15 Nov 2010

ಯಕ್ಷರಂಗದ ಕೋಗಿಲೆ



ದೀಪಾವಳಿ ಮುಗಿದ ನಂತರ ಮಳೆಯೆಲ್ಲ ಕಡಿಮೆಯಾಗಿ ನಿಧಾನವಾಗಿ ಚಳಿಗಾಲ ಅಡಿಯಿಡುವ ಸಮಯ ... ನಮ್ಮೂರಿನ ಸಮೀಪದ ಸಾಗರಪೇಟೆಯಲ್ಲಿ ಒಂದೊಂದಾಗಿ ಯಕ್ಷಗಾನ ಮೇಳಗಳ ಆಟ ಪ್ರಾರಂಭವಾಗುತ್ತಿತ್ತು. ಗುರುವಾರ ಸಾಗರದಲ್ಲಿ ಸಂತೆ . ಅದಕ್ಕೆ ಇರಬಹುದು ಹೆಚ್ಚಿನ ಆಟ ಗುರುವಾರವೇ ಇರುತ್ತಿತ್ತು. ಮನೆಯಲ್ಲಿ ಅಪ್ಪ , ಚಿಕ್ಕಪ್ಪಂದಿರು ಹೀಗೆ ಎಲ್ಲರೂ ಯಕ್ಷಗಾನಪ್ರೇಮಿಗಳು. ಅವರಲ್ಲಿ ಯಾರು ಯಕ್ಷಗಾನಕ್ಕೆ ಹೊರಟರೂ ನಾನೂ ಹೋಗುತ್ತೇನಮ್ಮ ಎಂದು ಆಸೆಗಣ್ಣಿಂದ ಹೇಳುವ ನನ್ನನ್ನು ಮರುದಿನ ಸ್ಕೂಲಿಗೆ ಹೊಗಲಾಗುವುದಿಲ್ಲ ಎಂದು ಸಮಾಧಾನಿಸುತ್ತಿದ್ದರು ಅಮ್ಮ . ಆದರೂ ಅಪ್ಪನೋ ಚಿಕ್ಕಪ್ಪನೋ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಕರೆದೊಯ್ಯುತ್ತಿದ್ದರು ಯಕ್ಷಗಾನಕ್ಕೆ. ಅಪ್ಪನ ಜೊತೆ ಯಕ್ಷಗಾನಕ್ಕೆ ಹೋಗುವುದೆಂದರೆ ಅವತ್ತು ಬೆಳಗ್ಗೆಯಿಂದಲೇ ಸಂಭ್ರಮ . ಸಾಯಂಕಾಲ ಯಾವಾಗಾಗುತ್ತೋ ಎಂದು ಕಾಯುವುದು. ಅಂತೂ ಸಂಜೆ ಆರು ಗಂಟೆಗೆ ಕೊಟ್ಟಿಗೆ ಕೆಲಸ ಮುಗಿಸಿದ ಅಪ್ಪನ ಜೊತೆ ಏಳು ಗಂಟೆಗೇ ಊಟ ಮಾಡಿ , ಅಜ್ಜ ಕೊಡಿಸಿದ ನನ್ನ ಪ್ರೀತಿಯ ಕೆಂಪು ಸ್ವೆಟರ್ ತೊಟ್ಟು ಹೊರಟರೆ ಒಂಬತ್ತು ಗಂಟೆಯ ವೇಳೆಗೆ ನೆಹರೂ ಮೈದಾನದಲ್ಲಿನ ಯಕ್ಷಗಾನದ ಟೆಂಟ್ ಬಳಿ ತಲುಪುತ್ತಿದ್ದೆವು . ಜನಜಂಗುಳಿಯಲ್ಲಿ ಕಳೇದುಹೋದೇನೆಂಬ ಭಯದಲ್ಲಿ ಅಪ್ಪ ಕೈಯನ್ನು ಭದ್ರವಾಗಿ ಹಿಡಿದು ಟೆಂಟಿನ ಸುತ್ತಲಿನ ಅಂಗಡಿ ಸಾಲಿಗೆ ಕರೆದೊಯ್ಯುತ್ತಿದ್ದರು . ಮಂಡಕ್ಕಿಖಾರ, ಚಾಕೊಲೇಟ್ ಇತ್ಯಾದಿ ಕೊಡಿಸುತ್ತಿದ್ದರು . ಆಟ ಶುರುವಾಗುವುದಕ್ಕೂ ಮೊದಲು ನಟರು ಮೇಕಪ್ ಮಾಡಿಕೊಳ್ಳುವುದನ್ನು ತೋರಿಸಲು ಅಪ್ಪ ಎಂದೂ ಮರೆಯುತ್ತಿರಲಿಲ್ಲ. ಅಲ್ಲಿ ಅವರು ಮುಖಕ್ಕೆ ಬಳಿದುಕೊಳ್ಳುವ ಬಣ್ಣ , ಕಟ್ಟಿಕೊಳ್ಳುವ ಕಿರೀಟ ಇತ್ಯಾದಿಗಳನ್ನು ಬೆರಗುಗಣ್ಣಿಂದ ನೋಡುವ ನಮಗೆ ಅವರೆಲ್ಲರ ಹೆಸರು ಅವರು ಮಾಡಲಿರುವ ಪಾತ್ರ ಎಲ್ಲ ವಿವರಿಸಿ ಅಲ್ಲೇ ಪ್ರಾರಂಭಕ್ಕೂ ಮುನ್ನ ನಡೆಯುವ ಗಣಪತಿ ಪೂಜೆಯನ್ನು ತೋರಿಸಿದ ಮೇಲೆ ಅಪ್ಪ ಟೆಂಟ್ ಒಳಗೆ ಕರೆದೊಯ್ಯುತ್ತಿದುದು. ಅಲ್ಲಿನ ಅರಾಮಕುರ್ಚಿಯಲ್ಲಿ ಕುಳಿತರೆ ಹೊಸದೊಂದು ಲೋಕ ಪ್ರವೇಶಿಸಿದಂತೆ . ಗಾನ , ನೃತ್ಯ, ಮನಸೆಳೆಯುವ ವೇಶಭೂಷಣ .....ಅದೊಂದು ಗಂಧರ್ವಲೋಕ . ಬಹುಶಃ ನನಗೆ ಮಹಾಭಾರತ, ರಾಮಾಯಣದ ಹುಚ್ಚು ಹತ್ತಿಸಿದ್ದೇ ಇಂತಹ ಯಕ್ಷಗಾನಗಳು.


