ನಮ್ಮ ಪುರಾಣೇತಿಹಾಸಗಳಲ್ಲಿ ಕಳಿಂಗ ಎಂದು ಹೆಸರಾಗಿದ್ದ ಒರಿಸ್ಸಾ ಅಥವಾ ಒಡಿಶಾ ರಾಜ್ಯವು ತನ್ನ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇಗುಲ, ಕೋನಾರ್ಕ್ ಸೂರ್ಯದೇವಾಲಯ, ಪ್ರಪಂಚದ ಎರಡನೆಯ ಅತೀ ದೊಡ್ಡ ಉಪ್ಪುನೀರಿನ ಸರೋವರವೆಂದು ಹೆಸರಾಗಿರುವ ಚಿಲ್ಕಾ ಲೇಕ್, ಆದಿವಾಸಿಗಳ ಹಳ್ಳಿಗಳು, ಅವರ ಶ್ರೀಮಂತ ಚಿತ್ರಕಲೆ, ಕೈಮಗ್ಗದ ಬಟ್ಟೆಗಳು ಮೊದಲಾದವುಗಳಿಂದ ಸದಾ ದೇಶವಿದೇಶಗಳ ಪ್ರವಾಸಿಗಳನ್ನು ಸೆಳೆಯುತ್ತದೆ. ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ಥಳಗಳಾದ, ಭುವನೇಶ್ವರ ಹಾಗೂ ಅದಕ್ಕೆ ಸನಿಹದಲ್ಲಿರುವ ಪುರಿ ಮತ್ತು ಕೋನಾರ್ಕ್ ಈ ಮೂರು ಪ್ರಸಿದ್ಧ ಸ್ಥಳಗಳನ್ನು ಇಲ್ಲಿನ ಗೋಲ್ಡನ್ ಟ್ರಯಾಂಗಲ್ಎಂದೇ ಕರೆಯಲಾಗುತ್ತದೆ. ಈ ಬಾರಿಯ ದಸರಾದ ರಜಾದಿನಗಳನ್ನು ಇಲ್ಲಿ ಕಳೆಯಲು ಸಾಧ್ಯವಾಯಿತು. ದಸರಾ ಪ್ರಯುಕ್ತ ಭುವನೇಶ್ವರ್ ವಿವಿಧ ದೀಪಾಲಂಕಾರಗಳಿಂದ ಅಲಂಕೃತಗೊಂಡಿತ್ತು. ಅನೇಕ ಕಡೆಗಳಲ್ಲಿ ದುರ್ಗಾ, ಶಿವ, ಹನುಮಾನ್ ಪೆಂಡಾಲ್ಗಳು ಕಂಗೊಳಿಸುತ್ತಿದ್ದವು.
ಗೋಲ್ಡನ್ ಟ್ರೈಯಾಂಗಲ್ ದಿನ 1
ಭುವನೇಶ್ವರ್
ತನ್ನ ರಾಜ್ಯದ ದೇವಸ್ಥಾನಗಳು, ಸ್ತೂಪಗಳು, ನೃತ್ಯ, ಆದಿವಾಸಿ ಜನಾಂಗದ ಕಲೆ, ನೇಯ್ಗೆ ಮೊದಲಾದವುಗಳಿಂದ ಕೂಡಿರುವ ಶ್ರೀಮಂತ ಪರಂಪರೆಯನ್ನು; ನಗರದ ಕಟ್ಟಡಗಳ ಗೋಡೆಗಳು, ಕಾಂಪೌಂಡಗಳನ್ನು ಕೂಡ ಬಿಡದಂತೆ ಬಳಸಿಕೊಂಡು ಸಮರ್ಥವಾಗಿ ಜಗತ್ತಿಗೆ ಸಾರುತ್ತದೆ ಈ ರಾಜಧಾನಿ. ಅನೇಕ ಐತಿಹಾಸಿಕ ಪ್ರಸಿದ್ಧ ಸ್ಥಳಗಳ ನಗರಿಯೂ ಹೌದು. ಕೈಮಗ್ಗದ ಉತ್ಪನ್ನಗಳು ದೊರಕುವ ಪ್ರಮುಖ ಮಾರುಕಟ್ಟೆ ಕೂಡ. ಅಗಲವಾದ ರಸ್ತೆಗಳು, ಸ್ವಚ್ಛ ಬೀದಿಗಳು, ವಾಹನ ದಟ್ಟಣೆಯೂ ಕಡಿಮೆ.
