22 Dec 2015

B2 ನ ಕತೆ


"ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲಪ್ಪ , ಎಷ್ಟು ಚೆನ್ನಾಗಿತ್ತು ಗೊತ್ತ ಆ ಕಾಲ " ಎಂದಿನ ಅಭ್ಯಾಸದಂತೆ ಗೊಣಗುತ್ತಾ ಬೆಳ್ಳಿಯಜ್ಜಿ  ತನ್ನ ಬಾಲವನ್ನೆತ್ತಿ ಬೆನ್ನಿನ ಎರಡೂ ಬದಿಗಳಲ್ಲೊಮ್ಮೆ ಆಡಿಸಿದಳು. ಆರು ತಿಂಗಳ ಕೂಸು B2 ಎಲ್ಲಿಬೇಕೆಂದರಲ್ಲಿ ಚಲಿಸುವ ಬೆಳ್ಳಿಯಜ್ಜಿಯ ಬಾಲವನ್ನೆ ಆಶ್ಚರ್ಯದಿಂದ ನೋಡಿತು.  ತನ್ನ ಬಾಲವನ್ನೂ ಹಾಗೆ ಆಡಿಸಲು ಪ್ರಯತ್ನಿಸಿತು , ಸಾಧ್ಯವಾಗಲಿಲ್ಲ. ಓಡಿ ತನ್ನ ಅಮ್ಮನನ್ನು ಕಟ್ಟಿಹಾಕಿದ ಜಾಗಕ್ಕೆ ಬಂದಿತು.
 " ಹ್ಂಬಾಆಆ....  ಬೆಳ್ಳಿಯಜ್ಜಿ ಆಡಿಸುತ್ತಲ್ಲ ಹಾಗೆ ಬಾಲ ಅಲ್ಲಾಡಿಸಲು ನನಗೇಕೆ ಬರಲ್ಲ "  ಮುದ್ದಾಗಿ ಕೇಳಿದ ಮಗನನ್ನು ಪ್ರೀತಿಯಿಂದ ನೆಕ್ಕಿದಳು ಬೀನಾ.
" ಬೆಳ್ಳಿಯಜ್ಜಿ ಹಳೇ ಕಾಲದವಳಲ್ವಾ ...ಬೇರೆಯದೇ ಜಾತಿ , ಈ ಮನೆಯೊಡೆಯನ ಅಜ್ಜನ ಕಾಲದಲ್ಲಿ  ಮೊದಲಬಾರಿಗೆ ಈ ಮನೆಗೆ ಬಂದವಳಂತೆ ಅವಳು  .  ಅವಳಿಂದಲೇ ತಮ್ಮ ಮನೆ ಉದ್ಧಾರವಾಗಿದ್ದು ಎಂಬ ಕುರುಡು ನಂಬಿಕೆಯಂತೆ  ಆ ಅಜ್ಜನಿಗೆ .  ಅದಕ್ಕೆ ಇನ್ನೂ ಯಾವುದೇ ಪ್ರಯೋಜನ ಇಲ್ಲದಿದ್ದರೂ ಅವಳನ್ನು ಮಾರಲು ಬಿಡುವುದಿಲ್ಲವಂತೆ  . ಅವಳ ಕಾಲದಲ್ಲಿ ನಮ್ಮ ಮನೆ ಈಗ ಇದ್ದಷ್ಟು ಕ್ಲೀನ್ ಇರಲಿಲ್ವಂತೆ , ಅದೇನೋ ನೊಣ , ಸೊಳ್ಳೆ ಅಂತೆಲ್ಲ ಕೀಟಗಳು ಮೈಮೇಲೆ ಕುಳಿತು ರಕ್ತ ಹೀರುತ್ತಿದ್ವಂತೆ. ಅವುಗಳನ್ನು ಈ ಬಾಲದಿಂದ ಓಡಿಸಿಕೊಳ್ತಿದ್ರಂತೆ ಬೆಳ್ಳಿಯಜ್ಜಿಯ ಜಾತಿಯವರು. ಆದರೀಗ ನಮ್ಮ ಮನೆಯಲ್ಲಿ ಅವೆಲ್ಲಾ ಕಾಟ ಇಲ್ಲ ಅಲ್ವಾ , ಹಾಗಾಗಿ ನಮಗೆ ಬಾಲ ಅಲ್ಲಾಡಿಸುವ ಅಭ್ಯಾಸವೇ ಇಲ್ಲ." 