ಸುಮಾರು ಹತ್ತು ಹನ್ನೆರಡು ವಯಸ್ಸಿನಲ್ಲಿ ನೋಡಿದ ಅನೇಕ ಯಕ್ಷಗಾನಗಳು ನನಗಿನ್ನೂ ಮಸುಕು ಮಸುಕಾಗಿ ನೆನಪಿವೆ . ಅದರಲ್ಲಿಯೂ ಚಿಟ್ಟಾಣಿಯವರ ಕೆಲ ಪಾತ್ರಗಳು , ದುರ್ಗಪ್ಪ ಗುಡಿಗಾರರ ಮೃದಂಗ , ಹೆಸರು ನೆನಪಿಗೆ ಬಾರದ ಯಾವುದೊ ಸ್ತ್ರೀವೆಷ ಹೀಗೆ ಕೆಲವೊಂದು ಮನಸ್ಸಿನಾಳದಲ್ಲಿಳಿದಿವೆ . ಹೀಗೆ ಮನಸ್ಸಿನಾಳಕ್ಕಿಳಿದ ಮಧುರ ಕಂಠವೊಂದಿದೆ. ಅದು ಸುಭ್ರಮಣ್ಯ ಧಾರೇಶ್ವರರದು . ಆ ಚಿಕ್ಕವಯಸ್ಸಿನಿಂದ ಇಂದಿನವರೆಗೂ ಅವರ ಮಧುರ ಕಂಠದ ಅಭಿಮಾನಿ ನಾನು.

