24 Feb 2010

ಹುಲಿರಾಯನನ್ನು ರಕ್ಷಿಸಿ !!


"ಈ ಜಾಗದಲ್ಲೆಲ್ಲ ಮೊದಲು ಹುಲಿ ಓಡಾಡುತ್ತಿತ್ತು ಗೊತ್ತಾ?" ಮಲೆನಾಡಿಗರೆಲ್ಲರೂ ಈ ಮಾತನ್ನು ಕೇಳಿಯೇ ಇರುತ್ತಾರೆ . ತೋಟದ ಬಳಿಯೋ , ಸೊಪ್ಪಿನ ಬೆಟ್ಟದ ಮೇಲೊ , ಹುಲ್ಲು ಬೆಳೆಯುವ ಬ್ಯಾಣದ ಬಳಿಯೋ ನಿಂತು ನಮ್ಮ ಹಿರಿಯರು ಹೇಳುವ ಮಾತಿದು . ಕಣ್ಣರಳಿಸಿ ಕೇಳಿದ ನಮಗೆ ಒಮ್ಮೆ ಹುಲಿರಾಯ ಓಡಾಡಿದ ಜಾಗದಲ್ಲೀಗ ನಾವು ಓಡಾಡುತ್ತಿರುವುದರ ಬಗ್ಗೆ ಆಶ್ಚರ್ಯಭರಿತ ಕುತೂಹಲ .ಪಠ್ಯಪುಸ್ತಕದಲ್ಲೋ, ಚಿತ್ರಪಟದಲ್ಲೋ ನೋಡಿದ ಶಕ್ತಿಶಾಲಿ ಹುಲಿ ಈಗೆಲ್ಲಾದರೂ ಇಲ್ಲಿ ಬಂದರೆ ಎಂದು ಕಲ್ಪಿಸಿಕೊಳ್ಳುತ್ತಾ ಆ ಭಯಮಿಶ್ರಿತ ಕಲ್ಪನೆಯಲ್ಲೇ ಸುಖಪಟ್ಟಿರುತ್ತೇವೆ .
ರಕ್ಷಿತಾರಣ್ಯಗಳಲ್ಲೋ , ಜೂಗಳಲ್ಲೋ ಚಿಕ್ಕ ಜಾಗದಲ್ಲಿ ಚಡಪಡಿಸುತ್ತಾ ಪಾಪದ ಮನೆಬೆಕ್ಕಿನಂತೆ ಬಿದ್ದಿರುವ ಹುಲಿಗೇ , ಅಜ್ಜಿ ಕಥೆಗಳಲ್ಲಿ ಬರುವ ಹುಲಿರಾಯನ ಕ್ರೂರತೆಯನ್ನು ಆರೋಪಿಸಿಕೊಂಡು ನೋಡುವ ಭಾಗ್ಯವಾದರೂ ನಮಗಿದೆ.
ಆದರೆ ನಮ್ಮ ಮಕ್ಕಳು , ಮೊಮ್ಮಕ್ಕಳಿಗೆ ಬಹುಶಃ ಈ ಭಾಗ್ಯವೂ ಇರಲಿಕ್ಕಿಲ್ಲ . ಬರೀ ಚಿತ್ರ ನೋಡೀ ಕಥೆ ಕೇಳುವುದರಲ್ಲೇ ಸಮಾಧಾನಪಡಬೇಕಾದ ಸ್ಥಿತಿಗೆ ಬರಬಹುದೇನೋ . ಏಕೆಂದರೆ ಶೀಘ್ರವಾಗಿ ನಶಿಸುತ್ತಿರುವ ಜೀವಿಗಳ ಸಾಲಿನಲ್ಲಿ ಹುಲಿರಾಯನಿದ್ದಾನೆ.

ಒಮ್ಮೆ ಅನೇಕಾನೇಕ ಜೀವಿಗಳಿಂದ ಕೂಡಿದ್ದ ವಸುಂಧರೆ ಈಗ ಬಡವಾಗುತ್ತಿದ್ದಾಳೆ . ಪ್ರಕೃತಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ , ಬಿಸಿಯೇರುತ್ತಿರುವ ಭೂಮಿ , ಹಿಗೆ ಅನೇಕ ಕಾರಣಗಳಿಂದ ಅನೇಕ ಜೀವಿಗಳು ನಶಿಸಿವೆ , ಹಾಗು ಇನ್ನೂ ಅನೇಕ ಜೀವಿಗಳು ಅಳಿವಿನಂಚಿನಲ್ಲಿವೆ . ಅವುಗಳಲ್ಲೆಲ್ಲ ಒಂದು ಕಾಲದಲ್ಲಿ ಏಷ್ಯಾಖಂಡದಲ್ಲಿ ಹೇರಳವಾಗಿದ್ದ ಹುಲಿಗಳ ಸಂಖ್ಯೆ ಕಡಿಮೆಯಾಗಿರುವುದೀಗ ಪ್ರಪಂಚದಾದ್ಯಂತ ಪರಿಸರಪ್ರೇಮಿಗಳ ಚಿಂತೆಗೆ ಕಾರಣವಾಗಿದೆ.

ಹುಲಿಗಳ ಬಗ್ಗೆ ಒಂದಷ್ಟು ಮಾಹಿತಿ :
ನಮ್ಮ ಮನೆಗಳಲ್ಲಿ ಕಾಣುವ ಬೆಕ್ಕು , ಹುಲಿ , ಸಿಂಹ , ಚಿರತೆ ಮುಂತಾದವೆಲ್ಲ ಜೀವಶಾಸ್ತ್ರೀಯವಾಗಿ "Felidae" ಎಂಬ ಒಂದೇ ಫ್ಯಾಮಿಲಿಗೆ ಸೇರಿವೆ. "cats " ಎಂದೇ ಇವೆಲ್ಲವುಗಳನ್ನು ಕರೆಯುತ್ತಾರೆ.
ಹಿಂದೆ ಒಂಬತ್ತು ಜಾತಿಯ ಹುಲಿಗಳಿತ್ತು . ಆದರೀಗ ಅದರಲ್ಲಿ ಮೂರು ಜಾತಿಯ ಹುಲಿಗಳ ತಳಿ ಸಂಪೂರ್ಣ ನಾಶವಾಗಿವೆ. ಈಗ ಕೇವಲ ಆರು ಜಾತಿಯ ಹುಲಿಗಳಿವೆ.

