31 Aug 2009

ಗೂಬೆಯ ಗೋಳುನಾವು ಮನುಜರು ನಮ್ಮ ಸುತ್ತಮುತ್ತ ವಾಸಿಸುವ ಪ್ರಾಣೀ ಪಕ್ಷಿಗಳ ಬಗ್ಗೆ ಅನೇಕ ರೀತಿಯ ನಂಬಿಕೆ ಅಪನಂಬಿಕೆಗಳನ್ನು ಬೆಳೆಸಿಕೊಂಡುಬಿಟ್ಟಿರುತ್ತೇವೆ. ಕಾಗೆ ಕೂಗಿದರೆ ನೆಂಟರು ಬರುತ್ತಾರೆ, ಕೆಂಭೂತ ಕಾಣಿಸಿದರೆ ಸಿಹಿ ಸಿಗುತ್ತದೆ ಮುಂತಾದವು ಸಕಾರಾತ್ಮಕ ನಂಬಿಕೆಗಳಾದರೆ ನಾಯಿ ಊಳಿಟ್ಟರೆ, ಬೆಕ್ಕು ಅಡ್ದ ಹಾಯ್ದರೆ, ಹಲ್ಲಿ ಲೊಚಗುಟ್ಟಿದರೆ ಅಪಶಕುನ,ಕೆಡುಕು ಎಂಬ ಭ್ರಮೆಯೂ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದೆ.


ಬಹುಶ: ಇವುಗಳಲೆಲ್ಲ ಅತ್ಯಂತ ಅವಜ್ಞೆಗೆ ಗುರಿಯಾದ ಪಕ್ಷಿ ಗೂಬೆ. ಅದು ಕೂಗಿದರೆ, ಮನೆಯ ಬಳಿ ಬಂದರೆ ಕೊನೆಗೆ ಕಾಣಿಸಿಕೊಂಡರೂ ಅಪಶಕುನವೆಂದು ತಿಳಿಯುವವರಿದ್ದಾರೆ.[ಮಾನ್ಯ ಮುಖ್ಯಮಂತ್ರಿಗಳ ನಿವಾಸದ ಬಳಿ ವಾಸಿಸುತ್ತಿರುವ ಗೂಬೆಯಿಂದ ಅವರಿಗೆ ತೊಂದರೆಯಿದೆಯೆಂದು ಇತ್ತೀಚೆಗೆ ಖ್ಯಾತ ಜ್ಯೋತಿಷಿಯೊಬ್ಬರು ವಿಜಯ ಕರ್ನಾಟಕದಲ್ಲಿ ಹೇಳಿಕೆಯಿತ್ತಿದ್ದಾರೆ.]


ವಿಚಿತ್ರವೆಂದರೆ ಕೆಲವು ಕಡೆ ಇವು ಅದೃಷ್ಟದ ಸಂಕೇತವೆಂದು ಪೂಜಿಸಲ್ಪಡುತ್ತವೆ. ಗ್ರೀಕರ ನಂಬಿಕೆಯ ಪ್ರಕಾರ ಗೂಬೆಗಳು ಅದೃಷ್ಟ ಮತ್ತು ಬುದ್ದಿವಂತಿಕೆಯ ಸಂಕೇತ.ಆದರೆ ನಮ್ಮಲ್ಲಿ ಪೆದ್ದರಿಗೆ ಗೂಬೆಯೆಂದೆ ಅಣಕಿಸುವವರಿದ್ದಾರೆ.


ವೈಜ್ಞಾನಿಕವಾಗಿ ಉಳಿದೆಲ್ಲ ಮಾಂಸಾಹಾರಿ ಪಕ್ಷಿಗಳಂತೆಯೆ ಇರುವ ಗೂಬೆ ತನ್ನ ನಿಶಾಚರ ಚಟುವಟಿಕೆಯಿಂದಾಗಿ ಈರೀತಿಯ ಅಪಖ್ಯಾತಿಗೆ ಒಳಗಾಗಿರಬಹುದು.


ಈ ನಿಶಾಚರಿಗಳ ಜೀವನಕ್ರಮವು ಕೌತುಕಮಯವಾಗಿದೆ. ನಿಶಾಚರ ಜೀವನ ನಡೆಸಲು ಅಗತ್ಯವಾದ ಅನೇಕ adoptationಗಳನ್ನು ಇದು ಹೊಂದಿದೆ.
 • ಕಣ್ಣಿನಲ್ಲಿ ಮಸುಕು ಬೆಳಕು ಗುರಿತಿಸುವ ’ರಾಡ್” ಗಳ ಸಂಖ್ಯೆ ಹೆಚ್ಚಿದೆ-ಇದು ಸಾಯಂಕಾಲದ ಮಸುಕು ಬೆಳಕಿನಲ್ಲಿ ಇದು ಚಟುವಟಿಕೆಯಿಂದಿರಲು ಸಹಾಯಕ.


