26 Nov 2013

ಹೆಸರಿನಲ್ಲೇನಿದೆ?

ಹೆಸರಿನಲ್ಲೇನಿದೆ ಸ್ವಾಮಿ ಎಂದು ಕೇಳೋರನ್ನ ನೋಡಿರ್ತೀರಲ್ಲ . ನಂಗೆ ಈ ಮಾತು ಮಾತ್ರ ಇಲ್ಲಿಯವರೆಗೆ ಅರ್ಥವೇ ಆಗಿಲ್ಲ . ಹೆಸರಿನಲ್ಲೇ ಅಲ್ಲವೆ ಎಲ್ಲವೂ ಇರುವುದು . ಅದಿಲ್ಲವಾದರೆ ಇಷ್ಟೊಂದು ವೈವಿಧ್ಯಮಯ ಹೆಸರುಗಳಾದರೂ ಏಕಿರುತ್ತಿದ್ದವು ? ಎಲ್ಲರಿಗೂ ಎ,ಬಿ , ಸಿ  , ಡಿ ಎಂದೋ ಅಥವಾ ಅ , ಆ, ಇ ,ಈ ಎಂದೋ ಇಡಬಹುದಿತ್ತಲ್ಲ .

ಮೊದಲೆಲ್ಲ ಹೆಸರುಗಳು ಎಷ್ಟು ಸರಳವಾಗಿರುತ್ತಿದ್ದವು ಅಲ್ಲವೆ.  ಹಿರಿಯ ಮಗು ಗಂಡಾದರೆ ಅದರ ಅಜ್ಜನ ಹೆಸರು , ಹೆಣ್ಣಾದರೆ ಅದರ ಅಜ್ಜಿಯ ಹೆಸರು ಇನ್ನುಳಿದ ಮಕ್ಕಳಿಗೆ ಮನೆದೇವರ ಅಥವಾ ದೇವಿಯ ಹೆಸರು ( ಎಲ್ಲಾ ದೇವರುಗಳಿಗೂ ಶತ , ಸಹಸ್ರ ನಾಮಾವಳಿಗಳು ಇರುವುದರಿಂದ ಎಷ್ಟು ಮಕ್ಕಳಾದರೂ ದೇವರ ಹೆಸರಿಗೆ ಕೊರತೆಯಾಗುತ್ತಿರಲಿಲ್ಲ ಬಿಡಿ .)

ಆದರೆ ನಿಧಾನವಾಗಿ ಕಾಲ ಬದಲಾಯಿತು . ಕುಟುಂಬ ಯೋಜನೆಯೆಂಬುದು ಸಂಸಾರಗಳಲ್ಲಿ ಸಾಮಾನ್ಯವಾದಾಗ ಮಕ್ಕಳ ಸಂಖ್ಯೆ ಎರಡಕ್ಕೆ ಸೀಮಿತವಾಯಿತು . ಆಗ ಸಹಜವಾಗಿ ಮಕ್ಕಳ ಬಗ್ಗೆ ಗಮನವೂ ಹೆಚ್ಚಿತು . ಹೆಸರು ಇಡುವುದರಲ್ಲೂ ಪೈಪೋಟಿ ಪ್ರಾರಂಭವಾಯಿತು.
ನನ್ನ ಬಾಲ್ಯದಲ್ಲಾಗಲೇ ಹೊಸ ಹೊಸ ಹೆಸರುಗಳನ್ನು ಇಡುವ ಪದ್ಧತಿ ಪ್ರಾರಂಭವಾಗಿತ್ತು. ಅಂತದ್ದರಲ್ಲಿ ನನ್ನ ಹೆಸರು ಹೇಳಿಕೊಳ್ಳುವಷ್ಟು ನವೀನವಾಗಿದ್ದೇನಾಗಿರಲಿಲ್ಲ. ಕ್ಲಾಸಿನಲ್ಲಿ ಒಂದಿಬ್ಬರಾದರೂ ಸುಮಗಳು ಇರುತ್ತಿದ್ದರು . ಹಾಗಾಗಿ ನನಗೆ ಎಷ್ಟೋ ಬಾರಿ ಬೇರೆ ಹೆಸರಿರಬಾರದೆ ಎನ್ನಿಸಿದ್ದುಂಟು. ಇನ್ನು  ಹಳೆಯ ಕಾಲದ ಹೆಸರು ಇದ್ದ ಕೆಲವು ಗೆಳತಿಯರಂತೂ ತಮ್ಮ ಹೆಸರನ್ನು ಹೇಳಲು ಮುಜುಗರ ಅನುಭವಿಸುತ್ತಿದ್ದುದನ್ನು ನೋಡಿದ್ದೆ. ಆಗಿನ ಕಾಲಕ್ಕೆ ನಮ್ಮ ಊರಿನಲ್ಲಿ ಅತೀ ಅಪರೂಪ ಎನ್ನಬಹುದಾದ ಸುಷ್ಮಾ ಎಂಬ ಹೆಸರಿದ್ದರೂ ತಂಗಿಗೆ ತನ್ನ ಹೆಸರು ಚೆನ್ನಾಗಿಲ್ಲವೆಂಬ ಕೊರಗಿತ್ತು .