ವಾಸ:
ಅಡಗಲು ಸೂಕ್ತವಾದ ದಟ್ಟವಾದ ನೆರಳುಳ್ಳ ಪ್ರದೇಶ , ಸಾಕಷ್ಟು ನೀರು , ಸಾಕಷ್ಟು ಆಹಾರದ ಲಭ್ಯತೆ , ಈ ಅಂಶಗಳು ಹುಲಿ ವಾಸಿಸಲು ಅನುಕೂಲಕರ . ಪೂರ್ವ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಇವು ವಾಸಿಸುತ್ತವೆ.
ನಮ್ಮ ದೇಶದಲ್ಲಿ ರಾಜಸ್ಥಾನ , ಪಂಜಾಬ್ , ಕಛ್ ನ ಕೆಲ ಪ್ರದೇಶಗಳನ್ನು ಬಿಟ್ಟು ಉಳಿದೆಲ್ಲೆಡೆ ಇವು ವಾಸಿಸುತ್ತಿದ್ದವು . ಈಗ ದೇಶದಾತ್ಯಂತ ಇರುವ ಕೆಲ ರಕ್ಷಿತಾರಣ್ಯಗಳಲ್ಲಿ ಮಾತ್ರ ಇವುಗಳ ಸಂತತಿಯಿದೆ.

ದೈಹಿಕ ಲಕ್ಷಣಗಳು:
ಮಾಂಸಾಹಾರಿ , ಬೇಟೆಗಾರ ಜೀವನಕ್ರಮಕ್ಕನುಸಾರವಾಗಿ ದೇಹರಚನೆಯಿದೆ.
ಬಿಳಿ , ಕಪ್ಪು , ಕಂದು ಬಣ್ಣದ ಪಟ್ಟೆಗಳು ಆಕರ್ಷಕವಾಗಿದ್ದು ವಾಸಿಸುವ ಪರಿಸರದಲ್ಲಿ ಸಮ್ಮಿಳಿತಗೊಳಿಸುತ್ತವೆ .
ಬೇರೆ ಬೇರೆ ಜಾತಿಯ ಹುಲಿಗಳಲ್ಲಿ ಈ ಬಣ್ಣದ ಗಾಡತೆಯಲ್ಲಿ ವ್ಯತ್ಯಾಸವಿದೆ .
ಬಿಳಿ ,ಕಪ್ಪು ಬಣ್ಣದ ಹುಲಿಗಳಿವೆಯಾದರೂ ಅದು ಜನೆಟಿಕ್ ಮ್ಯುಟೇಶನ್ ಕಾರಣದಿಂದಾಗಿದ್ದು ಹೆಚ್ಚಾಗಿ ಜೂಗಳಲ್ಲಿ ಸಾಕುತ್ತಾರೆ.
ಬೇಟೆಯನ್ನು ಬೆನ್ನಟ್ಟಿ ಕತ್ತು ಹಿಡಿಯಲು ಸದೃಡವಾದ ಕಾಲುಗಳಿದ್ದು ಪಾದದಲ್ಲಿ ಮೆತ್ತನೆಯ ಕುಷನ್ ಇದೆ ಆದ್ದರಿಂದ ನೆಡೆಯುವಾಗ , ಓಡುವಾಗ ಸದ್ದಾಗದು.
ಚೂಪಾದ ಉಗುರುಗಳುಬೇಟೆಯನ್ನು ಹಿಡಿಯಲು , ಬಗೆಯಲು ಮತ್ತು ಮರಗಿಡಗಳ ಮೇಲೆ ತನ್ನ ಜಾಗವನ್ನು ಮಾರ್ಕ್ ಮಾಡಿಕೊಳ್ಳಲು ಸಹಕಾರಿ .
ಆ ಉಗುರುಗಳು ನಡೆಯುವಾಗ ತುಂಡಾಗದಂತೆ ಕಾಲಿನ ಸ್ಕಿನ್ ಫೋಲ್ಡ್ ಒಳಸೇರಿರುತ್ತವೆ
ಬಾಯಿಯ ಬಳಿಯಿರುವ ಮೀಸೆ ಅದರ ಸ್ಪರ್ಶಾಂಗ.
ಚುರುಕಾದ ಕಿವಿ , ರಾತ್ರಿಯ ಮಂದ ಬೆಳಕಲ್ಲೂ ನೋಡಬಲ್ಲ ಸಾಮರ್ಥ್ಯವಿರುವ ಕಣ್ಣು , ರಾತ್ರಿ ಬೇಟೆಯಾಡಲು ಸಹಾಯಕ .
ಬೇಟೆಯನ್ನು ಕಚ್ಚಿ ಹಿಡಿಯಲು , ಎರಡು ಜೊತೆ ಚೂಪಾದ ಉದ್ದನೆಯ ಕೋರೆಹಲ್ಲುಗಳು , ಎಲುಬನ್ನು ತುಂಡು ಮಾಡಬಲ್ಲ ಶಕ್ತಿಶಾಲಿ ದವಡೇ ಹಲ್ಲುಗಳು ಇದರ ಆಸ್ತಿ.

ಆಹಾರ :
ದೊಡ್ಡ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ , ಕಡವೆ ಕಾಡೆಮ್ಮೆ , ಕಾಡುಕೋಣ , ಸಾಂಬಾರ್ , ಅನೆ ಮರಿ , ಮೊಲ , ಮೀನು ಮುಂತಾದವುಗಳು .
ಒಮ್ಮೆ ದೊಡ್ಡ ಪ್ರಾಣಿಯನ್ನು ಬೇಟೇಯಾಡಿ ತಿಂದರೆ ಮತ್ತೆ ಎರಡು ವಾರ ಆಹಾರದ ಅವಶ್ಯಕತೆ ಕಡಿಮೆ.

