ಬೆಂಗಳೂರು-ಶಿವಮೊಗ್ಗ ಹೆದ್ದಾರಿಯ ವಿಸ್ತರಣಾ ಕಾರ್ಯ ಪ್ರಾರಂಭವಾದಾಗಿನಿಂದಲೂ
ಊರಿಗೆ ಹೋಗುವಾಗ ನಾವು ಬೆಂಗಳೂರು-ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ
ಮಾರ್ಗ ಅಥವಾ ಬೆಂಗಳೂರು-ಹಿರಿಯೂರು-ಹೊಸದುರ್ಗ-ತರಿಕೆರೆ-ಶಿವಮೊಗ್ಗ ಮಾರ್ಗದಲ್ಲಿ ಹೋಗುವುದು.
ಹೊಸದುರ್ಗ-ತರಿಕೆರೆ ಮಾರ್ಗದಲ್ಲಿ ಹೋಗುವಾಗಲೆಲ್ಲ ಹೊಸದುರ್ಗದ ಬಳಿ ಇರುವ ವಾಣಿವಿಲಾಸ ಸಾಗರಕ್ಕೆ
ದಾರಿ ಎಂಬ ಬೋರ್ಡ್ ಆಕರ್ಷಿಸುತ್ತಿತ್ತು. ಆದರೆ ಯಾವಾಗಲೂ ಎಲ್ಲಿಯಾದರೂ ಹೊರಟೊಡನೆ ಗಮ್ಯ
ತಲುಪುವುದೊಂದೇ ಗುರಿ, ಮಧ್ಯೆ ಅಡ್ಡದಾರಿ ಹಿಡಿದರೆ ಅದು ಡ್ರೈವರ್
ಕೆಲಸಕ್ಕೆ ಕುಂದೆಂದು ಭಾವಿಸಿರುವ ಯಜಮಾನರ ಕಾರಣದಿಂದಾಗಿ ಆ ಬೋರ್ಡ್ ಅನುಸರಿಸುವುದು
ಸಾಧ್ಯವಾಗುತ್ತಿರಲಿಲ್ಲ. ಅಂತೂ ಇಂತೂ ಈಗೊಂದು ತಿಂಗಳ ಹಿಂದೆ ಊರಿಗೆ ಹೋಗುವಾಗ ಸ್ವಲ್ಪ
ನಿಧಾನವಾಗಿ ಗಮ್ಯ ತಲುಪಿದರೆ ತೊಂದರೆಯಿಲ್ಲ ಎಂದು ಯಜಮಾನರ ಗ್ರೀನ್ ಸಿಗ್ನಲ್ ಸಿಕ್ಕಿದ ಮೇಲೆ ವಾಣಿವಿಲಾಸಸಾಗರ
ಬೋರ್ಡ್ ನೆನಪಾಯಿತು. ಅಲ್ಲಿಗೆ
ಭೇಟಿನೀಡಿದ್ದಾಯಿತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ಸುಮಾರು ೨೦ ಕಿಮಿ ದೂರದಲ್ಲಿ ಇರುವ ಜಲಾಶಯವಿದು. ಸುಮಾರು ೧೨೦ ವರ್ಷಗಳಷ್ಟು ಹಳೆಯದಾದ ಈ ಡ್ಯಾಮ್ ಅನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಹಳೆಯ ಮೈಸೂರಿನ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರು ಈ ಜಲಾಶಯವನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಇದಕ್ಕೆ ಬ್ರಿಟಿಷ್ ಅಧಿಕಾರಿ ಮಾರ್ಕ್ ಕಬ್ಬನ್ ಸಹಕಾರವಿತ್ತು. ೧೮೯೭ ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದೇಶದ ಮೇರೆಗೆ ದಿವಾನ್ ಶೇಷಾದ್ರಿ ಐಯ್ಯರ್ ನೇತ್ರತ್ವದಲ್ಲಿ ಮುಂದುವರೆದು ೧೯೦೭ ರಲ್ಲಿ ಮುಗಿಯಿತು. ಮಳೆ ಕಡಿಮೆ ಬೀಳುವ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಯ ಈ ಭಾಗದಲ್ಲಿ ಈ ಜಲಾಶಯದಿಂದಾಗಿ ರೈತರಿಗೆ ತುಂಬಾ ಅನುಕೂಲವಾಯಿತು ಎಂಬಿಂತ್ಯಾದಿ ಮಾಹಿತಿಗಳನ್ನು ಗೂಗಲಮ್ಮ ತಿಳಿಸಿದ್ದಾಳೆ.