ಅವಿಭಕ್ತ ಕುಂಟುಂಬವಾಗಿದ್ದ ನಮ್ಮ ಮನೆಯಲ್ಲಿ ನಾನು ಮೊದಲ ಮಗು . ನನಗೆ ಸುಮ ಎಂದು ಹೆಸರಿಟ್ಟರಲ್ಲ ಆಮೇಲೆ ಹುಟ್ಟಿದ ಎಲ್ಲ ಮಕ್ಕಳ ಹೆಸರೂ " ಸು "  ಅಕ್ಷರದಿಂದಲೇ ಪ್ರಾರಂಭವಾಗಬೇಕೆಂದು ನನ್ನ ಹಠವಾಗಿರುತ್ತಿತ್ತು. ಚಿಕ್ಕಮ್ಮಂದಿರು ತಾಯಿಯಾಗಲಿದ್ದಾರೆ ಎಂದ ತಕ್ಷಣ ನಾನು ಮತ್ತು ಸಣ್ಣ ಚಿಕ್ಕಪ್ಪ ಹೆಸರು ಹುಡುಕಲು ಶುರು ಮಾಡುತ್ತಿದ್ದೆವು. ಆ ಮಕ್ಕಳ ಅಪ್ಪ ಅಮ್ಮನ ಆಸೆಯನ್ನೂ ಕೇಳದೆ ನಾವಿಬ್ಬರು ಸೆಲೆಕ್ಟ್ ಮಾಡಿದ ಹೆಸರನ್ನೇ ಇಡುವಂತೆ ಮಾಡುತ್ತಿದ್ದೆವು. ಅದರಿಂದಾಗಿ ನನ್ನ ಎಲ್ಲ ತಮ್ಮ , ತಂಗಿಯರ ಹೆಸರೂ "  ಸು " ಅಕ್ಷರದಿಂದಲೇ ಪ್ರಾರಂಭವಾಗುತ್ತದೆ.

ಇನ್ನು ಯಾವ ಹೆಸರನ್ನೇ ಇಟ್ಟರೂ  ಅಪ್ಪ ಅಮ್ಮ ಅದನ್ನು ಹಾಗೇ ಕರಿಯೋದು ಕಡಿಮೆಯೆ .   ಪಾಪು , ಪುಟ್ಟಿ , ಮಗು , ಈಗೀಗ ಟಿಂಕು ರಿಂಕು ಡಿಂಕು ಬೇಬಿ ಇತ್ಯಾದಿ ಎಂಬ ನಿಕ್ ನೇಮ್ ಇದ್ದೇ ಇರತ್ತೆ.

  ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಡಿಫರೆಂಟ್ ಆಗಿರೋ ಹೆಸರನ್ನೇ ಹುಡುಕಿ ಹುಡುಕಿ ಇಡುತ್ತಾರೆ .
 ಎಲ್ಲರ ಸುದ್ದಿ ಯಾಕೆ ನಮ್ಮ ವಿಷಯವನ್ನೇ ಹೇಳುತ್ತೇನೆ . ಗರ್ಭದಲ್ಲೊಂದು ಕುಡಿ ಚಿಗುರುತ್ತಿದೆಯೆಂದು ತಿಳಿದ ಸ್ವಲ್ಪ ದಿನಗಳಲ್ಲೇ ನಾನು ಮತ್ತು ನನ್ನ ಗಂಡ ಅದರ ಹೆಸರನ್ನು ಹುಡುಕಲು ಪ್ರಾರಂಭಿಸಿದ್ದೆವು .  ಇದುವರೆಗೆ ಯಾರೂ ಇಟ್ಟಿರಬಾರದು ಅಂತಹ ಹೆಸರು ಅದೂ ಅರ್ಥಪೂರ್ಣವಾಗಿರುವಂತದ್ದನ್ನು ಇಡಬೇಕೆಂಬುದು ನಮ್ಮಿಬ್ಬರ ಆಸೆಯಾಗಿತ್ತು. ಅಂತೂ ಹೆಣ್ಣು ಮತ್ತು ಗಂಡು ಹೆಸರುಗಳೆರಡರದ್ದೂ ಲಿಸ್ಟ್ ಮಾಡಿ ...ಅದರಲ್ಲಿ ಒಂದೊಂದು ಹೆಸರು ಸೆಲೆಕ್ಟ್ ಮಾಡಿದೆವು . ಯಾವ ಮಗು ಆದರೂ ನಮ್ಮ ಹೆಸರು ರೆಡಿ ಇತ್ತು.