ಸ್ವಭಾವ :
ಒಂಟಿಜೀವಿ . ಹೆಣ್ಣು ಹುಲಿ ತನ್ನ ಮರಿಗಳೊಡನೆ ವಾಸಿಸುತ್ತದೆ .
ಮರಗಿಡಗಳ ಮೇಲೆ ಫೆರಮೋನ್ ಮಿಶ್ರಿತ ಮೂತ್ರ ಸಿಂಪಡಿಸಿ , ಉಗುರಿನಿಂದ ಗೀರಿ ತನ್ನ ವಾಸಸ್ಥಾನದ ಸುತ್ತ ಬೇಲಿ ಹಾಕುತ್ತದೆ !! ತನ್ನ ಸಾಮ್ರಾಜ್ಯದಲ್ಲಿ ಬೇರೆ ಹುಲಿಗಳು ಬರುವುದನ್ನು ಗಂಡು ಹುಲಿ ಸಹಿಸುವುದಿಲ್ಲ .
ನೀರಿನ ಮೂಲದ ಬಳಿ , ಹುಲ್ಲುಗಾವಲಿನಲ್ಲಿ ಹೀಗೆ ಹೊಂಚುಹಾಕಿ ಬೇಟೆಯಾಡುತ್ತದೆ. ತನ್ನ ಮುಂಗಾಲಿನಿಂದ ಹಿಡಿದು ಬೇಟೆಯ ಕತ್ತಿಗೇ ಬಾಯಿ ಹಾಕುತ್ತವೆ.
ಬೇಟೆಯಾಡುವುದೂ ಸಹ ಒಂಟಿಯಾಗೇ . ಆದರೆ ಕೆಲವೊಮ್ಮೆ ಬೇಟೆಯಾಡಿದ ಪ್ರಾಣಿಯನ್ನು ಬೇರೆ ಹುಲಿಗಳೊಡನೆ ಹಂಚಿಕೊಳ್ಳುತ್ತದೆ .
ತಿಂದು ಉಳಿದ ಬೇಟೆಯನ್ನು ನಾಳೆಗಿರಲಿ ಎಂದು ಹೆಣಭಕ್ಷಕ ನಯಿ, ನರಿ , ಹದ್ದುಗಳ ಕಣ್ಣಿಗೆ ಕಾಣದಂತೆ ಮುಚ್ಚಿಡುತ್ತದೆ!!
ಹೆಚ್ಚಿನ ಹುಲಿಗಳು ಮನುಷ್ಯನಿಗೆ ಹೆದರುತ್ತವೆ . ಅದರೆ ಬೇಟೆಯಾಡಾಲಾಗದ ಕೆಲ ವೃಧ್ಧ ಹುಲಿಗಳು ಮಾನವಭಕ್ಷಕನಾಗುವುದೂ ಇದೆ.

ಲೈಂಗಿಕತೆ:
ಹೆಣ್ಣು ಹುಲಿ ಎರಡು -ಮೂರು ಹಾಗು ಗಂಡು ನಾಲ್ಕು ವರ್ಷಗಳಿಗೆ ಲೈಂಗಿಕವಾಗಿ ಪ್ರಬುದ್ಧವಾಗುತ್ತವೆ. ಹೆಣ್ಣಿನ ಇರುವನ್ನು ಗಂಡು ಹುಲಿ ಫೆರಾಮೋನ್ ರಾಸಾಯನಿಕದ ವಾಸನೆಯ ಮುಖಾಂತರ ಕಂಡುಕೊಳ್ಳುತ್ತದೆ .ಹೆಣ್ಣು ಹುಲಿ ಗರ್ಭಧರಿಸಿದ ೧೦೦ ದಿನಗಳಲ್ಲಿ ಸೂಕ್ತವಾದ ಜಾಗ ನೋಡಿ ಪ್ರಸವಿಸುತ್ತದೆ .
ಹೆಚ್ಚಾಗಿ ಒಮ್ಮೆಲೆ ಮೂರರಿಂದ ನಾಲ್ಕು ಮರಿಗಳನ್ನು ಹಾಕುತ್ತ್ತದೆ. ಮೊದಲ ಎರಡು ವಾರ ಕಣ್ಣು ಬಿಡಲಾರದ ಮರಿಗಳನ್ನು ಹಾಲನ್ನಿತ್ತು ಪೋಷಿಸುತ್ತದೆ.
ನಂತರ ಮರಿಗಳು ನಿಧಾನವಾಗಿ ಅಮ್ಮ ತರುವ ಮಾಂಸದ ರುಚಿ ನೋಡುತ್ತವೆ .
ಸುಮ್ಮನೇ ತಾಯಿಯ ಬಾಲದ ಜೊತೆ ಆಡುವ ಒಂದರ ಮೇಲೊಂದು ಹತ್ತಿ ಹಾರುವ ಮರಿಗಳು ಅಲ್ಲೇ ಬೇಟೆಯಾಡುವ ಪಾಠವನ್ನೂ ಕಲಿಯುತ್ತವೆ.
ಎರಡು ವರ್ಷವಾಗುವ ವೇಳೆಗೆ ಮರಿ ಸಂಪೂರ್ಣ ಬೆಳೆದು ತನ್ನ ದಾರಿ ಹುಡುಕಿ ಸಾಗುತ್ತದೆ . ಅದರಲ್ಲೂ ಹೆಣ್ಣು ಮರಿಗಳು ತಾಯಿಯ ಜಾಗದ ಹತ್ತಿರದಲ್ಲೇ ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳುತ್ತವೆ.

