1 Apr 2012

ಅಡುಗೆ ಎಂಬ ಬ್ರಹ್ಮವಿದ್ಯೆ!!

                       
"ಏಯ್ ಸುಮ ಇಲ್ಲಿ ಬಾ ಸ್ವಲ್ಪ ಈ ಸಾಂಬಾರಿಗೆ ಮಸಾಲೆ ರುಬ್ಬು " ಅಮ್ಮ ಕೂಗ್ತಾ ಇದ್ದರೆ , ನಾನು ಅಲ್ಲಿಂದ ಓಡಿ , ತೋಟದ ಮಧ್ಯದ ಹೊಳೆಯಲ್ಲಿನ   ಕಪ್ಪೆ , ಮೀನು ನೋಡುತ್ತ ಕುಳಿತುಬಿಡುತ್ತಿದ್ದೆ. ಅಕಸ್ಮಾತ್ ನನಗೆಲ್ಲಿಯಾದರೂ ಮೂಡು ಬಂದು ಅಮ್ಮ ಹೇಳಿದ ಕೆಲಸ ಮಾಡಲು ಹೊರಟರೂ , "ಪಾಪ ಮಗು ಕೈಯಲ್ಲಿ ಅದೆಲ್ಲ ಮಾಡಿಸಬೇಕಾ? ನಾನು ಮಾಡ್ತೀನಿ ಬಿಡು ಪುಟ್ಟ ನೀನು ಹೋಗು" ಅಂತ ಅಜ್ಜಿ ಹೇಳುತ್ತಿದ್ದರು!  ಕಾಲೇಜಿಗೆ ಹೋಗೋ ಮುದ್ದಿನ ಮೊಮ್ಮಗಳು ಯಾಕೆ ಕೈ ಸುಟ್ಟುಕೊಳ್ಳಬೇಕೆಂದು ಅವರ ಯೋಚನೆ.
 ಮನೆಯಲ್ಲಿ ಅಜ್ಜಿ , ಅಮ್ಮ, ಇಬ್ಬರು ಚಿಕ್ಕಮ್ಮಂದಿರು ಇದ್ದುದರಿಂದ ನನಗೆಂದೂ ಅಡುಗೆ ಮನೆಗೆ ಹೋಗುವ ಅನಿವಾರ್ಯತೆ  ಬರಲೇ ಇಲ್ಲ, ಮನಸ್ಸು ಮೊದಲೇ ಇರಲಿಲ್ಲವಾದ್ದರಿಂದ ಇಪ್ಪತ್ತು ವರ್ಷವಾದರೂ ಅನ್ನ ಮಾಡೋದು ಹೇಗೆಂದು ಕೂಡ ನನಗೆ ಗೊತ್ತಿರಲಿಲ್ಲ.  ಎಲ್ಲ ಅಮ್ಮಂದಿರಂತೆಯೆ ನನ್ನ ಅಮ್ಮ " ಅನ್ನ ಮಾಡಲೂ ಮಗಳಿಗೆ ಕಲಿಸದ ತಾಯಿ ಅಂತ ನನಗೆ ಕೆಟ್ಟ ಹೆಸರು ತರುತ್ತೀಯ ನೀನು ಮುಂದೆ ಗಂಡನ ಮನೆಯಲ್ಲಿ " ಅಂತ ಬೇಸರಿಸುತ್ತಿದ್ದರು.