ಅಂತೂ ಒಂದು ಶುಭದಿನ ನಮ್ಮ ಮುದ್ದು ಹೊರಬಂದಿತು . ಮಗು ಮತ್ತು ನನ್ನನ್ನು ನೋಡಲು ಕಾತರದಿಂದ ವಾರ್ಡ್ ಒಳಗೆ ಬಂದ ಪತಿರಾಯರಿಗೆ " ಇಂಚರ ಹೊರಬಂದಳು " ಎಂದೆ .  ನಿಜ ನಮಗೆ ಹೆಣ್ಣು ಮಗುವಾದರೆ ಇಂಚರ ಎಂದು ಹೆಸರಿಡಬೇಕೆಂದು ನಾವಂದುಕೊಂಡಿದ್ದೆವು. ಹದಿನಾಲ್ಕು ವರ್ಷಗಳ ಹಿಂದೆ ಅದು ಅಪರೂಪದ ಹೆಸರಾಗಿತ್ತು. ನಮಗೆ ಗೊತ್ತಿರುವವರ್ಯಾರೂ ಇಟ್ಟದ್ದು ನಾವು ಕೇಳಿರಲಿಲ್ಲ. ಮುದ್ದು ಮಗುವಿಗೆ ನಾಮಕರಣವಾಯ್ತು . ಅಮ್ಮನ ಮನೆಯಲ್ಲಿ ಮೂರು ತಿಂಗಳು ಬೆಚ್ಚಗೆ ಬಾಳಂತನ ಕಳೆಯಿತು .

ಒಂದು ದಿನ ಮಗುವನ್ನು ನೋಡಲು ನನ್ನ ಅಜ್ಜಿ( ಅಮ್ಮನ ತಾಯಿ ) ಯ ಜೊತೆಗೆ ಅವರ ಮನೆಯ ಕೆಲಸಕ್ಕೆ ಬರುವ ಮಂಜಕ್ಕ ಬಂದರು . ಮಗುವನ್ನು ಎತ್ತಿ ಮುದ್ದಾಡುತ್ತಾ ಹೆಸರೇನಮ್ಮ ಎಂದರು . ನಾನು ಹೆಮ್ಮೆಯಿಂದ " ಇಂಚರ ಅಂತ ಹೊಸ ಹೆಸರು ಮಂಜಕ್ಕ ನನ್ನ ಮಗಳದು" ಎಂದೆ . " ಓ ನನ್ನ ನಾದಿನಿ ಮಗಳಿಗೂ ಇದೇ ಹೆಸ್ರು . ಅದೀಗ ಎರಡನೆ ಕ್ಲಾಸು ಓದ್ತದೆ " ಎಂದ ಮಂಜಕ್ಕನ ಮಾತು ಕೇಳಿ ನಾನು ಬೆಪ್ಪು .

ಸ್ವಲ್ಪ ದಿನಗಳಾಗಿದ್ದವೇನೋ ಟಿ ವಿ ಯಲ್ಲಿ ಯಾವುದೋ ಒಂದು ಹಾಡಿನ ರಿಯಾಲಿಟಿ ಶೋ ಬರುತ್ತಿತ್ತು ಅದರಲ್ಲಿ ಭಾಗವಹಿಸಿದ್ದ ಒಬ್ಬಳು ಇಪ್ಪತ್ತರ ಯುವತಿಯ ಹೆಸರೂ ಇಂಚರ ಎಂದಿತ್ತು ! ಆ ನಂತರ ಹೊಸ ಹೆಸರನ್ನು ಇಟ್ಟಿದ್ದೇವೆಂಬ ನಮ್ಮ ಭ್ರಮೆ ಸಂಪೂರ‍್ಣ ಅಳಿದಿತ್ತು.


5 comments:

 1. Ya thats true....sometime i also feel same when i here the new names.They might be new but hard to remember.I usually forget the names of some people and when they meet me though i can recognize them i cant remember their names.This happened many times with my close relatives also.I also faced a problem when they told me "you have memory problem,try to remember ".

