ಮನೆಯೆಂದರೆ ಒಂದಿಷ್ಟಾದರೂ ಗಿಡಗಳಿರಬೇಕು, ಸ್ವಲ್ಪವಾದರೂ ಹಸಿರು ಅಂಗಳದಲ್ಲೋ, ಬಾಲ್ಕನಿಯಲ್ಲೋ, ನಳನಳಿಸುತ್ತಿದ್ದರೆ ಲಕ್ಷಣ. ಅದಿಲ್ಲವಾದರೆ ಮನೆ ಅದೆಷ್ಟೇ ಚೆನ್ನಾಗಿದ್ದರೂ, ದೊಡ್ಡದಾಗಿದ್ದರೂ
ಜೀವಕಳೆಯೇ ಇಲ್ಲವೆನ್ನಿಸಿಬಿಡುತ್ತದೆ ನನಗೆ. ಕಾಲಕಾಲಕ್ಕೆ ನೀರು,
ಗೊಬ್ಬರ, ವಾಗಾತಿ ಬೇಡುವ ನಾಜೂಕು ಸಸ್ಯಗಳನ್ನು ಬೆಳೆಸಲು,
ಪರಮ ಸೋಮಾರಿಯೂ, ಅಲೆಮಾರಿಯೂ ಆಗಿರುವ ನನಗೆ ಸಾಧ್ಯವಿಲ್ಲವಾದ್ದರಿಂದ
ಕಳೆಯಂತೆ ತನ್ನಷ್ಟಕ್ಕೆ ಬೆಳೆವ ಸಸ್ಯಗಳನ್ನಷ್ಟೆ ಬಾಲ್ಕನಿ ಮತ್ತು ಟೆರೆಸ್ಗಳಲ್ಲಿ ಬೆಳೆಯವ ಅಭ್ಯಾಸ ಮಾಡಿಕೊಂಡಿದ್ದೇನೆ. ಹೀಗೆ ಬೆಳೆವ ಸಸ್ಯಗಳಿಂದ
ಅಡುಗೆ ಮನೆಗೂ ಸ್ವಲ್ಪವಾದರೂ ಪ್ರಯೋಜನವಾಗಬೇಕೆಂಬುದು ನನ್ನ ಇನ್ನೊಂದು ಸ್ವಾರ್ಥ. ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಮನೆಯಂಗಳದಲ್ಲಿಯೋ, ತೋಟ ಗದ್ದೆಗಳ
ಬದಿಯಲ್ಲಿಯೋ ಬೆಳೆವ ವಿವಿಧ ಕಳೆ ಸಸ್ಯಗಳನ್ನು ಅಡುಗೆಗೆ ಮತ್ತು ಔಷಧಿಗೆ ಬಳಸುವುದು ಸಾಮಾನ್ಯ.
ಅಲ್ಲಿಯ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುವ ಅವುಗಳನ್ನು ಇಲ್ಲಿ ಬೆಂಗಳೂರಿನಲ್ಲಿ
ಬೆಳೆಯಬಹುದೆ ನೋಡೋಣ ಎಂಬ ಕುತೂಹಲದಿಂದ ಊರಿಗೆ ಹೋದಾಗಲೆಲ್ಲ ಒಂದಿಷ್ಟು ಸಸ್ಯಗಳನ್ನು ತಂದು ಪಾಟ್ನಲ್ಲಿ ಬೆಳೆಸಿ ನೋಡುವುದುಂಟು. ಕೆಲವು ಚೆನ್ನಾಗಿ ಬೆಳೆಯುತ್ತವಾದರೆ,
ಇನ್ನೂ ಕೆಲವು ಇದೆಲ್ಲಿ ತಂದು ಬಿಟ್ಟೆ ನನ್ನನ್ನು ಎಂದು ಸಿಟ್ಟು ಮಾಡಿಕೊಂಡು ಹೊರಟೇಹೋಗುತ್ತವೆ.