ಇನ್ನೂ ಬಾಲವನ್ನು ಎತ್ತಿ ಆತ್ತಿತ್ತ ಅಲ್ಲಾಡಿಸಲು ಪ್ರಯತ್ನಿಸುತ್ತಿದ್ದ ಮಗನನ್ನೇ ನೋಡುತ್ತಾ ಬೀನಾ " ಏಯ್ ನೀನು ಏಕೆ ಹೀಗೆ ಓಡಾಡ್ತಿದ್ದೀಯಾ? ಸರಪಳಿ ಬಿಚ್ಚಿಕೊಂಡು ಓಡಾಡೋದನ್ನ ಕಂಡರೆ ಆ ಮನುಷ್ಯ ಬಂದು ಒಂಟಿ ಕೋಣೆಯಲ್ಲಿ ಕೂಡಿ ಹಾಕ್ತಾನೆ , ಆಮೇಲೆ ನಿನ್ನ ನೋಡೋಕ್ಕೂ ಆಗಲ್ಲ . ಸುಮ್ನೇ ನಿನ್ನ ಜಾಗದಲ್ಲಿ ಹೋಗಿ ನಿಂತ್ಕೋ " ಪ್ರೀತಿಯಿಂದ ಗದರಿದಳು.
ಅಮ್ಮನ ಮಾತನ್ನು ಕೇಳುವ ವ್ಯವಧಾನವೇ B2 ಗೆ ಇರಲಿಲ್ಲ. ಮತ್ತೆ ಬೆಳ್ಳಿಯಜ್ಜಿಯ ಬಳಿಗೆ ಓಡಿತು. " ಬೆಳ್ಳಿಯಜ್ಜಿ ನಂಗೂ ನಿನ್ನ ಹಾಗೆ ಬಾಲ ಅಲ್ಲಾಡಿಸೋದನ್ನ ಹೇಳಿಕೊಡಜ್ಜಿ "  ಅಜ್ಜಿಯ ನೆರಿಗೆಗಟ್ಟಿದ ಮುಖದಲ್ಲಿ ಕನಿಕರ ತುಳುಕಿತು .
" ಇಲ್ಲ ಪುಟ್ಟ ನಿಂಗೆ ಬರಲ್ಲ ಹಾಗೆ ಮಾಡಕ್ಕೆ , ನಿನ್ನ ಅಮ್ಮನಿಗೇ ಬರಲ್ಲ ,   ಹುಟ್ಟಿದ ಮಕ್ಕಳನ್ನು ಹೊರಗೇ ಬಿಡದೆ ಹೀಗೆ ಕೂಡಿ ಹಾಕಿದರೆ ಅದೆಲ್ಲ ಎಲ್ಲಿ ಬರಬೇಕು ? ನಮ್ಮ ಕಾಲದಲ್ಲಿ ಮಕ್ಕಳನ್ನು ಹೊರಗೆ  ಅಂಗಳದಲ್ಲಿ , ಮೈದಾನದಲ್ಲಿ  ಆಡಲು ಬಿಡುತ್ತಿದ್ದರು . ಜಿಗಿದು ನೆಗೆದು ಹಾರುತ್ತಾ ಓಡುವಾಗ ಬಾಲ ತಾನಾಗೇ ಮೇಲೇರುತ್ತಿತ್ತು , ಈಗೆಲ್ಲಿದೆ ನಿಮಗಂತಹ ಸೌಭಾಗ್ಯ ಛೆ...ಅಜ್ಜಿ ಗೊಣಗಲು ಪ್ರಾರಂಭಿಸಿತು.
ಅಜ್ಜಿ ಅಂಗಳ , ಮೈದಾನ ಅಂದ್ರೇನು? ದೊಡ್ಡ ಕಂಗಳನ್ನು ಇನ್ನಷ್ಟು ಅರಳಿಸಿ ಕೇಳಿತು B2
  ಅಜ್ಜಿ ಇನ್ನಷ್ಟು ಕನಿಕರದಿಂದ B2ವನ್ನು ನೋಡಿತು.
