ಕಳೆದ ವಾರ ಏನೂ ಬರೆಯಲಾಗಲಿಲ್ಲ. ಬ್ಲಾಗ್ ಆರಂಭಿಸಿದ ನಂತರ ಪ್ರಥಮ ಬಾರಿಗೆ ತಪ್ಪಿಸಿಕೊಂಡಿದ್ದು ನನಗೇ ನಾನು ಹಾಕಿಕೊಂಡ ನಿಯಮ ಮುರಿದಂತಾಗಿ ಬೇಸರವಾಗಿತ್ತು. ಆದ್ರೆ ಇದಾಗಿದ್ದು ನನ್ನ ಸೋಮಾರಿತನದಿಂದೇನೂ ಅಲ್ಲ ಎಂದು ನನಗೆ ನಾನೇ ಸಮಾಧಾನ ಪಟ್ಟುಕೊಳ್ಳುತ್ತಿದ್ದೇನೆ.
ಇದ್ದಕಿದ್ದಂತೆ ಒಂದು ದಿನ ನನ್ನ ಕಂಪ್ಯೂಟರ್ , ಬೇಡಿಕೆ ಈಡೇರದಾಗ ಗಂಡನಬಳಿ ಅಸಹಕಾರ ಚಳುವಳಿ ನಡೆಸುವ ಹೆಂಡತಿಯಂತಾಡಲು ಪ್ರಾರಂಭಿಸಿತು. ಬರಹ ,ನುಡಿ, ಯಾವುದೂ ನನ್ನ ಮಾತು ಕೇಳುತ್ತಿರಲಿಲ್ಲ. ಕೈಕಾಲು ಕಟ್ಟಿಹಾಕಿದ ಮಂಗನಂತಾಗಿತ್ತು ನನ್ನ ಪರಿಸ್ಥಿತಿ.
ಸರ್ವೀಸ್ ಮ್ಯಾನ್ ಗೆ ಫೋನ್ ಮಾಡಿದಾಗ ಇನ್ನರ್ಧ ಘಂಟೆಯಲ್ಲಿ ಬರುತ್ತೇನೆಂದವನು ನಾಲ್ಕು ದಿನದ ನಂತರ ಬಂದ. ಸದಾ ನಗು ಮರೆತ ರಾಜಕುಮಾರಿಯ ಮುಖಭಾವದಲ್ಲೇ ಇರುವ ಅವನಲ್ಲಿ ನನ್ನ ಕಂಪ್ಯೂಟರಿಗೇನಾಗಿದೆ ಎಂದು ತಿಳಿದುಕೊಳ್ಳುವುದು ಸಿಡುಕ ವೈದ್ಯರಲ್ಲಿ ನಮ್ಮ ರೋಗದ ಬಗ್ಗೆ ವಿಚಾರಿಸಿದಷ್ಟೇ ಕಷ್ಟ ಎಂಬ ಅರಿವಿದ್ದುದರಿಂದ ಹೇಗಾದರೂ ರಿಪೇರಿ ಮಾಡಿಕೊಡಪ್ಪ ಎಂದಷ್ಟೇ ವಿನಂತಿಸಿದೆ.
ಕೆಲಹೊತ್ತು ಏನನ್ನೋ ಪರೀಕ್ಷಿಸಿ "ಇದನ್ನು ರಿಪೇರಿ ಮಾಡಲು ನಾಲ್ಕಾರು ಘಂಟೆಗಳೇ ಬೇಕು . ಸಿಪಿಯು ತೆಗೆದುಕೊಂಡು ಹೋಗಬೇಕು " ಎಂದು ಆತ ಹೇಳುತ್ತಿದ್ದಂತೆ ನನಗೆ ಅರ್ಥವಾಗಿತ್ತು ಇನ್ನು ಇದು ನನಗೆ ಸಿಗುವುದು ವಾರದ ನಂತರವೇ ಎಂದು.
ಅಂತೂ ವಾರದ ನಂತರ ಮನೆಗೆ ವಾಪಾಸ್ ಬಂದಿತು.(ಗಂಡನ ಜೇಬಿಗೂ ಸ್ವಲ್ಪ ದೊಡ್ಡ ಕತ್ತರಿಯೇ ಬಿತ್ತೆನ್ನಿ.) ಅಂತೂ ಕಳೆದುಹೋದ ನಿಧಿ ಸಿಕ್ಕಂತಾಗಿತ್ತು.