ಪರಿಸರದಲ್ಲಿ ಹುಲಿಯ ಪ್ರಮುಖ್ಯತೆ:
ಪ್ರತಿಯೊಂದು ಜೀವಿಯೂ ಪರಿಸರದ ಸಮತೋಲನ ಕಾಪಾಡುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ .
{{ಸಸ್ಯಗಳು - ಸಸ್ಯಾಹಾರಿ ಪ್ರಾಣಿಗಳು - ಅವುಗಳನ್ನು ತಿಂದು ಜೀವಿಸುವ ಮಾಂಸಾಹಾರಿ ಪ್ರಾಣಿಗಳು --ಸತ್ತ ಪ್ರಾಣಿಗಳನ್ನು ತಿನ್ನುವ ಹೆಣಭಕ್ಷಕಗಳು --ಸತ್ತ ಜೀವಾವಶೇಷವನ್ನು ಕೊಳೆಸಿ ಮಣ್ಣಿಗೆ ಬೆರೆಸುವ ಸೂಕ್ಷ್ಮಾಣು ಜೀವಿಗಳು }}
ಇದನ್ನು ಆಹಾರ ಸರಪಳಿಯೆನ್ನುತ್ತಾರೆ . ಇದರಲ್ಲಿ ಯಾವೊಂದು ಜೀವಿ ನಶಿಸಿದರೂ ಇನ್ನುಳಿದ ಜೀವಿಗಳ ಮೇಲೆ ಪರಿಣಾಮ ಉಂಟಾಗುತ್ತದೆ .
ಇಲ್ಲಿ ಹುಲಿಗಳು ದೊಡ್ಡ ಸಸ್ಯಾಹಾರಿ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳು . ಒಮ್ಮೆ ಇವುಗಳು ನಾಶವಾದರೆ ಸಸ್ಯಾಹಾರಿಗಳ ಸಂತತಿ ಹೆಚ್ಚಾಗಿ , ಅವುಗಳಿಂದ ಸಸ್ಯಗಳ ನಾಶ ಸಂಭವಿಸಬಹುದು . ಇದು ಒಂದು ಉದಾಹರಣೇಯಷ್ಟೇ .


ಅಳಿವಿಗೆ ಕಾರಣಗಳು:
 • ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣದಿಂದ ಹುಲಿಗಳ ವಾಸಯೋಗ್ಯ ಸ್ಥಳಗಳನ್ನು ಮಾನವ ನಾಶಗೊಳಿಸುತ್ತಿರುವುದು
 • ಸ್ವಚ್ಛ ಶುದ್ಧ ನೀರಿನ ಕೊರತೆ
 • ಆಹಾರದ ಕೊರತೆ
 • ಮಾನವ ತನ್ನ ಅನುಕೂಲಗಳಿಗಾಗಿ ಕೊಲ್ಲುವುದು : ವಿನೋದಕ್ಕೆಂದೋ , ತನ್ನ ಜಾನುವಾರುಗಳ ರಕ್ಷಣೆಗೆಂದೋ ಅಥವ ಅವುಗಳ ಅಮೂಲ್ಯವಾದ ಚರ್ಮ ಇತ್ಯಾದಿ ದೇಹದ ಭಾಗಗಳಿಗೆಂದೊ ಮಾನವ ನಿರಂತರವಾಗಿ ಹುಲಿಗಳನ್ನು ಕೊಲ್ಲುತ್ತಾ ಬಂದಿದ್ದಾನೆ . ಹಿಂದೆ ಅದರಂತಹ ಕ್ರೂರ ಪ್ರಾಣಿಯನ್ನು ಯಾಕಾದರೂ ರಕ್ಷಿಸಬೆಕೆಂಬ ಮನೋಭಾವವೇ ಎಲ್ಲರಲ್ಲಿತ್ತು .
 • ಇಂದಿಗೂ ಜಾರಿಯಲ್ಲಿರುವ ಚೀನಾದ ಪ್ರಾಚೀನ ವೈದ್ಯ ಪದ್ಧತಿಯಲ್ಲಿ ಹುಲಿಯ ಅಂಗಾಂಗಳಿಂದ ಔಷಧ ತಯಾರಾಗುತ್ತದೆ . ಅದರಿಂದ ಅಲ್ಲಿ ಹುಲಿಯ ಅಂಗಾಂಗಗಳಿಗೆ ಭಾರೀ ಬೇಡಿಕೆಯಿದೆ . ಅದರಿಂದಾಗಿ ಪ್ರಪಂಚದಾದ್ಯಂತ ಹುಲಿಯ ಮಾರಣಹೋಮ ನಡೆಯುತ್ತಿದೆ.
ಈ ಎಲ್ಲಾ ಕಾರಣಾಗಳಿಂದಾಗಿ ನಾವೀಗ ನಮ್ಮ ಹುಲಿರಾಯನನ್ನು ಕಳೆದುಕೊಳ್ಳುತ್ತಿದ್ದೇವೆ .