" ನಾವೆಲ್ಲ ಚಿಕ್ಕವರಿದ್ದಾಗ ಈ ಮನೆ ಹೀಗಿರಲಿಲ್ಲ. ನಮ್ಮನ್ನೂ ಈಗಿನಂತೆ ದಿನವಿಡೀ ಕಟ್ಟಿ ಹಾಕುತ್ತಿರಲಿಲ್ಲ. ಬೆಳಿಗ್ಗೆ ಸೂರ್ಯ ಹುಟ್ಟುತ್ತಿದ್ದಂತೆ ನಮ್ಮ ಹಾಲನ್ನು ಹಿಂಡಿ , ನಂತರ ಹೊರಗೆ ಬಿಡುತ್ತಿದ್ದರು . ಗುಂಪಾಗಿ ನಾವೆಲ್ಲ ಹೊರಟರೆ ನಮ್ಮನ್ನು ನೋಡಿಕೊಳ್ಳಲು ಒಬ್ಬ ಮನುಷ್ಯ ಬರುತ್ತಿದ್ದ.  ಊರಿನ ಮನೆಗಳೆಲ್ಲಾ ಮುಗಿದ ಮೇಲೆ ದೊಡ್ಡದೊಂದು ಬಯಲು ಇದೆ  , ಅಲ್ಲಿ ಹಸಿರಾದ ಚಿಗುರು ಹುಲ್ಲು ಹುಲುಸಾಗಿ ಬೆಳೆದಿರುತ್ತೆ, ಅದನ್ನು ಮನಸೋಇಚ್ಛೆ ಮೆಂದು ಮುನ್ನೆಡದರೆ ತಂಪಾದ ಕಾಡು . ಅಲ್ಲಿ ಕೆಲ ಹಣ್ಣಿನ ಮರಗಳಿವೆ . ಕೆಳಗೆ ರಸಭರಿತವಾದ ಹಣ್ಣು ಬಿದ್ದಿರತ್ತೆ ,ತಿನ್ನೋದಿಕ್ಕೆ ಎಷ್ಟು ರುಚಿ ಗೊತ್ತಾ , ಆಮೇಲೆ ಅಲ್ಲೇ ಒಂದು ತಂಪಾದ ನೀರಿನ ತೊರೆ , ನೀರು ಕುಡಿದು ಸ್ವಲ್ಪ ಹೊತ್ತು ಅಲ್ಲೇ ಮರದ ನೆರಳಲ್ಲಿ ಮಲಗಿ ಮೆಲುಕಾಡಿ ತಿಂದದ್ದನ್ನು ಅರಗಿಸಿಕೊಂಡು ಸಣ್ಣದೊಂದು ನಿದ್ದೆ ತೆಗೆದು , ಮತ್ತೆ ಇನ್ನೊಮ್ಮೆ ಸಿಕ್ಕ ಸೊಪ್ಪು ಸದೆ , ಹುಲ್ಲು ಹಣ್ಣುಗಳನ್ನು ತಿಂದು ವಾಪಾಸ್ ಹೊರಡುತ್ತಿದ್ವಿ .

ಹೌದಾ! B2 ಗೆ ಆಶ್ಚರ್ಯ , ಹಾಗೆಲ್ಲ ಓಡಾಡಿದ್ರೆ ನಿಮಗೆ ಸುಸ್ತಾಗ್ತಾ ಇರಲಿಲ್ಲವಾ ಅಜ್ಜಿ ? ಕಾಲು ನೋವಾಗ್ತಿರಲಿಲ್ವಾ ಮುಗ್ಧವಾಗಿ ಕೇಳಿತು.

ಇಲ್ಲ ಪುಟ್ಟ ಸುಸ್ತಾಗ್ತಿರಲಿಲ್ಲ. ಖುಷಿಯಾಗಿ ಸುತ್ತುತ್ತಾ ಇದ್ವಿ. ರುಚಿಯಾದದ್ದು ತಿನ್ನಲು ಸಿಗ್ತಿತ್ತು.  ಇಲ್ಲೀಗ ಕೊಡ್ತಾರಲ್ಲ ಒಂದೇ ರುಚಿಯ ಸಪ್ಪೆ ಕ್ಯಾಟಲ್ ಫುಡ್ , ಪ್ರತೀದಿನಾ ಇದನ್ನೇ ತಿಂದು  ನನಗಂತೂ ನಾಲಿಗೆ ಜಡ್ದುಗಟ್ಟಿ ಹೋಗಿದೆ . ಅಲ್ಲದೆ ಪಕ್ಕದ ಮನೆ ಗಂಗೆ , ಗೌರಿ , ತುಂಗೆ ಮತ್ತವಳ ಎರಡು ಮಕ್ಕಳು , ಆಚೆ ಮನೆ ಕಾಳಿ ಹೀಗೆ ಎಷ್ಟೋ ಗೆಳತಿಯರು ಸಿಗ್ತಾ ಇದ್ರು ಗೊತ್ತ !  ... ಇನ್ನು ಆ ದಿಬ್ಬದ ಮನೆಯಿಂದ ಸೋಮ , ಭೈರ ಅವರಂತೂ ನನ್ನ ಹಿಂದೆ ಹಿಂದೇನೇ ಬರ್ತಾ ಇದ್ರು... ಯಾವುದೋ ನೆನಪಿನಿಂದ ಬೆಳ್ಳಿಯಜ್ಜಿಯ ಮುಖದಲ್ಲಿ ತುಂಟ ನಗುವೊಂದು ಹಾದುಹೋಯಿತು.