ಅಂದಹಾಗೆ ಕಂಪ್ಯೂಟರ್ ಮೇಲಿನ ನನ್ನ ಈ ಅವಲಂಬನೆ ನನಗೇ ನಗು ತರಿಸುತ್ತಿದೆ. ಸುಮ್ಮನೇ ಬಿಡುವಿನ ವೇಳೆ ಕಳೆಯಲೆಂದು ಇದರ ಸಹವಾಸಕ್ಕೆ ಬಿದ್ದವಳು ನಾನು. ಈಗ ಅಂತರ್ಜಾಲದಲ್ಲಿ , ಬ್ಲಾಗ್ ಲೋಕದಲ್ಲಿ ಅಲೆಯುವುದು ಚಟವಾಗಿಬಿಟ್ಟಿದೆ. ಟೆಲಿಧಾರಾವಾಹಿಗಳನ್ನು ಪರಮಭಕ್ತಿಯಿಂದ ನೋಡುವ ಹೆಂಗಸರನ್ನು ಗೇಲಿ ಮಾಡುತ್ತಿದ್ದ ನಾನು ಈಗ ಅದರ ಅಪ್ಪನಂತಿರುವ ಈ ಮಾಯಾಲೋಕಕ್ಕೆ ಅಂಟಿಕೊಂಡಿರುವುದನ್ನು ಅರಿತು ನನಗೇ ನಗು ಬರುತ್ತಿದೆ.
ಈ ಮಾಯಾವಿಯ ತಾಕತ್ತೆ ಅಂತಹುದು ಅಲ್ಲವೆ . ಈಗ ಕಂಪ್ಯೂಟರ್ ಉಪಯೋಗಿಸದವರನ್ನು ಅನಕ್ಷರಸ್ತರಂತೆಯೆ ಕಾಣುತ್ತಾರೆ.
ಫೋನ್ ನಂಬರನ್ನು ಕೇಳುವಷ್ಟೇ ಸಹಜವಾಗಿ ಇಮೇಲ್ ಅಡ್ರೆಸ್ ಕೇಳುವ ದಿನಗಳಿವು. ಮದುವೆಯಾಗುವ ಹೆಣ್ಣಿಗೆ ಹಾಡು ಹಸೆ ಅಡಿಗೆ ಬರುತ್ತದಾ ಎಂದು ನೋಡುವ ಕಾಲ ಹೋಗಿ ಕಂಪ್ಯೂಟರ್ ಕಲಿತಿದ್ದಾಳ ಎಂದು ಕೇಳುತ್ತಾರೆ. ನಮ್ಮ ಜನಾಂಗದಲ್ಲಂತೂ ಕಂಪ್ಯೂಟರ್ ಕಲಿತ ವರನಿಗೆ ಮಾತ್ರ ಡಿಮ್ಯಾಂಡ್.
ನಾವು ಚಿಕ್ಕವರಿದ್ದಾಗ ಅಡಲು ಸೈಕಲ್ ಕೊಡಿಸು ಎಂದು ಅಪ್ಪನಲ್ಲಿ ದುಂಬಾಲು ಬೀಳುತ್ತಿದ್ದಂತೆ ಈಗಿನ ಮಕ್ಕಳು ಆಡಲು ಕಂಪ್ಯೂಟರ್ ಕೊಡಿಸು ಎಂದು ಕೇಳುತ್ತವೆ.
ಒಂದು ಕಡೆ ಜಗತ್ತಿನೆಲ್ಲಡೆ ಹೊಸ ಹೊಸ ತಂತ್ರಜ್ಞಾನ ಅಭಿವೃಧ್ಧಿಗೊಳಿಸಲು ಪಂಡಿತರಿಂದ ಬಳಸಲ್ಪಡುವ ಕಂಪ್ಯೂಟರ್ ಅದೇವೇಳೆಗೆ ಜನಸಾಮಾನ್ಯರ ಸಂಪರ್ಕ ಸಾಧನವಾಗಿ, ಮಕ್ಕಳಾಟಿಕೆಯ ವಸ್ತುವಾಗಿಯೂ ಬಳಕೆಯಲ್ಲಿರುವುದು ಆಶ್ಚರ್ಯವಲ್ಲವೆ ? ಬಹುಶಃ ಬೇರಾವುದೇ ವಸ್ತುವೂ ಸಹ ಇಷ್ಟೊಂದು ವ್ಯಾಪಕವಾಗಿ ಪಂಡಿತ ಪಾಮರರ ಬಳಕೆಗೆ ಒದಗುವುದಿಲ್ಲವೇನೊ .
ತುಂಬಾ ಚೆನ್ನಾಗಿದೆ ನಿಮ್ಮ ಬರಹ..
ReplyDeleteನಿಜ,, ನಾನೂ ಕೂಡ computer addict..
ನನ್ನ ಲ್ಯಾಪ್‌ಟಾಪ್ ಅನ್ನು servicing ಗೆ ಕೊಟ್ಟಾಗ ೨ ದಿನ ತುಂಬಾ ಚಡಪಡಿಸಿದ್ದೆ..ಈಗೀಗ ಟೀವೀ ಆನ್ ಮಾಡದೇ ೨-೩ ದಿನಗಳು ಹಾಗೆ ಕಳೆದು ಹೋಗುತ್ತವೆ..
ಸುಮ ಮೇಡಂ,
ReplyDeleteನಿರೂಪಣೆ ಚೆನ್ನಾಗಿದೆ... ನಾನೂ ಕೂಡ ಮನೆಗೆ ಬಂದ ಕೂಡಲೇ ಟಿ. ವಿ ರಿಮೋಟ್ ಕೈಗೆ ತೆಗೆದುಕೊಳ್ಳುತ್ತಿದ್ದೆ..... ಈಗ ಮನೆಗೆ ಬಂದು ಲ್ಯಾಪ್ಟಾಪ್ ಆನ್ ಮಾಡುತ್ತೇನೆ....