ಕೆಲವು ನಾನು ನೀರು ಹಾಕುತ್ತಿದ್ದರೆ ಮಾತ್ರ ಬದುಕುತ್ತವೆ. ಆಗಾಗ ನಾಲ್ಕಾರು ದಿನಗಳ ಮಟ್ಟಿಗೆ ಊರಿಗೋ, ಬೇರೆಲ್ಲಿಗೋ ಹೋಗಿ
ವಾಪಾಸ್ ಬಂದರೆ ಅವು ಒಣಗಿಹೋಗಿರುತ್ತವೆ. ಆದರೆ
ಕೆಲವು ಗಿಡಗಳಿವೆ, ಅವುಗಳಿಗೆ ಹೆಚ್ಚಿನ ನೀರು, ಆರೈಕೆ ಏನೂ ಬೇಡ. ನಾಲ್ಕಾರು ದಿನ ನೀರಿಲ್ಲದೆ ಒಣಗಿಹೋಗಿದ್ದರೂ,
ಮತ್ತೆ ನೀರು ಹಾಕಿದೊಡನೆಯೆ ಚಿಗುರಿ ನಳನಳಿಸುತ್ತವೆ. ಇಂತಹ
ಗಿಡಗಳಿಗೆ ಕೀಟಬಾಧೆಯೂ ಕಡಿಮೆ. ಇಂತಹ ಕೆಲ ಸಸ್ಯಗಳ ಪರಿಚಯ ಇಲ್ಲಿದೆ. ಇವುಗಳನ್ನು ನಗರದ ಕಿಷ್ಕಿಂದೆಯ
ಮನೆಗಳ ಪುಟ್ಟ ಬಾಲ್ಕನಿ, ಕಿಟಕಿಕಟ್ಟೆ, ಟೆರೆಸ್
ಹೀಗೆ ಎಲ್ಲಿಯಾದರೂ ಪಾಟ್ಗಳನ್ನಿಟ್ಟು ಬೆಳೆಯಬಹುದು.
ಗಿಡಬಸಳೆ
Talinum fruticosum ಎಂಬ ವೈಜ್ಞಾನಿಕ ನಾಮಧೇಯದ ಈ ಗಿಡ ಮಲೆನಾಡಿನ ಮನೆಗಳ ಅಂಗಳದಲ್ಲಿ
ಯಾವಾಗಲೂ ಇರುವ ಸಸ್ಯ. ಹೆಸರಿನಲ್ಲಿ ಬಸಳೆ ಎಂದಿದ್ದರೂ ಸಾಮಾನ್ಯವಾಗಿ ಮಲಬಾರ್ ಸ್ಪೀನಾಚ್
ಎಂದು ಕರೆಯಲ್ಪಡುವ ಬಸಳೆಗೂ ಇದಕ್ಕೂ ಸಂಬಂಧವಿಲ್ಲ, ಎರಡೂ
ಬೇರೆ ಬೇರೆ ಕುಟುಂಬದ ಸದಸ್ಯರು. ಬಸಳೆ ಬಳ್ಳಿಯಾದರೆ ನೆಲಬಸಳೆ ಸಣ್ಣ ಗಿಡ.
ಮೇ ತಿಂಗಳಲ್ಲಿ ಹಳೆ ಮಳೆ ಬೀಳುತ್ತಿದ್ದ ಹಾಗೇ ಚಿಗುರಿಕೊಳ್ಳುವ, ಜಾಗ ಸಿಕ್ಕಲ್ಲೆಲ್ಲ ಹರಡಿಕೊಂಡು ಬೆಳೆಯುವ ಸಸ್ಯ. ಹಾಗಂತ ಬೇಸಿಗೆಯಲ್ಲೇನೂ
ಇದು ಒಣಗುವುದಿಲ್ಲ. ನಾಲ್ಕೆಂಟು ದಿನಗಳ ಕಾಲ ನೀರಿಲ್ಲದೆಯೂ ಹಸಿರಾಗಿರುತ್ತದೆ.
ದಟ್ಟ ಹಸಿರು ಬಣ್ಣದ ದಪ್ಪ ಎಲೆಗಳಲ್ಲಿ ಇವು ನೀರನ್ನು ಸಂಗ್ರಹಿಸಿಟ್ಟುಕೊಂಡಿರುತ್ತವೆ.
ಒಂದೆರಡು ಅಡಿ ಎತ್ತರ ಬೆಳೆಯುತ್ತವೆ. ಚಿಕ್ಕ ಚಿಕ್ಕ ದಟ್ಟ
ಗುಲಾಬಿ ಬಣ್ಣದ ಹೂವು ಕೂಡ ನೋಡಲು ಸೊಗಸು. ಕಾಯಿ ಒಣಗಿದ ನಂತರ ಸಿಡಿದು ಚಿಕ್ಕ
ಸಾಸುವೆ ಕಾಳಿನಂತಹ ಬೀಜಗಳು ಗಾಳಿಯಲ್ಲಿ ಹಾರಿ ಹೊಸ ಗಿಡಗಳು ಮೊಳೆಯುತ್ತವೆ. ದಪ್ಪನಾದ ಕಾಂಡವನ್ನು ನೆಲಕ್ಕೆ ಊರಿದರೂ ಸಾಕು ಅಲ್ಲೇ ಅದು ಬೇರು ಬಿಡುತ್ತದೆ. ಎಲೆಗಳು, ಚಿಗುರುಗಳನ್ನು ಕೊಯ್ದು ಸಾಂಬಾರು, ಪಲ್ಯ, ದಾಲ್, ತಂಬುಳಿ, ಎಲ್ಲವನ್ನೂ ಮಾಡಬಹುದು. ಮತ್ತೆ ವೇಗವಾಗಿ ಚಿಗುರುತ್ತವೆ.