ರಕ್ಷಣೆ:
೧೯೭೦ ರಲ್ಲೇ ನಮ್ಮ ದೇಶದಲ್ಲಿ ಹುಲಿಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಯಿತು. ಅವುಗಳನ್ನು ರಕ್ಷಿಸಲು "ಪ್ರಾಜೆಕ್ಟ್ ಟೈಗರ್ " ಎಂಬ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದು ಪರಿಸ್ಥಿತಿ ಇನ್ನೂ ಹಾಗೇ ಇದೆ .
ಈಗಲೂ ಕಾಲ ಮಿಂಚಿಲ್ಲ ಸರ್ಕಾರದ ಜೊತೆ ಜನತೆಯೂ ಎಚ್ಚೆತ್ತು ನಮ್ಮ ಅಮೂಲ್ಯ ಪರಿಸರಸಂಪತ್ತು ಉಳಿಸಿಕೊಳ್ಳಲು ಮುಂದಾಗಬೇಕಿದೆ.
 • ಹುಲಿ ವಾಸಿಸುವ ಪ್ರದೇಶದ ರಕ್ಷಣೆ ಮುಖ್ಯವಾಗಿ ಆಗಬೇಕು .ಅಲ್ಲಿ ಮಾನವನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಬೇಕು . ಇದು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಬದುಕುವ ಗುಡ್ಡಗಾಡು ಜನಾಂಗದವರಿಗೆ ತೊಂದರೆಯಾಗುವುದರಿಂದ ಅವರಿಗೆ ತಿಳುವಳಿಕೆ ನೀಡಿ ಬೇರೆ ಉದ್ಯೋಗ ಮಾಡುವಂತೆ ಪ್ರೇರೇಪಿಸಬೇಕು.
 • ಕಳ್ಳಸಾಗಾಣೆಯನ್ನು ಕಟ್ಟುನಿಟ್ಟಾಗಿ ತಡೆದು , ಅಂತಹ ಚಟುವಟಿಕೆಯಲ್ಲಿರುವವರಿಗೆ ಉಗ್ರವಾದ ಶಿಕ್ಷೆ ನೀಡಬೇಕು.
 • ಜನಸಾಮಾನ್ಯರು ಹುಲಿಯ ಯಾವ ಉತ್ಪನ್ನಗಳನ್ನೂ ಬಳಸಬಾರದು . ಆಗ ಬೇಡಿಕೆ ಕಡಿಮೆಯಾಗಿ ಕಳ್ಳದಂಧೆಯೂ ನಿಲ್ಲುತ್ತದೆ.
 • ಬ್ರೀಡಿಂಗ್ ಮುಖಾಂತರ ಹುಲಿ ಮರಿಗಳನ್ನು ಪಡೆದು , ಸಾಕಿ ದೊಡ್ಡದಾದ ನಂತರ ಕಾಡಿನಲ್ಲಿ ಬಿಡುತ್ತಾರೆ . ಆದರೆ ಹೀಗೆ ಬೆಳೆದ ಹುಲಿಗಳು ಕಾಡಿನಲ್ಲಿ ಸ್ವತಂತ್ರವಾಗಿ ಬೆಟೆಯಾಡಲು ವಿಫಲವಾಗಿ , ಅಹಾರವಿಲ್ಲದೆಯೋ , ತಮ್ಮಲ್ಲೇ ಕಚ್ಚಾಡಿಯೋ ಸಾಯುವುದೆ ಹೆಚ್ಚು . ಮರಿಗಳು ತಾಯಿಯಿಂದಲೇ ಬೇಟೇಯ ಪಾಠವನ್ನು ಕಲಿಯುವುದರಿಂದ ಬೆಳೆಸಿದ ಹುಲಿಗಳು ಪರಿಸರಕ್ಕೆ ಒಗ್ಗಿಕೊಳ್ಳಲು ಕಷ್ಟಪಡುತ್ತವೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ನಮ್ಮಂತೆಯೇ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ .ನಮ್ಮಲ್ಲಿರುವ ಜೀವವೈವಿಧ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸೋಣ . ಆಗ ಮುಂದೊದಗಬಹುದಾದ ಅಪಾಯವನ್ನು ತಪ್ಪಿಸಬಹುದು .

13 comments:

 1. ಸುಮಾ ಮೇಡಂ,
  ಭಾರತ ರಾಷ್ಟ್ರೀಯ ಪ್ರಾಣಿ: ಹುಲಿ. ಇವುಗಳ ಜೀವನ ಶೈಲಿ, ಅವುಗಳಲ್ಲಿದ್ದ ಪ್ರಬೇಧಗಳು, ಈಗಿರುವ ಸಂತತಿ, ಆಹಾರ ಕ್ರಮ, ಒಟ್ಟಿನಲ್ಲಿ ಹುಲಿಗಳ ಜೀವನ ಕುರಿತಂತೆ ಸರಳವಾಗಿ ತಿಳಿಸಿದ್ದೀರಿ. ಧನ್ಯವಾದಗಳು. ಹಾಗೆಯೇ ಅವುಗಳ ನಾಶವೂ ಹೇಗೆ ಆಗುತ್ತಿದೆ. ಅವುಗಳನ್ನು ರಕ್ಷಿಸಬೇಕಾದುದ್ದು ಏಕೆ? ಇವೆಲ್ಲವನ್ನೂ ವಿವರಿಸಿದ್ದೀರಿ. ಆದರೆ, ಮಾನವನ ದುರಾಸೆಗೆ ಯಾವುದೇ ಕಡಿವಾಣವಿಲ್ಲವಾಗಿದೆ. ಹೀಗಿರುವಾಗ, ಇಂತಹ ವನ್ಯ ಸಂಪತ್ತನ್ನು ಹಾಗೂ ವನ್ಯಪ್ರಾಣಿಗಳನ್ನು ರಕ್ಷಿಸುವುದು ಅಸಾಧ್ಯ ಎನಿಸುವ ಮಟ್ಟಿಗೆ ಜನರು ಇದ್ದಾರೆ.
  ಇವುಗಳ ನಾಶದಿಂದಾಗುವ ಅನಾಹುತಗಳನ್ನು ಅರಿತಿದ್ದರೂ, ಧನಮೋಹದಿಂದ, ಅಧಿಕಾರದಾಹದಿಂದ, ಅದರಲ್ಲಿಯೂ ವಿದ್ಯಾವಂತರೆಸಿಕೊಂಡವರಿಂದಲೇ ದೇಶದ ಸಂಪತ್ತುಗಳು ಲೂಟಿಯಾಗುತ್ತಿವೆ. ಇದನ್ನು ಕಠಿಣ ಕಾನೂನುಗಳಿಂದ, ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿಯುಂಡು ಮಾಡಿ ರಕ್ಷಿಸಬೇಕಾಗಿರುತ್ತದೆ, ಎಂದು ನನ್ನ ಅಭಿಪ್ರಾಯ.