ಖಂಡಗಿರಿ ಉದಯಗಿರಿ ಗುಹೆಗಳು
ರಾಜ್ಯದ ರಾಜಧಾನಿ ಭುವನೇಶ್ವರದ ಹೊರವಲಯದಲ್ಲಿ ಒಂದಕ್ಕೊಂದು ಅಭಿಮುಖವಾಗಿರುವ ಖಂಡಗಿರಿ ಮತ್ತು ಉದಯಗಿರಿ ಎಂಬ ಬೆಟ್ಟಗಳಲ್ಲಿರುವ ಬಂಡೆಗಳನ್ನು ಕೊರೆದು ನಿರ್ಮಿಸಲಾಗಿರುವ ಗುಹೆಗಳು ಅಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣಗಳಲ್ಲೊಂದಾಗಿದೆ. ಕ್ರಿ.ಪೂ ಒಂದು ಅಥವಾ ಎರಡನೆಯ ಶತಮಾನದಲ್ಲಿ ರಾಜ್ಯವಾಳಿದ್ದ ಚೇದಿ(ಮಹಾಮೇಘವಾಹನ)ವಂಶದ ಅರಸು "ಖರವೇಲ" ಈ ಗುಹೆಗಳನ್ನು ಜಿನಮುನಿಗಳಿಗಾಗಿ ನಿರ್ಮಿಸಿದ್ದನೆಂದು ಇಲ್ಲಿಯ ಶಿಲಾಶಾಸನದಲ್ಲಿ ಉಲ್ಲೇಖವಿದೆ. ಈ ಶಾಸನದಲ್ಲಿ ಇಲ್ಲಿ ಒಟ್ಟು 117 ಗುಹೆಗಳಿವೆಯೆಂದು ಹೇಳಲಾಗಿದೆಯಾದರೂ ಈಗ ಇರುವ ಗುಹೆಗಳು 33. ಅದರಲ್ಲಿ 15 ಗುಹೆಗಳು ಖಂಡಗಿರಿಯಲ್ಲಿ ಇನ್ನುಳಿದವು ಉದಯಗಿರಿಯಲ್ಲಿ ಇವೆ.
ಮೂಲತಃ ಅಲೆಮಾರಿಗಳಾದ ಜೈನಮುನಿಗಳಿಗೆ ಮಳೆಗಾಲದಲ್ಲಿ ನೆಮ್ಮದಿಯಿಂದ ವಾಸಿಸಲು, ಧ್ಯಾನ ಮಾಡಲು ಅನುಕೂಲಕರವಾಗಿ ಇದನ್ನು ನಿರ್ಮಿಸಲಾಗಿತ್ತಂತೆ. ಅವರ ಸರಳ ಪ್ರಶಾಂತ ಜೀವನಕ್ಕೆ ತಕ್ಕ ಹಾಗೆಯೆ ಗುಹೆಗಳು ನಿರ್ಮಾಣಗೊಂಡಿವೆ. ಪ್ರತಿ ಗುಹೆಯಲ್ಲಿಯೂ ನೀರು ಹರಿದುಬರಲು ವ್ಯವಸ್ಥೆಯಿದೆ, ದೀಪಗಳನ್ನಿರಿಸಲು ಸ್ಥಳಾವಕಾಶವಿದೆ, ಪರಸ್ಪರ ಸಂಪರ್ಕಿಸಲು ಕಿಂಡಿಗಳಿವೆ. ಅನೇಕ ಗುಹೆಗಳಲ್ಲಿ ಎರಡು ಅಂತಸ್ತುಗಳಿದ್ದು,ಮೇಲಿನ ಅಂತಸ್ತಿನಲ್ಲಿ ಅವರು ಧ್ಯಾನ ಮಾಡುತ್ತಿದ್ದರಂತೆ. ತಲೆಯಿಟ್ಟು ಮಲಗಲು ಅನುಕೂಲವಾಗುವ ಹಾಗೆ ನೆಲದ ಒಂದು ಭಾಗವನ್ನು ಸ್ವಲ್ಪ ಎತ್ತರವಿರುವಂತೆ ನಿರ್ಮಿಸಲಾಗಿದೆ. ರಾಣಿ ಗುಂಫಾ, ಚೋಟಾ ಹಾಥಿ ಗುಂಫಾ, ಅಲಕಪುರಿ ಗುಂಫಾ, ಠಾಕುರಾನಿ ಗುಂಫಾ, ಗಣೇಶ ಗುಂಫಾ, ಸ್ವರ್ಗಪುರಿ ಗುಂಫಾ ಮೊದಲಾದವು ಉದಯಗಿರಿಯ ಕೆಲ ಪ್ರಮುಖ ಗುಹೆಗಳು. ಇಲ್ಲಿನ 14ನೇ ಗುಹೆಯಾದ “ಹಾಥಿ ಗುಂಫಾ”ದಲ್ಲಿ ಈ ಗುಹೆಗಳನ್ನು ನಿರ್ಮಿಸಿದ ರಾಜ ಖರವೇಲನ ಸಾಧನೆಗಳನ್ನು ವಿವರಿಸುವ ಬ್ರಾಹ್ಮೀಭಾಷೆಯ ಶಾಸನವಿದೆ. ಇಪ್ಪತ್ತೈದು ಜೈನ ತೀರ್ಥಂಕರರ ಚಿತ್ರಗಳನ್ನು ಹೊಂದಿರುವ ಭರಬೂಜಿ ಗುಂಫಾ, ನವಮುನಿಗುಂಫಾ ಮೊದಲಾದವು ಖಂಡಗಿರಿಯ ಕೆಲವು ಗುಹೆಗಳಾಗಿವೆ. ಖಂಡಗಿರಿಯ ಮೇಲೆ ಜೈನ ದೇವಾಲಯವಿದೆ.
![]() |
| ಉದಯಗಿರಿಯಿಂದ ಕಾಣುವ ಖಂಡಗಿರಿಯ ಜೈನ ದೇವಾಲಯ |
24ನೆಯ ಜೈನ ತೀರ್ಥಂಕರರಾದ ಮಹಾವೀರರು ಈ ಬೆಟ್ಟಗಳಿರುವ ಕುಮಾರಿ ಪರ್ವತಶ್ರೇಣಿಗೆ ಭೇಟಿ, ಪ್ರವಚನ ನೀಡಿದ್ದರೆಂಬ ಪ್ರತೀತಿ ಇರುವುದರಿಂದಾಗಿ ಈ ಸ್ಥಳವು ಜೈನರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ.
![]() |
| ಬ್ಯಾಗ್ ಕಾವಲುಗಾರರು! |
ಅಷ್ಟೆಲ್ಲ ವರ್ಷಗಳ ಹಿಂದೆ ಆ ಬೆಟ್ಟದ ಬಂಡೆಗಳನ್ನು ಕೊರೆದು ನಿರ್ಮಿಸಿರುವ ಗುಹೆಗಳು ಮಾನವ ಶಕ್ತಿಯ ಬಗೆಗೆ ಏಕಕಾಲಕ್ಕೆ ಹೆಮ್ಮೆಯನ್ನೂ, ಆಶ್ಚರ್ಯವನ್ನೂ ಉಂಟುಮಾಡಿದರೆ, ಸ್ವಾಭಾವಿಕ ಪರಿಸರವನ್ನು ಹಾಳುಗೆಡವುವ ಅವನ ಮನಸ್ಥಿತಿ ಇಂದು ನಿನ್ನೆಯದಲ್ಲ ಅದಕ್ಕೂ ಪುರಾತನ ಇತಿಹಾಸವೇ ಇದೆಯೆಂಬುದು ಅರ್ಥವಾಗುತ್ತದೆ.
