಿರಿಸಿ ತನ್ನ ಹುಡುಗಿಯ ಕಣ್ಣಿಗೆ ಬೀಳುವಂತೆ ಇಟ್ಟು ಓಡಿ ಬರುವ ಹುಡುಗ ......ಹಾಂ ....ಎಲ್ಲರಿಗೂ ನಾನು ಬೇಕು.ಇನ್ನು ನಿಮ್ಮಲ್ಲಿ ಒಂದು ವಿಚಿತ್ರ ವರ್ಗವಿದೆಯಲ್ಲ , ಅದೇನೊ ಕವಿಗಳೂಂತ ಕರೀತೀರಲ್ಲ .... ಅವರಿಗಂತೂ ನಾನು ಸ್ಫೂರ್ತಿದೇವತೆ . ಹೆಣ್ಣಿನ ಮುಖ , ಕಣ್ಣು , ಮೂಗು , ಬಾಯಿ ಎಲ್ಲವನ್ನೂ ನನಗೇ ಹೋಲಿಸಿ ಹೊಗಳುತ್ತಾರೆ ಅವರು. ಸೌಂದರ್ಯಕ್ಕೆ ಇನ್ನೊಂದು ಹೆಸರೇ ನಾನೇನೊ ಎಂಬಂತೆ .
ಇತ್ತೀಚೆಗಂತೂ ನನ್ನ ಬೇಡಿಕೆ ಎಷ್ಟು ಹೆಚ್ಚಿದೆ ಗೊತ್ತಾ? ನಿಮ್ಮ ಹುಟ್ಟು ...ಸಾವು...ಬರ್ತಡೇ ..ಮದುವೆ ...ಹಬ್ಬ ..ಹೀಗೆ ಎಲ್ಲ ಸಂದರ್ಭಗಳಲ್ಲೂ ನನ್ನಿರುವು ತುಂಬ ಮುಖ್ಯವಾಗಿಬಿಟ್ಟಿದೆ . ಅದರಲ್ಲೂ ಶ್ರೀಮಂತರ ಮನೆಗಳಲ್ಲಿ ಇಂತಹ ಸಂದರ್ಭಗಳೆಂದರೆ ನನಗೋಸ್ಕರ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ . ನನ್ನನ್ನು ಉಪಯೋಗಿಸಿಕೊಂಡು ಸಮಾರಂಭಗಳಲ್ಲಿ ಅಲಂಕಾರ ಮಾಡುವವರು ಎಷ್ಟೋ ಹಣ ಗಳಿಸುತ್ತಾರೆ . ಅನೇಕ ರೈತರೂ ಕೂಡ ತಾವು ತಿನ್ನುವ ಆಹಾರ ಬೆಳೆ ಬೆಳೆಯುವುದನ್ನು ಬಿಟ್ಟು , ನನ್ನನ್ನೇ ಬೆಳೆಸಿ ಶ್ರೀಮಂತರಾಗಿದ್ದಾರೆ . ನನ್ನದೇ ಹೆಸರಿನಲ್ಲಿ ಮೇಳಗಳನ್ನು ನೆಡೆಸುವುದು ದಂದೆಯಾಗಿಬಿಟ್ಟಿದೆ ನಿಮಗೆ .

ನನಗಿಷ್ಟೆಲ್ಲ ಬೇಡಿಕೆಯುಂಟಾಗಿರುವುದು ಸಂತೋಷವಾದರೂ ಒಮ್ಮೊಮ್ಮೆ ನನ್ನ ದುಸ್ಥಿತಿ ನೆನೆದು ದುಖಃವೂ ಆಗುತ್ತದೆ .
ಹೀಗೆಲ್ಲ ನನ್ನನ್ನು ನಿಮ್ಮನುಕೂಲಕ್ಕಾಗಿ ಬೆಳೆಸುತ್ತೀರಲ್ಲ ನನ್ನ ತಾಯಿಯಾದ ಸಸ್ಯ ಯಾವ ಉದ್ದೇಶಕ್ಕಾಗಿ ನನ್ನನ್ನು ಹಡೆಯುತ್ತಾಳೊ ..ಆ ಉದ್ದೇಶವೇ ಸಫಲವಾಗದಂತೆ ಮಾಡುವುದರಲ್ಲಿ ನೀವು ಸಿದ್ಧಹಸ್ತರು ಬಿಡಿ.


