19 Dec 2010

ಅದ್ಭುತ ಸಂಘಜೀವಿ ಗೆದ್ದಲುಭೂಮಿಯ ಮೇಲೆ ಯಶಸ್ವಿಯಾಗಿ ಜೀವಿಸುತ್ತಿರುವ ಜೀವಿಗಳು ಕೀಟಗಳು. ಇಂತಹ ಕೀಟಗಳ ಜಾತಿಗೆ ಸೇರಿರುವ ಗೆದ್ದಲುಗಳೂ ಮಾನವರಿಗಿಂತಲೂ ಎಷ್ಟೋ ಮೊದಲೇ ಭೂಮಿಯಲ್ಲಿ ಜೀವಿಸುತ್ತಿವೆ. ಸುಮಾರು ೫೦ಮಿಲಿಯನ್ ವರ್ಷಗಳ ಹಿಂದಿನಿಂದಲೂ ಅವು ಭೂಮಿಯ ಮೇಲೆ ವಾಸಿಸುತ್ತಿವೆ.


ಸಂಘಜೀವಿಗಳಾದ ಅವುಗಳ ಒಂದು ಪರಿವಾರದಲ್ಲಿ ನೂರರಿಂದ ಮಿಲಿಯನ್ ಗಳಷ್ಟು ಸಂಖ್ಯೆಯ ಜೀವಿಗಳಿರಬಹುದು. ಸುಮಾರು ೩೦೦೦ ಜಾತಿಯ ಗೆದ್ದಲುಗಳನ್ನು ಪ್ರಾಣಿಶಾಸ್ತ್ರಜ್ಞರು ಗುರುತಿಸಿದ್ದಾರೆ. ತನ್ನ ವಿಶಿಷ್ಟ ಗುಣಗಳಿಂದ ಪರಿಸರದಲ್ಲಿ ಇದು ತುಂಬ ಮುಖ್ಯ ಪಾತ್ರ ವಹಿಸುವಂತಹ ಜೀವಿ.


ಉಷ್ಣವಲಯ, ಸಮಶೀತೋಷ್ಣವಯಗಳಲ್ಲಿ ಗೆದ್ದಲುಗಳು ಹೆಚ್ಚಾಗಿ ಕಂಡುಬರುತ್ತವೆ. ಮರಮಟ್ಟುಗಳ ಮೇಲೆ , ಒಣಗಿ ಬಿದ್ದ ದಿಮ್ಮಿಗಳ ಕೆಳಗೆ , ಭೂಮಿಯೊಳಗೆ ಇವು ತಮ್ಮ ಗೂಡು ಕಟ್ಟಿಕೊಳ್ಳುತ್ತವೆ. ಕೆಲವು ಜಾತಿಯ ಗೆದ್ದಲುಗಳು ಇಪ್ಪತ್ತು ಅಡಿಗಳಿಗಿಂತಲೂ ಹೆಚ್ಚು ಎತ್ತರವಾಗಿ ತಮ್ಮ ಗೂಡಿಗೆ ಚಿಮಣಿಯಂತೆ ಹುತ್ತವನ್ನು ನಿರ್ಮಿಸುತ್ತವೆ.


ಮರ , ಒಣಗಿದ ಮರ , ಕೊಳೆಯುತ್ತಿರುವ ಮರ , ಕೊಳೆಯುತ್ತಿರುವ ಶಾಖಾಹಾರಿ ಪ್ರಾಣಿಗಳ ಸಗಣಿ ಮುಂತಾದವು ಇವುಗಳ ಆಹಾರ. ಮರಮಟ್ಟುಗಳಲ್ಲಿರುವ ಸೆಲ್ಯುಲೋಸ್ ಇದರ ಮುಖ್ಯ ಅಹಾರ.

ವಿಧಗಳು - ಗೆದ್ದಲುಗಳು ಮೊದಲೇ ಹೇಳಿದಂತೆ ಸಂಘಜೀವಿಗಳು. ಇದರ ಒಂದು ಪರಿವಾರದಲ್ಲಿ ಮುಖ್ಯವಾಗಿ ರಾಜವಂಶ , ಕೆಲಸಗಾರ , ಸೈನಿಕ ಎಂಬ ಮೂರು ಜಾತಿಯಿರುತ್ತದೆ.