ಪುರಾತನ ಶಾಸನಗಳ ನಗರಿ
ಭುವನೇಶ್ವರದಿಂದ ಎಂಟು ಕಿಲೋಮೀಟರ್ ದೂರದಲ್ಲಿ ಧೌಲಿ ಎಂಬ ಊರಿನಲ್ಲಿ ಇತಿಹಾಸ ಪ್ರಸಿದ್ಧವಾದ “ಕಳಿಂಗ ಯುದ್ಧ” ನಡೆದ ಸ್ಥಳವಿದೆ. ಶಾಲೆಯಲ್ಲಿ ಓದುವಾಗ ಸಿಂಹಸ್ವಪ್ನವಾಗಿದ್ದ ಕಳಿಂಗ ಯುದ್ಧವೆಂಬುದು(ಇಸವಿಗಳನ್ನು ನೆನಪಿಟ್ಟುಕೊಳ್ಳವುದು ಬಹುದೊಡ್ಡ ಸಮಸ್ಯೆಯಾಗಿದ್ದ ಕಾಲ) ಇಲ್ಲಿಗೆ ಭೇಟಿಕೊಟ್ಟಾಗ ಮಾತ್ರ ಭಾವುಕಗೊಳಿಸಿತು. ದಯಾ ಎಂಬ ನದಿಯ ದಡದಲ್ಲಿ ನಡೆದ ಈ ಯುದ್ದದಲ್ಲಿ ಸತ್ತವರ ರಕ್ತದಿಂದ ನದಿಯೇ ಕೆಂಪಾಗಿ ಹರಿಯಿತಂತೆ, ಅದನ್ನು ನೋಡಿಯೇ ಅಶೋಕನ ಮನ ಪರಿವರ್ತನೆಯಾಗಿ ಅಹಿಂಸಾ ಪ್ರತಿಪಾದಕವಾದ ಭೌದ್ಧಧರ್ಮದ ಅನುಯಾಯಿಯಾದನಂತೆ ಎಂಬ ಪ್ರತೀತಿ ಬೇರೆ.
ನದಿಯ ದಡದ ಸನಿಹದಲ್ಲಿ ಅಶೋಕನ ಶಿಲಾಶಾಸನವಿದೆ. ದೊಡ್ಡ ಬಂಡೆಯೊಂದರಲ್ಲಿ ಬೌದ್ಧ ಧರ್ಮದ ಉಗಮದ ಸಂಕೇತವಾದ ಆನೆಯ ಮುಖವನ್ನು ಕೊರೆಯಲಾಗಿದೆ. ಬಂಡೆಯ ಉಳಿದ ಭಾಗದಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಮಾಗಧಿ ಪ್ರಾಕೃತ ಭಾಷೆಯಲ್ಲಿ ಶಾಸನವಿದೆ. ಇದಲ್ಲದೆ ಇನ್ನೂ ಹಲವಾರು ಶಾಸನಗಳು ಇಲ್ಲಿವೆ. ೧೮೩೭ರಲ್ಲಿ ಇವುಗಳ ಬಗೆಗೆ ಜಗತ್ತಿಗೆ ತಿಳಿಸಿಕೊಟ್ಟದ್ದು ಒಬ್ಬ ಬ್ರಿಟಿಷ್ ಅಧಿಕಾರಿ. ಈಗ ಇದನ್ನು ಸುವ್ಯವಸ್ಥಿತವಾಗಿ ರಕ್ಷಿಸಲಾಗಿದೆ. ಹತ್ತಿರದಲ್ಲಿ 1971-72ರಲ್ಲಿ ನಿರ್ಮಿಸಲಾಗಿರುವ ಬಿಳಿಯ ಬಣ್ಣದಲ್ಲಿರುವ “ಧೌಲಿ ಶಾಂತಿ ಸ್ತೂಪ” ಇದೆ.
ದೇವಸ್ಥಾನಗಳ ನಗರಿ
ಸುಮಾರು 6 ರಿಂದ 13 ನೇ ಶತಮಾನಕ್ಕೆ ಸೇರಿದ ಕಳಿಂಗ ಶೈಲಿಯ ಹಲವಾರು ದೇವಸ್ಥಾನಗಳು ಇಲ್ಲಿವೆ. ಈ ದೇವಸ್ಥಾನಗಳು ಧಾರ್ಮಿಕವಾಗಿ ಪ್ರಾಶಸ್ತ್ಯ ಪಡೆದಿರುವಂತೆಯೇ ತಮ್ಮ ನಿರ್ಮಾಣ ಕೌಶಲ್ಯ ಹಾಗೂ ಮನಸೆಳೆವ ಶಿಲ್ಪಕಲೆಗಳಿಗೂ ಹೆಸರಾಗಿವೆ.
