27 May 2012

ಫೋಟೋಗ್ರಫಿಯ ಹುಚ್ಚು



ಇದು ಸುಮಾರು ಇಪ್ಪತ್ತೈದು ವರ್ಷ ಹಳೆಯ ಕತೆ. ನನಗಾಗ ಹತ್ತು - ಹನ್ನೊಂದರ  ವಯಸ್ಸು. ಪುಸ್ತಕದ ಹುಳುವಾದ್ದರಿಂದ ಮನೆಗೆ ಬರುತ್ತಿದ್ದ ಪೇಪರ್ , ಪತ್ರಿಕೆಗಳನ್ನೆಲ್ಲ ತಿರುವಿ ಹಾಕುತ್ತಿದ್ದೆ.  ಅವುಗಳಲ್ಲಿ ಬರುತ್ತಿದ್ದ  ಪ್ರಾಣಿ ,ಪಕ್ಷಿಗಳು, ಹೂವು ಪ್ರಕೃತಿಯ ಫೋಟೋಗಳು ನನ್ನನ್ನು ಸೆಳೆಯುತ್ತಿದ್ದವು. ಅವುಗಳನ್ನು ಕತ್ತರಿಸಿ ನನ್ನ ಮಾಯಾ ಪೆಟ್ಟಿಗೆಗೆ ಸೇರಿಸುತ್ತಿದ್ದೆ. ಹಾಗೂ ಎಂದಾದರೊಮ್ಮೆ ನಾನೂ ಅಂತಹ ಫೋಟೋಗಳನ್ನು ತೆಗೆಯುತ್ತೇನೆ ಎಂದು ಕನಸು ಕಾಣುತ್ತಿದ್ದೆ.


ಅಗೆಲ್ಲ ಕ್ಯಾಮರಾ ನೋಡುತ್ತಿದ್ದುದು ಸ್ಟುಡಿಯೋ ಇಟ್ಟುಕೊಂಡ ಫೋಟೊಗ್ರಾಫರ‍್ಗಳ ಬಳಿ ಮಾತ್ರ. ಮದುವೆ ಮನೆಗಳಲ್ಲಿ ಠೀವಿಯಿಂದ ಕುತ್ತಿಗೆಗೆ ಕ್ಯಾಮರ ನೇತುಹಾಕಿಕೊಂಡು ಓಡಾಡುವ ಫೋಟೊಗ್ರಾಫರ್ ನಮ್ಮಂತಹ ಮಕ್ಕಳಿಗೆಲ್ಲ ಬೊಮ್ಮನಹಳ್ಳಿಯ ಕಿಂದರಿಜೋಗಿಯೆ ಆಗಿದ್ದ ಕಾಲವದು.
ಒಮ್ಮೆ ಅಮ್ಮನ ಜೊತೆ ಯಾವುದೋ ಸಂಭಂದಿಕರ ಮದುವೆ ಮನೆಗೆ ಹೋದಾಗ ಅಲ್ಲಿ ಒಬ್ಬಳು ಹೆಂಗಸು ಕ್ಯಾಮರ ಕುತ್ತಿಗೆಗೆ ಹಾಕಿಕೊಂಡು ಓಡಾಡುತ್ತಿದ್ದಳು. ವಧುವಿನ ಚಿಕ್ಕಮ್ಮನಾದ ಆಕೆ ಬೆಂಗಳೂರು ಪೇಟೆಯಲ್ಲಿರುವುದನ್ನೂ, ಗಂಡನನ್ನು ಏಕವಚನದಲ್ಲಿ ಕರೆಯುವುದನ್ನೂ, ಹೀಗೆ ಗಂಡುಬೀರಿಯಂತೆ ಕ್ಯಾಮರ ಹಿಡಿದು ತಿರುಗುವುದನ್ನೂ ಮದುವೆ ಮನೆಗೆ ಬಂದ ಹೆಂಗಸರು ಅಸೂಯೆ ಬೆರೆತ ತಿರಸ್ಕಾರದಲ್ಲಿ ಗುಟ್ಟಾಗಿ ಆಡಿಕೊಳ್ಳುತ್ತಿದ್ದರು. ನಾನಂತೂ ಆಕೆಯನ್ನು ಯಾವ ಸಿನೆಮಾ ಹೀರೋಯಿನ್‍ಗೂ ಕಮ್ಮಿಯಿಲ್ಲದ ಆರಾಧನಾಭಾವದಲ್ಲಿ ನೋಡಿ, ಅವಳ ಹಿಂದೆ ಮುಂದೆಯೇ ಸುತ್ತಿದ್ದೆ. ಮತ್ತು ಎಂದಾದರೊಂದು ದಿನ ನಾನೂ ಹೀಗೆ ಒಂದು ಮದುವೆಮನೆಯಲ್ಲಿ ಫೋಟೊ ತೆಗೆಯುವ ಕನಸು ಕಂಡಿದ್ದೆ.