ಒಂದಿಷ್ಟು ಟೀ, ಕಾಫಿ ಚರಟು ಮತ್ತು ಹುಳಿ ಮಜ್ಜಿಗೆಯನ್ನು
ಬಿಟ್ಟರೆ ಬೇರೇನನ್ನೂ ನಾನು ಹಾಕದಿದ್ದರೂ ಎರಡು ಪಾಟ್ನಲ್ಲಿರುವ ಈ ಗಿಡಗಳಿಂದ
ವಾರಕ್ಕೊಮ್ಮೆ ಸಾಂಬಾರು ಮಾಡುವಷ್ಟು ಸೊಪ್ಪು ಸಿಗುತ್ತಿದೆ. ಸಿಕ್ಕಾಪಟ್ಟೆ
ಕಬ್ಬಿಣಾಂಶ, ಕ್ಯಾಲ್ಸಿಯಂ ಅಂಶ ವಿಟಾಮಿನ್ ಎ,
ಸಿ ಎಲ್ಲ ಇವುಗಳಲ್ಲಿದೆಯಂತೆ. ಹಾಗಂತ ಹೆಚ್ಚು ತಿಂದರೆ
ಅಜೀರ್ಣವಾಗಬಹುದು.
ಇದರ ಮೂಲ ಅಮೇರಿಕಾ
ಖಂಡ ಅಂತ ಗೂಗಲಕ್ಕ ಹೇಳಿದಳು. ಸಾವಿರಾರು ಕಿಮೀ ದೂರದ ಈ ಸಸ್ಯ ಅದ್ಯಾವಾಗ ನಮ್ಮ ಈ ಮಲೆನಾಡಿಗರ ಅಡುಗೆಮನೆ ಹೊಕ್ಕಿತೋ ಗೊತ್ತಿಲ್ಲ.
ಎಲವರಿಗೆ (Senna sophera)
ಇದೊಂದು ಮಧ್ಯಮ ಗಾತ್ರದ ಗಿಡ. ಮಳೆ ಬಿದ್ದೊಡನೆ, ಖಾಲಿ ಇರುವ ಜಾಗಗಳಲ್ಲಿ, ರಸ್ತೆ ಬದಿಗಳಲ್ಲಿ ಹುಟ್ಟಿಕೊಳ್ಳುತ್ತದೆ. ದಟ್ಟ ಹಸಿರು ಎಲೆಗಳಿವೆ.
ಎಲೆಗಳನ್ನು ಮುಟ್ಟಿದರೆ ಒಂದು ವಿಧವಾದ ವಾಸನೆ ಹೊರಹೊಮ್ಮುತ್ತದೆ. ರಸ್ತೆ ಬದಿಯಲ್ಲೇ ಇದು ಬೆಳೆದರೂ ಜಾನುವಾರುಗಳು ಇದನ್ನು ಮುಟ್ಟದಿರಲು ಈ ವಾಸನೆಯೇ ಕಾರಣವಿರಬಹುದು.
ಒಂದೆರಡು ತಿಂಗಳ ನಂತರ ಸುಂದರವಾದ ಹಳದಿ ಬಣ್ಣದ ಹೂವುಗಳು ಅರಳುತ್ತವೆ. ಉದ್ದನೆಯ ಕೋಡಿನಂತ ಹಸಿರು ಕಾಯಿಗಟ್ಟುತ್ತದೆ. ಮಳೆಗಾಲ ಮುಗಿಯುತ್ತ
ಬಂದಂತೆ ಗಿಡವು ಒಣಗುತ್ತಾ ಬರುತ್ತದೆ. ಕಾಯಿಯೂ ಒಣಗಿ ಕಪ್ಪುಬಣ್ಣಕ್ಕೆ ತಿರುಗುತ್ತದೆ.
ಒಣಗಿದ ಕಾಯಿ ಸಿಡಿದು ಮೆಂತೆ ಕಾಳಿನಂತಹ ಬೀಜ ಸುತ್ತ ಹರಡುಕೊಳ್ಳುತ್ತದೆ.