ನಾನು ನನ್ನ ಸುಂದರವಾದ ಬಣ್ಣ ರೂಪ ವಾಸನೆಗಳ ಮುಖಾಂತರ ಕೀಟ , ಹಕ್ಕಿಗಳು , ಬಾವಲಿಗಳು ಮುಂತಾದ ಪ್ರಾಣಿಗಳನ್ನಾಕರ್ಷಿಸಿ , ಅವುಗಳಿಗೆ ನನ್ನ ಸಿಹಿಯಾದ ಮಕರಂದ ನೀಡಿ ತಣಿಸಿ , ಜೊತೆಗೇ ಅವುಗಳ ಸಹಾಯದಿಂದ ನನ್ನ ಪರಾಗಸ್ಪರ್ಶ ಕ್ರಿಯೆ ನಡೆಸಿಕೊಂಡು ಫಲವತಿಯಾಗುತ್ತೆನೆ . ಆ ಮೂಲಕ ನನ್ನ ತಾಯಿ ಸಸ್ಯದ ವಂಶಾಭಿವೃದ್ಧಿ ಮಾಡುತ್ತೇನೆ .



ನೀವು ಮಾತ್ರ ನನ್ನ ಈ ಗುಣವನ್ನೇ ಮರೆತು ನಾನಿರುವುದು ನಿಮಗಾಗಿಯೇ ಎಂಬಂತೆ ನಡೆಸಿಕೊಳ್ಳುತ್ತೀರಲ್ಲ . ದುಖಃವಾಗುತ್ತದೆ . "ಹೂವಿನ ಸಾರ್ಥಕತೆ ದೇವರ ಮುಡಿಗೇರಿದಾಗ ಅಥವಾ ಸುಂದರ ಹೆಣ್ಣಿನ ಮುಡಿಗೇರಿದಾಗ " ಎಂದೆಲ್ಲ ನೀವು ಹೇಳುವಾಗ ನನಗೆ ನಗಬೇಕೋ ಅಳಬೇಕೋ ತಿಳಿಯದಾಗುತ್ತದೆ .


ನನ್ನ ಪಾಲಿಗೆ ನನ್ನ ಪರಾಗಸ್ಪರ್ಶ ನಡೆಸುವ ಜೀವಿಗಳೇ ದೇವರು . ಅವು ನನ್ನ ಮಕರಂದವನ್ನು ಹೀರಿದಾಗಲೇ ನನ್ನ ಜನ್ಮ ಸಾರ್ಥಕವಾಗಿವುದು .

ಹುಂ ... ನಿಮಗಿದೆಲ್ಲ ಎಲ್ಲಿ ಅರ್ಥವಾಗಬೇಕು ಹೇಳಿ .... ನಿಮ್ಮ ಬುದ್ಧಿಬಲದಿಂದ ಈ ಜಗತ್ತನ್ನೇ ನಿಮ್ಮ ಮುಷ್ಟಿಯಟ್ಟುಕೊಂಡು ಬೀಗುತ್ತಿದ್ದೀರಿ ನೀವು....ಧಿಕ್ಕಾರವಿರಲಿ ನಿಮ್ಮ ಜಾತಿಗೆ.

4 Feb 2010

ಕೀಟಗಳಲ್ಲಿ ಪಾಲಿಮಾರ್ಫಿಸಮ್

ಇದು ಕೊಣಜದ(wasp) ಗೂಡು.

ಟೈಲರ್ ಇರುವೆಯ ಬಗ್ಗೆ ನಾನು ಬರೆದ ಲೇಖನವನ್ನು ಮೆಚ್ಚಿ ಅನೇಕರು ಕಮೆಂಟಿಸಿದ್ದಾರೆ . ಮುರ್ತಿ ಹೊಸಬಾಳೆಯವರು ಸಾಗರದ ಕಡೆ ಇದಕ್ಕೆ ಕೊಣಜ ಎಂದೂ ಹೇಳುತ್ತಾರೆ ಎಂದಿದ್ದರು . ಆದರೆ ಅದನ್ನು ಅಲ್ಲಗೆಳೆದಿರುವ ಮನಸ್ವಿಯವರು ಕೊಣಜ ಸಗಣಿ ಮತ್ತು ಮಣ್ಣನ್ನು ಉಪಯೋಗಿಸಿ ಗೂಡು ಕಟ್ಟುವುದಾಗಿ ತಿಳಿಸಿದ್ದರು. ಇದು ನಿಜ . ಸಗಣಿ, ಮಣ್ಣು , ಮರದ ಪುಲ್ಪ್ ಜೊತೆಗೆ ಅದರ ಜೊಲ್ಲುರಸವನ್ನು ಸೇರಿಸಿ ಇದು ಗೂಡು ಕಟ್ಟುತ್ತದೆ. ಅನೇಕ ಪರಾವಲಂಬಿ ಕೀಟಗಳನ್ನು ತಿಂದು ಇದು ಜೀವಿಸುವುದರಿಂದ ರೈತರಿಗೆ ತುಂಬ ಉಪಕಾರಿ . ನೈಸರ್ಗಿಕ ಕೀಟನಾಶಕ.



