2 Mar 2026

ಪುರಾತನ ಜೀವಿಗೊಂದು ಪತ್ರ

ನಿನ್ನ ನನ್ನ ನಂಟು ಸುಮಾರು ೩೨ ವರ್ಷಗಳಷ್ಟು ಹಳೆಯದು. ಅದಕ್ಕೂ ಮೊದಲು ನಿನ್ನನ್ನು ನೋಡಿರಲಿಲ್ಲವೆಂದೇನೂ ಅಲ್ಲ. ತೀರಾ ಚಿಕ್ಕವಳಿದ್ದಾಗ ಭಯದಿಂದಲೂ, ಸ್ವಲ್ಪ ದೊಡ್ಡವಳಾಗುತ್ತಿದ್ದ ಹಾಗೆ ಭಯ ಮಿಶ್ರಿತ ಹೇವರಿಕೆಯಿಂದಲೂ ನಿನ್ನನ್ನು ನೋಡಿದ್ದುಂಟು. ಆದರೆ ನಿನ್ನ ಗುಣವಿಶೇಷಗಳೆಲ್ಲ ತಿಳಿದು ನಿನ್ನನ್ನು ತೀರಾ ಹತ್ತಿರದಿಂದ ಗಮನಿಸುವ ಅವಕಾಶ ಸಿಕ್ಕಿದ್ದು ಪಿಯುಸಿ ಓದುವಾಗ. ಜೀವಶಾಸ್ತ್ರದ ವಿಧ್ಯಾರ್ಥಿಯಾದಾಗಿನಿಂದ ನಿನ್ನ ಅಭಿಮಾನಿಯಾಗಿದ್ದೆ. ಆಗ ಎಷ್ಟೋ ಬಾರಿ ನಿನ್ನನ್ನು ಅಮ್ಮನ ಪೊರಕೆಯೇಟಿನಿಂದ ಕಾಪಾಡಿದ್ದೆ, ಅಡುಗೆಕೋಣೆಯ ಅಟ್ಟದ ಮೂಲೆಯಲ್ಲೆಲ್ಲೋ ಅಡಗಿರುತ್ತಿದ್ದ ನಿನ್ನನ್ನು ಹುಡುಕಿ ಕಾಲೇಜಿಗೆ ಕರೆದೊಯ್ದಿದ್ದೆ. ಜೀವಶಾಸ್ತ್ರದ ಅಧ್ಯಾಪಕರು ನಿನ್ನ ಒಂದೊಂದೇ ಅಂಗವನ್ನು ಫೋರ್ಸೆಪ್ಸ್ನಲ್ಲಿ ಹಿಡಿದು ತೋರಿಸುವಾಗ ಕುತೂಹಲದಿಂದ ಗಮನಿಸಿ, ಜೀವವಿಜ್ಞಾನದ ಮೊದಲ ಮೆಟ್ಟಿಲೇರಿದ್ದೆ. ಮನೆಯಲ್ಲಿ ನನ್ನದೇ ಆದ ಡಿಸೆಕ್ಷನ್ ಟಬ್ ಮಾಡಿಕೊಂಡು, ನಿನ್ನೊಳಹೊರಗನ್ನು ಜಾಲಾಡಿದ್ದೆ.



