ಬೆಂಗಳೂರು ಮಹಾನಗರದ ಪಾರ್ಕೊಂದರಲ್ಲಿ ಒಂದು ಚಿಕ್ಕ ಮರದ ಎಲೆಗಳನ್ನು ನೋಡಿದೊಡನೆ ಅರೆ ಇದು ಲಕ್ಕಿ
ಸೊಪ್ಪಿನಂತಿದೆಯಲ್ಲಾ ಎಂದು ಯೋಚಿಸಿದೆ. ಒಂದು ಎಲೆಯನ್ನು ಕೀಳುತ್ತಿದ್ದಂತೆಯೆ ಚಿರಪರಿಚಿತವಾದ ಅದರ
ವಾಸನೆ ಮೂಗಿಗಡರಿ ಮನಸ್ಸು ಬಾಲ್ಯಕ್ಕೆ ಜಾರಿತ್ತು.
ಮಲೆನಾಡಿನ ನಮ್ಮ
ಊರಿನ ಮಣ್ಣುರಸ್ತೆಯ ಬದಿಯಲ್ಲಿ ಪೊದೆಯಂತೆ ಬೆಳೆವ ಸಸ್ಯ ಲಕ್ಕಿಗಿಡ. ಯಾರೂ ನೆಟ್ಟು ಬೆಳಸದ, ಯಾವುದೇ
ಆರೈಕೆಯನ್ನೂ ಬೇಡದ, ತನ್ನ ಪಾಡಿಗೆ ತಾನು ಬೆಳೆದು ನಳನಳಿಸುವ ಈ ಗಿಡ ನಮಗೆ ಅನೇಕ ರೀತಿಯಲ್ಲಿ ಉಪಯೋಗವಾಗುತ್ತಿತ್ತು
ಮತ್ತು ಕೆಲವೊಮ್ಮೆ ಅದರಿಂದ ಅಪಾಯವೂ ಎದುರಾಗುತ್ತಿತ್ತು.
ಈ ಗಿಡದ ಕಾಂಡಗಳು
ತೆಳ್ಳಗಿರುತ್ತವೆ. ಗಾಳಿ, ಮಳೆಯ ಬಿರುಸನ್ನು ತಡೆದುಕೊಂಡು ನೆಟ್ಟಗೆ ನಿಲ್ಲುವ ಕಾಂಡವು ಸುಲಭವಾಗಿ
ತುಂಡಾಗಂತೆ ಗಟ್ಟಿಮುಟ್ಟಾಗಿರುತ್ತವೆ. ಆದ್ದರಿಂದಲೇ ಈ ಸಸ್ಯದ ಕಾಂಡವು ಮಲೆನಾಡಿನ ಶಾಲೆಗಳ ಶಿಕ್ಷಕರುಗಳ
ಅತ್ಯಂತ ಪ್ರೀತಿಯ ಆಯುಧವಾಗಿರುತ್ತಿತ್ತು. ತರಗತಿಯ “ಮಾನೀಟರ್’ ಗೆ ಮೇಷ್ಟ್ರು “ಲಕ್ಕಿಬರಲು ತಗಂಬಾ ಹೋಗ್” ಎಂದು ಹೇಳಿದರೆಂದರೆ ಹೋಂ ವರ್ಕ್
ಮಾಡದವರಿಗೆ, ಪುಂಡ ಹುಡುಗರಿಗೆ ಕಾಲು ನಡುಗಲು ಪ್ರಾರಂಭವಾಗುತ್ತಿತ್ತು!! “ಲಕ್ಕಿಬರಲ” ಹೊಡೆತ ತಿಂದವರು
ಅದರ ಉರಿಯನ್ನು ಅನೇಕ ದಿನಗಳವರೆಗೆ ಮರೆಯಲಾಗುತ್ತಿರಲಿಲ್ಲ!! ತೀರಾ ತುಂಟ ಮಕ್ಕಳನ್ನು ದಾರಿಗೆ ತರಲು ಮನೆಗಳಲ್ಲೂ ಒಂದೆರಡಾದರೂ
“ಲಕ್ಕಿ ಬರಲು” ಇದ್ದೇ ಇರುತ್ತಿತ್ತು. ಅಮ್ಮ ಅದನ್ನು ಇಟ್ಟ ಜಾಗವನ್ನು ನೋಡಿಕೊಂಡ, ಅಮ್ಮನಿಗೆ ಕಾಣದಂತೆ
ಮುರಿದೆಸೆದು ಗೆದ್ದೆ ಎಂದು ಬೀಗುವ ತುಂಟರಿಗೇನೂ ಕೊರತೆಯಿರಲಿಲ್ಲ.