ರಾಜವಂಶ - ಈ ಜಾತಿಯ ಗೆದ್ದಲುಗಳ ಸಂಖ್ಯೆ ಕಡಿಮೆಯಿರುತ್ತದೆ . ಸಂತಾನೋತ್ಪತ್ತಿ ನಡೆಸುವುದು ಇವುಗಳ ಮುಖ್ಯ ಕಾರ್ಯ. ಉಳಿದವುಗಳಿಗಿಂತ ತುಂಬ ದೊಡ್ಡ ಸೈಜಿನ ರಾಣಿ , ಅದಕ್ಕಿಂತ ಸ್ವಲ್ಪ ಚಿಕ್ಕದಾಗಿರುವ ರಾಜ ಮತ್ತು ಮತ್ತು ರಾಜ ರಾಣಿಯರಾಗಬಲ್ಲ ಸಾಮರ್ಥ್ಯವಿರುವ ಸಂತಾನೋತ್ಪತ್ತಿ ನಡೆಸಬಲ್ಲ ಗೆದ್ದಲುಗಳು ಈ ಜಾತಿಗೆ ಸೇರಿವೆ.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮೊದಲ ಮಳೆ ಬೀಳುತ್ತಿದ್ದಂತೆ ರೆಕ್ಕೆ ಹೊಂದಿದ ಪುಟ್ಟ ಕೀಟಗಳು ಸಾವಿರಾರು ಸಂಖ್ಯೆಯಲ್ಲಿ ಬೆಳಕಿನ ಬಳಿ ಬರುವುದನ್ನು ಗಮನಿಸಿರಬಹುದು . ಮಳೆಹುಳು ಎಂದು ಕರೆಯಲ್ಪಡುವ ಇವುಗಳು ರೆಕ್ಕೆ ಮೂಡಿದ ಗೆದ್ದಲುಗಳು . ಹೊಸ ಸಂಸಾರ ಹೂಡಲು ತಯಾರಾಗುವ ವಯಸ್ಸಿಗೆ ಬಂದ ಗೆದ್ದಲುಗಳಿಗೆ ರೆಕ್ಕೆ ಮೂಡುತ್ತದೆ . ತಂಪಾದ ವಾತಾವರಣವಿದ್ದಾಗ ಅವು ಗೂಡಿನಿಂದ ಹೊರಗೆ ಹಾರುತ್ತವೆ . ಇದು ಅವುಗಳ ಜೀವನದ ಮೊದಲ ಮತ್ತು ಕೊನೆಯ ಹಾರಾಟ. ಸೂಕ್ತ ಸಂಗತಿಯನ್ನು ಹುಡುಕಲು ನಡೆಸುವ ಹಾರಾಟ ( naptual flight ).


ಸೂಕ್ತ ಸಂಗಾತಿ ಸಿಕ್ಕೊಡನೆ , ಭೂಮಿಗಿಳಿದು ತಮ್ಮ ರೆಕ್ಕೆ ಕಳಚಿಕೊಳ್ಳುವ ಇವು ಸೂಕ್ತ ಸ್ಥಳ ಹುಡುಕಿ ಚಿಕ್ಕ ಗೂಡು ನಿರ್ಮಿಸಿ ಕೂಡುತ್ತವೆ. ನಂತರ ಹೆಣ್ಣು ಮೊಟ್ಟೆಯಿಡಲು ಪ್ರಾರಂಭಿಸುತ್ತದೆ. ದಿನಕ್ಕೆ ಸಾವಿರಾರು ಮೊಟ್ಟೆಗಳನ್ನಿಡಬಲ್ಲ ಮಹಾತಾಯಿ ಈ ರಾಣಿ. ಈ ಮೊಟ್ಟೆಗಳು ಕೆಲಸಗಾರ , ಸೈನಿಕ ಮತ್ತು ರಾಜವಂಶ ಹೀಗೆ ಎಲ್ಲ ಜಾತಿಯ ಮರಿಗಳಾಗುತ್ತವೆ. ಹುಟ್ಟುವ ಮೊದಲ ಜನರೇಶನ್ ಮರಿಗಳನ್ನು ತಾಯಿತಂದೆ ಸ್ವಲ್ಪ ಕಾಲದವರೆಗೆ ಸಲಹುತ್ತವೆ . ನಂತರ ಆ ಮರಿಗಳು ಕಲೋನಿಯ ಎಲ್ಲ ಜವಾಬ್ದರಿಗಳನ್ನೂ ವಹಿಸಿಕೊಳ್ಳುತ್ತವೆ. ಆಗ ತಾಯಿ ರಾಣಿಯು ಇನ್ನಷ್ಟು ದೊಡ್ಡ ಹೊಟ್ಟೆ ಪಡೆದು ಹೆಚ್ಚು ಹೆಚ್ಚು ಮೊಟ್ಟೇಗಳನ್ನಿಡುತ್ತದೆ. ಆ ಸ್ಥಿತಿಯಲ್ಲಿ ಅದಕ್ಕೆ ನಡೆದಾಡಲೂ ಕೆಲಸಗಾರರು ಸಹಾಯ ಮಾಡಬೇಕು .
ಗೂಡಿನ ಎಲ್ಲ ಚಟುವಟಿಗಳ ನಿಯಂತ್ರಣ ರಾಣಿ ಹೊರಸೂಸುವ ಫೆರಾಮೋನ್ ಗಳಿಂದ ನಡೆಯುತ್ತದೆ.