  ನಾವು ಒಂದಷ್ಟು ಸ್ನೇಹಿತರು, ಎರಡು ವರ್ಷಗಳ ಹಿಂದೆ ದೇವೀರಮ್ಮ ಬೆಟ್ಟಕ್ಕೆ ಹೋಗಿದ್ದಾಗ, ಅಲ್ಲಿನವರು ಹೇಳಿದ್ದು: ಈಗೊಂದು ೩ ದಿನದ ಹಿಂದೆ ಹುಲಿ ಕಾಣಿಸಿಕೊಂಡಿತ್ತು. ನೀವು ೨೦ ಜನರ ತಂಡ ಇದ್ದೀರಿ, ಹಾಗಾಗಿ ಬೆಟ್ಟಕ್ಕೆ ಹೋಗಬಹುದು ಎಂದು ಅನುಮತಿಕೊಟ್ಟಿದ್ದರು. ನಿಮ್ಮ ಬರಹದ ಮೊದಲಲ್ಲಿ ಓದುವಾಗ ಇದು ನೆನಪಾಯಿತು.

  ಕೊನೆಯಲ್ಲಿ ತಿಳಿಸಿರುವಂತೆ, ಮಕ್ಕಳಿಂದಲೇ ಪರಿಸರ ಜಾಗೃತಿಯನ್ನು ಮೂಡಿಸಿದರೆ, ಖಂಡಿತಾ ದೇಶದ ವನ್ಯ ಸಂಪತ್ತನ್ನು, ವನ್ಯಪ್ರಾಣಿಸಂಕುಲವನ್ನು ಉಳಿಸಿ, ಬೆಳೆಸಬಹುದು.

  ಧನ್ಯವಾದಗಳು.

  ReplyDelete
 2. Huliya bagge innastu maahitigalannu needi upakarisiddakke dhanyavaadagalu.

  ReplyDelete
 3. ಕಳಕಳಿಯ ಬರಹ ಸುಮಾ ಈಗೇನೋ ನನ್ನ ಮಗಳಿಗೆ ಝೂದಲ್ಲೋ, ಬನ್ನೇರು ಘಟ್ಟದಲ್ಲೋ ತೋರಿಸಿದ್ದೇನೆ ಮೊಮ್ಮಗಳಿಗೆ ತೋರಿಸಲು ಇರುತ್ತವೆಯೇ ಅವು....

  ReplyDelete
 4. ಸರಳವಾಗಿ , ತುಂಬಾ ಚೆನ್ನಾಗಿ ಹುಲಿಯ ಬಗ್ಗೆ ತಿಳಿಸಿದ್ದೀರಿ. ಜೀವಶಾಸ್ತ್ರದ ಒಂದು ಕ್ಲಾಸಿಗೆ ಹೋಗಿಬಂದದಾಯ್ತು !. ಹುಲಿಗಳು ಮನುಷ್ಯನಿಗೆ ಹೆದರುತ್ತವೆಂದು ಓದಿ ಸ್ವಲ್ಪ ಖುಷಿಯೂ ಆಯ್ತು. ರಕ್ಷಣೆಯಂತೂ ಆಗಲೇಬೇಕಿದೆ. ಮಾಹಿತಿಯುಕ್ತ ಲೇಖನ. ಧನ್ಯವಾದ.

  ReplyDelete
 5. ಮೇಡಂ,
  ಹುಲಿಗಳ ಬಗೆಗಿನ ನಿಮ್ಮ ಕಾಳಜಿಗೆ ಬಹಳ ಸಂತಸವಾಗುತ್ತಿದೆ
  ಅಳಿವಿನ ಅಂಚಿನಲ್ಲಿರುವ ಹುಲಿಯನ್ನು ರಕ್ಷಿಸಲೆಬೇಕಾಗಿದೆ
  ಇಲ್ಲದಿದ್ದರೆ ಮುಂದಿನ ಜನಾಂಗಕ್ಕೆ ಡಿನೋಸಾರ್ ತೋರಿಸಿದ ಹಾಗೆ ಹುಲಿಯನ್ನು ತೋರಿಸಬೇಕಾದೀತು.
  ಒಳ್ಳೆಯ ಬರಹ

  ReplyDelete
 6. ಹುಲಿಗಳ ಬಗ್ಗೆ ಸಾಕಷ್ಟು ಅಧ್ಯಯನ, ಗಣತಿ ಎಲ್ಲಾ ನಡೆದಿದ್ದರೂ ಅವುಗಳ ನಿತ್ಯ ನೈಸರ್ಗಿಕ ಆಹಾರ ಪದ್ಧತಿಯಲ್ಲಿ ಅವುಗಳಿಗೆ ಕೊರತೆ ಇದೆ, ಹುಲಿಯೊಂದೇ ಅಲ್ಲ ಇಂದು ಯಾವುದೇ ವನ್ಯಮೃಗ-ಪಕ್ಷಿಗೂ ಅತಿ ದುರ್ಭಿಕ್ಷಕಾಲ, ಉದಾಹರಣೆಗೆ ಒಂದು ಆನೆ ದಿನವೊಂದಕ್ಕೆ 250 ಕೆ.ಜಿ. ಆಹಾರ ಸೇವಿಸುತ್ತದೆ, ಈಸರ್ತಿ ಆನೆಯ ಮುಖ್ಯ ಆಹಾರವಾದ ಬಿದಿರಿನಬೊಂಬುಗಳು ನಿಸರ್ಗ ಸಹಜ ಹೂ ಪಡೆದು ಒಮ್ಮೆ ನಾಶವಾಗಿ ಮತ್ತೆ ಮರುಹುಟ್ಟನ್ನು ಪಡೆಯುತ್ತವೆ, ಹೀಗಾಗಿ ಸಾಕಾನೆಗಳ ಬೀಡಲ್ಲಿ ಇರುವ ಕೆಲವು ಆನೆಗಳಿಗೇ ಸರಿಯಾಗಿ ವ್ಯವಸ್ಥೆ ಕಲ್ಪಿಸಲಾಗದ ನಾವು ಕಾಡಾನೆಗಳಿಗೆಲ್ಲ ಆಹಾರ ಒದಗಿಸುವುದು ಕನಸಿನ ಮಾತು. ಇಲ್ಲಿ ಪುನರಪಿ ನಾವು ಸೃಷ್ಟಿ ಹಾಗೂ ಸೃಷ್ಟಿಕರ್ತನನ್ನು ಪ್ರಾರ್ಥಿಸಬೇಕೇ ಹೊರತು ಯಾವ ಜೀವ ವಿಜ್ಞಾನಿಯಾಗಲೀ, ಮಂತ್ರಿ-ಮಹೋದಯರಾಗಲೀ ಏನೂ ಮಾಡಲು ಸಾಧ್ಯವಿಲ್ಲ! ನಿಮ್ಮ ಕಳಕಳಿ ಅರ್ಥವಾಗುತ್ತದೆ, ಆದರೆ ವನ್ಯಜೀವಿ ಧಾಮಗಳಿಗೆ ಭೇಟಿನೀಡಿ ಸರಿಯಾಗಿ ದಿನವೊಂದೆರಡು ಕಳೆಯಲಾರದ, ಅವುಗಳ ಉಳಿವಿನ ಬಗ್ಗೆ ಮಹತ್ತರವಾಗಿ ಏನೂ ಮಾಡಲಾರದ ನಾವು ಅಬ್ಬಬ್ಬ ಅಂದರೆ ಯವುದೋ ಕಮ್ಮಿ ಆಹಾರ ತಿನ್ನುವುದನ್ನು ದತ್ತು ತೆಗೆದುಕೊಳ್ಳಬಹುದೇ ವಿನಃ ,ಇಲ್ಲಿ ಸಕ್ರಿಯವಾಗಿ ನಾವೆಲ್ಲಾ ಎಷ್ಟರಮಟ್ಟಿಗೆ ಪೋಷಕರು ಎಂಬುದು ಬಹಳ ಮುಖ್ಯವಾಗಿ ಗಮನಿಸಬೇಕಾದ್ದು. ಕೆಲವರಲ್ಲಿ ಜಾಗೃತಿ ಮೂಡಲಿ ಎಂಬ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