ಆದರೆ ಮನೆಯ ಅಕ್ಕಪಕ್ಕದಲ್ಲೋ ಎದುರಿನ ಬೀದಿಯಲ್ಲೋ ಲಕ್ಕಿಗಿಡದ ದೊಡ್ಡ ಪೊದೆಯೇ ಇರುತ್ತಿದ್ದುದರಿಂದ
ಈ ಸಂತಸ ಹೆಚ್ಚುಹೊತ್ತು ಇರುತ್ತಿರಲಿಲ್ಲ ಅಷ್ಟೇ.
ಇನ್ನು “ಲಕ್ಕಿಸೊಪ್ಪು”
ನಮಗೆ ಅನೇಕ ಆಟಕ್ಕೆ ಒದಗುತ್ತಿದ್ದ ಅತ್ಯಂತ ಪ್ರೀತಿಯ ವಸ್ತುವಾಗಿತ್ತು. ಅದೊಂದು ಪರಮ ಪವಿತ್ರವಾದ
ಸೊಪ್ಪೆಂಬುದು ನಮ್ಮೆಲ್ಲರ ನಂಬಿಕೆಯಾಗಿದ್ದರಿಂದ ಪ್ರತೀ ದಿನ ಒಂದಿಷ್ಟು ಸೊಪ್ಪನ್ನು ಕೊಯ್ದು ಯೂನಿಫಾರಂ
ಲಂಗದ ಸೀಕ್ರೆಟ್ ಜೇಬಿನಲ್ಲೋ ಅಥವಾ ಜಾಮಿಟ್ರಿ ಬಾಕ್ಸಿನಲ್ಲೋ ಇಟ್ಟುಕೊಂಡಿರುತ್ತಿದ್ದೆವು. ಹೀಗೆ ಸೊಪ್ಪನ್ನು
ಇಟ್ಟುಕೊಂಡವರಿಗೆ ಸಗಣಿ ಮೆಟ್ಟುವುದರಿಂದಾಗಲೀ, “ಮುಚ್ಚಿಟ್ಟು” ಆದವರನ್ನು ಮುಟ್ಟಿದರಾಗಲೀ ಯಾವುದೇ
ಮೈಲಿಗೆ(?) ಉಂಟಾಗುತ್ತಿರಲಿಲ್ಲ!! ಯಾರದರೂ ಹೀಗೆ ಸೊಪ್ಪು ಇಟ್ಟುಕೊಳ್ಳಲು ಮರೆತಿದ್ದರೆ ಅವರಿಗೆ ಹೇಗಾದರೂ
ಸಗಣಿ ಮುಟ್ಟಿಸಿ ನೀನು ಮುಚ್ಚಿಟ್ಟು ದೂರ ಹೋಗು ಎಂದು ಅಣಕಿಸಿ ನಗುತ್ತಿದ್ದೆವು!!
ಇದೇ ಕಾನ್ಸೆಪ್ಟ್
ಇಟ್ಟುಕೊಂಡು ಒಂದು ಆಟವನ್ನು ಕೂಡಾ ಆಡುತ್ತಿದ್ದ ನೆನಪು. ಜೂಟಾಟದಂತೆಯೆ ಇದ್ದ ಈ ಆಟದಲ್ಲಿ ಲಕ್ಕಿ
ಸೊಪ್ಪಿನ ಗಿಡವನ್ನು ಹಿಡಿದುಕೊಂಡವರನ್ನು ಕಳ್ಳ ಔಟ್ ಮಾಡುವಂತಿರಲಿಲ್ಲ!!