ಹೀಗಿದ್ದಾಗಲೇ ಬಿ ಎಸ್ ಸಿ ಕೊನೇ ವರ್ಷದಲ್ಲಿದ್ದಾಗ ನನಗೆ ಮದುವೆ ನಿಶ್ಚಯವಾಯಿತು. ಅಮ್ಮನಿಗೋ ಆತಂಕ , ಏನೂ ಅಡುಗೆ ಬಾರದ ಮಗಳು ಗಂಡನ ಮನೆಯಲ್ಲಿ ಏನು ಮಾಡುತ್ತಾಳೋ ಎಂದು , ಗಂಡನಾಗುವವನು ಮತ್ತು ಅವರ ಅಮ್ಮನ ಬಳಿ ಈ ವಿಚಾರವನ್ನೂ ಹೇಳಿಯೂ ಬಿಟ್ಟರು ಅಮ್ಮ. ಆದರೆ ಅವರಿಬ್ಬರೂ ನಗುತ್ತಾ "ಇದ್ಯಾವ ದೊಡ್ಡ ವಿಷಯ ಬಿಡಿ ಸ್ವಲ್ಪ ದಿನಕ್ಕೆ ಕಲಿಯುತ್ತಾಳೇ" ಎಂದುಬಿಟ್ಟರಲ್ಲ , ನನಗೆ ತೂಕಡಿಸುವವರಿಗೆ ಹಾಸಿ ಕೊಟ್ಟಂತಾಯಿತು . ನಂತರ ಮದುವೆಯಾಗುವವರೆಗೂ ಅಮ್ಮ ಎಷ್ಟೇ ಗೊಣಗಿದರೂ ನಾನಂತೂ ಅಡುಗೆ ಮನೆಗೆ ಕಾಲೇ ಇಡಲಿಲ್ಲ.

ಮದುವೆಗೆ ಎರಡು ದಿನ ಹಿಂದಿನವರೆಗೂ ಕಾಲೇಜಿಗೆ ಹೋಗಿ , ಬರೆಯಬೇಕಾದ ರೆಕಾರ್ಡ್ ಎಲ್ಲ ಮುಗಿಸಿ ಸಬ್ಮಿಟ್ ಮಾಡಿ  ಅಂತೂ ಮದುಮಗಳ ಗೆಟಪ್ ಧರಿಸಿದ್ದಯಿತು , ಮದುವೆ ಪ್ರವೇಶ , ಹನಿಮೂನ್ ಎಂದು ಹದಿನೈದು ದಿನ ಕಳೆದದ್ದೇ ತಿಳಿಯಲಿಲ್ಲ.
ಅತ್ತೆ , ಮಾವ , ಅಕ್ಕ ಭಾವನವರು ಎಲ್ಲ ಇದ್ದ ಊರಿನ ಮನೆಯಿಂದ ಬೀಳ್ಕೊಂಡು ಗಂಡನ ಕರ್ಮಭೂಮಿ ಬೆಂಗಳೂರಿಗೆ ಬಂದದ್ದಾಯಿತು. ಇಲ್ಲಿಯೂ ಗಂಡನ ಅಣ್ಣ ಅತ್ತಿಗೆ ಜೊತೆಗೇ ಇದ್ದುದರಿಂದ ನಾನು ನಿಶ್ಚಿಂತೆಯಿಂದಲೇ ಇದ್ದೆ.  ತಿರುಗಾಟ , ಅಕ್ಕ ಭಾವನವರ ಪುಟ್ಟ ಮಗುವಿನೊಂದಿಗೆ ಆಟ , ಮದ್ಯೆ ನನ್ನ ಓದು ಇವುಗಳಲ್ಲಿ ಸಮಯ ಕಳೆದು ಹೋಗುತ್ತಿತ್ತು.
ಅಕ್ಕ ಅಡುಗೆ ಮಾಡುತ್ತಿದ್ದರೆ ಚಿಕ್ಕ ಪುಟ್ಟ ಸಹಾಯ ಮಾಡುವುದಷ್ಟೇ ನನ್ನ ಕೆಲಸವಾಗಿತ್ತು. ಹನ್ನೊಂದಕ್ಕೆ ಕುಕ್ಕರ್ ಇಡಬೇಕೆಂದರೆ ಅಕ್ಕ ನನ್ನನ್ನು ಹತ್ತಕ್ಕೇ ತರಕಾರಿ ಹೆಚ್ಚಲು ಕೂರಿಸಬೇಕಾಗುತ್ತಿತ್ತು ! ಅಷ್ಟು ಚುರುಕು ನಾನು !  ದೋಸೆ ಎರೆದರೆ ಕಾವಲಿಯ ಹೊರಗೇ ಹೆಚ್ಚು ಹಿಟ್ಟು ಬೀಳುತ್ತಿತ್ತು , ಚಪಾತಿ ಲಟ್ಟಿಸಿದರೆ ಪ್ರಪಂಚದ ನಕ್ಷೆ ! ಇಡ್ಲಿಗೆ ನೆನೆಸು ಎಂದರೆ ಇಡ್ಲಿ ರವೆ ನೆನೆಸಿ ಇಟ್ಟುಬಿಡುತ್ತಿದ್ದೆ! 