ಮತ್ತೊಂದೆರಡು ವರ್ಷದಲ್ಲಿ ಅಪ್ಪ ಒಂದು ಪುಟ್ಟ ಕ್ಯಾಮರವನ್ನು ಮನೆಗೆ ತಂದರು. ನನ್ನ ಸಂತೋಷಕ್ಕಂತೂ ಪಾರವೇ ಇಲ್ಲ. ಒಮ್ಮೆ ಫಿಲ್ಮ್ ರೋಲ್ ಹಾಕಿದರೆ ಮುವ್ವತ್ತೈದು ಫೋಟೋಗಳನ್ನು ಮಾತ್ರ ತೆಗೆಯಬಹುದಾದ ಕ್ಯಾಮರವದು. ಮತ್ತೆ ಅದನ್ನು ಡೆವಲಪ್ ಮಾಡಿಸುವ ಖರ್ಚು ಬೇರೆ !! ಈಗಿನಂತೆ ಡಿಜಿಟಲ್ ಯುಗವಲ್ಲ. ಹಾಗಾಗಿ ಪ್ರತಿಯೊಂದು ಫೋಟೋವನ್ನೂ ಎಚ್ಚರಿಕೆಯಿಂದ ತೆಗೆಯಬೇಕಾಗುತ್ತಿತ್ತು. ಹಾಗಾಗಿ ಅದನ್ನು ನನ್ನ ಕೈಗೆ ಕೊಡಲು ಅಪ್ಪ ಸ್ವಲ್ಪ ಹೆದರುತ್ತಿದ್ದರು.  ಆದರೂ ಅಪ್ಪನಲ್ಲಿ ಗೋಗರೆದು  ನಾಯಿ , ಕಪ್ಪೆ ,  ಹೂವು ಮರಗಳ ಫೋಟೋ ತೆಗೆದು ಖುಷಿ ಪಟ್ಟಿದ್ದೆ.