ಕೆಲಸಗಾರ - ಗೂಡಿನ ಎಲ್ಲ ಕೆಲಸಕಾರ್ಯಗಳ ನಿರ್ವಹಣೆ ಕೆಲಸಗಾರ ಗೆದ್ದಲುಗಳ ಹೊಣೆ. ಆಹಾರ ಸಂಗ್ರಹಣೆ , ಸಂಗ್ರಹಿಸಿದ ಆಹಾರವನ್ನು ಮರಿಗಳಿಗೆ , ರಾಜ ರಾಣಿಯರಿಗೆ ಸೈನಿಕರಿಗೆ ತಿನ್ನಿಸುವುದು , ಗೂಡು ನಿರ್ಮಿಸುವುದು , ಗೂಡನ್ನು ಸ್ವಚ್ಛಗೊಳಿಸುವುದು , ಮರಿಗಳನ್ನು ಬೆಳೆಸುವುದು ಎಲ್ಲಾ ಜವಾಬ್ದಾರಿಗಳು ಲಕ್ಷಗಟ್ಟಲೇ ಸಂಖ್ಯೆಯಲ್ಲಿರುವ ಕೆಲಸಗಾರರದು. ಇವು ಸಂತಾನೋತ್ಪತ್ತಿ ನಡೆಸಲಾರವು.

ಸೈನಿಕರು - ತಮ್ಮ ಗೂಡುಗಳ ರಕ್ಷಣೆ ಇವುಗಳ ಹೊಣೆ. ಕೆಲ ಜಾತಿಯ ಗೆದ್ದಲುಗಳಲ್ಲಿ ಪ್ರತ್ಯೇಕ ಸೈನಿಕವರ್ಗ ಇರುವುದಿಲ್ಲ. ಮುಖ್ಯವಾಗಿ ಗೆದ್ದಲುಗೂಡಿನೊಳಗೆ ದಾಳಿಯಿಡುವ ಇರುವೆಗಳನ್ನು ಇವು ತಡೆಯುತ್ತವೆ. ಗೂಡಿನಿಂದ ಹೊರಹೋಗುವ ದಾರಿಯಲ್ಲಿ ಒಂದರಹಿಂದೊಂದು ನಿಲ್ಲುವ ಇವು ತಮ್ಮ ಮುಖದ ಮ್ಯಾಂಡಿಬಲ್ (ಚೂಪಾದ ಕೊಂಬಿನಂತಹ ಅಂಗ) ಗಳಿಂದ ಇರುವೆಗಳನ್ನು ಎದುರಿಸುತ್ತವೆ . ಕೆಲ ಜಾತಿಯ ಗೆದ್ದಲುಗಳು ವಿಷಯುಕ್ತ , ಅಂಟಾದ ಕಿಣ್ವಗಳನ್ನು ಸ್ರವಿಸಿ ಇರುವೆಗಳ ಜೊತೆ ತಾವೂ ಸಾಯುತ್ತವೆ. ಥೇಟ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ನಮ್ಮ ಸೈನಿಕರಂತೆಯೇ!

