19 Nov 2015

ಹೀಗೊಂದು ವಾಕಿಂಗ್ ಪುರಾಣ

ಸುಮೀ ...ಏಳು , ನಾಲ್ಕೂಮುಕ್ಕಾಲು ಆಗೋಯ್ತು , ವಾಕಿಂಗ್ ಹೋಗೋಣ ಏಳು.....  ಪತಿರಾಯ ಎಬ್ಬಿಸ್ತಾ ಇದ್ದರೆ ಈ ಬೆಳಗಿನ ಜಾವ ಮಾತ್ರ ಆತ ಹಾಗೆ ಕರೆಯೋದನ್ನ ಇನ್ನಷ್ಟು ಕೇಳುವ ಆಸೆಯಿಂದ ಮತ್ತೆ ಮುಸುಕೆಳೆದು ಮಲಗಿಬಿಡ್ತೇನೆ. ಥಟ್ಟನೆ ನನ್ನ ಹೊದಿಕೆಯನ್ನು ಎಳೆದು ಹಾಕುವ ಆ ಅಶುಕವಿ ಏನೋನೋ ಕವನ ಕಟ್ಟಿ ಯಕ್ಷಗಾನದ ಧಾಟಿಯಲ್ಲಿ ಹಾಡಿ , ನಾಲ್ಕು ಹೆಜ್ಜೆಯನ್ನೂ ಹಾಕುವಷ್ಟರಲ್ಲಿ ಜೋರಾಗಿ ನಗು ಬಂದು ನಿದ್ರೆ ಹಾರಿಹೋಗುತ್ತದೆ. ಆದರೂ "ಇವತ್ಯಾಕೋ ಕಾಲು ನೋವು , ಮಳೆ ಬರೋ ಹಾಗಿದೆ ಅಲ್ವಾ , ಚಳಿ ಜಾಸ್ತಿ  , ಇವತ್ತೊಂದಿನ ನಿದ್ದೆ ಮಾಡ್ತೀನಿ ಪ್ಲೀಸ್ ....ಹೀಗೆ ಮುಗಿಯದ ಕಾರಣಗಳನ್ನು ಕೊಡ್ತಾ ಮಲಗಿರುವುದು ನಂಗಿಷ್ಟ . ಆದರೆ ನನ್ನ ಸೋಮಾರಿತನ ಚೆನ್ನಾಗಿ ಗೊತ್ತಿರೋ ಪತಿರಾಯ ಬಿಡೋದುಂಟೆ? ಅಂತೂ ಎದ್ದು ತಯಾರಾಗಿ ಮನೆಯಿಂದ ಹೊರಟರೆ ನಿರುತ್ಸಾಹ ಮಾಯವಾಗಿ ಎಷ್ಟು ದೂರವಾದರೂ ನಡೆಯುವ ಉತ್ಸಾಹ ತುಂಬಿಕೊಳ್ಳೊದು ಆಶ್ಚರ್ಯವೇ ಸರಿ.