ಸ್ವಲ್ಪ ದಿನಗಳಲ್ಲೇ ನನ್ನ ಸೋದರಮಾವನ ಮದುವೆ . ಹೇಗಾದರೂ ಮಾಡಿ ಕ್ಯಾಮರ ನಾನೇ ಹಿಡಿದುಕೊಂಡು ತಿರುಗಬೇಕೆಂದು ನಾನಂತೂ ಕಾಯುತ್ತಿದ್ದೆ.  ಮದುವೆಯ ದಿನ   ನಿಮ್ಮಿಬ್ಬರ ಫೋಟೋಗಳನ್ನೇ ಸರಿಯಾಗಿ ತೆಗೆಯುತ್ತೇನೆಂದು  ಮಾವನನ್ನು ಒಪ್ಪಿಸಿ ಕ್ಯಾಮರಾ  ಕುತ್ತಿಗೆಗೆ ತೂಗುಹಾಕಿಕೊಂಡೆ..... ಮಂಟಪದ ಸುತ್ತಲೂ ಜಂಬದಿಂದ ಓಡಾಡುತ್ತಾ ಫೋಟೋ ತೆಗೆದೇ ತೆಗೆದೆ.
 ನಾನು ಯಾವ ಪರೀಕ್ಷೆಯ ಫಲಿತಾಂಶಕ್ಕೂ ಹಾಗೆ ಕಾದಿರಲಿಲ್ಲ . ಆ ಫೋಟೋಗಳಿಗಾಗಿ ಹಾಗೆ ಕಾದಿದ್ದೆ.  ವಾರದ ನಂತರ ಅಪ್ಪ ಆ ಫೋಟೋಗಳನ್ನು ಡೆವಲಪ್ ಮಾಡಿಸಿ ತಂದರು. ಅಮ್ಮನಿಗೆ ಕೊಡುತ್ತಾ " ನಿನ್ನ  ಮಗಳ ಫೋಟೋಗ್ರಫಿ  ನೋಡು ...ಹೇಗಿದೆ " ಎಂದು ನಕ್ಕರು. ಅಲ್ಲೇ ಇದ್ದ ನಾನೂ ಓಡಿ ಹೋಗಿ ಅಮ್ಮನ ಕೈಯಿಂದ ತೆಗೆದುಕೊಂಡು ನೋಡಿದೆ.ಒಂದು ಫೋಟೋದಲ್ಲಿ ಮಾವನ ಅರ್ಧ ಕೈ , ಅತ್ತೆಯ ಅರ್ಧ ತಲೆ , ಇನ್ನೊಂದರಲ್ಲಿ ಯಾರದೋ ಬೆನ್ನು ಮಗದೊಂದರಲ್ಲಿ ಅರ್ಧ ಮಾತ್ರ ಮದುವೆ ಮಂಟಪ .......ಹೀಗೆ ಸುಮಾರು ಫೋಟೋಗಳು......ಅಂತೂ ಒಂದು ನಾಲ್ಕು ಫೋಟೋಗಳು ಪರವಾಗಿಲ್ಲವೆನ್ನಿಸುವಂತೆ ಇತ್ತು !!!! ಅಪ್ಪ ಬೇಕೆಂದೇ ಎಲ್ಲವನ್ನೂ ಡೆವಲಪ್ ಮಾಡಿಸಿ ತಂದಿದ್ದರು !! ಎಲ್ಲರೂ ಅದನ್ನು ನೋಡಿ ನಗುತ್ತಿದ್ದರೆ ನಾನು ಮಾತ್ರ ಸರಿಯಾಗಿ ಬಂದಿದ್ದ ನಾಲ್ಕು ಫೋಟೋಗಳನ್ನೇ ನೋಡುತ್ತಾ "ಏನೋ ಕೆಲವು ತಪ್ಪಾಗಿದೆ ಅಷ್ಟೇ, ಇದೆಲ್ಲ ಚೆನ್ನಾಗೇ ಬಂದಿದೆ ನೋಡಿ ಎಂದು " ಗೊಣಗುತ್ತಿದ್ದೆ. 



ನಿಧಾನವಾಗಿ ಆ ಪುಟ್ಟ ಕ್ಯಾಮರ ನನ್ನ ಆಜ್ಞೆಗಳನ್ನು ಪಾಲಿಸತೊಡಗಿತು. ಚಿಕ್ಕಪ್ಪನ ಮಕ್ಕಳ ಫೋಟೋಗಳು , ಪಕ್ಕದಮನೆಯ ಅತ್ತೆಯ ಮಗುವಿನ ನಾಮಕರಣದ ಫೋಟೋಗಳು , ಕಾಲೇಜಿನ ಪ್ರವಾಸದ ಫೋಟೋಗಳು...ನಾ ತೆಗೆದ ಫೋಟೋಗಳ ಲೀಸ್ಟ್ ದೊಡ್ಡದಾಯಿತು. ಯಾವ ಬೆಳಕಿನಲ್ಲಿ , ಯಾವ ಕೋನದಲ್ಲಿ ತೆಗೆದರೆ ಚೆನ್ನಾಗಿ ಬರುತ್ತದೆಂಬ ತಿಳುವಳಿಕೆ ಮೂಡಿತು.