ವಸಂತ್ ಅವರು ಟೈಲರ್ ಇರುವೆಯ ಗೂಡಿಗಿರುವ ವಿಶಿಷ್ಠ ವಾಸನೆಯ ಬಗ್ಗೆ ಕೇಳಿದ್ದರು. ಅನೇಕ ಜಾತಿಯ ಇರುವೆಗಳನ್ನು ಹೊಸಕಿದಾಗ ವಿಶಿಷ್ಠವಾದ ವಾಸನೆ ಹೊರಹೊಮ್ಮುತ್ತದೆ. ಇದು ಅದರಲ್ಲಿ ತಯಾರಾಗುವ ಎಚ್ಚರಿಕೆ ನೀಡುವ ರಸಾಯನಿಕಗಳಿಂದ (ಅಲರಾಂ ಫೆರಾಮೋನ್) ಬರುವ ವಾಸನೆಯಾಗಿದೆ . ಇತರ ಇರುವೆಗಳಿಗೆ ಇದರಿಂದ ಅಪಾಯದ ಸೂಚನೆ ದೊರೆಯುತ್ತದೆ.



ಇನ್ನು ಪಾಲಚಂದ್ರ ಅವರು ಇರುವೆ , ಜೇನು ಮೊದಲಾದವುಗಳಲ್ಲಿರುವ ಪಾಲಿಮಾರ್ಫಿಸಂ ಅಥವಾ ಬಹುರೂಪಗಳ ಬಗ್ಗೆ ವಿವರಣೆ ಬಯಸಿದ್ದರು . ನನಗೆ ತಿಳಿದ ಮಟ್ಟಿಗೆ ವಿವರಿಸಲು ಯತ್ನಿಸುತ್ತೇನೆ.



ಗೆದ್ದಲು , ಇರುವೆ, ಜೇನು ಮತ್ತು ಕೊಣಜ (wasp)ಗಳನ್ನು social insect ಎಂದು ಹೇಳುತ್ತಾರೆ. ಒಂದೇ ಗುಂಪಿನಲ್ಲಿ ಅಥವಾ ಗೂಡಿನಲ್ಲಿ ವಿವಿಧ ರೀತಿಯ ಕೆಲಸ ನಿರ್ವಹಿಸುವ , ದೈಹಿಕವಾಗಿಯೂ ವಿಭಿನ್ನವಾಗಿರುವ ಜೀವಿಗಳು ಒಟ್ಟಾಗಿ ಜೀವಿಸುತ್ತವೆ. ಇವುಗಳ ಒಂದು ಗುಂಪಿನ ಸದಸ್ಯರ ಸಂಖ್ಯೆ ಲಕ್ಷಕ್ಕೂ ಮೀರಿಯೂ ಇರಬಹುದು. ಅಷ್ಟೊಂದು ಸಂಖ್ಯೆಯಲ್ಲಿದ್ದರೂ ಪ್ರತಿಯೊಂದು ಸದಸ್ಯನೂ ನಿರ್ದಿಷ್ಟವಾದ, ಸಮುದಾಯದ ಹಿತಕ್ಕಾಗಿಯೆ ಕಾರ್ಯ ನಿರ್ವಹಿಸುತ್ತವೆಯಾದ್ದರಿಂದ ಇವುಗಳನ್ನು ಸೋಶಿಯಲ್ ಇನ್ಸೆಕ್ಟ್ ಎನ್ನುತ್ತಾರೆ.

ಜೀವನಚಕ್ರದಲ್ಲಿ ಮೊಟ್ಟೆ , ಲಾರ್ವ , ನಿಂಫ್ , ಅಡಲ್ಟ್ ಎಂಬ ನಾಲ್ಕು ಹಂತಗಳಿವೆ.

