21 Dec 2012

ಹುಲಿಸಾಲಿಂಗ ((Indian Ornamental Tree Spider)

ಚಿತ್ರ ಕೃಪೆ : ಅಂತರ್ಜಾಲ 

ಸುಮಾರು ಇಪ್ಪತ್ತು ವರ್ಷ ಹಿಂದಿನ ಘಟನೆ ....ಚಳಿಗಾಲದ ರಾತ್ರಿ ...ಅಡಿಕೆ ಕೊಯಿಲಿನ ಕಾಲ. ಅಂಗಳದಲ್ಲಿ ಹಾಕಿದ ಅಡಿಕೆ ಅಟ್ಟದ ಕೆಳಗೆ ಮನೆಯವರೆಲ್ಲ ಅಡಿಕೆ ಸುಲಿಯುತ್ತಿದ್ದರು.
ಕಣ್ಣುಗಳು ಮುಚ್ಚಿಹೋಗುವಂತೆ ನಿದ್ದೆ ಬರುತ್ತಿದ್ದರೂ ಅಡಿಕೆ ಸುಲಿಯುವವರ ಸ್ವಾರಸ್ಯಕರವಾದ ಮಾತುಕತೆ ತಪ್ಪಿಹೋಗುತ್ತದಲ್ಲ ಎಂಬ ಬೇಸರದಲ್ಲಿ ನಾನು ಕುಳಿತೇ ಇದ್ದೆ. ಸ್ವಲ್ಪ ಹೊತ್ತಿನ ಹಿಂದೆ   ಇಲ್ಲೆ  ನನಗಂಟಿ ಕುಳಿತು ನಿದ್ದೆಹೋಗಿದ್ದ ತಂಗಿಯನ್ನು ಅಮ್ಮ ಮಹಡಿಯ ರೂಮಿನಲ್ಲಿ ಮಲಗಿಸಿ ಬಂದಿದ್ದರು. ನೀನೂ ಮಲಗು ಬಾ ಎಂದರೂ ಕೇಳದೆ ಕುಳಿತಿದ್ದೆ ನಾನು. ಈಗ ಅಲ್ಲೇ ತೂಕಡಿಸುವುದನ್ನು ನೋಡಿದ ಅಜ್ಜ ," ಮಲಗು ಹೋಗು ಪುಟ್ಟಿ ಬೆಳಗ್ಗೆ ಮಾರ್ನಿಂಗ್ ಕ್ಲಾಸ್ ಅಲ್ದನೇ ಬೇಗ ಸ್ಕೂಲಿಗೆ ಹೋಗಕ್ಕು ಅಲ್ದಾ...ಮಲಗು ಹೋಗು "ಎಂದರು.
ಎಲ್ಲರೂ ಅದನ್ನೇ ಹೇಳಿದಾಗ ಮನಸ್ಸಿಲ್ಲದ ಮನಸ್ಸಿನಿಂದ ...ಮಹಡಿಯ ಮೆಟ್ಟಿಲೇರಿದೆ. ರೂಮಿನಲ್ಲಿ ತಂಗಿಯನ್ನು ಮಲಗಿಸಿದ ಅಮ್ಮ  ಅವಳಿಗೆ ಎಚ್ಚರವಾದರೆ ಕತ್ತಲೆಗೆ ಹೆದರಿಯಾಳೆಂದು ಲೈಟ್ ಆರಿಸಿರಲಿಲ್ಲ.  ರೂಮಿಗೆ ಬಂದು ಗೊರಕೆ ಹೊಡೆಯುತ್ತಾ ಮಲಗಿದ್ದ ತಂಗಿಯ ಪಕ್ಕದಲ್ಲಿ ಉರುಳಿಕೊಂಡು ಬೆಚ್ಚನೆಯ ರಗ್ ಹೊದೆಯುವಾಗ ನನ್ನ ದೃಷ್ಟಿ  ಕಿಟಕಿಯತ್ತ ಹೋಯಿತು ... ...ಕಿರುಚುವುದಕ್ಕೂ ಸಾಧ್ಯವಾಗದೆ ಭಯದಿಂದ ಅದನ್ನು ನೋಡಿದೆ. ಮಲಗಿದ್ದ ತಂಗಿಯ ಪಕ್ಕದಲ್ಲಿದ್ದ ಕಿಟಕಿಯ ಬಾಗಿಲಲ್ಲಿ  ದೈತ್ಯ ಜೇಡವೊಂದು ಇತ್ತು!!
ಸುಮಾರು ಅಪ್ಪನ ಅಂಗೈ ಬಿಚ್ಚಿದರೆ ಆಗುವಷ್ಟು ಅಗಲದ , ದಪ್ಪ ಎಂಟು ಕಾಲುಗಳ ತುಂಬ ಕೂದಲಿನ ಆ ಜೇಡವನ್ನು ನೋಡಿ ಏನು ಮಾಡಬೇಕೆಂದೇ ತೋಚಲಿಲ್ಲ. ಸ್ವಲ್ಪ ದಿನದ ಹಿಂದಷ್ಟೇ ಅದರ ಬಗ್ಗೆ ಕೆಲಸದಾಳುಗಳು ಮಾತನಾಡಿಕೊಳ್ಳುವುದು ಕೇಳಿದ್ದೆ. ಹುಲಿಸಾಲಿಂಗ ಎಂಬ ಹೆಸರಿನ   ದೈತ್ಯ ಜೇಡವೊಂದನ್ನು ತೋಟದಲ್ಲಿ ನೋಡಿದ್ದಾಗಿಯೂ ಅದು ಕಚ್ಚಿದರೆ ಔಷಧಿಯೇ ಇಲ್ಲ ಸಾವೆ ಗತಿ ಎಂದೂ, ಅವರು ಮಾತನಾಡುತ್ತಿದ್ದರು.
ಈಗ ನೋಡಿದರೆ ಅದು ಇಲ್ಲೆ ಇತ್ತು!!.  ಮಲಗಿದ್ದ ತಂಗಿಯನ್ನು ಎಬ್ಬಿಸಿದರೆ ಕುಂಭಕರ್ಣನ ಜಾತಿಗೆ ಸೇರಿದ ಅವಳು  ಪಕ್ಕಕ್ಕೆ ತಿರುಗಿ  ಇನ್ನಷ್ಟು ಜೋರಾಗಿ ಗೊರಕೆ ಹೊಡೆಯಲು ಪ್ರಾರಂಭಿಸಿದಳು.
ಇದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಜೋರಾಗಿ ಅಪ್ಪ ಅಮ್ಮನನ್ನು ಕರೆದೆ.  ಅಡಿಕೆ ಸುಲಿಯುವ ಶಬ್ದ , ಸುಲಿಯುವವರ ಮಾತಿನ ಶಬ್ದದ ನಡುವೆ ನನ್ನ ಕೂಗು ಅವರ್ಯಾರಿಗೂ ಕೇಳಲೇ ಇಲ್ಲ  .
ಏನು ಮಾಡಲಿ ಈಗ ....ಎದ್ದು ಹೋದರೆ ಪಕ್ಕದಲ್ಲೇ ಮಲಗಿರುವ ತಂಗಿಗೆ ಅದು ಕಚ್ಚಿಬಿಟ್ಟರೆ ...ಇರುವುದು ಒಬ್ಬಳೇ ತಂಗಿ ನನಗೆ ....ಅಳು ಬಂತು ಜೋರಾಗಿ ಅಳಲು ಪ್ರಾರಂಭಿಸಿದೆ... ಹುಲಿಸಾಲಿಂಗ ಸ್ವಲ್ಪ ಚಲಿಸಿದಂತಾಯಿತು . ಇನ್ನು ತಡ ಮಾಡುವಂತಿರಲಿಲ್ಲ . ನಿಧಾನವಾಗಿ ಎದ್ದು ರೂಮಿನಿಂದ ಹೊರಬಂದು ಒಂದೇ ಹಾರಿಗೆ ಮೆಟ್ಟಿಲ ಬಳಿ ಬಂದು ಜೋರಾಗಿ ಕಿರುಚಿದೆ. ಮನೆಯವರೆಲ್ಲರೂ ಓಡಿ ಬಂದರು . ಅಮ್ಮ ಮೊದಲು ಮಲಗಿದ್ದ ತಂಗಿಯನ್ನು ಎತ್ತಿಕೊಂಡು ಈಚೆ ಬಂದರು. ಅಪ್ಪ , ಚಿಕ್ಕಪ್ಪ ಸೇರಿ ಅದು ಹೇಗೋ ಆ ಜೇಡವನ್ನು ಅಲ್ಲಿಂದ ಓಡಿಸಿದರು.
ಆದರೆ ಸುಮಾರು ದಿನಗಳ ಕಾಲ ನಾನು ಮತ್ತು ತಂಗಿ ಆ ರೂಮಿನಲ್ಲಿ ಮಲಗುತ್ತಿರಲಿಲ್ಲ.