ಹಾಗೆಂದು  ಫೋಟೋಗ್ರಫಿಯ ಟೆಕ್ನಿಕಲ್ ಪಾರ್ಟ್ ನನಗೆಂದೂ ಇವತ್ತಿಗೂ ಅರ್ಥವಾಗಿಲ್ಲ. ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಹುಟ್ಟಲೇ ಇಲ್ಲ .   ಕೂಲಿಯವನೊಬ್ಬ ತನ್ನ ಸಂಪರ್ಕಕ್ಕೆ ಬರುವ ಜನರಿಂದಾಗಿ ನಾಲ್ಕಾರು ಭಾಷೆಗಳನ್ನು ಸುಲಭವಾಗಿ ಮಾತನಾಡುತ್ತಾನೆ ಹಾಗೆಂದು ಆ ಭಾಷೆಗಳಲ್ಲಿ   ವಿಶೇಷ ಪರಿಣಿತಿಯೇನೂ ಅವನಿಗಿರುವುದಿಲ್ಲವಲ್ಲ, ಹಾಗೆ ನನ್ನ ಫೋಟೊಗ್ರಫಿ ಜ್ಞಾನ .




ಮದುವೆಯಾದ ಮೇಲೆ ಉಡುಗೊರೆಗೆ ಬಂದಿದ್ದ ಇನ್ನೊಂದು ಕ್ಯಾಮರ ನನ್ನ ಜೊತೆಯಾಯ್ತು. ಹನಿಮೂನಿಗೆಂದು ಹೋದಾಗ ಸೂರ್ಯಾಸ್ತ , ಸೂರ್ಯೋದಯ , ಹೂವು ಹಕ್ಕಿಗಳ ಫೋಟೋಗಳಿಂದಲೇ ಕ್ಯಾಮರ ರೀಲ್ ತುಂಬಿದಾಗ ನನ್ನವರಿಗೆ ಅರ್ಥವಾಗಿತ್ತು , ಇವಳು ಮನುಷ್ಯರ ಫೋಟೋ ತೆಗೆಯೋ ಜಾತಿ ಅಲ್ಲ ಅಂತ. 
 ನಂತರ ಮಗಳ ಬಾಲಲೀಲೆಗಳು , ತಿರುಗಾಡಿದ ಸ್ಥಳಗಳೆಲ್ಲದರ ಫೋಟೋಗಳ ಆಲ್ಬಂಗಳ ದೊಡ್ಡ ಸಂಗ್ರಹವೇ ಕಪಾಟು ತುಂಬಿತು .






ನಂತರ ನನ್ನ ಕೈಗೆ ಬಂದಿದ್ದು ಡಿಜಿಟಲ್ ಕ್ಯಾಮರ. ಇದನ್ನು ತಂದು ನನ್ನ ಕೈಗೆ ಕೊಡುತ್ತಾ ನನ್ನವರು ದೊಡ್ಡದೊಂದು ಕುತ್ತಿನಿಂದ ಪಾರಾದಂತೆ ನಿಟ್ಟುಸಿರಿಡುತ್ತಾ. " ಇನ್ನು ಎಷ್ಟು ಬೇಕಾದರೂ ನಾಯಿ , ನರಿ ,  ಮೋಡ , ಮರಗಳ ಫೋಟೋ ತೆಗಿ ಮಾರಾಯ್ತಿ ....ನನಗೇನೂ ಬೇಜಾರಿಲ್ಲ . ರೀಲು ಹಾಕಿಸುವ , ಡೆವಲಪ್ ಮಾಡಿಸುವ ತಲೆನೋವಿನಿಂದ ನನಗಿವತ್ತು ಮುಕ್ತಿ " ಎಂದು ಹೇಳಿದ್ದರು.




