1 Oct 2009

ಅಬ್ಬ!! ಆಡು!!!

ಆಯುಧಪೂಜೆ, ವಿಜಯದಶಮಿ ಎಂದು ಎರಡು ದಿನ ರಜ ಇದ್ದುದರಿಂದ ಮೇಲುಕೋಟೆ, ಶ್ರವಣಬೆಳಗೊಳಗಳಿಗೆ ಹೋಗಿದ್ದೆವು. ಮೇಲುಕೋಟೆಯ ಚೆಲುವನಾರಾಯಣನ್ನು ನೋಡಿಕೊಂಡು ಬೆಟ್ಟದ ಮೇಲಿರುವ ಯೋಗಾನರಸಿಂಹನ್ನು ನೋಡಲು ಮೆಟ್ಟಿಲೇರುತ್ತಿದ್ದೆವು. ನಮ್ಮನ್ನು ಹಿಂದಿನಿಂದ ತಳ್ಳಿಕೊಂಡಂತೆ ಎರಡು ಆಡುಗಳು ಯೋಗಾನರಸಿಂಹನ ಪೂಜಾರಿಗಳೊ ಎಂಬಂತೆ ಸರಸರನೆ ಮೆಟ್ಟಿಲು ಹತ್ತಿ ಹೋದವು. ಆ ಕಡಿದಾದ ಮೆಟ್ಟಿಲುಗಳನ್ನು ಅಷ್ಟು ವೇಗವಾಗಿ ಹತ್ತುವುದು ನೋಡಿ ಆಶ್ಚರ್ಯವಾಯಿತು.


ನಂತರ ಶ್ರವಣಬೆಳಗೊಳದ ಹೆಬ್ಬಂಡೆಯನ್ನೇರಿ ಗೊಮ್ಮಟನ ಭವ್ಯಮೂರ್ತಿಯನ್ನು ನೋಡಿ, ಕೊನೆಯೆ ಇಲ್ಲವೇನೊ ಎಂಬಂತಿರುವ ಮೆಟ್ಟಿಲುಗಳನ್ನು ಸ್ಲೋಮೋಶನ್ ನಲ್ಲಿ ಇಳಿಯುತ್ತಿದ್ದೆವು. ಅಲ್ಲಿಯ ಮೆಟ್ಟಿಲುಗಳ ಪಕ್ಕದ ಬಂಡೆಯ ಇಳಿಜಾರಿನಲ್ಲಿ ನಾಲ್ಕು ಆಡುಗಳು ನಮ್ಮನ್ನು ಅಣಕಿಸುವಂತೆ ವೇಗವಾಗಿ ಇಳಿಯುತ್ತಿದ್ದವು!!.
ಆಗ ಅವುಗಳಲ್ಲೊಂದು ಆಡು ಆಯತಪ್ಪಿ ಜಾರಿತು. ನೋಡುತ್ತಿದ್ದ ನಮಗೆ ಗಾಭರಿ. ಇನ್ನೇನು ಬಿದ್ದೇ ಹೋಗುತ್ತದಲ್ಲ ಎಂಬ ಆತಂಕದಲ್ಲಿದ್ದ ನಮಗೆಲ್ಲ ಆಶ್ಚರ್ಯವಾಗುವಂತೆ ಅದು ಆ ಇಳಿಜಾರಿನಲ್ಲಿ ತನ್ನನ್ನು ತಾನು ಸಂಭಾಳಿಸಿಕೊಂಡು ನಿಂತಿತು!!!






ಅದು ಬಿದ್ದುಬಿಡುತ್ತದೆ ಎಂಬ ಆತಂಕ್ಕೆ ನನಗೆ ಪ್ರಾರಂಭವಾದ ಕಾಲುನಡುಕ ನಿಲ್ಲಲು ಒಂದು ಘಂಟೆ ಬೇಕಾಯಿತು.



ಅದನ್ನು ನೋಡಿದರೆ ಕೊರಕಲಿನ ಮೂಲೆಯಲ್ಲೆಲ್ಲೊ ಅರಾಮಾಗಿ ಮೇಯುತ್ತಾ ನಿಂತಿತ್ತು. ಅದಕ್ಕಿರುವ ಅದ್ಭುತ ಬ್ಯಾಲೆನ್ಸ್ ನೋಡಿ ಆಶ್ಚರ್ಯವಾಯಿತು.