ಗೂಡು - ಕೀಟಪ್ರಪಂಚದ ಅನೇಕ ಜೀವಿಗಳು ಉನ್ನತ ತಾಂತ್ರಿಕತೆಯ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಗೆದ್ದಲು ಕೂಡ ತನ್ನ ಅವಶ್ಯಕತೆಗೆ ತಕ್ಕಂತಹ ಗೂಡು ನಿರ್ಮಿಸಿಕೊಳ್ಳುತ್ತದೆ. ಹೆಚ್ಚು ಶಾಖ ಮತ್ತು ಬೆಳಕನ್ನು ಇದರ ಮೃದುವಾದ ದೇಹ ಸಹಿಸುವುದಿಲ್ಲ. ಆದ್ದರಿಂದ ತೇವಯುಕ್ತವಾದ ಮರದ ಕಾಂಡಗಳಲ್ಲಿ , ನೆಲಕ್ಕೆ ಬಿದ್ದ ಒಣ ಮರದಡಿಯಲ್ಲಿ , ಭೂಮಿಯೊಳಗೆ ಗೂಡು ಕಟ್ಟುತ್ತವೆ . ಕೆಲವೊಂದು ಜಾತಿಯ ಗೆದ್ದಲುಗಳು ಭೂಮಿಯೊಳಗಿನ ತಮ್ಮ ಗೂಡಿನ ಮೇಲೆ ಚಿಮಿಣಿಯಂತಹ ಗೋಪುರ ನಿರ್ಮಿಸುತ್ತವೆ . ಕೆಲವು ಕಡೆ ೪ರಿಂದ ೬ ಮೀಟರ್ ಎತ್ತರದ ಹುತ್ತ ನಿರ್ಮಿಸಿದ ದಾಖಲೆಯೂ ಇದೆ.

ಮರದ ಕಾಂಡಗಳಲ್ಲಿ ವಾಸಿಸುವ ಗೆದ್ದಲುಗಳು ತಮ್ಮ ಜೊಲ್ಲುರಸ , ಡೈಜೆಸ್ಟಿವ್ ವೇಸ್ಟ್ , ಮಣ್ಣು ಬಳಸಿ ಕಾಲುವೆಗಳನ್ನು ನಿರ್ಮಿಸಿಕೊಂಡು ಅದರೊಳಗೇ ಸಂಚರಿಸುತ್ತವೆ. ಬಿಸಿಲು ಸಹಿಸಲಸಧ್ಯವಾದ್ದರಿಂದ ಮತ್ತು ಸುಲಭವಾಗಿ ಬೇರೆ ಜೀವಿಗಳಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲು ಈ ವ್ಯವಸ್ಥೆ.

ಭೂಮಿಯೊಳಗೆ ಇವುಗಳ ಗೂಡು ಅನೇಕ ಅಡಿಗಳಷ್ಟು ಆಳದವರೆಗಿರುತ್ತದೆ . ಅದರಲ್ಲಿ ರಾಜ ರಾಣಿಯರಿಗೆ, ಮರಿಗಳಿಗೆ , ಆಹಾರ ಸಂಗ್ರಹಣೆಗೆ ಪ್ರತ್ಯೇಕ ಕೋಣೆಗಳು , ಓಡಾಡಲು ಪ್ಯಾಸೇಜ್ ಎಲ್ಲವನ್ನೊಳಗೊಂಡಿರುತ್ತದೆ.
ಅದರ ಹೊರದಾರಿ ನೇರವಾಗಿ ಮರ ಇರುವಲ್ಲಿ ತಲುಪುವಂತಿರುತ್ತದೆ. ಹುತ್ತಗಳನ್ನು ಮಣ್ಣು , ಜೊಲ್ಲುರಸ , ತನ್ನದೇ ಮಲ ಬಳಸಿ ನಿರ್ಮಿಸುತ್ತದೆ. ಅನೇಕ ಸೂಕ್ಷ್ಮ್ರ ರಂದ್ರಗಳಿಂದ ಕೂಡಿದ ಈ ಹುತ್ತಗಳಿಂದ ಒಳಗಿರುವ ಗೂಡಿನ ವಾತಾವರಣ ತಂಪಾಗಿರುತ್ತದೆ. ಎಂತಹ ಬುರುಗಾಳಿ ಮಳೆಗೂ ಜಗ್ಗದ ಗಟ್ಟಿ ರಚನೆಯಿದು. ಹೀಗೆ ಯಾವುದೇ ಕಾಲದಲ್ಲೂ ಗೂಡಿನೊಳಗೆ ಹವಾನಿಯಂತ್ರಿತ ವಾತಾವರಣ ನಿರ್ಮಿಸಿಕೊಳ್ಳುವ ಗೆದ್ದಲುಗಳ ಜಾಣ್ಮೆಯನ್ನು ಮಾನವರೂ ಅನುಸರಿಸಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ.