ಇಷ್ಟೆಲ್ಲ ವರ್ಷಗಳ ಕಾಲ ಈ ಘಟನೆ ನನಗೆ ಮರೆತೇ ಹೋಗಿತ್ತು. ಮೊನ್ನೆ ವಿಕಾಸ್ ಹೆಗಡೆ ಈ ಹುಲಿಸಾಲಿಂಗದ ಫೋಟೊ ಒಂದನ್ನು ಕಳಿಸಿ ಇದರ ಬಗ್ಗೆ ಬರಿ ಸುಮಕ್ಕ ಎಂದಾಗ ಅಂದಿನ ಘಟನೆ ನೆನಪಾಗಿ ಒಂದು ಕ್ಷಣ ಬೆಚ್ಚಿದೆ.

Poecilotheria regalis ಎಂಬ ವೈಜ್ಞಾನಿಕ ಹೆಸರಿನ ಈ ಜೇಡ ದೈತ್ಯಗಾತ್ರದ ಕೂದಲುಳ್ಳ ಜೇಡಗಳನ್ನುಳ್ಳ Tarantulas ಎಂಬ ಗುಂಪಿಗೆ ಸೇರಿದೆ.  ಹೆಚ್ಚಾಗಿ ಮರದಲ್ಲಿ ವಾಸಿಸುವ ಈ ಗುಂಪಿನ ಜೇಡಗಳು , ಅಮೇರಿಕಾ , ಆಫ್ರಿಕಾ , ಆಷ್ಟ್ರೇಲಿಯಾ, ಏಷಿಯಾ ಖಂಡಗಳಲ್ಲಿ ಕಾಣಿಸುತ್ತವೆ.  ನಮ್ಮ ದೇಶದ ಪಶ್ಚಿಮಘಟ್ಟ ಸಾಲು , ಈಶಾನ್ಯ ರಾಜ್ಯಗಳಲ್ಲಿ  ಈ ಹುಲಿಸಾಲಿಂಗ ಹೆಚ್ಚಾಗಿ ಇವೆ. ಇದರ ದೈತ್ಯ ಗಾತ್ರ , ದಪ್ಪನೆಯ ಬಲಿಷ್ಟ ಎಂಟು ಕಾಲುಗಳು , ಉದ್ದನೆಯ ಕೂದಲುಗಳು , ಕೆಲವು ಕಡೆ ಇರುವ ಉಜ್ವಲ ಹಳದಿ ಬಣ್ಣದ ಪಟ್ಟೆಗಳು ಇದರ ಬಗ್ಗೆ  ಅಗತ್ಯಕ್ಕಿಂತ ಹೆಚ್ಚಿನ ಭಯ ಹುಟ್ಟಿಸುತ್ತದೆ.

ಎತ್ತರದ ಮರಗಳಲ್ಲಿ ಇವುಗಳ ವಾಸ. ಹಾರುವ ಕೀಟಗಳು ಇವುಗಳ ಮುಖ್ಯ ಆಹಾರ.  ಆಹಾರಕೀಟದ ದೇಹದೊಳಗೆ ತಮ್ಮ ಕಿಣ್ವಗಳನ್ನು  ಸ್ರವಿಸಿ ಅದರ ಅಂಗಾಂಗಗಳನ್ನು ದ್ರವರೂಪಕ್ಕಿಳಿಸಿ ನಂತರ ಆ ಜೀವದ್ರವ್ಯವನ್ನು ಹೀರುವ ವ್ಯವಸ್ಥೆ ಇದರ ಜೀರ್ಣಾಂಗ ವ್ಯೂಹದಲ್ಲಿದೆ .