ನನಗಿಂತಲೂ ಸ್ವಲ್ಪ ಹೆಚ್ಚೇ ಯಕ್ಷಗಾನದ ಅಭಿಮಾನಿಯಾದ ಸುಧಾಕಿರಣ್ , ಹಬ್ಬದ ದಿನ ಸಾಯಂಕಾಲ ಧಾರೇಶ್ವರರ ಮನೆಗೆ ಹೋಗೋಣವೆಂದಾಗ ಖುಷಿಯಿಂದ ಹೊರಟೆ. ಯಕ್ಷಗಾನಪ್ರೇಮಿ ರವೀಶಣ್ಣ , ಭಾವ , ಅಕ್ಕ ಹೀಗೆ ಐದು ಜನರ ತಂಡ ನಾಗೂರಿನ ಬಳಿಯಲ್ಲಿನ ಅವರ ಮನೆ ತಲುಪಿದಾಗ ಧಾರೇಶ್ವರ್ ಮತ್ತವರ ತ್ನಿ ಸುಜಾತ, ಮಗಳು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ತಮ್ಮ ಇಲ್ಲಿಯವರೆಗಿನ ಯಕ್ಷಗಾನರಂಗದ ಅನುಭವಗಳು , ಮುಂದಿರುವ ಯೋಜನೆಗಳು , ಯಕ್ಷಗಾನರಂಗದ ಅನೇಕ ಆಸಕ್ತಿದಾಯಕ ವಿಚಾರಗಳ ಬಗ್ಗೆ ಆತ್ಮೀಯವಾಗಿ ಮಾತನಾಡಿದರು.

ಸದಾ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಧಾರೇಶ್ವರರದು ಬಹುಮುಖ ಪ್ರತಿಭೆ. ಇವರು ನಿಜವಾದ ಅರ್ಥದಲ್ಲಿ ಭಾಗವತರು. ಅದ್ಭುತವೆನ್ನಿಸುವಂತೆ ರಂಗಸಜ್ಜಿಕೆ ಮಾಡಬಲ್ಲರು. "ಆಪ್ತಮಿತ್ರ" ಕಥೆಯನ್ನು ಯಕ್ಷಗಾನಕ್ಕೆ ಅಳವಡಿಸಿ , ಅದಕ್ಕೆ ಅದ್ಭುತವಾದ ರಾಗಸಂಯೋಜನೆ , ನೃತ್ಯಸಂಯೋಜನೆ , ರಂಗನಿರ್ಮಾಣ ಮಾಡಿ ಜನಪ್ರಿಯಗೊಳಿಸಿದ್ದಾರೆ.

ಅನೇಕ ಪ್ರಸಂಗಗಳಲ್ಲಿ ಪ್ರಕೃತಿ ವರ್ಣನೆಗೆ , ಯುಗಳಗೀತೆಗೆ , ಸಮೂಹನೃತ್ಯಕ್ಕೆ ಹೊಸ ಗೀತೆಗಳನ್ನು ರಚಿಸಿ ಹಾಡಿದ್ದಾರೆ. ಎಂತಹ ಪ್ರಸಂಗಕ್ಕೂ ಜೀವ ತುಂಬುವ ಸಾಮರ್ಥ್ಯದ ಗಾಯನ ಶಕ್ತಿ ಇವರ ಪ್ಲಸ್ ಪಾಯಿಂಟ್.


ಯಕ್ಷಗಾನಮೇಳದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸಕ್ಕೆ ಸೇರಿದ ಇವರು ನಂತರ ನಿಧಾನವಾಗಿ ಭಾಗವತಿಗೆಯತ್ತ ಹೊರಳಿದರು. ತಮ್ಮ ಕಂಠಸಿರಿಯಿಂದ ಜನಮನ ಸೆಳೆದು ಸ್ಟಾರ್ ಪಟ್ಟ ಪಡೆದರು.
ಒಬ್ಬನೇ ಮಗ ಯಕ್ಷರಂಗ ಪ್ರವೇಶಿಸುವುದು ತಂದೆಗೆ ಇಷ್ಟವಿರಲಿಲ್ಲವೆಂದು ಇಂದಿಗೂ ನೆನೆಯುವ ಅವರು ನಂತರ ತನ್ನ ಸಾಧನೆಯಿಂದ ಕುಟುಂಬ ಹೆಮ್ಮೆ ಪಡುವಂತೆ ಮಾಡಿದ ತೃಪ್ತಿಯಿಂದಿದ್ದಾರೆ.