 • ಅತ್ಯುತ್ತಮ ಶ್ರವಣಸಾಮರ್ಥ್ಯದಿಂದ ಬೇಟೆಯ ದಿಕ್ಕು ಸುಲಭವಾಗಿ ತಿಳಿಯುತ್ತದೆ.


 • ರೆಕ್ಕೆಗಳ ನಡುವೆ fringeಗಳಿರುವುದರಿಂದ ಅದು ಹಾರುವಾಗ ಸ್ವಲ್ಪವೂ ಶಬ್ದವಾಗುವುದಿಲ್ಲ. ಆದ್ದರಿಂದ ಬೇಟೆಗೆ ಇದು ಹತ್ತಿರ ಬಂದದ್ದು ತಿಳಿಯುವುದಿಲ್ಲ.


ಇವೆಲ್ಲ ಕಾರಣದಿಂದ ಗೂಬೆಗಳು ರಾತ್ರಿ ಚಟುವಟಿಕೆಯಿಂದಿದ್ದು ಹಗಲು ಯಾವುದೊ ಮರದ ಪೊಟರೆಯಲ್ಲೊ ನಿದ್ರಿಸುತ್ತಿರುತ್ತವೆ.ಒಂದೇ ಸಂಗಾತಿಯೊಡನೆ ವಾಸಿಸುವ ಇವುಗಳು ಗೂಡು ಕಟ್ಟುವುದಿಲ್ಲ. ಬೇರೆ ಹಕ್ಕಿಯ ಖಾಲಿ ಗೂಡುಗಳಲ್ಲಿ,ಮರದ ಪೊಟರೆಗಳಲ್ಲಿ,ಕೆಲವು ಗೂಬೆಗಳು ಸಸ್ತನಿಗಳ ಖಾಲಿ ಬಿಲದಲ್ಲಿ ಕೂಡ ಮೊಟ್ಟೆಯಿಡುತ್ತವೆ.ಹೆಣ್ಣುಹಕ್ಕಿಗೆ ಕಾವು ಕೊಡುವ ಕೆಲಸವಾದರೆ ಗಂಡಿಗೆ ಅದಕ್ಕೆ ಮತ್ತು ಮರಿಗಳಿಗೆ ಆಹಾರ ಪೂರೈಸುವ ಕೆಲಸ. ನೋಡಿ ಹೇಗಿದೆ ಸಹಬಾಳ್ವೆ.ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಇವುಗಳಿಂದ ಮಾನವರಿಗೆ ಉಪಯೋಗವೆ ಇದೆ.

 • ರೈತರೆ ಬೆಳೆಗೆ ಕಂಟಕವಾಗುವ ಇಲಿ,ಹೆಗ್ಗಣ,ಅಳಿಲು,ಅನೇಕ ಕೀಟಗಳು,ಚಿಕ್ಕ ಪುಟ್ಟ ಪಕ್ಷಿಗಳು ಗೂಬೆಯ ಆಹಾರ. ಆದ್ದರಿಂದಲೆ ಇದು ರೈತರಿಗೆ ಉಪಕಾರಿ.


 • ಗೂಬೆಗಳು ತಮ್ಮ ಆಹಾರವನ್ನು ಅವುಗಳ ಕೂದಲು,ರೆಕ್ಕೆ ಪುಕ್ಕಗಳು,ಎಲುಬು ಮೂಳೆಗಳ ಸಮೇತ ನುಂಗುತ್ತವೆ.ಅವುಗಳ ಜಠರದಲ್ಲಿರುವ "gizzard"ಎಂಬ ಭಾಗದಲ್ಲಿ ಇವೆಲ್ಲ ಶೋಧಿಸಲ್ಪಟ್ಟು ಗಟ್ಟಿಯಾದ ಕುರುಳೆಗಳಗುತ್ತವೆ. ತನ್ನ ಬಾಯಿಯ ಮೂಲಕ "owl pellet"ಗಳೆಂದು ಕರೆಯುವ ಈ ಕುರುಳೆಗಳನ್ನು ಗೂಬೆ ವಿಸರ್ಜಿಸುತ್ತದೆ. ಈ owl pellet ಗಳು ಪ್ರಾಣಿಶಾಸ್ತ್ರಜ್ಞರಿಗೆ ಅತ್ಯಮೂಲ್ಯ ವಸ್ತುಗಳು. ಇದರಲ್ಲಿ ಅವರಿಗೆ ಆ ಪ್ರದೇಶದ ಜೀವವೈವಿಧ್ಯದ ಸುಳಿವು ದೊರೆಯುತ್ತದೆ.

ಗೂಬೆ ಮಾನವರಿಗೆ ಕಾಣಿಸಿಕೊಂಡರೆ ಅದಕ್ಕಂತು ನಿಜವಾಗಿಯು ತೊಂದರೆಯೆ. ಕಲ್ಲು ಹೊಡೆಯುವುದು, ಸಾಯಿಸುವುದು ,ವಾಸಸ್ಥಾನವಾದ ಮರಗಳನ್ನು ಕಡಿಯುವುದು ಮುಂತಾಗಿ ಕಾಟ ಕೊಟ್ಟು ಅವುಗಳ ಸಂತತಿಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿರುವುದು ಮಾನವನೇ.

