8 Sept 2017



"ಕೇವಲ ಎರಡು ಗಂಟೆಯಲ್ಲಿ ಈ ಗಿಡದ ಎಲ್ಲಾ ಎಲೆಗಳನ್ನು ತಿಂದುಹಾಕಿ, ಈಗ ಇನ್ನೊಂದು ಗಿಡವನ್ನ ತಿನ್ನುತ್ತಿವೆ ನೋಡು ಈ ಹುಳಗಳು" ಒಂದೂ ಎಲೆಗಳಿಲ್ಲದೆ ಬೋಳಾಗಿದ್ದ ಕಾಡುಹರಿವೆ ಗಿಡವನ್ನ ತೋರಿಸಿ ರಮೇಶಣ್ಣ ಹೇಳುತ್ತಿದ್ದ. ಅಲ್ಲಿ ಅಂಗಳದ ತುಂಬ ಹರಡಿಕೊಂಡಿದ್ದ ಚೀನಿಕಾಯಿ ಅಥವಾ ಸಿಹಿಗುಂಬಳ ಬಳ್ಳಿಯ ನಡುವೆ ನಾಲ್ಕಾರು ಕಾಡು ಹರಿವೆ ಗಿಡಗಳಿದ್ದವು. ಸೊಂಪಾಗಿ ಬೆಳೆದಿದ್ದ ಚೀನಿ ಬಳ್ಳಿಯ ಎಲೆಯನ್ನೊಂದನ್ನೂ ಅವು ತಿನ್ನುತ್ತಿರಲಿಲ್ಲ. ನೂರಾರು ಸಂಖ್ಯೆಯಲ್ಲಿ ಬಂದು ಕಾಡುಹರಿವೆ ಗಿಡವನ್ನು ಮುತ್ತಿಕೊಂಡಿದ್ದ  ಕೆಂಪು ತಲೆಯ ಕಪ್ಪುಬಣ್ಣದ ಕೀಟಗಳವು. ಗುಣಲಕ್ಷಣಗಳನ್ನು ನೋಡಿದರೆ ಒಂದು ವಿಧದ ಬೀಟಲ್ (ಓಡುಹುಳ) ಇರಬಹುದೆನ್ನಿಸಿತ್ತು.


 ನೋಡನೋಡುತ್ತಿದ್ದಂತೆ ಇನ್ನೊಂದು ಗಿಡವನ್ನೂ ತಿಂದು ಮುಗಿಸಿದ ಆ ಕೀಟಗಳು ಅಲ್ಲಿಯೇ ಹತ್ತಿರದಲ್ಲಿದ್ದ ಟೋಮ್ಯಾಟೋ ಗಿಡ ಹತ್ತುತ್ತಿದ್ದವು. ಹಿಂದೆಲ್ಲ ಊರಿನಲ್ಲಿ ಇವುಗಳನ್ನು ನೋಡಿದ ನೆನಪಿರಲಿಲ್ಲ. ಆದರೆ ಈಗ ಒಂದೆರಡು ವರ್ಷಗಳಿಂದ ಈ ಸಮಯದಲ್ಲಿ ಊರಿನ ಕೆಲ ಮನೆಗಳ ಕೈತೋಟದಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬ ಮಾಹಿತಿ ದೊರಕಿತು. ಅಷ್ಟೊಂದು ಸಂಖ್ಯೆಯಲ್ಲಿದ್ದ ಅವುಗಳು ಮತ್ತೆರಡು ದಿನಗಳಲ್ಲಿ ಕಾಣೆಯಾದವೆಂದು ತಿಳಿದುಬಂತು.


ಗೂಗಲ್ ಚಾಚ ಹೆಚ್ಚೇನೂ ಇದರ ಬಗ್ಗೆ ಹೇಳಲಿಲ್ಲವಾದರೂ ಕೆಲವೊಂದು ಮಾಹಿತಿ ದೊರಕಿತು. Blister beetles ಎಂಬ ಸಾಮಾನ್ಯ ಹೆಸರಿನಿಂದ ಗುರುತಿಸಲ್ಪಡುವ  Epicauta ಎಂಬ ಕುಟುಂಬ ಸೇರಿದ ಕೀಟಗಳಿವು.
ಈ ಬ್ಲಿಸ್ಟರ್ ಬೀಟಲ್ ಕುಟುಂಬಕ್ಕೆ ಸೇರಿದ ಹೆಚ್ಚಿನ ಕೀಟಗಳು ರೈತರಿಗೆ ಕಾಟಕೊಡುವ ಕೀಟಗಳ ಸಾಲಿಗೆ ಸೇರಿದವುಗಳಾಗಿವೆ. ಗುಂಪಾಗಿ ಇವು ಕೈತೋಟ, ಹೊಲಗಳಲ್ಲಿ ಬೆಳೆಗಳನ್ನು ನಾಶ ಮಾಡುತ್ತವೆ. ಅಲ್ಲದೆ ಹೆಚ್ಚಿನ ಕೀಟಗಳಲ್ಲಿ Cantharidin ಎಂಬ ಒಂದು ರೀತಿಯ ರಾಸಾಯನಿಕವಿದೆ.  ಈ ರಾಸಾಯನಿಕದ ಸಂಪರ್ಕವಾದರೆ ಚರ್ಮದ ಮೇಲೆ ಗುಳ್ಳೆಗಳಾಗುತ್ತವೆ.   "Spanish fly" ಎಂಬ ಬೀಟಲ್‍ನಿಂದ ತೆಗೆದ ರಾಸಾಯನಿಕವು ಕೆಲವೊಂದು ಚರ್ಮರೋಗಗಳಿಗೆ ಔಷಧವಾಗಿಯೂ ಬಳೆಕೆಯಲ್ಲಿತ್ತು.