ಮುಂದಿನ ಮಳೆಗಾಲದವರೆಗೆ ಮಣ್ಣಿನಲ್ಲಿ ಸುಪ್ತಾವಸ್ಥೆಯಲ್ಲಿ ಉಳಿಯುವ ಬೀಜಗಳು ಮಳೆ
ಬೀಳುತ್ತಿದ್ದ ಹಾಗೆಯೆ ಚಿಗುರುತ್ತವೆ. ನೀರಿನ ಪಸೆ ಇರುವಲ್ಲಿ ಗಿಡ ಒಣಗುವುದಿಲ್ಲ. ನಾನು ಇದರ ಬೀಜವನ್ನು ಪಾಟ್ನಲ್ಲಿ ಹಾಕಿದೆ, ಗಿಡ ಹುಟ್ಟಿ ಚೆನ್ನಾಗಿ ಬೆಳೆಯಿತು.
ಆಗಾಗ ಅಲ್ಪ ಪ್ರಮಾಣದ ನೀರು ಹಾಕಿದರೆ ಸಾಕು, ಸದಾ ಕಾಲ
ದಟ್ಟ ಹಸಿರು ಎಲೆಗಳಿಂದ ತುಂಬಿ ನಿಲ್ಲುತ್ತದೆ.
ಇದರ ಎಲೆಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು, ಜೀರಿಗೆ, ಮೆಣಸು, ತೆಂಗಿನ ತುರಿ ಸೇರಿಸಿ
ಚಟ್ನಿ ಮಾಡಬಹುದು. ಒಣಕೊಬ್ಬರಿಯನ್ನು ಹಾಕಿ ಚಟ್ನಿಪುಡಿ ಮಾಡಬಹುದು.
ಎಳೆ ಎಲೆಗಳನ್ನು ಬೇರೆ ಸೊಪ್ಪುಗಳ ಜೊತೆ ಬೆರೆಸಿ, ಪತ್ರೊಡೆ,
ಪಲ್ಯಗಳನ್ನೂ ಮಾಡಬಹುದು.
ಈ ಗಿಡದಲ್ಲಿ ತುಂಬ ಔಷಧೀಯ ಗುಣಗಳಿರುವುದರಿಂದ ಆಯುರ್ವೇದದಲ್ಲಿ
ಪ್ರಾಮುಖ್ಯತೆ ಪಡೆದಿದೆ. ರಕ್ತದ ಸಕ್ಕರೆ ಅಂಶ ಕಡಿಮೆ ಮಾಡುವ ಸಾಮರ್ಥ್ಯ,
ಲಿವರ್ ಕಿಡ್ನಿಗಳ ಸ್ವಾಸ್ಥ್ಯವನ್ನು ಕಾಪಾಡುವ ಸಾಮರ್ಥ್ಯ
ಇವಕ್ಕಿದೆ ಎಂದು ತಿಳಿದುಬಂದಿದೆ.
ನಮ್ಮ ಮಲೆನಾಡಿನಲ್ಲಿ ಇದನ್ನು ಆಗಾಗ ಚಟ್ನಿ ರೂಪದಲ್ಲಿ ಅಡುಗೆಗೆ
ಬಳಸಲಾಗುತ್ತದೆ. ಬಾಣಂತಿಯರಿಗಂತೂ ವಾರಕ್ಕೊಮ್ಮೆಯಾದರೂ ಇದರ ಚಟ್ನಿಯನ್ನು
ಮಾಡಿಕೊಡಲಾಗುತ್ತದೆ.
ಚಕ್ರಮುನಿ ಸೊಪ್ಪು(Sauropus
androgynous)
ವಿಟಾಮಿನ್ಗಳ ಆಗರವಾಗಿರುವ
ಇದನ್ನು ವಿಟಾಮಿನ್ ಸೊಪ್ಪು ಎಂದೂ ಕರೆಯುತ್ತಾರೆ. ನೆಲದಲ್ಲಿದ್ದರೆ ಐದಾರು ಅಡಿಗಳ ಎತ್ತರಕ್ಕೆ ಪೊದೆಯಂತೆ ಬೆಳೆವ ಸಸ್ಯ. ಪಾಟ್ನಲ್ಲಿ ಅಷ್ಟು ಎತ್ತರಕ್ಕಲ್ಲದಿದ್ದರೂ ಚೆನ್ನಾಗಿ ಬೆಳೆಯುತ್ತದೆ.