ಹೀಗಿದ್ದಾಗಲೆ ಸಂಪೂರ್ಣವಾಗಿ ನಾನೇ ಅಡುಗೆ ಮಾಡಬೇಕಾದ ಪ್ರಸಂಗ ಬಂದುಬಿಟ್ಟಿತು. ಅಕ್ಕ ಸ್ವಲ್ಪ ದಿನಗಳ ಮಟ್ಟಿಗೆ ಊರಿಗೆ ಹೊರಟರು . ಹೋಗುವ ಮೊದಲು ಎಲ್ಲವನ್ನೂ ವಿವರಿಸಿ , ತೋರಿಸಿ, ಹೋದರು. ಆದರೂ ಮಾಡುವಾಗ ನನಗೆ ನೂರ‍ೆಂಟು ಅನುಮಾನಗಳು ...ಭಾವನವರಿಗೆ ಅಡುಗೆ ಮಾಡಿ ಅಭ್ಯಾಸ ಇದ್ದುದರಿಂದ ಅವರನ್ನೇ ಕೇಳಿಕೊಂಡು ಹೇಗೋ ಮಾಡುತ್ತಿದ್ದೆ.

ಒಂದು ದಿನ ಯಜಮಾನರು ಬೆಂಡೆಕಾಯಿ ತಂದು ಸಾಂಬಾರ್ ಮಾಡು ಎಂದರು. ಅಮ್ಮ ಬೆಂಡೆಕಾಯಿ ಅಡುಗೆ ಮಾಡಿದಾಗ ತಿಂದೂ ಕೂಡ ಅಭ್ಯಾಸವಿರಲಿಲ್ಲ ನನಗೆ . ಇಲ್ಲಿ ಹಾಗೆ ಹೇಳೋದಿಕ್ಕೆ  ಆಗುತ್ತ? ಸರಿ ಎಂದೆ ,  ಎಲ್ಲಾ ತರಕಾರಿಗಳ ಸಾಂಬಾರ್ ಮಾಡುವಂತೆಯೆ ಅದನ್ನೂ ಮಾಡಿದೆ. ಕುದಿಯುವಾಗ ನೋಡಿದರೆ ಬೆಂಡೆಕಾಯಿ ಕರಗಿ ಗುಳ ಗುಳವಾಗಿದೆ , ಸಾಂಬಾರನ್ನು ಸೌಟಿನಲ್ಲಿ ತೆಗೆದರೆ  ಅಮ್ಮ ತಲೆಗೆ ಸ್ನಾನ ಮಾಡಿಸುವಾಗ ಹಾಕುತ್ತಿದ್ದ ಮತ್ತಿ ಸೊಪ್ಪಿನ ಗಂಪಿನಂತೆ  ಕಾಣುತ್ತಿದೆ ! ಏನು ಮಾಡಬೇಕೆಂದೆ ತಿಳಿಯದೆ ಕಣ್ಣು ಬಿಟ್ಟೆ. ಅಷ್ಟರಲ್ಲಿ ಊಟಕ್ಕೆಂದು ಮನೆಗೆ ಬಂದ ಯಜಮಾನರು ಮತ್ತು ಭಾವನವರು  ನನ್ನ ಮುಖ ನೋಡಿ ಏನೋ ಎಡವಟ್ಟಾಗಿದೆ ಎಂದು ಗ್ರಹಿಸಿದರು. ನಿಧಾನವಾಗಿ ನನ್ನ ಬೆಂಡೆಕಾಯಿ ಸಾಂಬಾರ್ ತಂದು ಅವರ ಮುಂದಿಟ್ಟೆ . ನೋಡಿ ಉಕ್ಕಿಬರುತ್ತಿದ್ದ ನಗು ತಡೆ ಹಿಡಿದುಕೊಂಡು ಬೆಂಡೆಕಾಯಿಯನ್ನು ಸ್ವಲ್ಪ ಹುರಿದು ಮಾಡಬೇಕಿತ್ತು , ಇರಲಿ ಬಿಡು ತೊಂದರೆ ಇಲ್ಲ , ಇನ್ನೊಮ್ಮೆ ಮಾಡುವಾಗ ನೆನಪಿಟ್ಟುಕೋ ಎಂದರು . ನಗೆ ಬೇಸರವಾಗಬಾರದೆಂದು ಕಷ್ಟಪಟ್ಟು  ನೀರಿನೊಂದಿಗೆ ನುಂಗುತ್ತಾ ಅವರಿಬ್ಬರೂ ಊಟ  ಮುಗಿಸಿದರು .  
ಅಷ್ಟೊಂದು ಕೆಟ್ಟದಾಗಿ ಅಡುಗೆ ಮಾಡುತ್ತಿದ್ದರೂ ನನ್ನ ಗಂಡನ ಮನೆಯವರ್ಯಾರೂ ನನಗೊಂದು ಮಾತೂ ಹೇಳದೆ ನನ್ನನ್ನು ಸಹಿಸಿದರು . ಕ್ರಮೇಣ ನನಗೂ ಅಡುಗೆ ಅಭ್ಯಾಸವಾಯ್ತು . ದೋಸೆಯನ್ನು  ಕಾವಲಿಯ ಮೇಲೆ ಮಾಡೋದನ್ನು ಚಪಾತಿಯನ್ನು ಚಂದ್ರನಂತೆ ಲಟ್ಟಿಸುವುದನ್ನು , ಇಡ್ಲಿಯನ್ನು ಮಲ್ಲಿಗೆ ಹೂವಿನಂತೆ ಮಾಡೋದನ್ನು ನಾನೂ ಕಲಿತುಕೊಂಡೆ.
ಅಂದಹಾಗೆ ಬೆಂಡೇಕಾಯಿ ಈಗ ನನ್ನ ಫೇವರೇಟ್ ತರಕಾರಿ !