ಇನ್ನೊಂದು ವಿಚಿತ್ರ
ಆಟದಲ್ಲಿ ಲಕ್ಕಿಸೊಪ್ಪನ್ನು ಕೈಯಲ್ಲಿ ಇಟ್ಟುಕೊಂಡವರು, ಅದಿಲ್ಲದವರ ಬೆನ್ನಿಗೆ “ಲಕ್ಕಿ ಸೊಪ್ಪಿನ ಗುದ್ದು”
ಕೊಡುವುದು!! ಒಟ್ಟಿನಲ್ಲಿ ಹೊಡೆದಾಡಿಕೊಳ್ಳಲು ಒಂದು ನೆಪ!!
ಮನೆಕಟ್ಟುವ ಆಟದಲ್ಲಿ
ಈ ಗಿಡದ ಹೆರೆಗಳನ್ನು ಮನೆಯ ಮುಚ್ಚಿಗೆಗೆ ಬಳಸುತ್ತಿದ್ದೆವು.
ಅಡಿಗೆ ಆಟದಲ್ಲಿ ಇದರ ಸೊಪ್ಪಿನ ಸಾರು ತಯಾರಾಗುತ್ತಿತ್ತು!!
ಹೀಗೆ ನಮ್ಮ ಬಾಲ್ಯದಲ್ಲಿ
ನಮ್ಮ ದಿನನಿತ್ಯದ ಆಟದ ಸರಕಾಗಿದ್ದ ಲಕ್ಕಿಗಿಡ, ದಾರಿಯ ಬದಿಗಳಲ್ಲಿ ಪೊದೆಯಂತೆ ಹೆಚ್ಚೆಂದರೆ ಏಳೆಂಟು ಅಡಿಗಳಷ್ಟು ಎತ್ತರಕ್ಕೆ ಬೆಳೆವ ಸಸ್ಯ.
ಇಲ್ಲಿ ಬೆಂಗಳೂರಿನ ಪಾರ್ಕೊಂದರಲ್ಲಿ ಇದು ಸುಮಾರು ಹತ್ತು ಅಡಿಯ ಚಿಕ್ಕ ಮರದಷ್ಟು ಎತ್ತರಕ್ಕೆ ಬೆಳೆದಿದೆ. ಹಾಗಾದರೆ ಇವು ಒಂದೇ ಕುಲಕ್ಕೆ ಸೇರಿದವುಗಳಾದರೂ ಬೇರೆ ಬೇರೆ
ಪ್ರಭೇದವೇ? ಅಥವಾ ಗಾತ್ರವೊಂದು ಬಿಟ್ಟರೆ ಬೇರೆಲ್ಲ ಗುಣಲಕ್ಷಣಗಳೂ ಒಂದೇ ಆಗಿರುವುದರಿಂದ, ಹವಾಮಾನಕ್ಕೆ
ತಕ್ಕಂತೆ ಗಾತ್ರದಲ್ಲಿ ಬದಲಾವಣೆ ಸಸ್ಯಲೋಕದಲ್ಲಿ ಸಹಜವೂ
ಆಗಿರುವುದರಿಂದ ಒಂದೇ ಪ್ರಭೇದವೇ ಸರಿಯಾಗಿ ನಿರ್ಧರಿಸಲಾಗಲಿಲ್ಲ.