" ಮತ್ತೆ ಅಷ್ಟೆಲ್ಲ ಖುಷಿಯಾಗಿದ್ರೆ ಸಾಯಂಕಾಲ ವಾಪಾಸ್ ಇದೇ ಮನೆಗೆ ಯಾಕೆ ಬರ್ತ ಇದ್ರಿ ಅಜ್ಜಿ " B2 ಧ್ವನಿಗೆ   ಅಜ್ಜಿಯ ನಗು ಮಾಯವಾಯಿತು.
ಹೌದಲ್ಲ! ಏಕೆ ವಾಪಾಸಾಗುತ್ತಿದ್ವಿಗೊಲ್ಲನ ಕೂಗಿಗೆ ಹೆದರಿಯೆ ? ಕಾಡಿನಲ್ಲಿ ರಕ್ಷಣೆ ಇಲ್ಲವೆಂದೇ? ಈ ಹುಲುಮಾನವರ ಒಣಹುಲ್ಲು ತಿಂಡಿಗೆ ಆಸೆಪಟ್ಟೆ?  ಪುಟ್ಟ ಕರುಗಳಿದ್ದವರೇನೋ ಅವುಗಳನ್ನು ನೆನೆದು ಬರುತ್ತಿದ್ದರು ಎನ್ನಬಹುದು ಆದರೆ ಉಳಿದವು? ಮನೆಗೆ ಬಂದ ತಕ್ಷಣ ಹಿಡಿದು ಕಟ್ಟಿಹಾಕಿ ಹಾಲು ಹಿಂಡುವ  ಮಾನವನ ಬಂಧನಕ್ಕೆ ಏಕೆ ಬರಬೇಕಿತ್ತು? ಮನೆಯೊಡೆಯನ ಪ್ರೀತಿಯ ಮೈದಡವುವಿಕೆ ನೀಡುತ್ತಿದ್ದ ಭದ್ರತಾ ಭಾವನೆಗಾಗಿಯೆ? ಮನೆಯೊಡತಿ ಬೆಳಗಿನ ಜಾವಕ್ಕೆದ್ದು   ನಮ್ಮ ಬಳಿ ಬಂದು ಪ್ರೀತಿಯಿಂದ ಕರೆದು ಮಾತನಾಡಿಸುತ್ತಾ ಹಣೆಗೆ ಕುಂಕುಮವಿಟ್ಟು ನಮಸ್ಕರಿಸಿ ನೀಡುತ್ತಿದ್ದ ಅಕ್ಕಿ ಬೆಲ್ಲದ ಆಸೆಗೆ? ಅಥವಾ ಮನೆಯ ಮಕ್ಕಳು ಬಳಿ ಬಂದು ಕೋಡನ್ನು ಹಿಡಿದು ಮುದ್ದಿಸಿ ಮೈದಡವಿ ಅಪ್ಪಿಕೊಳ್ಳಿತ್ತಿದ್ದರಲ್ಲ ಆ ಸುಖಕ್ಕಾಗಿಯೆ?
ಆದರೆ ಈಗಿನ ಮಾನವರು ಏಕೆ ಹಾಗಿಲ್ಲ ? ಇಷ್ಟು ವರ್ಷಗಳಿಂದ ತಾನು ಬದುಕಿದ್ದೇನಲ್ಲ , ತನ್ನ ಓರಗೆಯವರು , ಮಕ್ಕಳು  ಸತ್ತರು , ಇದ್ದ ಕೆಲವರನ್ನೂ ಯಾರಿಗೋ ಮಾರಿಬಿಟ್ಟರು.  ಕ್ರಮೇಣ ಮಾನವರು ಬದಲಾಗುವುದನ್ನು ಕಂಡಿದ್ದೇನೆ . ಮಣ್ಣಿನ ನೆಲ , ಸೋಗೆಯ ಮಾಡು ಇದ್ದ ಕೊಟ್ಟಿಗೆ ಬದಲಾಗಿ ಅದೆಂಥದೋ ಕಲ್ಲು ಹಾಸಿದ ನೆಲ , ಮೇಲೆ ಟಾರಸಿಯ ಸಿಮೆಂಟಿನ ಬಿಸಿ . ಈಗಿನ ಒಡೆಯನ ಅಪ್ಪ ಮೊದಲಿಗೆ ಅದೇನೋ ಬೇರೆ ಜಾತಿಯ , ಬೇರೆ ದೇಶದ , ನಮಗಿಂತ ಹತ್ತರಷ್ಟು ಹೆಚ್ಚು ಹಾಲು ಕೊಡುವ ಹಸುಗಳನ್ನು ತಂದ . ನಂತರ ಕ್ರಮೇಣ ಅವುಗಳಿಂದಲೇ ಈ ಕೊಟ್ಟಿಗೆ ತುಂಬಿ ಹೋಯಿತು. ನಮ್ಮ ಜಾತಿಯಲ್ಲಿ ಉಳಿದದ್ದು ನಾನೊಬ್ಬಳೇ. ಈಗಿನ ಮನೆಯೊಡೆಯ ಅಥವಾ ಒಡತಿ ಕೊಟ್ಟಿಗೆಗೆ ಬರುವುದೇ ಅಪರೂಪ , ದಿನಾ ಒಬ್ಬ ಆಳು ಬಂದು ಸಪ್ಪೆ ಆಹಾರ ಕೊಟ್ಟು ಅದೇನೋ ಯಂತ್ರದಿಂದ ಹಾಲು ಹಿಂಡಿಕೊಂಡು ಹೋಗುತ್ತಾನೆ.  ಇನ್ನೂ ಎಷ್ಟು ವರ್ಷ ತಾನು ಬದುಕಬೇಕೋ ಈ ಶುಷ್ಕ ಮಾನವರ ಮಧ್ಯೆ......