ಹೌದು...ಕಂಪ್ಯೂಟರ್ ಎಷ್ಟು ಉಪಕಾರಿಯೋ, ಕೆಟ್ಟು ಹೋದರೆ ಅಷ್ಟೇ ತಲೆ ನೋವು. ನಾವು ಅದಕ್ಕೆ ಅಡಿಕ್ಟ್ ಆಗಿರೋದು ತಲೆ ನೋವಿಗೆ ಒಂದು ಕಾರಣ :)
ReplyDeleteಹೌದು ಸುಮಾ, ನೀವು ಹೇಳುವದು ಸತ್ಯವಾಗಿದೆ. ಒಂದು ಗಳಿಗೆ ಕಂಪ್ಯೂಟರ ಮುಖ ನೋಡದಿದ್ದರೆ ಚಡಪಡಿಕೆ ಪ್ರಾರಂಭವಾಗುತ್ತದೆ.
ReplyDeleteಕಂಪ್ಯೂಟರ್ ಅಂಡ್ ಗೂಗಲ್ ಇಲ್ದೆ ಇವಾಗ ಇರೋದು ಸ್ವಲ್ಪ ಕಷ್ಟ.. ಸ್ವಲ್ಪ ಅಲ್ಲ ತುಂಬಾನೇ ಕಷ್ಟ..
ReplyDeleteನಿಮ್ಮವ,
ರಾಘು.
ನೂರಕ್ಕೆ ನೂರರಷ್ಟು ಸತ್ಯ.. ಪಂಡಿತರಿಂದ ಮತ್ತು ಪಾಮರರಿಂದ ಬಳಸಲ್ಪಡುವ ಒಂದೇ ಒಂದು ರಾಕ್ಷಸ ರೂಪಿ ವಸ್ತು ಅಂದ್ರೆ ಗಣಕ ಯಂತ್ರ..
ReplyDeleteನಮ್ಮೆಲ್ಲರನ್ನೂ ಮೋಡಿಗೊಳಿಸಿ ತನ್ನ ಜಾಲದಲ್ಲಿ ಬಂಧಿಸಿರುವ ಮಾಯಾವಿ...!! ಬರಹ ಉತ್ತಮವಾಗಿದೆ... :)
@ಸುಮ - ನೀವು ಹೇಳಿದ ಮಾತು ಅಕ್ಷರಸಹ ನಿಜ, ಹಾಗು ನಿಮ್ಮ ಬರವಣಿಗೆಯು ಅಷ್ಟೇ ಚೆನ್ನಾಗಿದೆ. ಈಗಂತೂ computer ಇಲ್ಲದ ದಿನ ನೆನೆಯುವುದಕ್ಕೆ ಕಷ್ಟವಾದಂತಾಗಿದೆ.
ReplyDeletenice article
ReplyDeleteಕಂಪ್ಯೂಟರ್ ಎಷ್ಟು ಅನಿವಾರ್ಯವಾಗಿದೆ ಎಂದರೆ ಮನೆಗೆ ಬಂದ್ ಅಕೂದಲೇ ಅಡಿಲ್ಲದಿರೆ ಏನೋ ಕಳವಳ
ReplyDeleteಮೊದಲಿನ ಆತ್ಮೀಯತೆ ನಶಿಸುತ್ತಿದೆ ಎನಿಸುತ್ತಿದೆ
ಮುಂಚೆಲ್ಲಾ ಸಂಜೆ ಸಮಯ ಸ್ನೇಹಿತರ ಜೊತೆ ಹರಟೆ ಹೊಡೆಯಲು ಹೋಗುತ್ತಿದ್ದೆವು
ಈಗ ಕಂಪ್ಯೂಟರ್ ನಲ್ಲೆ ಮುಳುಗುತ್ತಿದ್ದೇವೆ
ಉತ್ತಮ ಲೇಖನ
ರೀ ಸುಮಾರ್ರೇ...ಸಾರಿ..ಇದು ಸುಮಾರು ಆಗೋಯ್ತು...ಸುಮಾ ಅವರೇ, ಇದಕ್ಕೆ ಪ್ರತಿಕ್ರಿಯೆ ಹಾಕಿದ್ದೆ...ಮಂಗ ಮಾಯ..??!!
ReplyDeleteನೀವೇ ತೆಗೆದ್ರಾ ಹೇಗೆ...??
ಗೀಳು-ಗೋಳು ಆಗುವುದಕ್ಕೆ ಮುಂಚೆ ಎಚ್ಚೆತ್ತುಕೋ ಬೇಕು..ನಿಜ ನಮಗೆ ಈ ಇಳಿ ವಯಸ್ಸಿನಲ್ಲಿ..ಹತ್ತಬಾರದು ಗೀಳು ಆದ್ರೂ ಹತ್ತಿದೆ..ಅದ್ರಲ್ಲೂ ಬ್ಲಾಗೋಳು...ಸಾರಿ..ಬ್ಲಾಗ್ಗೋಳು.