ನನ್ನ ತಲೆಯಿಂದ ಚೆಲುವನಾರಾಯಣ,ಯೋಗಾನರಸಿಂಹ,ಗೊಮ್ಮಟನ ಭವ್ಯತೆ ಎಲ್ಲ ಮರೆಯಾಗಿ ಆಡು ಕುಣಿಯತೊಡಗಿತು.

ಮೆಲುಕು ಹಾಕುವ ಗೊರಸುಳ್ಳ ಸಸ್ತನಿಗಳ ಜಾತಿಯಾದ ಆಡುಗಳಲ್ಲಿ ಮುನ್ನೂರಕ್ಕು ಹೆಚ್ಚು ತಳಿಗಳಿವೆಯಂತೆ. ಅವುಗಳ ವಿಶಿಷ್ಠ ಕಾಲುಗಳ ರಚನೆ, ಕಣ್ಣು , ಎಂತಹ ದುರ್ಗಮ ಪ್ರದೇಶದಲ್ಲು ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.


ಅವುಗಳ ಕಾಲಬೆರಳುಗಳಲ್ಲಿ ಮೂರು ಮತ್ತು ನಾಲ್ಕನೆಯ ಬೆರಳುಗಳು ಮಾತ್ರ ಸಮಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ್ದು, ಕಾಲುಗಳ ಮಧ್ಯದರೇಖೆ ಇವುಗಳ ನಡುವೆ ಹಾದು ಹೋಗುತ್ತದೆ. ಎರಡು ಗೊರಸುಗಳು ಈ ಎರಡು ಬೆರಳುಗಳನ್ನು ಮುಚ್ಚುವಂತೆ ಇದ್ದು ಹೆಚ್ಚಿನ ಬಲ ನೀಡುತ್ತವೆ. ಈ ರೀತಿಯ ರಚನೆ ಕಠಿಣ ಮೇಲ್ಮೈಯಲ್ಲಿ ನಿಲ್ಲಲು ಬೇಕಾದ ಧೃಡತೆಯನ್ನು ನೀಡುತ್ತದೆ. ಅಂತೆಯೆ ಮೆದುವಾದ ನೆಲದಲ್ಲಿರುವಾಗ ಗೊರಸುಗಳು ಹಿಗ್ಗಿ ಜಾರದಂತೆ ಕಾಪಾಡುತ್ತವೆ.
ಜೊತೆಗೆ ಕಣ್ಣು ಪಾಪೆಯ ರಚನೆ ಇಕ್ಕೆಲಗಳನ್ನು ಸರಿಯಾಗಿ ಗುರುತಿಸಲನುಗುಣವಾಗಿದೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯೆ ಇದೆಯಲ್ಲವೆ? ನಿಜ ಅದು ಎಲ್ಲವನ್ನು ತಿನ್ನಬಲ್ಲುದಾದರು ಎಳೆ ಚಿಗುರು ಸೊಪ್ಪು ಹೆಚ್ಚು ಪ್ರಿಯ. ಅದಕ್ಕಾಗಿ ಎಂತಹ ದುರ್ಗಮ ಪ್ರದೇಶದಲ್ಲಾದರು ನಡೆಯಬಲ್ಲದು. ಮೆಲುಕು ಹಾಕುವ ಪ್ರಾಣಿಯಾದ್ದರಿಂದ ಜಠರದಲ್ಲಿ ನಾಲ್ಕು ಕೋಣೆಗಳಿವೆ.

ಈ ಮೆಲುಕುಹಾಕುವ ಸಸ್ಯಾಹಾರಿ ಸಸ್ತನಿಗಳು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರವಾಗಿವ ಸಾಧ್ಯತೆ ಹೆಚ್ಚಾಗಿರುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ತಿಂದು ನಂತರ ವಿರಾಮದಲ್ಲಿ ಅದನ್ನು ಚೆನ್ನಾಗಿ ಜಗೆದು ನುಂಗುತ್ತವೆ. ಅವುಗಳ ಗೊರಸು ಹೆಚ್ಚು ವೇಗ ನೀಡಿ ವೈರಿಗಳಿಂದ ತಪ್ಪಿಸಿಕೊಳ್ಳಲು ಸಹಕರಿಸುತ್ತದೆ.

ಹೀಗೆ ಪ್ರಕೃತಿ ಎಷ್ಟು ಜಾಣ್ಮೆಯಿಂದ ಪ್ರತಿಯೊಂದನ್ನು ರಚಿಸಿದೆಯಲ್ಲವೆ? ಪ್ರಕೃತಿಗಿಂತ ಮಿಗಿಲಾದ ವಿಜ್ಞಾನಿ ಯಾರಿದ್ದಾರೆ?