ಅನೇಕ ಪ್ರಶಸ್ತಿ , ಸನ್ಮಾನಗಳು ಇವರ ಮುಡಿಗೇರಿದೆ. ಹಾಗೆಯೆ ತಮ್ಮ ಹೊಸ ಪ್ರಯೋಗಳಿಗೆ ಟೀಕೆಯನ್ನೂ ಎದುರಿಸಿದ್ದಾರೆ . ರಚನಾತ್ಮಕ ಟೀಕೆಯಿಂದ ಬೆಳವಣಿಗೆ ಸಾಧ್ಯ ಎಂಬ ಮಾತಿನಲ್ಲಿ ನಂಬಿಕೆಯಿರುವುದರಿಂದ ಅದನ್ನೂ ಸಂತೋಷದಿಂದಲೇ ಸ್ವೀಕರಿಸುತ್ತೇನೆನ್ನುತ್ತಾರೆ ಅವರು.


ಸಾಪ್ರದಾಯಿಕವಾಗಿ ಯಕ್ಷಗಾನದ ಪರಿಚಯವಿರದ ಬಯಲುಸೀಮೆಯ ಪ್ರದೇಶಗಳಲ್ಲೂ ತಮ್ಮ ಕಂಠಸಿರಿಯಿಂದ ಜನರನ್ನಾಕರ್ಷಿಸಿ ಅವರಿಗೆ ಯಕ್ಷಗಾನದ ಅಭಿರುಚಿ ಹತ್ತಿಸಿದ ಅನೇಕ ಘಟನೆಗಳನ್ನು ಅವರು ನೆನಪಿಸಿಕೊಂಡರು.
ಬೈಂದೂರಿನ ಬಳಿಯ ನಾಗೂರಿನಲ್ಲಿ ತೆಂಗಿನ ತೋಟದ ಮಧ್ಯೆ ಭವ್ಯವಾದ ಮನೆ ಕಟ್ಟಿಸಿ ವಾಸವಿರುವ ಅವರು ಅಪ್ಪಟ ಫ್ಯಾಮಿಲಿಮ್ಯಾನ್. ಪತಿಯ ಸಾಧನೆಗೆ ಎಲ್ಲ ರೀತಿಯ ಸಹಕಾರ ನೀಡುವ ಪತ್ನಿ ಸುಜಾತ , ಬಿಎಸ್ಸಿ ಜೊತೆಗೆ ಶಾಸ್ತ್ರೀಯ ನೃತ್ಯಪ್ರಾಕಾರಗಳನ್ನು ಅಭ್ಯಸಿಸುವ ಮಗಳು ಮತ್ತು ಅನಿಮೇಶನ್ ಕೋರ್ಸ್ ಮಾಡುತ್ತಿರುವ ಮಗ, ಇರುವ ಚಿಕ್ಕ ಚೊಕ್ಕ ಸಂಸಾರ ಇವರದು.

ಹತ್ತೊಂಬತ್ತು ವರ್ಷಗಳ ನಂತರ ದೀಪಾವಳಿಯಂದು ಮನೆಯಲ್ಲಿರುವುದನ್ನು ಸಂತೋಷದಿಂದ ಧಾರೇಶ್ವರ್ ನೆನಪಿಸಿಕೊಂಡಾಗ ನಮಗೆ ಕಲಾವಿದರ ಕುಟುಂಬದ ಸಮಸ್ಯೆಯೊಂದರ ಅರಿವಾಗಿತ್ತು.

ನಮ್ಮ ನೆಚ್ಚಿನ ಕಲಾವಿದನನ್ನು ಶಾಲು ಹೊದೆಸಿ ಆತ್ಮೀಯವಾಗಿ ಸನ್ಮಾನಿಸಿ ನಾವಲ್ಲಿಂದ ಹೊರಟಾಗ ಕಪ್ಪುಗಟ್ಟಿದ ಆಕಾಶ ಹನಿಯುದುರಿಸಲು ಪ್ರಾರಂಭಿಸಿತ್ತು.