ತುಂಬ ವೇಗವಾಗಿ ಚಲಿಸುವ ಸಾಮರ್ಥ್ಯವಿದೆ. ದೇಹದ ತುಂಬೆಲ್ಲ ಇರುವ   ಸೂಕ್ಷ್ಮ ಕೂದಲುಗಳು ಇವುಗಳ ಸ್ಪರ್ಶಾಂಗದಂತೆ ಕಾರ್ಯ ನಿರ್ವಹಿಸುತ್ತವೆ .ಸುತ್ತಲಿನ ಗಾಳಿಯ ಚಲನೆಯಿಂದ ಆಹಾರದ ಇರುವಿಕೆ ಮತ್ತು ಶತ್ರುಗಳ ಸುಳಿವನ್ನು ಕಂಡುಕೊಳ್ಳುವ ಸಾಮರ್ಥ್ಯ ಕೂದಲುಗಳದ್ದು.  ಅಪಾಯವೆನ್ನಿಸಿದಾಗ ತುಂಬ ಸಿಟ್ಟಿನಿಂದ ದೇಹವನ್ನು ಹೋರಾಟಕ್ಕೆ ಸಜ್ಜುಗೊಳಿಸಿಕೊಂಡು ಕಚ್ಚುತ್ತದೆ. ಇದರಲ್ಲಿ ವಿಷ ಇದೆಯಾದರೂ ಮಾನವರಿಗೆ ಸಾವನ್ನು ತರುವಷ್ಟು ತೀವ್ರ ವಿಷವೇನೂ ಇಲ್ಲ. ಆದರೂ ತುಂಬ ಉರಿ ಮತ್ತು ನೋವನ್ನು ಉಂಟು ಮಾಡುತ್ತದೆ. ಕಚ್ಚಿಸಿಕೊಂಡವರು ಹೇಳುವ ಪ್ರಕಾರ ಕೈ ಕಾಲು ಮುರುಟಿಕೊಂಡಂತೆ ಆಗುತ್ತದೆ .  ಗಂಟುಗಳು ಸರಿಯಾಗಲು ಕೆಲ ಕಾಲ ಬೇಕಾಗುತ್ತದೆ.  ಅಲರ್ಜಿ ಉಂಟಾಗಬಹುದು.

ಗಿಳಿ , ಮೀನು , ಬೆಕ್ಕು ಸಾಕುವಂತೆಯೆ ಜೇಡಗಳನ್ನ  ಅಲಂಕಾರಿಕವಾಗಿ ಸಾಕುವವರಿದ್ದಾರೆ.ನಮ್ಮ ದೇಶದ ಈ ಸುಂದರವಾದ ದೈತ್ಯ ಈಗ ಜಗತ್ತಿನಾದ್ಯಂತ ಜೇಡವನ್ನು ಪ್ರೀತಿಯಿಂದ ಸಾಕುವವರ ಗಮನ ಸೆಳೆದಿದೆ. ಈ ಜೇಡಕ್ಕೀಗ ಉಳಿದೆಲ್ಲ ಜೇಡಗಳ ನಡುವೆ ಆಗ್ರ ಸ್ಥಾನ . ಆದರೆ ಇದರ ಸ್ಪೀಡ್ ಮತ್ತು ಅಗ್ರೆಸಿವ್ ಗುಣಗಳಿಂದಾಗಿ ಹೊಸದಾಗಿ ಜೇಡಗಳನ್ನು ಸಾಕುವ ಹವ್ಯಾಸ  ಬೆಳಿಸಿಕೊಳ್ಳುತ್ತಿರುವವರಿಗೆ ಇದನ್ನು ಸಾಕುವುದು ಕಷ್ಟವಾಗುತ್ತದಂತೆ. ಬೇರೆ ಜೇಡಗಳನ್ನು ಸಾಕಿ ಅನುಭವ ಹೊಂದಿದವರು ಮಾತ್ರ ಇದನ್ನು ಸಾಕುವ ಧೈರ್ಯ ಮಾಡಬಹುದಂತೆ !!

ನಮ್ಮ ಪಶ್ಚಿಮಘಟ್ಟಗಳಲ್ಲಿ ಈಗಾಗಲೇ ಇದರ ಸಂಖ್ಯೆ ಕ್ಷೀಣಿಸಿದೆ. ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದಾಗಿ ಕಂಡಕೂಡಲೇ ಸಾಯಿಸುವವರೇ ಹೆಚ್ಚು . ಕೀಟನಾಶಕಗಳು , ನಗರೀಕರಣ , ಅಕ್ರಮ ಸಾಗಾಣಿಕೆ  ಮೊದಲಾದವುಗಳು  ಇನ್ನಿತರ ಕಾರಣಗಳು. 