ಸಸ್ಯಶಾಸ್ತ್ರೀಯವಾಗಿ
Vitex negundo(Nirgundi) ಎಂದು ಕರೆಸಿಕೊಳ್ಳುವ ಈ ಸಸ್ಯ ಏಷಿಯಾಖಂಡದ ಹೆಚ್ಚಿನ
ದೇಶಗಳಲ್ಲಿ, ಆಫ್ರಿಕಾದಲ್ಲಿ ಸಹಜವಾಗಿ ಬೆಳೆಯುತ್ತದೆ. ಕನ್ನಡದಲ್ಲಿ ಲಕ್ಕಿಗಿಡ, ಬಿಳಿನೆಕ್ಕಿ ಎಂಬ
ಹೆಸರಿದೆ. ಸಂಸ್ಕೃತದಲ್ಲಿ ಸಿಂಧುವಾರ, ನಿರ್ಗುಂದಿ, ಸುರಸ, ನೀಲಮಂಜರಿ, ಸಿಂಧುಕ ಇತ್ಯಾದಿ ಹೆಸರುಗಳಿವೆ.
ಗಿಡವು ಆರರಿಂದ ಹನ್ನೆರಡು ಅಡಿಗಳವರೆಗೆ ಬೆಳೆಯುತ್ತದೆ.
ಗಿಡದ ಕಾಂಡವು ಸಪೂರವಾಗಿದ್ದರೂ ಸದೃಡವಾಗಿರುತ್ತವೆ. ಐದು ಎಲೆಗಳ ಗುಚ್ಛವು ಒಂದೇ ಎಲೆಯಂತೆ ತೋರುತ್ತದೆ.
ಹೂಗುಚ್ಛವು ಎರಡು-ಮೂರು ಇಂಚು ಉದ್ದವಾಗಿದ್ದು ತೆಳುನೀಲಿ ಅಥವಾ ನೀಲಿ ಬಣ್ಣದ ಸಣ್ಣ ಹೂವುಗಳಿವೆ.
ಬಿಳಿಲಕ್ಕಿ ಮತ್ತು ಕರೇಲಕ್ಕಿ ಎಂಬ ವಿಧಗಳಿದ್ದು,
ಕರೀಲಕ್ಕಿ ಗಿಡದ ಕಾಂಡ ಮತ್ತು ಎಲೆಗಳು ಸ್ವಲ್ಪ ಕಡುಬಣ್ಣ ಹೊಂದಿರುತ್ತದೆ. ಅಲ್ಲದೇ ಹೂವುಗಳ ಬಣ್ಣದಲ್ಲೂ
ಸ್ವಲ್ಪ ವ್ಯತ್ಯಾಸ ಇರುತ್ತದೆ.
ಸಸ್ಯದ ಬೇರು, ಎಲೆಗಳು, ಬೀಜಗಳು ಅತ್ಯಂತ ಔಷಧೀಯ
ಗುಣವುಳ್ಳದ್ದಾಗಿರುವುದರಿಂದ ಆಯುರ್ವೇದ, ಯುನಾನಿ, ಹೋಮಿಯೋಪತಿ, ಮನೆಮದ್ದು ಇತ್ಯಾದಿ ವೈದ್ಯಪದ್ಧತಿಯಲ್ಲಿ
ಅನೇಕ ರೋಗಗಳಿಗೆ ಇದನ್ನು ಉಪಯೋಗಿಸುತ್ತಾರೆ.
ಆಯುರ್ವೇದ ವೈದ್ಯಪದ್ಧತಿಯಲ್ಲಿ ಈ ಗಿಡದ ಬೇರು,
ಎಲೆ, ಬೀಜಗಳಿಂದ ತಯಾರಿಸಿದ ಔಷಧಿಗಳನ್ನು ಅಸ್ತಮಾ, ಕಫ, ಕೆಮ್ಮು ಮುಂತಾದ ರೋಗಗಳಿಗೆ, ಹೊಟ್ಟೆಹುಳುನಾಶಕವಾಗಿ,
ಉರಿಯೂತವಿನಾಶಕವಾಗಿ, ವಿಷನಿವಾರಕವಾಗಿ, ಉಪಯೋಗಿಸುತ್ತಾರೆ.