ಇವುಗಳ ಒಂದು ಗುಂಪಿನಲ್ಲಿ ಮುಖ್ಯವಾಗಿ ೩ ಜಾತಿಯಿರುತ್ತದೆ. ಗುಂಪಿನ ಮುಖ್ಯಸ್ಥೆ ರಾಣಿ , ಗಂಡು ಮತ್ತು ಕೆಲಸಗಾರ . ಕೆಲವೊಂದು ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಎಲ್ಲ ಸೊಶಿಯಲ್ ಇನ್ಸೆಕ್ಟ್ ಗಳಲ್ಲಿ ಇವುಗಳ ರೀತಿ ನೀತಿಗಳು ಒಂದೇ ಆಗಿವೆ.
ರಾಣಿ :
ದೈಹಿಕವಾಗಿ ಇದು ಉಳಿದ ಸದಸ್ಯರಿಗಿಂತ ದೊಡ್ಡದಿರುತ್ತದೆ.
ಇದು ಮೊಟ್ಟೆಯಿಡುವ ಕಾರ್ಖಾನೆ. ತನ್ನ ಜೀವಿತಾವಧಿಯಲ್ಲಿ ಲಕ್ಷಾಂತರ ಮೊಟ್ಟೆಯಿಡುತ್ತವೆ .
ಒಂದು ಮರಿ ರಾಣಿಯಾಗಿ ಬೆಳೆಯುವುದು ಅದಕ್ಕೆ ಕೆಲಸಗಾರರು ನೀಡುವ ವಿಶಿಷ್ಠವಾದ ಆಹಾರದಿಂದ.
ತನ್ನ ಜೀವಿತಾವಧಿಯಲ್ಲಿ ಕೇವಲ ಒಂದೇ ಬಾರಿ ಗಂಡಿನೊಂದಿಗೆ ಮಿಲನಗೊಳ್ಳುವ ರಾಣಿ ಅದರ ವೀರ್ಯವನ್ನು ತನ್ನ ದೇಹದಲ್ಲಿನ ಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡು ಮೊಟ್ಟೆಯಿಡುವಾಗ ಉಪಯೋಗಿಸುತ್ತದೆ.
ಮೊಟ್ಟೆಯಿಡುವುದು ಮತ್ತು ಕೆಲ ಹಾರ್ಮೋನುಗಳ ಮುಖಾಂತರ ಕೆಲಸಗಾರನ್ನು ನಿಯಂತ್ರಿಸುವುದು ಬಿಟ್ಟರೆ ಬೇರಾವ ಕೆಲಸವನ್ನೂ ರಾಣಿ ಮಾಡಾಲಾರದು . ಆಕೆ ಗೂಡನ್ನು ಬಿಟ್ಟು ಹೊರಬರುವುದು ಕೂಡಾ ಮಿಲನಕ್ರಿಯೆಗಾಗಿ ಮತ್ತು ಹೊಸ ಗೂಡು ಕಟ್ಟುವುದಕ್ಕಾಗಿಯಷ್ಟೆ.
ಜೇನು ಹುಳುಗಳಲ್ಲಿ ರಾಣಿಯ ಜೀವಿತಾವಧಿ ಆಕೆಯ ಮೊಟ್ಟೆಯಿಡುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಅದು ಸಂಗ್ರಹಿಸಿದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಂತೆ ಮೊಟ್ಟೆಯಿಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಆಗ ಅದನ್ನು ಉಳಿದ ಕೆಲಸಗಾರ ಹುಳುಗಳೇ ಸಾಯಿಸಲೂಬಹುದು.

ಗಂಡು :
ಒಂದು ಗುಂಪಿನಲ್ಲಿ ಕೆಲವೆ ಗಂಡು ಇರುತ್ತವೆ.
ಗುಂಪಿನ ಪರಮ ಸೋಮಾರಿ ಜೀವಿ.
ರಾಣಿಯ ಜೊತೆ ಒಂದೇ ಬಾರಿ ನಡೆಸುವ ಮಿಲನಕ್ರಿಯೆಯೆ ಇದರ ಜೀವನದ ಪರಮೋದ್ದೇಶ. ಅನೇಕ ಜಾತಿಯಲ್ಲಿ ಮಿಲದ ನಂತರ ಸತ್ತೇ ಹೋಗುತ್ತವೆ.
ಬೇರಾವುದೇ ಕೆಲಸವನ್ನೂ ಇದು ಮಾಡುವುದಿಲ್ಲ .