ಅಜ್ಜಿಯ ದೀರ್ಘಮೌನವನ್ನು ನೋಡಿ B2 ಗೆ ಬೇಸರವಾಯಿತು. ಹುಟ್ಟಿದಾಗಿನಿಂದ ಈ ಆಧುನಿಕ ಗೋಶಾಲೆಯ ನಾಲ್ಕು ಗೋಡೆಗಳನ್ನಷ್ಟೇ ಕಂಡಿದ್ದ B2ಗೆ  ಬೆಳ್ಳಿಯಜ್ಜಿಯನ್ನು ಮಾತನಾಡಿಸುವ , ಅವಳ ಕಾಲದ ಕತೆ ಕೇಳುವ ಚಟ.   ಕೇಳುವಾಗ ಅದರ ಮನದಲ್ಲಿ  ನೂರೆಂಟು ಪ್ರಶ್ನೆಗಳು. ಹೇಗಿರಬಹುದು ಹೊರಗಿನ ಪ್ರಪಂಚ ? ಈ ಅಜ್ಜಿ ಇಷ್ಟೆಲ್ಲ ಖುಷಿ ಪಡ್ತಾಳಲ್ಲ ಅದರ ಸುದ್ದಿ ಹೇಳುವಾಗಲೆಲ್ಲ . ಒಮ್ಮೆ ತಪ್ಪಿಸಿಕೊಂಡು ಹೋಗಿ ನೋಡಿಬಿಡಲೆ? ಅಮ್ಮನನ್ನು ಬಿಟ್ಟು ಹೋಗಬೇಕಲ್ಲ !  ಏನಾದರೂ ಸರಿ ಒಮ್ಮೆ ನೋಡಲೇಬೇಕು !

ಅಂದು ಆ ಆಧುನಿಕ ಗೋಶಾಲೆಯ ಮಾಮೂಲಿ ಕೇರ್ ಟೇಕರ್ ವಾರದ ರಜೆಯಲ್ಲಿದ್ದ. ಬದಲಿಯಾಗಿ ಬಂದವ ಹೊಸಬ.  ಹೆಚ್ಚು ಹಾಲು ನೀಡಲು ಅವುಗಳಿಗೆ ಕೊಡಬೇಕಾದ ನ್ಯೂಟ್ರೀಶಿಯಸ್ ಫುಡ್ ಪೌಡರನ್ನು ಹದಪ್ರಮಾಣದಲ್ಲಿ ಮಿನರ್ ವಾಟರ್ ಬೆರೆಸಿ ಹಸುಗಳ ಮುಂದಿಟ್ಟ.  ಹಾಲು ಹಿಂಡುವ ಮಿಷಿನ್ ತಂದು ಹಾಲು ಹಿಂಡಿದ . ಹಾಲಿನ ಫ್ಯಾಟ್ ಕಂಟೆಂಟ್ ಚೆಕ್ ಮಾಡಿ ನಂತರ ಅದನ್ನು ಡೈರಿಗೆ ಕೊಂಡೊಯ್ಯುವ ಕ್ಯಾನ್ ಗಳಲ್ಲಿ ತುಂಬಿಸಿ , ಅದನ್ನೊಯ್ಯುವ ಕೆಲಸಗಾರನಿಗೆ ಒಪ್ಪಿಸಿದ. ಮತ್ತೆ ಕೊಟ್ಟಿಗೆಯನ್ನೊಮ್ಮೆ ಡಿಸ್ಇನ್ಫೆಕ್ಟೆಂಟ್ ಹಾಕಿ ಸ್ವಚ್ಛಗೊಳಿಸಿದ. ಅಲ್ಲಿಗೆ ಅವನ ಅಂದಿನ ಬೆಳಗಿನ ಕೆಲಸಗಳೆಲ್ಲಾ ಮುಗಿಯಿತು. ಎಲ್ಲಾ ದನಗಳನ್ನೊಮ್ಮೆ ಗಮನಿಸಿ ಹೊರಟುಹೋದ.