ಅವರೆಂದಂತೆಯೆ ಕಂಡದ್ದೆಲ್ಲದರ ಫೋಟೋ ತೆಗೆಯುತ್ತಾ ...ಅದನ್ನು ಕಂಪ್ಯೂಟರಿಗೆ ವರ್ಗಾಯಿಸುತ್ತಾ ...ಬೇಡವಾದ್ದನ್ನು ಡಿಲೀಟಿಸುತ್ತಾ ...ಆರಾಮಾಗಿದ್ದೇನೆ .  ಕಂಪ್ಯೂಟರ್ ಕೂಡ ಸಾಕಮ್ಮ ಸಾಕು ಇನ್ನು ನಿನ್ನ ಫೋಟೊಗಳ ಭಾರ ನಾನು ಹೊರಲಾರೆ ಅಂತ ಆಗಾಗ ಮುಷ್ಕರ ಹೂಡುತ್ತದೆ. ಆಗೆಲ್ಲ ಅಂಗೈ ಅಗಲದ ಡಿವಿಡಿಗೆ ನನ್ನ ಅಮೂಲ್ಯ ಆಸ್ತಿಯನ್ನು  ವರ್ಗಾಯಿಸುತ್ತೇನೆ .



ಮೊನ್ನೆ ಕಪಾಟು ಕ್ಲೀನ್ ಮಾಡ್ತಿದ್ದಾಗ ,ಸಿಕ್ಕಿದ ಹಳೆಯ ಆಲ್ಬಂಗಳು , ಡಿವಿಡಿಗಳನ್ನು  ನೋಡುತ್ತಾ ನನ್ನವರು ಮಗಳಿಗೆ  ಹೇಳುತ್ತಿದ್ದರು " ಈ ಡಿಜಿಟಲ್ ಕ್ಯಾಮರ ಮತ್ತು ಕಂಪ್ಯೂಟರ್  ಎರಡೂ ಇಲ್ಲದಿದ್ದರೆ ನಾನು ದುಡಿದದ್ದೆಲ್ಲ ನಿನ್ನಮ್ಮನ ಫೋಟೋಗ್ರಫಿ ಹುಚ್ಚಿಗೇ ಬೇಕಾಗುತ್ತಿತ್ತೇನೋ ....ಅವುಗಳನ್ನು ಕಂಡುಹಿಡಿದವರು ತಣ್ಣಗಿರಲಿ !!"



ಆದರೂ  ಅಂಗಡಿಯಿಂದ ಫಿಲ್ಮ್ ರೀಲ್ ತಂದು ಅದನ್ನು ಕ್ಯಾಮರದೊಳಗೆ ಹಾಕಿ .... ಹೇಗೆ ತೆಗೆದರೆ ಚೆನ್ನಾಗಿ ಬರಬಹುದೆಂದು ಯೋಚಿಸಿ ,ಯೋಜಿಸಿ  ಫೋಟೊ ತೆಗೆದು ನಂತರ  ಹೀಗೆ ತಿಂಗಳೊ ಎರಡು ತಿಂಗಳೊ ಆ ರೀಲ್ ಖಾಲಿಯಾಗುವವರೆಗೂ ಕಾಯ್ದು ....ಸ್ಟುಡಿಯೋದವನಲ್ಲಿ ಚೌಕಾಸಿ ಮಾಡಿ ಡೆವಲಪ್ ಮಾಡಿಸಿ ಭದ್ರವಾಗಿ ಆಲ್ಬಂನಲ್ಲಿಟ್ಟು ನೋಡುವಾಗಿನ ಸಂತಸ ಈಗಿನ ಡಿಜಿಟಲ್ ಯುಗದಲ್ಲಿ ಇಲ್ಲವೆನ್ನಿಸುತ್ತದೆ ನನಗೆ. ಈಗಾದರೋ ಫೋಟೋ ತೆಗೆದ ತಕ್ಷಣವೇ ಹೇಗಿದೆಯೆಂಬುದು ತಿಳಿದುಹೋಗುತ್ತದೆ .ಚೆನ್ನಾಗಿಲ್ಲದಿದ್ದರೆ ಮತ್ತೊಂದು ,ಇನ್ನೊಂದು ತೆಗೆಯಲೂ ಬಹುದು . ಅದು ಹೇಗೆ ಬಂದಿದೆಯೋ ಎಂಬ ಆತಂಕ , ಕಾಯುವ ಸುಖ ಈಗಿಲ್ಲ .