ಬಹಳ ಮುಖ್ಯವೆಂದರೆ ಪೂರ್ಣ ಒಣಗಿಹೋಗಿದ್ದರೂ, ನೀರು ಹಾಕುತ್ತಿದ್ದಂತೆಯೆ
ಮತ್ತೆ ಚಿಗುರಿಕೊಳ್ಳುವ ಅದರ ಗುಣ. ಹಾಗಾಗಿ ಬೆಳೆಸಲು ಸುಲಭ. ದಟ್ಟ ಹಸಿರು ಬಣ್ಣದ ಅಂಡಾಕಾರದ ಎಲೆಗಳಿರುತ್ತದೆ. ಇದರ ಹೂವು ಮತ್ತು
ಕಾಯಿಗಳು ನೋಡಲು ತುಂಬಾ ಚಂದ. ಗುಲಾಬಿ ಬಣ್ಣದ ಪುಟ್ಟ ಹೂವುಗಳು ಎಲೆತೊಟ್ಟಿನ
ಅಡಿಯಲ್ಲಿ ಅರಳುತ್ತವೆ. ಕೆನೆಬಣ್ಣದ ಕಾಯಿಗಳು ಹಣ್ಣಾದಂತೆ ಗುಲಾಬಿ ಬಣ್ಣಕ್ಕೆ
ತಿರುಗುತ್ತವೆ. ವಿಟಾಮಿನ್ ಕೆ, ಸಿ, ಎ ಗಳು ಇವುಗಳಲ್ಲಿ ಹೇರಳವಾಗಿದೆಯಂತೆ.
ಎಲೆಗಳಿಂದ ತಂಬುಳಿ, ಚಟ್ನಿ,
ಚಟ್ನಿಪುಡಿ, ಪಲ್ಯ ಮಾಡಬಹುದು. ಸಕ್ಕರೆ ಖಾಯಿಲೆಗೆ ಔಷಧ ಎನ್ನುತ್ತಾರೆ. ಬಾಣಂತಿಯರಲ್ಲಿ ಎದೆಹಾಲು
ಹೆಚ್ಚಿಸುತ್ತದೆ ಎನ್ನಲಾಗಿದೆ.
ಇದು ಮೂಲತಃ ನಮ್ಮ ಏಷ್ಯಾ ಖಂಡದ ಸಸ್ಯ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಇದನ್ನು ಔಷಧಿಗಾಗಿ, ಆಹಾರವಾಗಿ ತುಂಬಾ
ಪುರಾತನಕಾಲದಿಂದಲೂ ಬಳಸಲಾಗುತ್ತಿದೆ.
ಗೋಳಿಸೊಪ್ಪು(Portulaca
oleracea)
ಕಿರುಗೋಳಿಸೊಪ್ಪು
ಎಂದೂ ಕರೆಯಲಾಗುವ ಈ ಪುಟ್ಟ ಸಸ್ಯವು ನೆಲಮಟ್ಟದಲ್ಲಿ ಹರಡಿಕೊಂಡು ಬೆಳೆಯುತ್ತದೆ. ನೀರಿಲ್ಲದೆಯೂ ಹಲವಾರು ದಿನ ಇರಬಲ್ಲ ಶಕ್ತಿ,
ಒಂದು ಬುಡ ಇದ್ದರೆ ಸಾಕು ಆದಷ್ಟು ಬೇಗ ಹೂಬಿಟ್ಟು, ಕಾಯಾಗಿ
ತನ್ನಲ್ಲಿರುವ ಲಕ್ಷಗಟ್ಟಲೆ ಬೀಜಗಳನ್ನು ಪ್ರಸರಣ ಮಾಡಿ ಇನ್ನಷ್ಟು ಮತ್ತಷ್ಟು ತಾನಾಗೆ ಹುಟ್ಟಿ,
ವೇಗವಾಗಿ ಬೆಳೆವ ಸಾಮರ್ಥ್ಯದ ಈ ಗಿಡ ನಮ್ಮಂತವರಿಗೆ ಬೆಳೆಯಲು ಹೇಳಿ ಮಾಡಿಸಿದಂತಹದ್ದು.
ಇದರ ಇನ್ನೊಂದು ಅನುಕೂಲವೆಂದರೆ ಯಾವುದಾರೂ ದೊಡ್ಡ ಗಿಡ ಇರುವ ಪಾಟ್ನಲ್ಲಿಯೂ ಬೆಳೆಸಬಹುದು, ಅದಕ್ಕೆ ಮುಚ್ಚುಗೆ ಸಸ್ಯದಂತೆಯೂ ಆಗುತ್ತದೆ,
ನಮಗೆ ಇದರ ಸೊಪ್ಪು ಬಳಸಲೂ ಸಿಗುತ್ತದೆ. ಹ್ಯಾಂಗಿಂಗ್
ಪಾಟ್ನಲ್ಲಿ ಹಾಕಿದರೆ ಹರಡಿಕೊಂಡು ಹಳದಿ ಬಣ್ಣದ ಚೆಂದದ
ಹೂ ಬಿಡುವುದರಿಂದ ಅಲಂಕಾರಿಕ ಸಸ್ಯವೂ ಆಗುತ್ತದೆ. ಚಿಕ್ಕ ಚಿಕ್ಕ ದಪ್ಪ ಎಲೆಗಳು,
ಮೃದುವಾದ ಕಾಂಡ ಎರಡನ್ನೂ ಅಡುಗೆಗೆ ಬಳಸಬಹುದು. ಇದರ ಸಾಂಬಾರು,
ಪಲ್ಯಗಳು ಬಲುರುಚಿ. ಬಹಳಷ್ಟು ಔಷಧೀಯ ಗುಣಗಳೂ ಇದಕ್ಕಿದೆ.