ಪಕ್ಕದ ಮನೆಯ ಹೊರಕಟ್ಟೆಯ ಮೇಲೆ ಯಾರೋ ಗೆರೆ ಎಳೆದು ಮಲಗಿಸಿದಂತೆ ಸಮಾನ ಅಂತರದಲ್ಲಿ ನಿತ್ಯವೂ ಮಲಗಿರುವ ಮೂರು ನಾಯಿಗಳನ್ನು ನೋಡುತ್ತಾ ರಸ್ತೆಗಿಳಿದರೆ ನಮ್ಮ ವಾಕಿಂಗ್ ಪ್ರಾರಂಭ. ನಮ್ಮ ರಸ್ತೆಯ ಭೈರಪ್ಪ ವಾಠರದಲ್ಲಾಗಲೇ  ದಿನಚರಿ ಪ್ರಾರಂಭವಾಗಿರುವುದರ ಗುರುತಾಗಿ ಲೈಟ್ ಉರಿಯುತ್ತಿರುತ್ತದೆ. ಹೆಂಗಸರಾಗಲೇ ಬಾಗಿಲಿಗೆ ನೀರು ಎರಚುವ , ಬಟ್ಟೆ ತೊಳೆಯುವ ಕೆಲಸಗಳಲ್ಲಿದ್ದರೆ , ಕೆಲ ಚಿಲ್ಟು ಪಿಲ್ಟುಗಳು ಅಮ್ಮನ ಬೆಚ್ಚನೆ ಮಡಿಲು ತಪ್ಪಿದ್ದಕ್ಕೆ ಅಳುತ್ತಾ , ತೂಕಡಿಸುತ್ತಾ ಅಲ್ಲೇ ಕುಳಿತಿರುವುದನ್ನೂ ನೋಡಬಹುದು. ಈ ವಠಾರವನ್ನು ದಾಟಿ ಪಕ್ಕಕ್ಕೆ ಹೊರಳಿದರೆ ಇನ್ನೊಂದು ಬೀದಿ , ಇಲ್ಲಿ ಪ್ರಾರಂಭದ ಮನೆಯೊಂದರಲ್ಲಾಗಲೇ ರೊಟ್ಟಿ ಫ್ಯಾಕ್ಟರಿ ಶುರುವಾಗಿರುತ್ತದೆ. ಬೆಳಗಿನ ಏಳು ಗಂಟೆಯ ಒಳಗೆ ೨೫೦ ರೊಟ್ಟಿಗಳನ್ನು ತಯಾರಿಸಿ ಈ ಏರಿಯಾದ ವಿವಿಧ ಹೋಟೆಲುಗಳಿಗೆ ತಲುಪಿಸುತ್ತಾನಾತ. ಸುಡುತ್ತಿರುವ ರೊಟ್ಟಿಯ ಘಮವನ್ನು ಆಘ್ರಾಣಿಸುತ್ತಾ ಈ ಬೀದಿಯಲ್ಲಿ ಮುಂದುವರೆದರೆ ರಪ್ಪನೆ ರಾಚುವುದು ಕೋಳಿ ಫಾರಂನ ದುರ್ನಾತ. ಅಲ್ಲಿ ಆ ದಿನ ಯಾವುದೋ ಅಡುಗೆಮನೆ ಸೇರಿ , ಮಸಾಲೆಯೊಂದಿಗೆ ಬೆರೆತು ಯಾರದೋ ಜಿಹ್ವೆಯನ್ನು ತಣಿಸಲಿರುವ ಕೋಳಿಗಳು ಒತ್ತೊತ್ತಾಗಿ ಉಸಿರಾಡಲೂ ಕಷ್ಟವಾಗುವಂತೆ ಕೇಜ್ ನಲ್ಲಿ ತುರುಕಲ್ಪಡುತ್ತಿರುತ್ತವೆ. ಹೇಗಾದರೂ ಅದರಲ್ಲೊಂದು ತನಗೆ ಆಹಾರವಾಗಲಾರದೆ ಎಂಬಂತೆ ಹಾಗೆ ತುರುಕುವುದನ್ನೇ ಆಸೆಗಣ್ಣಿನಿಂದ ನೋಡುತ್ತಾ ನಿಂತಿರುವ ನಾಲ್ಕು ನಾಯಿಗಳು ಮತ್ತು ಅವುಗಳನ್ನು ಹೆದರಿಸಿ ಓಡಿಸುತ್ತಾ , ಕೋಳಿ ಕೇಜ್ ಗಳನ್ನು ವ್ಯಾನಿಗೆ ತುಂಬಿಸುವವನ ಮುಖದ ನಿರ್ಲಿಪ್ತತೆ ತುಂಬ ಹೊತ್ತು ಕಾಡುತ್ತದೆ.

