26 Aug 2012

ತೊಡೆದೇವು - ಖರ್ಚು ಮಿತ , ಆರೋಗ್ಯಕ್ಕೆ ಹಿತ .




                                                             
ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟ ಸಿಹಿತಿಂಡಿ. ತುಂಬ ಕಡಿಮೆ ವಸ್ತುಗಳನ್ನು ಬಳಸಿ ತಾಳ್ಮೆ ಹಾಗು ಜಾಣ್ಮೆಯಿಂದ ಮಾಡಬೇಕಾದ ತಿಂಡಿಯಿದು. ಅಂತೆಯೆ ಹಿಂದೆ ಇದನ್ನು ಮಾಡುವುದೆಂದರೆ ಅದೊಂದು  ಸಂಭ್ರಮ. ಅಕ್ಕಪಕ್ಕದ ಮನೆಯ ಪಾರಕ್ಕ, ಸುಬ್ಬಕ್ಕ , ಗಂಗಕ್ಕ ಎಲ್ಲರೂ ಸೇರಿ ಹಿತ್ತಲ ಕಡಿಮಾಡಿನಲ್ಲಿ ಒಲೆ ಹೂಡೀ , ಅಟ್ಟದಲ್ಲಿ ನಾಜೂಕಾಗಿಡಲ್ಪಟ್ಟ  ಅಗಲ ತಳದ ಗಡಿಗೆಯನ್ನು ಇಳಿಸಿ ತೊಳೆದು ಒಲೆಯ ಮೇಲೆ ತಲೆಕೆಳಗಾಗಿಟ್ಟು , ಬುಡವನ್ನು ಒಲೆಗೆ ಸಗಣಿ ಮತ್ತು ಮಣ್ಣಿನ ಮಿಶ್ರಣದಿಂದ ಅಂಟಿಸಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ಅಕ್ಕಿಯನ್ನು ನೆನೆಸಿ , ಅದನ್ನು ಆಗಷ್ಟೇ ಆಲೆಮನೆಯಿಂದ ತಂದ ಕಬ್ಬಿನ ಹಾಲಿನೊಡನೆ ಒರಳುಕಲ್ಲಿನಲ್ಲಿ ನುಣ್ಣಗೆ ಅರೆದು ಹೊಸ ಬೆಲ್ಲವನ್ನು ಹದವಾಗಿ ಬೆರೆಸಿ ಹಿಟ್ಟು ತಯಾರಿಸುತ್ತಿದ್ದರು. ಇವೆಲ್ಲ ಸಿದ್ಧತೆಗಳಾದ ನಂತರ ಆ ತೆಳುವಾದ ಹಿಟ್ಟನ್ನು ಬಟ್ಟೆಯಲ್ಲಿ ಅದ್ದಿ ಹದವಾಗಿ ಕಾದ ಗಡಿಗೆಯ ಮೇಲೆ ಸವರಿ ಗರಿಗರಿಯಾಗಿ ಬೇಯಿಸಿ ತೆಗೆಯುತ್ತಿದ್ದರು .  ಗರಿಗರಿಯಾದ ಈ ಖಾದ್ಯವನ್ನು ಗಮಗಮಿಸುವ ಶುದ್ಧ ತುಪ್ಪದೊಡನೆ ಬಡಿಸಿ ಮನಗೆಲ್ಲುತ್ತಿದ್ದರು.
                                                              
 ಬದಲಾವಣೆ ಜಗದ ನಿಯಮ . ನಿಧಾನವಾಗಿ ಕಾಲ ಬದಲಾಯ್ತು. ಕೇವಲ ಸೌಟು ಹಿಡಿಯುತ್ತಿದ್ದ  ಮಹಿಳೆಯರ ಕೈಗಳಿಗೆ  ಸ್ಲೇಟು , ಪೆನ್ನು , ಪೇಪರ್ ಬಂತು....ಕೇವಲ ಮನೆಯ ಕೆಲಸ ಕಾರ್ಯ ನೋಡಿಕೊಂಡಿದ್ದ ಮಹಿಳೆ ಹೊರಪ್ರಪಂಚಕ್ಕಡಿಯಿಟ್ಟಳು. ಅವಳ ಕೆಲಸದ ವ್ಯಾಪ್ತಿ ದೊಡ್ಡದಾಯಿತು. ಸಹಜವಾಗೆ ಬಹಳಷ್ಟು ಸಮಯ ತಿನ್ನುತ್ತಿದ್ದ ಅಡುಗೆ ಕೆಲಸ ಸುಲಭವಾಗಿಸಲು ಪ್ರಯತ್ನಗಳು ನಡೆದವು. ಮಡಿಕೆ ಕುಡಿಕೆಗಳು , ಬೀಸುವ ಕಲ್ಲು , ಒನಕೆ , ಕಡಗೋಲು , ತರಹೇವಾರಿ ಮಣ್ಣಿನ ಒಲೆಗಳು ಅಟ್ಟ ಸೇರಿ ಆ ಜಾಗವನ್ನು ಗ್ಯಾಸ್ ಸ್ಟವ್ , ಕುಕ್ಕರ್ , ಮಿಕ್ಸರ್ , ಗ್ರೈಂಡರ್, ಸ್ಟೀಲ್ ಪಾತ್ರೆ ಇತ್ಯಾದಿಗಳು ಅಲಂಕರಿಸಿ ಮಹಿಳೆಯರ ಕೆಲಸವನ್ನು ಹಗುರವಾಗಿಸಿದವು. ಇವೆಲ್ಲದರ ಮಧ್ಯೆ ತುಂಬಾ ಸಮಯ ಹಾಗೂ ಪರಿಶ್ರಮ ಬೇಡುವ ತೊಡೆದೇವು , ಒತ್ತುಶ್ಯಾವಿಗೆ , ಹೋಳಿಗೆ ಮೊದಲಾದ ತಿಂಡಿಗಳನ್ನು ಮನೆಯಲ್ಲಿ ಮಾಡುವವರೇ ಕಡಿಮೆಯಾದರು.
                                                                      