ವಿಟಾಮಿನ್ ಇ, ವಿಟಾಮಿನ್ ಸಿ
,ಒಮೆಗಾ ೩ ಫ್ಯಾಟಿ ಆಸಿಡ್ಸ್ ಎಲ್ಲವೂ ಇವುಗಳಲ್ಲಿದೆಯೆನ್ನುತ್ತಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳು, ಆಫ್ರಿಕಾ, ಯೂರೋಪ್ ಎಲ್ಲ ಕಡೆಗಳಲ್ಲಿ
ಇದನ್ನು ಆಹಾರಕ್ಕಾಗಿ ಬಳಸುತ್ತಾರಂತೆ. ಒಂದು ಕಾಲದಲ್ಲಿ ನಮ್ಮ ಮಲೆನಾಡಿನ
ಅಂಗಳಗಳಲ್ಲಿ ತೋಟ, ಗದ್ದೆಗಳ ಬದಿಯಲ್ಲಿ ಕಳೆಯಂತೆ ರಾಶಿ ರಾಶಿ ಬೆಳೆಯುತ್ತಿದ್ದ
ಈ ಗಿಡ ಇತ್ತೀಚೆಗೆ ಅಂಗಳಕ್ಕೆ ಕಲ್ಲು ಹಾಕಿಸುವುದು, ತೋಟ ಗದ್ದೆಗಳಿಗೆ ಕಳೆನಾಶಕಗಳನ್ನು
ಸಿಂಪಡಿಸುವ ಕ್ರಮದಿಂದಾಗಿ ಬೆಳೆಯುವುದು ಕಡಿಮೆಯಾಗುತ್ತಿದೆ. ಆದರೇನಂತೆ
ನಾವು ಇದನ್ನು ನಮಗೆ ಬೇಕಾದಲ್ಲಿ ಬೆಳೆಸಿ, ಬಳಸಬಹುದು. ಕಡಿಮೆ ಖರ್ಚಿನಲ್ಲಿ ರುಚಿ ಜೊತೆಗೆ ಆರೋಗ್ಯಕರ ಸೊಪ್ಪು.
ಚವನ್ ಹರಿವೆ(Alternanthera
bettzickiana)
ಗಾಢ ನೇರಳೆ ಬಣ್ಣದ ಎಲೆಗಳು, ಕಾಂಡ ಇರುವ ಈ ಗಿಡವು ಹರಿವೆಸೊಪ್ಪಿನ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಸುಂದರ ಬಣ್ಣ ಮತ್ತು ಯಾವ ಆರೈಕೆಯೂ ಬೇಡದೆ ಚೆನ್ನಾಗಿ ಬೆಳೆಯುವ ಸ್ವಭಾವದಿಂದಾಗಿ ಕೈತೋಟಗಳಲ್ಲಿ
ಪಾರ್ಕ್, ಲಾನ್ಗಳಲ್ಲಿ ಸಾಲಾಗಿ ಗಡಿಸಸ್ಯದಂತೆ
ಬೆಳೆಸುತ್ತಾರೆ. ಕುಂಡಗಳಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ ಮತ್ತು ಕೆಲವು
ದಿನ ನೀರಿಲ್ಲದೆ ಒಣಗಿದರೂ ನೀರು ಹಾಕುತ್ತಿದ್ದಂತೆ ಮತ್ತೆ ಚಿಗುರುತ್ತದೆ. ಬಿಳಿಯ ಬಣ್ಣದ ಪುಟ್ಟ ಬಲ್ಬ್ನಂತಹ ಹೂಗೊಂಚಲು ನೋಡಲು ಸುಂದರ.
ಚಿಕ್ಕ ಚಿಕ್ಕ ಬೀಜಗಳು ಗಾಳಿಯಲ್ಲಿ ಪ್ರಸರಣಗೊಳ್ಳುತ್ತದೆ.