ಆಹಾರ - ಸಂಕೀರ್ಣ ಸಕ್ಕರೆಯಾದ ಸೆಲ್ಯುಲೋಸ್ ಇದರ ಮುಖ್ಯ ಆಹಾರ. ಈ ಸಂಕೀರ್ಣ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಬೇಕಾಗುವ ಕಿಣ್ವಗಳು ಇದರಲ್ಲಿಲ್ಲ . ಗೆದ್ದಲುಗಳ ಉದರದಲ್ಲಿ ವಾಸಿಸುವ ಸೂಕ್ಷ್ಮಾಣುಗಳಾದ ಬ್ಯಾಕ್ಟಿರಿಯಾ ಮತ್ತು ಪ್ರೋಟೊಜೋವಾಗಳು ಸೆಲ್ಯುಲೋಸ್ ಜೀರ್ಣಿಸುವಂತಹ ಕಿಣ್ವಗಳನ್ನು ಸ್ರವಿಸುತ್ತವೆ. ಅವುಗಳ ಸಹಾಯದಿಂದ ತನ್ನ ಆಹಾರವನ್ನು ಜೀರ್ಣಿಸಿಕೊಳ್ಳುತ್ತದೆ.


ಮರಿಗಳಿಗೆ ಆಹಾರವುಣ್ಣಿಸುವಾಗ ಈ ಸೂಕ್ಷ್ಮಾಣುಗಳನ್ನೂ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತದೆ .
ಪರಸ್ಪರ ಆಹಾರದ ಜೊತೆಗೆ ಕೆಮಿಕಲ್ ಮೆಸೇಜ್ ಗಳನ್ನೂ ವರ್ಗಾಯಿಸುವ ಅವುಗಳ ಜಾಣ್ಮೆಯೆ ಅವುಗಳ ಸಾಮುದಾಯಿಕ ಯಶಸ್ವೀ ಜೀವನದ ಗುಟ್ಟು.


ಕೆಲವೊಂದು ಗೆದ್ದಲುಗಳು ತಮ್ಮ ಗೂಡಿನಲ್ಲಿ ವ್ಯವಸಾಯ ಕೂಡ ಮಾಡುತ್ತವೆ. ಶಿಲೀಂದ್ರಗಳನ್ನು ಅವು ಬೆಳೆಯುತ್ತವೆ. ಕೊಳೆಯುತ್ತಿರುವ ಆಹಾರ , ಎಲೆ ಇತ್ಯಾದಿಗಳನ್ನು ತಂದು ಒಂದೆಡೆ ಹಾಕುತ್ತವೆ ಅದರಲ್ಲಿ ಶಿಲೀಂದ್ರಗಳು ಹುಟ್ಟಿ ಬೆಳೆಯುತ್ತವೆ . ಶಿಲೀಂದ್ರಗಳಿಂದ ಬರುವ ಮೈಸೀಲಿಯಂ ಗೆದ್ದಲುಗಳಿಗೆ ಆಹಾರವಾಗುತ್ತದೆ.