ಅವನು ಹೊರಹೋದದ್ದನ್ನೇ ನೋಡಿದ B2, ಅವನು ಬಾಗಿಲು ಸರಿಯಾಗಿ ಹಾಕದಿದ್ದದ್ದನ್ನು ಗಮನಿಸಿತು. ಇದೇ ಸಮಯ ಎಂದು ನಿರ್ಧರಿಸಿತು. ಕಟ್ಟಿದ ಸರಪಳಿಯನ್ನೊಮ್ಮೆ ಬಲವಾಗಿ ಜಗ್ಗಿತು. ಕೆಲದಿನಗಳಿಂದ ಸಡಿಲಕೊಂಡಿದ್ದ ಅದರ ಕೊಂಡಿ ಕಳಚಿಕೊಂಡಿತು.  ನಿಧಾನವಾಗಿ  ಹೊರಹೊರಟಿತು. ಅಲ್ಲೇ ಇದ್ದ ಅದರ ಅಕ್ಕ   B1 ಗಾಭರಿಯಿಂದ ಏ ಎಲ್ಲಿಗೆ ಹೊರಟೆ? ವಾಪಾಸ್ ಬಾ ಎಂದು ಕೂಗಿದ್ದನ್ನು ಕೇಳಿಸಿಕೊಳ್ಳುವ ಮನಸ್ಥಿತಿ ಅದಕ್ಕಿರಲಿಲ್ಲ.

ಬೆಳ್ಳಿಯಜ್ಜಿ ಹೇಳಿದ ದಾರಿಯನ್ನು ನೆನಪಿಸಿಕೊಳ್ಳುತ್ತಾ ಆ ಆಧುನಿಕ ಗೋಶಾಲೆಯಿಂದ ಹೊರಹೊರಟ B2ಗೆ ಮೊದಲು ಸಿಕ್ಕಿದ್ದು ಕಪ್ಪನೆಯ ರಸ್ತೆ. ಅದರ ಮೇಲೆ ನಡೆಯಲೆಂದು ಕಾಲಿಡುವಾಗ ದೊಡ್ಡದೊಂದು ಶಬ್ದಕ್ಕೆ ಬೆಚ್ಚಿ ಅಪ್ರಯತ್ನವಾಗಿ ಹಿಂಸರಿಯಿತು . ದೊಡ್ಡ ಲಾರಿಯೊಂದು ಅದಕ್ಕಿಂತ ದೊಡ್ಡ ಶಬ್ದ ಮಾಡುತ್ತಾ ಹಾದುಹೋಯಿತು. ಶಬ್ದಕ್ಕೆ ಗಾಭರಿಗೊಂಡ B2 ನಿಧಾನವಾಗಿ ಸಾವರಿಸಿಕೊಂಡು ನಡೆಯತೊಡಗಿತು.