ಇದನ್ನು ಮುಖ್ಯವಾಗಿ ಅಲಂಕಾರಿಕ ಸಸ್ಯವಾಗಿಯೇ ಬೆಳೆಯುತ್ತಾರೆ. ಆದರೆ ಸಾಕಷ್ಟು ಪೌಷ್ಟಿಕಾಂಶಗಳಿರುವುದರಿಂದ ಅಡಿಗೆಯಲ್ಲಿಯೂ ಬಳಸಬಹುದು. ರಕ್ತಹೀನತೆ, ಸಂಧಿವಾತ, ಮುಟ್ಟಿನ ಹೊಟ್ಟೆನೋವು
ಮೊದಲಾದ ಅನೇಕ ಖಾಯಿಲೆಗಳಿಗೆ
ಔಷಧವಾಗಿಯೂ ಬಳಕೆಯಲ್ಲಿದೆಯಂತೆ. ಎಲೆಗಳನ್ನು ಸಾಂಬಾರು ಪಲ್ಯ, ದಾಲ್ ಮೊದಲಾದ ಅಡುಗೆಯಲ್ಲಿ ಬಳಸಬಹುದು.
ಇದರಂತೆಯೆ ದಂಟಿನ ಸೊಪ್ಪು, ಸಣ್ಣಹರಿವೆ ಅಥವಾ ಕೀರೆ ಸೊಪ್ಪುಗಳೂ ಸಹ ಕಡಿಮೆ ಆರೈಕೆಯಲ್ಲಿ ಕುಂಡದಲ್ಲಿ ಚೆನ್ನಾಗಿ ಬೆಳೆಯುತ್ತವೆ.
ಸಂಬಾರಸೊಪ್ಪು(Coleus
aromaticus)
ದಪ್ಪ ಸುಂದರ ಎಲೆಗಳು, ಗಾಢವಾದ ವಾಸನೆಯ ಈ ಸಸ್ಯ ತನ್ನ ಅಪಾರವಾದ ಔಷಧೀಯ
ಗುಣಗಳಿಂದಾಗಿ ಪ್ರಸಿದ್ಧವಾಗಿದೆ. ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದಾಗಿ
ತಿಂಗಳುಗಟ್ಟಲೆ ನೀರು ಹಾಕದಿದ್ದರೂ ಬದುಕಿರುತ್ತದೆ. ಮಣ್ಣೂ ಸಹ ಹೆಚ್ಚು ಬೇಡ, ನಮ್ಮ ಬಾಲ್ಕನಿಯಲ್ಲಿರುವ
ಪಾಟ್‌ನಲ್ಲಿ ಒಂದು ಗಿಡವಿದೆ. ಅಲ್ಲಿಂದ ಹೇಗೋ ಬಾಲ್ಕನಿಯಂಚಿಗೆ ಹರಡಿಕೊಂಡು ಅಲ್ಲಿನ ಸಿಮೆಂಟ್ ಮೇಲೆ
ಎರಡು ಗಿಡಗಳು ಬೆಳೆಯುತ್ತಿವೆ!
ಶೀತ, ಕೆಮ್ಮು, ಕಫ, ಕಿವಿನೋವು ಮೊದಲಾದವುಗಳಿಗೆ ಇದರ ರಸವನ್ನು ಔಷಧವಾಗಿ
ಬಳಸುತ್ತಾರೆ. ಅಲ್ಲದೆ ಇದರ ಎಲೆಗಳಿಂದ ಮಾಡಿದ ಚಟ್ನಿ, ತಂಬುಳಿ, ಪಲ್ಯ, ದಾಲ್, ಬಜ್ಜಿ ತುಂಬಾ ರುಚಿ.
ನೋಡಲೂ ಸುಂದರವಾಗಿ ಗಿಡವನ್ನು ಚೆಂದದ ಕುಂಡಲ್ಲಿ ಬೆಳೆಸಿದರೆ ಅಲಂಕಾರಿಕ
ಸಸ್ಯವೂ ಆಗುತ್ತದೆ. ಇದರ ಹೂವನ್ನು ನೋಡುವ ನನ್ನ ಆಸೆ ಇನ್ನೂ ಈಡೇರಿಲ್ಲ. ಯಾಕೋ ನಮ್ಮ ಗಿಡದಲ್ಲಿ ಇದುವರೆಗೂ
ಹೂವು ಅರಳಿಲ್ಲ.