ಪುರಾತನವಾದ ಮಾರಿಕಾಂಬ ದೇವಾಲಯವು ಇಲ್ಲಿ ಇರುವುದರಿಂದಾಗಿ ಈ
ಪ್ರದೇಶಕ್ಕೆ ಮಾರಿಕಣಿವೆ ಎಂಬ ಹೆಸರೂ ಸಹ ಇದೆ. ಗುಡ್ಡದ ಮೇಲೆ ಡ್ಯಾಮ್ ಬಳಿ ಗೆಸ್ಟ್ ಹೌಸ್ ಒಂದಿದ್ದು, ಇಲ್ಲಿಂದ ಜಲಾಶಯದ ಹಾಗೂ
ಕೆಳಗಿನ ಭಾಗದ ದೃಶ್ಯಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಗೆಸ್ಟ್ ಹೌಸ್ ಎತ್ತರದಲ್ಲಿದ್ದು
ಅಲ್ಲಿಂದ ಕೆಳಗೆ ಡ್ಯಾಮ್ ಹತ್ತಿರಕ್ಕೆ ಹೋಗಲು ಹಲವಾರು ಹಂತದಲ್ಲಿ ಮೆಟ್ಟಿಲುಗಳನ್ನು
ನಿರ್ಮಿಸಲಾಗಿದ್ದು, ಅಲ್ಲಲ್ಲಿ ಕುಳಿತು ಕೆಳಗಿನ ದೃಶ್ಯಗಳನ್ನು ಸವಿಯಲು ಅನುಕೂಲಕರವಾಗಿದೆ.
ಹಾಂ....ಇಲ್ಲಿ ಕಟ್ಟಿರುವ ಕಲ್ಲಿನ ಗೋಡೆಗಳು ಅತ್ಯಂತ ಶಿಸ್ತಾಗಿ, ಚೊಕ್ಕಟವಾಗಿ, ಸುಂದರವಾಗಿ
ಕಾಣಿಸುತ್ತವೆ. ಡ್ಯಾಮ್ ಬಳಿಯಲ್ಲಿ ಒಂದು ಚೆಂದದ ವೀಕ್ಷಣಾ ಮಂಟಪವೂ ಇದೆ. ಒಟ್ಟಾರೆಯಾಗಿ
ನಯನಮನೋಹರವಾದ ದೃಶ್ಯವೈಭವ ಅಲ್ಲಿ ಸಿಗುತ್ತದೆ. ಇವೆಲ್ಲವನ್ನೂ ಸವಿಯುತ್ತಾ ಅಲ್ಲಿ ಅಲ್ಲಲ್ಲಿ
ಬೆಳೆಸಿರುವ ಅನೇಕ ಜಾತಿಯ ಮರಗಿಡಗಳನ್ನು ನೋಡಿ ಪ್ರಶಂಸಿಸುತ್ತಾ ಹೋಗುವಾಗ ನನಗೆ ಕಣ್ಣಿಗೆ
ಬಿದ್ದದ್ದು ಈ ಕಲ್ಲಿನ ಗೋಡೆಗಳ ನಡುವೆ ಬೆಳೆದು ಹೂವರಳಿಸಿ ನಗುತ್ತಿದ್ದ ಈ ಕಳೆಸಸ್ಯಗಳು, ಮತ್ತು
ಫಂಗಸ್.
ನಂತರದ್ದು ಯಾವಾಗಲೂ ನಡೆಯುವಂತಹದ್ದೆ. ಉಳಿದೆಲ್ಲ ದೃಶವೈಭವ
ನನ್ನ ಮನದಿಂದ ಮಸುಕಾಗಿ ಆ ಜಾಗವನ್ನ ಈ ಕಳೆಸಸ್ಯಗಳು, ಫಂಗಸ್ ಆಕ್ರಮಿಸಿಕೊಂಡುಬಿಟ್ಟವು.