ಲಿಂಗರಾಜ ದೇವಸ್ಥಾನ
ಇಲ್ಲಿಯ ದೇವಸ್ಥಾನಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕಳಿಂಗ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ದೇವಸ್ಥಾನದ ಕೆಲವು ಭಾಗಗಳನ್ನು ಆರನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಸಂಪೂರ್ಣವಾದ ನಿರ್ಮಾಣ 11 ನೆಯ ಶತಮಾನದಲ್ಲಿ ಆಗಿದೆ ಎನ್ನಲಾಗುತ್ತದೆ. ದೇಶದಾದ್ಯಂತ ಇರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಈ ದೇವಸ್ಥಾನ ಇಲ್ಲ ಏಕೆಂದರೆ ಆ ಎಲ್ಲ ದೇವಸ್ಥಾನಗಳ ಲಿಂಗಗಳಿಗೂ ಅಧಿಪತಿ ಈ ಲಿಂಗರಾಜ ಎಂದದ್ದು ನಮ್ಮ ಗೈಡ್ ಆಗಿದ್ದ 25-26 ವಯಸ್ಸಿನ ಒಬ್ಬ ಪಾಂಡಾ. ಬಹಳ ಹೆಮ್ಮೆಯಿಂದ ತನ್ನ ಆರಾಧ್ಯ ದೇವರ ವಾಸಸ್ಥಾನವನ್ನು ಆತ ನಮಗೆ ಪರಿಚಯಿಸಿದ. ದೇಗುಲದಲ್ಲಿ ಕಳಿಂಗ ವಾಸ್ತುಶೈಲಿಯ ಲಕ್ಷಣವಾದ ನಾಲ್ಕು ಮುಖ್ಯ ಭಾಗಗಳಿವೆ. ಸುಮಾರು 180 ಅಡಿ ಎತ್ತರದ ಮುಖ್ಯ ಭಾಗ ಧುಲ್ ಅಥವಾ ಗೋಪುರ, ಅದರ ಮುಂದಿನ ಜಗಮೋಹನ, ನಾಟ್ಯ ಸೇವೆಗೆ ಇರುವ ಮುಂದಿನ ನಟಮಂದಿರ, ನೇವೇದ್ಯ ಸಮರ್ಪಣೆಗೆ ಇರುವ ಭೋಗಮಂದಿರಗಳು ದೇವಾಲಯದ ಮುಖ್ಯ ಭಾಗಗಳಾದರೆ, ಮಾತಾ ಅನ್ನಪೂರ್ಣೇಶ್ವರಿಯ ದೇಗುಲ ಮತ್ತಿತರ ಪರಿವಾರ ಗಣಗಳ ದೇಗುಲಗಳು ಸುತ್ತಲೂ ಇವೆ. ಇಲ್ಲಿಯ ಲಿಂಗವು ಉದ್ಭವವಾಗಿರುವ ಲಿಂಗ. ಅಲ್ಲದೆ ಹರಿ-ಹರ ಇಬ್ಬರ ಅಂಶಗಳೂ ಇಲ್ಲಿನ ಲಿಂಗದಲ್ಲಿ ಇದೆಯಾದ್ದರಿಂದ ಇಬ್ಬರಿಗೂ ಪೂಜೆ ಸಲ್ಲುತ್ತದೆಯಂತೆ. ಹರಿಗೆ ಪ್ರಿಯವಾದ ತುಳಸಿ ಹಾಗೂ ಹರನಿಗೆ ಪ್ರಿಯವಾದ ಬಿಲ್ವಪತ್ರೆಗಳೆರಡರಿಂದಲೂ ಇಲ್ಲಿ ಅರ್ಚನೆ ನಡೆಯುತ್ತದೆಯಂತೆ. ಮುಖ್ಯ ಗೋಪುರದ ತುದಿಯಲ್ಲಿ ಬಿಲ್ಲಿನ ಅರ್ಧ ಭಾಗವಿದ್ದು ಅದರ ಮೇಲೆ ಪ್ರತಿದಿನ ಬೆಳಗ್ಗೆ ಹೊಸ ಧರ್ಮಧ್ವಜವನ್ನು ಹಾರಿಸಲಾಗುತ್ತದೆ. ಆ ಬಿಲ್ಲು ಶಿವಧನಸ್ಸು ಪಿನಾಕಿಯೆಂದೂ ರಾಮ ಸ್ವಯಂವರದಲ್ಲಿ ತುಂಡರಿಸಿದ್ದರಿಂದ ತುಂಡಾಗಿದೆ, ಇನ್ನರ್ಧ ಭಾಗ ಪಶುಪತಿನಾಥ ದೇವಾಲಯದಲ್ಲಿದೆಯೆಂದು ನಮ್ಮ ಗೈಡ್/ಪಾಂಡಾ ಹೇಳಿದ. ನಮ್ಮ ರಾಮಾಯಣ ಮಹಾಭಾರತದಂತಹ ಗ್ರಂಥಗಳು ಜನಮಾನಸದಲ್ಲಿ ಉಳಿಯಲು ದೇಶದಾದ್ಯಂತ ಕಂಡುಬರುವ ಇಂತಹ ಕತೆಗಳು, ಅದಕ್ಕೊದಗಿಸುವ ಪುರಾವೆಗಳೂ ಮುಖ್ಯ ಕಾರಣವೆನ್ನಿಸಿತು. ಮುಖ್ಯವಾಗಿ ಹರಿ-ಹರರ ಆರಾಧಕರಿಬ್ಬರಲ್ಲಿಯೂ ಸಾಮರಸ್ಯ ಮೂಡಿಸಲೆಂದೇ ಈ ದೇವಸ್ಥಾನವನ್ನು ನಿರ್ಮಿಸಿದಂತಿದೆ.
ಪುರಿ ಜಗನ್ನಾಥ ದೇವಾಲಯದಂತೆಯೇ ಇಲ್ಲಿಯೂ ದೊಡ್ಡದಾದ ಅಡುಗೆಮನೆಯಿದೆ, ಇಲ್ಲಿಯೂ ಸಹ ಮಡಕೆಗಳಲ್ಲಿ ಆಹಾರ ತಯಾರಾಗುತ್ತದೆ, ಇಲ್ಲಿನ ಅಡುಗೆಮನೆಗೆ ಸಾಕ್ಷಾತ್ ಅನ್ನಪೂರ್ಣೆಯೇ ಯಜಮಾನತಿಯಂತೆ. ಅಡುಗೆ ಮನೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ ಅದರ ಸನಿಹದಲ್ಲಿನ ವರಾಂಡವೊಂದರ ಬಳಿಗೆ ಪಾಂಡಾ ಕರೆದೊಯ್ದ. ಅಲ್ಲಿಯ ಛಾವಣಿಯ ಮೇಲೆ ನೂರಾರು ಬಾವಲಿಗಳಿದ್ದವು ಮತ್ತು ಅವುಗಳಿರುವಲ್ಲಿ ಬರುವ ವಾಸನೆ ಕೂಡ ಢಾಳಾಗಿತ್ತು. ಇದೇಕೆ ಹೀಗೆ ಎಂದರೆ, ಹೀಗೆ ದೇವಾಲಯದ ಅಡುಗೆಕೋಣೆಯ ಬಳಿ ಬಾವಲಿಗಳು ಇರುವುದು ಶುಭ ಸಂಕೇತ, ಮನೆಯಗಳಲ್ಲಿ ಬಾವಲಿ ಇದ್ದರೆ ಮಾತ್ರ ಅಶುಭ ಎಂದ ಪಾಂಡಾ.
ಗರ್ಭಗುಡಿಯ ಒಳಗಿರುವ ದೇವರ ಲಿಂಗ ಭೂಮಟ್ಟಕ್ಕಿಂತ ಕೆಳಗಿರುವುದರಿಂದ ಹಾಗು ಒಳಗೆ ಬಿಡುವುದಿಲ್ಲವಾದ್ದರಿಂದ ನಮಗೆ ಕಾಣಿಸುವುದಿಲ್ಲ ಪೀಠ ಮಾತ್ರವೇ ಕಾಣಿಸುತ್ತದೆ. ಇಲ್ಲಿ ನಮ್ಮ ಶಕ್ತ್ಯಾನುಸಾರ ಅನ್ನದಾನ ಮಾಡಲು ಅವಕಾಶವಿದೆ.