ಈ ಬದಲಾವಣೆಯೆ ಅನೇಕರಿಗೆ ಉದ್ಯೋಗವನ್ನು ಒದಗಿಸಿದ್ದು ಸುಳ್ಳಲ್ಲ. ಅನೇಕ ಮಹಿಳೆಯರು ಈಗ ಇಂತಹ ಸಾಂಪ್ರದಾಯಿಕ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಸಣ್ಣಪುಟ್ಟ ಹಬ್ಬಗಳಿಂದ ಹಿಡಿದು ಮದುವೆ ಮೊದಲಾದ ಶುಭಕಾರ್ಯಗಳಿಗೂ  ತೊಡೆದೇವು , ಹೋಳಿಗೆ ಮಾಡಿಕೊಡುವ ಈ ಮಹಿಳೆಯರಿಗೆ ಇದು ಸ್ವಾವಲಂಬನೆಯ ದಾರಿಯಾಗಿದೆ.

"ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತುಂಬ ಬೇಡಿಕೆಯಿದೆ . ಆದರೆ ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ ಎಲ್ಲರಿಗೂ ಮಾಡಲು ಕಷ್ಟ .   ಚಿಕ್ಕ ಪುಟ್ಟ ಸಮಾರಂಭಗಳಿಗೆ ಮಾಡುತ್ತಿದ್ದೇನಷ್ಟೆ . ಹಿಂದೆಲ್ಲ ಅಕ್ಕಿಯನ್ನು ಕಬ್ಬಿನ ಹಾಲಿನೊಂದಿಗೆ ರುಬ್ಬಿ ಮಾಡುತ್ತಿದ್ದರಂತೆ . ಈಗ ನಮ್ಮೂರಿನಲ್ಲಿ ಕಬ್ಬು ಬೆಳೆಯುವವರೇ ಇಲ್ಲವಾದ್ದರಿಂದ ಕಬ್ಬಿನ ಹಾಲು ಸಿಗುವುದಿಲ್ಲ . ಆದ್ದರಿಂದ ಅಕ್ಕಿಯನ್ನು ನೀರಿನೊಂದಿಗೆ ನಯವಾಗಿ ರುಬ್ಬಿ ಬೆಲ್ಲ ಬೆರೆಸಿ ಮಾಡುತ್ತೇನೆ . ಇದನ್ನು ನಾನು ಕಲಿತದ್ದು ದೊಡ್ಡಮ್ಮ ಕೆರೆಕೊಪ್ಪದ ಸರೋಜ ಅವರಲ್ಲಿ " ಎನ್ನುತ್ತಾರೆ ಎರಡು ವರ್ಷಗಳಿಂದ ಇದನ್ನು ಸ್ವಉದ್ಯೋಗವನ್ನಾಗಿ ಸ್ವೀಕರಿಸಿರುವ ಗೃಹಿಣಿ ಸಾಗರದ ಕಾನುಗೋಡಿನ ಭಾಗ್ಯ ಚಂದ್ರನಾಥ್ .
                                                                    
 ಸೊರಬ ಬಳಿಯ ಕೆರೆಕೊಪ್ಪದ  ಸರೋಜಕ್ಕ ಕಳೆದ ಆರೆಂಟು ವರ್ಷಗಳಿಂದ ತೊಡೆದೇವು ಮಾಡುತ್ತಿದ್ದಾರೆ . ಉತ್ತಮ ಗುಣಮಟ್ಟದ ಈ ತೊಡೆದೇವುಗಳು ಈ ಪ್ರಾಂತ್ಯದಲ್ಲೇ ಹೆಸರುವಾಸಿಯಾಗಿದೆ.