ಇಲ್ಲಿಂದ ಮುಂದೆ ಬಂದು ಬಲಕ್ಕೆ ತಿರುಗಿದರೆ ಎದುರಾಗುವುದು , ಬೆಂಗಳೂರನ್ನು ಸುತ್ತುವರೆದಿರುವ ರಿಂಗ್ ರೋಡಿನ ಪಕ್ಕದ ಸರ್ವೀಸ್ ರೋಡ್. ಇದೇ ನಮ್ಮ ವಾಕಿಂಗ್ ರಸ್ತೆ. ಇದುವರೆಗೆ ಕಾಣುತ್ತಿದ್ದ ಬೆಳಗಾಗುವುದರ ಸೂಚನೆ ಇಲ್ಲಿ ಹಠಾತ್ತನೆ ಮಾಯವಾಗಿಬಿಡುತ್ತದೆ.  ಇಲ್ಲಿ ನಡೆಯುವಾಗ ಅನೇಕ ಭಾವಗಳು ಮನದಲ್ಲಿ ಹಾದು ಹೋಗುತ್ತವೆ.  ಒಮ್ಮೊಮ್ಮೆ ಬೆಂಗಳೂರೆಂಬ ಮಾಯಾನಗರಿ ಮಲಗಿರುವ ದೊಡ್ಡ ರಾಕ್ಷಸಿಯಂತೆ , ರಿಂಗ್ ರೋಡಿನಲ್ಲಿ ನಿರಂತರವಾಗಿ ಹರಿದಾಡುವ ವಾಹನಗಳ ಶಬ್ದ ಆಕೆಯ ಉಸಿರಾಟದಂತೆಯೂ ಕೇಳಿಸಿ  ಸಿಕ್ಕಾಪಟ್ಟೆ ಥ್ರಿಲ್  ಆಗುತ್ತದೆ.  ಇನ್ನೊಮ್ಮೆ  ಈ ನಿರ್ಜನವಾದ ಸರ್ವೀಸ್ ರೋಡಿನಲ್ಲಿ ನಡೆಯುತ್ತಿರುವಾಗ , ಪಕ್ಕದ ರಿಂಗ್ ರೋಡಿನಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದಾಗಿ ಕಾಲಪ್ರವಾಹದಲ್ಲಿ ಎಷ್ಟೋ ಹಿಂದುಳಿದುಬಿಟ್ಟೆವೇನೋ ಎಂಬ ಭ್ರಮೆ ಉಂಟಾಗಿಬಿಡುತ್ತದೆ.

ಮುಂದೆ ನಡೆಯುತ್ತಿದ್ದಂತೆ ಎದುರಾಗೋದು ರಾಜು ಮತ್ತವನ  ಅದ್ಭುತ ಮೊಪೆಡ್.  ಫಿನೈಲ್  ಊದುಬತ್ತಿಯಿಂದ ಹಿಡಿದು ಬಕೆಟ್ ಬಿಂದಿಗೆಯವರೆಗೆ ತುಂಬಿಕೊಂಡಿರುವ ಆ ಮೊಪೆಡ್ ಒಂದು ಚಲಿಸುವ ಸೂಪರ್ ಮಾರ್ಕೆಟ್. ರಾಜು ಆ ಬೆಳಗಿನ ಜಾವದಲ್ಲಿ ಅದೆಲ್ಲ ಸಾಮಾನುಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಮೊಪೆಡ್ ನಲ್ಲಿ ತುಂಬಿ ಕಟ್ಟುವುದನ್ನು ನೋಡುತ್ತಿದ್ದರೆ ಬಾಲ್ಯದಲ್ಲಿ ಅಪ್ಪನ ಕೈ ಹಿಡಿದು ಯಕ್ಷಗಾನದ ಚೌಕಿಮನೆಯಲ್ಲಿ ಬಣ್ಣದ ವೇಷ ಕಟ್ಟುವುದನ್ನು ಬೆರಗುಗಣ್ಣಿನಿಂದ ನೋಡಿದ ನೆನಪು ಬರುವುದು ಏಕೋ ಗೊತ್ತಿಲ್ಲ!

ಮುಂದೆ ನಡೆದಂತೆ ಸಿಗುವುದು ಒಂದು ಕಲ್ಯಾಣ ಮಂಟಪ.  ಮದುವೆ ಇತ್ಯಾದಿ ಫಂಕ್ಷನ್ ಇದ್ದರೆ ಆ ವೇಳೆಗೆ ಅಲ್ಲಿ ಒಂದು ಸಡಗರದ ವಾತಾವರಣ ಬಿಚ್ಚಿಕೊಳ್ಳುತ್ತಿರುತ್ತದೆ.  ಗೇಟಿನಲ್ಲಿ   ಆರ್ಕಿಡ್ ಹೂವೋ , ಗುಲಾಬಿಯೋ ಅಥವಾ ಬಣ್ಣ ಬಣ್ಣದ ಉಲ್ಲನ್ ಚೂರುಗಳಿಂದಲೋ ಅಲಂಕರಿಸಲ್ಪಟ್ಟ ವಧುವರರ ಹೆಸರನ್ನು ಒಳಗೊಂಡ ಸುಂದರವಾದ ಕಮಾನು ಇರುತ್ತದೆ,   ಒಂದು  ಮೂಲೆಯಲ್ಲಿ ವಧುವರರ ಹೆಸರನ್ನು ತಗುಲಿಸಿಕೊಂಡು ಹೂವಿನಿಂದ ಅಲಂಕರಿಸಲ್ಪಟ್ಟ ಅಂತಸ್ತಿಗೆ ತಕ್ಕ ಕಾರೊಂದು ನಿಂತಿರುತ್ತದೆ. ಕೆಲವೇ ಕೆಲವು ಜನ ಬಹಳ ಗಡಿಬಿಡಿ ಸಂಭ್ರಮಗಳಿಂದ ಒಳಗೆ ಹೊರಗೆ ಓಡಾಡುತ್ತಿರುತ್ತಾರೆ. ಹೊರಗಿನ ಕಾಂಪೌಂಡಿಗೆ ಹೊಂದಿಕೊಂಡಂತಿರುವ ಪುಟ್ಟ ಗುಡಿಯ ಗಣಪ ಇವೆಲ್ಲವನ್ನೂ ನೋಡುತ್ತಾ ನಗುವಂತೆ ನಿಂತಿರುತ್ತಾನೆ.
ಯಾವುದೇ ಕಾರ್ಯಕ್ರಮ ಇಲ್ಲದ ದಿನಗಳಲ್ಲಿ ಇದೊಂದು ನಿರ್ಜೀವವಾದ ಕಟ್ಟಡ.

