22 Sept 2013

ಹಾದಿ ಬದಿಯ ಸುಂದರಿಯರು

ಈ ಬಾರಿ  ಮಳೆ ಚೆನ್ನಾಗಿಯೆ ಬರುತ್ತಿದೆ . ಹಾಗಾಗಿ ಬೀದಿ ಬದಿಯಲ್ಲಿ , ಖಾಲಿ ಜಾಗಗಳಲ್ಲಿ ಕಳೆ ಗಿಡಗಳು ಹಚ್ಚ ಹಸಿರಿನಿಂದ ಹುಲುಸಾಗಿ ಬೆಳೆದಿವೆ. ಈಗ ಸ್ವಲ್ಪ ಬಿಸಿಲಾಗುತ್ತಿದ್ದಂತೆ ಈ ಗಿಡಗಳಿಗೆಲ್ಲ ಯೌವ್ವನೋತ್ಸಾಹ . ಬಗೆ ಬಗೆಯ ಹೂವುಗಳಿಂದ ಕಂಗೊಳಿಸುತ್ತಿವೆ. ನೀವು ಪುರಸ್ಕರಿಸದಿದ್ದರೇನು ? ಬದಿಗೆ ತಳ್ಳಿದರೇನು ? ನಮ್ಮನ್ನು ಗಮನಿಸುವವರು ಬೇರೆಯೆ ಇದ್ದಾರೆ , ಅವರಿಗೆ ನಾವು ಆಕರ್ಷಣೆಯ ಕೇಂದ್ರಬಿಂದುಗಳು ಎಂಬಂತೆ ಮಾನವರಿಗೆ ಸವಾಲು ಹಾಕುತ್ತಿವೆ ಈ ಕಳೆ ಗಿಡಗಳು.











ಇಲ್ಲಿ ನಾವು ವಾಕಿಂಗ್ ಹೋಗುವ ದಾರಿಯ ಬದಿಯಲ್ಲಿ ಉದ್ದಕ್ಕೂ ಒಂದು ರೀತಿಯ ಕಳೆ ಗಿಡ ಬೆಳೆದಿದೆ. ಈ ಗಿಡವನ್ನು ನೋಡಿದಾಗ ಪ್ರಕೃತಿಯೆಂಬ ಮಹಾತಾಯಿಯ ಸೃಷ್ಟಿಯ ಬಗ್ಗೆ  ಆಶ್ಚರ್ಯವಾಗುತ್ತದೆ.


ಸುಮಾರು ಒಂದೂವರೆ ಎರಡಡಿ ಎತ್ತರ ಬೆಳೆಯುವ ಗಿಡವಿದು. ವಿಶೇಷವಿರುವುದು ಇದರ ಎಲೆಗಳ ರಚನೆಯಲ್ಲಿ.  ದೊಡ್ಡ ಗಾತ್ರದ ಎಲೆಗಳ ಅಂಚು "ವಿ" ಆಕಾರದ ಚೂಪಾದ ಮುಳ್ಳುಗಳಾಗಿ ಮಾರ್ಪಾಡಾಗಿದೆ. ಮುಟ್ಟಲು ಹೋದರೆ ಚೂಪಾದ ಈ ಮುಳ್ಳುಗಳು ರಕ್ತ ಬರುವಂತೆ ಚುಚ್ಚುತ್ತವೆ. ಅಲ್ಲದೆ ಎಲೆಗಳ ಮೇಲೆ ಬಿಳಿಯ ಬಣ್ಣದ ಗೆರೆಗಳಿವೆ. ಈ ಮುಳ್ಳುಗಳು ಮತ್ತು ಬಿಳಿಯ ಬಣ್ಣ ಎರಡೂ ಸೇರಿ ಗಿಡಕ್ಕೆ ಒಂದು ರೀತಿಯ ಭಯಂಕರ ರೂಪ ನೀಡಿದೆ. ಸಾಮಾನ್ಯವಾಗಿ ತನ್ನನ್ನು ತಿನ್ನಲು ಬರುವ ಜಾನುವಾರುಗಳಿಂದ ರಕ್ಷಣೆಗೆ , ತನ್ನನ್ನು ಕಡಿದು ಎಸೆಯುವ ಮಾನವನ ವಿರುದ್ಧ ರಕ್ಷಣೆಗೆ ಈ ರೀತಿಯ ಅನೇಕ ಉಪಾಯಗಳನ್ನು ಕಳೆಗಿಡಗಳು ಅನುಸರಿಸುತ್ತವೆ.