ದೇವಸ್ಥಾನದ ಹತ್ತಿರದಲ್ಲೇ ಬಿಂದುಸಾಗರ ಸರೋವರವಿದೆ. ಪಾರ್ವತಿಯ ಬಾಯಾರಿಕೆ ತಣಿಸಲೆಂದು ಶಿವನೇ ನಿರ್ಮಿಸಿದ ಸರೋವರವೆಂಬ ಖ್ಯಾತಿ ಇದಕ್ಕಿದೆ.
ದೇವಾಲಯದ ಒಳಗೆ ಮೊಬೈಲ್ ಫೋನ್, ಕ್ಯಾಮರಾ ಮೊದಲಾದ ಉಪಕರಣಗಳನ್ನು ಬಿಡುವುದಿಲ್ಲ. ಅವುಗಳನ್ನು ಡೆಪಾಸಿಟ್ ಕೇಂದ್ರಗಳಲ್ಲಿರಿಸಿ ಹೋಗಬಹುದು.
ಲಿಂಗರಾಜ ದೇವಾಲಯದ ಸನಿಹದಲ್ಲೆ ಪರಶುರಾಮ ದೇವಾಲಯ, ಮುಕ್ತೇಶ್ವರ ದೇವಾಲಯಗಳಂತಹ ಇನ್ನು ಹಲವಾರು ದೇವಾಲಯಗಳಿವೆ.
ರಾಜ ರಾಣಿ ದೇವಾಲಯ
ವಿಶಾಲವಾದ, ಚೆನ್ನಾಗಿ ನಿರ್ವಹಿಸಲಾಗಿರುವ, ಕೈತೋಟದ ಒಂದು ಬದಿಯಲ್ಲಿ ರಾಜರಾಣಿ ದೇವಾಲಯವಿದೆ. ದೂರದಿಂದ ನೋಡಿದರೆ ಒಣ ಅಂಜೂರಗಳನ್ನು ದಾರದಲ್ಲಿ ಪೋಣಿಸಿಟ್ಟಂತೆ ಕಾಣಿಸುವ ಕಳಿಂಗ ಶೈಲಿಯ ಮುಖ್ಯ ಗೋಪುರವು ಹತ್ತಿರದಿಂದ ನೋಡಿದರೆ ಅತ್ಯಂತ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿದೆ. ದೇವಾಲಯದ ಒಳಗೆ ಈಗ ಯಾವುದೇ ಮೂರ್ತಿಗಳಿಲ್ಲವಾದ್ದರಿಂದ ಇಲ್ಲಿ ಪೂಜೆ ನಡೆಯುವುದಿಲ್ಲ. ರಾಜ ರಾಣಿಯೆಂದರೆ ಶಿವಶಕ್ತಿಯರ ಸಂಕೇತ ಹಾಗಾಗಿ ಅವರಿಗಾಗಿಯೇ ನಿರ್ಮಿಸಿದ ದೇವಾಲಯ ಎನ್ನಲಾಗುತ್ತದೆ. ಹೊರಗೋಡೆಗಳಲ್ಲಿ ನಮ್ಮ ದರ್ಪಣ ಸುಂದರಿಯನ್ನು ಹೋಲುವ, ವಿವಿಧ ಭಂಗಿಯಲ್ಲಿರುವ ಸುಂದರಿಯರ ಶಿಲ್ಪಗಳು (ಆಲಸ ಕನ್ಯಾ), ಅನೇಕ ವಿಧದ ಮಿಥುನ ಶಿಲ್ಪಗಳು ಸಾಕಷ್ಟಿವೆ. ನೂರಾರು ವಿಧದ ಬಾರ್ಡರ್ ಡಿಸೈನ್ ಅಥವಾ ತೋರಣದ ಡಿಸೈನ್ಗಳಿವೆ. ಆಲ್ಲದೆ ಮೂಲೆ ಮೂಲೆಗಳಲ್ಲಿ ಆನೆಯ ತಲೆಯ ಮೇಲೆ ಕಾಲನ್ನಿಟ್ಟು ನಿಂತಿರುವ ಸಿಂಹದ ಕೆತ್ತನೆಯಿದೆ. ಈ ಕೆತ್ತನೆಯನ್ನು ಇಲ್ಲಿನ ಎಲ್ಲ ದೇವಾಲಯಗಳಲ್ಲಿ ನೋಡಬಹುದು. ಆನೆ ಅಹಂಕಾರದ ಸಂಕೇತವೆಂದೂ, ಅದರ ಮೇಲೆ ವಿಜಯ ಸಾಧಿಸುವುದು ನಮ್ಮ ವ್ಯಕ್ತಿತ್ವದ ಜಯವೆಂದೂ ಹೀಗೆ ಅಹಂಕಾರವನ್ನು ಗೆದ್ದವ ವಿನೀತನಾಗಿ ದೇವದರ್ಶನಕ್ಕೆ ಯೋಗ್ಯವಾಗುತ್ತಾನೆಂದೂ ಒಬ್ಬ ಗೈಡ್ ಹೇಳಿದ. ಪ್ರವಾಸಿ ಸ್ಥಳಗಳಲ್ಲಿರುವ ಗೈಡ್ಗಳ ಬಾಯಲ್ಲಿ ಕತೆ ಕೇಳುವುದು ಬಹಳ ಆಸಕ್ತಿದಾಯಕವಾಗಿರುತ್ತದೆ. ಕೆಲವರಂತೂ ಒಂದಿಷ್ಟು ನಿಜ, ಒಂದಿಷ್ಟು, ಕತೆ, ಒಂದಿಷ್ಟು ತಮ್ಮದೇ ವ್ಯಾಖ್ಯಾನ, ಒಂದಿಷ್ಟು ಮಸಾಲೆ ಎಲ್ಲವನ್ನು ಸೇರಿಸಿ ಚೆಂದವಾಗಿ ನಮ್ಮೆದುರಿಟ್ಟು ಅವರಿಗೆ ಕೊಡುವ ದುಡ್ಡು ಸಾರ್ಥಕವಾಯಿತೆನ್ನುವಂತೆ ಮಾಡುತ್ತಾರೆ! ಇಲ್ಲಿ ಆನೆಯ ತಲೆಯ ಮೇಲೆ ಕಾಲಿಟ್ಟು ನಿಂತ ಸಿಂಹದ ಕೆತ್ತನೆ ಬಹಳಷ್ಟು ಗೂಡಾರ್ಥಗಳನ್ನೂ ಒಳಗೊಂಡಿರಬಹುದು. ಬೌದ್ಧ ಧರ್ಮದ ಸಂಕೇತವಾದ ಆನೆಯನ್ನು ಮೆಟ್ಟಿ ನಿಂತ ಹಿಂದೂ ಧರ್ಮದ ದುರ್ಗೆಯ ವಾಹನವಾದ ಸಿಂಹ….ಹೇಗೂ ಅರ್ಥೈಸಬಹುದು.
ಭುವನೇಶ್ವರದಲ್ಲಿ ಒಂದು ದಿನವಿರಲು ಕಾಲಾವಕಾಶವಿದ್ದ ನಮಗೆ ಇದಿಷ್ಟನ್ನು ಮಾತ್ರ ನೋಡಲು ಸಾಧ್ಯವಾಯಿತು. ನಮ್ಮ ಲಿಸ್ಟ್ನಲ್ಲಿದ್ದ ಆದಿವಾಸಿ ಜನಾಂಗದ ಮ್ಯೂಸಿಯಂ, ಆರ್ಟ್ ಮ್ಯೂಸಿಯಂ ನೋಡಲು ಸಾಧ್ಯವಾಗಲಿಲ್ಲ. ಅಲ್ಲದೆ ಸನಿಹದಲ್ಲೀಯೇ ಒಂದು ಪ್ರಸಿದ್ಧವಾದ ಝೂ ಸಹ ಇದ್ದು ಇನ್ನೊಂದು ದಿನ ಕಾಲಾವಾಕಾಶವಿದ್ದರೆ ಎಲ್ಲವನ್ನೂ ನೋಡಬಹುದು.
.jpeg)
.jpeg)

.jpeg)
.jpeg)
.jpeg)
.jpeg)
.jpeg)

.jpeg)

No comments:
Post a Comment