ಇನ್ನು ಮುಂದೆ ನಡೆದರೆ ಸಿಗುವುದು ಭಿಕ್ಷುಕರ ಕಾಲೋನಿಗೆ ಸೇರಿದ ದೊಡ್ಡ ಕಾಂಪೌಂಡ್. ಒಳಗಿನ ವಿಶಾಲ ಜಾಗದಲ್ಲಿ ಕಾಡಿನಂತೆ ದಟ್ಟ ಮರಗಿಡಗಳಿರುವುದು ಈ ಪ್ರದೇಶಕ್ಕೊಂದು ತಂಪಾದ ವಾತಾರಣ ನೀಡಿವೆ.
ಇಲ್ಲಿ ಎಡಭಾಗದಲ್ಲಿರುವ ದಿನವಿಡೀ ಅದೆಷ್ಟೋ ನಿರ್ಜೀವ ದೇಹಗಳನ್ನು ಸುಟ್ಟು ಭಸ್ಮ ಮಾಡುವ ಕ್ರಿಮೆಟೋರಿಯಂನ ಸುಂದರವಾದ ಕಟ್ಟಡ ಬೆಳಗಿನ ಜಾವದಲ್ಲಿ ಕ್ರೌರ್ಯವನ್ನೆಲ್ಲ ಅಡಗಿಸಿಟ್ಟು ಮುಗುಳ್ನಗುವ ಸುಂದರಿ ಶೂರ್ಪನಖಿಯಂತೆ ಗೋಚರಿಸುತ್ತದೆ!
ಅದರ ಪಕ್ಕದಲ್ಲಿರುವ ಬಿಎಂಟಿಸಿ ಬಸ್ ಡಿಪೋದಲ್ಲಿ ನೂರಾರು , ಕಲ್ಲಿನಂತೆ ನಿಂತ ಬಸ್ಸುಗಳು ಬೆರಳ ತುದಿಯಿಂದ ತಮಗೆ ಜೀವ ನೀಡುವ ಡ್ರೈವರ್ ಗಳಿಗೆ ಅಹಲ್ಯೆಯರಂತೆ ಕಾದಿರುತ್ತವೆ.