ಸಂಘಜಿವನ -ಇರುವೆ , ಜೇನುಹುಳು , ಕೊಣಜ ಮೊದಲಾದ ಕೀಟಗಳು ಅತ್ಯುತ್ತಮ ಸಂಘಜಿವನ ನಡೆಸುತ್ತವೆ . ಅದೇ ಜಾತಿಗೆ ಗೆದ್ದಲು ಸೇರುತ್ತದೆ. ಇವುಗಳ ಸಾಮುದಾಯಿಕ ಪ್ರಜ್ಞೆ ಅನುಸರಣಯೋಗ್ಯವಾದದ್ದು. ಸಂಪೂರ್ಣ ಸಮುದಾಯದ ಹಿತಕ್ಕಾಗಿ ಗುಂಪಿನ ಎಲ್ಲ ಜೀವಿಗಳು ದುಡಿಯುತ್ತವೆ. ರಾಣಿ , ರಾಜ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಿಸಲು ಸದಾ ಕಾರ್ಯನಿರತರು. ರಾಣಿ ದಿನಕ್ಕೆ ಎರಡು ಸಾವಿರ ಮೊಟ್ಟೆಗಳನ್ನು ಇಡಬಲ್ಲದು. ಗೂಡಿನ ಎಲ್ಲ ಚಟುವಟಿಕೆಗಳನ್ನು ತನ್ನ ಪ್ಹೆರಮೊನ್ ಗಳಿಂದ ನಿಯಂತ್ರಿಸಬಲ್ಲದು .ಸ್ವಂತ ಮೊಟ್ಟೆ ಇಡುವ ಸಾಮರ್ಥ್ಯವಿಲ್ಲದ ಕೆಲಸಗಾರ ಗೆದ್ದಲುಗಳು ರಾಣಿಯ ಮರಿಗಳನ್ನು ತುಂಬಾ ಉತ್ತಮವಾಗಿ ಪೋಷಿಸುತ್ತವೆ . ಪರಸ್ಪರ ಮಾಹಿತಿ ಹಂಚಿಕೊಂಡು ಎಲ್ಲಾ ಕೆಲಸ ನಿರ್ವಹಿಸುತ್ತವೆ .ಸೈನಿಕ ಗೆದ್ದಳುಗಳಮ್ತು ತಮ್ಮ ಪ್ರಾಣವನ್ನೇ ಸಮುದಾಯದ ಹಿತಕ್ಕಾಗಿ ಬಲಿ ಕೊಡುತ್ತವೆ . ಅಬ್ಬ ! ಎಂತಹ ಸುಂದರ ಸಹಬಾಳ್ವೆ ಅಲ್ಲವೇ?


ಪ್ರಾಕೃText Colorತಿಕವಾಗಿ ಗೆದ್ದಲುಗಳ ಪ್ರಾಮುಖ್ಯತೆ - ಮರಗಳಲ್ಲಿರುವ ಪ್ರಮುಖ ಅಂಶವಾದ celulose ಇದರ ಮುಖ್ಯ ಆಹಾರ . ಅದ್ದರಿಂದ ಇದು ಅನೇಕ ಮರಗಗಿಡಗಳ, ಆಹಾರ ಬೆಳೆಗಳ ನಾಶಕ್ಕೆ ಕಾರಣವಾಗುತ್ತದೆ. ಅದಲ್ಲದೆ ಮನೆಗಳಲ್ಲಿರುವ ಮರದ ಸಾಮಗ್ರಿಗಳು , ಕಿಡಕಿ ಬಾಗಿಲುಗಳನ್ನು ಕಬಳಿಸುವ ಇವುಗಳಿಂದ ಅಪಾರ ಹಾನಿಯೇನೋ ಆಗುತ್ತದೆ . ಆದರೆ ಅವುಗಳಿಂದ ಉಪಕಾರವಾಗುವುದೇ ಹೆಚ್ಚು .

 • ಕಾಡಿನಲ್ಲಿ ಬಿದ್ದ ಮರವನ್ನು ವಿಭಜಿಸಿ ಭೂಮಿಗೆ ಸೇರಿಸುವಲ್ಲಿ ಇವುಗಳು ಮುಖ್ಯ ಪಾತ್ರ ವಹಿಸುತ್ತವೆ . ಗೆದ್ದಲುಗಳು ಇಲ್ಲವಾದಲ್ಲಿ ಗಟ್ಟಿಯಾದ ಅ ಮರದ ದಿಮ್ಮಿಗಳು ಕಾಡು ಪ್ರಾಣಿಗಳ ಸಂಚಾರಕ್ಕೆ ತಡೆಯಾಗುತ್ತದೆ .
 • ಎಲೆ ಒಣ ಮರ ಸಗಣಿ ಮೊದಲಾದವುಗಳನ್ನು ತಿಂದು ವಿಭಜಿಸಿ ಅವು ಬಿಡುವ ತ್ಯಾಜ್ಯ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
 • ಭೂಮಿಯೊಳಗೆ ಗೆದ್ದಲುಗಳು ಕೊರೆದ ಗೂಡುಗಳಲ್ಲಿ ಮಳೆನೀರು ಇಂಗಿ ಅಂತರ್ಜಲ ಮಟ್ಟ ಹೆಚ್ಚುತ್ತದೆ.
 • ಅನೇಕ ಹಕ್ಕಿಗಳು , ಸಿಕ್ಕ ಸಸ್ತನಿಗಳು , ಇರುವೆಗಳು ಮೊದಲಾದ ಜೀವಿಗಳಿಗೆ ಇವು ಆಹಾರವಾಗಿವೆ . ಕೆಲ ಬುಡಕಟ್ಟು ಜನಾಂಗದ ಮಾನವರು ಕೂಡ ಗೆದ್ದಲುಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ.
 • ಇಲಿ, ಹಾವು , ಅಳಿಲು ಮೊದಲಾದ ಪ್ರಾಣಿಗಳು ಗೆದ್ದಲುಗಳ ಗೂಡನ್ನು ಅತಿಕ್ರಮಿಸಿಕೊಂಡು ವಾಸಿಸುತ್ತವೆ .
 • ವಾಸ್ತುತಂತ್ರಜ್ಞರು ಇವುಗಳ ಹವಾನಿಯಂತ್ರಿತ ಗೂಡಿನ ತಂತ್ರಜ್ಞಾನ ಕಾಪಿ ಮಾಡಿ ಸುಲಭವಾದ ಕಡಿಮೆ ಖರ್ಚಿನ , ಪರಿಸರಸ್ನೇಹಿಯಾದ ಹವಾನಿಯಂತ್ರಿತ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.
 • ಇತ್ತೀಚಿಗೆ ಗೆದ್ದಲುಗಳು ಬದಲಿ ಇಂಧನದ ಬಗ್ಗೆ ಸಂಶೋಧನಾ ನಿರತ ವಿಜ್ಞಾನಿಗಳ ಗಮನ ಸೆಳೆದಿವೆ. ಗೆದ್ದಲುಗಳು ಸಸ್ಯದ celulose ತಿನ್ನುತ್ತವೆ ಹಾಗು ಜಠರದಲ್ಲಿನ maicro organism ಗಳ ಸಹಾಯದಿಂದ ಅದನ್ನು ಜೀರ್ಣಿಸಿಕೊಳ್ಳುತ್ತವೆ . ಈ ಸೂಕ್ಷ್ಮಾಣುಗಳಲ್ಲಿರುವ ಕಿಣ್ವ celulase ಸಸ್ಯದ celulose ಅನ್ನು ವಿಭಜಿಸುತ್ತದೆ . ಆಗ ಶಕ್ತಿಯ ಜೊತೆಗೆ ಉಪ ಉತ್ಪನ್ನವಾಗಿ ಜಲಜನಕವು ಬಿಡುಗಡೆಯಾಗುತ್ತದೆ . ಈ ಜಲಜನಕವನ್ನು ಬದಲಿ ಇಂಧನವಾಗಿ ಉಪಯೋಗಿಸುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
ಈ ಲೇಖನ 16 /12/2010ರ ಹೊಸದಿಗಂತದಲ್ಲಿ ಪ್ರಕಟವಾಗಿದೆ.
14 comments:

 1. ಗೆದ್ದಲುಗಳ ಮಾಹಿತಿ ವಿವರಣೆ ನಿಜಕ್ಕೂ ಅದ್ಬುತ... ಅದಕ್ಕಾಗಿ ಧನ್ಯವಾದಗಳು.