ಇಂತಹ ಭಯಂಕರ ರೂಪದ ಗಿಡದ ಹೂವು ತುಂಬ ಸುಂದರವಾಗಿದೆ  . ಹಳದಿ ಬಣ್ಣದ ಸುಕೋಮಲವಾದ ಈ ಹೂವು ಕೀಟಗಳನ್ನು ಆಕರ್ಷಿಸುತ್ತದೆ.  ಹೂವಿನ ಮಕರಂದ ಹೀರುವ ಕೀಟಗಳು ಪರಾಗಸ್ಪರ್ಶಕ್ರಿಯೆ ನಡೆಸಿ ಬೀಜೋತ್ಪತ್ತಿಗೆ ಕಾರಣವಾಗುತ್ತದೆ. ಮುಳ್ಳಿನಿಂದ ಕೂಡಿದ ಕಾಯಿ ಬಲಿತ ಮೇಲೆ ಬಿರಿದು ಬೀಜಪ್ರಸರಣ ನಡೆಯುತ್ತದೆ. ಮತ್ತೆ ಮುಂದಿನ ಮಳೆಗಾಲದವರೆಗೂ ಮಣ್ಣಿನಲ್ಲಿ ನಿದ್ರಾವಸ್ಥೆಯಲ್ಲಿರುವ ಬೀಜಗಳು ಮಳೆ ಪ್ರಾರಂಭವಾಗುತ್ತಿದ್ದಂತೆ ಮೊಳಕೆಯೊಡೆದು ಹೊಸ ಗಿಡಗಳು ಹುಟ್ಟುತ್ತವೆ.

  beauty & the beast 

ಈ ಗಿಡಕ್ಕೆ ನನ್ನ ಮಗಳು ಕೊಟ್ಟ ಹೆಸರು " beauty & the beast  "

7 comments:

  1. ಇಡೀ ನನ್ನ ಹಳ್ಳಿಯ ಪರಿಸರವನ್ನು ನೆನಪು ಮಾಡಿಕೊಟ್ಟ ನಿಮಗೆ ಉಧೋ ಉಧೋ...
    ಒಳ್ಳೆಯ ಸಚಿತ್ರ ಲೇಖನ.
    http://badari-poems.blogspot.in/

    ReplyDelete
  2. ಹಳದಿ ಹೂಗಳ ಪಕಳೆಗಳನ್ನು ಊದಿದಾಗ ಪೀಪಿಯ ಥರ ಶಬ್ದ ಬರುತ್ತದೆ.
    ನಮ್ಮ ಶಾಲೆಯ ಹತ್ತಿರ ಇದ್ದ ಗಿಡದಲ್ಲಿ ಹೂಗಳನ್ನು ತಿರಿದು ನಾವಿದನ್ನೇ ಮಾಡುತ್ತಿದ್ದುದು.
    ಚೆನ್ನಾಗಿದೆ

    ReplyDelete
  3. ಹೌದು ಈ ಗಿಡ ತುಂಬಾ ಚೆನ್ನಾಗಿರುತ್ತೆ. ನಮ್ಮ ಮನೆಹತ್ತಿರ ತುಂಬಾ ಬಿಡ್ತಾ ಇದ್ವು. ಸದಾ ನೀವು ಪರಿಸರ ಪ್ರೇಮಿ

    ReplyDelete
  4. ಎಂತಹ ಸುಂದರವಾದ ಹೂವುಗಳು! ಚಿತ್ರಲೇಖನಕ್ಕಾಗಿ ಧನ್ಯವಾದಗಳು.

    ReplyDelete
  5. ನಿಮ್ಮ ಬ್ಲಾಗ್ ಶೀರ್ಷಿಕೆ ನೋಡುವಾಗಲೇ ಮನಸು ಮುದಗೊಳ್ಳುತ್ತೆ...ಹಸಿರು ಭತ್ತದ ಪೈರು.
    ಕೆಳಗೆ ಬಂದ್ರೆ ಅದೋ ಇನ್ನಷ್ಟು ಖುಷಿ../ಸುಂದರ ಚಿತ್ರಗಳು...

    ReplyDelete
  6. ಸುಂದರ ಚಿತ್ರಗಳು

    ReplyDelete