ಕೆಲಸಗಾರ:
ಗುಂಪಿನ ಆತ್ಯಂತ ಕ್ರಿಯಾಶೀಲ ಹೆಣ್ಣು ಜೀವಿ.
ನರ್ಸಿಂಗ್ , ಕ್ಲೀನಿಂಗ್ , ಗೂಡುಕಟ್ಟುವುದು , ರಕ್ಷಣೆ , ಆಹಾರ ಸಂಗ್ರಹಣೆ , ಮೊದಲಾದ ಎಲ್ಲ ಜವಾಬ್ದಾರಿ ಇವುಗಳದ್ದು .
ಲೈಂಗಿಕ ಸಾಮರ್ಥ್ಯವಿಲ್ಲ.
ಅದರ ಕೆಲಸಗಳಿಗೆ ಅನುಕೂಲವಾಗುವಂತೆಯೆ ಅದರ ದೇಹರಚನೆಯಿರುತ್ತದೆ.
ಅಡಲ್ಟ್ ಆಗಿ ಬೆಳೆದ ಪ್ರಥಮ ದಿನದಿಂದಲೇ ಅದರ ಕೆಲಸಗಳು ಪ್ರಾರಂಭಾವಾಗುತ್ತವೆ. ಮೊದಲ ಕೆಲ ದಿನಗಳು ಮೊಟ್ಟೆ ಮರಿಗಳನ್ನು ನೋಡಿಕೊಳ್ಳುವುದು ಅವಕ್ಕೆ ಆಹಾರ ನೀಡುವ ಕೆಲಸ ಮಾಡುತ್ತವೆ . ನಂತರ ಗೂಡಿನ ಸ್ವಚ್ಛತೆ ,ಗೂಡು ನಿರ್ಮಿಸುವುದು ಮೊದಲಾದ ಕೆಲಸ ಮಾಡುತ್ತವೆ . ಸ್ವಲ್ಪ ದಿನಗಳಾದ ಮೇಲೆ ಗೂಡಿನ ರಕ್ಷಣೆ ಮಾಡುತ್ತವೆ . ನಂತರ ಆಹಾರ ಸಂಗ್ರಹಿಸಲು ಹೊರಹೋಗುತ್ತವೆ. ಹೀಗೆ ವಯಸ್ಸಿಗೆ ತಕ್ಕಂತೆ ಕೆಲಸದ ಹಂಚಿಕೆ ನಡೆಯುತ್ತದೆ.
ಯಾವುದೋ ಕಾರಣದಿಂದ ರಾಣಿ ಇಲ್ಲವಾದರೆ ತಕ್ಷಣ ಮರಿಗೆ ರಾಯಲ್ ಫುಡ್ ನೀಡಿ ರಾಣಿಯನ್ನು ತಯಾರು ಮಾಡುತ್ತವೆ.
ವೈರಿಗಳಿಂದ ಗೂಡಿಗೆ ತೊಂದರೆಯುಂಟಾದಾಗ ತಮ್ಮನ್ನು ಬಲಿಕೊಟ್ಟಾದರೂ ಮೊಟ್ಟೆ ಮರಿಗಳನ್ನು , ರಾಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತವೆ.
ಬಹುಶಃ ಮಾನವನಿಗೆ ವಾಸಕ್ಕಾಗಿ ಮನೆ ನಿರ್ಮಿಸಿಕೊಳ್ಳುವ ಯೋಚನೆ ಬರುವುದಕ್ಕಿಂತಲೂ ಎಷ್ಟೋ ವರ್ಷ ಮೊದಲೇ ಈ ಕೀಟಗಳು ತಮಗಾಗಿ ಸುಂದರ ಗೂಡು ಕಟ್ಟಲು ಕಲಿತಿವೆ. ಗೂಡಿನ ಉಷ್ಣತೆಯನ್ನು ನಿಯಂತ್ರಿಸುವ ವಿಧಾನ ತಿಳಿದಿದೆ . ಜೇನಿನ ಗೂಡಿನಲ್ಲಿ ಕೆಲಸಗಾರ ಹುಳುಗಳು ತಮ್ಮ ರೆಕ್ಕೆ ಬೀಸುವುದರಿಂದ ಉಷ್ಣತೆಯನ್ನು ನಿಯಂತ್ರಿಸುತ್ತವೆ!!
ಸಮುದಾಯಕ್ಕಾಗಿ ಆಹಾರ ಸಂಗ್ರಹಿಸುವುದು , ಅವುಗಳನ್ನು ಕಾಯ್ದಿಡುವುದನ್ನು ಅರಿತಿವೆ. ಅನೇಕ ಇರುವೆಗಳು, ಗೆದ್ದಲುಗಳು ತಮ್ಮ ಗೂಡಿನಲ್ಲಿ ಆಹಾರಕ್ಕಾಗಿ ಶಿಲೀಂದ್ರಗಳನ್ನು ಬೆಳೆಸುತ್ತವೆ.

ಪ್ರಕೃತಿಯಲ್ಲಿ ತನ್ನ ಉಳಿವಿಗಾಗಿ ಪ್ರತಿಯೊಂದು ಜೀವಿಯು ಅನೇಕ ರೀತಿಯಲ್ಲಿ ಹೋರಾಟ ನಡೆಸುತ್ತದೆ . ಇಂತಹ ಹೋರಾಟವೇ ಬಹುಶಃ ಈ ಕೀಟಗಳ ಸಂಘಜೀವನಕ್ಕೆ ಕಾರಣವಿರಬಹುದು.

20 Jan 2010

ಟೈಲರ್ ಇರುವೆ !!