6 comments:

 1. ತುಂಬಾ ಉಪಯುಕ್ತ ಮಾಹಿತಿ...

  ನಾನು ಇತ್ತೀಚೆಗೆ ಸಿಂಗಾಪುರ್ ಹೋದಾಗ ಅಲ್ಲೊಂದು "ಗೂಬೆ ಪಾರ್ಕ್" ಗೆ ಹೋಗಿದ್ದೆ....
  ಜಗತ್ತಿನಲ್ಲಿರುವ ಎಲ್ಲ ಗೂಬೆಗಳು ಅಲ್ಲಿದ್ದವು...
  (ನಮ್ಮ ರಾಜಕೀಯದವರು ಅವರಿಗೆ ಸಿಗಲಿಲ್ಲವೇನೋ..)

  ಮಾಹಿತಿಗಾಗಿ ವಂದನೆಗಳು...

  ReplyDelete
 2. ಗೂಬೆಗಳ ಬಗ್ಗೆ ಅನೇಕ ಮಾಹಿತಿ ಕೊಟ್ಟಿದ್ದೀರಿ. ಅವುಗಳ ಬಗ್ಗೆ ಅನೇಕ ಸಂಸ್ಕೃತಿಗಳಲ್ಲಿ ವಿಭಿನ್ನ ನಂಬಿಕೆ, ಮೂಢನಂಬಿಕೆಗಳಿವೆ. ಬಹುಶಃ ಅವುಗಳ ವಿಚಿತ್ರ ರೂಪ, ನಿಶಾಚರವೇ ಇದಕ್ಕೆ ಕಾರಣವಿರಬೇಕು

  ReplyDelete
 3. ಸುಮ ಮೇಡಮ್,

  ಗೂಬೆಯ ಬಗ್ಗೆ ಒಂದು ಸೊಗಸಾದ ಮಾಹಿತಿಯನ್ನು ಕೊಟ್ಟು ನಮ್ಮವರ ನಂಬಿಕೆ ಅಪನಂಬಿಕೆಗಳ ಬಗ್ಗೆ ಬರೆದಿದ್ದೀರಿ.

  ಕಳೆದ ತಿಂಗಳು ನಾವು ಕಾಡಿನ ಪ್ರಾಣಿಗಳ ಫೋಟೊ ತೆಗೆಯಲು ಮುಂಜಾನೆ ಆರುಗಂಟೆಗೆ ಕಾರಿನಲ್ಲಿ ಹೋದಾಗ ಮೊದಲು ನಮಗೆ ಈ ಗೂಬೆ ಪೋಟೊಗೆ ಸಿಗಬೇಕೆ. ನಾವು ಏನು ಚಿಂತಿಸದೆ ಚೆನ್ನಾಗಿ ಕ್ಲಿಕ್ಕಿಸಿದ್ದೆವು.
  ಒಂದು ವಿಶೇಷವೆಂದರೆ ಆ ಗೂಬೆ ಕುಳಿತ ಜಾಗದಲ್ಲೇ ತನ್ನ ಕುತ್ತಿಗೆಯನ್ನು ಒಂದು ಸುತ್ತು ತಿರುಗಿಸಿ ಎಲ್ಲಾ ಕಡೆ ನೋಡುತ್ತಿತ್ತು.

  ಗೂಬೆಯಿಂದ ನನಗೆ ಆದೃಷ್ಟವೋ, ನಷ್ಟವೋ ಅಂತ ಗೊತ್ತಾಗಲು ಇದೇ ಫೋಟೋವನ್ನು ಸ್ಪರ್ಧೆಗೆ ಕಳಿಸಿದ್ದೇನೆ. ಬಹುಮಾನ ಬರುತ್ತದೋ ಇಲ್ಲವೋ ಅದ್ರ ಮೇಲೇ ನನ್ನ ಲಕ್ ಗೊತ್ತಾಗುತ್ತೆ.

  ReplyDelete
 4. ಗೂಬೆಯ ಬಗ್ಗೆ ಒಂದು ಉಪಯುಕ್ತ ಮಾಹಿತಿ...
  ಅಭಿನಂದನೆಗಳು..

  ReplyDelete
 5. ಗೂಬೆ-ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಿರಿ. "ನೀನಾರಿಗದೆಯೊ ಎಲೇ ಮಾನವ" ಅ೦ಥಾ ಅಣಕಿಸುವ ಪ್ರಾಣಿಗಳ ಗು೦ಪಿನಲ್ಲಿ ಗೂಬೆನೂ ಸೇರಿದೆ ಅನ್ನಿ.

  ReplyDelete
 6. ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಶಿವು ಸರ‍್ ನಿಮ್ಮ ಗೂಬೆಯ ಫೋಟೊಕ್ಕೆ ಪ್ರಶಸ್ತಿ ಬರಲೆಂದು ಹಾರೈಸುತ್ತೇನೆ.

  ReplyDelete