೧೭-೨-೨೦೧೨ ರ ವಿಜಯ ನೆಕ್ಸ್ಟ್ ಪೇಪರ‍್ನ "ಫಸ್ಟ್ ಟ್ರೈ" ಅಂಕಣದಲ್ಲಿ ಪ್ರಕಟವಾದ ಬರಹ.

5 comments:

 1. ನಡೆವರೆಡವದೆ ಕುಳಿತರೆಡುವಹರೆ ಎಂದು ರಾಘವಾಂಕನೇ ಹೇಳಿಲ್ಲವೆ!

  ReplyDelete
 2. ಒಳ್ಳೆಯ ಬರಹ ಮೇಡಂ.

  ನಾವು ಸಂಸಾರ ಶುರೂ ಮಾಡಿದಾಗಲೂ ಇಂತಹ ಎಡವಟ್ಟುಗಳು ಆಗುತ್ತಿದ್ದವು. ಒಮ್ಮೆ ಚಪಾತಿ ಗಟ್ಟಿಯಾಗಿ ಅದನ್ನು ಕುಕ್ಕರಿನಲ್ಲಿ ಇಟ್ಟು ವಿಷಲ್ ಸಹ ಕೂಗಿಸಿದ್ದೆವು!

  ನನ್ನ ಬ್ಲಾಗಿಗೂ ಸ್ವಾಗತ.

  ReplyDelete
 3. ಹಾ ಹಾ..ಚೆನ್ನಾಗಿದೆ..ಅಡುಗೆ ಡೆಬುಟ್ ನಾ ಕಥೆ..ನನ್ನ ಅಮ್ಮನೂ ಇದೇ ತರ ಮೊದಲ ಸಲಾ ಮಾಡಿದ ಪಂಚಕಜ್ಜಾಯ ಲಾಡು ಉಂಡೆಯಾದ ಕಥೆ ಹೇಳಿದ್ದು ನೆನಪಾಯ್ತು...ಚೆನಾಗಿದೆ..ಬನ್ನಿ ನಮ್ಮನೆಗೂ,
  http://chinmaysbhat.blogspot.in

  ಇತಿ ನಿಮ್ಮನೆ ಹುಡುಗ,
  ಚಿನ್ಮಯ ಭಟ್

  ReplyDelete
 4. Madam too good ..
  me too belong to ur group only....
  i couln't control myself...

  ReplyDelete