  ReplyDelete
 7. ಚಂದ್ರು ಅವರೆ ನೀವೆನ್ನುವುದು ನಿಜ . ವನ್ಯ ಜೀವಿಗಳ ರಕ್ಷಣೆ ಕೇವಲ ಸರ್ಕಾರದ ಹೊಣೆಯಲ್ಲ . ಜನರು ಎಚ್ಚೆತ್ತಾಗ ಮಾತ್ರ ಸುಧಾರಣೇ ಸಾಧ್ಯ.

  ವಸಂತ್ , ಸುಭ್ರಮಣ್ಯ ಅವರೆ ಧನ್ಯವಾದಗಳು.

  ಗುರುಮೂರ್ತಿಯವರೆ ನಿಜ ಈಗಾಗಲೇ ಎಷ್ಟೋ ಜೀವಿಗಳು ಫೋಟೋ ಸೇರಿಯಾಗಿದೆ. ಆದರೆ ನಮ್ಮ ಸುಪ್ತ ಮನದಲ್ಲಿ ಶೌರ್ಯದ ಸಂಕೇತದಂತಿರುವ ಹುಲಿರಾಯನ ಅಳಿವು ಕಲ್ಪಿಸಿಕೊಂಡರೆ ಸಂಕಟವಾಗುತ್ತದೆ.

  ವಿ ಆರ್ ಭಟ್ ಅವರೆ ಪ್ರಕೄತಿಯಲ್ಲಿ ಏರಿಳಿತಗಳು ಸಾಮಾನ್ಯವೇ. ಆಹಾರವಿಲ್ಲದೆ, ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಎಷ್ಟೋ ಜೀವಿಗಳು ಅಳಿಯುತ್ತವೆ .
  ಆದರೆ ಇಲ್ಲಿ ಹುಲಿಯ ಅವನತಿಗೆ ಅದಕ್ಕಿಂತಲೂ ಹೆಚ್ಚಿನ ಕಾರಣಗಳಿವೆ . ಕೆಲ ದುಷ್ಟರ ಹಣದಾಸೆಗೆ , ಸ್ವಾರ್ಥಕ್ಕೆ ಬಲಿಯಾಗುತ್ತಿರುವ ಹುಲಿಗಳೇ ಹೆಚ್ಚು . ಕೇವಲ ಸೃಷ್ಟಿಕರ್ತನನ್ನು ಪ್ರಾರ್ಥಿಸುತ್ತಾ ಕುಳಿತರೆ ಬಗೆಹರಿಯುವ ಸಮಸ್ಯೆ ಅಲ್ಲವಿದು. ನಾವು ಹಾಳುಗೆಡವುತ್ತೇವೆ ನೀನು ಸರಿಪಡಿಸು ಎಂದು ಬೇಡುವುದು ಯಾವ ನ್ಯಾಯ?
  ನಿಜ ವನ್ಯಜೀವಿಗಳಿಗೆಲ್ಲ ನಾವು ಆಹಾರ ಒದಗಿಸುವುದು ಸಾಧ್ಯವಿಲ್ಲ . ಆದರೆ ಅವುಗಳ ಆಹಾರವನ್ನು ನಾವು ಕಸಿಯುತ್ತಿದ್ದೇವಲ್ಲ ! ಅದನ್ನು ನಿಲ್ಲಿಸಿದರೆ ಸಾಕು.
  ಇನ್ನು ನಮ್ಮಿಂದೇನಾಗುತ್ತದೆ ಎಂದು ಸುಮ್ಮನುಳಿಯುವುದಕ್ಕಿಂತ ಏನು ಮಾಡಬಹುದೆಂದು ಯೋಚಿಸುವುದು ಹೆಚ್ಚು ಸೂಕ್ತ. ಏನೂ ಮಾಡದಿರುವುದಕ್ಕಿಂತ ಕಡಿಮೆ ಆಹಾರ ತಿನ್ನುವುದಾದರೂ ಆಗಲಿ ಒಂದನ್ನು ದತ್ತು ತೆಗೆದುಕೊಳ್ಳುವುದು ಹೆಚ್ಚಲ್ಲವೆ?

  ReplyDelete
 8. Nice information about the Tigers & concern about the threat of their extinct.
  Hope project tiger will be implemented whole heartedly by government officials.
  Thanks for the information.