ಮನೆಯಲ್ಲಿ ಸುಲಭವಾಗಿ ಸಿಗುತ್ತಿದ್ದ ಪದಾರ್ಥಗಳಿಂದಲೇ ಇಂತಹ ಅದ್ಭುತವಾದ ರುಚಿಕಟ್ಟಾದ ಆರೋಗ್ಯಕರವಾದ ತಿಂಡಿಗಳನ್ನು ಸಂಶೋಧಿಸಿ ,ನಾಲಿಗೆ ಹೊಟ್ಟೆಗಳನ್ನು ತಂಪಾಗಿಸಿಕೊಳ್ಳುತ್ತಿದ್ದ ನಮ್ಮ ಹಿರಿಯರು ಈಗಿನ ಯಾವ ಆಹಾರತಜ್ಞರಿಗೆ ,ಆರೋಗ್ಯತಜ್ಞರಿಗೆ ಕಡಿಮೆ ಹೇಳೀ?

ತೊಡೆದೇವು ಮಾಡಲು
ಬೇಕಾಗುವ ಸಾಮಗ್ರಿಗಳು :
  • ಬೆಳ್ತಿಗೆ ಅಕ್ಕಿ - ಒಂದು ಕಪ್
  • ಮಲೆನಾಡಿನ ಡಬ್ಬಿ ಬೆಲ್ಲ - ಒಂದು ಕಪ್
  • ಎಣ್ಣೆ - ಗಡಿಗೆಯ ಮೇಲೆ ಸವರಲು
  • ಶುದ್ಧವಾದ ಆಯತಾಕಾರದ ತೆಳುವಾದ ಬಟ್ಟೆ
ಮಾಡುವ ವಿಧಾನ:
ಅಕ್ಕಿಯನ್ನು ನೀರಿನಲ್ಲಿ ಆರರಿಂದ ಎಂಟು ಗಂಟೆ ಕಾಲ ನೆನೆಸಬೇಕು . ನೆನೆದ ಅಕ್ಕಿಯನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು . ನಂತರ ಬೆಲ್ಲ ಸೇರಿಸಿ ಮತ್ತೊಮ್ಮೆ ರುಬ್ಬಬೇಕು. ಹಿಟ್ಟು ನೀರುದೋಸೆಯ ಹಿಟ್ಟಿನಷ್ಟು ತೆಳುವಾಗಿದ್ದರೆ ಸಾಕು.





                                                            
ತೊಡೆದೇವು ತಯಾರಿಸಲು ಅಗಲ ತಳದ ಗಡಿಗೆ ಬೇಕು . ಈ ಗಡಿಗೆಯನ್ನು ಶುಚಿಗೊಳಿಸಿಕೊಂಡು , ಒಲೆಯ ಮೇಲೆ ತಲೆಕೆಳಗಾಗಿ ಇಡಬೇಕು. ಗಡಿಗೆ  ಮೇಲೆ  ಸ್ವಲ್ಪ ಎಣ್ಣೆ ಸವರಬೇಕು. 
                                                                       
ಆಯತಾಕಾರದ ಶುದ್ಧವಾದ ಬಟ್ಟೆಯ ಒಂದು ಅಂಚನ್ನು ಚಿಕ್ಕ ಮರದ ಕೋಲೊಂದಕ್ಕೆ ಸುತ್ತಿ ಬಿಗಿಗೊಳಿಸಬೇಕು.
                                                                                     
ಈಗ ಈ ಬಟ್ಟೆಯನ್ನು ತಯಾರಿಸಿಕೊಂಡ ಹಿಟ್ಟಿನಲ್ಲಿ ಅದ್ದಿ ಹದವಾಗಿ ಕಾದ ಗಡಿಗೆಯ ಮೇಲೆ ಪ್ಲಸ್ ಆಕಾರದಲ್ಲಿ ಎಳೆಯಬೇಕು .

                                                                    

ಎರಡು ನಿಮಿಷದಲ್ಲಿ ಹಿಟ್ಟು ಬೆಂದು ಹೊಂಬಣ್ಣಕ್ಕೆ ತಿರುಗುತ್ತದೆ .




                                                                         
ಈಗ ಅದನ್ನು ನಾಲ್ಕೂ ಬದಿಗಳಿಂದ ಬಿಡಿಸಿ ಮಧ್ಯದಲ್ಲಿ ಮಡಚಿ ಒಂದು ನಿಮಿಷ ಹಾಗೇ ಗಡಿಗೆಯ ಮೇಲೆ ಬಿಡಬೇಕು . ಎರಡೂ ಬದಿಯನ್ನೂ ಹೀಗೆ ಗಡಿಗೆಯ ಮೇಲೆ ಇಟ್ಟಾಗ ಗರಿಯಾದ ತೊಡೆದೇವು ಸಿದ್ಧವಾಗುತ್ತದೆ.