  ReplyDelete
 2. ಸುಮ ಎಂದಿನಂತೆ ಮಾಹಿತಿ ಭರಿತ ಲೇಖನ, ಸ್ಲ್ಯುಲೋಲೈಟಿಕ್ ಬ್ಯಾಕ್ಟೀರಿಯಾ ಬಗ್ಗೆ ನಮ್ಮ ಮತ್ಸ್ಯಶಾಸ್ತ್ರದಲ್ಲೂ ಉಲ್ಲೇಖವಿದೆ. ವಿಶೇಷ ಎಂದರೆ ಗೆದ್ದಲು ಹುಳುಗಳ ಜೀರ್ಣಾಂಗ ಬ್ಯಕ್ಟೀರಿಯಾ (ಗಟ್ ಬ್ಯಾಕ್ಟೀರಿಯಾ) ಈಗ ಆಹಾರ ಪಾಚನಕ್ರಿಯೆಗೆ ಸಹಕಾರಿಯಾಗುವಂತೆ ಮಾಡುವ ಸಂಶೋಧನೆಯೂ ನಡೆದಿದೆ... ಅಭಿನಂದನೆ..ವಿಜ್ಞಾನ ಪರಿಚಯದ ನಿಮ್ಮ ಪ್ರಯತ್ನ ಪ್ರಶಂಸನೀಯ.

  ReplyDelete
 3. ಸುಮಾ..

  ತುಂಬಾ ಉಪಯುಕ್ತ ಮಾಹಿತಿ..

  ಇವರು ತಯಾರು ಮಾಡಿದ ಹುತ್ತದೊಳಗೆ ವಾತಾಯನ ವ್ಯವಸ್ತೆ ತುಂಬಾ ವ್ಯವಸ್ಥಿತವಾಗಿರುತ್ತದಂತೆ..
  ಎಷ್ಟೇ ಸೆಖೆ ಇದ್ದರೂ ಒಳಗಡೆ ತುಂಬಾ ತಂಪಾಗಿರುತ್ತದಂತೆ..

  ನಮ್ಮ ಏಸಿ ಇಂಜೀನೀಯರುಗಳನ್ನು ನಾಚಿಸುವಂಥಹ ಕೆಲಸವನ್ನು ಅವು ಮಾಡಿರುತ್ತವಂತೆ..

  ಧನ್ಯವಾದಗಳು..

  ReplyDelete
 4. oLLeya maahiti suma, tumba istavaytu dhanyavadagaLu.....

  ReplyDelete
 5. ಸುಮಾ,
  ಗೆದ್ದಲುಗಳ ಜೀವನಕ್ರಮವನ್ನು ತುಂಬ ಸ್ವಾರಸ್ಯಕರವಾಗಿ ತಿಳಿ ಹೇಳಿದ್ದೀರಿ. ಧನ್ಯವಾದಗಳು.

  ReplyDelete
 6. Really good Article Sumakka :) liked it :)

  ReplyDelete
 7. ಅಂದು ಮೈಸೂರ್ ನ ಯುವರಾಜ ಕಾಲೇಜ್ ನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ತಡಕಾಡುತ್ತಿದ್ದ ಕೆಲ ವಿಷಯಗಳು ಹತ್ತು ವರುಷದ ನಂತರ ನಿಮ್ಮಿಂದ ತಿಳಿಯಲು ಸಾಧ್ಯವಾಯ್ತು. ತುಂಬು ಹೃದಯದ ಧನ್ಯವಾದಗಳು. ನೀವು, ಪ್ರಾಣಿಶಾಸ್ತ್ರದ ವಿದ್ಯಾರ್ಥಿಯೇ ??

  ReplyDelete
 8. ಸುಮ,

  ಗೆದ್ದಲುಗಳ ಸಮಗ್ರ ಜೀವನಚಕ್ರದ ಮಾಹಿತಿಯುಕ್ತ ಲೇಖನ.
  ಧನ್ಯವಾದಗಳು.

  ReplyDelete
 9. tumba olle mahiti suma... patrikege kalisiddra idanna...??

  ReplyDelete
 10. seemeenne haakiddalli gejjalugalu barolla..

  ೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

  ReplyDelete
 11. ಉಪಯುಕ್ತ ಮಾಹಿತಿಯ ಲೇಖನ.

  ReplyDelete