ಮನೆಗಳು ಯಾವಾಗ ಮುಗಿದು ಬಯಲು ಶುರುವಾಗುತ್ತೋ ಎಂದು ಯೋಚಿಸುತ್ತಾ ನಡೆಯುತ್ತಿತ್ತು. ಮೇಲೆ ಉರಿಯುವ ಸೂರ್ಯ , ಪಕ್ಕದಲ್ಲಿ ಕರ್ಕಶ ಶಬ್ದದೊಡನೆ ವೇಗವಾಗಿ ಓಡುವ ವಾಹನಗಳು, ಇದರೆಡೆಗೆ ಆಶ್ಚರ್ಯದಿಂದ ನೋಡುತ್ತಾ ಓಡಾಡುವ ಜನ ಎಲ್ಲವನ್ನೂ ಗಮನಿಸುತ್ತಾ ನಿಧಾನವಾಗಿ ನಡೆಯಿತು. ಎಷ್ಟು ದೂರ ನಡೆದರೂ ಮನೆಗಳು ಮುಗಿಯಲೇ ಇಲ್ಲ. ಎಲ್ಲೆಲ್ಲೂ ಎತ್ತರವಾದ ಬಿಲ್ಡಿಂಗ್ ಬಿಟ್ಟರೆ ಅಜ್ಜಿ ಹೇಳಿದ ಬಯಲು ಕಾಡು ಯಾವುದೂ ಎಷ್ಟು ಹೊತ್ತಾದರೂ ಸಿಗಲಿಲ್ಲ. ನಡೆದೂ ನಡೆದೂ B2 ದಣಿಯಿತು, ಬಾಯಾರಿಕೆ ಹಸಿವು ಬಾಧಿಸಲು ಪ್ರಾರಂಭವಾಯಿತು.  ರಸ್ತೆ ಬದಿಯಲ್ಲಿದ್ದ ಕಟ್ಟಡವೊಂದರ ನೆರಳಿನಲ್ಲಿ ನಿಂತಿತು.  ಅಲ್ಲೇ ಪಕ್ಕದ ಶಾಲೆಗೆ ಹೋಗಲು ಶಾಲಾಬಸ್ಸಿನಲ್ಲಿ ಬಂದಿಳಿದ ಹುಡುಗರ ತಂಡವೊಂದು ಈ ಮುದ್ದಾದ ಕರುವನ್ನು ನೋಡಿ ಮುದಗೊಂಡರು. ಕೆಳಗಿದ್ದ ಕಲ್ಲನ್ನೆತ್ತಿ ಎಸೆದನೊಬ್ಬ , ಇನ್ನೊಬ್ಬ ಇನ್ನೂ ಸ್ವಲ್ಪ ಹತ್ತಿರ ಬಂದು ಅದರ ಬಾಲವನ್ನು ಹಿಡಿದೆಳೆದ ,  ಈ ಹುಡುಗರ ಕಾಟದಿಂದ B2ಗೆ ಅಳು ಬಂದಂತಾಯ್ತು. ಅದು ಹೇಗೋ ಅವರಿಂದ ತಪ್ಪಿಸಿಕೊಂಡು ಓಡಲು ಪ್ರಾರಂಭಿಸಿತು. ಅಷ್ಟೆಲ್ಲ ನಡೆದು, ಓಡಿ ಅಭ್ಯಾಸವೇ ಇರದಿದ್ದ B2 ಸ್ವಲ್ಪ ದೂರ ಹೋಗುವಷ್ಟರಲ್ಲಿ ಸುಸ್ತಾಗಿ ರಸ್ತೆಯ ಪಕ್ಕದಲ್ಲಿ ಬಿದ್ದುಬಿಟ್ಟಿತು. 

ಎಷ್ಟೋ ಹೊತ್ತಿನಿಂದ ಏಳಲೂ ಚೈತನ್ಯವಿಲ್ಲದೆ ಬಿದ್ದಿದ್ದ ಈ ಕರುವನ್ನ ನೋಡಿದರೂ ನೋಡದವರಂತೆ ಓಡಾಡುತ್ತಲೇ ಇದ್ದರು ಮಾನವರು. ಬಾಯಾರಿಕೆ ಹಸಿವಿನಿಂದ ಬಳಲಿ ಬಿದ್ದಿದ್ದ B2 ಯೋಚಿಸುತ್ತಿತ್ತು . ಬೆಳ್ಳಿಯಜ್ಜಿ ಹೇಳಿದ್ದೆಲ್ಲವೂ ಸುಳ್ಳೆ ಹಾಗಾದರೆ ? ಕಾಡು , ಹುಲ್ಲುಗಾವಲು , ತೊರೆ ಎಂದೆಲ್ಲ ಕತೆ ಹೇಳಿದಳಲ್ಲ ಸುಮ್ಮನೆ , ಎಲ್ಲಿವೆ ಅವೆಲ್ಲಾ? ಏನೇನೆಲ್ಲ ಕನಸು ಕಂಡೆನಲ್ಲ ನಾನು . ಸುಂದರವಾದ ಹಸಿರು ಬಯಲಿನಲ್ಲಿ ಓಡುವ , ನೆಗೆದಾಡುವ ಕನಸು ,ಹಸಿರುಹಸಿರು ಹುಲ್ಲು ತಿನ್ನುವ ಕನಸು , ಮರದ ನೆರಳಿನಲ್ಲಿ ಮಲಗುವ ಕನಸು .....ಮಾನವರ ಮಕ್ಕಳು  ಮುದ್ದಿಸುತ್ತಿದ್ದರು ಎಂದಳಲ್ಲ ಅಜ್ಜಿ . ನನಗೆ ಸಿಕ್ಕ ಮಕ್ಕಳೇಕೆ ಹಾಗೆ ಹಿಂಸಿಸಿದರು? ......ಹಸಿವೆ , ಬಾಯಾರಿಕೆ ... ಈ ಕೆಟ್ಟ ಹೊರಪ್ರಪಂಚಕ್ಕಿಂತ ನನ್ನ ಕೊಟ್ಟಿಗೆಯೆ ಚೆನ್ನಾಗಿತ್ತಲ್ಲ , ಆ ಕೇರ್ ಟೇಕರ್ ಹೊಡೆದರೂ ಪುಡ್ ಕೊಡ್ತಾ ಇದ್ದ . ಅಮ್ಮ ಅಕ್ಕ ಎಲ್ಲಾ ಕಾಣ್ತಾ ಇದ್ರು , ಈಗ ವಾಪಾಸ್ ಹೋಗಬೇಕೆಂದರೂ ದಾರಿ ಗೊತ್ತಾಗ್ತಾ ಇಲ್ಲ , ಏಳೋದಿಕ್ಕೆ ಶಕ್ತಿ ಇಲ್ಲ ಛೆ! ಮನದಲ್ಲೇ ಹಲುಬುತ್ತಾ ಬಿದ್ದಿತ್ತು ಆ ಪುಟ್ಟ ಕರು.