7 comments:

  1. ತುಂಬಾ ಒಳ್ಳೆಯ ಬರಹ, ಉಪಯುಕ್ತವಾದದ್ದು ಕೂಡಾ,

    ReplyDelete
  2. ಸುಮಾರವರೆ..
    ನಾನು ಕಡಿದಾದ ಬೆಟ್ಟಗಳ ಮೇಲೆ ಆಡುಗಳು ಮಾಡುವ ಸರ್ಕಸ್ ನೋಡಿದ್ದೇನೆ...
    ಅವುಗಳ ಬ್ಯಾಲೆನ್ಸ್ ಅದ್ಭುತ...
    ಸುಂದರ ಬರಹ... ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು... :)

    ReplyDelete
  3. ಸುಮಾರವರೇ ನಾವು ದಿನಾ ನೋಡುವ ಆಡಿನ ಬಗ್ಗೆ ಇಷ್ಟೊ೦ದು ವಿಷಯ ಇದೇ ಎ೦ದು ಗೊತ್ತಿರಲಿಲ್ಲ. ವಿವರಗಳಿಗೆ ಧನ್ಯವಾದಗಳು. ಹಾಗು ಸು೦ದರ ಪೋಟೊಗಳಿಗೆ.

    ReplyDelete
  4. ಸುಮ...

    ಚಿತ್ರ ಲೇಖನ ಸೊಗಸಾಗಿದೆ...

    ಬಹಳಷ್ಟು ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ...

    ಒಮ್ಮೆ ನಮ್ಮ ಗದ್ದೆಗೆ ಬಂದ ಅವುಗಳನ್ನು ಹಿಡಿಯಲು ಹೋಗಿ
    ಆಗದೆ ಸುಸ್ತಾದ್ದು ನೆನಪಾಯಿತು...

    ಅಭಿನಂದನೆಗಳು..

    ReplyDelete
  5. ಬೆಟ್ಟ-ಗುಡ್ಡ, ಕೋಟೆ-ಕೊತ್ತಲ ಇವುಗಳನ್ನು ಹತ್ತಿಳಿಯುವಾಗ ಅಲ್ಲಿರುವ ಆಡು, ಮಂಗ, ಅಳಿಲು ಮೊದಲಾದವುಗಳ ಚಟುವಟಿಕೆಗಳನ್ನು ನೋಡುವುದೆಂದರೆ ನನಗೆ ಬಲು ಇಷ್ಟ. ನೋಡುತ್ತ, ನೋಡನೋಡುತ್ತ, ಅವುಗಳಲ್ಲೊಂದಾಗಿಬಿಡುತ್ತೇನೆ.
    ಆಡಿನ ಆಟದ ಅರಿವಿದ್ದ ನನಗೆ ಅದರ ಮೈಮಾಟದ ಬಗ್ಗೆ ನಿಮ್ಮ ಲೇಖನ ಓದಿ ತಿಳಿಯಿತು. ಧನ್ಯವಾದ.

    ReplyDelete
  6. ಸುಮಾ ಮೇಡಮ್,

    ನಿತ್ಯ ಕಾಣುವ ಆಡುಗಳಲ್ಲಿ ಇಷ್ಟೆಲ್ಲಾ ಗುಣಗಳಿರುತ್ತವೆ ಅಂತ ಗೊತ್ತಿರಲಿಲ್ಲ. ನೀವು ಅದನ್ನು ಚೆನ್ನಾಗಿ ಗಮನಿಸಿ ಅಭ್ಯಾಸಿಸಿ ಚಿತ್ರಸಹಿತ ವಿವರ ನೀಡಿದ್ದೀರಿ. ನಿಮ್ಮ ಬ್ಲಾಗಿನ ಚಿತ್ರ ಲೇಖನಗಳು ಹೊಸ ವಿಚಾರಗಳನ್ನು ಹೇಳುತ್ತಾ ನಮ್ಮ ಮನಸ್ಸನ್ನು ತಣಿಸುತ್ತವೆ..

    ReplyDelete
  7. ಪ್ರಕೃತಿಗಿಂತ ಮಿಗಿಲಾದ ವಿಜ್ಞಾನಿ ಯಾರಿದ್ದಾರೆ?

    khanditha yArU illa, iralu sAdyavU illa.

    ReplyDelete