"ಅಯ್ಯಪ್ಪ ಆ ಮರ ಮತ್ರ ನಾನು ಹತ್ತದಿಲ್ಲೆ.... ಅದರ ತುಂಬ ಚಿಗಳಿ ಕೊಟ್ಟೆ ಇದ್ದು ಗೊತ್ತಾ!! " ತೋಟದ ಬಳಿ ಇಂಚರಳ ಪುಟ್ಟ ಗೆಳೆಯ ಹೇಳುತ್ತಿದ್ದ .
ಚಿಗಳಿ ಕಚ್ಚುವುದರ ಅನುಭವವಿಲ್ಲದ ಇವಳು ... "ಏ ಹೋಗೊ ಸಾಕು , ಆ ಇರುವೆಗೆ ಹೆದರ‍್ತ್ಯಲೋ .. ಸುಮ್ನೆ ಹತ್ತಿ ಪುನ್ನೇರಲ ಹಣ್ಣು ಕೊಯ್ಯಿ.." ಎಂದು ದಬಾಯಿಸುತ್ತಿದ್ದಳು.

ಅವನೇನೂ ಸುಮ್ಮನಿರುವ ಅಸಾಮಿಯೇನಲ್ಲ "ಹೆದರದು ಯಾಕೆ ತೋರಿಸ್ತಿ ತಡಿ " ಎಂದು ಇರುವೆಗಳಿದ್ದ ಎಲೆಯನ್ನು ಕಿತ್ತು ಅವಳ ಮೈಮೇಲೆಸೆದ . ಕೊಡವಿಕೊಂಡಳಾದರೂ ಉಳಿದ ಒಂದೆರಡು ಇರುವೆಗಳು ಕಚ್ಚಿದಾಗ ಮಗಳು ಅಲ್ಲೇ ಇದ್ದ ನನ್ನ ಬಳಿ ಓಡಿ ಬಂದಳು . " ಇದೆಂತಾ ಉರಿ ಅಮ್ಮಾ ಅದು ಹ್ಯಾಗೆ ಇಷ್ಟು ಉರಿಯಾಗುವ ಹಾಗೆ ಕಚ್ಚುತ್ತೆ? ....’ ಅವಳ ತನಿಖೆ ಪ್ರಾರಂಭವಾಯಿತು.


ಬೇರೆ ಇರುವೆಗಳಂತೆ ಈ ಕೆಂಜಿರುವೆ ಅಥವ ಚಿಗಳಿಗೆ ಸ್ಟಿಂಗ್ ಇರುವುದಿಲ್ಲ . ಅದು ಕಚ್ಚಿದ ಜಾಗದಲ್ಲಿ "ಫಾರ್ಮಿಕ್ ಆಸಿಡ್ " ಸ್ರವಿಸುವುದರಿಂದ ಹೆಚ್ಚಿನ ಉರಿಯಾಗುತ್ತದೆ.


ಅವಳಿಗೆ ಅಲ್ಲೇ ಬಳಿಯಲ್ಲಿದ್ದ ಆ ಇರುವೆಯ ಗೂಡನ್ನು ತೋರಿಸಿದೆ . ಅದನ್ನು ನೋಡಿ ತನ್ನ ದೊಡ್ಡ ಕಣ್ಣುಗಳನ್ನು ಇನ್ನಷ್ಟು ದೊಡ್ಡದು ಮಾಡಿಕೊಂಡು "ಈ ಚಿಕ್ಕ ಜೀವಿ ಹ್ಯಾಗೆ ಇಷ್ಟು ದೊಡ್ಡ ಗೂಡು ಕಟ್ಟುತ್ತಮ್ಮ? ನಾವಿಷ್ಟು ದೊಡ್ಡ ಇದ್ದರು ನಮಗೆ ಆಟ ಆಡಲು ಮನೆ ಕಟ್ಟೋಣವೆಂದರೆ ಬರಲಿಲ್ಲವಲ್ಲ?" ಎಂದಳು.


ಟೈಲರ್ ಅಥವಾ ವೀವರ್ ಇರುವೆ ಎಂಬ ಅನ್ವರ್ಥನಾಮವಿರುವ ಈ ಇರುವೆಗಳು ಹನ್ನೆರಡುಸಾವಿರಕ್ಕೂ ಹೆಚ್ಚಿರುವ ಇರುವೆಗಳ ಜಾತಿಯಲ್ಲೆ ಬೇರಾವ ಇರುವೆಗಳೂ ರಚಿಸದ ಅತೀ ವಿಶಿಷ್ಟವಾದ ಗೂಡನ್ನು ನಿರ್ಮಿಸುತ್ತವೆ.