11 comments:

  1. ಧಾರೇಶ್ವರರ೦ಥಾ ಅಪರೂಪದ ಮೇರುವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ತಮಗೆ ವಂದನೆಗಳು.
    ತಮ್ಮಲ್ಲಿನ ಕಲಾಭಿಮಾನಕ್ಕೆ ಮತ್ತು ಕಲಾವಿದರಿಗೆ ಗೌರವ ಕೊಡುವ ಮನಸ್ಸಿಗೆ ವಂದನೆಗಳು.

    ReplyDelete
  2. ಸುಮಕ್ಕ,

    ನಂಗೂ ಯಕ್ಷಗಾನ ಅಂದ್ರೆ ಸಿಕ್ಕಾಪಟ್ಟೆ ಇಷ್ಟ .ಬೇಸಿಗೆ ರಜೆಗೆ ಅಜ್ಜನ್ ಮನೆಗೆ ಹೋದಾಗ, ನಮಗೆ ಮಕ್ಕಳಿಗೆಲ್ಲ ಹೇಳುತಿದ್ದರು."ಬೇಗ ಬೇಗ ಊಟ ಮಾಡಿ,ಯಕ್ಷಗಾನಕ್ಕೆ ಹೋಗಕ್ಕು ಅಂತ.ಆಮೇಲೆ ಅಲ್ಲಿ ಫುಲ್ ಖಾರ ಮಂಡಕ್ಕಿ ಜೊತೆ ಯಕ್ಷಗಾನ ನೋಡೋ ಖುಷಿನೇ ಬೇರೆ"...ಎಲ್ಲ ನೆನಪಾತು ನಿನ್ನ ಬರಹ ಓದಿ....

    enjoyed this write up... :-)

    ReplyDelete
  3. yakshaganada meru vyaktitva vannu parichayisiddira... ettichige avara hosa prayoga classicle music nnu mradanga haagu tabala edara jote haadiddu...

    ReplyDelete
  4. ಒಳ್ಳೆಯ ವ್ಯಕ್ತಿ ಪರಿಚಯಕ್ಕಾಗಿ ಧನ್ಯವಾದಗಳು ಸುಮಕ್ಕ :)

    ReplyDelete
  5. ನನಗೆ ಯಕ್ಷಗಾನದ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೂ ಯಕ್ಷಗಾನವನ್ನು ನೋಡಿ ಸಂತೋಷ ಪಡುತ್ತೇನೆ. ಧಾರೇಶ್ವರರ ಹೆಸರು ಯಕ್ಷಗಾನ ಗೊತ್ತಿರುವ ಎಲ್ಲರಿಗೂ ಪರಿಚಿತ. ಒಳ್ಳೆಯ ಕಲಾಕಾರನ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು.

    ReplyDelete
  6. ನಮ್ಮೂರನ್ನ ನೆನಪಿಸಿದ್ದೀರಿ...ಧನ್ನ್ಯವಾದಗಳು....

    ReplyDelete
  7. ಸುಮಾ ಮೇಡಮ್,

    ಯಕ್ಷಗಾನದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲದಿದ್ದರೂ ಇಷ್ಟಪಟ್ಟು ನೋಡುತ್ತೇನೆ. ಧಾರೇಶ್ವರರಂತ ಕಲಾವಿಧರನ್ನು ಈ ರೀತಿ ಪರಿಚಯಿಸುತ್ತಿರುವುದಕ್ಕೆ ಥ್ಯಾಂಕ್ಸ್..ಅದಕ್ಕೆ ಸುಂದರ ಬರಹ.

    ReplyDelete
  8. ಓದುತ್ತಿದ್ದಂತೆಯೇ, ಧಾರೇಶ್ವರರ ಬಗೆಗೆ ಪ್ರೀತಿ ಅಭಿಮಾನ ಮೂಡಿತು. ಉತ್ತಮವಾಗಿ ಪರಿಚಯಸಿದ್ದೀರಿ. ಧನ್ಯವಾದಗಳು.