 

 

 

 

 

 

 

 


 

 

 

 

 

 

 


 5 comments:

 1. ನಿಮ್ಮ ಬರಹಗಳು ತುಂಬಾ ಚಂದ ಇವೆ ಸುಧಾ ಮೇಡಮ್. ನಮ್ಮ ವಿಜಯ ನೆಕ್ಸ್ಟ್'ನಲ್ಲಿ ಪ್ರಕಟವಾದ ನಿಮ್ಮ ಕಥೆಯೂ ಚಂದಿತ್ತು. ನಿಮ್ಜೊತೆ ಮಾತಾಡಬೇಕು ಅಂದುಕೊಂಡೆ. ಆದರೆ ಕಾಂಟಾಕ್ಟ್ ಸಿಗಲಿಲ್ಲ. ಅದಕ್ಕೇ ಈ ಕಮೆಂಟ್...ಹೀಗೇ ಬರೀತಾ ಇರಿ..ನಾವ್ ಓದ್ತಾ ಇರ್ತೀವಿ..
  -ಸಹ್ಯಾದ್ರಿ ನಾಗರಾಜ್, ವಿಜಯ ಕರ್ನಾಟಕ ದೈನಿಕ(8722631300)

  ReplyDelete
  Replies
  1. Thank you Nagaraj . nanna mail id - sumaks77@gmail.com

   Delete
 2. ಮನೆಯ ಮಾಳಿಗೆಯಲ್ಲಿ, ಮೂಲೆಯಲ್ಲಿ ತನ್ನ ಅಂಟಿನಿಂದ ಪರದೆಯನ್ನು ಕಟ್ಟಿ..ಮನೆಗೆ ಬರುವವರಿಗೆ ಮನೆಯ ಗೋಡೆಗಳನ್ನು ಸ್ವಚ್ಛ ಮಾಡಿ ಶತಮಾನಗಳಾದವು ಎನ್ನುವ ಆಪಾದನೆ ಹೊರೆಸುವ ಈ ಸಣ್ಣ ಕೀಟಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನಿಜಕ್ಕೂ ಮನಸೆಳೆಯಿತು. ಮಾನವ ಎಷ್ಟೇ ಪ್ರಬುದ್ಧನಾದರು ಪ್ರಕೃತಿ ತನ್ನ ಗರ್ಭದೊಳಗೆ ಎಸ್ಟೊಂದು ವಿಸ್ಮಯಕಾರಿ ಸಂಗತಿಗಳನ್ನು
  ಇಟ್ಟುಕೊಂಡಿರುತ್ತೆ..ಅದನ್ನು ಎಷ್ಟು ಸವಿವರವಾಗಿ ಉಣಬಡಿಸುವ ನಿಮ್ಮ ಲೇಖನಗಳು ನಿಜಕ್ಕೂ ಸುಮಧುರ..ಅಭಿನಂದನೆಗಳು

  ReplyDelete
 3. ಸಖತ್ತಾಗಿದ್ದು ಸುಮಕ್ಕ.. ಕುತೂಹಲಕಾರಿ ಮತ್ತು ಉಪಯುಕ್ತ ಮಾಹಿತಿ.
  ಪತ್ರಿಕೆಯಲ್ಲಿ ಲೇಖನ ಪ್ರಕಟ ಆಗಿದ್ದಕ್ಕೂ ಅಭಿನಂದನೆ :-)

  ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯ ಕೂಡ :-) :-)

  ReplyDelete
 4. ಹುಲಿಸಾಲಿಂಗದ ಬಗ್ಗೆ ಕೇಳಿದ್ದೆ ಹೊರತು ಅದರ ಬಗ್ಗೆ ವಿವರ ಗೊತ್ತಿರಲಿಲ್ಲ ...ಚೆನ್ನಾಗಿ ವಿವರಿಸಿದ್ದೀರಿ ...ಅಭಿನಂದನೆಗಳು .

  ReplyDelete