ಎಲ್ಲ ಇರುವೆಗಳಂತೆಯೆ ಸಂಘಜೀವಿಗಳಾದ ಈ ಚಿಗಳಿಗಳ ಒಂದು ಗುಂಪಿನಲ್ಲಿ - ಒಂದೆರಡು ರಾಣಿ ಯರು , ಕೆಲವು ಗಂಡು ಮತ್ತು ಲಕ್ಷಗಟ್ಟಲೆ ಹಿರಿ ,ಕಿರಿಯ ಕೆಲಸಗಾರ ಇರುವೆಗಳಿರುತ್ತವೆ.
ಮೊಟ್ಟೇಯಿಡುವುದಷ್ಟೇ ರಾಣಿಯ ಕೆಲಸ.
ಗೂಡು ಕಟ್ಟುವುದು , ಆಹಾರ ತರುವುದು , ವೈರಿಗಳಿಂದ ಗೂಡನ್ನು ರಕ್ಷಿಸುವುದು ಮೊದಲಾದ ಕೆಲಸಗಳು ಹಿರಿಯ ಕೆಲಸಗಾರರದು.

ಮೊಟ್ಟೆಗಳು ,ಮರಿಗಳನ್ನು ಪೋಷಿಸುವುದು ರಾಣಿಗೆ ಆಹಾರ ನೀಡುವುದು , ಗೂಡನ್ನು ಸ್ವಚ್ಛಗೊಳಿಸುವುದು ಮೊದಲಾದ ಕೆಲಸಗಳು ಕಿರಿಯ ಕೆಲಸಗಾರ ಇರುವೆಗಳದು.

ಹೆಚ್ಚಾಗಿ ಮರ ಗಿಡಗಳ ಮೇಲೆ ವಾಸಿಸುವ ಇವುಗಳ ಆಹಾರ ಸಸ್ಯಗಳು ಮತ್ತು ಕೆಲ ಕೀಟಗಳು ಸ್ರವಿಸುವ ಸಿಹಿದ್ರವ , ಚಿಕ್ಕ ಪುಟ್ಟ ಕೀಟಗಳು ಇತ್ಯಾದಿ.

ಸಾವಿರಾರು ಇರುವೆಗಳು ಕೂಡಿ ಜೀವಂತ ಎಲೆಗಳಿಂದ ಗೂಡು ಕಟ್ಟುವ ಪರಿ ನಿಜಕ್ಕೂ ಅನನ್ಯ. ದೃಡವಾದ ಎಲೆಗಳನ್ನು ಆಯ್ದುಕೊಂಡು ಅವುಗಳನ್ನು ಸೇರಿಸಿ ಗೂಡು ಕಟ್ಟುತ್ತವೆ.

ಮೊದಲಿಗೆ ಎಲೆಯ ಅಂಚಿನುದ್ದಕ್ಕೂ ಸಾಲಾಗಿ ಸೇರುವ ಇರುವೆಗಳು ತಮ್ಮ ಶಕ್ತಿಯನ್ನು ಪ್ರಯೋಗಿಸಿ ಆ ಎಲೆಯನ್ನು ಬೇಕಾದ ಹಾಗೆ ಬಾಗಿಸುತ್ತವೆ. ಒಂದು ಇರುವೆ ಮರಿ(ಲಾರ್ವ)ಯನ್ನು ಹಿಡಿದು ಮೃದುವಾಗಿ ತಟ್ಟುತ್ತದೆ ಆಗ ಆ ಮರಿ ಸ್ರವಿಸುವ ಸಿಲ್ಕ್ ನಿಂದ ಎರಡು ಎಲೆಗಳ ಅಂಚನ್ನು ಜೋಡಿಸುತ್ತವೆ. ಹೀಗೆ ಅನೇಕ ಎಲೆಗಳನ್ನು ಬಳಸಿ ದೊಡ್ದ ಗೂಡನ್ನು ಸಹ ನಿರ್ಮಿಸಬಲ್ಲವು.