    ReplyDelete
  9. ಲೇಖನ ಹಲವು ಭಾವನೆಗಳನ್ನು ಕೆರಳಿಸಿತು, ಧಾರೇಶ್ವರರನ್ನು ಮೊದಲಿನಿಂದಲೂ ಅರಿತವರಲ್ಲಿ ನಾನೂ ಒಬ್ಬ. ಅವರ ಕಂಠಸಿರಿಗೆ ಮರುಳಾಗಿ ಜೀವನದ ಪಾಲುದಾರಿಕೆ ಬೇಡಿದವರು ಅವರ ಶ್ರೀಮತಿ ಸುಜಾತ. ಅನೇಕ ಕಲಾವಿದರಂತೇ ಹಲವು ಕಷ್ಟದ ದಿನಗಳನ್ನು ಕಳೆದಿದ್ದಾರೆ.ಈಗ ಒಂದು ಮಟ್ಟಿಗೆ ದೇವರು ಕೃಪೆಮಾಡಿದ್ದಾನೆ. ಅವರ ಬಗ್ಗೆ ಬರೆದಷ್ಟೂ ಕಮ್ಮಿಯಾಗಬಹುದು, ಭೂರಮೆಯಲ್ಲಿ ’ ನೀಲ ಗಗನದೊಳು ಮೋಡಗಳಾ’ ಹಾಡುವ ಹಾಡುಹಕ್ಕಿಮತ್ತವರ ಕುಟುಂಬ, ಜತೆಗೆ ನೀವು ಎಲ್ಲವನ್ನೂ ಕಂಡು ಖುಷಿಪಟ್ಟೆ. ಹಾಗೇ ನಿಮಗೊಂದು ಚಪ್ಪಾಳೆ ತಟ್ಟಿ ಹೀಗೆ ಬರೆದೆ, ಅಭಿನಂದನೆಗಳು, ಧನ್ಯವಾದ

    ReplyDelete
  10. ಸುಮ,

    ಅದೇನೋ ಏಂತೋ ನನಗೆ ಈ ಯಕ್ಷಗಾನದ ಮೇಲೆ ಆಸಕ್ತಿಯೇ ಹುಟ್ಟಲಿಲ್ಲ! (ಸಾಕಷ್ಟು ಬಾರಿ ನೋಡುವ್ ಆವಕಾಶ ಪಡೆದ ಮೇಲೂ...) ನಾವು ಮೊದಲು ಸ್ವಲ್ಪ ಕಾಲ ಕಟೀಲಿನಲ್ಲಿದ್ದೆವು. ಅಲ್ಲಿ ಯಕ್ಷಗಾನ ಸರ್ವೇ ಸಾಮಾನ್ಯ. ಆದರೂ ನನಗೆ ಆಸಕ್ತಿಯೇ ಹುಟ್ಟಲಿಲ್ಲ. ಹಾಗೆಂದ ಈ ಒಂದು ವಿಶಿಷ್ಟ ಕಲೆಯ ಮೇಲೆ ಅಗೌರವವೂ ಇಲ್ಲ. ಅಪಾರ ಗೌರವವಿದೆ.

    ನಿಮ್ಮ ಬರಹದ ಮೂಲಕ ಉತ್ತಮ ಕಲಾವಿದರೋರ್ವರ ಪರಿಚಯವಾಯಿತು. ಆಪ್ತ ಬರಹ. ಧನ್ಯವಾದ.

    ReplyDelete
  11. ಸುಮ,

    ಯಕ್ಷಗಾನದ ಬಗ್ಗೆ ಹೆಚ್ಚಿಗೆ ಎನೂ ಗೊತ್ತಿಲ್ಲಾ..ಆದರೆ ನಿಮ್ಮ ಬಾಲ್ಯದ ಅನುಭವ ಮುದ ನೀಡಿದವು..

    ಹಾಗೆಯೇ ಧಾರೇಶ್ವರರಂತ ಕಲಾವಿದರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು

    ReplyDelete