ಅರಿಸಿನ-
ಮಳೆಗಾಲ ಪ್ರಾರಂಭವಾಗುತ್ತದೆನೆನ್ನುವಾಗ ಅರಿಸಿನದ ಕೊಂಬನ್ನು ದೊಡ್ಡ ಕುಂಡಗಳಲ್ಲಿ ಹಾಕಿ ಬಾಲ್ಕನಿಯಲ್ಲೋ, ಟೆರೆಸ್‌ನಲ್ಲೋ
ಇಟ್ಟರೆ ಸಾಕು ಆರೆಂಟು ತಿಂಗಳ ಬಳಿಕ ಮನೆಯಲ್ಲೇ ಬೆಳೆದ ಅರಿಸಿನವನ್ನು ಅಡುಗೆಗೆ ಬಳಸಬಹುದು. ಹಸಿರುಬಣ್ಣದ
ಚೆಂದದ ಎಲೆಗಳಿಂದಾಗಿ ಅಲಂಕಾರಿಕ ಸಸ್ಯವೂ ಆಗುತ್ತದೆ. ಪರಿಮಳ ಬೀರುವ ಎಲೆಗಳಲ್ಲಿ ಕಡುಬು ಮಾಡಿದರೆ
ಅದಕ್ಕೆ ವಿಶೇಷ ರುಚಿ ಬರುತ್ತದೆ. ಸ್ವಲ್ಪ ಹೆಚ್ಚು ಜಾಗವಿದ್ದರೆ ಏಳೆಂಟು ಕುಂಡಗಳಲ್ಲಿ ಬೆಳೆಸಿ, ಸ್ವಲ್ಪ
ಗೊಬ್ಬರ ಹಾಕಿದರೆ ವರ್ಷಕ್ಕಾಗುವಷ್ಟು ಅರಿಸಿನ ಬೆಳೆಯಬಹುದು. ಹೀಗೆಯೆ ಶುಂಠಿಯನ್ನೂ ಕೂಡ ಬೆಳೆಯಬಹುದು.
ನಾಲ್ಕಾರು ದಿನಗಳ ಮಟ್ಟಿಗೆ ನೀರಿಲ್ಲದೆಯೂ ಬದುಕುತ್ತವೆ. ಆದರೆ ಹೆಚ್ಚಿನ ದಿನ ಇರಲಾರವು.
ಇನ್ನು ಔಷಧೀಯ ಗುಣಗಳುಳ್ಳ ಲೋಳೆಸರ, ತುಳಸಿ, ನೆಲನೆಲ್ಲಿಗಳು, ನಾಚಿಕೆಮುಳ್ಳು, ಚೆಂದದ ಹೂ ಬಿಡುವ ಶಂಖಪುಷ್ಪ, ತುಂಬೆ, ನಿತ್ಯಪುಷ್ಪಗಳೂ, ಕಣಗಿಲೆ ಸಹ ಯಾವುದೇ ಆರೈಕೆ ಬೇಡದೆ ಸುಲಭವಾಗಿ ಬೆಳೆಯುತ್ತವೆ.
ಅಡುಗೆ ಮನೆಯಲ್ಲಿ ಉಳಿಯುವ ಕಸದಿಂದ ಇವುಗಳ ಆರೈಕೆ ಮಾಡಬಹುದು. ಟೀ ಕಾಫಿ
ಚರಟ, ಈರುಳ್ಳಿ ಸಿಪ್ಪೆ, ಬಾಳೆಹಣ್ಣಿನ ಸಿಪ್ಪೆಗಳನ್ನು, ತರಕಾರಿ ಸಿಪ್ಪೆಗಳನ್ನು ನೆನೆಸಿಟ್ಟು ಅದರ
ನೀರನ್ನು ಗಿಡಗಳಿಗೆ ಹಾಕುವುದು, ಆಗಾಗ್ಗೆ ಮಿಕ್ಕಿದ ಹುಳಿಮಜ್ಜಿಗೆಯನ್ನು ಹಾಕುವುದು ಎರಡೇ ನಾನು ಮಾಡುವ
ಅತೀ ದೊಡ್ಡ ಆರೈಕೆ! ಅಡುಗೆಮನೆಯ ಕಸದಿಂದ ಗೊಬ್ಬರ ತಯಾರಿಸಲು ಸುಲಭ ವಿಧಾನಗಳಿವೆ ಅದನ್ನೂ ಸಹ ಅಳವಡಿಸಿಕೊಳ್ಳಬಹುದು.
ಸುಲಭವಾಗಿ ಬೆಳೆಯಬಲ್ಲ ಉಪಯುಕ್ತ ಸಸ್ಯಗಳು…. ಇನ್ನೂ ಪ್ರಯೋಗ ಜಾರಿಯಲ್ಲಿದೆ.
ತುಂಬ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ, ಮೇಡಮ್. ಅನೇಕ ಧನ್ಯವಾದಗಳು. ನಾಚಿಕೆಮುಳ್ಳಿಗೂ ಸಹ ಔಷಧೀಯ ಗುಣಗಳು ಇರುತ್ತವೆ ಎಂದು ತಿಳಿದಾಗ ಆಶ್ಚರ್ಯವಾಯಿತು.
ReplyDeleteThank you kaka. ನಾಚಿಕೆಮುಳ್ಳನ್ನು ಮುಟ್ಟಿನ ಹೊಟ್ಟೆನೋವು, ಅತಿರಕ್ತಸ್ರಾವ ಮೊದಲಾದ ಖಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ.
Delete