ಎಲ್ಲರೂ ನನ್ನನ್ನು ಬಿಟ್ಟು ಮುಂದೆ ಹೋದರೂ ನಾನು ಅವುಗಳ ಫೋಟೋ ತೆಗೆಯುತ್ತಾ,
ಕಣ್ತುಂಬಿಸಿಕೊಳ್ಳುತ್ತಾ ನಿಂತಿದ್ದೆ, ಮುಂದೆ ಹೋದವರು ಜೊತೆಯಲ್ಲಿ ನಾನಿಲ್ಲವೆಂದು ಗಮನಿಸಿ
ವಾಪಾಸ್ ಬಂದು ಕೂಗುವವರೆಗೂ!
ಹೀಗೆ ಮರಗಿಡಗಳು, ಕಲ್ಲುಬಂಡೆಗಳು, ಕಾಂಕ್ರೀಟ್ ಕಟ್ಟಡದ
ಗೋಡೆಗಳು, ಕಾಂಪೌಂಡ್‌ಗಳು ಮೊದಲಾದ ಗಟ್ಟಿ ಮೇಲ್ಮೈಯನ್ನು ಸೀಳಿ ಬೆಳೆಯುವ ಪುಟಾಣಿ ಸಸ್ಯಗಳ ಶಕ್ತಿ
ಅತ್ಯಂತ ಆಶ್ವರ್ಯಹುಟ್ಟಿಸುತ್ತದೆ. ಇಂತಹ ಜಾಗಗಳಲ್ಲಿ ಬೆಳೆಯುವ ಗಿಡಗಳಿಗೆ “ಲಿಥೋಫೈಟ್ಸ್” ಎನ್ನಲಾಗುತ್ತದೆ. ಫಂಗಸ್, ಪಾಚಿಗಳು, ಫರ್ನ್ ಜಾತಿಗೆ
ಸೇರಿದ ಸಸ್ಯಗಳು, ಆರ್ಕಿಡ್‌ಗಳು, ಹೂ ಅರಳಿಸುವ ಸಸ್ಯಗಳು ಹೀಗೆ ಗಟ್ಟಿಯಾದ ಮೇಲ್ಮೈಯ ಮೇಲೆ ಬೆಳೆವ
ಸಸ್ಯಗಳ ವೈವಿಧ್ಯತೆ ಅಗಾಧವಾಗಿದೆ. ನಿರಂತರವಾಗಿ ಗಾಳಿ, ಮಳೆಗಳಿಗೆ ಒಡ್ಡಿಕೊಳ್ಳುವ ಬಂಡೆ,
ಕಾಂಕ್ರೀಟ್ ಗೋಡೆಗಳ ಮೇಲೆ ಫಂಗಸ್, ಪಾಚಿ ಜಾತಿಯ ಸಸ್ಯಗಳು ಮೊದಲು ಬೆಳೆಯುತ್ತವೆ, ಇವುಗಳು
ಸ್ರವಿಸುವ ರಾಸಾಯನಿಕಾಮ್ಲಗಳಿಂದ ಶಿಥಿಲಗೊಂಡ ಮೇಲ್ಮೈಯ ಮೇಲೆ ಬೇರೆ ಸಸ್ಯಗಳು ಬೆಳೆಯುತ್ತವೆ.
ಬಂಡೆಗಳು, ಕಾಂಕ್ರೀಟ್ ಮೇಲ್ಮೈ ಮೇಲೆ ಶೇಖರಗೊಂಡ ಅಲ್ಪಸ್ವಲ್ಪ ಧೂಳು, ಮಣ್ಣನ್ನು ಆಶ್ರಯಿಸಿ
ಕೆಲವು ಸಸ್ಯಗಳು ಬೆಳೆಯುತ್ತವೆ. ಸೀಮಿತವಾದ ಪೋಷಕಾಂಶಗಳು ಮಾತ್ರವೇ ದೊರಕುವ ಇಂತಹ ಸ್ಥಳದಲ್ಲಿ
ಬೆಳೆವ ಗಿಡಗಳು ಗಾಳಿಯಲ್ಲಿರುವ ಪೋಷಕಾಂಶಗಳನ್ನೇ ಹೀರಿಕೊಂಡು ಬೆಳೆಯುತ್ತವೆ! ಇಲ್ಲಿ ಬೆಳೆವ
ಕೆಲವು ಸಸ್ಯಗಳು, ತಮ್ಮ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕೀಟಭಕ್ಷಕಗಳೂ
ಆಗಿರುತ್ತವೆ!