11 comments:

  1. ಹಹಹ.. ಒಟ್ಟಲ್ಲಿ ನಿಮ್ಮವರು ಬಚಾವ್ ರೀಲ್ ತೊಳೆಸುವುದರಿಂದ, ಫೋಟೋಗಳು ತುಂಬಾ ಚೆನ್ನಾಗಿವೆ.. ನಿಮ್ಮ ಆಸಕ್ತಿ ಹೀಗೆ ಮುಂದುವರಿಯಲಿ

    ReplyDelete
  2. ಚಂದದ ಫೋಟೋಗಳು ಮತ್ತು ಬರಹ
    ನಿಮ್ಮ ಹವ್ಯಾಸ ಮತ್ತು ಅದನ್ನು ನೀವು ಸಿಧ್ದಿಸಿಕೊಂಡ ರೀತಿಯಾ ಕಥೆ ಚೆನ್ನಾಗಿದೆ.
    ಸ್ವರ್ಣಾ

    ReplyDelete
  3. ನಿಮ್ಮಂತೆಯೇ ನಾನೂ ಕೂಡ ಮನುಷ್ಯರ ಚಿತ್ರ ತೆಗೆಯುವುದಕ್ಕಿಂತ ಹೆಚ್ಚು ಮರ ಬೆಟ್ಟ ಗುಡ್ಡ ಪ್ರಾಣಿಗಳ ಚಿತ್ರ ಸೆರೆ ಹಿಡಿಯುವುದೇ ಹೆಚ್ಚು. ಒಮ್ಮೆ ರೀಲು ಕ್ಯಾಮರಾದಲ್ಲಿ ಹಂದಿಗಳ ಚಿತ್ರ ತೆಗೆದಿದ್ದೆ. ಆಗ ಮಗಳ ಕೈಯಿಂದ ಬೈಗಳೂ ಸಹ ಕೇಳಿದ್ದು ಈಗ ನಿಮ್ಮ ಈ ಬರಹ ಓದಿ ಮೆಲುಕು ಹಾಕಲು ನೆರವಾಯಿತು. ನಮ್ಮ ಮನೆಯ ಗಣಕ ಕೂಡ ಹೇಳುತ್ತಿದೆ. ಜಾಗ ಇಲ್ಲ ಇನ್ನು ಫೋಟೋ ತುಂಬಿಸಬೇಡ ಎಂದು!
    ನಿಮ್ಮ ಈ ಬರಹ ಓಡಿ ಖುಷಿ ಆಯಿತು.
    ಮಾಲಾ

    ReplyDelete
  4. ಹ ಹ ಹ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಫೋಟೋಗಳು ಕೂಡಾ. ನನಗೆ ಫೋಟೋ ತೆಗೆಯುವ ಮತ್ತು ತೆಗೆಸಿಕೊಳ್ಳುವ ಹುಚ್ಚು ಇಲ್ಲ. ಆದರೆ ಇನ್ನೊಬ್ಬರು ತೆಗೆದ ಫೋಟೋಗಳನ್ನು ನೋಡಿ ಆನಂದಿಸುವುದು ತುಂಬಾ ಇಷ್ಟ .

    ReplyDelete
  5. ನೀವು ಹೇಳುವುದು ನಿಜ. ರೋಲ್ ಫಿಲ್ಮ್‌ಗಳ ಮಜಾ ಈ ಡಿಜಿಟಲ್‌ಗಳಿಗೆ ಇರುವುದಿಲ್ಲ.

    ReplyDelete
  6. ನೀವು ಏನೇ ಹೇಳಿ ಮೇಡಂ, ಫಿಲ್ಮ್ ರೋಲಿನಲ್ಲಿ ತೆಗೆದ ಚಿತ್ರಗಳ ತಾಳಿಕೆ, ಆಳ, ಬಣ್ಣ ವಿನ್ಯಾಸ ಡಿಜಿಟಲ್ ಫೋಟೋಗ್ರಫಿಯಲ್ಲಿ ಕಾಣೆ!

