1 Mar 2020

ಮಾಯಾಲೋಕ



{disclaimer - ಹೆಂಡಿಂಗ್ ನೋಡಿ  ತೇಜಸ್ವಿಯವರ "ಮಾಯಾಲೋಕ"ದ ಬಗ್ಗೆ ಏನೋ ಬರೆದಿರಬೇಕು ಎಂದುಕೊಳ್ಳಬೇಡಿ.  ಇದಕ್ಕೆ ಅದಕ್ಕಿಂತ ಸೂಕ್ತವಾದ ಹೆಸರು ದೊರಕಲಿಲ್ಲವಾದ್ದರಿಂದ ಈ ಹೆಸರು}

ಊರಿಗೆ ಹೋದಾಗಲೆಲ್ಲ ನಾನು ಹೆಚ್ಚಿನ ಸಮಯ ಕಳೆಯುವುದು ಅಂಗಳದಲ್ಲೇ. ಅಲ್ಲಿ ಅಕ್ಕ ಬೆಳೆಸಿರುವ ಒಂದಿಷ್ಟು ಸೇವಂತಿಗೆ, ದಾಸವಾಳ, ಕರಿಬೇವು, ಗುಲಾಬಿ ಗಿಡಗಳು, ಆ ಗಿಡಗಳನ್ನಾಶ್ರಯಿಸಿ ಬದುಕುವ ಹೆಸರು ಗೊತ್ತಿಲ್ಲದ ಅನೇಕಾನೇಕ ಕೀಟಗಳು ಇವನ್ನೆಲ್ಲಾ ಗಮನಿಸುತ್ತಾ ಕುಳಿತುಕೊಳ್ಳುವುದು ಸ್ವರ್ಗ.  ಎದುರಿನ  ರಸ್ತೆಯಲ್ಲಿ ಒಂದಿಷ್ಟು ದನಗಳು ಬಂದು ಕರೆಂಟ್ ಕಂಬಕ್ಕೆ ಮೈ ತಿಕ್ಕಿ ತುರಿಕೆ ಪರಿಹರಿಸಿಕೊಳ್ಳುವುದು, ಮಂಗಗಳು ತಮ್ಮ ಮರಿಗಳನ್ನು ಎದೆಗವಚಿಕೊಂಡು ತೆಂಗಿನಮರವನ್ನು ಸರಸರನೆ ಏರಿ ತೆಂಗಿನಕಾಯಿಯನ್ನು ಕಿತ್ತು ನೀರು ಕುಡಿದು ಎಸೆಯುವುದು, ಯಾರಾದರೂ ಮಾತನಾಡಿಸಿದರೆ ಕುಣಿಕುಣಿದು ಮೈಮೇಲೆ ಬರುವ ಸುಂದರಿ ಎಂಬ ಬೀದಿನಾಯಿಯ ನರ್ತನ ಎಲ್ಲವೂ ನನ್ನ ಪಾಲಿಗೆ ಎಷ್ಟುಬಾರಿ ನೋಡಿದರೂ ಬೇಸರವಾಗದ "ಮಲೆಗಳಲ್ಲಿ ಮದುಮಗಳು" ನಾಟಕದಂತೆ!!