ಈಗ ಮತ್ತೆ ಬಂದ ದಾರಿಯಲ್ಲೇ ವಾಪಾಸಾಗುವುದು. ಈಗ  ಬಂದ ಹಾದಿಯ ಚಿತ್ರಣ ಸ್ವಲ್ಪ ಬದಲಾಗಿರುತ್ತದೆ. ಸುಮಾರು ಜನ ಸೀನಿಯರ್ ಸಿಟಿಜನ್ನರು, ಹಲವು ನಡುವಯಸ್ಕರು, ಕೆಲವೇ ಕೆಲವು ಯೌವ್ವನಿಗರು ಹೀಗೆ ವಾಕಿಂಗ್  ಹೊರಟ ಅನೇಕರು ಎದುರಾಗುತ್ತಾರೆ.   ಅಮ್ಮನ ಜೊತೆ ತಾನೂ ಬರುತ್ತೇನೆಂದು ಹಠ ಹಿಡಿದು ಬಂದಿರಬಹುದಾದ  ಚಿಲ್ಟಾರಿಗಳೂ  ಆಗಾಗ್ಗೆ ಕಾಣುವುದುಂಟು.
ಹೀಗೆ ವಾಪಾಸಾಗುವಾಗ   ಪತಿರಾಯರು  ನನ್ನ ಬಗ್ಗೆ ವಿಶೇಷವಾದ ಗಮನ ನೀಡುತ್ತಾರೆ. ನನ್ನನ್ನು ಬಿಟ್ಟು ಒಂದು ಹೆಜ್ಜೆಯನ್ನೂ ಮುಂದಿಡುವುದಿಲ್ಲ. ಬೇರೇನಿಲ್ಲ , ನಾನು ಮೇಲೆ ಪಕ್ಷಿಗಳನ್ನು ನೋಡುತ್ತಾ ಕೆಳಗೇನನ್ನೋ ಎಡವಿ ಬಿದ್ದರೆ ಎತ್ತಬೇಕಾದ ಕಷ್ಟ ಅವರದಲ್ವೇ ಅದಕ್ಕೆ ! ಹೌದು ಈಗ ಹಕ್ಕಿಗಳೆಲ್ಲ ನಿದ್ರೆಯಿಂದ ಎಚ್ಚೆತ್ತು ತಮ್ಮ ಚಟುವಟಿಕೆ ಪ್ರಾರಂಭಿಸಿರುತ್ತವೆ.


ಸುಮಾರು ನವೆಂಬರ್ ತಿಂಗಳಿನಿಂದ ರಿಂಗ್ ರೋಡಿನಲ್ಲಿ ಸಾಲಾಗಿರುವ ಮರಗಳಿಂದ ಕೇಳುವ ಕಾಗೆ ಮರಿಗಳ ಚಿಲಿಪಿಲಿ, ಶಿವರುದ್ರಪ್ಪನವರ ಸ್ತ್ರೀ ಪದ್ಯದ “ ಹಕ್ಕಿ ಗಿಲಕಿ ಹಿಡಿಸಿದಾಕೆ “ ಸಾಲುಗಳ ಸರಿಯಾದ ಅರ್ಥವನ್ನು ಮಾಡಿಸುತ್ತದೆ.
ಇದೇ ಸಮಯದಲ್ಲಿ ಅಸಂಖ್ಯ ಕಾಡು ಗೊರವಂಕಗಳ ಕೊನೆ ಮೊದಲು ಕಾಣದ ಗುಂಪೊಂದು ಆಕಾಶದಲ್ಲಿ ಆಗ್ನೇಯ ದಿಕ್ಕಿನಿಂದ ವಾಯುವ್ಯದೆಡೆಗೆ ದಿನದ ಆಹಾರಕ್ಕಾಗಿ ಹಾರುತ್ತವೆ.  ಈ ಹಕ್ಕಿಗಳ ಸಾಲು ಹಾರುವುದನ್ನು ಕಂಡಾಗಲೆಲ್ಲ ಕುವೆಂಪು ಅವರ ಕವನವೊಂದರ “ ದೇವರು ರುಜು ಮಾಡಿದನು “ ಎಂಬ ಸಾಲುಗಳು ನೆನಪಾಗುತ್ತವೆ.
ಹಕ್ಕಿಗಳ ದೊಡ್ದ ಗುಂಪು ಗಂಭೀರವಾಗಿ ಹಾರಿದ ನಂತರ ಸ್ವಲ್ಪ ಲೇಟಾಗಿ ಬೆಳಗಾದ ಹಕ್ಕಿಗಳ ಚಿಕ್ಕ ಚಿಕ್ಕ ಗುಂಪುಗಳು ಗಡಿಬಿಡಿಯಿಂದ ಹಾರುತ್ತಿರುತ್ತವೆ.
ಈ ವೇಳೆಗೆ ಲಗ್ಗೆರೆ ಬ್ರಿಡ್ಜ್  ಸರ್ಕಲ್ ಬಳಿ ಹಾಲು ಏಜೆನ್ಸಿ , ಪೇಪರ್ ಏಜೆನ್ಸಿಯವರ ಕೆಲಸ ನಡೆಯುತ್ತಿರುತ್ತದೆ . ಒಂದೆರಡು ಗಂಟೆ ಪೇಪರ್ ಹಾಕುವ ಕೆಲಸ ಮಾಡಿ , ನಂತರ ಸ್ಕೂಲಿಗೆ ಹೋಗಬೇಕಾದ ಹುಡುಗರ ಮುಖದಲ್ಲಿ ಮುದಗೊಳಿಸುವ ಜೀವನೋತ್ಸಾಹ. ಅಲ್ಲಿಯ ಎರಡು ಪುಟ್ಟ ಹೋಟೆಲ್ಲುಗಳ ರೈಸ್ ಬಾತ್ ಪರಿಮಳ ಆ ಪ್ರದೇಶವನ್ನೆಲ್ಲ ವ್ಯಾಪಿಸಿರುತ್ತದೆ.  ಯಶವಂತಪುರದ ತರಕಾರಿ ಮಾರುಕಟ್ಟೆಗೆ ತರಕಾರಿ ತರಲು ಹೊರಟಿರುವ ತಳ್ಳುಗಾಡಿಯವರು , ಹೂವುಗಳ ವ್ಯಾಪಾರಿಗಳ ಗಡಿಬಿಡಿ ಗಲಾಟೆ ನಡೆಯುತ್ತಿರುತ್ತದೆ.