                                                                                       
 ಗಡಿಗೆಯಿಂದ ತೆಗೆದು ಬಿಸಿ ಆರಿದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಇಡಬೇಕು . ತುಪ್ಪದೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಿ ತಿನ್ನಲು ಇದು ತುಂಬಾ ರುಚಿ. 
                       
DSC08053.JPG
                                                            
                                                                        
ಟಿಪ್ಪಣಿ : ಗರಿಗರಿಯಾದ ರುಚಿಯಾದ ತೊಡೆದೇವು ತಯಾರಿಸಲು ಗಮದಲ್ಲಿಡಬೇಕಾದ ಅಂಶಗಳು
  • ಬೇಯಿಸುವಾಗ ತುಂಬ ದೊಡ್ಡ ಉರಿ ಅಥವಾ ತುಂಬ ಸಣ್ಣ ಉರಿ ಇರಬಾರದು ಅಂದರೆ ಶಾಖ ಹದವಾಗಿರಬೇಕು. 
  •  ಹಿಟ್ಟು ಹೆಚ್ಚು ದಪ್ಪವಾಗಿ ಅಥವ ತುಂಬ ತೆಳುವಾಗಿ ಇರಬಾರದು. ನೀರು ದೋಸೆಯ ಹದದಲ್ಲಿರುವ ಹಿಟ್ಟು ಉತ್ತಮ.
ಈ ಲೇಖನ ಹೃಸ್ವರೂಪದಲ್ಲಿ ೨೫/೮/೧೨ ರ ವಿಜಯಕರ್ನಾಟಕದ "ಭೋದಿವೃಕ್ಷ " ಪೇಪರ್ ಅಲ್ಲಿ ಪ್ರಕಟವಾಗಿದೆ.

10 comments:

  1. ಒಳ್ಳೆ ರುಚಿ ಅಡಿಗೆಯನ್ನೇ ಹೇಳಿದ್ದೀರಿ... ನಾನು ಪ್ರಯತ್ನಿಸೋಣ ಎಂದರೆ ನೀವು ಮಲೆನಾಡಿನ ಡಬ್ಬಿ ಬೆಲ್ಲ ಎಂದಿರಲ್ಲಾ ಅದೇ ಯೋಚಿಸ್ತಾ ಇದ್ದೀನಿ... ಅದರ ಬದಲು ಯಾವುದಾದರು ಒಂದು ಡಬ್ಬಿಯಲ್ಲಿ ಬೆಲ್ಲ ಇಟ್ಟು ತದನಂತರ ಅಲ್ಲಿಂದನೇ ತೆಗೆದು ಮಲೆನಾಡಿನ ಡಬ್ಬಿ ಬೆಲ್ಲ ಎಂದು ಮೂರು ಬಾರಿ ಮನಸಿನಲ್ಲೇ ಹೇಳಿಕೊಂಡು ಬಳಸಬಹುದೇ(ಸುಮ್ಮನೆ ತಮಾಷೆಗೆ) ಹಹಹ...

    ReplyDelete
  2. nanyavattu ee sahasa madilla...nimma ashirvaada iddare mundomme maduva bayake ide..idannu kabbina halalli rubbi madtare anta kelida nenapu..houda???

    ReplyDelete
  3. tumba chennagide,,,,,,,adre tinna beku kannatte

    ReplyDelete
  4. thumba chennagide article, bayalli neerooratte, bengalooralli elli sigutte?

    ReplyDelete
  5. ಮತ್ತೆ ಆಲೆಮನೆಯ ನೆನಪು... ತೊಡೆದೇವಿನ ಕಂಪು ... ಚಂದದ ಲೇಖನ

    ReplyDelete
  6. lekhana tumbaa chennagide.. adu ruchikataagiyoo irabahudu annisutte.. malenaadalli hutti beleda neeve adrushtavantaru!

    ReplyDelete
  7. tumba chennagiratte. banni sirsige

    ReplyDelete
  8. Ree, ellinda madake tarodu....chendada tindi adre maadoke agalla ee bengalooralli :) thank u so much for sharing!

    ReplyDelete
  9. ನೋಡಿದ್ರೆ ತಿನ್ಬೇಕು ಅನ್ಸತ್ತೆ. ತುಂಬ ಧನ್ಯವಾದ ಹೊಸ ತಿಂಡಿ ಹೇಳಿಕೊಟ್ಟಿದ್ದಕ್ಕೆ...

    ReplyDelete