ಇತ್ತೀಚೆಗೊಮ್ಮೆ ಊರಿಗೆ ಹೋದಾಗ ಹೀಗೆ ಒಂದು ಸೇವಂತಿಗೆ ಗಿಡವನ್ನು ನೋಡುತ್ತಾ ನಿಂತಿದ್ದೆ. ಹೂವುಗಳೆಲ್ಲಾ ಅರಳಿ ಬಾಡುವ ಹಂತದಲ್ಲಿದ್ದವು. ಗಿಡದ ಅನೇಕ ಎಲೆಗಳೂ ಬಾಡಿದ್ದವು. ಆಗ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ತೆಳುವಾದ ಜೇಡರ ಬಲೆಯಂತಹ ದಾರ ಇರುವುದು ಕಾಣಿಸಿತು, ಹಾಗೆ ಅಲ್ಲಿ ಅನೇಕ ಜೇಡಗಳು ಬಲೆ ಕಟ್ಟಿಕೊಂಡಿರುವುದು ಅತೀ ಸಾಮಾನ್ಯ. ಆದರೆ ಈ ತೆಳುವಾದ ಎಳೆಯಲ್ಲಿ  ಒಣಗಿದ ಸೇವಂತಿಗೆ ಎಲೆಯಂತಿದ್ದ ಕಸವೊಂದಿತ್ತು. ಅದು ನಿಧಾನವಾಗಿ ಮುಂದೆ ಚಲಿಸುತ್ತಿತ್ತು!  ಗಾಳಿಯಿಂದಾಗಿ ಹಾಗೆ ಕಾಣಿಸುತ್ತಿದೆಯೇನೋ ಎಂದುಕೊಂಡರೂ ಸ್ವಲ್ಪ ಅನುಮಾನವಾಗಿ ಅದನ್ನೇ ಗಮನಿಸುತ್ತಿದ್ದೆ. ನಿಧಾನವಾಗಿ ಆ ಬಲೆಯ ಎಳೆಯ ಮೇಲೆ ಮುಂದೆ ಹೋದ ಆ ಕಸದಂತಹ ವಸ್ತು ಆ ಕಡೆಯಿದ್ದ ರೆಂಬೆಯ ಬಳಿ ಹೋಗುತ್ತಿದ್ದಂತೆಯೆ ಮುಂದೆ ಮೂರು ಕಾಲು, ಹಿಂದೆ ಮೂರುಕಾಲುಗಳನ್ನು ಒಂದು ಕ್ಷಣ ಅಗಲಿಸಿತು. ತಕ್ಷಣ ಇದ್ಯಾವುದೋ ಕೀಟ ಎಂಬ ಉತ್ಸಾಹದಲ್ಲಿ ನಾನು ಎಳೆಯ ಸಮೇತ ಕೈಗೆತ್ತಿಕೊಂಡೆ. ಒಂದು ನಿಮಿಷ ನನ್ನ ಕೈಯಲ್ಲೇ ಆಕಡೆ ಈಕಡೆ ಚಲಿಸುತ್ತಿದ್ದ ಆ ಕೀಟ ಮತ್ತೊಂದು ಕ್ಷಣದಲ್ಲಿ, ಥೇಟ್ ಜೇಡ ಬಲೆಯನ್ನು ಅಂಟಿಸಿ ಅದರ ಎಳೆಯನ್ನು ಹಿಡಿದು ತೇಲಿ ಹೋಗುವಂತೆಯೆ ನನ್ನ ಕೈಯಿಂದ ಇಳಿದು ತೇಲಿಕೊಂಡು ಹೋಗಿ ಸೇವಂತಿಗೆಯ ಗಿಡದ ಮೇಲೆ ಬಿತ್ತು, ನಂತರ ಎಷ್ಟೇ ಹುಡುಕಿದರೂ ಕಾಣಿಸಲೇ ಇಲ್ಲ.
ಒಣಗಿದ ಸೇವಂತಿಗೆ ಎಲೆ

ಒಣಗಿದ ಎಲೆಯಂತೆಯೆ ಕಾಣುವ ಕೀಟ
ಒಂದು ಕ್ಷಣಮಾತ್ರ ತನ್ನ ಇರುವನ್ನು ತೋರಿ ಕೊನೆಗೆ ನನ್ನ ಭ್ರಮೆಯೇನೋ ಎಂಬಂತೆ ಮಾಯವಾದ ಆ ಕೀಟ ಬಹುಶಃ ಸೇವಂತಿಗೆ ಗಿಡವನ್ನಷ್ಟೇ ತನ್ನ ವಾಸಸ್ಥಾನವನ್ನಾಗಿಸಿಕೊಂಡು ಬದುಕುತ್ತಿರುವ ಜೀವಿಯಾಗಿರಬಹುದೇ? ಅದಕ್ಕಾಗಿಯೇ ತನ್ನ ದೇಹವನ್ನು ಒಣಗಿದ ಸೇವಂತಿಗೆ ಎಲೆಯಂತಾಗಿಸಿಕೊಂಡಿದೆಯೇ ? ಇಂತಹ ಇನ್ನೆಷ್ಟು ಜೀವಿಗಳು ನಮಗೇ ಅರಿವಿಲ್ಲದಂತೆ ನಮ್ಮ ಸುತ್ತಮುತ್ತ ವಾಸಿಸುತ್ತಿವೆಯೋ ಬಲ್ಲವರಾರು?