ಕುದುರೆ, ಜಾನುವಾರುಗಳಿಗೆ ಹಾಕುವ ಹುಲ್ಲಿನಲ್ಲಿ ವಿಷಯುಕ್ತವಾದ ಬ್ಲಿಸ್ಟರ್ ಬೀಟಲ್‍ಗಳು ಇದ್ದರೆ ಪ್ರಾಣಾಪಾಯವಾಗುವ ಸಂಭವವಿದೆಯಾದ್ದರಿಂದ ಬೆಳೆಗಳನ್ನು ಕೊಯ್ದು ಹುಲ್ಲು ಒಣಗಿಸುವಾಗ ಇವು ಇಲ್ಲದಂತೆ ನೋಡಿಕೊಳ್ಳಬೇಕಾದದ್ದು ಅವಶ್ಯಕ.
ಮಣ್ಣು, ಕಲ್ಲುಗಳ ಮರೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಹೊರಬರುವ ಲಾರ್ವಾಗಳು ಜೇನುನೊಣ, ಗ್ರಾಸ್ ಹಾಪರ್ ಮೊದಲಾದ ಕೀಟಗಳನ್ನು ತಿನ್ನುತ್ತವೆ.
ಸಂಖ್ಯೆ ಕಡಿಮೆಯಿದ್ದಾಗ ಹಿಡಿದು ಕೊಲ್ಲುವುದು ಇವುಗಳನ್ನು ನಿಯಂತ್ರಿಸಲು ಇರುವ ಉಪಾಯ. ಹೆಚ್ಚಾದಾಗ ಕೀಟನಾಶಕಗಳೇ ಪರಿಹಾರ. 





ಇಲ್ಲಿ ಕಾಣಿಸಿದ ಬೀಟಲ್ ಬ್ಲಿಸ್ಟರ್ ಬೀಟಲ್‍ನ   ಯಾವ ಪ್ರಭೇದಕ್ಕೆ ಸೇರಿದೆ ಎಂಬುದು ಖಚಿತವಾಗಿ ತಿಳಿಯಲಿಲ್ಲವಾದರೂ Zoological Survey of India ಪ್ರಕಟಿಸಿದ ಪುಸ್ತಕವೊಂದರಲ್ಲಿ ಕ್ರಿ ಶ 1880 ರಷ್ಟು ಹಿಂದೆಯೆ "Haag-Rutenberg " ಎಂಬ ಜರ್ಮನ್ ವಿಜ್ಞಾನಿ ಪಶ್ವಿಮಘಟ್ಟದ  ಸಾಗರ ಪ್ರಾಂತ್ಯದಲ್ಲಿ "Epicauta divisa" ಎಂಬ ಬ್ಲಿಸ್ಟರ್ ಬೀಟಲ್ ಇವೆ ಎಂದು ಗುರುತಿಸಿದ್ದ ಎಂಬ ಮಾಹಿತಿ ದೊರಕಿತು. ಈಗ ನಮ್ಮ ಊರಿನಲ್ಲಿ ಕಾಣಿಸಿದ ಕೀಟ ಅದೇ ಇರಬಹುದೇ ಅಥವಾ ಬೇರಾವುದಾದರೂ ಪ್ರಭೇದ ಇರಬಹುದೆ ಎಂಬುದು ಸ್ಪಷ್ಟವಾಗಲಿಲ್ಲ.  

3 comments:

  1. ದೇವರೆ, ಎಂಥೆಂಥಾ ಜೀವಪ್ರಭೇದಗಳು ಭೂಮಿಯ ಮೇಲಿವೆ! ಇವುಗಳ ಮಾಹಿತಿಯನ್ನು ಸರಸವಾಗಿ ನೀಡುತ್ತಿರುವ ನಿಮಗೆ ಧನ್ಯವಾದಗಳು.

    ReplyDelete
  2. ಒಳ್ಳೆಯ ಮಾಹಿತಿ... ಅಬ್ಬ ಎಂತೆಂತ ಹುಳ ಇರುತ್ತವೆ......

    ReplyDelete