ಲಾರ್ವ್ ಸ್ರವಿಸುವ ಸಿಲ್ಕ್ ನಿಂದ ಎಲೆಗಳನ್ನು ಜೋಡಿಸಿರುವುದು
ಈ ರೀತಿಯ ಕ್ಲಿಷ್ಟ ಕಾರ್ಯವನ್ನು ಕರಾರುವಕ್ಕಾಗಿ ಸಾಂಘಿಕವಾಗಿ ನಿರ್ವಹಿಸಲು ಸಾಧ್ಯವಾಗುವುದು ಕೆಮಿಕಲ್ ಮೆಸೆಂಜರ್ ಗಳಾದ ಹಾರ್ಮೋನ್ ಗಳಿಂದ. ಇವುಗಳ ಈ ಗುಣವೀಗ ರೊಬೊಟಿಕ್ ವಿಜ್ಞಾನಿಗಳ ಗಮನ ಸೆಳೆದಿದೆ , ಇದೇ ತತ್ವವನ್ನಾಧರಿಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ರೊಬೊಟ್ ರಚಿಸುವದರಲ್ಲಿದ್ದಾರಂತೆ
"ಅಮ್ಮ ಅದೆಲ್ಲಾ ಸರಿ ಆದರೆ ಈ ಮರಕ್ಕೆ ಅದರಿಂದ ತೊಂದರೆಯಲ್ವಾ" ಮಗಳ ಪ್ರಶ್ನೆ ತಾಯಾರಿತ್ತು.
ಹಾಗನ್ನಿಸುತ್ತದೆ ನಿಜ ಆದರೆ ಅದರಿಂದ ಉಪಯೋಗವೇ ಹೆಚ್ಚು. ಸಸ್ಯಗಳನ್ನು ಬಾಧಿಸುವ ಕೆಲ ಕೀಟಗಳನ್ನು ಇದು ತಿನ್ನುತ್ತದೆ. ಅಲ್ಲದೆ ಇವುಗಳ ಭಯದಿಂದ ಸೊಪ್ಪು ತಿನ್ನುವ ಸಸ್ತನಿಗಳೂ ಇವಿರುವ ಮರಗಿಡಗಳ ಬಳಿ ಸುಳಿಯುವುದಿಲ್ಲ.

ಆದ್ದರಿಂದಲೇ ಪುರಾತನ ಚೀನೀಯರು ತಮ್ಮ ತೋಟದಲ್ಲಿ ಈ ಇರುವಗೆಳ ಬೆಳವಣಿಗೆಗೆ ಸಹಕರಿಸುತ್ತಿದ್ದರಂತೆ. ಈಗಲೂ ಸಹ ಕೆಲವು ಕಡೆ ಇವುಗಳನ್ನು ನೈಸರ್ಗಿಕ ಕೀಟನಾಶಕಗಳಂತೆ ಬಳಸುತ್ತಾರಂತೆ.
ಅನೇಕ ಕಡೆಗಳಲ್ಲಿ ಈ ಇರುವೆ ಮತ್ತು ಇವುಗಳ ಮೊಟ್ಟೆಗಳಾನ್ನು ಆಹಾರವಾಗಿಯೂ ಬಳಸುತ್ತಾರೆ.
ಆದರೆ ಕೆಲವು ಸಸ್ಯಗಳಿಗೆ ಇವು ಮಾರಕವೂ ಹೌದು. "ಎಪಿಡ್ " ಎಂಬ ಸಸ್ಯರಸವನ್ನು ಹೀರುವ ಪರಾವಲಂಬಿ ಕೀಟಗಳೊಡನೆ ಈ ಟೈಲರ್ ಇರುವೆಗಳಿಗೆ ಗೆಳೆತನವಿದೆ. ಎಪಿಡ್ ಗಳು ಸ್ರವಿಸುವ ಸಿಹಿದ್ರವ ಇವುಗಳಿಗೆ ತುಂಬ ಪ್ರಿಯವಾದ ಸತ್ವಯುತ ಆಹಾರ. ಬದಲಿಗೆ ಇವು ಆ ಕೀಟಗಳನ್ನು ಅವುಗಳ ನೈಸರ್ಗಿಕ ವೈರಿಗಳಿಂದ ರಕ್ಷಿಸಿ ಅವುಗಳ ಸಂಖ್ಯೆ ಹೆಚ್ಚಿಸುತ್ತವೆ. ಇದು ಆ ಸಸ್ಯಕ್ಕೆ ಮಾರಕವಾಗುತ್ತದೆ.


ಇರುವೆ , ಜೇನುಹುಳು , ಗೆದ್ದಲು ಮುಂತಾದ ಕೀಟಗಳ ಸಾಂಘಿಕ ಜೀವನಕ್ರಮ ,ಶಿಸ್ತು , ಸಾಮುದಾಯಿಕ ಹಿತಚಿಂತನೆ , ಗೂಡು ನಿರ್ಮಿಸುವ ಕೌಶಲ , ಮರಿಗಳ ಪೋಷಣೆಯಲ್ಲಿ ತೋರುವ ಜವಾಬ್ದಾರಿ - ನಾವೇ ದೊಡ್ಡ ಸಂಘಜೀವಿಗಳು, ನಾಗರೀಕರು ಎಂದು ಜಂಬ ಪಡುವ ಮಾನವರಿಗೆ ಬುದ್ಧಿಹೇಳುವಂತಿದೆ.