ಅಡಿಕೆ ಒಣಗಿಸಲು ಅಟ್ಟವನ್ನು ನಿರ್ಮಿಸುವ ಪದ್ಧತಿ ನಮ್ಮ ಊರಿನಲ್ಲಿದೆ. ಅದಕ್ಕಾಗಿ ಮನೆಯಂಗಳದಲ್ಲಿ ಕಲ್ಲುಕಂಬಗಳನ್ನು ನಿಲ್ಲಿಸಿರುತ್ತಾರೆ. ಚಳಿಗಾಲದಿಂದ ಬೇಸಿಗೆಯವರೆಗೆ ಈ ಕಂಬದವನ್ನು ಆಧರಿಸಿ ಅಟ್ಟವನ್ನು ನಿರ್ಮಿಸಲಾಗುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮೇಲಿನ ಅಟ್ಟವನ್ನು ತೆಗೆಯುತ್ತಾರೆ. ಕಲ್ಲುಕಂಬಗಳು ಮಳೆಗೆ ತೋಯುತ್ತಾ ನಿಂತಿರುತ್ತವೆ. ಈ ಕಂಬಗಳ ಮೇಲೂ ಪಾಚಿ ಹಾಗೂ ಹಾವಸೆ ಸಸ್ಯಗಳು ಬೆಳೆಯುತ್ತದೆ!
ಬೆಂಗಳೂರಿನ ರಿಂಗ್ ರೋಡಿನಲ್ಲಿ ಪಯಣಿಸುವಾಗ ಅಂಡರ್ಪಾಸ್
ಬಂತೆಂದರೆ ನನಗೆ ತುಂಬಾ ಖುಷಿಯಾಗುತ್ತದೆ. ಏಕೆಂದರೆ ಅದರ ಬಳಿ ಅಕ್ಕಪಕ್ಕದಲ್ಲಿ ತಡೆಗೋಡೆ
ನಿರ್ಮಿಸಿರುತ್ತಾರಲ್ಲವೆ? ಆ ಕಾಂಕ್ರೀಟ್ ಗೋಡೆಯಲ್ಲಿ ಅನೇಕ ಕಡೆಗಳಲ್ಲಿ ಆಲದ ಜಾತಿಯ ಗಿಡಗಳು
ಬೆಳೆದು ನಿಂತಿವೆ! ಕೆಲವೆಡೆಗಳಂತೂ ಮರವಾಗಿವೆ! ಪ್ರಕೃತಿಯ ಮೇಲೆ ಮಾನವನ ದಾಳಿಗೆ
ಪ್ರತ್ಯುತ್ತರವೆಂಬಂತೆ ಇವು ನನಗೆ ಕಾಣಿಸುತ್ತವೆ!
ವಾಣಿವಿಲಾಸ ಸಾಗರದ ಬಳಿ ಕಾಣಿಸಿದ ಕಳೆಸಸ್ಯಗಳು, ಇದಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳನ್ನು ನೆನಪಿಸಿದವು. ವಾಣಿವಿಲಾಸಸಾಗರದ ಬಳಿಯಲ್ಲಿ
ಔಷಧೀಯ ಸಸ್ಯಗಳ ಗಾರ್ಡನ್ ಕೂಡ ಇದೆ, ಸಮಯದ ಅಭಾವದಿಂದ ಒಳಗೆ ಹೋಗಲಾಗಲಿಲ್ಲ. ಬೆಂಗಳೂರಿನಿಂದ
ಒಂದು ದಿನದ ಪಿಕ್ನಿಕ್ ಹೋಗಲು ಪ್ರಶಸ್ತವಾದ ಸ್ಥಳ ಈ ವಾಣಿವಿಲಾಸಸಾಗರ. ಊಟ, ತಿಂಡಿಗಳಿಗೆ ಇಲ್ಲಿ
ಯಾವುದೇ ಸೂಕ್ತ ರೆಸ್ಟೋರೆಂಟ್‌ಗಳು ಇಲ್ಲ, ಆದರೆ ಹಿರಿಯೂರು ಹೈವೆಯಲ್ಲಿ ಸಾಕಷ್ಟು ಸಿಗುತ್ತವೆ.
.jpeg)
.jpeg)
.jpeg)

.jpeg)







.jpeg)



No comments:
Post a Comment