ಸಾಯಂಕಾಲವಾಗುತ್ತಿತ್ತು . ಇಬ್ಬರು ಮನುಷ್ಯರು ಹತ್ತಿರ ಬಂದು ತನ್ನನ್ನು ಎತ್ತಲು ಪ್ರಯತ್ನಿಸುವುದನ್ನು ನೋಡಿ B2 ಸ್ವಲ್ಪ ಸಮಾಧಾನಗೊಂಡಿತು. ಇವರು ತನಗೇನಾದರೂ ಆಹಾರ ಕೊಡಬಹುದು ಎಂಬ ಆಸೆಯಿಂದ ತಲೆ ಎತ್ತಿ ಅವರನ್ನೇ ನೋಡಿ ಹ್ಂಬಾಆಆ... ಎಂದು ಕೂಗಿತು. ಅವರಿಬ್ಬರ ಸಹಾಯದಿಂದ ಸಂತಸದಿಂದ ಎದ್ದು ನಿಂತಿತು. ಅದನ್ನು ಎಳೆದು ತಾವು ತಂದು ನಿಲ್ಲಿಸಿದ್ದ ಲಗೇಜ್ ಆಟೋ ಒಳಗೆ ಹತ್ತಿಸಿದ ಆ ಮಾನವರಲ್ಲೊಬ್ಬ " ಒಳ್ಳೆ ಸೊಂಪಾದ ಕರು ಮಾರಾಯ ಮಧ್ಯಾಹ್ನದಿಂದ ಇಲ್ಲೇ ಬಿದ್ದುಕೊಂಡಿತ್ತು ..ಅದ್ಕೇ ನಿಂಗೆ ಫೋನ್ ಮಾಡಿದೆ , ಆ ಕರ್ನಾಟಕ ಮಟನ್ ಸ್ಟಾಲಿಗೆ ಮಾರಿದ್ರೆ ಒಳ್ಳೆ ಲಾಭ ಗ್ಯಾರಂಟಿ ಅಲ್ವಾ " ಎಂದಿದ್ದರ ಅರ್ಥ ತಿಳಿಯಲಿಲ್ಲ B2ಗೆ  .

4 comments:

  1. B2ನ ಕಥೆ ಎಂದಾಗ ಫಕ್ಕನೆ ಹೊಳೆಯಲಿಲ್ಲ. ಓದುತ್ತ ಹೋದಂತೆ, ಅರ್ಥ ಹೊಳೆಯುತ್ತ ಹೋದಂತೆ, ನಮ್ಮ ನವನಾಗರಿಕ ಸಂಸ್ಕೃತಿಗಾಗಿ ವ್ಯಥೆಯಾಯಿತು. ‘ಪುಣ್ಯಕೋಟಿ’ಯನ್ನು B2ಗೆ ಬದಲಾಯಿಸಿದ್ದೇವಲ್ಲ ಎಂದು ಮರುಕವಾಯಿತು. ಉತ್ತಮ ಶೈಲಿಯ allegorical ಕಥೆಗಾಗಿ ಅಭಿನಂದನೆಗಳು.

    ReplyDelete
  2. ಕಾದಂಬರಿ ವಸ್ತುವನ್ನು ಸದೃಡ ಕಥೆಯನ್ನಾಗಿಸಿದ ತಮ್ಮ ಶೈಲಿ ಇಷ್ಟವಾಯಿತು. ಆಧುನೀಕತೆ ಮನುಜರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಹೇಗೆ ಅಭಿಶಾಪವಾಗಿದೆ ಎಂಬುದನ್ನು ಮನ ತಟ್ಟುವಂತೆ ಮಾಡಿದ್ದಿರಿ.

    ReplyDelete