  ReplyDelete
 9. ಸುಮ ಮೇಡಮ್,

  ಹುಲಿ ಬಗ್ಗೆ ತುಂಬಾ ಚೆನ್ನಾದ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಇಷ್ಟು ಮಾಹಿತಿಯನ್ನು ಬಾಲ್ಯದಲ್ಲಿ ಓದಿದ್ದ ನೆನಪು. ಈಗೆಲ್ಲಾ ಎಲ್ಲಿ ಸಿಗುತ್ತದೆ ಹೇಳಿ. ನಿಮ್ಮ ಶ್ರಮಕ್ಕೆ ನನ್ನ ನಮನಗಳು. ಮತ್ತೆ ಹುಲಿಗಳ ವಿಚಾರವನ್ನು ತೇಜಸ್ವಿಯವರ ಕಾಡಿನ ಕತೆಗಳು ಪುಸ್ತಕ ಓದಿದಾಗ ನಮ್ಮ ಪಕ್ಕದಲ್ಲಿಯೇ ಇದ್ದಂತೆ ಭಾಷವಾಗುತ್ತದೆ. ಅಷ್ಟು ಚೆನ್ನಾಗಿ ಬರೆದಿದ್ದಾರೆ. ಮತ್ತೆ ಹಿರಿಯರು ಹೇಳಿದಂತೆ ಇಲ್ಲೆಲ್ಲಾ ಹುಲಿ ಬಂದು ಹೋಗಿತ್ತು ಅನ್ನುವ ಮಾತು ಈಗ ಯಾರು ಹೇಳುವುದಿಲ್ಲ. ಏಕೆಂದರೆ ನಾನು ಹತ್ತಾರು ಸಲ ಬಂಢಿಪುರ, ನಾಗರಹೊಳೆ, ಕಬಿನಿ ಇತ್ಯಾದಿ ಕಾಡುಗಳಿಗೆ ಫೋಟೊತೆಗೆಯಲು ಹೋಗಿದ್ದೇನೆ. ಒಮ್ಮೆಯೂ ಕಾಣಿಸಲಿಲ್ಲ. ಇನ್ನು ಹಿರಿಯರು ಹೇಳಿದಂತೆ ಹೇಗೆ ಸಿಗಲು ಸಾಧ್ಯ. ನಾವು ಹುಲಿಗಳನ್ನು ಉಳಿಸುವುದು ನಮ್ಮ ಕರ್ತವ್ಯ.

  ReplyDelete
 10. 'ಸುಮ ' ಅವ್ರೆ..,

  ಹುಲಿಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
  ಆದರೆ, "ಭಾರತದ ರಾಷ್ಟ್ರಪ್ರಾಣಿ" ಎಂದು ನಿಮ್ಮ ಲೇಖನದಲ್ಲಿ ಸೂಚಿಸಿದಂತಿಲ್ಲ....

  Blog is Updated:http://manasinamane.blogspot.com

  ReplyDelete
 11. ಸುಮಾ,
  ಹುಲಿಗಳ ಬಗ್ಗೆ ನೀವು ಬರೆದಿರುವ ಮಾಹಿತಿಯುಕ್ತ ಲೇಖನ ತುಂಬ ಚೆನ್ನಾಗಿ ಇದೇ... ಹುಲಿಗಳ ಬಗ್ಗೆ ನಿಮಗೆ ಇರುವ ಕಾಳಜಿಗೆ ಅಭಿನಂದಿಸಬೇಕು...
  ಹೌದು ನೀವು ಹೇಳಿರುವ ಪ್ರಕಾರ..ಅಳಿವಿನ ಅಂಚಿನಲ್ಲಿ ನಲ್ಲಿ ಇರುವ ಹುಲಿ ಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲು ಇದೆ.....

  ಗುರು

  ReplyDelete
 12. ಸುಮ,

  ತುಂಬಾ ಚೆನ್ನಾಗಿದೆ ಲೇಖನ. ಮನುಷ್ಯನ ಸ್ವಾರ್ಥ, ದುರಾಸೆ, ಲೋಲುಪತೆಯ ಮುಂದೆ ಹುಲಿಯ ಕ್ರೂರತೆಯೂ ಸಾಟಿಯಾಗದು ಅಲ್ಲವೇ? ಹುಲಿ ಬೇಟೆಯಾಡುವುದು ತನ್ನ ಹೊಟ್ಟೆಪಾಡಿಗಾಗಿ. ಆದರೆ ಮನುಷ್ಯ ಅದನ್ನು ಬೇಟೆಯಾಡುವುದು ತನ್ನ ಐಶ್ವರ್ಯಕ್ಕಾಗಿ. ಅದರ ಸಂತತಿಯೇ ನಶಿಸುತ್ತಿದೆ ಈಗ. ತುಂಬಾ ಖೇದಕರ ವಿಷಯ. ಇತ್ತ ನೋಡಿದರೆ ವನ್ಯಜೀವಿಗಳ ಪ್ರಾಣ ಅಳಿವಿಗೆ ಬಂದಿದೆ. ಅತ್ತ ನೋಡಿದರೆ ಸರಕಾರವೇ ಕಾಡುಗಳಲ್ಲಿ ಮೈನಿಂಗ್‌ಗೆ ಒಪ್ಪಿಗೆ ನೀಡುತ್ತಿದೆ! ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಪ್ರಕೃತಿಯೇ ನಮ್ಮನ್ನು ಬೇಟೆಯಾಡುತ್ತದೆ.

  ಉಪಯುಕ್ತ ಮಾಹಿತಿಗಳಿಂದ ಕೂಡಿದ ಲೇಖನಕ್ಕಾಗಿ ಧನ್ಯವಾದಗಳು.

  ReplyDelete
 13. Good and informative article Suma...you have a passion for collecting information on animals and their ways...and your concern for their conservation is equally appreciable...
  Many more ionteresting articles we expect...in Bhoorame...

  ReplyDelete