ಆದರೆ ಅಮ್ಮ ನಿನ್ನನ್ನು ಕಂಡೊಡನೆ ಪೊರಕೆ ಏಕೆ ತೆಗೆದುಕೊಳ್ಳುತ್ತಾಳೆಂದು ಅರ್ಥವಾಗಿದ್ದು ಮಾತ್ರ ನನಗೆ ಮದುವೆಯಾಗಿ ನನ್ನದೇ ಸಂಸಾರ ಹೂಡಿದಾಗಲೆ. ಆಗಲೇ ನೀನು ಕೊಡುವ ಕಾಟಗಳ ನಿಜವಾದ ಅರಿವಾಗಿದ್ದು!  ಅಡುಗೆಕೋಣೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಎಲ್ಲಿಂದಲೋ ಪ್ರತ್ಯಕ್ಷವಾಗುವ ನೀನು ಮತ್ತು ನಿನ್ನ ಮಕ್ಕಳುಮರಿಗಳ ಸಂಸಾರವನ್ನು ತೊಲಗಿಸುವುದು ಹೇಗೆಂಬುದೇ ಚಿಂತೆಯಾಗಿದ್ದ ಕಾಲವಾಗಿತ್ತು ಅದು. ನಿನ್ನನ್ನು ನಿರ್ನಾಮಗೊಳಿಸಲೆಂದೆ ಇದ್ದ ವಿಧಾನಗಳನ್ನೆಲ್ಲ ಅನುಸರಿಸಿದರೂ ಮುಗಿಸಿದ ಹದಿನೈದೇ ದಿನಗಳಲ್ಲಿ ಮತ್ತೆ ನಿನ್ನ ಸಂಸಾರ ಪ್ರತ್ಯಕ್ಷವಾಗುತ್ತಿತ್ತು. ಅಂತೂ ಈಗೊಂದು ಹತ್ತು-ಹದಿನೈದು ವರ್ಷಗಳ ಹಿಂದೆ ನಿನ್ನನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆಯೆಂಬ ಆಶ್ವಾಸನೆಯೊಂದಿಗೆ ಮಾರುಕಟ್ಟೆಗೆ ಬಂದು ಉತ್ಪನ್ನವೊಂದು ನಿಜವಾಗಿಯೂ ಕೆಲಸ ಮಾಡತೊಡಗಿತು. ಕೆಲ ಹಿಟ್ಟಿನ ಮಿಶ್ರಣವಾದ ಅದನ್ನು ನೀನು ಓಡಾಡುವ ಜಾಗದಲ್ಲೆಲ್ಲ ಇಟ್ಟರೆ ಸಾಕು ಮೂಲೆಮೂಲೆಯಲ್ಲಿದ್ದ ನಿನ್ನ ಸಂಸಾರದ ಸದಸ್ಯರು ಹೊರಬಂದು ಪ್ರಾಣಕಳೆದುಕೊಳ್ಳುತ್ತಿದ್ದರು. ಮತ್ತೆ ಆರು ತಿಂಗಳ ಕಾಲ ನಿನ್ನ ಕಾಟವಿರುತ್ತಿರಲಿಲ್ಲ. ಆರು ತಿಂಗಳ ನಂತರ ಮತ್ತೆ ಅದೇ ಮಿಶ್ರಣವನ್ನು ಅಲ್ಲಲ್ಲಿ ಮೆತ್ತಿದರೆ ನಿನ್ನ ಅವಶೇಷವೂ ಇರುತ್ತಿರಲಿಲ್ಲ. ಮೊದಮೊದಲು ಇದನ್ನು ನಂಬುವುದು ಕಷ್ಟವಾಗುತ್ತಿತ್ತು, ಮೂಲೆಮೂಲೆಯಲ್ಲಿ ನಿನ್ನನ್ನು ಹುಡುಕಿ ನೀನಿಲ್ಲದ್ದನ್ನು ಕಂಡು ಖುಷಿ ಪಟ್ಟದ್ದು ಹೌದು.  

 ಇತ್ತೀಚಿನ ವರ್ಷಗಳಲ್ಲಿ ನನಗೆ ನಿನ್ನನ್ನು ಕಾಣದೆ ಒಂದು ರೀತಿಯ ಬೇಸರವಾಗಿಬಿಟ್ಟಿತ್ತು. ಡೈನೋಸಾರ್‌ ಯುಗದ ಕಾಲಕ್ಕೂ ಮೊದಲಿನಿಂದಲೂ ಭೂಮಿಯ ಮೇಲಿರುವ, ಭೀಕರ ಹಿಮದಲ್ಲೂ, ಬಿಸಿ ಉರಿಯುವ ಮರುಭೂಮಿಯಲ್ಲೂ, ಅತೀ ಎತ್ತರದ ಬೆಟ್ಟಪ್ರದೇಶಗಳಲ್ಲೂ ಹೀಗೆ ಎಂತಹ ಹವಾಮಾನ ವೈಪರೀತ್ಯದಲ್ಲೂ ವಾಸಿಸಬಲ್ಲ, ವಿಕಿರಣಗಳನ್ನೂ ತಡೆದುಕೊಳ್ಳಬಲ್ಲ, ತಿಂಗಳುಗಟ್ಟಲೆ ಆಹಾರವಿಲ್ಲದೆಯೂ ಬದುಕಿರಬಲ್ಲ ನಿನ್ನ ಸಾಮರ್ಥ್ಯಕ್ಕೆ ಗೌರವಭಾವ ಹೊಂದಿದ್ದ ನನಗೆ ಈಗ ಈ ಯಕಶ್ಚಿತ್‌ ಹಿಟ್ಟಿನ ಮಿಶ್ರಣವೊಂದು ನಿನ್ನನ್ನು ಅಳಿಸಿಹಾಕಿದೆಯೆಂಬುದು ನಂಬಲು ಕಷ್ಟವಾಗುತ್ತಿತ್ತು. ಆದರೂ ವರ್ಷಗಟ್ಟಲೆ ನನ್ನ ಅಡುಗೆಮನೆಯಲ್ಲಿ ನಿನ್ನ ದರ್ಶನವಾಗದಿದ್ದಾಗ, ನೀನೆಂದರೆ ಇನ್ನು ಪ್ರಯೋಗಾಲಯದಲ್ಲಿ ಮಾತ್ರ ನೋಡಬೇಕಾದ ಜೀವಿಯೇನೋ....ಮಗಳಿಗೆ ನಿನ್ನನ್ನು ಡಿಸೆಕ್ಟ್‌ ಮಾಡಿ ತೋರಿಸಿದಂತೆ ಮೊಮ್ಮಕ್ಕಳಿಗೂ ಡಿಸೆಕ್ಟ್‌ ಮಾಡಿ ತೋರಿಸುವ ನನ್ನ ಯೋಜನೆ(ಅಲ್ಲಿಯವರೆಗೂ ಕೈ ನಡುಗದೆ ಇದ್ದರೆ!) ಯಶಸ್ವಿಯಾಗುವುದು ಕನಸೇನೋ, ಎಂದೆಲ್ಲ ಯೋಚನೆಯಾಗಿಬಿಟ್ಟಿತ್ತು.  ನಿನ್ನಂತಹ ಗಟ್ಟಿ ಜೀವವನ್ನೂ ನಿರ್ನಾಮಗೊಳಿಸಿದ ಮಾನವನ ದುಷ್ಟತನಕ್ಕೆ ಬೇಸರವೂ ಆಗುತ್ತಿತ್ತು. 