ಆ ಕೀಟ ಕೊನೆಗೂ ಕಾಣಿಸಲೇ ಇಲ್ಲವೆಂಬ ನಿರಾಶೆಯಲ್ಲಿ, ಇನ್ನೇನಾದರೂ ನಾಟಕ ನೋಡಲು ಸಿಗಬಹುದಾ ಎಂದು ಪರೀಕ್ಷಿಸುತ್ತಿದ್ದವಳಿಗೆ ಮತ್ತೊಂದು ಗಿಡಕ್ಕೆ ಆಧಾರವಾಗಿ ನೆಟ್ಟಿದ್ದ ಕೋಲೊಂದರ ತುದಿಯಲ್ಲಿ ಪುಟ್ಟ ಜೇಡವೊಂದು ಕಾಣಿಸಿತು. ಅದರ ಬಣ್ಣ ಆ ಒಣಗಿದ ಕೋಲಿನ ಬಣ್ಣವನ್ನೇ ಹೋಲುತ್ತಿತ್ತು. ನಾನು ಅದರ ಒಂದು ಫೋಟೋ ತೆಗೆಯೋಣವೆಂದು ಮೊಬೈಲ್ ಹತ್ತಿರ ತೆಗೆದುಕೊಂಡು ಹೋದೆ, ಸರಕ್ಕನೆ ಕೋಲಿನ ಆಚೆ ದಿಕ್ಕಿಗೆ ಚಲಿಸಿತು. ನಾನು ಅಲ್ಲೇ ನನ್ನ ಕೈಚಾಚಿದೆ, ಈ ಬಾರಿ ಇನ್ನೊಂದು ದಿಕ್ಕಿಗೆ ತಿರುಗಿತು! ಹೀಗೇ ಅದು ಹೋದ ದಿಕ್ಕಿಗೆಲ್ಲ ನನ್ನ ಕೈ ಕೂಡಾ ಚಲಿಸಿದ್ದಷ್ಟೇ ಸಿಕ್ಕ ಭಾಗ್ಯ, ಫೋಟೋ ತೆಗೆಯುವಷ್ಟು ಸಮಯ ಅದು ಕೊಡಲೇ ಇಲ್ಲ. ನಾನು ಅದನ್ನು ಮುಟ್ಟಲಿಲ್ಲ, ಅದಿರುವ ಗಿಡವನ್ನೂ ಅಲುಗಾಡಿಸಲಿಲ್ಲ. ಕೇವಲ ಹತ್ತಿರ ಕೈ ಚಾಚಿದ್ದಷ್ಟೇ. ಆ ಪುಟಾಣಿ ಜೀವಿಗೆ ಕೂಡ  ತನ್ನ ಸುತ್ತಮುತ್ತ ನಡೆಯುವ ಅತೀ ಚಿಕ್ಕ ಬದಲಾವಣೆಯನ್ನೂ ಗ್ರಹಿಸುವ ಶಕ್ತಿ ಇದೆಯೆಂದಾಯ್ತಲ್ಲವೆ!

ಮನೆಯಂಗಳದ ಒಂದೆರಡು ಗಿಡಗಳಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ನಾಟಕ ನಡೆಯುತ್ತಿರುತ್ತದೆಯಾದರೆ  ಇನ್ನು ಸಹಸ್ರಾರು ಗಿಡಮರಗಳುಳ್ಳ ಕಾಡಿನಲ್ಲಿನ್ನೆಷ್ಟು ನಾಟಕ ನಡೆಯುತ್ತದೋ ಎಂಬ ಕುತೂಹಲ ಮನದಲ್ಲಿ ಮೂಡಿತು. ನನಗೆ ಯಾವುದಾದರೂ ಕತೆ, ಕಾದಂಬರಿಗಳಲ್ಲಿ “ಕಾಡಿನ ನೀರವ ಮೌನದಲ್ಲಿ..ನಿಶ್ಚಲವಾಗಿದ್ದ ಕಾಡು...ಎಲೆ ಅಲುಗಿದ ಸದ್ದು.....” ಇತ್ಯಾದಿ ಸಾಲುಗಳನ್ನು ಓದಿದಾಗಲೆಲ್ಲಾ ಅನ್ನಿಸುತ್ತದೆ, ಕಾಡಿನಲ್ಲಿ ಅಷ್ಟೆಲ್ಲ ಜೀವಜಾಲ ಇರುವಾಗ ಮೌನ, ನಿಶ್ಚಲತೆ ಸಾಧ್ಯವೇ? ಪ್ರತೀಕ್ಷಣದಲ್ಲಿ ಅಲ್ಲೊಂದು ಜೈವಿಕಚಟುವಟಿಕೆ ನಡೆಯುತ್ತಿರಲೇಬೇಕು, ನಮ್ಮ ಕಿವಿಗೆ ಕೇಳಿಸದ, ಕಣ್ಣಿಗೆ ಕಾಣಿಸದ ಘಟನೆಗಳು ನಡೆಯುತ್ತಿರಲೇಬೇಕಲ್ಲವೆ?

5 comments:

  1. ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದೀರಿ! ಆ ಕೀಟದ ಚಿತ್ರಗಳನ್ನೂ ನೀಡಿದ್ದೀರಿ. ತುಂಬಾ ಸಂತೋಷವಾಯಿತು. ಧನ್ಯವಾದಗಳು.

    ReplyDelete
  2. ಲೇಖನ ತುಂಬಾ ಚೆನ್ನಾಗಿದೆ. ಸೂಕ್ಷ್ಮವಾದ ಅವಲೋಕನಕ್ಕೆ ಉತ್ತಮವಾದ ಬರವಣಿಗೆಯ ರೂಪ.

    ReplyDelete
  3. ಲೇಖನ ತುಂಬಾ ಚೆನ್ನಾಗಿದೆ. ಸೂಕ್ಷ್ಮವಾದ ಅವಲೋಕನಕ್ಕೆ ಉತ್ತಮವಾದ ಬರವಣಿಗೆಯ ರೂಪ

    ReplyDelete
  4. ಮೌನದೊಳಗೊಂದು ಜೀವಜಾಲ

    ReplyDelete