ಇದಲ್ಲದೇ ಇನ್ನೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸ್ತ್ರೀಯರಲ್ಲಿ ಋತುಚಕ್ರಕ್ಕೆ ಸಂಭಂದಿಸಿದ ದೋಷಗಳನ್ನು ನಿವಾರಿಸುತ್ತದೆ,
ಉತ್ತಮ ಜೀರ್ಣಕಾರಿ, ಉತ್ತಮ ನೋವುನಿವಾರಕ, ಕೀಟನಾಶಕ ಕೂಡಾ.
ರೋಮನ್ನರ ನಂಬಿಕೆಯಂತೆ ಇದರ ಎಲೆಗಳು ಲೈಂಗಿಕಾಪೇಕ್ಷೆಯನ್ನು
ಕಡಿಮೆಗೊಳಿಸುತ್ತವೆಯಂತೆ. ಆದ್ದರಿಂದಲೇ ಇದಕ್ಕೆ “ chaste tree” (ಶುಧ್ಧವಾದ, ಪವಿತ್ರವಾದ
ಮರ) ಎಂಬ ಹೆಸರೂ ಇದೆ.
ಈಗೆಲ್ಲಾ ಮಾತೆತ್ತಿದರೆ ಲ್ಯಾಬ್ ಟೆಸ್ಟ್, ಸ್ಕ್ಯಾನಿಂಗ್,
ಎಕ್ಸ್ ರೇ ಎಂಬ ಕಾಲವಾಗಿರುವುದರಿಂದ ಇಂತಹ ಔಷಧೀಯ ಸಸ್ಯಗಳ ಬಗ್ಗೆ ಅರಿವಿರುವವರು, ಮನೆಯಲ್ಲೇ ಔಷಧಿ ತಯಾರಿಸಿ ಉಪಯೋಗಿಸುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದು
ವಿಷಾದನೀಯ.
ನಿಜಕ್ಕೂ ಇದರ ಔಷಧೀಯ ಗುಣಗಳ ಬಗ್ಗೆ ಅರಿತಾಗ ಇದೊಂದು
ಪವಿತ್ರವಾದ ಮರವೇ ಎಂಬುದು ಅರಿವಾಗುತ್ತದೆ. ಬಾಲ್ಯದಲ್ಲಿ ಇದ್ಯಾವುದರ ಅರಿವಿಲ್ಲದೆಯೂ ಇದೊಂದು ಶುದ್ಧೀಕರಿಸುವ
ಗಿಡವೆಂದು ನಂಬಿದ್ದೆವು!! ಹಿರಿಯರು ಕಿರಿಯರಿಗೆ ಇದು ಉಪಯುಕ್ತ ಸಸ್ಯ ಎಂಬ ಅರಿವನ್ನು ಇಂತಹ ನಂಬಿಕೆಗಳನ್ನು
ಬಿತ್ತುವುದರ ಮೂಲಕವೇ ದಾಟಿಸುತ್ತಿದ್ದರೇನೋ ಅಲ್ಲವೇ?
(ಜೂನ್ ತಿಂಗಳ "ಹಸಿರುವಾಸಿ" ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ )
Madam
ReplyDeleteI got this link through Facebook.
Can I connect you through your Facebook link.
I am not able to find you on Facebook.
Kindly let me know ,, as I want follow on Facebook as write-ups by thought are excellent and I don't want to miss.
Thank you
DeleteThought-You.
ReplyDeleteಮೇಡಮ್, ನನ್ನ ಗಣಕಯಂತ್ರದ ಸಮಸ್ಯೆಯಿಂದಾಗಿ, ನಿಮ್ಮ ಲೇಖನವನ್ನು ಈಮೊದಲೇ ನೋಡಲಾಗಲಿಲ್ಲ. ಇದೀಗ ನೋಡಿದೆ. ಮಾಹಿತಿ ಹಾಗು ವಿನೋದದಿಂದ ಪೂರಿತವಾದ ನಿಮ್ಮ ಲೇಖನವು ಖುಶಿಯನ್ನು ಕೊಟ್ಟಿತು. ಧನ್ಯವಾದಗಳು.
ReplyDeleteVery nice article
ReplyDelete