  There are more young and energetic,simple,easy to call names in many books.I really wonder why people wont refer this book for the names instead of internet.

  Totally it was a nice article that you have written about the true fact.

  ReplyDelete
 2. ಹಹಹಹ ಎಲ್ಲಾದರೂ ನಮ್ಮ ಹೆಸರಿನವರು ಇದ್ದೇ ಇರುತ್ತಾರೆ ಎಂದೆನಿಸುತ್ತೆ. ನಾನು ನನ್ನ ಹೆಸರು ಎಲ್ಲು ಇರೋಲ್ಲ ಎಂದುಕೊಂಡು ಜಂಭ ಪಡುತ್ತಿದ್ದೆ ಆದರೆ ನಾನು ಹೈಸ್ಕೂಲ್ಗೆ ಹೋದಾಗ ನನ್ನ ತರಗತಿನಲ್ಲೇ ಒಬ್ಬಳು ಸುಗುಣ ಅಂತಾ ಇದ್ದಳು ಆಗ ಅಯ್ಯೋ ನನ್ನ ಹೆಸರೋರು ಇದಾರೆ ಹಾಗಿದ್ರೆ ಅಂದುಕೊಂಡಿದ್ದೆ.

  ReplyDelete
 3. ನಾಮ ಪುರಾಣ ಸಖತ್ತಾಗಿದೆ ಸುಮಕ್ಕ.
  ಅಂದಹಾಗೆ ಈಗ ಇಂಚರ ಎಷ್ಟನೇ ಕ್ಲಾಸು?

  ReplyDelete
 4. ಒಳ್ಳೆ ಬರಹ..
  ನಾನೂ ಅಷ್ಟೆ ಬೇಸ್ತು /ಬೇಸರ ಪಟ್ಟಿದ್ದು ಇದೆ....ನನಗೆ ಇಟ್ಟ ಹೆಸರು ಲಕ್ಷ್ಮಿ..ಕರೆಯುವುದು ಜಾನ್ಸಿ ಅಂತ..ನೆಂಟರಿಷ್ಟರು,ಹತ್ತಿರದವರಿಗೆ ನನ್ನ ನಿಜ ನಾಮ ಗೊತ್ತಿಲ್ಲ.ಈ ಹೆಸರು ಯಾರಿಗೂ ಇಲ್ಲ ಅಂತ ನಾನೇ ನನ್ನಷ್ಟಕ್ಕೆ ಜಂಬಪಡುತ್ತಿದ್ದೆ..ಆದರೆ ಯಾವುದೋ ಕನ್ನಡ ಧಾರಾವಾಹಿಯಲ್ಲಿ ಝಾನ್ಸಿ ಸುಬ್ಬಯ್ಯ ಅನ್ನುವವಳು ಪಾತ್ರ ಮಾಡಿದಾಳೆ.. ಆ ಹೆಸರು ಹೇಗೆ ಬಂತು ಅಂತ ಕೇಳೋಣ ಅಂದರೆ ಅವಳು ಸ್ವತಃ ಸಿಗೋಲ್ಲ.

  ReplyDelete
 5. ಒಳ್ಳೆ ಬರಹ..
  ನಾನೂ ಅಷ್ಟೆ ಬೇಸ್ತು /ಬೇಸರ ಪಟ್ಟಿದ್ದು ಇದೆ....ನನಗೆ ಇಟ್ಟ ಹೆಸರು ಲಕ್ಷ್ಮಿ..ಕರೆಯುವುದು ಜಾನ್ಸಿ ಅಂತ..ನೆಂಟರಿಷ್ಟರು,ಹತ್ತಿರದವರಿಗೆ ನನ್ನ ನಿಜ ನಾಮ ಗೊತ್ತಿಲ್ಲ.ಈ ಹೆಸರು ಯಾರಿಗೂ ಇಲ್ಲ ಅಂತ ನಾನೇ ನನ್ನಷ್ಟಕ್ಕೆ ಜಂಬಪಡುತ್ತಿದ್ದೆ..ಆದರೆ ಯಾವುದೋ ಕನ್ನಡ ಧಾರಾವಾಹಿಯಲ್ಲಿ ಝಾನ್ಸಿ ಸುಬ್ಬಯ್ಯ ಅನ್ನುವವಳು ಪಾತ್ರ ಮಾಡಿದಾಳೆ.. ಆ ಹೆಸರು ಹೇಗೆ ಬಂತು ಅಂತ ಕೇಳೋಣ ಅಂದರೆ ಅವಳು ಸ್ವತಃ ಸಿಗೋಲ್ಲ.

  ReplyDelete