ಆದರೆ ಈಗೊಂದೆರಡು ತಿಂಗಳ ಹಿಂದೆ ನೀನು ಮತ್ತೆ ಅಡುಗೆಮನೆಯಲ್ಲಿ ಪ್ರತ್ಯಕ್ಷವಾದೆ. ಮೊದಲಿಗಿಂತ ಚಿಕ್ಕ ಗಾತ್ರ, ರೂಪದಲ್ಲೂ ಸ್ವಲ್ಪ ವ್ಯತ್ಯಾಸ ಆದರೆ ಸ್ವಭಾವ ಮಾತ್ರ ಮೊದಲಿನದ್ದೇ. ಪ್ರತೀ ಬಾರಿಯಂತೆ ಹೊಸ ಹಿಟ್ಟಿನ ಮಿಶ್ರಣ ಇಟ್ಟರೆ ಅದಕ್ಕೂ ಬಗ್ಗದೆ ಆರಾಮಾಗಿ ಮಕ್ಕಳು ಮರಿ ಮಾಡಿಕೊಂಡು ಓಡಾಡುತ್ತಿರುವೆಲ್ಲ...ಈಗ ನನಗೆ ಒಂದು ರೀತಿಯ ಸಮಾಧಾನವಾಗಿದೆ! ಗಂಡ ಮಕ್ಕಳು ದಿನಾ ನಿನ್ನ ಬಗ್ಗೆ ಕಂಪ್ಲೇಂಟ್‌ ಮಾಡುತ್ತಾ ಇರುತ್ತಾರೆ. ಅವರೆದುರು ನನಗೂ ಬೇಸರವಾಗಿದೆಯೆಂದೂ, ನಿನಗೊಂದು ಗತಿ ಕಾಣಿಸುತ್ತೇನೆಂದು ಹೇಳುತ್ತೇನಾದರೂ ಒಳಗೊಳಗೆ ಖುಷಿ ಪಡುತ್ತಿದೇನೆ. ಸ್ವಲ್ಪ ದಿನ ನಿನ್ನನ್ನು ನೋಡಿ ಸಮಾಧಾನವಾದ ಮೇಲೆ ನಿನ್ನನ್ನು ಅಡುಗುಮನೆಯಿಂದ ಓಡಿಸುವುದು ಹೇಗೆ ಎಂಬ ಚಿಂತೆ ಮಾಡುತ್ತೇನೆ ಎಂದು ನನಗೆ ನಾನೇ ನಂಬಿಸಿಕೊಂಡಿದ್ದೇನೆ. ಹೇಗೂ ಮೂರನೆಯ ವಿಶ್ವಯುದ್ಧದ ಹೊಸ್ತಿಲಲ್ಲಿರುವ ಮಾನವಜನಾಂಗದ ಸ್ವವಿನಾಶ ದೂರವಿಲ್ಲವೆಂದು ತೋರುತ್ತದೆ… ಹಾಗಾಗಿ ಭೂಮಿಯ ಮೇಲಿನ ನಿನ್ನ ಬದುಕಿನ ನಿರಂತರತೆಗೇನೂ ತೊಂದರೆಯಾಗದು … ಜೈ ಜಿರಲೆ ಮಹಾತ್ಮ

 

No comments:

Post a Comment