ಇದೆಲ್ಲ ದೃಶ್ಯವೈಭವದ ಜೊತೆಗೆ ಸಂಗಾತಿಯೊಂದಿಗೆ , ಎದುರುಮನೆಯ ಆಂಟಿಯ ಬಗೆಗಿನ ಗಾಸಿಪ್ ನಿಂದ ಹಿಡಿದು , ಇಸಿಸ್ ಉಗ್ರರ ಬಗ್ಗೆ ಫ್ರಾನ್ಸ್ ನ ಮುಂದಿನ ನಡೆಯವರೆಗೆ ; ನಮ್ಮದೇ ಮಲೆನಾಡಿನ ಇಂಬಳದಿಂದ ಹಿಡಿದು , ಅಮೆಜಾನ್ ನದಿಯ ಪಿರಾನ ಮೀನಿನವರೆಗೆ ; ಎಂದೋ ನೋಡಿದ ತಾಳಮದ್ದಳೆಯಿಂದ ಹಿಡಿದು ರಣವೀರ್ ಕಪೂರನ  ಲೇಟೆಸ್ಟ್  ಸಿನೆಮಾದವರೆಗೆ ಜಗತ್ತಿನ ಸಕಲೆಂಟು ವಿಚಾರಗಳು, ಆಗುಹೋಗುಗಳ ಬಗ್ಗೆ ಚರ್ಚಿಸುತ್ತಾ ನಡೆವ ಖುಷಿ ಬೋನಸ್. 

ಹಾಲು ತೆಗೆದುಕೊಂಡು ವಾಪಾಸಾಗುವಾಗ ದೇಹ ಮನಸ್ಸು ಎಲ್ಲವೂ ಹಗುರವಾದ ಅನುಭವ . ಬೆಳಗಿನ ಆ ಒಂದು ಘಂಟೆಯಲ್ಲಿ ಕಾಣುವ ಪ್ರಪಂಚ ಬೇರೆಯದೇ . ಬೆಳಗಾದ ಮೇಲೆ ಇದೇ ಬೀದಿಗಳು , ಇದೇ ಪ್ರಪಂಚ ,  ಸಂಪೂರ್ಣ ಬೇರೆಯದಾಗಿ ತೋರುತ್ತದೆ. ಗಿಜಿಗುಡುವ ಜನಪ್ರವಾಹ , ವಾಹನಗಳ ಸದ್ದಿನ ಮಧ್ಯೆ ಮುಂಜಾವಿನ ಮಾರ್ದವತೆ ಮರೆಯಾಗಿರುತ್ತದೆ. ಬೆಳಗಿನ ಜಾವದಲ್ಲಿ ಚಿರಪರಿಚಿತವಾಗಿ ಕಾಣುವ ಬೀದಿಗಳು ಆಮೇಲೆ ಅಪರಿಚಿತವೆನಿಸುವ ಪರಿಗೆ ಬೆರಗಾಗಿ  ಮತ್ತೆ ಮಾರನೆಯ ದಿನ ಬೆಳಗಾಗುವುದನ್ನೇ ಕಾಯುವಂತಾಗುವುದು ಸತ್ಯ.  


2 comments:

  1. Bahala Dinada nantara sundaravaagi barediddiri. Naanu bahala dinada natara blog odta iruve.
    Chendada baraha

    ReplyDelete
  2. chanagiddu sumakka...ninu barithirod nodidre sadyadalle jeevana charithre release mado thara iddu

    ReplyDelete