    ReplyDelete
  7. ಚಿತ್ರಗ್ರಾಹಿ ವಿಜ್ಞಾನಿ ಬುದ್ಧಿಗೆ ಇನ್ನೇನೇನು ಹೊಳೆಯಿತೋ...ಏನೇನು ಸೆರೆ ಸಿಕ್ಕಿತೋ ಕ್ಯಾ-ಮಾರಾ ಗೆ...ಹಹಹಹ
    ಚನ್ನಾಗಿದೆ ಲೇಖನ ಚಿತ್ರ ಸರಣಿ

    ReplyDelete
  8. ಹ ಹ. ಚೆನ್ನಾಗಿದೆ :-)

    ನಮ್ಮ ಮಾವ ಅವನಿಗೆ ಉಪಯೋಗ ಇಲ್ಲವೆಂದು ನನಗೊಂದು ಕ್ಯಾಮರಾ ಕೊಟ್ಟಿದ್ದ. ಅದು ರೀಲ್ ಕ್ಯಾಮೆರಾ. ಹಾಗಾಗಿ ಅಳೆದೂ , ತೂಗಿ ಫೋಟೋ ತೆಗೆಯಬೇಕಿತ್ತು. ಮರ, ಗಿಡ, ಹೂವಿಂದೆಲ್ಲಾ ಫೋಟೋ ತೆಗೆಯಲೇ ಬಿಟ್ತಿರಲಿಲ್ಲ ನಮ್ಮನೇಲಿ. ಎಷ್ಟಂದ್ರೂ ದುಬಾರಿ ಅಲ್ವಾ ಅಂತ. ಅದಕ್ಕೆ ಅದು ಬಂದ ಸ್ವಲ್ಪ ದಿನದಲ್ಲೇ ಮೂಲೆಗೆ ಸೇರಿತ್ತು.
    ಆಮೇಲೆ ಮೊಬೈಲಿನಲ್ಲಿ ಫೋಟೋ ತೆಗೆಯುವ ಹುಚ್ಚು ಶುರುವಾಯ್ತು. ಈಗಲೂ ನೋಕಿಯಾದ ಬೇಸಿಕ್ ಕ್ಯಾಮೆರಾ ಸೆಟ್ ೨೭೦೦ ನನ್ನ ಅಚ್ಚುಮೆಚ್ಚು. ಸೂರ್ಯೋದಯ, ಸೂರ್ಯಾಸ್ತದ್ದೇ ಹಲವಾರು ಕೋನಗಳಿಂದ ತೆಗೆದಿದ್ದಿದೆ. ನೀವಂದಂತೆ ಫೋಟೋ ತೆಗೆಯುತ್ತಲೇ ನಮ್ಮ ಆ ಕ್ಷೇತ್ರದ ಜ್ನಾನ ಹೆಚ್ಚಾಗುತ್ತೆ...

    ಏನೇ ಅನ್ನಿ, ನೀವಂದಂತೆ ಹಳೆಯ ರೀಲ್ ಫಿಲ್ಮಿನ ಆಲ್ಬಂಗಳ ಸುಖ ಈಗ ಇಲ್ಲ :-(

    ReplyDelete
  9. ಸು೦ದರ ಫೋಟೋಗಳೊ೦ದಿಗೆ ಚೆ೦ದದ ಬರಹ.

    ReplyDelete
  10. ನಿಮ್ಮ ಫೋಟೋಗ್ರಫಿ ಹುಚ್ಚಿನ ಅನುಭವ ಮತ್ತು ಫೋಟೋಗಳು ಚನ್ನಾಗಿದೆ. ಸಧ್ಯ ನಿಮ್ಮೆಜಮಾನ್ರು ಬಚಾವಾದರು ಬಿಡಿ!!!!

    ಚಂದದ ಬರಹ........

    ReplyDelete